ಸಲ್ಲದ ಅನುಚಿತ ಕಾರ್ಯ

7

ಸಲ್ಲದ ಅನುಚಿತ ಕಾರ್ಯ

ಗುರುರಾಜ ಕರಜಗಿ
Published:
Updated:

ಒಂದು ಹಳ್ಳಿಯಲ್ಲಿ ಒಬ್ಬ ಬ್ರಾಹ್ಮಣನಿದ್ದ. ಅವನಿಗೆ ವೇದಬ್ಭವೆಂಬ ಮಂತ್ರ ಕರಗತವಾಗಿತ್ತು. ನಕ್ಷತ್ರಯೋಗ ಬಂದಾಗ ಆತ ಆ ಮಂತ್ರವನ್ನು ಪಠಿಸುತ್ತಾ ಆಕಾಶದ ಕಡೆಗೆ ನೋಡಿದಾಗ ಧನರಾಶಿ ಸುರಿಯುತ್ತಿತ್ತು. ಈ ಮಂತ್ರವನ್ನು ಕಲಿಯಲು ಬೋಧಿಸತ್ವ ಅವನಲ್ಲಿ ಶಿಷ್ಯತ್ವವನ್ನು ಪಡೆದಿದ್ದ.

ಒಮ್ಮೆ ಗುರು-ಶಿಷ್ಯರಿಬ್ಬರೂ ಕಾಡಿನಲ್ಲಿ ನಡೆದಿದ್ದರು. ಆಗ ಐದು ನೂರು ಜನ ಪೇಸನಕ ದರೋಡೆಕೋರರು ಇವರನ್ನು ಹಿಡಿದರು. ಅವರು ಗುರುವನ್ನು ಹಿಡಿದುಕೊಂಡು ಬೋಧಿಸತ್ವನಿಗೆ ಹಣ ತೆಗೆದುಕೊಂಡು ಬರಲು ಕಳುಹಿಸಿದರು. ಬೋಧಿಸತ್ವ ಹೊರಡುವ ಮುನ್ನ ಗುರುಗಳಿಗೆ ಹೇಳಿದ, ‘ಗುರುಗಳೇ ಇಂದು ರಾತ್ರಿ ನಕ್ಷತ್ರಯೋಗವಿದೆ. ದಯವಿಟ್ಟು ಈ ಕಳ್ಳರಿಗೋಸ್ಕರ ಹಣದ ಮಳೆ ತರಿಸಬೇಡಿ. ಅವರು ತಮ್ಮನ್ನು ನಾಶಗೊಳಿಸುತ್ತಾರೆ’.

ಅವನು ಹೋದ ಸ್ವಲ್ಪ ಸಮಯಕ್ಕೆ ಗುರು ಯೋಚಿಸಿದರು. ಕಳ್ಳರು ತಮ್ಮನ್ನು ಹಿಡಿದದ್ದು ಹಣಕ್ಕೋಸ್ಕರ. ಅವರಿಗೆ ಧನರಾಶಿ ಕೊಟ್ಟರೆ ನನ್ನನ್ನು ಬಿಟ್ಟು ಬಿಡುತ್ತಾರೆ ಎಂದುಕೊಂಡು ಮಂತ್ರ ಪಠಿಸಿ ರತ್ನಗಳ ಮಳೆ ಸುರಿಸಿದರು. ಕಳ್ಳರು ಆ ಹಣವನ್ನು ಬಾಚಿ ಓಡುವಷ್ಟರಲ್ಲಿ ಮತ್ತೊಂದು ಐದುನೂರು ಜನ ಕಳ್ಳರ ಗುಂಪು ಎದುರಿಗೆ ಬಂದಿತು. ಅವರು ಇನ್ನೂ ಭಯಾನಕವಾಗಿದ್ದರು. ಹಣಕ್ಕಾಗಿ ಇಬ್ಬರ ನಡುವೆ ಹೊಡೆದಾಟ ಶುರುವಾದಾಗ ಮೊದಲಿನ ಗುಂಪಿನ ನಾಯಕ ಹೇಳಿದ, ‘ನಿಮಗೆ ಹಣ ಬೇಕಾದರೆ ಈ ಬ್ರಾಹ್ಮಣನನ್ನು ಹಿಡಿಯಿರಿ. ಅವನೇ ಹಣದ ಮಳೆ ತರಿಸಿದ್ದು’. ಬ್ರಾಹ್ಮಣ ಗಾಬರಿಯಾಗಿ ಹೇಳಿದ, ‘ಈಗ ಅದು ಸಾಧ್ಯವಿಲ್ಲ. ನಕ್ಷತ್ರಯೋಗ ಬರುವುದು ಮುಂದಿನ ವರ್ಷವೇ’. ಕೋಪಗೊಂಡ ದರೋಡೆಕೋರರು ಬ್ರಾಹ್ಮಣನನ್ನು ಕತ್ತರಿಸಿ ತುಂಡು ಮಾಡಿದರು. ನಂತರ ಎರಡೂ ಕಳ್ಳರ ಗುಂಪಿನ ನಡುವೆ ಘನಘೋರ ಹೊಡೆದಾಟ ನಡೆದು ಎಲ್ಲರೂ ಸತ್ತು ಕೇವಲ ಇಬ್ಬರು ಮಾತ್ರ ಉಳಿದರು.

ಒಬ್ಬ ಖಡ್ಗ ಹಿಡಿದು ಧನರಾಶಿಯನ್ನು ಕಾಯುತ್ತ ನಿಂತ. ಮತ್ತೊಬ್ಬ ಹತ್ತಿರದ ಹಳ್ಳಿಗೆ ಆಹಾರ ತರಲು ಹೋದ. ಆಹಾರ ತರಲು ಹೋದವನು ಮರಳಿ ಬಂದರೆ ಹಣವನ್ನು ಹಂಚಿಕೊಳ್ಳಬೇಕಾಗುತ್ತದೆ. ಅದಕ್ಕೆ ಅವನು ಬಂದೊಡನೆ ಅವನನ್ನು ಕೊಲ್ಲಬೇಕೆಂದು ಧನರಾಶಿಯ ಹತ್ತಿರವಿದ್ದ ಕಳ್ಳ ಯೋಚಿಸಿದ. ಇನ್ನೊಬ್ಬನೂ ಹಾಗೆಯೇ ಯೋಚಿಸಿದ. ಮತ್ತೊಬ್ಬನನ್ನು ಮುಗಿಸಿಬಿಡಲು ಆಹಾರದಲ್ಲಿ ವಿಷ ಸೇರಿಸಿ ತಂದ. ಅವನು ಹತ್ತಿರ ಬಂದೊಡನೆ ಇನ್ನೊಬ್ಬ ಕತ್ತಿಯಿಂದ ಅವನನ್ನು ಕತ್ತರಿಸಿ ಕೊಂದೇ ಬಿಟ್ಟ. ಆಯ್ತು, ಇನ್ನು ಹಣವೆಲ್ಲ ನನ್ನದೇ ಎಂದು ಸಂತೋಷಪಟ್ಟು ಸ್ನೇಹಿತ ತಂದ ವಿಷಪೂರಿತ ಆಹಾರವನ್ನು ಹೊಟ್ಟೆ ತುಂಬ ತಿಂದು ಅವನೂ ಸತ್ತು ಹೋದ. ರಾಶಿ ಹಣಕ್ಕೆ ಯಾರೂ ದಿಕ್ಕಿಲ್ಲದಂತಾಯಿತು.

ಎರಡು ದಿನಗಳ ನಂತರ ಮರಳಿ ಬಂದ ಬೋಧಿಸತ್ವ ಹೆಣಗಳ ರಾಶಿಯನ್ನೇ ಕಂಡ. ಒಂದೆಡೆಗೆ ತನ್ನ ಗುರುಗಳ ಶವ, ಮುಂದೆ ಹೋದಂತೆ ಕಳ್ಳರ ಹೆಣಗಳು, ಇನ್ನೂ ಮುಂದೆ ಹೋದಾಗ ಧನರಾಶಿಯ ಪಕ್ಕ ಇಬ್ಬರು ಕಳ್ಳರ ಶವಗಳು ಕಂಡವು. ಅವನಿಗೆ ಅರ್ಥವಾಯಿತು. ಗುರುಗಳು ಕಳ್ಳರ ಕೈಯಿಂದ ಪಾರಾಗಿ ಸುಖವಾಗಿರಲು ಹಣದ ಮಳೆ ಕರೆದಿದ್ದಾರೆ. ನಂತರ ಹಣದಾಸೆಗೆ ಹೋರಾಡಿ ಕಳ್ಳರೆಲ್ಲರೂ ಸತ್ತು ಹೋಗಿದ್ದಾರೆ. ಬೋಧಿಸತ್ವ ಧನದ ರಾಶಿಯನ್ನು ಮನೆಗೆ ತಂದು ದಾನಧರ್ಮ ಮಾಡುತ್ತ ಬದುಕು ಸಾಗಿಸಿದ.

ಬದುಕಿನಲ್ಲಿ ಕಷ್ಟ ಪರಿಸ್ಥಿತಿಯಿಂದ ಪಾರಾಗಲು ಅಥವಾ ಉನ್ನತಿಯನ್ನು ಪಡೆಯಲು ಅನುಚಿತವಾದ ಮಾರ್ಗವನ್ನು ಹಿಡಿಯುವುದು ಅಪಾಯಕಾರಿ. ಆ ಕ್ಷಣದಲ್ಲಿ ಅದೊಂದು ಒಳ್ಳೆ ಉಪಾಯವೆನ್ನಿಸಬಹುದು. ಆದರೆ ದೀರ್ಘಕಾಲದಲ್ಲಿ ಅದೊಂದು ಶಾಪವೆಂದೇ ಕಾಣಬಹುದು. ಅನುಚಿತವಾದ ಯಾವುದೇ ಕಾರ್ಯ ಮಂಗಲವನ್ನುಂಟುಮಾಡಲಾರದು.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !