ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಗೆದ್ರೂ ಕೂದಲೆಳೆಯಲ್ಲಿ...

ಅಕ್ಷರ ಗಾತ್ರ

ತದಾನಕ್ಕೆ ಮೂರೇ ದಿನ ಉಳಿದಿದೆ, ತಕ್ಷಣ ಹೋಗಿ ಸಾಕ್ಷಾತ್ ಸಮೀಕ್ಷೆ ಕಳುಹಿಸಿ ಎಂಬ ಆದೇಶ ಸಂಪಾದಕರಿಂದ ಬಂದ ತಕ್ಷಣ ಪೆಕರ ಉತ್ಸಾಹದಿಂದ ಕ್ಷೇತ್ರ ದರ್ಶನಕ್ಕೆ ಹೊರಟ.

ಪೆಕರ ಮೊದಲಿಗೆ ಮಂಡ್ಯದ ಕಡೆ ಹೋಗಲು ಕಾರಣವಿದೆ. ಅವನು ರಮ್ಯಾಭಿಮಾನಿ. ಚಲನಚಿತ್ರಗಳಲ್ಲಿ ನಟಿ ಅಳುವ ದೃಶ್ಯ ಬಂದಾಗಲೆಲ್ಲಾ ತಾನೂ ಅಳುತ್ತಿದ್ದ. ನಗುವ ದೃಶ್ಯ ಬಂದಾಗಲೆಲ್ಲಾ ತಾನೂ ನಗುತ್ತಿದ್ದ. ಅವರ ಹಸ್ತಾಕ್ಷರ ಪಡೆಯಬೇಕು ಎಂದು ಓಡಾಡುತ್ತಿದ್ದಾಗ `ಅವರು ಇಲ್ಲೆಲ್ಲಿ ಸಿಗ್ತಾರೆ?  ಲಂಡನ್‌ಗೋ ಅಮೆರಿಕಕ್ಕೋ ಹೋಗಬೇಕು ಅಷ್ಟೇ' ಎಂದು ರೇವಣ್ಣಾಜೀ ಹೇಳಿದ ಮಾತು ಕೇಳಿಕೊಂಡು ಸುಮ್ಮನಾಗಿದ್ದ. ಈಗ ಇಂಡ್ಯದ ಮಂಡ್ಯದಲ್ಲೇ ಸಿಗ್ತಾರೆ ಎಂದು ಗೊತ್ತಾದ ಮೇಲೆ ಅವನ ಖುಷಿ ಇಮ್ಮಡಿಸಿ, ಗಾಡಿ ಏರಿದ.

ಕ್ಷೇತ್ರಕ್ಕೆ ಎಂಟ್ರಿಯಾದ ಕೂಡಲೇ ಮೂರು ನಾಲ್ಕು ಕಡೆ ಪೆಕರನ ಗಾಡಿಯನ್ನು ಪೊಲೀಸರು ಚೆಕ್ ಮಾಡಿದರು. ನೋಟುಗಳನ್ನು ತುಂಬಿಕೊಂಡ ಗಾಡಿಗಳು ಈ ಕಡೆ ಅಡ್ಡಾಡುತ್ತಿವೆ ಅದಕ್ಕೆ ಡೌಟ್ ಬಂತು. ಪ್ರೆಸ್ ಅಂತ ಬೋರ್ಡ್ ಬೇರೆ ಇದೆ. ನೋಟು ಪ್ರಿಂಟ್ ಮಾಡುವ ಪ್ರೆಸ್ ಇರಬಹುದು ಎಂದು ಚೆಕ್ ಮಾಡಿದೆವು ಎಂದು ಪೊಲೀಸರು ಶೋಧಕ್ಕೆ ಕಾರಣ ನೀಡಿ, ಹೇಷಾವರದ ನಗೆ ಬೀರಿದರು.

ಕ್ಷೇತ್ರದ ಹತ್ತು ಹಳ್ಳಿ ದಾಟುವುದರೊಳಗೆ ಪೆಕರನ ಗಾಡಿ ಮೂರು ಸಲ ಪಂಕ್ಚರ್ ಆಯಿತು. ಪಂಕ್ಚರ್ ಶಾಪ್ ಬಳಿಯೇ ಬೀಡಿ ಸೇದುತ್ತಾ ಕುಳಿತಿದ್ದ ಸಣ್ಣೇಗೌಡರನ್ನು ಪೆಕರ ಮಾತಿಗೆಳೆದ.

`ಏನು ಗೌಡ್ರೇ, ನಿಮ್ಮೂರಲ್ಲಿ ರಸ್ತೆಗಳೆಲ್ಲಾ ಈ ರೀತಿ ಗಬ್ಬೆದ್ದು ಹೋಗಿವೆ. ಸ್ವಾತಂತ್ರ್ಯ ಬಂದಾಗಿನಿಂದ ಒಂದು ಸಲಾನೂ ಟಾರ್ ಹಾಕಿಲ್ಲ ಎಂದು ಕಾಣುತ್ತೆ' `ನಮ್ಮೂರೇನು, ಇಡೀ ಮಂಡ್ಯ ಜಿಲ್ಲೆ ಹಳ್ಳಿಗಳ ರಸ್ತೆಗಳೆಲ್ಲಾ ಹಿಂಗೇ ಇದೆ. ಇದೇನ್ ಹೊಸದಾಗಿ ಊರಿಗೆ ಬಂದಂಗೈತೆ'

`ಹೌದು ಗೌಡ್ರೇ, ಮೂರು ಸಲ ಗಾಡಿ ಪಂಕ್ಚರ್ ಆಯಿತು. ರಸ್ತೆ ತುಂಬ ಕಲ್ಲು, ಹಳ್ಳ. ಗಾಡಿ ಮಗುಚಿಕೊಂಡ್ರೆ ಏನ್‌ಗತಿ?'
`ನಿಮ್ಮನ್ನ್ಯಾರು ಗಾಡೀಲಿ ಬರೋಕೇಳಿದ್ರು? ಇಲ್ಲಿ ಏನಿದ್ರೂ ಎತ್ತಿನಗಾಡೀಲಿ ಬರಬೇಕು. ಗೌರ‌್ನಮೆಂಟ್ ಕಾರ‌್ನಲ್ಲಿ ಬರೋರು ಅಂದ್ರೆ ನಮ್ಮ ದೊಡ್ಡಗೌಡ್ರು ಮತ್ತು ಅವರು ಕುಟುಂಬದವರು ಮಾತ್ರ'

`ಏನ್‌ಸ್ವಾಮಿ ಹೀಗೆ ಹೇಳ್ತೀರಿ? ಅದಕ್ಕೇನಾ ಇದನ್ನು ದಳದ ಭದ್ರಕೋಟೆ ಅನ್ನೋದು?! ಇಡೀ ಜಿಲ್ಲೆಯ ಹಿಡಿತ ದೊಡ್ಡಗೌಡರು ಮತ್ತು ಅವರ ಫ್ಯಾಮಿಲಿ ಕೈಲಿದೆ ಅಂತಾರೆ? ಆದ್ರೂ ಅಭಿವೃದ್ಧಿ ಆಗಿಲ್ಲಾ?' `ಕೋಟೆನೂ ಇಲ್ಲ. ವಾಟೇನೂ ಇಲ್ಲ. ಹಳ್ಳಿಗಳನ್ನು ಅಭಿವೃದ್ಧಿ ಮಾಡೋದು ಅಷ್ಟರಲ್ಲೇ ಇದೆ.

ಅವರವರ ಕುಟುಂಬ ವ್ಯವಹಾರನಾ ಅವರು ನೋಡ್ಕೋತಾರೆ. ಒಂದೇ ಸಲಕ್ಕೆ ಎಲ್ಲಾ ಕೆಲಸ ಮಾಡಿಬಿಟ್ರೆ ಮುಂದಿನ ಎಲೆಕ್ಷನ್‌ನಾಗೆ ಭರವಸೆ ಕೋಡೋಕೆ ಏನು ಉಳಿದಿರುತ್ತೆ?' ಸಣ್ಣೇಗೌಡರು ಮೋಟು ಬೀಡಿ ಬಿಸಾಕಿ ನಿಟ್ಟುಸಿರುಬಿಟ್ಟರು.

`ಹೋಗ್ಲಿಬಿಡಿ ಗೌಡ್ರೇ, ಇಂಡ್ಯಾದ ರಾಜಕಾರಣಾನೇ ಹೀಗೆ. ವೋಟ್ ಹಾಕೋ ನಿಮ್ಮನ್ನು ಗುಗ್ಗುಗಳು ಅಂತ ಅಂದ್ಕೊಂಡಿದಾರೆ. ಹೋಗ್ಲಿ ಈಗ ಉಪಚುನಾವಣೆಯಲ್ಲಿ ಯಾರಿಗೆ ವೋಟ್ ಹಾಕ್ತೀರಿ?' ಪೆಕರ ತನ್ನ ಸಮೀಕ್ಷಾ ಕಾರ್ಯವನ್ನು ಆರಂಭಿಸಿದ.

`ಯಾರ್ ಗೆದ್ರೆ ನಂಗೇನು? ದಳದವರು 20 ತಿಂಗಳು ಅಧಿಕಾರದಲ್ಲಿದ್ದಾಗ ಮೊಗೆಮೊಗೆದು ಕೊಟ್ರಾ? ರಸ್ತೆ ಮಾಡಿದ್ರಾ? ಕಮಲದವರು 5 ವರ್ಷ ರೂಲ್ ಮಾಡಿದ್ರು, ಏನ್ ಮಾಡಿದ್ರು? ಬೀದಿಬೀದಿಲಿ ಬಡಿದಾಡಿದ್ರು. ಈಗ ಇಬ್ರೂ ಒಂದೇ ಸ್ಟೇಜ್ ಮೇಲೆ ನಿಂತ್ಕಂಡು ಒಂದೇ ಹಾರ ಹಾಕ್ಕಂಡು ತಬ್ಕತಾ ಇದಾರೆ' ಸಣ್ಣೇಗೌಡರು ಹತಾಶದನಿಯಲ್ಲಿ ಹೇಳಿದರು.

`ನಾನು ಆಕ್ಸ್‌ಫರ್ಡ್‌ನಲ್ಲಿ ಓದಿಲ್ಲ. ಬಡ ಮಣ್ಣಿನ ಮಗನ ಡ್ರೆಸ್ ಹಾಕ್ಕಂಡು ಬಡವರ ಕೆಲಸ ಮಾಡಿ, ಪಿಎಮ್ಮೂ ಆದೆ ಎಂದು ದೊಡ್ಡಗೌಡರು ಟಾಂಟ್ ಕೊಡೋಕೆ ಶುರುಮಾಡಿದ್ದಾರಲ್ಲಾ ಸ್ವಾಮಿ, ಏನಂತೀರಾ?' ಎಂದು ಪೆಕರ ಗಾಯದ ಮೇಲೆ ಖಾರ ಅರೆದ.
`ಡ್ರೆಸ್ ಹಾಕ್ಕಂಡು ಓಡಾಡಿದ್ರೆ ಕೆಲ್ಸ ಆದಾದಾ? ಹಾಸ್ನ, ಹೊಳೆನರಸೀಪುರದಲ್ಲಿ ಕಿತ್ಕೊಂಡ್‌ಹೋಗ್ತಾ ಇದೆ ಇಲ್ಲೇನ್ ಮಾಡಾರು ಬುಡಿ ಸ್ವಾಮಿ' ಎಂದು ಸಣ್ಣೇಗೌಡರು ಟವಲು ವದರಿದರು.

`ಕಣದಲ್ಲಿ ಇರೋರೇ ಇಬ್ರು. ವೋಟ್ ಯಾರಿಗೆ? ನಿಮಗೆ ಈ ಕ್ಷಣದಲ್ಲಿ ಯಾರ ಮೇಲೂ ನಂಬಿಕೆ ಇಲ್ವೇ?' ಪೆಕರ ರಹಸ್ಯ ಮತದಾನದ ಜಾಡು ಹಿಡಿಯುವ ಸಲುವಾಗಿ ಕೆಣಕಿದ.

`ನನಗೆ ಹಂಬರೀಷಣ್ಣನ ಮೇಲೆ ನಂಬ್ಕೆ ಇದೆ'
ಸಣ್ಣೇಗೌಡರ ನಿಖರ ಉತ್ತರ ಕೇಳಿ ಪೆಕರ ಅತ್ಯಾಶ್ಚರ್ಯದಿಂದ ಬೆಚ್ಚಿಬಿದ್ದ.
`ಹಂಬರೀಷಾ?!! ಹೆಂಗೆ?..ಹೆಂಗೆ..ಹೆಂಗೆ??'

`ಮೊನ್ನೆ ಬಸರಾಳುನಲ್ಲಿ ಹಂಬರೀಷಣ್ಣ ಮಾತಾಡಿದ್ದು ಕೇಳ್ಲಿಲ್ವಾ? ರಸ್ತೆನಲ್ಲಿ ಉರುಳುಸೇವೆ ಮಾಡ್ತೀನಿ ಅಂತ ಹೇಳಿದ್ದಾರೆ. ಅದಕ್ಕೆ ಅವರನ್ನ ನಂಬಿದ್ದೇನೆ' ಎಂದು ಸಣ್ಣೇಗೌಡರು ಹೇಳಿದರು.

`ಕಾಂಗ್ರೆಸ್ ಗೆಲ್ಲಿಸಿದ್ರೆ ರಸ್ತೆಗಳಲ್ಲಿ ಉರುಳುಸೇವೆ ಮಾಡ್ತೀನಿ ಅಂತ ಹಂಬರೀಷ್ ಚುನಾವಣಾ ಭಾಷಣ ಮಾಡಿದ್ದಕ್ಕೂ, ನಿಮ್ಮ ನಂಬಿಕೆಗೂ ಏನು ಸಂಬಂಧ ಸ್ವಾಮಿ? ಚುನಾವಣೆ ಸಮಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ರಾಜಕಾರಣಿಗಳ ಮಾತನ್ನು ನೀವು ನಂಬ್ತೀರಾ?' ಪೆಕರ ಆಶ್ಚರ್ಯದಿಂದಲೇ ವಿವರಣೆ ಕೇಳಿದ.

`ಸ್ವಾತಂತ್ರ್ಯ ಬಂದಾಗಿನಿಂದ ರಸ್ತೆ ಆಗಿಲ್ಲ. ಇರೋ ಕಚ್ಚಾ ರಸ್ತೇಲಿ ಓಡಾಡಿ, ನಿಮ್ಮ ಗಾಡೀನೇ ಪಂಕ್ಚರ್ ಆಗಿದೆ. ಬರೀ ಹಳ್ಳ, ದಿಣ್ಣೆ. ಹಂಬರೀಷಣ್ಣ ಉರುಳಾಡಿದ್ರೆ ರಸ್ತೆಗಳೆಲ್ಲಾ ಹದವಾಗಿ, ಮಟ್ಟ ಆಯ್ತದೆ. ಅದಕ್ಕೆ ಮಂಡ್ಯದ ಬಹಳ ಜನ ಹಳ್ಳಿಗಳಲ್ಲಿ ಕಾಯ್ತಾ ಅವ್ರೆ' ಎಂದು ಸಣ್ಣೇಗೌಡರು ವ್ಯಾಖ್ಯಾನಿಸಿದರು.

ಹೌದಲ್ಲಾ ಸಣ್ಣೇಗೌಡರಿಗೆ ಹೊಳೆದ ಐಡಿಯಾ ಅಯ್ಯ ಅವರಿಗೆ ಹೊಳೆಯಲೇ ಇಲ್ಲವಲ್ಲಾ! ಎಂದು ಪೆಕರ ಚಕಿತಗೊಂಡ. ಹಂಬರೀಷಣ್ಣನವರಿಗೆ ವಸತಿ ಖಾತೆ ಕೊಡುವ ಬದಲು ರಸ್ತೆ ಖಾತೆ ಕೊಟ್ಟಿದ್ದರೆ, ಅವರು ಉರುಳಿ ಉರುಳಿಯೇ ರಸ್ತೆಗಳನ್ನು ಸರಿ ಮಾಡಿಬಿಡುತ್ತಿದ್ದರು! ಟೆಂಡರ್ ಕರೆಯುವ ರಾಮಾಯಣವೇ ಇರುತ್ತಿರಲಿಲ್ಲ.

ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಯ್ತು ಅನ್ನುವ ಆರೋಪಗಳೂ ಬರುವುದಿಲ್ಲ.  ನಡೆಯಲೂ ಏದುಸಿರು ಬಿಡುವ ಹಂಬರೀಷಣ್ಣ ಅವರ ಡೊಳ್ಳುಹೊಟ್ಟೆಯೂ ಕರಗಿ ಅವರು ಮತ್ತೆ ಕನ್ವರ್‌ಲಾಲ್ ತರಹ ಕಾಣಿಸಬಹುದು... ಪೆಕರನ ವಿಶ್ಲೇಷಣೆ ಹೀಗೆಲ್ಲಾ ಸಾಗಿ, ಅಯ್ಯ ಅವರು ಎಲ್ಲಾದ್ರೂ ಭೇಟಿಯಾದ್ರೆ ಈ ಐಡಿಯಾ ಕೊಡಬೇಕು ಅಂದುಕೊಂಡ.


ಅಷ್ಟರಲ್ಲಿ ಕೆಂಗೋಡಿನಲ್ಲಿ ರಮ್ಯಾ ಭಾಷಣ ಮಾಡುತ್ತಿದ್ದಾರೆ ಅಂತ ಸುದ್ದಿ ತಿಳಿದು ಅಲ್ಲಿಗೆ ದೌಡಾಯಿಸಿದ ಪೆಕರ. ವೇದಿಕೆಯ ಮೇಲೆ ಅವರು ಗಳಗಳನೆ ಅಳುತ್ತಿರುವುದನ್ನು ಕಂಡ. ಇವನಿಗೂ ಕಣ್ತುಂಬಿ ಬಂತು.

ಉಪಚುನಾವಣೆಯಲ್ಲಿ ಎಲ್ಲಾ ಲೀಡರ್‌ಗಳು ಗಳಗಳ ಅಂತ ಕಣ್ಣೀರು ಹಾಕ್ತಾ ಇರೋದಕ್ಕೂ, ಈರುಳ್ಳಿ ಬೆಲೆ ಜಾಸ್ತಿ ಆಗಿರೋದಕ್ಕೂ ಸಂಬಂಧವೇ ಇಲ್ಲ. ರಮ್ಯಾ ಅಳೋದಕ್ಕೆ ಕಾರಣ ಏನು ಅಂತ ಕೇಳಿದ ಮಾರಸ್ವಾಮಿಗಳೇ ಚನ್ನಪಟ್ಟಣದಲ್ಲಿ ಕಣ್ಣೀರಾಕಿದರು. ದೊಡ್ಡಗೌಡರೂ ರೈತರ ತೆಂಗು ಬೆಳೆಗಾರರ ಸ್ಥಿತಿ ನೆನೆದು ಅತ್ತರು. ಅದು ಮೊಸಳೆ ಕಣ್ಣೀರು ಅಂತ ಅಯ್ಯ ಅವರ ಅಂಬೋಣ.

ಅನಿತಕ್ಕನವರೂ ರಮ್ಯಾ ಅವರ ಜೊತೆ ಪೋಟಿಗೆ ಬಿದ್ದವರಂತೆ ಅಳೋಕೆ ಶುರುಮಾಡಿದ್ದಾರೆ. ಇಷ್ಟು ಸಾಲದು ಅಂತ ನಮ್ಮ ತೇಜಸ್ವಿನಿ ಅಮ್ಮನವರೂ ಫ್ಲ್ಯಾಷ್‌ಬ್ಯಾಕ್‌ಗಳನ್ನೆಲ್ಲಾ ನೆನಪಿಸಿಕೊಂಡು ವೇದಿಕೆ ಮೇಲೆ ಅಳೋದಕ್ಕೆ ಶುರುಮಾಡಿದ್ದಾರೆ.

ಪೆಕರನ ಚಿಂತನಾಲಹರಿ ಹರಿಯುತ್ತಿದ್ದಂತೆಯೇ ಪ್ರಚಾರ ಭಾಷಣ ಮುಗಿಸಿ, ರಮ್ಯಾ ಮೇಡಂ ದುಡುದುಡು ಅಂತ ಓಡ್ತಾ ಇದ್ದರು. ತಕ್ಷಣ ಓಡಿದ ಪೆಕರ, ಅಡ್ಡಹಾಕಿ `ಒಂದು ನಿಮಿಷ ಮೇಡಂ, ಸ್ಮಾಲ್ ಕೊಶ್ಚನ್' ಎಂದು ಕೇಳಿದ. `ಸ್ಸಾರಿ, ನೋ ಟೈಮ್' ಎಂದು ರಮ್ಯಾ ಅವಸರದಿಂದ ಹೆಜ್ಜೆ ಹಾಕಿದರು.

ಪೆಕರನ ಕಾಟ ತಾಳಲಾರದೆ ನಿಂತ ರಮ್ಯಾ, `ಅದೇನ್ ಬೇಗ ಕೇಳಿ, ಮುಂದಿನ ಹಳ್ಳೀಲಿ ಕಾಲ್‌ಶೀಟ್ ಇದೆ' ಎಂದರು. `ಮೇಡಂ ಬೆಂಗಳೂರಿನಲ್ಲಿ ಬೆಂಬುಜೀಗಳೆಲ್ಲಾ ಸೇರಿ ನಿಮಗೆ ಬೆಂಬಲ ಘೋಷಿಸಿದ್ದಾರೆ. ನೀವು ಅಳಬಾರದಂತೆ'- ರಮ್ಯಾ ಅವರಲ್ಲಿ ಪೆಕರ ಅರುಹಿದ.

`ಬೆಂಬುಜೀಗಳಿಗೆ ಥ್ಯಾಂಕ್ಸ್, ಮುಂದೆ ಅಕಾಡೆಮಿ, ನಿಗಮಗಳಿಗೆ ನೇಮಕ ಪ್ರಶ್ನೆ ಬಂದಾಗ ನಾನು ಇದನ್ನು ನೆನಪಿನಲ್ಲಿಟ್ಟುಕೊಳ್ತೇನೆ. ನನ್ನ ಕೈಲಾದ ಸಹಾಯ ಮಾಡ್ತೇನೆ'

`ಆದ್ರೂ ಆ ದಳದವರು ನಿಮ್ಮೇಲೆ ಹಂಗೆಲ್ಲಾ ಅಪಪ್ರಚಾರ ಮಾಡಬಾರ‌ದಿತ್ತು, ಅನಾಥೆ ಅನ್ನಬಾರದಿತ್ತು, ಎಂಥಾ ಜಾತ್ಯತೀತ ಪಕ್ಷ ಮೇಡಂ ಅದು?' ಪೆಕರನಿಗೂ ಅಂದು ಯಾಕೋ ರೋಷ ಬಂದಿತ್ತು.

`ನಾನು ಹೇಗ್ರಿ ಅನಾಥೆ ಆಗ್ತೀನಿ? ನಂದು ಮಂಡ್ಯ, ಕ್ಷೇತ್ರದಲ್ಲಿರೋ ಎಲ್ರೂ ನನ್ನ ರಿಲೇಟಿವ್ಸ್. ನಾನು ಬೋರೇಗೌಡರ ಮೊಮ್ಮಗಳು. ಮಂಡ್ಯದ ಜನರೇ ನನ್ನ ಅಪ್ಪ, ಅಮ್ಮ, ಬಂಧು ಬಳಗ. ಇಷ್ಟೆಲ್ಲಾ ಇರೋವಾಗ ನಾನೇಕೆ ಹೆದರಲಿ ಹೋಗ್ರಿ?' ಎಂದು ರಮ್ಯಾ ದಿಟ್ಟ ಉತ್ತರ ಕೊಟ್ಟರು. ಉತ್ತರದಿಂದ ಪೆಕರ ಖುಷಿಯಾದ. `ನಾನೂ ನಿಮ್ಮ ಬಂಧು' ಎಂದು ಹೇಳುವಷ್ಟರಲ್ಲಿ ರಮ್ಯಾ ಅವರಿದ್ದ ಕಾರು ಭರ‌ರನೇ ಹಾರಿಹೋಗಿತ್ತು.

ಮಂಡ್ಯ ಗೆಸ್ಟ್ ಹೌಸ್‌ನಲ್ಲಿ ಅಯ್ಯ ಅವರು ಇದ್ದಾರೆ ಎನ್ನುವ ವಿಷಯ ತಿಳಿದು ಪೆಕರ ಅಲ್ಲಿಗೆ ಧಾವಿಸಿದ. ಅಯ್ಯ ಅವರು ಹೊರಡುವ ಅವಸರದಲ್ಲಿದ್ದರು. ಹೇಗೋ ಕಷ್ಟಪಟ್ಟು ಅವರನ್ನು ಮಾತನಾಡಿಸಿದ. `ಸಾರ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ತಿಥಿ ಆಗುತ್ತೆ ಅಂತ ರೇವಣ್ಣಾಜಿ ಹೇಳ್ತಾ ಇದಾರಲ್ಲಾ ಸಾರ್' ಎಂದು ಪೆಕರ ಪ್ರಶ್ನೆನ ಒಗಾಯಿಸಿದ.

`ದೊಡ್ಡಗೌಡರಿಗೆ ಇಪ್ಪತ್ತು ವರ್ಷದಿಂದ ತಿಥಿ ಊಟ ಮಾಡಿಯೇ ಅಭ್ಯಾಸ ಕಂಡ್ರಿ, ಮನೆಯೂಟ, ಹಬ್ಬದೂಟ ಅಂದ್ರೆ ಏನೂ ಅಂತ್ಲೇ ಗೊತ್ತಿಲ್ಲ. ನಾನೂ ಅಲ್ಲೇ ಇದ್ದಿದ್ರೆ ನನ್ನನ್ನೂ ತಿಥಿ ಮಾಡಿರೋರು. ಮೂರು ಜಿಲೆಗಳಲ್ಲಿ ಮತದಾರನ ತಿಥಿ ಮಾಡಿ ಅದೇನ್ ವಡೆಪಾಯ್ಸ ಅಂತಾ ಅಲೀತಾರೋ' ಎಂದು ಹೇಳುತ್ತಾ ಅಯ್ಯ ಅವರು ದಡಬಡ ಹೊರಟೇ ಹೋದರು.

ಚುನಾವಣಾ ಸಮೀಕ್ಷೆ ಕಳುಹಿಸಲು ಡೆಡ್‌ಲೈನ್ ಮೀರುತ್ತಿತ್ತು. ಕೊನೆಗೂ ಪೆಕರ ಟೈಪ್ ಮಾಡಿ ಸಂಪಾದಕರಿಗೆ ಕಳುಹಿಸಿದ. `ಇಲ್ಲಿ ಯಾರು ಗೆದ್ದರೂ ಕೂದಲೆಳೆಯಲ್ಲಿ ಗೆಲ್ತಾರೆ. ಸೋತರೆ ಕೂದಲು ಮಾತ್ರ ಹೋಗುತ್ತೆ. ಗೆದ್ರೆ ಎಂಟು ತಿಂಗಳು ಅಷ್ಟೇ'.
-ಜಿಎಮ್ಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT