ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಬೆಂಗಳೂರಿನ ಮೂಲ ಸೌಕರ್ಯದ ಬಗೆ ಬಹಳ ಹೆಚ್ಚು ಮಾತನಾಡಿದವರು ಐ.ಟಿ. ಮಂದಿ. ರಾಜ್ಯದ ಒಟ್ಟು ಉತ್ಪನ್ನಕ್ಕೆ (ಜಿಎಸ್‌ಡಿಪಿ) ದೊಡ್ಡದೊಂದು ಪಾಲು ನೀಡುವ ಉದ್ಯಮವೊಂದರಲ್ಲಿರುವವರು ಹೀಗೆ ಮಾತನಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಈ ತಿಂಗಳಲ್ಲಿಯೂ ಬೆಂಗಳೂರಿನ ಐಟಿ ಕಂಪೆನಿಯೊಂದು ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸುದ್ದಿಯಾಗುವ ನಿರ್ಧಾರವೊಂದನ್ನು ಪ್ರಕಟಿಸಿತು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಸ್ಥಾಪಿಸುತ್ತಿರುವ ದೇವನಹಳ್ಳಿ ಐಟಿ ಪಾರ್ಕ್‌ನಲ್ಲಿ ನೂರು ಎಕರೆಗಳಷ್ಟು ಭೂಮಿಯಲ್ಲಿ ಇನ್ಫೊಸಿಸ್ ತಂತ್ರಾಂಶ ಅಭಿವೃದ್ಧಿ ಕೇಂದ್ರವೊಂದನ್ನು ಆರಂಭಿಸಲು ಉದ್ದೇಶಿಸಿತ್ತು. ಇದಕ್ಕಾಗಿ ಕರ್ನಾಟಕ ಸರ್ಕಾರ ಈಗಾಗಲೇ 40 ಎಕರೆಗಳಷ್ಟು ಭೂಮಿಯನ್ನೂ ಕೊಟ್ಟಿದೆ. ಕಂಪೆನಿ ಇನ್ನೂ ಅರವತ್ತು ಎಕರೆಗಳಿಗೆ ಬೇಡಿಕೆಯನ್ನಿಟ್ಟಿದೆ.

ಈ ತಿಂಗಳ ಆರಂಭದಲ್ಲಿ ಸರ್ಕಾರ ಮೂಲ ಸೌಕರ್ಯ ಕಲ್ಪಿಸುವ ವಿಷಯದಲ್ಲಿ ನಿಧಾನ ಧೋರಣೆ ತಳೆದಿರುವುದರಿಂದ ಯೋಜನೆಯಿಂದ ಹಿಂದೆ ಸರಿಯುವುದಾಗಿ ಇನ್ಫೊಸಿಸ್ ಪ್ರಕಟಿಸಿತು. ಈ ಮಧ್ಯೆ ವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮಲ್ಲಿಗೆ ಬರುವ ಉದ್ಯಮಗಳಿಗೆ ಭಾರಿ ರಿಯಾಯಿತಿಯನ್ನೂ ಪ್ರಕಟಿಸಿದ್ದರು. ಮಾಹಿತಿ ತಂತ್ರಜ್ಞಾನದ ವಿಷಯದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನಡುವಣ ಸ್ಪರ್ಧೆಯೊಂದನ್ನು ಹುಟ್ಟು ಹಾಕಿರುವ ಮಾಧ್ಯಮಗಳ ಮಟ್ಟಿಗೆ ಇನ್ಫೊಸಿಸ್ ನಿರ್ಧಾರ ಒಂದು ಬಿರುಗಾಳಿಯಂತೆ ಕಾಣಿಸಿತು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ತಕ್ಷಣವೇ ಕಾರ್ಯಾಚರಣೆಗೆ ಇಳಿದು ‘ಇನ್ಫೊಸಿಸ್ ಅನ್ನು ಕರ್ನಾಟಕದಲ್ಲೇ ಉಳಿಸುವ’ ಕೆಲಸ ಮಾಡಿದ್ದು ಈ ಸ್ಪರ್ಧೆ ನಿಜವೆನ್ನುವ ವಾತಾವರಣ ಸೃಷ್ಟಿಗೂ ಕಾರಣವಾಯಿತು.

ದೇವನಹಳ್ಳಿ ಐಟಿ ಪಾರ್ಕ್ ಮತ್ತು ಇನ್ಫೊಸಿಸ್ ಅಸಮಾಧಾನಕ್ಕೆ ಸಂಬಂಧಿಸಿದ ವಿವಾದ ಸುದ್ದಿಯಾದಾಗ ನಿಜಕ್ಕೂ ಕುತೂಹಲಕಾರಿ ಎನಿಸುವಂತಹ ಪ್ರತ್ರಿಕ್ರಿಯೆಗಳು ಕಾಣಿಸಿಕೊಂಡದ್ದು ಸಾಮಾಜಿಕ ಜಾಲ ತಾಣಗಳಲ್ಲಿ. ಕನ್ನಡ ಗ್ರಾಹಕರ ಒಕ್ಕೂಟದ ಅಧ್ಯಕ್ಷ ಗಣೇಶ್ ಚೇತನ್ ಅವರು ಎತ್ತಿದ ಪ್ರಶ್ನೆಗಳು ಹೀಗಿವೆ ‘ಕರ್ನಾಟಕ ಸರ್ಕಾರ ಐಟಿ ಕಂಪೆನಿಗಳಿಗಷ್ಟೇ ಅನುಕೂಲಗಳನ್ನು ಕಲ್ಪಿಸುತ್ತಿದೆ? ಈ ಕಂಪೆನಿಗಳ ನಿರಂತರ ಬೆದರಿಕೆಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು? ಈ ಕಂಪೆನಿಗಳು ಸ್ಥಳೀಯರಿಗಾಗಿ ಎಷ್ಟು ಉದ್ಯೋಗಗಳನ್ನು ಸೃಷ್ಚಿಸಿವೆ? ಇವು ಕರ್ನಾಟಕ ಸರ್ಕಾರಕ್ಕೆ (ಭಾರತ ಸರ್ಕಾರಕ್ಕಲ್ಲ) ಎಷ್ಟು ತೆರಿಗೆ ಕೊಡುತ್ತಿವೆ? ಈ ಕಂಪೆನಿಗಳ ವಿವಿಧ ಅವಶ್ಯಕತೆಗಳನ್ನು ಪೂರೈಸುತ್ತಿರುವವರಲ್ಲಿ ಸ್ಥಳೀಯರೆಷ್ಟಿದ್ದಾರೆ? ಎಲ್ಲದಕ್ಕಿಂತಲೂ ಮುಖ್ಯವಾಗಿ ಕರ್ನಾಟಕ ಸರ್ಕಾರ ಈ ಕಂಪೆನಿಗಳನ್ನು ಓಲೈಸಲು ಮಿತಿ ಮೀರಿ ಪ್ರಯತ್ನಿಸುವುದೇಕೆ?” ಗಣೇಶ್ ಚೇತನ್ ಎತ್ತಿದ ಪ್ರಶ್ನೆಗಳಲ್ಲಿ ಬಹಳ ಮುಖ್ಯವಾದುದು ಕೊನೆಯ ಪ್ರಶ್ನೆ. ಈ ಪ್ರಶ್ನೆ ಎದುರಾದಾಗಲೆಲ್ಲಾ ಪ್ರಶ್ನೆ ಕೇಳಿದವರ ಹಿನ್ನೆಲೆಯನ್ನು ಮುಖ್ಯವಾಗಿಟ್ಟುಕೊಂಡು ಚರ್ಚಿಸುವ ಅಭ್ಯಾಸವೊಂದಿದೆ. ಇದರಿಂದ ಪ್ರಶ್ನೆಯ ಮಹತ್ವವೇನೂ ಕಡಿಮೆಯಾಗುವುದಿಲ್ಲ.

ಐಟಿ ಉದ್ಯಮ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡದ್ದಕ್ಕೊಂದು ಇತಿಹಾಸವಿದೆ. ತೊಂಬತ್ತರ ದಶಕದ ಆರಂಭದಲ್ಲಿ ಅಂದರೆ ಆರ್ಥಿಕ ಉದಾರೀಕರಣ ಆರಂಭವಾಗುವ ಹೊತ್ತಿಗೆ ಬೆಂಗಳೂರಿನಲ್ಲಿ ಹೊಸ ಆರ್ಥಿಕತೆಗೆ ಬೇಕಾದ ಎಲ್ಲವೂ ಇತ್ತು. ಅದಕ್ಕೆ ಕಾರಣವಾದುದು ಇಲ್ಲಿ ಸ್ಥಾಪನೆಯಾದ ಸಾರ್ವಜನಿಕ ಸ್ವಾಮ್ಯದ ಅನೇಕ ಉದ್ಯಮಗಳು, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡ ರಾಷ್ಟ್ರೀಯ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರ ತಾಂತ್ರಿಕ ಶಿಕ್ಷಣದಲ್ಲಿ ವಹಿಸಿದ ಆಸಕ್ತಿ. ಇವೆಲ್ಲಾ ಒಟ್ಟಾದಾಗ ಬೆಂಗಳೂರಿನಲ್ಲಿ ಜ್ಞಾನಾಧಾರಿತ ಉದ್ಯಮಕ್ಕೆ ಬೇಕಿರುವ ಮೂಲ ಸೌಕರ್ಯ ಸೃಷ್ಟಿಯಾಯಿತು. ಹೀಗೆ ಸಿದ್ಧ ಮೂಲ ಸೌಕರ್ಯವಿದ್ದ ನಗರವೊಂದರ ಮೇಲೆ ಮಾಹಿತಿ ತಂತ್ರಜ್ಞಾನ ಉದ್ಯಮ ತನ್ನನ್ನು ಸ್ಥಾಪಿಸಿಕೊಂಡಿತು ಎಂಬ ಅಂಶ ಎಲ್ಲರಿಗೂ ಮರೆತು ಹೋಗಿದೆ. ಅಷ್ಟು ಮಾತ್ರವಲ್ಲ ಸದಾ ಮೂಲ ಸೌಕರ್ಯದ ಬಗ್ಗೆ ಮಾತನಾಡುವ ಐಟಿ ಮಂದಿ ತಮ್ಮ ಉದ್ಯಮ ಈ ಕ್ಷೇತ್ರಕ್ಕೆ ಯಾವ ಕಾಣಿಕೆಯನ್ನೂ ಕೊಟ್ಟಿಲ್ಲ ಎಂಬುದರ ಕುರಿತು ಜಾಣ ಕುರುಡು ಮತ್ತು ಕಿವುಡನ್ನು ನಟಿಸುತ್ತಿರುತ್ತಾರೆ.

ಕರ್ನಾಟಕ ಸರ್ಕಾರವೇ ರಚಿಸಿದ್ದ ಮ್ಯಾನುಫ್ಯಾಕ್ಚರಿಂಗ್ ಟಾಸ್ಕ್ ಫೋರ್ಸ್ ಕಳೆದ ವರ್ಷ ನೀಡಿದ ವರದಿ ಹೇಳುತ್ತಿರುವಂತೆ ತೊಂಬತ್ತರ ದಶಕದ ಅಂತ್ಯದ ತನಕವೂ ಬೆಂಗಳೂರು ಉತ್ಪಾದನಾ ಕ್ಷೇತ್ರಕ್ಕೆ ಅತಿ ಹೆಚ್ಚು ಕಾಣಿಕೆ ನೀಡುತ್ತಿದ್ದ ದೇಶದ ಮೊದಲ ಮೂರು ರಾಜ್ಯಗಳಲ್ಲಿ ಒಂದಾಗಿತ್ತು. ಆದರೆ ಆಮೇಲಿನ ವರ್ಷಗಳಲ್ಲಿ ಇದು ಕುಸಿಯುತ್ತಲೇ ಬಂದಿದೆ. ರಾಜ್ಯದ ಒಟ್ಟು ಉತ್ಪನ್ನಕ್ಕೆ (ಜಿಎಸ್‌ಡಿಪಿ) ಸೇವಾ ವಲಯದ ಪಾಲು 2011–-12ರ ಸಾಲಿನ ಲೆಕ್ಕಾಚಾರದಂತೆ ಶೇಕಡ 56.3ರಷ್ಟಿದೆ. ಇದೇ ವೇಳೆ ಉತ್ಪಾದನಾ ವಲಯದ ಪ್ರಮಾಣ ಶೇಕಡ 26.5 ರಷ್ಟಿದೆ. ಇವೆರಡೂ ಕ್ರಮವಾಗಿ 2004-05ರ ಸಾಲಿನಲ್ಲಿ ಶೇಕಡ 51 ಮತ್ತು ಶೇಕಡ 29.1ರಷ್ಟಿತ್ತು. ಅಂದರೆ ಸೇವಾ ವಲಯದ ಪಾಲು ಹೆಚ್ಚುತ್ತಿರುವಂತೆಯೇ ಉತ್ಪಾದನಾ ವಲಯದಲ್ಲಿ ಕುಸಿತ ಕಂಡುಬರುತ್ತಿದೆ.

ಸಮತೋಲಿತ ಔದ್ಯಮಿಕ ಅಭಿವೃದ್ಧಿಗೆ ಬಹಳ ಮುಖ್ಯವಾಗಿ ಬೇಕಿರುವುದು ಪ್ರಾಥಮಿಕ ವಲಯ, ಉತ್ಪಾದನಾ ವಲಯ ಮತ್ತು ಸೇವಾ ವಲಯಗಳಲ್ಲಿಯೂ ಸಮಾನ ಬೆಳವಣಿಗೆ ಇರಬೇಕು. ಒಂದು ವಲಯದ ಅಭಿವೃದ್ಧಿ ಮತ್ತೊಂದರ ಕುಸಿತಕ್ಕೆ ಕಾರಣವಾಗುತ್ತಾ ಹೋದರೆ ಅದರ ದೂರಗಾಮಿ ಪರಿಣಾಮಗಳು ಕೆಟ್ಟದಾಗಿರುತ್ತವೆ. ಅದು ಈಗಾಗಲೇ ಬೆಂಗಳೂರು ನಗರದಲ್ಲಿ ಕಾಣಿಸಿಕೊಂಡಿದೆ. ಐಟಿ ಮಂದಿ ಇಂದು ಮತ್ತೆ ಮತ್ತೆ ಹೇಳುತ್ತಿರುವ ಮೂಲ ಸೌಕರ್ಯ ಕೊರತೆಯ ಹಿಂದಿರುವುದು ತಾವೇ ಎಂಬುದನ್ನು ಮರೆಯುತ್ತಿದ್ದಾರೆ.

ಕಳೆದ ಒಂದೂವರೆ ದಶಕದಲ್ಲಿ ಬೆಂಗಳೂರಿನಲ್ಲಿ ಸರ್ಕಾರ ನಡೆಸಿದ ಮೂಲ ಸೌಕರ್ಯ ಅಭಿವೃದ್ಧಿಗಳೆಲ್ಲವೂ ಐಟಿ ಉದ್ಯಮವನ್ನು ಕೇಂದ್ರವಾಗಿಟ್ಟುಕೊಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವಾಗ ಅದು ಪರಿಗಣಿಸಿದ್ದು ಕೇವಲ ಐಟಿ ಉದ್ಯಮವನ್ನು. ಅಷ್ಟೇಕೆ ಫ್ಲೈ ಓವರ್‌ಗಳು, ಸಿಗ್ನಲ್ ರಹಿತ ರಸ್ತೆಗಳ ವಿಷಯ ಬಂದಾಗಲೂ ಸರ್ಕಾರದ ಕಣ್ಣ ಮುಂದೆ ಇದ್ದದ್ದು ಐಟಿ ಉದ್ಯಮದ ಬೇಡಿಕೆಯೇ. ಎಲೆಕ್ಟ್ರಾನಿಕ್ ಸಿಟಿಯ ಕಡೆಗೆ ಹೋಗುವ ಆರು ಪಥದ ರಸ್ತೆಯ ಮಧ್ಯೆಯೇ ಒಂದು ಎಲಿವೇಟೆಡ್ ರಸ್ತೆ ಮಾಡಿದ್ದು ಯಾರಿಗಾಗಿ? ದೇವನಹಳ್ಳಿಯ ಉದ್ದೇಶಿದ ಐಟಿ ಪಾರ್ಕ್‌ಗಾಗಿ ಈಗಾಗಲೇ ಶೇಕಡ 70ರಷ್ಟು ಮುಗಿದಿರುವ ಮೂಲ ಸೌಕರ್ಯ ಅಭಿವೃದ್ಧಿಯ ಹಿಂದಿನ ಕಾರಣವೂ ‘ಐಟಿ ಉದ್ಯಮದ ಅನುಕೂಲ’. ಈಗಾಗಲೇ ಇರುವ ವರ್ತುಲ ರಸ್ತೆಯ ಮೇಲೆ ಹೊರೆಗೆ ಕಾರಣವಾಗಿರುವುದು ಏನು ಎಂದು ಕೇಳಿದರೆ ಸಿಗುವ ಉತ್ತರವೂ ಐಟಿ ಉದ್ಯಮವೇ.

ಇಲ್ಲಿಯ ತನಕದ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರಕ್ಕೆ ಯಾವ ಬಗೆಯ ಉದ್ಯಮಕ್ಕೆ ಎಷ್ಟು ಭೂಮಿ ಬೇಕು ಎಂಬುದರ ಕುರಿತಂತೆ ಸ್ಪಷ್ಟತೆ ಇರುವಂತೆ ಕಾಣಿಸುತ್ತಿಲ್ಲ. ಮಂಜೂರು ಮಾಡಿದ ಭೂಮಿಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಅದರಲ್ಲಿ ರಾಜ್ಯದ ಜನತೆಗೇನು ಸಿಗುತ್ತದೆ ಎಂಬುದರ ಕುರಿತಂತೂ ಸರ್ಕಾರಕ್ಕೆ ಕಾಳಜಿ ಇರುವುದಕ್ಕೂ ಯಾವ ಸಾಕ್ಷ್ಯಗಳೂ ಇಲ್ಲ. ಕೇವಲ ಒಟ್ಟಾರೆ ಅಂಕಿ–ಅಂಶಗಳಲ್ಲಿ ಎಲ್ಲದಕ್ಕೂ ಉತ್ತರ ಕಂಡುಕೊಳ್ಳುವ ಪ್ರಯತ್ನಗಳಷ್ಟೇ ಕಾಣಿಸುತ್ತವೆ. ಇವೆಲ್ಲವೂ ಅಂತಿಮವಾಗಿ ಅಸಮತೋಲಿತ ಅಭಿವೃದ್ಧಿಯಲ್ಲಿ ಕೊನೆಗೊಳ್ಳುತ್ತವೆ. ಸದ್ಯ ಕರ್ನಾಟಕವಿರುವುದು ಈ ಸ್ಥಿತಿಯಲ್ಲಿ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಬೇಕಿರುವುದು ಸ್ಥಿತಪ್ರಜ್ಞ ನಿಲುವುಗಳು.

ಆಂಧ್ರಪ್ರದೇಶ ಘೋಷಿಸಿರುವ ರಿಯಾಯಿತಿಗಳಿಗೆ ಮನಸೋತು ಒಂದೋ ಎರಡೂ ಅಥವಾ ಹತ್ತು ಉದ್ಯಮಗಳೇ ಕರ್ನಾಟಕದಿಂದ ಕಾಲ್ತೆಗೆದರೂ ಅದಕ್ಕೆ ಭಯಬೀಳುವುದಿಲ್ಲ ಎಂಬ ಸಂದೇಶವೊಂದನ್ನು ಸರ್ಕಾರಕ್ಕೆ ನೀಡಲು ಸಾಧ್ಯವಿದ್ದಿದ್ದರೆ ಮುಖ್ಯಮಂತ್ರಿ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಿ ‘ಉಳಿಸಿಕೊಳ್ಳುವ’ ಕಾರ್ಯಾಚರಣೆ ನಡೆಸುವ ಅಗತ್ಯ ಬರುತ್ತಿರಲಿಲ್ಲ. ಅದಕ್ಕೆ ಬೇಕಿರುವುದು ಸಮಗ್ರ ದೃಷ್ಟಿಕೋನವುಳ್ಳ ಮೂಲ ಸೌಕರ್ಯ ಅಭಿವೃದ್ಧಿಯ ಪರಿಕಲ್ಪನೆಗೆ ಚಾಲನೆ ನೀಡುವುದು.

ರಿಯಾಯಿತಿಗಳನ್ನು ಕೇಳುವ ಉದ್ಯಮಗಳಿಗೆ ಕರ್ನಾಟವೆಂದರೆ ಬೆಂಗಳೂರಷ್ಟೇ ಅಲ್ಲ ಎನ್ನುವ ಧೈರ್ಯ ಕೂಡಾ ಸರ್ಕಾರಕ್ಕೇಕೆ ಇಲ್ಲವಾಗಿದೆ? ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ರಿಯಾಯಿತಿಗಳನ್ನು ಘೋಷಿಸುತ್ತಿರುವುದು ಬೆಂಗಳೂರಿನಂಥ ನಗರವನ್ನು ತಮ್ಮಲ್ಲಿಟ್ಟುಕೊಂಡೇನೂ ಅಲ್ಲ ಎಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಆಂಧ್ರಪ್ರದೇಶ ನೀಡುವ ಎಲ್ಲಾ ರಿಯಾಯಿತಿಗಳನ್ನು ಒಪ್ಪಿಕೊಂಡು ಹೋಗುವ ಕಂಪೆನಿಗಳು ಗುಲ್ಬರ್ಗ, ರಾಯಚೂರು, ಬೆಳಗಾವಿ, ಧಾರವಾಡಕ್ಕೂ ಹೋಗಬಲ್ಲವು ಎಂಬ ಸರಳ ಸತ್ಯ ನಮ್ಮ ಸರ್ಕಾರಕ್ಕೆ ಹೊಳೆಯುತ್ತಿಲ್ಲವೇ? ಹಾಗೆ ನೋಡಿದರೆ ಈ ನಗರಗಳು ಹತ್ತಿರದಲ್ಲೊಂದು ವಿಮಾನ ನಿಲ್ದಾಣವೂ ಇಲ್ಲದ ಆಂಧ್ರಪ್ರದೇಶದ ತಥಾಕಥಿತ ‘ರಿಯಾಯಿತಿ ನಗರ’ಗಳಿಗಿಂತ ಉತ್ತಮವಾಗಿಲ್ಲವೇ?

ಈ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವುದಕ್ಕೆ ತಂತ್ರಜ್ಞಾನವೆಂದರೆ ಕೇವಲ ಐಟಿಯಷ್ಟೇ ಅಲ್ಲ ಎಂಬುದನ್ನು ಅರಿಯಬೇಕಾಗುತ್ತದೆ. ಜ್ಞಾನಾಧಾರಿತ ಉದ್ಯಮವೊಂದನ್ನು ಬೆಳೆಸುವುದೆಂದರೆ ಐಟಿ ಕೂಲಿಗಳನ್ನು ಸೃಷ್ಟಿಸುವ ಕೆಲಸವಷ್ಟೇ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕ ತನ್ನ ಔದ್ಯಮಿಕ ಇತಿಹಾಸವನ್ನೇ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ. ತೊಂಬತ್ತರ ದಶಕದ ಆರಂಭದ ಹೊತ್ತಿಗೆ ಹೊಸ ಆರ್ಥಿಕತೆಗೆ ಸಿದ್ಧವಾಗಿದ್ದು ಹೇಗೆ ಎಂಬುದನ್ನು ನೋಡಿಕೊಂಡು ಅದರ ಮೂಲಕ ಭವಿಷ್ಯದ ಹೆಜ್ಜೆಗಳೇನಿರಬೇಕು ಎಂಬುದನ್ನು ಯೋಜಿಸಬೇಕಾಗಿದೆ. ಇದಕ್ಕೆ ಬೇಕಿರುವುದು ಓಲೈಕೆಯ ತಂತ್ರಗಳಲ್ಲ. ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಇಚ್ಛಾಶಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.