ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಸ್ತಾ ಇದೆ ಪೊರಕೆ ಅಲೆ...

ಅಕ್ಷರ ಗಾತ್ರ

ತಲೆಯ ಮೇಲೆ ಗಾಂಧಿ ಟೋಪಿ ಹಾಕಿಕೊಂಡು ಕೈಯಲ್ಲಿ ಪೊರಕೆ ಹಿಡಿದುಕೊಂಡು ಪೆಕರ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುತ್ತಿದ್ದಂತೆಯೇ ಎಲ್ಲರಿಗೂ ಆಶ್ಚರ್ಯ.

‘ಇದೇನಯ್ಯಾ, ಸಡನ್ನಾಗಿ ಗಾಂಧಿಟೋಪಿ ಮಾತ್ರ ಹಾಕಿಕೊಂಡು ಪೊರಕೆ ಹಿಡಿದುಕೊಂಡು ಹೊರಟಿದ್ದೀಯಲ್ಲಾ ಮತ್ತೇನಾಯ್ತು?’ ಎಂದು ಸ್ನೇಹಿತರು ಪೆಕರನನ್ನು ಕುತೂಹಲದಿಂದ ಪ್ರಶ್ನಿಸಿದರು.

‘ದೇಶದಲ್ಲಿ ಭ್ರಷ್ಟಾಚಾರ ಕುಣಿದು ಕುಪ್ಪಳಿಸುತ್ತಾ ಇದೆ. ಅದನ್ನು ಗುಡಿಸಿ ಹಾಕೋಣ ಅಂತ ಹೊರಟಿದ್ದೀನಿ, ಎಲ್ಲಿಂದ ಆರಂಭಿಸಬೇಕು, ಎಲ್ಲಿ ಮುಗಿಸಬೇಕು ಅನ್ನೋದು ಗೊತ್ತಾಗ್ತಾ ಇಲ್ಲಾ’ ಎಂದು ಪೆಕರ ಸಾವಧಾನದಿಂದ ತನ್ನ ಉದ್ದೇಶವನ್ನು ವಿವರಿಸಿದ.

‘ಓಹೋ, ಹಾಗೋ ಸಮಾಚಾರ?! ಗಾಂಧಿಟೋಪಿ ನೋಡಿದ ಕೂಡಲೇ ನಮ್ಮ ಡಾಜಿಪ ಅವರು ಹೇಳಿದ ಮಾತು ನೆನಪಾಯ್ತು. ಫಲಾನುಭವಿಗಳು ಸ್ವಲ್ಪ ಟೋಪಿ ಹಾಕೋದನ್ನು ಕಲ್ತುಕೊಳ್ಳಿ ಎಂದು ಅವರು ಹಿಂದೆ ಅಪ್ಪಣೆ ಕೊಡಿಸಿದ್ರಲ್ಲ, ಅದನ್ನು ನೀವು ಪಾಲನೆ ಮಾಡೋದಕ್ಕೆ ಹೊರಟರೇನೋ ಅಂದ್ಕೊಂಡ್ವಿ’ ಎಂದು ಸ್ನೇಹಿತರು ಕುಟುಕಿದರು.

‘ಅಂದ್ಕೊಳ್ದೆ ಏನ್ಮಾಡ್ತೀರಾ? ಗಾಂಧಿಟೋಪಿಗೆ ಇದ್ದ ಮರ್ಯಾದೇನಲ್ಲಾ ಇದೇ ತರಾ ಹೇಳಿಹೇಳಿ ಕಳೆದಿದ್ದೀರಾ, ಆದ್ರೆ ಈಗೀಗ ಗಾಂಧೀಟೋಪಿಗೆ ಬೆಲೆ ಸಿಕ್ತಾ ಇದೆ, ಮರ್ಯಾದೆನೂ ಸಿಕ್ತಾ ಇದೆ ಅನ್ನೋದು ನೆನಪಿನಲ್ಲಿರಲಿ. ಪಂಚರಾಜ್ಯ ಚುನಾವಣೆಯಲ್ಲಿ ಶಾಕ್‌ಟ್ರೀಟ್‌ಮೆಂಟ್ ಸಾಲದೂ ಅಂತ ದೆಹಲಿಯಲ್ಲಿ ಕೈ, ಕಮಲ ಎರಡಕ್ಕೂ ಟೈರ್ ಪಂಚರ್ ಆಗಿದೆ ಅನ್ನೋದೂ ನೆನಪಿನಲ್ಲಿರಲಿ ಮಗಾ’ - ಎಂದು ಪೆಕರ ಎಚ್ಚರಿಸಿದ.

‘ಹೌದು ಗುರೂ, ನಮ್ಮ ಕೈ ಪಾರ್ಟಿವಾಲಾಗಳು ಭ್ರಷ್ಟಾಚಾರವೆಂಬ ಎಂಜಲೆಲೆಯ ಮೇಲೆ ಮಡೆಮಡೆಸ್ನಾನ ಮಾಡ್ತಾ ಮೈಮರೆತರೆ, ಜನ ಬಂಡೆದ್ದು ಕೈ ಎತ್ತೋದು ಗ್ಯಾರಂಟಿ. ಲೋಕಸಭಾ ಚುನಾವಣೆ ಬರೋದ್ರೊಳಗೆ ಯಾಕೋ ಅಪಶಕುನದ ಗಾಳಿ ಬೀಸ್ತಾ ಇರೋ ಹಂಗಿದೆಯಲ್ಲ’ ಎಂದು ಸ್ನೇಹಿತರು ಪೆಕರನ ಮಾತಿಗೆ ಸ್ವಲ್ಪ ಉಪ್ಪು ಹುಳಿ ಖಾರ ಸೇರಿಸಿದರು.

‘ಮೋದಿ ಬಿರುಗಾಳಿ ಮುಂದೆ ರಾಹುಲ್‌ಗಾಳಿ ಉಡುಗಿ ಹೋದ ನಂತರ ಪಂಚರಾಜ್ಯಗಳಲ್ಲಿ ಕೈಗಳೆಲ್ಲಾ ಕಳಾಹೀನ ರಾಗಿರಬೇಕಾದರೆ, ದಕ್ಷಿಣ ಭಾರತದಲ್ಲಿ ಕೈಹಿಡಿಯೋ ರಾಜ್ಯವಾಗಿರುವ ಕರ್ನಾಟಕದಲ್ಲಿ ಕೈಗಳೆಲ್ಲಾ ಕಚ್ಚಾಡಿ, ದೆಹಲಿ ದಿಗ್ಗಿ ಸಮನ್ವಯ ಸಮಿತಿ ಸಭೆ ನಡೆಸದಂತೆ ಮಾಡಿಬಿಟ್ಟರಲ್ಲಪ್ಪಾ. ನಾನೂ ಕೈಕಚೇರಿಯಲ್ಲೇ ಇದ್ದೆ. ಏನ್ ಬಂಡಾಯ? ಏನ್ ಆಕ್ರೋಶ? ನನ್ನ ಕಾಲು ತುಳಿದು ಚಪ್ಪಲಿ ಕಿತ್ತೋಯ್ತಲ್ಲಪ್ಪ’ ಎಂದು ಪೆಕರ ಚಪ್ಪಲಿಯನ್ನು ಕೈಯ್ಯಲ್ಲಿಡಿದುಕೊಂಡ.

‘ಚಪ್ಪಲಿ ಕೆಳಗೆ ಹಾಕು ಮಾರಾಯ. ಜನ ತಪ್ಪು ತಿಳ್ಕೊಂಡಾರು. ಕೈ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಟಾಬಯಲಾಗ್ತಿದೆ. ಆಡಳಿತ ಸುಧಾರಣಾ ಸಮಿತಿಗೆ ರಾಮಲಿಂಗಾರೆಡ್ಡಿ ಅಡ್ಡಗಾಲು ಹಾಕಿದ್ದಾರೆ. ಮಂಡ್ಯದಲ್ಲಿ ಹಂಬರೀಷಣ್ಣನ ಮೇಲೆ ಕೃಷ್ಣಾಸ್ತ್ರ ಪ್ರಯೋಗವಾಗಿದೆ. ಏ ಕ್ಯಾ ಸಬ್ ಕೈ ಕಮಾಲ್?’ ಎಂದು ಸ್ನೇಹಿತರು ಅಚ್ಚರಿಯ ಉದ್ಗಾರ ತೆಗೆದರು.

‘ಅಷ್ಟೇ ಅಲ್ಲಾ ಮಾರಾಯ. ಕೈ ನಲ್ಲಿ ತಲೆಪ್ರತಿಷ್ಠೆ ಸಚಿವರು ಹೆಚ್ಕೊಂಡಿದಾರೆ ಎಂದು ನಮ್ಮ ಮೈಸೂರು ಇಶ್ವನಾಥ್ ಮತ್ತಷ್ಟು ಬಗ್ಗಡ ಕದಡಿದ್ದಾರೆ’ ಎಂದು ಪೆಕರ ಮತ್ತೊಂದು ಪಾಯಿಂಟ್ ಸೇರಿಸಿದ.

‘ತಗ್ಗಿ ಬಾಳಿದವ ನಾಳೆ ಎದ್ದು ಬಾಳ್ಯಾನು ಅನ್ನೋ ಹಾಗೆ ಕೈ ನವರೆಲ್ಲಾ ದೆಹಲಿಯಲ್ಲಿ ಸಭೆ ಸೇರಿ ಟೋಪಿವಾಲಾಗೆ ಬೇಷರತ್ ಬೆಂಬಲ ಕೊಡ್ತಾ ಇರೋದು ನೋಡಿದ್ರೆ ದೆಹಲಿ ಅಮ್ಮಾ ಅವರದು ಏನೋ ಹರ್ಕತ್ತಿದೆ ಅನ್ನಿಸ್ತಾ ಇದೆ’ ಎಂದು ಪೆಕರನ ಗೆಳೆಯರ ಗುಂಪು ಡೌಟ್ ವ್ಯಕ್ತಪಡಿಸಿತು.

‘ಟೋಪಿವಾಲಾರನ್ನು ಅಧಿಕಾರದಲ್ಲಿ ಕೂರಿಸಲು ಕೈಕಮಲಗಳೆರಡೂ ನಾಮುಂದು, ತಾಮುಂದು ಎಂದು ಎದ್ನೋಬಿದ್ನೋ ಅಂತ ಮುನ್ನುಗ್ತಾ ಇರೋದು ನೋಡಿದ್ರೆ ಟೋಪಿವಾಲಾಗಳಿಗೆ ಇಬ್ರೂ ಸೇರಿ ಉಂಡೆನಾಮ ತಿಕ್ತಾರೆ ಅಂತ ಕಾಣುತ್ತೆ’ -ಪೆಕರ ಷರಾ ಬರೆದ.
‘ಅಯ್ಯೋ ಬಿಡಿ ಸಾರ್, ಎಲ್ಲರ ಮನೆ ದೋಸೆನೂ ತೂತು. ಟೋಪಿವಾಲಾಗಳಿಗೂ ಅಣ್ಣಾ ಅವರಿಗೂ ಈಗ ಅಷ್ಟಕ್ಕಷ್ಟೇ. ಪೊರಕೆ ಪಕ್ಷದಲ್ಲೇ ಈಗ ಹದಿನಾರು ಕ್ರಿಮಿನಲ್‌ಗಳಿದ್ದಾರೆ ಅಂತ ಜೀಬ್ರಾಪೋಸ್ಟ್ ಮಾರುವೇಷದ ಕಾರ್ಯಾಚರಣೆ ಯಲ್ಲಿ ಬಹಿರಂಗವಾಗಿದೆ. ತನ್ನ ನಿಯತ್ತು ತನಗೇ ಬರ್ಕತ್ತು ಎನ್ನುವಂತಾಗಬಾರದು ಇವರ ಕತೆ’ ಎಂದು ಸ್ನೇಹಿತರು ಮತ್ತಷ್ಟು ಒಗ್ಗರಣೆ ಹಾಕಿದರು.

‘ಟೋಪಿವಾಲಾಗಳು ಅಧಿಕಾರಕ್ಕೆ ಬಂದರು. ಅಣ್ಣಾ ಅಲ್ಲಿ ಒಂಟಿ ಆದರು. ಗಾಂಧಿ ಕತೆ ಕೂಡಾ ಇದೇ ತರ ಆಯ್ತಲ್ಲವೇ? ಈಗ ಕೈನವರಿಗೂ ಗಾಂಧಿ ಹೆಸರೊಂದೇ ಸಾಕು. ಗಾಂಧೀ ಯಾರಿಗೆ ಬೇಕು? ಅಣ್ಣಾ ಯಾರಿಗೆ ಬೇಕು? ಅವರ ಟೋಪಿಯೊಂದೇ ಸಾಕು’ -ಪೆಕರ ವೇದಾಂತ ಹೇಳಿದ.

‘ರಾಜಕೀಯ ಅಧಿಕಾರದ ‘ಕ್ರೇಜ್’ ಇಟ್ಟುಕೊಂಡು ಹತ್ತಿರ ಬಂದವರನ್ನೆಲ್ಲಾ ಉಗಿದು ಉಪ್ಪಿನಕಾಯಿ ಹಾಕಿ ದೂರ ಕಳುಹಿಸುತ್ತಿದ್ದಾರಂತಲ್ಲಾ ಅಣ್ಣಾ ಅವರು’ ಸ್ನೇಹಿತರು ಮತ್ತಷ್ಟು ಉರಿಹಾಕಿದರು.

‘ಆದರೂ ಟೋಪಿವಾಲಾಗಳು ಹದಿನೆಂಟು ಷರತ್ತು ಹಾಕಿ ಅಧಿಕಾರ ಹಿಡಿಯದೇ ಇದ್ರೆ ಕೇಳಿ. ರಾಜಕೀಯ, ಸಾಮಾಜಿಕ, ಮಾನಸಿಕ ಶುದ್ಧೀಕರಣ ಎಲ್ಲದಕ್ಕೂ ದೆಹಲಿಯಲ್ಲಿ ಪೊರಕೆ ಸೇವೆ ಆಗಲೇ ಬೇಕು. ದೆಹಲಿ ಗಾಳಿ ಈಗ ಬೆಂಗಳೂರು ದಕ್ಷಿಣಕ್ಕೂ ಬೀಸ್ತಾ ಇರೋದು ನೋಡಿದ್ರೆ ದೇಶದಲ್ಲಿ ‘ಪೊರಕೆ ಅಲೆ’ ಇದೆ ಅನ್ನೋದನ್ನು ಧಾರಾಳವಾಗಿ ರಾಜಕೀಯ ವಿಶ್ಲೇಷಣೆಯಲ್ಲಿ ಬರೆಯಬಹುದು ನೋಡ್ತಾ ಇರಿ’ - ಪೆಕರ ತನ್ನ ಅನಿಸಿಕೆಯನ್ನು ಹೇಳಿದ.

‘ಆದರೆ ಇದೆಲ್ಲಾ ನಮ್ಮ ದೊಡ್ಡಗೌಡರಿಗೆ ಅರ್ಥವಾಗಲ್ವ ಸಾರ್?! ಲೋಕಸಭಾ ಚುನಾವಣೆಯಲ್ಲಿ ನಮ್ಮ ಥರ್ಡ್‌ಫ್ರಂಟೇ ಅಧಿಕಾರಕ್ಕೆ ಬರೋದು. ‘ಅವರೇ’ ಮುಂದಿನ ಪ್ರಧಾನಿ ಅಂತ ತಮಿಳ್ನಾಡ್‌ಗೆ ಹೋಗಿ ಅನೌನ್ಸ್ ಮಾಡಿದ್ದಾರಲ್ಲಾ?!’ ಸ್ನೇಹಿತರು ಅರ್ಥವಾಗದ ಪ್ರಶ್ನೆಯನ್ನು ಮುಂದಿಟ್ಟರು.

‘ಅಧಿಕಾರ ಇರಲೇ ಬೇಕೆಂಬ ದೈನೇಸಿ ಸ್ಥಿತಿ. ಕೊನೆಗೆ ‘ಅಮ್ಮ’ನ ಪಾದವೇ ಗತಿ’ ಎಂದು ಹೇಳುತ್ತಾ ಪೆಕರ ಪೊರಕೆ ಸಮೇತ ಮುಂದೆ ಹೋದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT