ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆಬೀಸುವ ಮಾಯೆ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಭಾರತದ ಅಧ್ಯಾತ್ಮ ಪರಂಪರೆಯಲ್ಲಿ ಮಹರ್ಷಿ ವೇದವ್ಯಾಸರ ಸ್ಥಾನ ಅತ್ಯಂತ ಹಿರಿದಾದದ್ದು. ಕಾಡಿನ ಹಾಗೆ ವಿಸ್ತರಿಸಿದ್ದ ಜ್ಞಾನವನ್ನು ತಮ್ಮ ಬುದ್ಧಿ ತೀಕ್ಷ್ಣತೆಯಿಂದ ಸರಿಯಾಗಿ ವಿಭಾಗಿಸಿ ಶೃತಿ, ಸ್ಮತಿ ಮತ್ತು ಪುರಾಣಗಳನ್ನಾಗಿ ನೀಡಿದ್ದು ಅವರು ಮಾಡಿದ ಮಹಾಕಾರ್ಯ. ಅವರು ಒಂದು ದ್ವೀಪದಲ್ಲಿ ಹುಟ್ಟಿದ್ದರಿಂದ ಅವರ ಹೆಸರು ದ್ವೈಪಾಯನ ಎಂದಾಯಿತು. ಅವರು ಕಪ್ಪಾಗಿ ಇದ್ದುದರಿಂದ ಕೃಷ್ಣ ದ್ವೈಪಾಯನರಾದರು. ವೇದಗಳನ್ನು ವಿಭಜಿಸಿದ್ದರಿಂದ ವೇದವ್ಯಾಸರಾದರು. ತಮ್ಮ ಆಶ್ರಮವನ್ನು ಬದರಿಕ್ಷೇತ್ರದಲ್ಲಿ ಕಟ್ಟಿಕೊಂಡದ್ದರಿಂದ ಬಾದರಾಯಣರಾದರು. ಅವರ ಜ್ಞಾನಕ್ಕೆ ಮಿತಿಯನ್ನು ಕಲ್ಪಿಸುವುದೇ ಅಸಾಧ್ಯ.

ವಿಷ್ಣು ಪುರಾಣದಂತೆ ವೇದವ್ಯಾಸರು ನಾಲ್ಕು ಜನ ಶಿಷ್ಯರನ್ನು ಆರಿಸಿಕೊಂಡು ಪ್ರತಿಯೊಬ್ಬರಿಗೂ ಒಂದು ವೇದವನ್ನು ಬೋಧಿಸಿದರು. ಋಗ್ವೇದವನ್ನು ಪೈಲ ಮುನಿಗೂ, ಯುಜುರ್ವೇದವನ್ನು ವೈಶಂಪಾಯನನಿಗೂ, ಸಾಮವೇದವನ್ನು ಜೈಮಿನಿಗೂ, ಅಥರ್ವವೇದವನ್ನು ಸುಮಂತುವಿಗೂ ಬೋಧಿಸಿದರು. ನಂತರ ಪುರಾಣಗಳನ್ನು ರೋಮಹರ್ಷಣನಿಗೆ ತಿಳಿಸಿದರು.

ಜೈಮಿನಿ ಋಷಿ ಗುರುಗಳೊಂದಿಗೇ ಬದುಕಿ, ಜ್ಞಾನದ ಮಿತಿಗಳನ್ನು ವಿಸ್ತರಿಸಿಕೊಳ್ಳುತ್ತಾ, ಬಹು ಖ್ಯಾತವಾದ ಪೂರ್ವ ವೀಮಾಂಸಾ ಸೂತ್ರಗಳನ್ನು ಬರೆದರು. ಜೈಮಿನಿ ಭಾರತದ ಕರ್ತೃವೂ ಅವರೇ ಎಂದು ಹೇಳಲಾಗುತ್ತದೆ. ಜೈಮಿನಿಯ  ಉಪದೇಶ ಸೂತ್ರಗಳು  ಜೈಮಿನಿ ಜ್ಯೋತಿಷ್ಯ ಶಾಸ್ತ್ರದ ಮೂಲನೆಲೆಗಳು.

ಇಂಥ ಸಾಧನೆ ಮಾಡಿದ ಜೈಮಿನಿಗೆ ಒಮ್ಮೆ ಒಂದು ಚೂರು ಗರ್ವ ಬಂದಿತಂತೆ. ಜಗತ್ತಿನ ಸರ್ವಶ್ರೇಷ್ಠ ಗುರುವಾದ ವೇದವ್ಯಾಸರೊಡನೆ ಅಷ್ಟು ವರ್ಷ ಬದುಕಿ, ಅವರಿಂದ ಶಿಷ್ಯತ್ವವನ್ನು ಪಡೆದು ಜ್ಞಾನ ಸಂಪಾದನೆ ಮಾಡಿದ ಮೇಲೆ ತಾವು ಮಾಯೆಯ ಬಲೆಯಿಂದ ಪಾರಾಗಿದ್ದೇನೆ, ಮಾಯೆ ತನ್ನ ಮೇಲೆ ಪ್ರಭಾವ ಬೀರಲಾರದು ಎನ್ನಿಸಿತು. ಒಂದು ಬಾರಿ ಗುರುಗಳ ಮುಂದೆ ಹೇಳಿಯೂ ಬಿಟ್ಟರು. ಗುರು ನಕ್ಕು ಸುಮ್ಮನಾದರು.

ಕೆಲದಿನಗಳು ಕಳೆದ ಮೇಲೆ ಜೈಮಿನಿ ಪೂಜೆಗೆ ಹೂವು ತರಲು ಕಾಡಿಗೆ ಹೋದರು. ಏಕಾಏಕಿ, ಮಳೆ ಬರಲು ಪ್ರಾರಂಭವಾಯಿತು. ಏನಿದು ಅಕಾಲದ ಮಳೆ ಎಂದು ನೆರಳು ಹುಡುಕಿಕೊಂಡು ಬಂದು ಮರದ ಕೆಳಗೆ ಬಂದರು.

ಅಲ್ಲೊಬ್ಬಳು ಅತ್ಯಂತ ಸುಂದರಳಾದ ತರುಣಿ ನಿಂತಿದ್ದಾಳೆ. ಮಳೆಯಲ್ಲಿ ಪೂರ್ತಿ ನೆನೆದು ನಡುಗುತ್ತಿದ್ದಾಳೆ. ನೆನೆದ ಬಟ್ಟೆಯಲ್ಲಿ ಆಕೆಯ ಅಂಗಸೌಷ್ಠವ ಎದ್ದು ಕಾಣುತ್ತಿದೆ. ಜೈಮಿನಿಗೆ ಕರುಣೆ ಉಕ್ಕಿ ಬಂತು.  ಯಾಕೆ ಇಲ್ಲಿಗೆ ಬಂದಿದ್ದೀ? ಬಾ ನಿನ್ನ ಮನೆಯವರೆಗೂ ನಿನ್ನನ್ನು ಬಿಟ್ಟು ಬರುತ್ತೇನೆ  ಎಂದರು.

ತುಂಬ ಹೆದರಿದಂತೆ ಕಂಡ ಅವಳ ಕೈಹಿಡಿದುಕೊಂಡು ಹೊರಡಲು ಸಿದ್ಧರಾದರು. ಆಕೆಯ ಕೈ ಮುಟ್ಟಿದೊಡನೆ ಅವರ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಅವಳ ಬಯಕೆಯ ವಿನ: ಮತ್ತಾವ ಚಿಂತನೆಯೂ ಮನಸ್ಸಿನಲ್ಲಿ ಉಳಿಯಲಿಲ್ಲ.

ಆಕೆಯನ್ನು ಹಾಗೆಯೇ ಹಿಡಿದುಕೊಂಡು ನಿಂತರು. ನಂತರ ಆಕೆಯ ಎರಡೂ ಕೆನ್ನೆಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು,  ಸುಂದರಿ, ನಿನ್ನ ಈ ರೂಪ ಎಲ್ಲಿಂದ ಬಂದಿತು? ನಿನ್ನನ್ನು ನೋಡಿ ಚಂದ್ರ ಕೂಡ ಅಸೂಯೆ ಪಡುತ್ತಾನೆ  ಎಂದರು.

ಆ ರೂಪವನ್ನು ಆಸ್ವಾದಿಸಲು ಕಣ್ಣು ಮುಚ್ಚಿಕೊಂಡು ಕೆನ್ನೆಯ ಮೇಲೆ ಕೈಯಾಡಿಸಿದರು. ಆಗ ಕೈಗೆ ಬರೀ ಗಡ್ಡ, ಮೀಸೆಗಳು ಹತ್ತಿದವು. ಗಾಬರಿಯಾಗಿ ಕಣ್ಣು ತೆರೆದರೆ ಅವರ ಕೈಯಲ್ಲಿ ಗುರು ವೇದವ್ಯಾಸರ ಮುಖ.

ಅವರು ನಕ್ಕು ಹೇಳಿದರು,  ಮಗೂ, ಮಾಯೆಯನ್ನು ಗೆದ್ದೆ ಎಂದು ಹೆಮ್ಮೆ ಪಡಬೇಡ. ಮಾಯೆಯಲ್ಲಿ ಸಿಲುಕದಂತೆ ಮಾಡು ಪ್ರಭೂ ಎಂದು ದೇವರನ್ನು ಕೇಳುವುದು ಮಾತ್ರ ನಿನ್ನ ಕೆಲಸ. ಪವಿತ್ರತೆಯನ್ನು ಕಾಪಾಡಲು ವಿನಯದಿಂದ ಅಧ್ಯಾತ್ಮದಲ್ಲಿ ತೊಡಗು . ಜೈಮಿನಿ ಮುನಿಗೆ ಮಾಯೆಯ ಶಕ್ತಿಯ ಅರಿವಾಯಿತು.

  ಎಲ್ಲರುಂ ಜಿತಮಸ್ಕರೆ ದೈವ ವಿಧಿ ಮಾಯೆ
 ಚೆಲ್ವು ರೂಪಿಂ ಬಂದು ಕಣ್ಕುಕ್ಕುವನಕ
 ವಲ್ಗುರೂಪ ಸುಭದ್ರೆ ಕಣ್ಮುಂದೆ ಸುಳಿವನಕ
 ಫಲ್ಗುಣನು ಸನ್ಯಾಸಿ - ಮಂಕುತಿಮ್ಮ 

 ಚೆಲುವಾದ ಮಾಯೆ ಬಲೆ ಬೀಸುವ ತನಕ ಎಲ್ಲರೂ ಧೃಡಮಸ್ಸಿನವರೇ. ಸುಂದರಳಾದ ಸುಭದ್ರೆ ಕಣ್ಣ ಮುಂದೆ ಬರುವ ತನಕ ಮಾತ್ರ ಅರ್ಜುನ ಸನ್ಯಾಸಿ. ಮುಂದೆ ಏನಾಯಿತು ತಿಳಿದೇ ಇದೆ. ಮಾಯೆಯಿಂದ ಪಾರಾಗುವುದು ಕಷ್ಟ. ಎಷ್ಟು ಜಾಗರೂಕವಾಗಿದ್ದಷ್ಟೂ ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT