ವಿಜಯಪುರಕ್ಕಿಲ್ಲ ವಿಶೇಷ ಪ್ಯಾಕೇಜ್; ರೈಲಿನ ನಿರಾಸೆ..!

7
ಕೇಂದ್ರ ಬಜೆಟ್‌ಗೆ ಬಿಜೆಪಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ; ಕಾಂಗ್ರೆಸ್‌ ಕೂಟದಿಂದ ಕಟು ಟೀಕೆ

ವಿಜಯಪುರಕ್ಕಿಲ್ಲ ವಿಶೇಷ ಪ್ಯಾಕೇಜ್; ರೈಲಿನ ನಿರಾಸೆ..!

Published:
Updated:
Prajavani

ವಿಜಯಪುರ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ವಿಜಯಪುರ ಜಿಲ್ಲೆಗೆ ವಿಶೇಷ ಕೊಡುಗೆ ಘೋಷಿಸಬಹುದು ಎಂಬ ನಿರೀಕ್ಷೆ ಮತ್ತೊಮ್ಮೆ ಹುಸಿಯಾಯ್ತು.

ರಸಗೊಬ್ಬರ ತಯಾರಿಕೆಯ ಬೃಹತ್ ಕೈಗಾರಿಕೆ, ಹೊಸ ರೈಲ್ವೆ ಯೋಜನೆಗಳು, ದಶಕದ ಬೇಡಿಕೆ, ದ್ರಾಕ್ಷಿ ಬೆಳೆಗಾರರ ಸಂಕಟ ಸೇರಿದಂತೆ ಜಿಲ್ಲೆಗೆ ಯಾವೊಂದು ನೂತನ ಯೋಜನೆ ಘೋಷಣೆಯಾಗದಿದ್ದುದು, ವಿಜಯಪುರಿಗರಲ್ಲಿ ತೀವ್ರ ನಿರಾಸೆ ಮೂಡಿಸಿತು.

ಕೇಂದ್ರ ಬಜೆಟ್‌ ತೆರಿಗೆದಾರರಲ್ಲಿ, ನೌಕರಿದಾರರಲ್ಲಿ, ಮಧ್ಯಮ ವರ್ಗದ ಉದ್ಯಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತೆರಿಗೆ ವಿನಾಯ್ತಿ ಮೊತ್ತ ದುಪ್ಪಟ್ಟುಗೊಂಡಿದ್ದೇ ಎಲ್ಲರಲ್ಲೂ ಸಂತಸದ ಹೊಳೆ ಹರಿಸಿದೆ.

ರೈಲಿಗಿಲ್ಲ ಹಸಿರು ನಿಶಾನೆ

ವಿಜಯಪುರ–ಮುಂಬಯಿ ನಡುವೆ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭಗೊಳ್ಳಬೇಕು ಎಂಬ ಈ ಭಾಗದ ಜನರ ಬಹು ಮುಖ್ಯ ಬೇಡಿಕೆಗೆ ಈ ಬಾರಿಯೂ ಮನ್ನಣೆ ಸಿಗದಿರುವುದು ತೀವ್ರ ನಿರಾಸೆ ಮೂಡಿಸಿದೆ.

ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಆಲಮಟ್ಟಿ-ಕೊಪ್ಪಳ, ವಿಜಯಪುರ-ಶಹಾಪುರ–ಸಿಕಂದರಾಬಾದ್ ಹಾಗೂ ವಿದ್ಯಾರ್ಥಿ ಎಕ್ಸ್‌ಪ್ರೆಸ್‌ ರೈಲುಗಳು ಇನ್ನೂ, ತನ್ನ ಸೇವೆ ಆರಂಭಿಸಿಲ್ಲ. ಈ ಬಜೆಟ್‌ನಲ್ಲೂ ಅದರ ಮುನ್ಸೂಚನೆ ಸಿಗಲ್ಲಿಲ್ಲ.

ವಿಜಯಪುರ ಮೂಲಕ ಮುಂಬಯಿ, ನವದೆಹಲಿ, ಕೋಲ್ಕತ್ತಾ, ಚೆನ್ನೈ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ ರೈಲಿನ ಓಡಾಟ ಮತ್ತೊಮ್ಮೆ ಕನಸಿನ ಗಂಟಾಗಿಯೇ ಉಳಿಯಿತು.

ದ್ರಾಕ್ಷಿ ಬೆಳೆಗಾರರ ದಶಕದ ಬೇಡಿಕೆಗೆ ಕೇಂದ್ರ ಈ ಬಾರಿಯೂ ಸ್ಪಂದಿಸಿಲ್ಲ. ಸತತ ಹೊಡೆತಕ್ಕೆ ಸಿಲುಕಿದ ಬೆಳೆಗಾರ ಮತ್ತೊಮ್ಮೆ ನಿರಾಸೆಯ ಕೂಪದಲ್ಲಿ ಮುಳುಗಿದರು. ಪುನಶ್ಚೇತನ ಪ್ಯಾಕೇಜ್‌ ಸಹ ಪ್ರಕಟಗೊಳ್ಳಲಿಲ್ಲ. ಸಾಲ ಮನ್ನಾ ಸಹ ಪ್ರಸ್ತಾಪವಾಗಲಿಲ್ಲ.

ಬಜೆಟ್‌ಗೆ ಭರಪೂರ ಪ್ರತಿಕ್ರಿಯೆ

ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಬಜೆಟ್‌ಗೆ ಭರಪೂರ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಗರು ಅಭೂತಪೂರ್ವ ಸ್ವಾಗತ ಕೋರಿದ್ದರೆ, ಕಾಂಗ್ರೆಸ್‌ ಕೂಟ ಕಟು ಟೀಕೆ ವ್ಯಕ್ತಪಡಿಸಿದೆ.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡ ವಿಜುಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌.ಪಾಟೀಲ ಕೂಚಬಾಳ, ವಿಜಯಪುರ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಗೋ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ ಜೋಶಿ, ಮಾಧ್ಯಮ ವಕ್ತಾರ ಕೃಷ್ಣಾ ಗುನ್ನಾಳಕರ, ಎಬಿವಿಪಿ ವಿಭಾಗ ಸಂಚಾಲಕ ಸಚಿನ್ ಕುಳಗೇರಿ, ಹಿಂದುಳಿದ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಬಿರಾದಾರ, ಪ್ರಧಾನ ಕಾರ್ಯದರ್ಶಿ ಮೌನೇಶ ಪತ್ತಾರ, ವಿಜಯಪುರ ಜಿಲ್ಲಾ ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಸ್ವಾಮಿ ವಿವೇಕಾನಂದ ಸಂಘಟನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ, ಭೀಮು ಮಾಶ್ಯಾಳ ಮತ್ತಿತರರು ಕೇಂದ್ರ ಬಜೆಟ್‌ನ್ನು ಪ್ರಶಂಸಿಸಿದ್ದಾರೆ.

ದಲಿತ ಸಂಘಟನೆಗಳ ಮುಖಂಡ ಅಡಿವೆಪ್ಪ ಸಾಲಗಲ್ಲ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ದುದ್ದಗಿ, ಅಹಿಂದ ರೈತ ಸಂಘದ ಮಲ್ಲಪ್ಪ ಎಸ್‌.ಬಿದರಿ ಕೇಂದ್ರ ಬಜೆಟ್‌, ಪ್ರಧಾನಿ ಮೋದಿ ನೀತಿ ವಿರುದ್ಧ ಕಟು ಟೀಕೆ ನಡೆಸಿದ್ದಾರೆ.

ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಕಾಂಗ್ರೆಸ್‌ ಮುಖಂಡೆ ರೇಷ್ಮಾ ಪಡೇಕನೂರ, ಜಿಲ್ಲಾ ಘಟಕದ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಕೇಂದ್ರ ಬಜೆಟ್‌ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣಾ ಬಜೆಟ್‌, ಮೂಗಿಗೆ ತುಪ್ಪ ಸವರುವ ಕೆಲಸ. ಹಿಂದಿನ ಯೋಜನೆಗಳನ್ನೇ ಅನುಷ್ಠಾನಗೊಳಿಸಿಲ್ಲ ಎಂದು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !