ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತಿ, ಮಸ್ತಿ ಮತ್ತು ‘ಒಂಟಿ ಸಲಗ’

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಒಮ್ಮೆ ಮೈಸೂರು–ಊಟಿ ಮುಖ್ಯರಸ್ತೆಯಲ್ಲಿರುವ ಬಂಡೀಪುರ ವಸತಿ ಪ್ರದೇಶವನ್ನು ಹಾದು ಹೋಗುವಾಗ, ನಮಗೆ ಸಮಾನಾಂತರದಲ್ಲಿ ದಟ್ಟವಾಗಿ ದೂಳೆಬ್ಬಿಸುತ್ತಾ ಏನೋ ಓಡಿಬರುತ್ತಿತ್ತು. ಅದು ಏನೆಂದು ಅರಿಯಲು ಅಲ್ಲೇ ನಿಂತೆವು. ಮೋಡದಂತೆ ಹರಡಿದ್ದ ದೂಳಿನೊಳಗಿನಿಂದ ಆನೆಯೊಂದು ಹೊರಹೊಮ್ಮಿತು.
 
ಮಾವುತನೊಬ್ಬ ಆ ಆನೆಯ ಮೇಲೆ ಕುಳಿತಿದ್ದ. ಅದು ಹೆಚ್ಚೂಕಡಿಮೆ ಕುದುರೆಯಂತೆ ಓಡುತ್ತಿತ್ತು. ಮುಂಗಾಲಿಗೆ ಬಿಗಿದಿದ್ದ ಮೂವತ್ತು ಅಡಿ ಉದ್ದದ ಭಾರವಾದ ಉಕ್ಕಿನ ಸರಪಳಿಯನ್ನು ಎಳೆದುಕೊಂಡು ಕುಪ್ಪಳಿಸಿದಂತೆ ಓಡುತ್ತಿದ್ದುದರಿಂದ ವಿಪರೀತ ದೂಳು ಎದ್ದಿತ್ತು.
 
ಓಡುತ್ತಿದ್ದ ಆ ಆನೆ ಅರಣ್ಯ ಇಲಾಖೆಯ ಸಾಕಾನೆ ಶಿಬಿರದಲ್ಲಿದ್ದ ಜಯಪ್ರಕಾಶ ಎಂಬ ಗಂಡಾನೆ. ಮಾವುತ ಮಾಸ್ತಿ ಅದರ ಮೇಲೆ ಕುಳಿತಿದ್ದ. ಜಯಪ್ರಕಾಶ ದೈಹಿಕವಾಗಿ ಅತ್ಯುಚ್ಛ್ರಾಯ ಸ್ಥಿತಿಯಲ್ಲಿತ್ತು.
 
ಸಾಮಾನ್ಯವಾಗಿ ಮೂವತೈದು–ನಲವತ್ತು ವರ್ಷ ಪ್ರಾಯದಲ್ಲಿ ದೈಹಿಕವಾಗಿ ಅತ್ಯಂತ ಬಲಿಷ್ಠವಾಗುವ ಈ ಆನೆಗಳು, ಕಾಡಿನಲ್ಲಿ ಅಕ್ಷರಶಃ ಯಾವುದಕ್ಕೂ ಅಂಜುವುದಿಲ್ಲ. ಈ ಹಿನ್ನೆಲೆಯಲ್ಲಿ ಜಯಪ್ರಕಾಶ ದಿಕ್ಕೆಟ್ಟು ಓಡುತ್ತಿರುವುದನ್ನು ಕಂಡು ಅಚ್ಚರಿಯಾಯಿತು. 
 
ಆ ಮುಖ್ಯರಸ್ತೆಯ ಪಕ್ಕದಲ್ಲೇ ಒಂದು ಪುಟ್ಟ ಗುಡಿಸಿಲಿನ ಹೋಟೆಲ್ ಇತ್ತು. ಹೋಟೆಲ್‌ನ ಬಳಿ ನಮ್ಮ ಕಾರನ್ನು ನಿಲ್ಲಿಸುವ ಹೊತ್ತಿಗೆ ಜಯಪ್ರಕಾಶ ರಸ್ತೆಯನ್ನು ದಾಟಿ ಓಡಿಹೋಯಿತು. ಬೆನ್ನ ಮೇಲೆ ಕುಳಿತಿದ್ದ ಮಾಸ್ತಿ ಆನೆಯನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದ. 
 
ತೀರಾ ಆಕಸ್ಮಿಕವಾಗಿ ಎದುರಾದ ಈ ಘಟನೆಯಲ್ಲಿ ಮಾವುತ ಮಾಸ್ತಿ ಅಪಾಯದಲ್ಲಿ ಸಿಕ್ಕಿಕೊಂಡಿರುವುದು ಮಾತ್ರ ನಮಗೆ ಮನವರಿಕೆಯಾಯಿತು. ಆದರೆ ಆ ಅವಧಿಯಲ್ಲಿ ಜಯಪ್ರಕಾಶ ಆನೆಗೆ ಸವಾಲೆಸೆಯುವಂತಹ ಸಲಗಗಳು ಯಾವುವೂ ಆ ಭಾಗದ ಕಾಡಿನಲ್ಲಿರಲಿಲ್ಲ. ಜೊತೆಗೆ ಮಾಸ್ತಿ ಸಹ ಜೊತೆಗಿದ್ದುದರಿಂದ ಅದು ಭೀತಿಗೊಳಗಾಗುವ ಕಾರಣಗಳೂ ಕಾಣಲಿಲ್ಲ.
 
ಬಳಿಕ, ಕವಿದಿದ್ದ ದೂಳು ಕರಗುವ ಮುನ್ನವೇ ಓಡಿಬರುತ್ತಿದ್ದ ಮತ್ತೊಂದು ಆನೆ ಪ್ರತ್ಯಕ್ಷವಾಯಿತು. ಎಡಭಾಗದಲ್ಲಿ ಒಂದೇ ಒಂದು ದಂತವಿದ್ದ ಆ ಕಾಡಾನೆ ಅಲ್ಲಿಯವರಿಗೆಲ್ಲ ಪರಿಚಯವಿತ್ತು. 27–28 ವರ್ಷ ವಯಸ್ಸಾಗಿದ್ದ ಆ ಆನೆ ವರ್ಷದಲ್ಲಿ ಐದಾರು ತಿಂಗಳು ಪ್ರವಾಸಿಗಳು ಸುತ್ತಾಡುವ ಕಾಡಿನ ಭಾಗದಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಯ ವಸತಿ ಪ್ರದೇಶದಲ್ಲಿ, ಹಾಗೂ ಮೈಸೂರು–ಊಟಿ ರಸ್ತೆಯ ಬದಿಯಲ್ಲಿ ಅಡ್ಡಾಡಿಕೊಂಡಿರುತ್ತಿತ್ತು. ಅದನ್ನು ಎಲ್ಲರೂ ‘ಒಂಟಿಕೊಂಬ’ ಎಂದು ಕರೆಯುತ್ತಿದ್ದರು.
 
ನಾವು ಕಾರಿನಲ್ಲಿದ್ದಿದ್ದುದರಿಂದ ‘ಒಂಟಿಕೊಂಬ’ನನ್ನು ಹೇಗಾದರೂ ಮಾಡಿ ಸ್ವಲ್ಪ ಕಾಲ ತಡೆದರೆ, ಮಾಸ್ತಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಮಯ ಸಿಗಬಹುದೆಂದು ಯೋಚಿಸಿದೆವು. ಅದೇ ಸಮಯದಲ್ಲಿ ಟೀ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ಲಾರಿಯೊಂದು ನಿಂತಿತ್ತು.
 
ಓಡಿ ಬರುತ್ತಿದ್ದ ಆನೆಗೆ ಅಡ್ಡವಾಗಿ ಲಾರಿಯನ್ನು ಸ್ವಲ್ಪ ಸಮಯ ನಿಲ್ಲಿಸುವಂತೆ ಚಾಲಕನಿಗೆ ಕೋರಿದೆವು. ಆ ಹೊತ್ತಿಗಾಗಲೇ ಒಂಟಿಕೊಂಬ ಟೀ ಅಂಗಡಿಯ ಮುಂಭಾಗದಲ್ಲಿತ್ತು. ಮಣ್ಣಿನ ಗೋಡೆ, ಹುಲ್ಲಿನ ಛಾವಣಿಯ ಆ ಟೀ ಅಂಗಡಿ ಬಹಳ ದುರ್ಬಲವಾಗಿತ್ತು. ಅದರೊಳಗೆ ಹಲವಾರು ಗಿರಾಕಿಗಳು ಕೂಡ ಇದ್ದರು. ಕಾಡಾನೆಯ ಕೋಪವೇನಾದರೂ ಟೀ ಅಂಗಡಿಯ ಮೇಲೆ ತಿರುಗಿದರೆ ಅದು ಕ್ಷಣಮಾತ್ರದಲ್ಲಿ ನೆಲಸಮಗೊಳ್ಳುತ್ತಿತ್ತು.
 
ಆ ಕ್ಷಣ ಆನೆಗೆ ತಡೆಯೊಡ್ಡದಿದ್ದರೆ ಮಾಸ್ತಿ ನಮ್ಮ ಕಣ್ಣೆದುರಿಗೆ ಪ್ರಾಣ ಕಳೆದುಕೊಳ್ಳುತ್ತಾನೆಂದು, ಒಂದು ಪಕ್ಷ ನಾವು ಪ್ರತಿಬಂಧ ಒಡ್ಡಿದರೆ ಗುಡಿಸಿಲಿನ ಮೇಲೆ ಅದರ ಸಿಟ್ಟು ತಿರುಗಬಹುದೆಂದು, ಹಾಗಾದಲ್ಲಿ ಒಳಗಿರುವ ಹತ್ತಾರು ಮಂದಿಯ ಜೀವಕ್ಕೆ ಅಪಾಯ ಉಂಟಾಗಬಹುದೆಂದು ಗೊಂದಲಕ್ಕೊಳಗಾದೆವು.
 
ನಮ್ಮ ಅಡಚಣೆಯಿಂದ ಅಲ್ಲೇ ನಿಂತ ಆ ಕಾಡಾನೆ ನಮ್ಮ ಊಹೆಯನ್ನು ನಿಜಗೊಳಿಸುವಂತೆ, ಗುಡಿಸಿಲಿನ ಹುಲ್ಲಿನ ಸೂರಿನ ಮೇಲೆ ಒಂದೆರಡು ಬಾರಿ ಸೊಂಡಿಲನ್ನು ಆಡಿಸಿತು. ಆಗ ಗುಡಿಸಿಲಿನ ಕತೆ ಮುಗಿಯಿತೆಂದೇ ಭಾವಿಸಿ, ಏರಿದ ಧ್ವನಿಯಲ್ಲಿ ಕೂಗು ಹಾಕಿದೆವು.
 
ಒಮ್ಮೆಲೇ ನಮ್ಮತ್ತ ತಿರುಗಿದ ಒಂಟಿಕೊಂಬ ಸೊಂಡಿಲನ್ನು ಮೇಲೆತ್ತಿ ಏನೋ ವಾಸನೆಯನ್ನು ಹಿಡಿಯುತ್ತಾ ನಿಂತಿತು. ಅಲ್ಲಿಗೆ, ರಸ್ತೆಗೆ ಅಡ್ಡಲಾಗಿ ನಿಂತಿದ್ದ ಲಾರಿ ಚಾಲಕನ ಸ್ಥೈರ್ಯವೆಲ್ಲ ಮಾಯವಾಗಿ ಲಾರಿ ಹೊಗೆಯೆಬ್ಬಿಸುತ್ತಾ, ಕೆಮ್ಮುತ್ತಾ ಜಾಗ ಖಾಲಿ ಮಾಡಿತ್ತು. ಮುಂದಕ್ಕೆ ಚಲಿಸಿತು. ಆತನದ್ದೇನೂ ತಪ್ಪಿರಲಿಲ್ಲ. ನಮ್ಮಿಂದ ಕೇವಲ ಇಪ್ಪತ್ತು ಅಡಿ ದೂರದಲ್ಲಿದ್ದ ಆನೆ ತನ್ನ ಬೃಹದಾಕಾರದ ತಲೆಯನ್ನು ಮೇಲೆತ್ತಿ, ಆವೇಶದಿಂದ ಸೊಂಡಿಲನ್ನು ಚಾಚಿದ್ದು ಭಯಾನಕವಾಗಿ ಕಂಡಿತ್ತು.
 
ನಾವು ಮತ್ತೆ ಕಾರನ್ನು ಹಿಂದೆ ಸರಿಸಿ ಅದಕ್ಕೆ ತಡೆಯೊಡ್ಡುವ ಮುನ್ನವೇ, ಅದು ಕಾರಿಗೆ ತಗುಲುವಷ್ಟು ಅಂತರದಲ್ಲಿ ನುಗ್ಗಿ ಲಾರಿ ನಿಲ್ಲಿಸಿದ್ದ ಸ್ಥಳದಲ್ಲೇ ರಸ್ತೆ ದಾಟಿತು. ಕಾಡಾನೆಯ ದೃಷ್ಟಿಯಿಂದ ಹೇಗೋ ಪಾರಾಗಿ, ತನ್ನ ಆನೆಯನ್ನು ನಿಯಂತ್ರಿಸಿಕೊಂಡು ಸುರಕ್ಷಿತವಾಗಿ ಹಿಂದಿರುಗಲು ಮಾಸ್ತಿಗೆ ಸ್ವಲ್ಪ ಸಮಯಾವಕಾಶ ಸಿಗಬಹುದೆಂಬ ಏಕೈಕ ಉದ್ದೇಶದಿಂದ ಈ ಎಲ್ಲಾ ಕಸರತ್ತುಗಳನ್ನು ನಡೆಸಿದ್ದೆವು. 
 
ಆದರೆ ರಸ್ತೆ ದಾಟಿದ ಆನೆ ದಟ್ಟವಾದ ಮುಳ್ಳಿನ ಪೊದೆಗಳನ್ನು ಸೀಳಿಕೊಂಡು ಜಯಪ್ರಕಾಶ ಸಾಗಿದ್ದ ದಿಕ್ಕಿನತ್ತ ಓಡಿತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಚಾಲಕರಿಗೆ ಸುದ್ದಿ ತಲುಪಿಸಿ, ಅವರ ಸಹಾಯ ಪಡೆದು, ಮಾಸ್ತಿಗೆ ನೆರವಾಗಬೇಕೆಂದು ಯೋಚಿಸಿದೆವು. ಆದರೆ ಅವರಾರೂ ಅಲ್ಲಿರಲಿಲ್ಲ. ಆ ಗಂಭೀರ ಸನ್ನಿವೇಶದಲ್ಲಿ ಸಮಯ ವ್ಯರ್ಥಮಾಡುವುದು ಅರ್ಥವಿಲ್ಲವೆಂದು ನಾವು ಎದ್ದಿದ್ದ ದೂಳನ್ನು ಹಿಂಬಾಲಿಸಿದೆವು.
 
ಸ್ವಲ್ಪ ದೂರ ಸಾಗಿ, ಕಾಡಿನ ಜೀಪ್ ರಸ್ತೆ ಹಿಡಿದು ಮಾಸ್ತಿಗಾಗಿ ಹುಡುಕಿದೆವು. ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಜಯಪ್ರಕಾಶ ಗಡಿಬಿಡಿಯಿಂದ ಓಡುತ್ತಿತ್ತು. ನಾವು ಹತ್ತಿರ ಬರುತ್ತಿದ್ದಂತೆ ಮಾಸ್ತಿ ಶ್ರಮವಹಿಸಿ ಜಯಪ್ರಕಾಶನನ್ನು ನಿಲ್ಲುವಂತೆ ಮಾಡಲು ಯಶಸ್ವಿಯಾದ. ಆನೆಯಿಂದ ಇಳಿದುಬಿಡುವಂತೆ ಮಾಸ್ತಿಗೆ ನಾವು ಕೇಳಿಕೊಂಡೆವು.

ಮಾಸ್ತಿ ನಮ್ಮ ಮಾತಿಗೆ ಓಗೊಡಲಿಲ್ಲ. ಬದಲಾಗಿ, ಆನೆಯ ಕಾಲಿಗೆ ಬಿಗಿದಿದ್ದ ಸರಪಳಿಯ ಮತ್ತೊಂದು ತುದಿಯನ್ನು ಮೇಲೆತ್ತಿಕೊಡುವಂತೆ ವಿನಂತಿಸಿದ. ಸರಪಳಿಯನ್ನು ಕೈಗೆತ್ತಿಕೊಳ್ಳುವ ಹೊತ್ತಿಗೆ ಜಯಪ್ರಕಾಶ ಸೊಂಡಿಲನ್ನು ಮಡಚಿ ಹಿಂಭಾಗಕ್ಕೆ ತಿರುಗಿಸಿ, ಗಾಳಿಯಲ್ಲಿ ಏನನ್ನೋ ಗ್ರಹಿಸಿತು.
 
ನಮಗೆ ತಿಳಿದಿದ್ದು ಅದಷ್ಟೆ, ಜಯಪ್ರಕಾಶ ಏಕಾಏಕಿ ಓಡಲಾರಂಭಿಸಿತು. ಆಯತಪ್ಪಿದ್ದ ಮಾಸ್ತಿ ಹೇಗೋ ಅದರ ಬೆನ್ನಿನ ಮೇಲೆ ಉಳಿದುಕೊಳ್ಳಲು ಯಶಸ್ವಿಯಾದ. 
ನಾವು ಹಿಂದಿರುಗಿ ನೋಡಿದೆವು. ಸುಮಾರು ಇನ್ನೂರು ಮೀಟರ್ ದೂರದಲ್ಲಿ ಒಂಟಿಕೊಂಬ ಜೀಪ್ ರಸ್ತೆಯಲ್ಲೇ ಬರುತ್ತಿತ್ತು. ಜಯಪ್ರಕಾಶ ಸಾಗಿದ್ದ ದಿಕ್ಕು ಮತ್ತು ಅದರ ವಾಸನೆ ಆ ಕಾಡಾನೆಗೆ ಬೇಗನೆ ಸಿಗಬಾರದೆಂದು ಕಾರನ್ನು ನೂರು ಮೀಟರ್ ಹಿಂದಕ್ಕೆ ಓಡಿಸಿ ರಸ್ತೆಗೆ ತಡೆಯೊಡ್ಡಿದೆವು.
 
ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಾಡಾನೆಗಳು ಬದಿಗೆ ಸರಿದುಹೋಗಬಹುದು. ಇಲ್ಲಾ ಮೈಮೇಲೆ ಎರಗಿಬರಬಹುದು. ಅಥವ ಏನಾಯಿತೆಂದು ಪರಿಶೀಲಿಸಲು ತುಸುಹೊತ್ತು ನಿಲ್ಲಬಹುದು. ಆದರೆ ಇಲ್ಲಿ ಆದದ್ದೇ ಬೇರೆ. ಅದು ಯಾವ ಲಕ್ಷ್ಯವನ್ನೂ ತೋರದೆ ಕಾರನ್ನು ಬಳಸಿ ಜಯಪ್ರಕಾಶ ಸಾಗಿದ್ದ ದಾರಿಯನ್ನೇ ಹಿಡಿಯಿತು. ಆಗ ಏನು ಮಾಡಬೇಕೆಂದೇ ತೋಚಲಿಲ್ಲ. ಕಾರಿನಿಂದಿಳಿದು ನಾಲ್ಕಾರು ಕಲ್ಲುಗಳನ್ನು ಒಂಟಿಕೊಂಬದತ್ತ ಬೀಸಿ ಅದರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದೆವು. 
 
ಇದು ಖಂಡಿತವಾಗಿಯೂ ಸಭ್ಯ ನಡವಳಿಕೆಯಲ್ಲ. ಆದರೆ, ಹಲವಾರು ಬಾರಿ ಕಾಡಾನೆಗಳು ಸಾಕಿದಾನೆಗಳೊಂದಿಗೆ ಕಾದಾಡಿ ಅವುಗಳನ್ನು ಕೊಂದಿರುವ ಪ್ರಸಂಗಗಳಿವೆ. ಹಾಗೂ ಮಾಸ್ತಿ ನಮ್ಮ ನೆಚ್ಚಿನ ಹುಡುಗನಾಗಿದ್ದ, ಜೊತೆಗೆ ಜಯಪ್ರಕಾಶನನ್ನು ನಾವು ಅನೇಕ ವರ್ಷಗಳಿಂದ ಬಲ್ಲವರಾಗಿದ್ದೆವು. ಹಾಗಾಗಿ ಅವರಿಬ್ಬರೂ ಅಪಾಯದಿಂದ ಪಾರಾಗಬೇಕೆಂಬ ಕಳಕಳಿ ನಮ್ಮ ಈ ವರ್ತನೆಗೆ ಕಾರಣವಾಗಿತ್ತು. ಸಭ್ಯತೆ, ನೈತಿಕತೆಗಳನ್ನು ಚಿಂತಿಸುವ ಸಮಯ ಅದಾಗಿರಲಿಲ್ಲ. 
 
ನಾವು ಬೀಸಿದ ಕಲ್ಲುಗಳು ಅದರ ಬೆನ್ನಿಗೆ ತಗುಲಿತಾದರೂ ಅದರ ಗಮನ ಕೊಂಚವೂ ಬದಲಾಗಲಿಲ್ಲ. ನಮ್ಮ ಹಾಜರಿಯನ್ನು, ಕೂಗನ್ನು ಅಲಕ್ಷಿಸಿದ ಒಂಟಿಕೊಂಬ ಜಯಪ್ರಕಾಶನನ್ನು ಬೆನ್ನು ಹತ್ತಿತ್ತು.
 
ಮತ್ತೆ ಏನಾದರೂ ಮಾಡಲು ಸಾಧ್ಯವೇ ಎಂದು ಯೋಚಿಸುತ್ತಾ ವೇಗವಾಗಿ ಜಯಪ್ರಕಾಶನೆಡೆಗೆ ಸಾಗಿದೆವು. ಮಾಸ್ತಿಯನ್ನು ಎದುರಾದಾಗ, ಒಂಟಿಕೊಂಬ ಇನ್ನೂ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ನಮ್ಮನ್ನು ಕಂಡಾಕ್ಷಣ ಆನೆಯನ್ನು ನಿಯಂತ್ರಿಸಲು ಮಾಸ್ತಿ ಮುಂದಾದ. ಏನೋ ಆಜ್ಞೆ ನೀಡಿ, ಅಲ್ಲಿದ್ದ ಮರವೊಂದನ್ನು ತಳ್ಳುವಂತೆ ಸೂಚಿಸಿದ. ಬಹುಶಃ ಅದು ಜಯಪ್ರಕಾಶನ ಮನಸ್ಸನ್ನು ಬೇರೆಡೆಗೆ ತಿರುಗಿಸಿ, ಅದನ್ನು ಶಾಂತಗೊಳಿಸುವ ತಂತ್ರವಿದ್ದಿರಬಹುದು. ಆಗ ಮಾಸ್ತಿಯ ಸ್ಥೈರ್ಯ ಇನ್ನಷ್ಟು ಕುಗ್ಗಿದ್ದಂತೆ ಕಂಡಿತು.

ಆದರೆ ಜಯಪ್ರಕಾಶನ ಮೇಲಿದ್ದ ಅವನ ವಿಶ್ವಾಸ ಹಾಗೂ ಕಳಕಳಿಗೆ ಕಿಂಚಿತ್ತೂ ಚ್ಯುತಿ ಬಂದಿರಲಿಲ್ಲ. ಆನೆಯ ಕಾಲಿಗೆ ಬಿಗಿದಿದ್ದ ಸರಪಳಿಯನ್ನು ಮೇಲೆಳೆದು ಕೊಡುವಂತೆ ಮತ್ತೆ ಮನವಿ ಮಾಡಿದ. ಸರಪಳಿಯನ್ನು ಎತ್ತಲು ನಾವಿಬ್ಬರೂ ಸೇರಿ ಪ್ರಯತ್ನಿಸಿದೆವು. ಅದನ್ನು ಅಲುಗಿಸಲು ಕೂಡ ನಮಗೆ ಸಾಧ್ಯವಾಗಲಿಲ್ಲ. ಜಯಪ್ರಕಾಶನ ಹಿಂದಿನ ಕಾಲಿನ ಬೆರಳೊಂದು ಸರಪಳಿಯ ಕೊಂಡಿಯನ್ನು ಮೆಟ್ಟಿಕೊಂಡಿತ್ತು, ಅಷ್ಟೆ. ಅದನ್ನು ಗಮನಿಸಿದ ಮಾಸ್ತಿ ಕಾಲನ್ನು ಸರಿಸುವಂತೆ ಆನೆಗೆ ಸನ್ನೆ ಮಾಡಿದ.
 
ನಂತರ ಅತ್ಯಂತ ಪ್ರಯಾಸದಿಂದ ಆ ಉಕ್ಕಿನ ಸರಪಳಿಯನ್ನು ಆನೆಯ ಕುತ್ತಿಗೆಯವರೆಗೆ ಎತ್ತಿ ಹಿಡಿದೆವು, ಮಾಸ್ತಿ ಮೇಲಕ್ಕೆಳೆದುಕೊಂಡ. ಈ ಸರಪಳಿಯೇನಾದರೂ ಜಯಪ್ರಕಾಶನ ಕಾಲಿಗೆ ತೊಡಕಾಗದಿದ್ದರೆ ಆ ಕಾಡಾನೆಗೆ ತಕ್ಕ ಪಾಠ ಕಲಿಸುತ್ತಿದ್ದುದಾಗಿ ಹೇಳಿದ. ಆದರೆ ಬೆಚ್ಚಿದ್ದ ಮಾಸ್ತಿಯ ಮಾತುಗಳಿಗಿಂತ ಭಾವಾಭಿನಯವೇ ಮುಂದಾಗಿತ್ತು.
 
ಮಾಸ್ತಿಗೆ ಅವನ ಆನೆಯಿಂದಿಳಿದು ಬಂದುಬಿಡುವಂತೆ ಮತ್ತೊಮ್ಮೆ ಒತ್ತಾಯಿಸಿದೆವು. ಆದರೆ ಆತ ಸರಪಳಿಯನ್ನೆತ್ತಿ ತನ್ನ ಆನೆಯ ಕುತ್ತಿಗೆಯ ಮೇಲಿಟ್ಟುಕೊಂಡ ಕೂಡಲೇ ಅವನಿಗೇ ಆನೆಯ ಬಲ ಬಂದಂತೆ ಕಂಡಿತು. ಇದ್ದಕ್ಕಿದ್ದಂತೆ, ‘ಈ ಕಾಡಿನಲ್ಲಿ ನನ್ನ ಆನೆಗೆ ಸವಾಲುಹಾಕುವ ಜೀವಿಯೇ ಹುಟ್ಟಿಲ್ಲ’ ಎಂದು ಅವನ ಭಾಷೆಯಲ್ಲಿ ಜೋರಾಗಿ ಹೇಳಿದ.
ಆ ಮಾತುಗಳನ್ನು ಅವನು ನಮ್ಮನ್ನು ಉದ್ದೇಶಿಸಿ ಹೇಳಿದನೋ, ಅಥವ ಕುಂದಿದ ತನ್ನ ಆತ್ಮವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳಲೋ, ಅಥವ ಆನೆಗೆ ಭರವಸೆ ನೀಡಲು ಹೇಳಿದನೋ ನಮಗೆ ಗೊತ್ತಾಗಲಿಲ್ಲ.
 
ಇಷ್ಟರಲ್ಲಿ ಜಯಪ್ರಕಾಶನಿಗೆ ಕಾಡಾನೆ ವಾಸನೆ ಸಿಕ್ಕಿ, ಮಾಸ್ತಿ ನೀಡುತ್ತಿದ್ದ ಆಜ್ಞೆಗಳನ್ನೆಲ್ಲಾ ತಿರಸ್ಕರಿಸಿ ಮತ್ತೆ ಓಡಲಾರಂಭಿಸಿತು. ನೇರವಾಗಿ ತನ್ನ ಮುಂದಿದ್ದ ದಟ್ಟವಾದ ಬಿದಿರಿನ ಮೆಳೆಯನ್ನು ನುಗ್ಗಿ, ಬೊಂಬುಗಳು ಮುರಿಯುತ್ತಿದ್ದ ಭಯಂಕರ ಶಬ್ದದೊಂದಿಗೆ ಅದು ಕಣ್ಮರೆಯಾಯಿತು. ಆನೆ–ಬಿದಿರುಗಳ ಮಧ್ಯೆ ಸಿಕ್ಕಿಕೊಂಡ ಮಾಸ್ತಿ ಬದುಕುಳಿಯುವುದು ಇನ್ನು ಅಸಾಧ್ಯವೆಂದೆನಿಸಿತು. ಈ ಭಯಾನಕ ಸನ್ನಿವೇಶವನ್ನು ನೋಡಲಾರದೆ ನಾವು ಅಸಹಾಯಕರಾಗಿ ಕ್ಷಣ ಕಾಲ ಕಣ್ಮುಚ್ಚಿದ್ದೆವು. 
 
ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಧಾವಿಸಿ ಬಂದ ಒಂಟಿಕೊಂಬ ನಮ್ಮ ಕಾರನ್ನು ನೋಡಿ ಒಂದು ಕ್ಷಣ ನಿಂತಿತು. ಮೇಲೆತ್ತಿದ್ದ ಅದರ ತಲೆಯ ಇಕ್ಕೆಲಗಳಲ್ಲಿ ಟೆಂಪೊರಲ್ ಗ್ರಂಥಿಗಳು ಉಬ್ಬಿ, ಹರಿಯುತ್ತಿದ್ದ ದ್ರವ್ಯ ಆಗಷ್ಟೇ ನಮಗೆ ಸ್ಪಷ್ಟವಾಗಿ ಕಂಡಿತು. ಅದು ‘ಮಸ್ತಿ’ಯಲ್ಲಿತ್ತು. ಕೆಲವು ದೀರ್ಘ ಕ್ಷಣಗಳ ಬಳಿಕ ಒಂಟಿಕೊಂಬ ಜಯಪ್ರಕಾಶನ ವಾಸನೆ ಹಿಡಿದು ಅದೇ ಬಿದಿರುಮೆಳೆಗೆ ನುಗ್ಗಿ ಮಾಯವಾಯಿತು.
 
ಅಲ್ಲೇ ಗರಬಡಿದಂತೆ ನಿಂತಿದ್ದ ನಾವು ಮಾಸ್ತಿಯ ಉದ್ಧಟತನಕ್ಕೆ ಬೇಸರಿಸಿದ್ದು ನಿಜ. ನಾವು ನೀಡಿದ್ದ ಸಲಹೆಗಳನ್ನೆಲ್ಲ ಆತ ತಿರಸ್ಕರಿಸಿದ್ದ. ಆದರೆ ಗತಿಸಿದ್ದನ್ನೆಲ್ಲ ಶವಪರೀಕ್ಷೆಗೊಳಪಡಿಸಿ ವಿಶ್ಲೇಷಿಸಿ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲವೆಂದು ನಮಗೆ ತಿಳಿದಿತ್ತು.
 
ಮಾಸ್ತಿಯ ಮೃತದೇಹವನ್ನು ಪತ್ತೆಹಚ್ಚಲು ಸಿಬ್ಬಂದಿಯನ್ನು ಕರೆತರಬೇಕೆ? ಅಥವ ನಾವೇ ಹುಡುಕಾಟ ನಡೆಸಬೇಕೆ? ಎಂದು ತೀರ್ಮಾನಿಸಲು ಸಾಧ್ಯವಾಗಲಿಲ್ಲ. ವಿಷಾದದಿಂದ ಏನೂ ಮಾಡಲು ತಿಳಿಯದೆ ಕುಳಿತೇ ಇದ್ದೆವು. 
 
ಸುಮಾರು ಇಪ್ಪತ್ತು ನಿಮಿಷಗಳ ನಂತರ ಪವಾಡ ಜರುಗಿದಂತೆ ಬಿದಿರಿನ ಮೆಳೆಯ ಜಾಡಿನಿಂದ ಮಾಸ್ತಿ ಪ್ರತ್ಯಕ್ಷನಾದ. ಅವನ ಮೈಮೇಲೆ ಅನೇಕ ತರಚಿದ ಗಾಯಗಳಿದ್ದವು. ಅವನ ನಾಲಿಗೆ ಮಾತನಾಡುವುದನ್ನೂ ಮರೆತಿತ್ತು. 
 
ಮಾಸ್ತಿಯನ್ನು ಕರೆದು ಕಾಡಿನಿಂದ ಹೊರಬಂದಾಗ ಸೊಂಟದಲ್ಲಿ ಪುಟ್ಟಮಗುವನ್ನು ಹಿಡಿದು ಆತಂಕದಿಂದ ಕಾಯುತ್ತಿದ್ದ ಮಾಸ್ತಿಯ ಹೆಂಡತಿ ಅಳುತ್ತಾ ಕಾರಿನ ಬಳಿ ಓಡಿಬಂದಳು.
 
ಸ್ವಲ್ಪ ಸಮಯದ ನಂತರ, ಮತ್ತೊಬ್ಬ ಮಾವುತ ಅಲ್ಲಿ ಕಾಣಿಸಿಕೊಂಡ. ತಕ್ಷಣ ಮಾಸ್ತಿ ಕೂಗಾಡಲಾರಂಭಿಸಿದ. ಉಕ್ಕಿಬರುತ್ತಿದ್ದ ದುಃಖದಲ್ಲಿ ಅವನ  ಮಾತು ಸ್ಪಷ್ಟವಾಗಿರಲಿಲ್ಲ. ಒಟ್ಟಾರೆ ನಾವು ಗ್ರಹಿಸಿದ್ದೇನೆಂದರೆ, ‘ಮತ್ತೊಬ್ಬ ಮಾವುತ ತನ್ನನ್ನು ಕೊಲ್ಲಲು ತನ್ನ ಆನೆಗೆ ಮಾಟ ಮಾಡಿಸಿದ್ದಾನೆ’ ಎಂದು ಹೇಳುತ್ತಿದ್ದ. ಇಲ್ಲದಿದ್ದರೆ ತನ್ನ ಆನೆ ‘ಒಂಟಿಕೊಂಬ’ಕ್ಕೆ ಹೆದರಿ ಓಡುವುದು ಅಸಾಧ್ಯವೆಂದು ಆತ ಖಚಿತವಾಗಿ ನಂಬಿದ್ದ.
 
ಎರಡು ದಿನಗಳ ನಂತರ ಜಯಪ್ರಕಾಶ ಕಾಡಿನ ಯಾವುದೋ ಮೂಲೆಯಲ್ಲಿ ಪತ್ತೆಯಾಯಿತು. ಮುಂದಿನ ಹದಿನೈದು ದಿನಗಳಲ್ಲಿ ಅದರ ಗಾಯಗಳೆಲ್ಲಾ ಮಾಯ್ದು ಮೊದಲಿನಂತಾದ.
 
ನಾವು ಸಣ್ಣವರಿದ್ದಾಗ ‘ಒಂಟಿ ಸಲಗ’ಗಳ ಬಗ್ಗೆ ಅನೇಕಾನೇಕ ಕಥೆಗಳನ್ನು ಕೇಳಿದ್ದೆವು. ಮನುಷ್ಯರನ್ನು ಕಂಡಾಕ್ಷಣ ಬೆನ್ನಟ್ಟಿ ಬಂದು ಹಿಡಿದು, ಕಾಲಿನಲ್ಲಿ ಹೊಸಕಿ ಜೀವ ತೆಗೆಯುವುದೇ ಅವುಗಳ ಕೆಲಸವೆಂದು, ಆಕಸ್ಮಿಕವಾಗಿ ‘ಒಂಟಿ ಸಲಗ’ ಎದುರಾದರೆ ತೊಟ್ಟ ಅಂಗಿಯನ್ನು ಕಳಚಿ ಮರದ ರೆಂಬೆಗೆ ನೇತು ಹಾಕಿ, ಅಂಕುಡೊಂಕಾಗಿ ಓಡುತ್ತಿರಬೇಕೆಂದು ಕೂಡ ಕೇಳಿದ್ದೆವು. ಆಗ ಖೋ–ಖೋ ಆಟದಲ್ಲಿ ಪರಿಣತಿ ಸಾಧಿಸಿದರೆ ‘ಒಂಟಿ ಸಲಗ’ದ ಆಕ್ರಮಣದಿಂದ ಸುಲಭವಾಗಿ ಪಾರಾಗಬಹುದೆಂದು ನಾವು ಭಾವಿಸಿದ್ದೆವು. 
 
ಅದೃಷ್ಟವಶಾತ್, ನಮ್ಮ ಕಾಡಿನ ದಿನಗಳ ಆರಂಭದಲ್ಲೇ, ಇಂದಿನ ಅಗ್ರಗಣ್ಯ ಆನೆ ವಿಜ್ಞಾನಿ ಅಜಯ್ ದೇಸಾಯಿ ಅವರ ಪರಿಚಯವಾಗಿ ಆವರೆಗಿನ ನಮ್ಮೆಲ್ಲಾ ಜ್ಞಾನ, ತಿಳಿವಳಿಕೆಗಳಿಗೆ ತೆರೆಬಿದ್ದಿತು. ಕಾಡಾನೆಗಳು ತೀರಾ ಸಮೀಪದಲ್ಲಿ ಒಮ್ಮೆಗೆ ಎದುರಾದಾಗ, ಮೆದುಳಿನ ಆಜ್ಞೆಗಳನ್ನು ಉಳಿದ ಅಂಗಾಗಾಂಗಳು ಧಿಕ್ಕರಿಸಿ ಕಾಲುಗಳು ರಬ್ಬರ್‌ಗಳಂತಾಗಿ, ಖೋ–ಖೋ ಆಟವನ್ನು ಮರೆತು ಶರಾಪು–ಕರೆಂಟ್ ಆಟದಲ್ಲಿ ಶರಾಪ್ ಕೇಳಿದಂತೆ ಶರಣಾಗುವುದೆಂದು ಅನುಭವದಿಂದ ಬಹುಬೇಗ ಅರಿತೆವು.
ಅಜಯ್‌ರೊಂದಿಗೆ ಕಾಡಿನಲ್ಲಿ ಆನೆಗಳನ್ನು ಹಿಂಬಾಲಿಸುತ್ತಾ, ವಿಜ್ಞಾನದ ಹಿನ್ನೆಲೆಯಲ್ಲಿ ಅವುಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದಾಗ, ಒಂದು ಅದ್ಭುತಲೋಕವೇ ಅನಾವರಣಗೊಂಡಿತು.
 
ಆನೆಗಳ ಗುಂಪೆಂದರೆ, ರಕ್ತಸಂಬಂಧಿ ಹೆಣ್ಣಾನೆಗಳ ಒಂದು ಒಟ್ಟು ಕುಟುಂಬ. ಇಲ್ಲಿ ಜನಿಸುವ ಹೆಣ್ಣು ಮತ್ತು ಗಂಡು ಮರಿಗಳ ಬದುಕು, ಬೆಳವಣಿಗೆ ಸಣ್ಣ ವಯಸ್ಸಿನಿಂದಲೇ ವಿಭಿನ್ನವಾಗಿರುತ್ತವೆ. ಹೆಣ್ಣು ಮರಿಗಳು ಚಿಕ್ಕ ವಯಸ್ಸಿನಲ್ಲೇ ತಾಯಿಗೆ ನೆರವಾಗುತ್ತಾ ಜವಾಬ್ದಾರಿಯಿಂದ ಬೆಳೆಯಲಾರಂಭಿಸಿದರೆ, ಗಂಡು ಮರಿಗಳು ಕುಟುಂಬದ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಾ, ಹೊಣೆಗಾರಿಕೆಯಿಲ್ಲದೆ ಕಾಲ ಕಳೆಯುತ್ತವೆ.
 
ಸದಾ ಅಮ್ಮಂದಿರು ಹಾಗು ಅಕ್ಕತಂಗಿಯರಿಗೆ ತೊಂದರೆ ಕೊಡುತ್ತಾ, ಆಟವಾಡುತ್ತಾ, ತನ್ನ ವಯಸ್ಸಿನವರೊಂದಿಗೆ ಗುದ್ದಾಡುತ್ತಾ ಬೆಳೆಯುತ್ತವೆ. ಆದರೆ ಅವುಗಳ ಈ ನಡವಳಿಕೆ ಮುಂದೊಂದು ದಿನ ಅವುಗಳ ಬದುಕಿಗೆ ಬಂಡವಾಳವಾಗುತ್ತದೆಂದರೆ ಅಚ್ಚರಿಯಾಗಬಹುದು.
 
ಬೆಳೆಯುತ್ತಲೇ ತನ್ನ ದೈಹಿಕ ಸಾಮರ್ಥ್ಯವನ್ನು ಅರಿಯುತ್ತಾ, ಇತರರಿಗೆ ತಿಳಿಸುತ್ತಾ, ತನ್ನ ಹಿರಿಮೆಯನ್ನು ಪ್ರತಿಷ್ಟಾಪಿಸಲು ಸಹಪಾಠಿಗಳೊಂದಿಗಿನ ಈ ಸೆಣೆಸಾಟಗಳು ಸಹಾಯ ಮಾಡುತ್ತವೆ.
 
ಗಂಡಾನೆಗಳು ಹದಿವಯಸ್ಸು ದಾಟುವ ಹೊತ್ತಿಗೆ ಪರಸ್ಪರ ಸಾಮರ್ಥ್ಯಗಳೇನೆಂದು ತಿಳಿದಿರುವುದರಿಂದ ತಮ್ಮ ಪ್ರೌಢಾವಸ್ಥೆಯಲ್ಲಿ ಮತ್ತೆ ಮತ್ತೆ ಕಾದಾಡುವ ಪ್ರಮೇಯ ಉದ್ಭವಿಸುವುದಿಲ್ಲ. ದೀರ್ಘಕಾಲ ಬದುಕುವ ಜೀವಿಗಳನ್ನು ಪೋಷಿಸಲು ಪ್ರಕೃತಿ ಅಧಿಕ ಸಂಪನ್ಮೂಲಗಳನ್ನು ವ್ಯಯಿಸಿರುತ್ತದೆ. ಹಾಗಾಗಿ, ಜೀವಕ್ಕೆ ಅಪಾಯ ತರುವ ಕಾದಾಟಗಳನ್ನು ಕಡಿಮೆಮಾಡಲು ಈ ವ್ಯವಸ್ಥೆ ವಿನ್ಯಾಸಗೊಂಡಿದೆ.
 
ಸುಮಾರು ಹತ್ತು ವರ್ಷ ತುಂಬಿದ ಬಳಿಕ ಗಂಡು ಆನೆ ಮರಿಗಳು ಗುಂಪಿನಿಂದ ಆಗ್ಗಾಗೆ ಹೊರಬಂದು ಅಡ್ಡಾಡಲು ಪ್ರಾರಂಭಿಸುತ್ತವೆ. ಆಗ ಸುತ್ತಮುತ್ತಲಿನ ಗುಂಪುಗಳ ಗಂಡಾನೆಮರಿಗಳೆಲ್ಲರ ಪರಿಚಯವಾಗಿರುತ್ತದೆ.
 
ನಂತರ ಈ ಗಂಡಾನೆಮರಿಗಳೆಲ್ಲ ಸೇರಿಕೊಂಡು ತಮ್ಮದೇ ಒಂದು ಗುಂಪು ಮಾಡಿಕೊಂಡು, ಪುಂಡು ಹುಡುಗರಂತೆ ಕಾಲಕಳೆಯಲಾರಂಭಿಸುತ್ತವೆ. ಆದರೆ, ಸಂಕಷ್ಟದ ಸನ್ನಿವೇಶಗಳು ಎದುರಾದಾಗ ಮಾತ್ರ ಕುಟುಂಬದ ರಕ್ಷಣೆಯಿಲ್ಲದಿರುವ ಅರಿವಾಗಿ ಗಾಬರಿಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ.
 
ಆರಂಭದ ದಿನಗಳಲ್ಲಿ ಕಾಲ್ನಡಿಗೆಯಲ್ಲೇ ಕಾಡು ಸುತ್ತುವಾಗ ಈ ಪಡ್ಡೆ ಆನೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಚೆನ್ನ, ಅಜಯ್‌ರಿಂದ ಕಲಿತಿದ್ದೆವು. ಏಕೆಂದರೆ ಆ ಅವಧಿಯಲ್ಲಿ ಅವುಗಳ ದೇಹ ಬೆಳೆದಿದ್ದರೂ ಬುದ್ಧಿ ಬೆಳೆದಿರುವುದಿಲ್ಲ. ಗಾಬರಿಯಾದಾಗ ತಾವೇನು ಮಾಡುತ್ತಿದ್ದೇವೆಂಬ ಅರಿವು ಅವುಗಳಿಗೆ ಇರುವುದಿಲ್ಲ, ಹಾಗಾಗಿ ಅವುಗಳ ಬಗ್ಗೆ ಸದಾ ಎಚ್ಚರದಿಂದಿರುವುದು ಕ್ಷೇಮವೆಂದು ಅವರು ಹೇಳುತ್ತಿದ್ದರು. 
 
ಹೊಸದಾಗಿ ಸಿಕ್ಕ ಸ್ವಾತಂತ್ರ್ಯದ ಸಂಭ್ರಮ, ಆತಂಕ, ಗಾಬರಿಗಳ ಈ ಹಂತದಲ್ಲಿ, ಸಾಮಾನ್ಯವಾಗಿ ಈ ಹದಿವಯಸ್ಸಿನ ಆನೆಗಳು ತಂದೆಗೆ ಸಮಾನವಾದ ಅನುಭವಿ ಗಂಡಾನೆಗಳ ಸಹವಾಸಕ್ಕಾಗಿ ಹಾತೊರೆಯುತ್ತವೆ. ಕ್ರಮೇಣ ದೊಡ್ಡ ಗಂಡಾನೆಯೊಂದರ ಸಂಪರ್ಕ ಸಾಧಿಸಿ ಸ್ವಲ್ಪ ದೂರದಿಂದಲೇ ಅದನ್ನು ಹಿಂಬಾಲಿಸಲು ಆರಂಭಿಸುತ್ತವೆ. ಆದರೆ ಪ್ರೌಢ ಗಂಡಾನೆಗಳು ಸಹಜವಾಗಿ ಒಂಟಿಯಾಗಿರಲು ಬಯಸುತ್ತವೆ. ಅವು ಆರಂಭದಲ್ಲಿ ತಮ್ಮ ಅಸಹನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ. ನಂತರ ನಿಧಾನವಾಗಿ, ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳದಿದ್ದರೂ ಇವುಗಳ ಇರುವಿಕೆಯನ್ನು ಸಹಿಸಿಕೊಳ್ಳಲಾರಂಭಿಸುತ್ತವೆ.
 
ಇದರೊಂದಿಗೆ ಈ ಹದಿವಯಸ್ಸಿನ ಆನೆಗಳ ಬದುಕಿನಲ್ಲಿ ಮತ್ತೊಂದು ಪ್ರಮುಖ ಘಟ್ಟ ಶುರುವಾಗುತ್ತದೆ. ಇಲ್ಲಿಂದಾಚೆಗೆ ದೊಡ್ಡ ಗಂಡಾನೆಯ ಗೃಹವಲಯದಲ್ಲಿ ಇವುಗಳ ಸಂಚಾರ, ಬದುಕು ಪ್ರಾರಂಭ. ವರ್ಷದಲ್ಲಿ ಸುಮಾರು ಸಾವಿರದೈನೂರು ಚದರ ಕಿಲೋಮೀಟರ್ ಅಲೆಯುವ ಈ ಗಂಡಾನೆಗಳಿಂದ ಇವು ಕಲಿಯುವ ಬದುಕಿನ ಪಾಠಗಳು ಅಮೂಲ್ಯ.
 
ಆ ವಲಯದಲ್ಲಿರುವ ಹೆಣ್ಣಾನೆಗಳ ವಿವರ, ಋತುಮಾನಗಳಿಗನುಸಾರವಾಗಿ ಅಲ್ಲಿ ದಕ್ಕುವ ಆಹಾರ, ಬರದಲ್ಲೂ ಬತ್ತದ ನೀರಿನ ಮೂಲಗಳು, ಹೀಗೆ ಎಷ್ಟೋ ಮಾಹಿತಿಗಳನ್ನು ಹದಿವಯಸ್ಸಿನ ಆನೆಗಳು ಗ್ರಹಿಸಿಕೊಳ್ಳುತ್ತವೆ. ಇದಲ್ಲದೆ, ಎಷ್ಟೋ ಬಾರಿ ಬೇರಾವ ಆನೆಗೂ ಎಟುಕದಷ್ಟು ಎತ್ತರವಿರುವ ಬಿದಿರು ಅಥವ ಬಳ್ಳಿಗಳನ್ನು ಎಳೆದು ಬೀಳಿಸುವ ಈ ದೊಡ್ಡ ಆನೆಗಳು ತಿಂದು ಬಿಟ್ಟದ್ದು ಕೂಡ ಚಿಕ್ಕ ಆನೆಗಳಿಗೆ ಸಾಕಾಗುವಷ್ಟಿರುತ್ತದೆ.
 
ನಿಧಾನವಾಗಿ ಆ ದೊಡ್ಡ ಗಂಡಾನೆಯ ಗುಣ ಮತ್ತು ಅವಗುಣಗಳನ್ನು ಕೂಡ ಅವು ಅನುಕರಿಸಲು ಆರಂಭಿಸುತ್ತವೆ. ಹದಿವಯಸ್ಸಿನ ಹುಡುಗರು ತಮ್ಮ ನೆಚ್ಚಿನ ಹೀರೋಗಳನ್ನು ಅನುಕರಿಸುವಂತೆ. ಆದರೆ, ಆ ಗುರುವಿಗೆ ಹೊಲಗದ್ದೆಗಳಿಗೆ ನುಗ್ಗುವ ಪರಿಪಾಠವಿದ್ದರೆ, ಈ ಎಳೆಯ ಪ್ರಾಯದ ಗಂಡಾನೆಗಳು ಅದನ್ನೂ ಕೂಡ ಬಹಳ ಬೇಗ ಕಲಿತು ಅಳವಡಿಸಿಕೊಳ್ಳುತ್ತವೆ.
 
ಹೀಗೆ ಬೆಳೆದ ಗಂಡಾನೆಮರಿಗಳು ಕ್ರಮೇಣ ತಮ್ಮದೇ ಆದ ಗೃಹವಲಯವನ್ನು ಸ್ಥಾಪಿಸಿಕೊಂಡು ಪ್ರೌಢಾವಸ್ಥೆಯನ್ನು ತಲುಪುವ ವೇಳೆಗೆ ಒಂಟಿಯಾಗಿ ‘ಒಂಟಿ ಸಲಗ’ವಾಗುತ್ತವೆ.
 
ಪ್ರೌಢ ಗಂಡಾನೆಗಳು ತಮ್ಮ ದೈಹಿಕ ಸಾಮರ್ಥ್ಯದ ಉಚ್ಛ್ರಾಯ ಘಟ್ಟ ತಲುಪಿದಾಗ ಬೆದೆಗೆ ಸಿದ್ಧಗೊಳ್ಳುತ್ತವೆ. ಈ ಅವಸ್ಥೆಗೆ ‘ಮಸ್ತ್’ ಎನ್ನುತ್ತಾರೆ. ಆ ಸಮಯದಲ್ಲಾಗುವ ಹಾರ್ಮೋನ್‌ಗಳ ವ್ಯತ್ಯಾಸದಿಂದ ಆನೆಯ ವರ್ತನೆಯಲ್ಲಿ ತೀವ್ರವಾದ ಬದಲಾವಣೆಗಳಾಗುತ್ತವೆ. ಮುಂದಿನ ಮೂರು ನಾಲ್ಕು ತಿಂಗಳುಗಳ ಕಾಲ ಏನಿದ್ದರೂ, ಕೂಡಲು ಅರ್ಹವಿರುವ ಹೆಣ್ಣಾನೆಗಳನ್ನು ಹುಡುಕುತ್ತಾ ಕಾಡು ಸುತ್ತುವುದೇ ಅವುಗಳ ಕೆಲಸ.
 
ಈ ಸಮಯದಲ್ಲಿ ಹೆಚ್ಚುಕಡಿಮೆ ತನ್ನ ಇಕ್ಕೆಲಗಳಲ್ಲಿ ಎರಡು–ಮೂರು ಕಿಲೋಮೀಟರ್‌ಗಳಷ್ಟು ಪ್ರದೇಶವನ್ನೆಲ್ಲ ವಾಸನೆಯ ಮೂಲಕ ಸೋಸುತ್ತಾ ಸಾಗುತ್ತವೆ. ಆಗ ಗ್ರಹಚಾರ ಕೆಟ್ಟು ಅಡ್ಡಬರುವ ಗಂಡಾನೆಗಳಿಗೆ ಏಟು ಬೀಳುವುದು ಖಚಿತ. ಹಾಗಾಗಿ, ‘ಮಸ್ತಿ’ನಲ್ಲಿರುವ ಆನೆಯ ವಾಸನೆ ಸಿಕ್ಕಿದರೆ ಉಳಿದ ಗಂಡಾನೆಗಳು ಬೇರೆ ದಾರಿ ಹಿಡಿದು ಜಾಗ ಖಾಲಿ ಮಾಡುತ್ತವೆ.
 
‘ಮಸ್ತಿ’ನಲ್ಲಿರುವ ಆನೆ ತಲೆ ಎತ್ತಿ ನಡೆದಾಗ ಅದಕ್ಕೆ ಅಡ್ಡಬರಲು ಬೇರಾವ ಆನೆಗೂ ಧೈರ್ಯ ಸಾಕಾಗುವುದಿಲ್ಲ. ಆ ಆನೆ ತನಗಿಂತ ಕಿರಿಯದಾಗಿದ್ದರೂ ಕೂಡ ಸೆಣಸುವ ಧೈರ್ಯ ಮಾಡುವುದಿಲ್ಲ. ಇಲ್ಲಿ ಪ್ರತಿಷ್ಟೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಸಾವು ಬದುಕಿನ ಪ್ರಶ್ನೆ.
 
ಇದೇ ಕಾರಣದಿಂದ ಜಯಪ್ರಕಾಶ ಆನೆ ಅಂದು ದಿಕ್ಕೆಟ್ಟು ಓಡಿತ್ತು. ನಮಗೆ ಸಣ್ಣ ವಯಸ್ಸಿನಲ್ಲೇ ಅಜಯ್ ದೇಸಾಯಿಯವರ ಪರಿಚಯವಾಗಿಲ್ಲದಿದ್ದರೆ, ನಾವು ಕೂಡ ಮಾಸ್ತಿಯಂತೆಯೇ ಯೋಚಿಸಿ, ನಿಮಗೆ ‘ಒಂಟಿ ಸಲಗ’ದೊಂದಿಗೆ ಖೋ ಖೋ ಆಡಿ ಬದುಕುಳಿದ ಕಥೆ ಹೇಳುತ್ತಿದ್ದೆವೇನೋ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT