‘ಮನೆಯಲ್ಲಿ ನೆಮ್ಮದಿಯಿಲ್ಲ’

7

‘ಮನೆಯಲ್ಲಿ ನೆಮ್ಮದಿಯಿಲ್ಲ’

Published:
Updated:
Deccan Herald

ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕುಟುಂಬದ ಜೊತೆ ವಾಸವಿರುವುದು. ನನ್ನ ಸಮಸ್ಯೆ ಏನೆಂದರೆ ನಾನು ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ನೆಮ್ಮದಿಯೇ ಇರುವುದಿಲ್ಲ. ಮನೆಯಲ್ಲಿ ಯಾರನ್ನೂ ಮಾತನಾಡಿಸಲು ಇಷ್ಟ ಆಗುತ್ತಿಲ್ಲ. ಅಪ್ಪ–ಅಮ್ಮ ಯಾರೂ ಮಾತನಾಡಿದರೂ ಇಷ್ಟವಾಗುತ್ತಿಲ್ಲ. ಆದರೆ ಗೆಳೆಯರು ಮಾತನಾಡಿಸಿದರೆ ಮಾತನಾಡುತ್ತೇನೆ. ಇದಕ್ಕೆ ಏನು ಕಾರಣ ಮತ್ತು ಪರಿಹಾರ ಏನು?
ಹೆಸರು, ಊರು ಬೇಡ

ಉತ್ತರ: ಇಂದಿನ ಕಾಲದಲ್ಲೂ ತಂದೆ–ತಾಯಿಗಳೊಂದಿಗೆ ಬದುಕುವ ಕೆಲವು ಅದೃಷ್ಟವಂತರಲ್ಲಿ ನೀವೂ ಒಬ್ಬರು. ಅನೇಕರು ಒಂಟಿಯಾಗಿ ಬದುಕುತ್ತಾರೆ. ಅಂಥವರೊಂದಿಗೆ ಮಾತನಾಡಲು ಅಥವಾ ಸಮಯ ಕಳೆಯಲು ಯಾರೂ ಇರುವುದಿಲ್ಲ. ನೀವು ಕೆಲಸ ಮುಗಿಸಿ ಬರುವುದನ್ನೇ ದಾರಿ ಕಾಯುತ್ತಿರುವ ತಾಯಿ ನಿಮ್ಮೊಂದಿಗಿದ್ದಾರೆ. ಆ ಗಳಿಗೆಗೆ ಮಹತ್ವವನ್ನು ನೀಡಿ. ಅವರ ಉ‍ಪಸ್ಥಿತಿ ನಿಜಕ್ಕೂ ಅತ್ಯಮೂಲ್ಯ. ಅವರ ಜೊತೆ ಮಾತನಾಡುವಂಥದ್ದು ನಿಮ್ಮಲ್ಲಿ ಏನೂ ಇಲ್ಲದಿರಬಹುದು; ಆದರೆ ಅವರೊಂದಿಗೆ ನೀವು ಇರುವುದೇ ಅವರಿಗೆ ಬೆಂಬಲ ಹಾಗೂ ಭದ್ರತೆ ಇದ್ದ ಹಾಗೆ. ಅದನ್ನು ಅರ್ಥ ಮಾಡಿಕೊಳ್ಳಿ. ಒಮ್ಮೆ ನೀವು ಮನೆಗೆ ಹಿಂದಿರುಗಿದ ಮೇಲೆ ಇಡೀ ದಿನವನ್ನು ಹೇಗೆ ಕಳೆದಿದ್ದೀರಿ ಎಂಬುದನ್ನು ನಿಮ್ಮ ತಾಯಿಗೆ ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮನೆಯಲ್ಲಿ ಏನಾದರೂ ಸಹಾಯ ಮಾಡಬೇಕಾ – ಎಂದು ಅವರನ್ನು ಕೇಳಿ. ನಿಮಗೆ ತಾಯಿಯ ಪ್ರೀತಿ ಸಿಗುತ್ತಿದೆ, ಅವರ ಕೈಯ ಊಟ ಸಿಗುತ್ತಿದೆ; ನೀವು ಪುಣ್ಯವಂತರು. ಅದಕ್ಕಾಗಿ ನೀವು ಸಂತೋಷ ಪಡಬೇಕು. ನಿಮಗೆ ಸಿಕ್ಕಿರುವ ಭಾಗ್ಯವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಒಮ್ಮೆ ಮನೆಗೆ ಹಿಂದಿರುಗಿದ ಮೇಲೆ ಮನೆಯ ಜನರ ಜೊತೆ ಬೆರೆಯಲು ಪ್ರಯತ್ನಿಸಿ; ಪುಸ್ತಕಗಳ ಓದು, ಗಾರ್ಡನಿಂಗ್ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಆಗ ನಿಮಗೆ ಮನೆಯಲ್ಲಿ ನೆಮ್ಮದಿ ಸಿಗುತ್ತಿಲ್ಲ ಎಂಬುದರ ಬಗ್ಗೆ ಆಲೋಚಿಸಲು ಕೂಡ ಸಮಯ ಸಿಗುವುದಿಲ್ಲ. 

*
ನನಗೆ ಮದುವೆ ಆಗಿ ಒಂದು ವರ್ಷ ಆಯಿತು. ನನ್ನ ಗಂಡನಿಗೂ ನನಗೂ ಹೊಂದಾಣಿಕೆ ಆಗುತ್ತಿಲ್ಲ. ನಾನು ಹೈಸ್ಕೂಲ್ ಟೀಚರ್‌. ಅವರು ಸಂವಹನತಜ್ಞ; ದೊಡ್ಡ ಕಂಪನಿಯೊಂದರಲ್ಲಿ ತರಬೇತಿದಾರರಾಗಿದ್ದಾರೆ. ಅವರು ನಾನೆಂದರೆ ಇಷ್ಟವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಾರೆ. ಯಾವಾಗಲೂ ನನ್ನ ಮೇಲೆ ಕೋಪ ಮಾಡಿಕೊಳ್ಳುವುದು, ರೇಗುವುದು ಮಾಡುತ್ತಾರೆ. ಕೆಟ್ಟದಾಗಿ ಬೈಯುವುದು; ಹೊಡೆಯುತ್ತಾರೆ ಕೂಡ. ಇದರಿಂದ ನನಗೆ ಜೀವನವೇ ಬೇಸರ ಬಂದಿದೆ.
–ಹೆಸರು, ಊರು ಬೇಡ

ಉತ್ತರ: ನೀವಿಬ್ಬರೂ ವಿದ್ಯಾವಂತರು. ಸರಿಯಾದ ಸಂವಹನದ ಮೂಲಕ ಇಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬೇಕು. ನಿಮ್ಮಿಬ್ಬರ ಬಯಕೆಗಳನ್ನು ನೀವಿಬ್ಬರೂ ಅರ್ಥ ಮಾಡಿಕೊಳ್ಳಬೇಕು. ನೀವಿಬ್ಬರೂ ನಿಮ್ಮಿಬ್ಬರ ಜವಾಬ್ದಾರಿಗಳನ್ನು ಅರಿತು, ಅದನ್ನು ಪರಸ್ಪರ ಪೂರೈಸಲು ಶ್ರಮಿಸಬೇಕು. ಮದುವೆಯಲ್ಲಿ ಆರೋಗ್ಯಕರ ಸಂವಹನ ತುಂಬಾ ಮುಖ್ಯ. ಇಬ್ಬರ ನಡುವಿನ ಬಾಂಧವ್ಯ ಹಾಗೂ ಪ್ರೀತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರನ್ನು ದೂರುವುದು, ಅವರೊಂದಿಗೆ ವಾದ ಮಾಡುವುದನ್ನು ನಿಲ್ಲಿಸಿ. ಆಗಲೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಮನೆಯ ಹಿರಿಯರನ್ನು ಇದರಲ್ಲಿ ಬಳಸಿಕೊಳ್ಳಿ ಮತ್ತು ಅವರ ಜೊತೆ ಚರ್ಚೆ ಮಾಡಿ. ಹೊಡೆಯುವುದನ್ನು ಸಹಿಸಲು ಆಗುವುದಿಲ್ಲ. ಅದು ಅಮಾನವೀಯ; ಕಾನೂನಿ ಪ್ರಕಾರವೂ ಅಪರಾಧ. ಈ ವಿಷಯದಲ್ಲಿ ನೀವು ಹಿರಿಯರ ಸಹಾಯ–ಸಲಹೆಯನ್ನು ಕೇಳುವುದು ಉತ್ತಮ.

*
ನಾನು ಯಾವುದೇ ವಿಷಯ ಅಥವಾ ಯೋಜನೆಗಳ ಬಗ್ಗೆ ಚಿಂತಿಸುವಾಗ ಅವು ಪುನಃ ಪುನಃ ಮನದಲ್ಲಿ ಪುನರಾವರ್ತನೆಯಾಗಿ ಒತ್ತಡ ಉಂಟಾಗುತ್ತದೆ. ಆ ಒತ್ತಡದ ತೀವ್ರತೆ ಎಷ್ಟೆಂದರೆ ಕೆಲವೊಮ್ಮೆ ರಾತ್ರಿ ಮಲಗುವಾಗ ನಿದ್ದೆ ಬಾರದೆ ತಲೆನೋವು ಆರಂಭವಾಗುತ್ತದೆ. ಇದರಿಂದ ಮನೆಯ ಸದಸ್ಯರ ಮೇಲೆ ರೇಗುತ್ತೇನೆ. ಈ ಸಮಸ್ಯೆಯಿಂದ ಹೊರಬರುವ ಮಾರ್ಗವನ್ನು ತಿಳಿಸಿ.
–ಪ್ರಶಾಂತ್, ಬೆಂಗಳೂರು

ಉತ್ತರ: ನಿಮ್ಮಿಂದ ನಿಭಾಯಿಸಲು ಸಾಧ್ಯವಾಗದಿರುವ ವಿಷಯಗಳಿಂದ ಒತ್ತಡಕ್ಕೆ ಒಳಗಾಗಿದ್ದೀರಿ. ಸಾಮಾಜಿಕ ಒತ್ತಡ, ಕುಟುಂಬ, ಕೆಲಸ ಹಾಗೂ ಅತಿಯಾದ ಯೋಚನೆಗಳು ನಿಮ್ಮಲ್ಲಿ ಒತ್ತಡವನ್ನು ಉಂಟುಮಾಡಿರಬಹುದು. ಒತ್ತಡಗಳು ನಿಮ್ಮ ಮನಸ್ಸಿನಲ್ಲಿ ತುಂಬಿವೆ; ಅವು ನಿಮ್ಮನ್ನು ಇನ್ನೊಬ್ಬರ ಮೇಲೆ ರೇಗುವಂತೆ ಮಾಡುತ್ತಿದೆ. ನಿಮ್ಮ ಒತ್ತಡವನ್ನು ನಿಭಾಯಿಸುವುದನ್ನು ಕಲಿಯಬೇಕು. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳವುದನ್ನು ಕಲಿಯಿರಿ. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ. ಸಾಧಿಸಲು ಸಾಧ್ಯವಾಗುವ ಗುರಿಗಳನ್ನು ಇರಿಸಿಕೊಳ್ಳಿ. ಆರೋಗ್ಯ, ವ್ಯಾಯಾಮ ಹಾಗೂ ಡಯೆಟ್‌ನ ಮೇಲೆ ಗಮನವಿರಲಿ. ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುವಂಥ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ‌‌ಪರಿಹಾರ ಕಾಣದಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಏನಾದ್ರೂ ಕೇಳ್ಬೋದು...
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ: bhoomika@prajavani.co.in, ವಾಟ್ಸ್ಯಾಪ್: 9482006746

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !