ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?

Last Updated 24 ಜನವರಿ 2020, 19:30 IST
ಅಕ್ಷರ ಗಾತ್ರ

ಉಪಕಾರ– ಕೃತಜ್ಞತೆ ಪ್ರೀತಿಯಾಗಬಲ್ಲದೇ?

40 ವರ್ಷ. 6 ವರ್ಷದ ಹಿಂದೆ ಬಡವರ ಮನೆಯ ಹುಡುಗಿಯನ್ನು ವರದಕ್ಷಿಣೆಯಿಲ್ಲದೆ ಮದುವೆಯಾದೆ. ಹೆಣ್ಣುಮಗುವಿದೆ. ಅವಳ ಇಷ್ಟದಂತೆ ಕಾಲೇಜಿಗೆ ಸೇರಿಸಿದೆ. ಮನೆಯವರೂ ಅವಳನ್ನು ಪ್ರೀತಿಮಾಡಿದ್ದರು. ಆದರೆ ಅವಳು ಸುಳ್ಳು ಹೇಳಿ ಕಾಲೇಜು ಹುಡುಗನ ಜೊತೆ ಓಡಿಹೋಗಿದ್ದಳು. ಕೌಟುಂಬಿಕ ನ್ಯಾಯಾಲಯದಲ್ಲಿ ಒಪ್ಪಿಕೊಂಡು ಬೇರೆ ಮನೆಯಲ್ಲಿ ಒಟ್ಟಾಗಿ ಜೀವಿಸುತ್ತಿದ್ದೇವೆ. ಅವಳು ತಾನು ಹಾಗೆ ಮಾಡಬಾರದಿತ್ತು ಅಂತಾಳೆ. ನಮ್ಮ ಕಡೆಯವರು ಮನೆಗೆ ಬರುತ್ತಾರೆ. ಅವಳ ಅಪ್ಪ- ಅಮ್ಮ ನಮ್ಮ ಮನೆಗೆ ಬರುತ್ತಿಲ್ಲ. ಅವಳಿಗೆ ಮೊಬೈಲ್ ಕೊಡಿಸಿ, ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ ಅವಳು ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾಳೆ. ಮನೆ ಬಿಟ್ಟು ಹೋಗುತ್ತೇನೆ ಅಂತ ಹೆದರಿಸುತ್ತಾಳೆ. ಸಲಹೆ ಕೊಡಿ.

ಹೆಸರು, ಊರು ಇಲ್ಲ

ಬಡವರ ಮನೆ ಹುಡುಗಿಯನ್ನು ವರದಕ್ಷಿಣೆಯಿಲ್ಲದೆ ಮದುವೆಯಾಗಿ ಅವಳಿಗೆ ಬೇಕಾದ್ದು ಕೊಡಿಸಿ ಚೆನ್ನಾಗಿ ನೋಡಿಕೊಳ್ಳುವ ಮೂಲಕ ಅವಳಿಗೆ ಉಪಕಾರ ಮಾಡುತ್ತಿದ್ದೇನೆ ಎನ್ನುವ ಮನೋಭಾವ ನಿಮ್ಮ ಪತ್ರದಲ್ಲಿ ಕಾಣಿಸುತ್ತಿದೆ. ನಿಮ್ಮ ಉದ್ದೇಶಗಳು ಪ್ರಾಮಾಣಿಕವಾದದ್ದು ಮತ್ತು ಒಳ್ಳೆಯತನ ಮೆಚ್ಚುವಂತಹುದು. ಆದರೆ ಇದಕ್ಕಾಗಿಯೇ ಹೆಂಡತಿ ಕೃತಜ್ಞತೆಯಿಂದ ನಿಮ್ಮೊಡನೆ ಚೆನ್ನಾಗಿ ಬದುಕಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ದಾಂಪತ್ಯಕ್ಕೆ ಪರಸ್ಪರ ಆಕರ್ಷಣೆ ಮತ್ತು ಗೌರವಗಳಿರಬೇಕಾಗುತ್ತದೆ. ನಿಮ್ಮ ಪತ್ನಿಗೆ ತಾನು ಹಿಂದೆ ಮಾಡಿದ್ದರ ಬಗೆಗೆ ಬೇಸರವಿದ್ದರೂ ನಿಮ್ಮ ಬಗೆಗೆ ಆಕರ್ಷಣೆ ಹುಟ್ಟುತ್ತಿಲ್ಲ. ಕೇವಲ ದೈಹಿಕ ಸುಖ ಅಥವಾ ವಸ್ತುಗಳನ್ನು ಕೊಡಿಸುವುದರಿಂದ ಇದು ಸಾಧ್ಯವಾಗುವುದಿಲ್ಲ. ಪತ್ನಿಗೆ ಸರಿಯಾದ ಸ್ಥಾನ ನೀಡಿ, ಅವಳ ಜೊತೆ ಹೆಚ್ಚು ಸಮಯ ಕಳೆಯುತ್ತಾ, ಭಾವನೆಗಳನ್ನು ಗೌರವಿಸುತ್ತಾ, ಆಸಕ್ತಿಗಳನ್ನು ಬೆಂಬಲಿಸುತ್ತಾ ಬಾಂಧವ್ಯವನ್ನು ಕಟ್ಟಿಕೊಳ್ಳಬೇಕು. ನುರಿತ ದಾಂಪತ್ಯ ಚಿಕಿತ್ಸಕರ ಸಹಾಯ ಪಡೆಯಿರಿ.

***

ಆಂಗ್ಲ ಉಪನ್ಯಾಸಕ. ಪದವಿ ಓದುವಾಗ ಉದ್ಯಮಿಯಾಗುವ ಗುರಿಯಿತ್ತು. ಈಗ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ಮನೆಯಲ್ಲಿ ಯಾರಿಂದಲೂ ಗೌರವ ಸಿಗುತ್ತಿಲ್ಲ. ಗುರಿಯ ನೆನಪಾದರೂ ಮುಂದುವರೆಯಲು ಭಯವಾಗುತ್ತಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಸಲಹೆ ನೀಡಿ.

ಹೆಸರಿಲ್ಲ, ಕಲಬುರ್ಗಿ

ಸದ್ಯದ ಕಷ್ಟದ ಆರ್ಥಿಕ ಪರಿಸ್ಥಿತಿಗೆ ಉದ್ಯಮಿಯಾಗದಿರುವುದೇ ಕಾರಣ ಎಂದು ತೀರ್ಮಾನಿಸಿಕೊಂಡು ಅಸಹಾಯಕತೆಯನ್ನು ಅನುಭವಿಸುತ್ತಾ ಸ್ಪಷ್ಟವಾಗಿ ಯೋಚಿಸುವುದನ್ನು ನಿಲ್ಲಿಸಿದ್ದೀರಲ್ಲವೇ? ಅರ್ಥಿಕ ಪರಿಸ್ಥಿತಿ ಸುಧಾರಿಸಲು ನನ್ನ ವೃತ್ತಿಯಲ್ಲಿಯೇ ಸಾಧ್ಯವೇ? ನನ್ನ ಇತರ ಆಸಕ್ತಿಯ ಕ್ಷೇತ್ರಗಳಾವುವು? ಉದ್ಯಮವನ್ನು ಮಾಡುವುದಾದರೆ ಏನನ್ನು, ಎಲ್ಲಿ ಹೇಗೆ ಮಾಡುವುದು? ವಿಷಯ ಸಂಗ್ರಹಣೆ ಮಾಡಿ. ಸ್ನೇಹಿತರೊಡನೆ ಕುಂಟುಂಬದವರೊಡನೆ ಚರ್ಚೆ ಮಾಡಿ ಎಲ್ಲರ ಸಹಕಾರ ಕೋರಿ. ನಿಧಾನವಾಗಿ ಬೆಳೆಯುವ ಯೋಜನೆ ಹಾಕಿಕೊಳ್ಳಿ. ಅಸಹಾಯಕರಾದಾಗ ಮೊದಲು ನಮಗೆ ನಾವು ಸಹಾಯ ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳಬೇಕು. ಆಗ ಇತರರ ಸಹಕಾರ ಸಿಗುವ ಸಾಧ್ಯತೆಗಳಿವೆ. ನಮ್ಮನ್ನು ನಾವೇ ಗೌರವಿಸಿಕೊಳ್ಳದಿದ್ದಾಗ ಬೇರೆಯವರಿಂದ ಅದನ್ನು ಹೇಗೆ ನಿರೀಕ್ಷಿಸುತ್ತೀರಿ?

***

ದ್ವಿತೀಯ ಪಿಯು ಓದುತ್ತಿದ್ದೇನೆ. ಪರೀಕ್ಷೆ ಹತ್ತಿರವಾಗುತ್ತಿದ್ದರೂ ಓದಲು ಮನಸ್ಸಾಗುತ್ತಿಲ್ಲ. ತರಗತಿಯಲ್ಲಿ ಪಾಠ ಕೇಳಲು ಆಗುತ್ತಿಲ್ಲ. ಸಲಹೆ ನೀಡಿ.

ಮಹೇಶ, ಬೆಂಗಳೂರು

ನೀವು ಓದುತ್ತಿರುವ ವಿಷಯಗಳು ನಿಮ್ಮ ಆಸಕ್ತಿಯ ಕ್ಷೇತ್ರವಲ್ಲ. ಅದರಲ್ಲಿಯೇ ಮುಂದುವರೆಯಲು ಶ್ರಮಪಡುತ್ತಾ ಹತಾಶರಾಗುತ್ತಿದ್ದೀರಿ. ಯಾವ ವಿಷಯ ಅಥವಾ ವೃತ್ತಿ ನನಗೆ ಸಂತೋಷವನ್ನು ಕೊಡುತ್ತದೆ? 5 ವರ್ಷಗಳ ನಂತರ ನನ್ನನ್ನು ಯಾವ ಸ್ಥಿತಿಯಲ್ಲಿ ನೋಡಿಕೊಳ್ಳಲು ಇಷ್ಟಪಡುತ್ತೇನೆ? ಅದರಲ್ಲಿ ಮುಂದುವರೆಯುವುದು ಹೇಗೆ?- ಎನ್ನುವುದರ ಬಗೆಗೆ ಮನೆಯವರು, ಸ್ನೇಹಿತರು, ಶಿಕ್ಷಕರ ಜೊತೆ ಚರ್ಚೆ ಮಾಡಿ. ಹದಿವಯಸ್ಸಿನಲ್ಲಿ ನಿಮ್ಮ ಆಸಕ್ತಿ, ಗುರಿಗಳ ಬಗೆಗೆ ಸ್ಪಷ್ಟತೆಯಿಲ್ಲದಿರುವುದು ಸಹಜ. ಸದ್ಯಕ್ಕೆ ನಿಮ್ಮ ಮನಸ್ಸಿಗೆ ಹೊಳೆಯುವ ಕ್ಷೇತ್ರಗಳನ್ನು ಆಯ್ದುಕೊಂಡು ಪ್ರಯತ್ನವನ್ನು ಮುಂದುವರೆಸಿ. ನಿಧಾನವಾಗಿ ಸ್ಪಷ್ಟತೆ ಮೂಡಿದಾಗ ಆಸಕ್ತಿ ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ.

***

23ರ ವಿಧವೆ. ಮದುವೆಗೆ ಮೊದಲಿನಿಂದಲೂ ಪ್ರೀತಿಸುತ್ತಿದ್ದ ಹುಡುಗ ಮತ್ತೆ ಹತ್ತಿರವಾಗಿದ್ದಾನೆ. ಮನೆಯಲ್ಲಿ ಪ್ರೇಮವಿವಾಹಕ್ಕೆ ಒಪ್ಪುವುದಿಲ್ಲ. ಹುಡುಗ ಫೈನಾನ್ಸ್‌ ನಡೆಸುತ್ತಿದ್ದರೂ ಆರ್ಥಿಕವಾಗಿ ಗಟ್ಟಿಯಾಗಿಲ್ಲ. ಮದುವೆಯಾಗುವವನು ಹಣಕಾಸಿನಲ್ಲಿ ಚೆನ್ನಾಗಿರಬೇಕೆಂದು ನನಗೆ ಆಸೆ. ಹುಡುಗ ಏನಾದರೂ ಸಾಧನೆ ಮಾಡಿ ಮದುವೆಯಾಗೋಣ ಅಂತಿದಾನೆ. ನನಗೆ ಮುಂದೆ ಹೇಗೆ ಎನ್ನುವ ಭಯ. ಮನೆಯವರನ್ನು ಹೇಗೆ ಒಪ್ಪಿಸುವುದು? ಮನೆಯವರು ತೋರಿಸುವವನನ್ನು ಮದುವೆಯಾಗಲೇ? ಸಲಹೆ ನೀಡಿ.

ಹೆಸರು, ಊರು ಇಲ್ಲ

ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವ ಕಷ್ಟಗಳು ಎಲ್ಲಿಂದ ಬರುತ್ತಿವೆ ಎಂದು ಯೋಚಿಸಿದ್ದೀರಾ? ನಿಮಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವೆಲ್ಲಿದೆ? ನಿಮ್ಮ ಜೀವನದ ಸಂತೋಷಗಳನ್ನು ಸದ್ಯಕ್ಕೆ ಮನೆಯವರ ನಿರ್ಧಾರಗಳಿಗೆ, ಮದುವೆಯಾದ ಮೇಲೆ ಪತಿಯ ನಿರ್ಧಾರಗಳಿಗೆ ಒಪ್ಪಿಸುತ್ತಿದ್ದೀರಿ. ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಪಡೆದುಕೊಳ್ಳಲು ಆರ್ಥಿಕವಾಗಿ ಸ್ವಾವಲಂಬಿಯಾಗುವ ಬಗೆಗೆ ಮೊದಲು ಯೋಚಿಸಿ. ನಂತರ ನನಗೆ ಯಾರ ಬಳಿ ಸಂತೋಷವಾಗಿರಲು ಸಾಧ್ಯ ಎಂದು ನಿರ್ಧರಿಸಲು ನಿಮಗೆ ಸಮಯವಿರುತ್ತದೆ ಮತ್ತು ಆಯ್ಕೆಗಳು ಸಿಗುತ್ತವೆ. ನಿಮಗಿನ್ನೂ 23ರ ಚಿಕ್ಕ ವಯಸ್ಸು. ನಿಮ್ಮ ಕನಸಿನ ಬದುಕನ್ನು ನಡೆಸಲು ಬೇಕಾದಷ್ಟು ಸಮಯವಿದೆ. ನಿರ್ಧಾರಕ್ಕೆ ಆತುರಪಟ್ಟಾಗ ವಿವೇಚನೆ ಕುರುಡಾಗುತ್ತದೆ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT