ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಕಾಲಿಕ ಉಪನ್ಯಾಸಕನ ಗೋಳಾಟ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆಗ ನಾನೇ ಅನ್ನ ನೀರಿಲ್ಲದೆ ಪರದಾಡುತ್ತಿದ್ದೆ. ಬೆಳಿಗ್ಗೆಯಿಂದ ರಾತ್ರಿ ತನಕ ಮೂರು ಕಾಲೇಜುಗಳಲ್ಲಿ ಎಡೆಬಿಡದೆ ಪಾಠ ಒದರಿದರೂ, ಬರುತ್ತಿದ್ದ ಸಂಬಳ ಯಾವತ್ತೂ ಒಂದು ಸಾವಿರದ ಗಡಿ ದಾಟುತ್ತಿರಲಿಲ್ಲ. ಅದರಲ್ಲೇ ರೂಮಿನ ಬಾಡಿಗೆ, ಹೋಟೆಲ್ಲಿನ ಊಟದ ಬಾಬ್ತುಗಳ ಚುಕ್ತಾ ಮಾಡಬೇಕಾಗಿತ್ತು. ಆ ಹೋಟೆಲಿನವನೋ ಅಳಿದುಳಿದ ಎಲ್ಲಾ ತಿಂಡಿಗಳನ್ನು ಉದರಿ ಗಿರಾಕಿಗಳಾದ ನಮಗಾಗಿಯೇ ತೆಗೆದಿರಿಸುತ್ತಿದ್ದ. ಕಸ ಬಳಿದು ಕೊಟ್ಟಂತೆ ತಿಂಡಿಯನ್ನು ತುಂಬಿ ಕೊಡುತ್ತಿದ್ದ. ನಡು ನಡುವೆ ನೂರಿನ್ನೂರು ಸಲ ತನ್ನ ಕೋಸಿನ ಗಾತ್ರದ ಮೂಗನ್ನು ಸಿಂಪಡಿಸಿ ಸರಿ ಮಾಡಿಕೊಳ್ಳುತ್ತಿದ್ದ. ತಿಂಡಿ, ಊಟ ಬಡಿಸುವಾಗ ಹಂಗೆಲ್ಲಾ ಅಸಹ್ಯ ಮಾಡಿಕೊಳ್ಳಬಾರದು ಭಟ್ಟರೇ ಎಂದು ಹೇಳಿದರೆ ಓಹೋ ಆಗ್ಲಿಬಿಡಿ ಅದಕ್ಕೇನಂತೆ ಎಂದು ಹೇಳಿಕೊಂಡೆ  ಅದೇ ಹಲ್ಕಟ್ ಕೆಲಸವನ್ನು ರಿಪೀಟ್ ಮಾಡಿರುತ್ತಿದ್ದ.

ಅವನು ಕೊಡುತ್ತಿದ್ದ ತಿಂಡಿ ಬಲು ವಿಚಿತ್ರವಾಗಿರುತ್ತಿತ್ತು. ಆತ ಒಂದಿಷ್ಟು ಉಪ್ಪಿಟ್ಟು, ಒಂದಿಷ್ಟು ಚಿತ್ರಾನ್ನ, ಎರಡು ಇಡ್ಲಿ ಪೀಸುಗಳು, ಪಕೋಡ ಪುಡಿ, ಮತ್ತದರ ಮೇಲೆ ಚಟ್ನಿ ಸುರುವಿಕೊಂಡು ತರುತ್ತಿದ್ದ. ಅದು ನಾಲ್ಕೈದು ಬೀದಿಗಳಲ್ಲಿ ಭಿಕ್ಷೆ ಎತ್ತಿ ತಂದ ಹಾಗೆ ಕಾಣುತ್ತಿತ್ತು. ಬೇರೆ ಗತಿ ಇಲ್ಲದೆ ಅದನ್ನೇ ನಾವು ಮುಕ್ಕುತ್ತಿದ್ದೆವು. ಏನು ಕೊಟ್ಟರೂ ಇವಿಲ್ಲಿಗೇ ಖಾಯಮ್ಮಾಗಿ ಬರುವ ಪೀಡೆಗಳೆಂಬುದು ಆತನಿಗೂ ಚೆನ್ನಾಗಿ ತಿಳಿದಿತ್ತು.  

ಮಧ್ಯಾಹ್ನ ಮತ್ತು ರಾತ್ರಿಯ ಊಟ ಬಡಿಸಿಟ್ಟ ಹೋಟೆಲ್ ಮಾಲಿಕ ನಮಗೇ ಲೆಕ್ಕ ಬರೆದಿಟ್ಟು ಹೋಗಲು ಹೇಳುತ್ತಿದ್ದ. ಅದರಲ್ಲಿ ಕೆಲ ಭೂಪರು ತಮ್ಮ ಖಾತೆಯಲ್ಲಿ ಜಮಾ ಮಾಡಬೇಕಾದ ಬಾಕಿಯನ್ನು ಇನ್ಯಾರದೋ ಖಾತೆಗೆ ನಿಧಾನವಾಗಿ ಪೋಣಿಸಿಟ್ಟು ಹೋಗಿಬಿಡೋರು. ನಾನೂ ಸರಿಯಾಗಿ ಗಮನಿಸದೆ ನನ್ನ ಲೆಕ್ಕವೂ ಆಲದ ಮರದ ಬಿಳಿಲುಗಳಂತೆ ಅಡ್ಡಡ್ಡ ಉದ್ದುದ್ದ ಇಳಿಬಿದ್ದಿದ್ದವು. ಕೋತಿ ತಾನು ತಿಂದು ಕತ್ತೆಯ ಬಾಯಿಗೆ ಒರೆಸಿದಂತೆ ಯಾರ್‍್ಯಾರೋ ನನ್ನ ಹೆಸರಿನ ಕೆಳಗೆ ತಾವು ತಿಂದಿದ್ದರ ಲೆಕ್ಕ ಕೂಡಿಸಿಟ್ಟಿದ್ದರು.

ನನ್ನ ಬಾಕಿ ಅಷ್ಟು ಸುತಾರಾಂ ಬರುತ್ತಿರಲಿಲ್ಲ. ಈ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಕೊನೆಗೆ ಮಾರಾಮಾರಿಯಾಗುವುದು ಅದು ಹೇಗೋ ನಿಂತು ಹೋಯಿತು. ಆಗ ಹೋಟೆಲ್‌ನ ಯಜಮಾನ ‘ಏಯ್ ನೀವು ಮೇಷ್ಟ್ರುಗಳು ಸರಿಯಿಲ್ಲ ಕಣ್ರಯ್ಯ. ಎಲ್ಲಾ ಪಕ್ಕಾ ಹಲಾಲ್‌ಖೋರರೇ ಇಲ್ಲಿ ಸೇರ್ಕೊಂಡಿದ್ದೀರಿ. ಪುಸ್ತಕ ಸರಸ್ವತಿ. ಲೆಕ್ಕ ಲಕ್ಷ್ಮೀ ಇದ್ದಂಗೆ. ಆ ಇಬ್ಬರೂ ದೇವತೆಗಳಿಗೆ ನನ್ನೆದುರಿಗೇ ನಾಮ ಹಾಕ್ತಾ ಇದ್ದೀರಲ್ಲ. ಎಷ್ಟು ಐನಾತಿ ಇದ್ದೀರಿ ನೀವು. ಕಾಲೇಜಲ್ಲಿ ಹುಡುಗರಿಗೂ ಇಂಥದ್ದೇ ಮೋಸದ ದಂಧೆ ಹೇಳ್ಕೊಡ್ತೀರಾ? ನಿಮ್ಮ ಸಾವಾಸನೇ ಸರಿ ಇಲ್ಲಪ್ಪ. ಇನ್ಮೇಲೆ ನಾನೇ ಲೆಕ್ಕ ಬರೀತೀನಿ’ ಅಂತ ನಿರ್ಧರಿಸಿ ತಾನೇ ಗೀಚಿಕೊಳ್ಳತೊಡಗಿದ.

ಅವನ ಮೋಡಿ ಬರವಣಿಗೆ ಆ ಬ್ರಹ್ಮನಿಗೂ ತಿಳಿಯದಂಥದ್ದು. ಅವನೇನು ಬರ್ಕೊತಾನೆ ಅನ್ನೋದನ್ನು ನಾವು ಇಣುಕಿ ನೋಡಕ್ಕೂ ಹೋಗ್ತಿರಲಿಲ್ಲ. ಬಡತನದಲ್ಲಿರುವ ನಮಗೆ ಏನೋ ಟೈಮಿಗೊಂದಿಷ್ಟು ಬೇಯಿಸಿ ಹಾಕ್ತಾನಲ್ಲ ಅನ್ನೋ ಸಮಾಧಾನ ನಮಗಿತ್ತು. ಹೋಟೆಲ್‌ನ ಊಟ ತಿಂಡಿ ಕೊಳಕಾಗಿದ್ದರೂ, ಮಾಲೀಕನ ಮನಸ್ಸು ಮಾತ್ರ ಹತ್ತಿಯಷ್ಟು ಶುಭ್ರವಾಗಿತ್ತು. ರುಚಿಯಲ್ಲಿ ಹಿತವಿರಲಿಲ್ಲ ನಿಜ. ಆದರೆ ನಿಯತ್ತಿನಲ್ಲಿ ಯಾವತ್ತೂ ಕಹಿ ಇರಲಿಲ್ಲ. ಹೆಚ್ಚು ಕಡಿಮೆ ಎಲ್ಲಾ ಅರೆಕಾಲಿಕ ಉಪನ್ಯಾಸಕರಿಗೂ, ಅವನೇ ಅನ್ನದಾತನಾಗಿದ್ದ. ಸುತ್ತಮುತ್ತಲಿನ ಕಾಲೇಜುಗಳಲ್ಲಿ ಅರೆ ಕಾಸಿಗೆ ದುಡಿಯುವ ಎಲ್ಲರೂ ಹೊಟ್ಟೆ ಹಸಿದಾಗ ಅಲ್ಲಿ ಬಂದು ಸೇರುತ್ತಿದ್ದರು.

ಊಟದ ಪರಿಸ್ಥಿತಿಯೇ ಹೀಗಿದ್ದ ಮೇಲೆ ಇನ್ನು ಬಟ್ಟೆಯ ಕಥೆಯಂತೂ ಹೇಳುವುದೇ ಬೇಡ. ಅದೊಂದು ಘನಘೋರ ಕಣ್ಣೀರಿನ ವ್ಯಥೆ. ಕೈಯಲ್ಲಿ ರೊಕ್ಕ ಉಳಿಯದ ಕಾರಣ ಹೊಸ ಬಟ್ಟೆ ಹೊಲಿಸಿಕೊಳ್ಳುವುದು ನಮಗೆ ಎಂದೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟೋ ಇಷ್ಟೋ ನೆಟ್ಟಗಿದ್ದ ಒಂದು ಜೊತೆ ಬಟ್ಟೆಗಳನ್ನೇ ದಿನಾ ಒಗೆದು ಒಣಗಿಸಿಕೊಂಡು ಹೋಗಬೇಕಾಗಿತ್ತು. ನಮಗೆ ಬೇಸಿಗೆಯಲ್ಲಿ ಸಮಸ್ಯೆಯಿರಲಿಲ್ಲ. ಈ ಸುಡುಗಾಡು ಮಳೆಗಾಲ ಬಂದರಂತೂ ಪ್ರಾಣವೇ ಹೋದಷ್ಟು ಹಿಂಸೆಯಾಗುತ್ತಿತ್ತು. ಅಂಗಿಗಳೇನೋ ಒಂದಿಷ್ಟು ಗಾಳಿಗಾದರೂ ಸಿಕ್ಕು ಒಂದಿಷ್ಟು ಒಣಗಿ ಬಿಡೋವು. ಹಾಳಾದ ಈ ಪ್ಯಾಂಟು ಮತ್ತು ಒಳ ಉಡುಪುಗಳು ಮಾತ್ರ ಏನು ಮಾಡಿದರೂ ಒಣಗುತ್ತಿರಲಿಲ್ಲ.

ಮೇಲಾಗಿ ನಮ್ಮಗಳ ಹತ್ತಿರ ಇಸ್ತ್ರಿ ಪೆಟ್ಟಿಗೆಯೂ ಇರುತ್ತಿರಲಿಲ್ಲ. ಹೀಗಾಗಿ ಶೀತ ನುಂಗಿಕೊಂಡ ಅವು  ಕೆಟ್ಟ ಹಟ ಹಿಡಿದು ಒಣಗದೆ ಕುಂತು ಬಿಡೋವು. ಹಂಗೆ ಹಸಿಯಾಗಿ ಅವನ್ನು ಹಾಕಿಕೊಂಡರೂ ಕಷ್ಟ. ಹಾಕಿಕೊಳ್ಳದೆ ಕಾಲೇಜಿಗೆ ಹೋಗುವುದು ಇನ್ನೊಂದು ಥರದ ಕಷ್ಟ. ಇಂಥ ಪ್ರಾಣ ಸಂಕಟದಲ್ಲಿ ಸಿಕ್ಕು ಒದ್ದಾಡುವ ಯಾತನೆ ಯಾವ ಶತ್ರುವಿಗೂ ಬರಬಾರದು. ಆದರೆ ನನ್ನ ಪಾಲಿಗದು ಒಲಿದು ಬಂದೇ ಬಿಟ್ಟಿತು. ಒಣಗದ ಹಸಿಬಟ್ಟೆ ಒಮ್ಮೆ ಹಾಕಿಕೊಂಡವರು ಯಾರಾದರೂ ಇದ್ದರೆ ಅವರಿಗೆ ನಾನು ಹೇಳುತ್ತಿರುವ ಈ ಧರ್ಮ ಸಂಕಟ ಚೆನ್ನಾಗಿ ಅರ್ಥವಾದೀತು.

ಅವತ್ತು ತುಂಬಾ ಟೈಮಾಗಿತ್ತು. ಒಂದು ಕ್ಷಣ ಲೇಟಾದರೂ ಆ ಪ್ರಿನ್ಸಿಪಾಲ ಭೂಮಿ ಆಕಾಶ ಒಂದು ಮಾಡುವ ಮನುಷ್ಯ. ಜತೆಗೆ ಬೇಕಂತಲೇ ಹುಡುಗರೆದುರು ಕರೆದು, ಕಾರಿಡಾರಿನಲ್ಲಿ ನಿಲ್ಲಿಸಿಕೊಂಡು ಮರ್ಯಾದೆ ಕಳೆಯುವ ಕಿರಾತಕ ಅವನು. ಕಾಲೇಜಿನಲ್ಲಿ ಪರ್ಮನೆಂಟ್ ಹುದ್ದೆಯಲ್ಲಿದ್ದವರು ಯಾರ್‍್ಯಾರೂ ಅವನ ಮಾತಿಗೆ ಕ್ಯಾರೇ ಎನ್ನುತ್ತಿರಲಿಲ್ಲ. ಹೀಗಾಗಿ ಅರೆಕಾಲಿಕ ಉಪನ್ಯಾಸಕರಾಗಿದ್ದ ಜೀತದಾಳುಗಳಾದ ನಮ್ಮ ಮೇಲೆ  ಅವಕಾಶ ಸಿಕ್ಕಾಗೆಲ್ಲಾ ಹತ್ತು ಕೂರುತ್ತಿದ್ದ. ಎಷ್ಟೇ ಅವಮಾನವಾದರೂ ನಾವು ಉಸಿರೆತ್ತುವಂತಿರಲಿಲ್ಲ.

ಆ ಪ್ರಿನ್ಸಿಪಾಲನ ಭಯದ ದೆಸೆಯಿಂದ ನಾನವತ್ತು ಹಸಿ ಬಟ್ಟೆಯನ್ನೇ ಏರಿಸಿಕೊಂಡು ಕಾಲೇಜಿಗೆ ಹೋಗಿಬಿಟ್ಟೆ. ಮೊದಮೊದಲು ಮೈಯ ಕಾವಿಗೆ ಹೊಂದಿಕೊಂಡು ಏನೋ ಒಂಥರ ಖುಷಿ ಕೊಟ್ಟ ಆ ಪ್ಯಾಂಟು ಮತ್ತು ಒಳ ಉಡುಪು ಜೊತೆಯಾಗಿ ಆಯಕಟ್ಟಿನ ಜಾಗದಲ್ಲೇ ವಿಪರೀತ ಕಾಟ ಕೊಡಲಾರಂಭಿದವು. ಪಾಠ ಮಾಡಲು ಮಕ್ಕಳ ಮುಂದೆ ನಿಂತ ಮೇಲೆ ಸಣ್ಣಗೆ ಶುರುವಾದ ಕಡಿತ, ಕೊರೆತವಾಗಿ ಕಾಲಾನಂತರ ಪರಾಕಾಷ್ಠೆಯನ್ನು ಮುಟ್ಟತೊಡಗಿತು. ಮೈಯ ಚರ್ಮ ಪರಪರ ಎಂದು ಕೆರೆದುಕೊಳ್ಳುವಂತೆ ನನ್ನ ಹುರಿದುಂಬಿಸುತ್ತಿತ್ತು. ಆದರೆ, ಮಕ್ಕಳ ಮುಂದೆ ಹೀಗೆಲ್ಲಾ ಎಲ್ಲೆಲ್ಲೋ ಕೈ ಹಾಕಿ ತುರಿಸಿಕೊಳ್ಳುವುದು ಸಾಧ್ಯವೇ? ಮೇಲಾಗಿ, ನೂರು ಮಕ್ಕಳ ಇನ್ನೂರು ಹೊಳೆಯುವ ಕಣ್ಣುಗಳು ಹಚ್ಚಿಟ್ಟ ಹಣತೆಗಳಂತೆ ನನ್ನನ್ನೇ ದುರುದುರು ನೋಡುತ್ತಿವೆ.

ನನ್ನ ಒಂದೊಂದು ಸಣ್ಣ ಚಲನೆಯನ್ನೂ ಅವು ಎಡಬಿಡದೆ ಗಮನಿಸುತ್ತಿವೆ. ಛೇ! ಈಗ ಏನು ಮಾಡುವುದು? ಎಲ್ಲಿಗೆ ಓಡಿ ಹೋಗುವುದು? ತುರಿಸಿಕೊಳ್ಳದೆ ಹೇಗೆ ಸಹಿಸಿಕೊಳ್ಳುವುದು? ಒಂದೂ ತೋಚದ ನಾನು ನಿಂತಲ್ಲೇ ಸಂಕಟಪಡತೊಡಗಿದೆ. ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ನುಲಿಯತೊಡಗಿದೆ. ಏನು ಮಾಡಿದರೂ ಕೆರೆತದ ತೀವ್ರತೆ ಕಡಿಮೆಯಾಗುತ್ತಿಲ್ಲ. ಆ ಹಾಳು ಕೆರೆತ ಅವತ್ತು ನನ್ನ ಮರ್ಯಾದೆಯನ್ನು ಹುಡುಗರೆದುರು ಕಳೆಯಲೇಬೇಕೆಂದು ದೃಢಸಂಕಲ್ಪ ಮಾಡಿಬಿಟ್ಟಿತ್ತು.

ನಾನಿತ್ತ ಮಕ್ಕಳಿಗೆ ಗೌತಮಬುದ್ಧ ಮನೆ, ಮಡದಿ, ಮಕ್ಕಳನ್ನು ತ್ಯಜಿಸಿ ತಪಸ್ಸಿಗೆ ಹೋಗುವ ಪರಿತ್ಯಾಗದ ಸಂದರ್ಭವನ್ನು ಪಾಠದಲ್ಲಿ ವಿವರಿಸುತ್ತಿದ್ದೆ. ಗೌತಮ ಎಲ್ಲ ವನ್ನೂ ತ್ಯಜಿಸಿ ಹೋಗುವಾಗ ಸುತ್ತ ಮುತ್ತ ಕತ್ತಲಿತ್ತು ಎಂದು ಹೇಳುತ್ತಿದ್ದೆ. ಅಂಥದ್ದೇ ಕತ್ತಲೊಂದು ಈಗ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತಲ್ವ ಎಂದು ನನ್ನ ಮನಸ್ಸು ನನ್ನನ್ನೇ ಕೇಳುತ್ತಿತ್ತು. ಹಾಗಿದ್ದರೆ, ಎಲ್ಲವನ್ನು ಕಿತ್ತೆಸೆಯಬಹುದಿತ್ತಲ್ಲ ಎಂದು ಆಲೋಚನೆ, ಸಲಹೆ ಕೊಡುತ್ತಿತ್ತು. ಒದ್ದೆಯಾದ ಬಟ್ಟೆಗಳು ಮೈ ಶಾಖಕ್ಕೆ ತಾಗಿ ತಾವಾಗಿಯೇ ಒಣಗಿ ಬಿಡುತ್ತವೆ ಎನ್ನುವ ಹುಂಬ ಸಿದ್ಧಾಂತ ನಂಬಿ ನಾನು ಫಜೀತಿಗೆ ಸಿಕ್ಕಿದ್ದೆ.

ಈ ಪರಿಸ್ಥಿತಿಯಿಂದ ಪಾರಾಗಲು  ತಕ್ಷಣಕ್ಕೆ ನನಗೆ ಯಾವುದಾರೊಂದು  ಐಡಿಯಾ ಬೇಕಾಗಿತ್ತು. ಸದ್ಯ ಹೇಗೋ ಹೊಳೆಯಿತು. ತಕ್ಷಣ ಪಾಠ ನಿಲ್ಲಿಸಿ ಮಕ್ಕಳೇ ಒಂದು ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ ಎಂದೆ. ಅವಕ್ಕೆ ಆಶ್ಚರ್ಯ. ಇದೇನಿದು ಮಾಡುವ ಪಾಠ ಅರ್ಧಕ್ಕೆ ನಿಲ್ಲಿಸಿ ಈ ಮೇಷ್ಟ್ರು ಗಾದೆ ಮಾತನ್ನು ವಿಸ್ತರಿಸಲು ಹೇಳುತ್ತಿದ್ದಾರಲ್ಲ ಎಂದು. ಹೀಗಾಗಿ, ಎಲ್ಲಾ ಹುಡುಗರು ಒಟ್ಟಿಗೆ ಗೊಣಗಿಕೊಂಡರು. ಪುಸ್ತಕ ಮುಚ್ಚಿ, ರಫ್ ನೋಟ್‌ಗಳನ್ನು ಎಳೆದುಕೊಂಡರು. ವಿಷಯ ಏನ್ ಸಾರ್ ಎಂದು ರಾಗ ಎಳೆದು ಕೇಳಿದರು. ‘ಇಲಿಗೆ ಪ್ರಾಣ ಸಂಕಟ ಬೆಕ್ಕಿಗೆ ಚೆಲ್ಲಾಟ’ ಇದರ ಮೇಲೆ ಬರೀರಿ ಎಂದೆ. ಅವರಿಗೆ ನನ್ನ ನಡವಳಿಕೆ ಸ್ವಲ್ಪವೂ ಅರ್ಥವಾಗಲಿಲ್ಲ. 

ನನ್ನ ಪ್ಲಾನ್ ಏನಾಗಿತ್ತೆಂದರೆ; ಬರೆಯುವಾಗ ಮಕ್ಕಳು ಕತ್ತನ್ನು ಮೇಲೆತ್ತುವುದಿಲ್ಲ. ಇದರಿಂದ ಅವರು ನನ್ನ ದುರುಗುಟ್ಟಿಕೊಂಡು ನೋಡುವುದು ತಪ್ಪುತ್ತದೆ. ಅದೇ ನನಗೆ ವರದಾನವಾದರೆ ಆಗ ಡಯಾಸಿನ ಹಿಂದೆ ನಿಂತು ಉಪಾಯವಾಗಿ  ಸಾಧ್ಯವಾದಷ್ಟು ಮೈ ಪರಚಿಕೊಳ್ಳಬಹುದಲ್ಲ ಎಂದು. ನನ್ನ ಉಪಾಯ ಫಲಿಸಿ ಏನೋ ಒಂದು ಥರ ಹಿತವೆನಿಸತೊಡಗಿತು.

ಆದರೆ ಅಲ್ಲೂ ಎಂದು ಎಡವಟ್ಟು ನನಗಾಗಿ ಕಾಯುತ್ತಿತ್ತು. ಮೊದಲ ಬೆಂಚಿನ ಕೊನೆಯಲ್ಲಿ ಕೂತಿದ್ದ ಹುಡುಗಿಯೊಬ್ಬಳಿಗೆ ನನ್ನ ಕೆರೆತದ ದೃಶ್ಯ ನೇರವಾಗಿ ಕಾಣುತ್ತಿತ್ತು. ಅವಳ ಕಣ್ಣಿನಿಂದ ಇನ್ನೂ ನಾನು ಮರೆಯಾಗಿ ನಿಲ್ಲಲ್ಲು ಅಲ್ಲಿ ಸ್ಥಳವೇ ಇರಲಿಲ್ಲ. ಮೇಷ್ಟ್ರು ಇವತ್ಯಾಕೋ ವಿಚಿತ್ರವಾಗಿ ಕಜ್ಜಿ ನಾಯಿಯಂತೆ ಆಡುತ್ತಿದ್ದಾರಲ್ಲ ಎಂಬ ಗುಮಾನಿ ಬಂದು ಅವಳು ಬರೆದುಕೊಳ್ಳುವುದನ್ನು ನಿಲ್ಲಿಸಿ ಕಿಸಕಿಸವೆಂದು ನಗತೊಡಗಿದಳು. ಅಷ್ಟಕ್ಕೆ ಸುಮ್ಮನಾಗದ ಆಕೆ ಪಕ್ಕದ ಗೆಳತಿಗೆ ಸೂಕ್ಷ್ಮವಾಗಿ ಆ ಮಾಹಿತಿಯನ್ನು ರವಾನಿಸಿ ಬಿಟ್ಟಳು. ಓಹೋ! ಇದು ಹೀಗೆ ಬಿಟ್ಟರೆ ಇಡೀ ಕ್ಲಾಸಿಗೆ ಗೊತ್ತಾಗಿ ಮಾನ ಹರಾಜಾಗುವುದು ಗ್ಯಾರಂಟಿ ಎಂದು ತಿಳಿದು ಭಯಗೊಂಡ ನಾನು ಅವಳನ್ನು ಒಮ್ಮೆ ಕೋಪದಿಂದ ಕೆಕ್ಕರಿಸಿ ನೋಡಿದೆ. ಸುಮ್ಮನೆ ತಲೆ ತಗ್ಗಸಿ ಬರಿ ಎಂದು ಗದರಿಸಿದೆ. ಆದರೆ, ಅವಳು ಮಾತ್ರ ತನ್ನ ಮುಸಿಮುಸಿ ನಗೆಯನ್ನು ನಿಲ್ಲಿಸಲೇ ಇಲ್ಲ. ನಾನೂ ಹಾಳಾಗಿ ಹೋಗಲಿ ಎಂದು ಭಂಡನಾಗಿ ಅವಳನ್ನು ಗದರಿಸಿ ಕೂರಿಸುವ ವ್ಯರ್ಥ ಪ್ರಯತ್ನವನ್ನು ಕೈ ಬಿಟ್ಟು ನನ್ನ ಕೆಲಸದಲ್ಲಿ ನಿರತನಾದೆ. 

ಅರೆಕಾಲಿಕ ಉಪನ್ಯಾಸಕರಾದ ನಾವು ಬಡತನದಲ್ಲಿದ್ದರೂ, ನಾವುಗಳು ಪಾಠ ಮಾಡುವ ಕಾಲೇಜುಗಳು ಸಿಕ್ಕಾಪಟ್ಟೆ ಸಿರಿತನದಲ್ಲಿದ್ದವು. ಅಲ್ಲಿಗೆ ಓದಲು ಬರುವ ಮಕ್ಕಳು ಇನ್ನೂ ಸ್ಥಿತಿವಂತ ಕುಟುಂಬದವರು. ಆ ಸಂಸ್ಥೆಗಳಲ್ಲಿ ಕಾಯಂ ಆಗಿ ಸರ್ಕಾರದ ಅನುದಾನ ಪಡೆಯುವ ಕೆಲ ಉಪನ್ಯಾಸಕರ ದೌಲತ್ತೂ ಮತ್ತೊಂದು ಬಗೆಯದು. ಅವರು ತಮ್ಮೆಲ್ಲ ಕೆಲಸಗಳನ್ನು ಬಿಟ್ಟಿ ಕತ್ತೆಗಳಾದ ನಮ್ಮ ಮೇಲೆ ಹೊರೆಸುತ್ತಿದ್ದರು. ಅವರ ತರಗತಿಗಳನ್ನು ನಾವು ತೆಗೆದುಕೊಳ್ಳುವುದರಿಂದ ಹಿಡಿದು, ಅವರ ಎಲ್ಲಾ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಕೊಡುವ ಕೆಲಸವೂ ನಮ್ಮ ಹೆಗಲೇರುತ್ತಿತ್ತು. ಅವರ ಅಧೀನದಲ್ಲಿ ಕೆಲಸ ಮಾಡುವ ನಾವು ಹೆಚ್ಚೂ ಕಡಿಮೆ ಅವರ ಅಡಿಯಾಳುಗಳೇ ಆಗಿದ್ದೆವು. ಮೂರು ಕಾಸಿನ ಸಂಬಳ ಪಡೆಯುವ ಅರೆಕಾಲಿಕರಾದ ನಾವು ಪ್ರಿನ್ಸಿಪಾಲರಿಗೆ, ಕಾಲೇಜಿನ ಸಂಸ್ಥೆಯವರಿಗೆ, ಕೈ ತುಂಬ ಸಂಬಳ ಪಡೆದು ಅಂಡಲೆಯುವ ಹಿರಿಯ ಉಪನ್ಯಾಸಕರಿಗೆ ಡೊಗ್ಗು ಸಲಾಮು ಮಾಡಿ ಮಾಡಿ ನಮ್ಮ ಬೆನ್ನ ಮೂಳೆಗಳೇ ಬಾಗಿಹೋಗಿದ್ದವು.

ಅರೆಕಾಲಿಕ ಉಪನ್ಯಾಸಕ ಬದುಕಿನಲ್ಲಿ ಬಡತನ, ಅವಮಾನ, ಅಭದ್ರತೆಗಳೊಂದಿಗೆ ಸೆಣೆಸಾಡುವಾಗ ಜೀವನ ಅತ್ಯಂತ ಆಪ್ತವಾಗಿ ಕಾಣಿಸುತ್ತದೆ. ಕಡು ಕಷ್ಟದಲ್ಲೂ ಸುಖ, ನೆಮ್ಮದಿ ಸಿಗುತ್ತದೆ. ಅದೇ ಸಿರಿತನ, ಗೌರವ, ಸೇವಾ ಭದ್ರತೆ ಬಂದಂತೆ ಕಣ್ಣಿಗೆ ಪೊರೆ, ಹೊಟ್ಟೆಗೆ ನೆಣ, ಮನಸ್ಸಿಗೆ ಅಹಂಕಾರ, ಓದಿನಲ್ಲಿ ಸೋಂಬೇರಿತನ ಮೆತ್ತಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT