ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ‘ಪ್ರಜಾಪ್ರಭುತ್ವದ’ ಗಾಳಿ

25 ವರ್ಷಗಳ ಹೋರಾಟದ ಫಲ * ಮುಂದಿದೆ ಎನ್‌ಎಲ್‌ಡಿ ಪಕ್ಷಕ್ಕೆ ಕಠಿಣ ಹಾದಿ
Last Updated 15 ನವೆಂಬರ್ 2015, 20:18 IST
ಅಕ್ಷರ ಗಾತ್ರ

ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇನಾಪಡೆ ಆಡಳಿತದ ಅಟ್ಟಹಾಸದಲ್ಲಿ ಸಿಲುಕಿದ್ದ ನಮ್ಮ ನೆರೆಯ ಮ್ಯಾನ್ಮಾರ್‌ ದೇಶದಲ್ಲಿ ಈಗ ‘ಪ್ರಜಾಪ್ರಭುತ್ವದ’ ಗಾಳಿ ಬೀಸಲಾರಂಭಿಸಿದೆ.

ದಿಟ್ಟ ಹೋರಾಟಗಾರ್ತಿ ಆಂಗ್‌ ಸಾನ್‌ ಸೂಕಿ ಅವರು ದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪನೆಗಾಗಿ ನಡೆಸಿದ 25 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ. ಈಚೆಗೆ  ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಸೂಕಿ ಅವರ ಪಕ್ಷ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಸ್ಪಷ್ಟ ಬಹುಮತಗಳಿಸಿದೆ. ಆ ಮೂಲಕ ಸರ್ಕಾರ ರಚಿಸಲು ಸಜ್ಜಾಗುತ್ತಿದೆ. ಸಂಸತ್ತಿನ ಒಂದು ಸಾವಿರಕ್ಕೂ ಹೆಚ್ಚು ಸ್ಥಾನಗಳಿಗೆ ಒಟ್ಟು 6,038 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಕೆಳಮನೆ, ಮೇಲ್ಮನೆ, ವಲಯ ಅಥವಾ ರಾಜ್ಯ ಸಂಸತ್ತು  ಈ ಮೂರು ಹಂತಗಳನ್ನು ಇಲ್ಲಿನ ಸಂಸತ್‌ ಒಳಗೊಂಡಿದ್ದು   970 ಸ್ಥಾನಗಳ ಫಲಿತಾಂಶ ಮಾತ್ರ ಅಧಿಕೃತವಾಗಿ ಪ್ರಕಟಗೊಂಡಿದೆ.ಈ ಪೈಕಿ ವಿರೋಧ ಪಕ್ಷವಾಗಿರುವ ಎನ್‌ಎಲ್‌ಡಿ 749 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಸೇನೆ ನೆರವಿನೊಂದಿಗೆ ಆಡಳಿತ ನಡೆಸುತ್ತಿರುವ ಯೂನಿಯನ್‌ ಸಾಲಿಡಾರಿಟಿ ಅಂಡ್‌ ಡೆವೆಲಪ್‌ಮೆಂಟ್‌ ಪಾರ್ಟಿ (ಯುಎಸ್‌ಡಿಪಿ)   102 ಕಡೆ ಮಾತ್ರ ಗೆದ್ದಿದೆ. ಉಳಿದ ಕೆಲವು ಸ್ಥಾನಗಳು ಜನಾಂಗೀಯ ಗುಂಪಿನ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪಾಲಾಗಿವೆ.

ಯಾಂಗೂನ್‌, ರಾಜಧಾನಿ ನೈ ಪೈ ತಾವ್‌ ಅಲ್ಲದೆ ಜನಾಂಗೀಯ ಗುಂಪುಗಳು ನೆಲೆಸಿರುವ ಕಡೆಗಳಲ್ಲೂ ಎನ್‌ಎಲ್‌ಡಿ ಗೆಲುವು ಸಾಧಿಸಿರುವುದು ವಿಶೇಷ. ಸೇನಾಡಳಿತದ ಸರ್ವಾಧಿಕಾರದಿಂದ ನಲುಗಿದ್ದ ಮ್ಯಾನ್ಮಾರ್‌ನಲ್ಲಿ ಮಾನವ ಹಕ್ಕು ರಕ್ಷಣೆ, ಮುಕ್ತ ಚುನಾವಣೆ ಮತ್ತು ಪ್ರಜಾಸತ್ತಾತ್ಮಕತೆ ಸಾಧಿಸಲು ಸೂಕಿ ಅವರು ತಮ್ಮ ಹೋರಾಟದಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಮತ್ತು ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವವನ್ನು ಅನುಸರಿಸಿದ್ದು  ಅವರ ಪಕ್ಷದ  ಭರ್ಜರಿ ಗೆಲುವಿಗೆ ಕಾರಣ.  ಸೂಕಿ ಅವರ ಬದ್ಧತೆಯ, ಪರಿಶ್ರಮದ, ನಿಸ್ವಾರ್ಥ ಹೋರಾಟದ ಫಲವಿದು ಎಂದೂ  ವಿಶ್ಲೇಷಿಸಲಾಗುತ್ತಿದೆ.

ಸೂಕಿ ಅವರ ಪತಿ ಬ್ರಿಟಿಷ್‌ ಪ್ರಜೆ. ಇಬ್ಬರು ಮಕ್ಕಳೂ ಬ್ರಿಟಿಷ್‌ ಪೌರತ್ವ ಹೊಂದಿದವರು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಲಂಡನ್‌ನಲ್ಲಿ ನೆಲೆಸಿದ್ದ ಸೂಕಿ, 1988ರಲ್ಲಿ ಅನಾರೋಗ್ಯಪೀಡಿತ ತಾಯಿಯ ಆರೈಕೆಗಾಗಿ ತಾಯ್ನಾಡಿಗೆ ಮರಳಿದರು. ಆಗ ಅವರ ಬದುಕು ನಾಟಕೀಯ ತಿರುವು ಪಡೆಯಿತು. 

ಸೇನಾ ಆಡಳಿತದ ವಿರುದ್ಧ ಬಂಡೆದ್ದ ಸೂಕಿ ಅವರು 1989 – 2010ರ ನಡುವಣ ಅವಧಿಯಲ್ಲಿ15 ವರ್ಷಗಳನ್ನು ಗೃಹಬಂಧನದಲ್ಲಿಯೇ ಕಳೆಯಬೇಕಾಯಿತು.  ಈ ನಡುವೆ ಅವರ ಶಾಂತಿಯುತ ಹೋರಾಟದ ಪ್ರಯತ್ನಕ್ಕೆ 1991ರಲ್ಲಿ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ಲಭಿಸಿತು. ನೊಬೆಲ್‌ ಪ್ರಶಸ್ತಿ ಸಮಿತಿಯ ಅಧ್ಯಕ್ಷರು, ‘ಅಧಿಕಾರವಿಲ್ಲದವರ ಶಕ್ತಿಗೆ (ಪವರ್‌ ಆಫ್‌ ಪವರ್‌ಲೆಸ್‌) ಸೂಕಿ ಗಮನಾರ್ಹ ನಿದರ್ಶನ’ ಎಂದೇ ಅವರನ್ನು ಬಣ್ಣಿಸಿದ್ದು ಸೂಕಿ ಅವರ ಜನಪ್ರಿಯತೆ, ಪ್ರಭಾವಕ್ಕೆ ಸಾಕ್ಷಿ.

ಸೂಕಿ ಅವರ ಪ್ರಭಾವವನ್ನು ಗಮನಿಸಿದ್ದ ಸೇನೆಯು ಅವರು ರಾಷ್ಟ್ರವನ್ನು ತೊರೆದು ಹೋದರೆ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡುವುದಾಗಿ ಸಾರಿತ್ತು. ಆದರೆ ಸೂಕಿ ಬಗ್ಗಲಿಲ್ಲ. 2010ರ ನವೆಂಬರ್‌ನಲ್ಲಿ ಗೃಹಬಂಧನದಿಂದ ಮುಕ್ತರಾದ ಬಳಿಕ 2012ರಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದರು. ಸಂಸತ್ತಿನ ವಿರೋಧ ಪಕ್ಷದ ನಾಯಕಿಯೂ ಆದರು.

ಅಧ್ಯಕ್ಷರಾಗಲು ತೊಡಕು?
ಸೂಕಿ ಅವರ ಜನಪ್ರಿಯತೆ ಮನಗಂಡ ಸೇನಾಡಳಿತ ರಾಷ್ಟ್ರದ ಅಧ್ಯಕ್ಷ ಸ್ಥಾನದಿಂದ ಅವರನ್ನು ಹೊರಗಿಡುವ ಸಲುವಾಗಿಯೇ 2010ರಲ್ಲಿ ಹೊಸ ಚುನಾವಣಾ ಕಾನೂನನ್ನೂ ಜಾರಿಗೊಳಿಸಿತು.  ಆ ಪ್ರಕಾರ ವಿದೇಶಿ ಪತಿ  ಅಥವಾ ವಿದೇಶಿ ಪೌರತ್ವ ಹೊಂದಿದ ಮಕ್ಕಳನ್ನು ಹೊಂದಿದವರು ಅಧ್ಯಕ್ಷರಾಗುವಂತಿಲ್ಲ. ಹಾಗಾಗಿ ಸೂಕಿ ಅವರ ಪಕ್ಷ ಈಗ ಸರ್ಕಾರ ರಚಿಸಿದರೂ ಅವರು ಅಧ್ಯಕ್ಷರಾಗುವಂತಿಲ್ಲ. ಇದಕ್ಕಾಗೇ ಸೂಕಿ ಅವರು ಅಧ್ಯಕ್ಷರಿಗಿಂತ ಮೇಲಿನ ಸ್ಥಾನದಲ್ಲಿದ್ದು ರಾಷ್ಟ್ರವನ್ನು ಮುನ್ನಡೆಸುವುದಾಗಿ ಚುನಾವಣೆ ಬಳಿಕ ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ 2011ರಲ್ಲಿ ಸೇನಾಡಳಿತ ಬದಲು ಮೇಲ್ನೋಟ
ಕ್ಕೆ ನಾಗರಿಕ ಸರ್ಕಾರವೆಂದು ಬಿಂಬಿಸುವ ಆಡಳಿತ ವ್ಯವಸ್ಥೆಯು ತೇನ್‌ ಸೇನ್‌ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದರೂ ಪ್ರಮುಖ ರಾಜಕೀಯ ಮತ್ತು ಆರ್ಥಿಕ ಅಧಿಕಾರಗಳು ಸೇನೆ ಬಳಿಯೇ ಉಳಿದಿವೆ. ಹೀಗಾಗಿ ಸೂಕಿ ಅವರು ಮುಂದೆಯೂ ಸೇನೆಯ ಅಧಿಕಾರಿಗಳ ಜತೆ   ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಬೇಕು.

ಫಲಿತಾಂಶವನ್ನು ಗೌರವಿಸುವುದಾಗಿ ಸೇನಾ ಮುಖ್ಯಸ್ಥ ಮಿನ್‌ ಆಂಗ್‌ ಮತ್ತು ಅಧ್ಯಕ್ಷ ತೇನ್‌ ಸೇನ್‌ ಹೇಳಿದ್ದು ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಆದಾಗ್ಯೂ ರಾಷ್ಟ್ರವನ್ನು 53 ವರ್ಷಗಳವರೆಗೆ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಸೇನಾ ನಾಯಕರು ಸ್ವಯಂಪ್ರೇರಿತರಾಗಿ ಅಧಿಕಾರ ಬಿಟ್ಟುಕೊಡುವರೇ ಕಾದು ನೋಡಬೇಕು. 

1990ರಲ್ಲಿ  ಸೂಕಿ ಪಕ್ಷ ಬಹುಮತ ಗಳಿಸಿದ್ದಾಗ ಅದನ್ನು ಸೇನೆಯು  ರದ್ದುಮಾಡಿತ್ತು. ಆದರೆ ಈಗ ಸೇನೆಯ ಸೋಲು ಪಾರದರ್ಶಕವಾಗಿದೆಯಲ್ಲದೇ ಜಗಜ್ಜಾಹೀರವಾಗಿದೆ. ಆದ್ದರಿಂದ ಫಲಿತಾಂಶವನ್ನು ಕಡೆಗಣಿಸುವುದು ಈ ಸಲ ಅಷ್ಟು ಸುಲಭವಾಗಲಿಕ್ಕಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT