ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಲಕ್ಷ್ಯವೇ ಬಂಡೀಪುರ ಬೆಂಕಿಗೆ ಕಾರಣ’

4,850 ಹೆಕ್ಟೇರ್‌ ಅರಣ್ಯ ನಾಶ
Last Updated 28 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪಾರದರ್ಶಕ ನಿಯಮ ಉಲ್ಲಂಘಿಸಿ ₹1.4 ಕೋಟಿ ವೆಚ್ಚದಲ್ಲಿ ಬೇಕಾಬಿಟ್ಟಿ ಬೆಂಕಿ ತಡೆ ರೇಖೆಗಳ(ಫೈರ್‌ ಲೈನ್‌) ನಿರ್ಮಾಣ, ಮೇಲ್ವಿಚಾರಣೆ ಕೊರತೆ ಮತ್ತು ಬೆಂಕಿ ತಡೆಯಲು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ ಕಾರಣ 4,850 ಹೆಕ್ಟೇರ್‌ (12,000 ಎಕರೆ) ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಫೆಬ್ರುವರಿಯಲ್ಲಿ ಬಂಡೀಪುರ ಹುಲಿ ರಕ್ಷಿತ ಪ್ರದೇಶಕ್ಕೆ ಬೆಂಕಿ ಬಿದ್ದು ಅರಣ್ಯ ನಾಶವಾಗಿತ್ತು. ಈ ಸಂಬಂಧ ಉನ್ನತಾಧಿಕಾರ ಸಮಿತಿ ನಡೆಸಿರುವ ತನಿಖಾ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಬೆಂಕಿಯಿಂದ ನಾಶವಾದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬೆಂಕಿ ತಡೆ ರೇಖೆಗಳನ್ನು (ಫೈರ್‌ ಲೈನ್‌) ಕೂಲಂಕಷವಾಗಿ ಪರಿಶೀಲಿಸಿದಾಗ, ಮಹತ್ವದ ಲೋಪ ಬೆಳಕಿಗೆ ಬಂದಿದೆ. ಈ ಬೆಂಕಿ ತಡೆ ರೇಖೆಗಳು ನಿಯಮದ ಪ್ರಕಾರ 10 ಮೀಟರ್‌ ಅಗಲ ಇರಬೇಕು. ಆದರೆ, ಸಾಕಷ್ಟು ಕಡೆಗಳಲ್ಲಿ ಮೂರರಿಂದ ಐದು ಮೀಟರ್‌ಗಳಷ್ಟು ಅಗಲ ಇದ್ದದ್ದು ಕಂಡು ಬಂದಿತು. 2,500 ಕಿ.ಮೀ ಉದ್ದದಷ್ಟು ಬೆಂಕಿ ತಡೆ ರೇಖೆಗಳನ್ನು ನಿರ್ಮಿಸಲಾಗಿದೆ ಎಂಬುದಾಗಿ ದಾಖಲೆಗಳು ಹೇಳುತ್ತವೆ. ಆದರೆ, ಬಹಳಷ್ಟು ಕಡೆಗಳಲ್ಲಿ ಬೆಂಕಿ ತಡೆ ರೇಖೆಗಳೇ ಇಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಕಷ್ಟು ವಿಚಾರಗಳಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ. ಇವೆಲ್ಲವನ್ನೂ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಟೆಂಡರ್‌ ಕರೆಯದೇ ಬೆಂಕಿ ತಡೆ ರೇಖೆಗಳನ್ನು ನಿರ್ಮಿಸುವುದಕ್ಕೆ ಬೆಂಗಳೂರಿನಿಂದ ಬಂದಿದ್ದ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಮೈಸೂರಿನ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು. ಬೆಂಕಿ ತಡೆ ರೇಖೆ ನಿರ್ಮಿಸಲು ₹1.4 ಕೋಟಿ ಖರ್ಚು ಮಾಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕ ಕಾಯ್ದೆಯಡಿ ವಿನಾಯ್ತಿ ಇಲ್ಲದಿದ್ದರೂ ತುಂಡು ಗುತ್ತಿಗೆ ನೀಡಲಾಗಿತ್ತು. ಉತ್ತಮ ಗುಣಮಟ್ಟದ ಬೆಂಕಿ ತಡೆ ರೇಖೆಗಳನ್ನು ನಿರ್ಮಿಸಿದ್ದರೆ ಬೆಂಕಿಯ ಜ್ವಾಲೆ ಹೆಚ್ಚು ವ್ಯಾಪಿಸುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಅಚ್ಚರಿಯ ಸಂಗತಿ ಎಂದರೆ, ಬಂಡೀಪುರ ಸಂರಕ್ಷಿತ ಕಾರ್ಯ ಯೋಜನೆ ಕುರಿತ 500 ಪುಟಗಳ ದಾಖಲೆಯಲ್ಲಿ ಬೆಂಕಿ ತಡೆಗೆ ಸಂಬಂಧಿಸಿದಂತೆ ಕೇವಲ ಎರಡು ಪುಟಗಳಷ್ಟು ಮಾಹಿತಿ ಇದೆ. ಅರಣ್ಯದ ರಕ್ಷಣೆ ಮತ್ತು ಬೆಂಕಿ ನಿರ್ವಹಣೆಯ ಕುರಿತು ಕಾರ್ಯ ಯೋಜನೆಯು ಮಾಹಿತಿಯನ್ನು ಒಳಗೊಂಡಿರಬೇಕು. ಅದರಲ್ಲೂ ಬೆಂಕಿ ತಡೆ ನಿರ್ವಹಣೆ ಕುರಿತು ಹೆಚ್ಚಿನ ಮಾಹಿತಿ ನೀಡಬೇಕಿತ್ತು. ಬೆಂಕಿ ತಡೆ ನಿರ್ವಹಣೆಗೆ ಶೇ 40 ರಷ್ಟು ಸಮಯ ಮತ್ತು ಶ್ರಮವನ್ನು ಅಧಿಕಾರಿಗಳು ಹಾಕಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಲು ಪಿಸಿಸಿಎಫ್‌ ಪುನಾಟಿ ಶ್ರೀಧರ್‌ ನಿರಾಕರಿಸಿದರು. 2016–17 ರಲ್ಲಿ ಬಂಡೀಪುರ ಅರಣ್ಯದಲ್ಲಿ ಬೆಂಕಿ ಬಿದ್ದು ನಷ್ಟ ಆಗಲು ಸಾಕಷ್ಟು ತಯಾರಿ ಇಲ್ಲದಿರುವುದೇ ಕಾರಣ ಎಂಬುದಾಗಿ ವರದಿ ನೀಡಲಾಗಿತ್ತು. ಬೆಂಕಿ ಆರಿಸಲು ನೀರಿನ ಪಂಪ್‌ ಚಾಲೂ ಮಾಡಲು ಆಗಿರಲಿಲ್ಲ. ಪಂಪ್‌ ಹಾಳಾಗಿದ್ದೇ ಇದಕ್ಕೆ ಮುಖ್ಯ ಕಾರಣವಾಗಿತ್ತು. ಅಲ್ಲದೆ, ಸಿಬ್ಬಂದಿ ಬೆಂಕಿ ಆರಿಸುವ ಸಂಬಂಧ ನಿತ್ಯವೂ ತರಬೇತಿ ನೀಡಬೇಕು ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಸಂಬಂಧ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸೇವಾ ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT