ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸಿಯ ಪರಮತ್ಯಾಗ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆಗಿನ ರಾಜಸ್ತಾನದ ಪ್ರಮುಖ್ಯ ರಾಜ್ಯಗಳು ಮೇವಾಡ ಮತ್ತು ಚಿತ್ತೂರು. ಇವುಗಳನ್ನು ರಾಣಾ ವಂಶಜರು ಆಳುತ್ತಿದ್ದರು. 1543 ರ ಸುಮಾರಿಗೆ ಬಹಾದೂರಶಾಹ ಚಿತ್ತೂರಿನ ಮೇಲೆ ದಾಳಿ ಮಾಡಿ ಅದನ್ನು ಗೆದ್ದ.

ಸೈನಿಕರು ತಮ್ಮ ನಾಡನ್ನೂ ನುಗ್ಗಿ ಏನು ಹಾನಿ ಮಾಡಬಹುದೆಂಬ ಕಲ್ಪನೆಯಿದ್ದ ಮೇವಾಡದ ರಾಣಿ ಕರ್ಣಾವತಿ ಒಂದು ತೀರ್ಮಾನ ಮಾಡಿದಳು. ತನ್ನ ಪುಟ್ಟ ಮಗುವನ್ನು ನೋಡಿಕೊಳ್ಳುತ್ತಿದ್ದ ಸೇವಕಿ ಪನ್ನಾಳನ್ನು ಕರೆದು,  `ಪನ್ನಾ, ನನ್ನ ಮಗ ಉದಯ ಇನ್ನೂ ಪುಟ್ಟ ಕೂಸು. ಅವನನ್ನು ಇನ್ನು ಮುಂದೆ ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ.
 
ಇಡೀ ವೇವಾಡದ ಭವಿಷ್ಯ ನಿನ್ನ ಕೈಯಲ್ಲಿದೆ. ನಾನು ಆತ್ಮಾಹುತಿ ಮಾಡಲು ನಿರ್ಧರಿಸಿದ್ದೇನೆ. ಈ ಸೈನಿಕರಿಂದ ಅಪಮಾನ ಸಹಿಸುವುದಕ್ಕಿಂತ ಸಾವು ಲೇಸು~ ಎಂದಳು. ಯಾರು ಹೇಳಿದರೂ ಕೇಳದೇ ಕರ್ಣಾವತಿ ತನ್ನೊಡನೆ ಹದಿಮೂರು ಸಾವಿರ ಮಹಿಳೆಯರೊಂದಿಗೆ ಅಗ್ನಿಪ್ರವೇಶ ಮಾಡಿ ಆತ್ಮಹುತಿ ಮಾಡಿಕೊಂಡಳು.

ರಾಜ್ಯ ಅನಾಯಕವಾಗಿತ್ತು. ಎಲ್ಲ ಕಡೆಗೆ ಭಯದ ವಾತಾವರಣ. ರಾಜಮನೆತನದ ಇನ್ನೊಬ್ಬ ರಾಜಕುಮಾರ ವಿಕ್ರಮಜಿತ್‌ನನ್ನು ರಾಜನನ್ನಾಗಿ ಮಾಡಿದರು. ಆದರೆ ಅವನೋ ಕುಡುಕ ಮತ್ತು ಲಂಪಟ. ಅವನಿಂದ ರಾಜ್ಯಕ್ಕೆ ಯಾವ ಅನುಕೂಲವೂ ಆಗುವಂತಿರಲಿಲ್ಲ. ಆದ್ದರಿಂದ ರಾಜ್ಯದ ಹಿರಿಯ ಮಂತ್ರಿಗಳು ಹಾಗೂ ಸಮಾಜದ ನಾಯಕರು ರಾಜಮನೆತನದ ದೂರದ ಸಂಬಂಧಿಯಾಗಿದ್ದ ವನವೀರನನ್ನು ಆಡಳಿತ ನೋಡಿಕೊಳ್ಳುವಂತೆ ಕೋರಿದರು.
 
ಅವನು ಮಹಾ ಮಹತ್ವಾಕಾಂಕ್ಷಿ. ವಿಕ್ರಮಜಿತ್ ಮತ್ತು ಉದಯ ಅವರನ್ನು ಕೊಂದು ಹಾಕಿದರೆ ರಾಜ್ಯ ತನ್ನದೇ ಆಗುತ್ತದೆಂದು ಅವನಿಗೆ ತಿಳಿಯಿತು. ಒಂದು ರಾತ್ರಿ ತಾನೇ ಅರಮನೆಗೆ ಹೋಗಿ ವಿಕ್ರಮಜಿತ್‌ನನ್ನು ಕೊಂದುಬಿಟ್ಟ.

ರಾಣಿಯ ಸಾವಿನ ನಂತರ ಪನ್ನ ಉದಯನನ್ನು ಅತ್ಯಂತ ಪ್ರೀತಿಯಿಂದ, ಜವಾಬ್ದಾರಿಯಿಂದ ಬೆಳೆಸುತ್ತಿದ್ದಳು. ಅವಳ ಸ್ವಂತ ಮಗ ಚಂದನ ಕೂಡ ಉದಯನ ವಯಸ್ಸಿನವನೇ. ಇಬ್ಬರು ಜೊತೆಗೇ ಆಡಿಕೊಂಡು ಬೆಳೆಯುತ್ತಿದ್ದರು.
 
ವಿಕ್ರಮಜಿತ್‌ನ ಹತ್ಯೆಯ ಸುದ್ದಿ ತಿಳಿಯುತ್ತಲೇ ಪನ್ನಾ ತುಂಬ ಹುಷಾರಾದಳು. ವನವೀರ ಖಂಡಿತವಾಗಿಯೂ ಉದಯನನ್ನು ಕೊಲ್ಲಲು ಇಂದೇ ಬರುತ್ತಾನೆಂಬ ನಂಬಿಕೆ ಬಲಿಯಿತು. ರಾತ್ರಿಯಾಗುತ್ತಿದ್ದಂತೆ ತನ್ನ ನಂಬಿಕೆಯ ಸಂಗಾತಿಯೊಬ್ಬಳನ್ನು ಕೇಳಿದಳು,  `ಉದಯನನ್ನು ಈಗಲೇ ಎತ್ತಿಕೊಂಡು ಊರುಹೊರಗಿದ್ದ ತೋಟದ ಮನೆಗೆ ಹೊರಡು. ಯಾರಿಗೂ ಗೊತ್ತಾಗಬಾರದು.~ ಹೀಗೆ ಹೇಳಿ ಉದಯನನ್ನು ಹಾಸಿಗೆ ಹಾಸಿದ ಒಂದು ದೊಡ್ಡ ಬುಟ್ಟಿಯಲ್ಲಿ ಮಲಗಿಸಿ ಅವನು ಕಾಣದಂತೆ ಸುತ್ತಲೂ ಹಣ್ಣು ಹೂವುಗಳನ್ನಿಟ್ಟಳು.

ನಂತರ ತನ್ನ ಮಗ ಚಂದನನಿಗೆ ರಾಜಕುಮಾರನ ಬಟ್ಟೆಗಳನ್ನು ಹಾಕಿ ಉದಯನ ಹಾಸಿಗೆಯ ಮೇಲೆ ಮಲಗಿಸಿದಳು. `ಆಕೆಯ ಸಂಗಾತಿ ಇದೇನು ಮಾಡುತ್ತಿರುವೆ~ ಎಂದು ಕೇಳಿದಾಗ,  `ನಾನು ಮಹಾರಾಣಿ ಕರ್ಣಾವತಿಗೆ ಮಾತುಕೊಟ್ಟಿದ್ದೇನೆ. ಪ್ರಾಣ ಕೊಟ್ಟಾದರೂ ರಾಜಕುಮಾರನನ್ನು ಉಳಿಸಿಕೊಳ್ಳುತ್ತೇನೆ ಎಂದು. ಈಗ ನನ್ನ ಮಗನ ಬಲಿ ಕೊಟ್ಟರೂ ಚಿಂತೆಯಿಲ್ಲ, ರಾಜಕುಮಾರ ಉಳಿಯಲಿ. ಉದಯ ಬೇರೆಲ್ಲೋ ಬದುಕಿದ್ದಾನೆ ಎಂಬುದೂ ತಿಳಿಯದಿರಲಿ~ ಎಂದು ಉದಯನನ್ನು ಸಂಗಾತಿಯೊಂದಿಗೆ ಕಳುಹಿಸಿದಳು.

ಸ್ವಲ್ಪ ಹೊತ್ತಿಗೇ ವನವೀರ ಅರಮನೆಗೆ ಬಂದ. ಗಾಬರಿಯಾಗಿ ನಿಂತಿದ್ದ ಪನ್ನಾಳಿಗೆ `ರಾಜಕುಮಾರ ಉದಯ ಎಲ್ಲಿ~ ಎಂದು ಕೇಳಿದ. ಹೆದರುತ್ತಲೇ ಆಕೆ ರಾಜಕುಮಾರನ ಹಾಸಿಗೆಯನ್ನು ತೋರಿಸಿದಳು. ನಿರ್ದಯಿ ವನವೀರ, ಮಗು ಮಲಗಿದ್ದ ಹಾಸಿಗೆಯ ಹತ್ತಿರ ಹೋಗಿ ಅವನ ಕೊರಳಲ್ಲಿದ್ದ ರಾಜಸರವನ್ನು ತೆಗೆದುಕೊಂಡು ಪನ್ನಾ ನೋಡುತ್ತಿರುವಂತೆಯೇ ಚಂದನನ ತಲೆಯನ್ನು ಕತ್ತರಿಸಿ ಹಾಕಿದ.
 
ತನ್ನೆದೆಯೊಳಗೆ ಕುದಿಯುತ್ತಿದ್ದ ಭಾವನೆಗಳನ್ನು, ದುಃಖದ ಲಾವಾರಸವನ್ನು ನುಂಗುತ್ತಲೇ ಈ ಪಾಶವೀ ಕೃತ್ಯವನ್ನು ನೋಡಿದಳು ಪನ್ನಾ. ಹೆತ್ತ ಕರುಳಿಗೆ ಅದೆಷ್ಟು ಸಂಕಟವಾಗಿದ್ದೀತೋ! ವನವೀರ ಅಟ್ಟಹಾಸಗೈದು ಹೊರನಡೆದ. ತಾನೇ ರಾಜನೆಂದು ಘೋಷಿಸಿದ.
ಸ್ವಂತ ಮಗನನ್ನು ಬಲಿಕೊಟ್ಟು ಉದಯನನ್ನು ಬದುಕಿಸಿ ಕಾಪಾಡಿದಳು ಪನ್ನಾ. ಮುಂದೆ ದೊಡ್ಡವನಾದ ಮೇಲೆ ಉದಯನೇ ರಾಜನಾಗಿ ಬಹುಕಾಲ ರಾಜ್ಯಭಾರ ಮಾಡಿದ. ಆ ನಗರಕ್ಕೆ ಇಂದಿಗೂ ಉದಯಪುರ ಎಂಬ ಹೆಸರು ನಿಂತಿದೆ.

ಇದು ನಮ್ಮ ದೇಶಪ್ರೇಮದ ಒಂದು ನಮೂನೆ. ದೇಶಕ್ಕಾಗಿ ಅತ್ಯಂತ ಶ್ರೇಷ್ಠ ಬಲಿದಾನಕ್ಕೂ ಹಿಂದುಮುಂದು ನೋಡದೆ ಬದುಕಿದ ಜನರ ಕಥೆ. ಇಂಥವರು ಹಿಂದೆ ಹಲವಾರು ಇದ್ದರೆಂದೇ ನಮ್ಮ ದೇಶದ ಸಂಸ್ಕೃತಿ ಅನನ್ಯವಾಗಿದೆ, ಪ್ರಚೋದನಕಾರಿಯಾಗಿದೆ. ಇಂಥ ಮಾದರಿಗಳನ್ನು ನೆನಪಿಸಿಕೊಂಡು ಮಕ್ಕಳಿಗೆ ಹೇಳಿದರೆ ನಮ್ಮ ದೇಶಪ್ರೇಮ ಬರೀ ಶಾಲೆಯಲ್ಲಿ ಓದುವ ಪಠ್ಯಕ್ರಮವಾಗದೇ ಜೀವನಕ್ರಮವಾದೀತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT