ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹೊಸ ಕಾನೂನು

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಟ್ಯುನಿಸ್‌: ಮಹಿಳೆಯರ ಮೇಲೆ ನಡೆಯವ ಎಲ್ಲ ಬಗೆಯ ಹಿಂಸಾಚಾರಗಳನ್ನು ತಡೆಯುವ, ಅವರಿಗೆ ರಕ್ಷಣೆಯನ್ನು ಬಲಪಡಿಸುವ ಹಾಗೂ ಸಂತ್ರಸ್ತರಿಗೆ ನೆರವಾಗುವ ಮಸೂದೆಗೆ  ಟ್ಯುನೀಷಿಯಾ ಸಂಸತ್ತು ಒಪ್ಪಿಗೆ ನೀಡಿದೆ.

‘ಇದೊಂದು ಮಹತ್ವದ ಕ್ಷಣ. ಈ ಐತಿಹಾಸಿಕ ಯೋಜನೆಗೆ ಸಾಕ್ಷಿಯಾಗಲು ಹೆಮ್ಮೆ ಎನಿಸುತ್ತಿದೆ’ ಎಂದು ಮಹಿಳಾ ಅಭಿವೃದ್ಧಿ ಸಚಿವೆ ನಾಜಿಹಾ ಲಾಬಿಡಿ ಹೇಳಿದ್ದಾರೆ.

‘ಈ ಕಾನೂನು ಮುಂದಿನ ವರ್ಷದಿಂದ ಜಾರಿಯಾಗಲಿದ್ದು, ದೈಹಿಕ, ನೈತಿಕ ಹಾಗೂ ಲೈಂಗಿಕ ಹಿಂಸಾಚಾರಗಳನ್ನು ಒಳಗೊಳ್ಳಲಿದೆ ಎಂದು ಸಂಸದ ಬೊಚ್ರಾ ಬೆಲ್ಹಜ್‌ ಹಮಿಡ ತಿಳಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ಮತ್ತು ಆಪ್ತಸಮಾಲೋಚನೆಯ ನೆರವನ್ನು ಸಹ ನೀಡಲಾಗುತ್ತದೆ.

ಪ್ರಸ್ತುತ, ಅತ್ಯಾಚಾರ ಎಸಗಿದ ವ್ಯಕ್ತಿ ಆ ಸಂತ್ರಸ್ತೆಯನ್ನು ವಿವಾಹವಾದರೆ ಶಿಕ್ಷೆಯಿಂದ ಪಾರಾಗಬಹುದು. ಆದರೆ ಈ ವಿವಾದಾತ್ಮಕ ಅಂಶವನ್ನು ಹೊಸ ಕಾನೂನಿನಲ್ಲಿ ತೆಗೆದುಹಾಕಲಾಗಿದೆ.

ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿಯುವುದರಲ್ಲಿ ಅರಬ್ ರಾಷ್ಟ್ರಗಳಲ್ಲೇ ಟ್ಯುನೀಷಿಯಾ ಮಾದರಿಯಾಗಿದೆ. ಆದರೆ ಹಕ್ಕು ಪ್ರತಿಪಾದಕರ ಪ್ರಕಾರ, ಅಲ್ಲಿಯೂ ಮಹಿಳೆಯರು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ.

***

ಅತ್ಯಾಚಾರ ಪ್ರಕರಣ ವರದಿಗೆ ಆದೇಶ
ಲಾಹೋರ್ :
ಗ್ರಾಮ ಮಂಡಳಿಯ ಆದೇಶದ ಅನ್ವಯ, 16 ವರ್ಷದ ಹುಡುಗಿಯ ಮೇಲೆ ಆಕೆಯ ಕುಟುಂಬದ ಸದಸ್ಯರ ಎದುರೇ ಅತ್ಯಾಚಾರ ನಡೆಸಲಾದ  ಪ್ರಕರಣವನ್ನು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಮಿಯಾನ್‌ ಸಾಖಿಬ್‌ ನಿಸಾರ್‌ ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ವರದಿ ಸಲ್ಲಿಸುವಂತೆ ಪಂಜಾಬ್‌ ಪ್ರಾಂತ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ಅವರು ಆದೇಶಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 25 ಜನರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಅಣ್ಣ ಉಮರ್‌ ವಡ್ಡಾ ಎಂಬಾತ ಇತ್ತೀಚೆಗೆ ಅಶ್ಫಾಕ್‌ ಎಂಬ ಯುವಕನ ಸಹೋದರಿಯ ಮೇಲೆ ಅತ್ಯಾಚಾರ ನಡೆಸಿದ್ದ.

ಇದಕ್ಕೆ ಪ್ರತಿಯಾಗಿ ಉಮರ್‌ನ ತಂಗಿಯ ಮೇಲೆ ಅಶ್ಫಾಕ್‌ ಅತ್ಯಾಚಾರ ನಡೆಸಬೇಕು    ಮತ್ತು ಹೀಗೆ ಮಾಡಿದಾಗಷ್ಟೇ ಮೊದಲು ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ದೊರಕಲು  ಸಾಧ್ಯ ಎಂದು ಗ್ರಾಮ ಮಂಡಳಿ   ಹೇಳಿತ್ತು.

***

ದುಷ್ಕೃತ್ಯ ತಡೆಯಲಿದೆ ಸ್ಟಿಕರ್
ಬಾಸ್ಟನ್/ಚೆನ್ನೈ:
ಲೈಂಗಿಕ ದೌರ್ಜನ್ಯ ಆಗುತ್ತಿರುವುದನ್ನು ತಕ್ಷಣವೇ ಪತ್ತೆಹಚ್ಚಿ, ಹತ್ತಿರದಲ್ಲಿರುವರನ್ನು ಜಾಗೃತಗೊಳಿಸುವ ಸಂವೇದಕಗಳನ್ನು ಹೊಂದಿರುವ ಸ್ಟಿಕರ್‌ಗಳನ್ನು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ  (ಎಂಐಟಿ) ಕಾರ್ಯನಿರ್ವಹಿಸುತ್ತಿರುವ ಭಾರತದ ಮಹಿಳಾ ವಿಜ್ಞಾನಿ ಅಭಿವೃದ್ಧಿಪಡಿಸಿದ್ದಾರೆ.

‘ಈ ಸ್ಟಿಕರ್‌ಗಳನ್ನು ಬಟ್ಟೆಗೆ ಅಂಟಿಸಿಕೊಳ್ಳಬಹುದು. ವ್ಯಕ್ತಿಯು ತಾನಾಗಿಯೇ ತನ್ನ ಬಟ್ಟೆ ತೆಗೆಯುವುದು ಮತ್ತು ಬೇರೆಯವರು ಬಲವಂತವಾಗಿ ಅವರ ಬಟ್ಟೆ ತೆಗೆಯುವುದರ ನಡುವಿನ ವ್ಯತ್ಯಾಸ ಗುರುತಿಸುವ ಸಾಮರ್ಥ್ಯ ಇದಕ್ಕಿದೆ’ ಎಂದು ಎಂಐಟಿಯಲ್ಲಿ ಸಹಾಯಕ ಸಂಶೋಧಕಿಯಾಗಿರುವ ಮನೀಷಾ ಮೋಹನ್ ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ನ ತಂತ್ರಾಂಶದೊಂದಿಗೆ ಸಂಯೋಜಿಸಲಾದ ಬ್ಲೂಟೂತ್ ಉಪಕರಣವು ದೌರ್ಜನ್ಯದ ಸಂದರ್ಭದಲ್ಲಿ ಜೋರಾಗಿ ಸದ್ದು ಮಾಡಿ ಸ್ಥಳೀಯರನ್ನು ಜಾಗೃತಗೊಳಿಸುತ್ತದೆ ಮತ್ತು ಮೊದಲೇ ನಿಗದಿಪಡಿಸಿದ ವ್ಯಕ್ತಿಗಳಿಗೆ ಸಂಕೇತಗಳನ್ನು ರವಾನಿಸುತ್ತದೆ.

ತನ್ನ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರತಿರೋಧ ಒಡ್ಡಲು ಸಂತ್ರಸ್ತೆಗೆ ಸಾಧ್ಯವಿಲ್ಲದಿದ್ದಾಗಲೂ ಈ ಸ್ಟಿಕರ್ ಸಹಾಯಕ್ಕೆ ಬರುತ್ತದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಾಲೇಜು ಕ್ಯಾಂಪಸ್‌ಗಳಲ್ಲಿ ಕಿರುಕುಳ, ಹಿರಿಯರು ಹಾಗೂ ಅಂಗವಿಕಲರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಈ ಸ್ಟಿಕರ್‌ ನೆರವಾಗುವ ನಿರೀಕ್ಷೆ ಇದೆ. ಮನೀಷಾ ಚೆನ್ನೈನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಹೆಚ್ಚು ಸುರಕ್ಷೆ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರು ನಿಗದಿತ ಅವಧಿಗಿಂತ ಹೆಚ್ಚು ಹೊತ್ತು ಕೆಲಸ ಮಾಡಲು ಅನುಮತಿ ಇರುವುದಿಲ್ಲ. ಸಂಜೆ 6.30ರ ಹೊತ್ತಿಗೆ ಅವರು ವಿದ್ಯಾರ್ಥಿ ನಿಲಯಗಳಿಗೆ ವಾಪಸಾಗಬೇಕೆಂದು ನಿರೀಕ್ಷಿಸಲಾಗುತ್ತದೆ.

ಕೋಣೆಯ ಒಳಗೇ ಉಳಿಯುವಂತೆ ಅವರಿಗೆ ತಾಕೀತು ಮಾಡುವ ಬದಲು, ಹೊರಗೆ ಅವರಿಗೆ ಹೆಚ್ಚು ಸುರಕ್ಷೆ ಒದಗಿಸಲು ಈ ಸ್ಟಿಕರ್‌ನಿಂದ ಸಾಧ್ಯವಾಗಲಿದೆ.

–ಮನೀಷಾ ಮೋಹನ್, ಸಹಾಯಕ ಸಂಶೋಧಕಿ, ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT