ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ದೀಪದ ಈರಪ್ಪ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಆಗ ತುಂಬ ಸಾಧಾರಣ ಎನಿಸಿದರೆ, ಎಷ್ಟೋ ವರ್ಷಗಳ ನಂತರ ಅವುಗಳನ್ನು ಹಿಂದಿರುಗಿ ನೋಡಿದರೆ ಎಷ್ಟೊಂದು ಅರ್ಥಗರ್ಭಿತ ಎನಿಸುತ್ತವೆ. ಹೃದಯಕ್ಕೆ ತಂಪು ನೀಡುತ್ತವೆ. ಮೊನ್ನೆ ಹಾಗೆಯೇ ವಿರಾಮವಾಗಿ ಕುಳಿತು ಬಾಲ್ಯದ ಕೆಲವು ನೆನಪುಗಳನ್ನು ಕೆದಕಿ ನೋಡುವಾಗ ಥಟ್ಟನೇ ಈರಪ್ಪನ ನೆನಪಾಯಿತು.

ನಾನು ಹುಟ್ಟಿ ಬೆಳೆದದ್ದು ಒಂದು ಪುಟ್ಟ ಹಳ್ಳಿಯಲ್ಲಿ. ಆಗ ನಮ್ಮ ಊರಿನಲ್ಲಿ ವಿದ್ಯುತ್ ಶಕ್ತಿಯ ಬೆಳಕು ಇರಲಿಲ್ಲ. ಮನೆಯಲ್ಲೆಲ್ಲ ಸೀಮೆಎಣ್ಣೆಯ ದೀಪಗಳೇ. ಸಂಜೆ ಆದೊಡನೆ ಮನೆಯಲ್ಲಿ ತಾಯಂದಿರು ಸೀಮೆಎಣ್ಣೆಯ ದೀಪಗಳಿಗೆ ಸೀಮೆಎಣ್ಣೆ ತುಂಬಿ ಅವುಗಳ ಮೇಲಿನ ಗಾಜಿನ ಬುರುಡೆಗಳನ್ನು ರಂಗೋಲಿ ಹಾಕಿ ಒರೆಸಿ ದೀಪಹಚ್ಚಿ ಅಲ್ಲಲ್ಲಿ ಇಡುತ್ತಿದ್ದರು. ಹಳ್ಳಿಯಲ್ಲಿ ಕತ್ತಲು ಆವರಿಸುತ್ತಿದ್ದಂತೆ ಈರಪ್ಪನ ಕೆಲಸ ಪ್ರಾರಂಭವಾಗುತ್ತಿತ್ತು.
 
ಅವನು ಮನೆಯಿಂದ ಹೊರಡುತ್ತಿದ್ದ. ಅವನ ಕೈಯಲ್ಲೊಂದು ದೀಪ, ಎಡ ಹೆಗಲಿಗೆ ತೂಗುಬಿದ್ದ ಒಂದು ಸೀಮೆಎಣ್ಣೆ ಡಬ್ಬಿ, ಬಲ ಹೆಗಲಿಗೆ ಹಾಕಿಕೊಂಡಿದ್ದ ಏಣಿ, ಮತ್ತು ಸೊಂಟಕ್ಕೆ ಸಿಕ್ಕಿಸಿಕೊಂಡ ಬಟ್ಟೆಯ ತುಂಡು.

ಅವನು ದಿನನಿತ್ಯವೂ ದಿನಚರಿಯಂತೆ ಓಣಿ ಓಣಿಗೆ ಹೋಗುತ್ತಿದ್ದ. ಪ್ರತಿ ದೊಡ್ಡ, ಸಣ್ಣ ರಸ್ತೆಯಲ್ಲಿ ಆಗೆಲ್ಲ ಅಲ್ಲಲ್ಲಿ ದೀಪದ ಕಂಬಗಳಿದ್ದವು. ಈರಪ್ಪ ದೀಪದ ಕಂಬದ ಹತ್ತಿರ ಹೋಗಿ ಅದಕ್ಕೆ ಏಣಿಯನ್ನು ಒರಗಿಸಿ ಮೇಲೆ ಹತ್ತುತ್ತಿದ್ದ.

ನಂತರ ನಿಧಾನವಾಗಿ ಅದರ ಪೀಠದಲ್ಲಿದ್ದ ಡಬ್ಬಿಗೆ ಒಂದಷ್ಟು ಸೀಮೆಎಣ್ಣೆ ಸುರಿದು, ಸೊಂಟಕ್ಕೆ ಸುತ್ತಿದ ಬಟ್ಟೆಯಿಂದ ಲಾಂದ್ರದ ನಾಲ್ಕು ಕಡೆಯ ಗಾಜಿನ ಬಾಗಿಲುಗಳನ್ನು ಒರೆಸುತ್ತಿದ್ದ. ಕೊನೆಗೆ ಒಳಗಿದ್ದ ಬತ್ತಿ ಪರೀಕ್ಷಿಸಿ ದೀಪ ಹೊತ್ತಿಸಿ ನಿಧಾನವಾಗಿ ಬಾಗಿಲನ್ನು ಮುಚ್ಚಿ ಕೆಳಗಿಳಿಯುತ್ತಿದ್ದ.

ತಾನು ಮಾಡುವ ಕೆಲಸದಲ್ಲಿ ಎಷ್ಟು ಭಕ್ತಿಯೆಂದರೆ ಏಣಿಯನ್ನು ತೆಗೆಯುವುದಕ್ಕಿಂತ ಮೊದಲು ಕಂಬಕ್ಕೆ ಕೈ ಮುಟ್ಟಿ ನಮಸ್ಕಾರ ಮಾಡುತ್ತಿದ್ದ. ಆ ಮೇಲೆ ಮತ್ತೆ ತನ್ನ ಸರಂಜಾಮುಗಳನ್ನು ಹೊತ್ತುಕೊಂಡು ಮತ್ತೊಂದು ಕಂಬದತ್ತ ಪ್ರಯಾಣ. ರಸ್ತೆಯಲ್ಲಿ ದೀಪಗಳು ಉರಿಯುತ್ತಿದ್ದವೆಂದರೆ ಈರಪ್ಪ ಬಂದು ಹೋದ ಎಂಬುದರ ಸಂಕೇತ.

ಯಾವ ಹಬ್ಬ ಬರಲಿ, ತೊಂದರೆ ಬರಲಿ ಈರಪ್ಪನ ಕೆಲಸ ತಪ್ಪುತ್ತಲೇ ಇರಲಿಲ್ಲ. ಎಷ್ಟೋ ಬಾರಿ ಈರಪ್ಪ ಕಾಣುತ್ತಲೇ ಇರಲಿಲ್ಲ, ಆದರೆ, ಅವನು ಮಾಡಿದ ಕೆಲಸ ಕಣ್ಣಿಗೆ ಬೀಳದೇ ಇರುವುದು ಸಾಧ್ಯವಿರಲಿಲ್ಲ. ಈರಪ್ಪ ಓಣಿ ದಾಟಿ ಹೋದರೂ ಅವನು ಹೊತ್ತಿಸಿದ ಬೀದಿ ದೀಪಗಳ ಬೆಳಕು ದಾರಿಹೋಕರಿಗೆ ಅವನ ಅತ್ಯಂತ ಪ್ರಾಮಾಣಿಕ ಕೆಲಸದ ದರ್ಶನ ಮಾಡಿಸುತ್ತಿದ್ದವು.

ಈರಪ್ಪ ಓಣಿಯಿಂದ ಮರೆಯಾದರೂ ಅವನು ಹೊತ್ತಿಸಿದ ದೀಪ ಅವನ ಇರುವಿಕೆ ನೆನಪಿಸುತ್ತಿತ್ತು ಎಂಬುದನ್ನು ನೆನೆದಾಗ ನನ್ನ ಮನಸ್ಸಿಗೆ ಇನ್ನೊಂದು ವಿಚಾರ ಬಂದಿತು. ನಾವೂ ಈರಪ್ಪನ ಹಾಗೆಯೇ ಈ ಜೀವನದ ಓಣಿಯಿಂದ ಮರೆಯಾಗಿ ಹೋಗುತ್ತೇವಲ್ಲವೇ.
 
ಈರಪ್ಪ ತನ್ನ ಗುರುತಾಗಿ ದೀಪದ ಬೆಳಕು ಬಿಟ್ಟ ಹಾಗೆ ನಾವೂ ಮುಂಬರುವ ತಲೆಮಾರಿಗೆ ಏನಾದರೂ ಬೆಳಕನ್ನು ಬಿಟ್ಟು ಹೋಗುವುದು ಸಾಧ್ಯವೇ. ನಾವು ಬದುಕಿದ್ದರ ಗುರುತಾಗಿ ಬೆಳಕನ್ನು ಬಿಟ್ಟು ಹೋಗುವುದು ಸಾಧ್ಯವೇ. ನಾವು ಬದುಕಿದ್ದರ ಗುರುತಾಗಿ ಏನಾದರೂ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗುವುದು ನಮ್ಮ ಜವಾಬ್ದಾರಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT