ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವ್ನ್ ಕೈಯಿಂದ ಇನ್ನ್ ಮೇಲೆ ಲೆಟರ್ ಇಸ್ಕೊಳೋದು ಹೆಂಗೇ’

Last Updated 16 ಜೂನ್ 2018, 9:04 IST
ಅಕ್ಷರ ಗಾತ್ರ

ವೈನು ಕಕ್ಕಿಕೊಂಡು ಗೋವಾದಿಂದ ಬಂದ ಮೇಲೆ ಹುಡುಗಿಯರಲ್ಲಿ ಆದ ಒಂದು ಮುಖ್ಯ ಮಾರ್ಪಾಟೆಂದರೆ ಸ್ವಲ್ಪ ದಿನ ನೀರನ್ನೂ ಬಹಳ ಎಚ್ಚರ ವಹಿಸಿ ಕುಡಿದಿದ್ದು. ಇಂದುಮತಿಯ ಬಗ್ಗೆಯಂತೂ ಹೇಳುವುದೇ ಬೇಡ. ಅವಳ ರೂಮಲ್ಲಿದ್ದ ಕೊಡವರ ಹುಡುಗೀರು ವೈನ್ ತಂದಿಟ್ಟುಕೊಂಡರೂ ಅವಳಿಗೆ ವಾಂತಿ ಬರುತ್ತಿತ್ತು. ಇವಳು ಹೀಗೆ ಆಗಾಗ್ಗೆ ವಾಕರಿಸುವುದನ್ನು ನೋಡಿ ಇಂದುವಿನ ರೂಮ್‌ಮೇಟ್ ಕಾವೇರಿ ತಮಾಷೆಗೆ ಕೇಳಿಯೂ ಬಿಟ್ಟಳು. ‘ಆರ್ ಯೂ ಪ್ರೆಗ್ನೆಂಟ್?’

ಈ ಪ್ರಶ್ನೆ ಸಾಮಾನ್ಯ ಹುಡುಗಿಯರನ್ನು ಸಿಟ್ಟಿಗೇಳಿಸುವಷ್ಟು ಶಕ್ತವೇನೋ, ಆದರೆ ಇಂದುಮತಿ ಮಾತ್ರ ನಕ್ಕು ಸುಮ್ಮನಾಗಿಬಿಟ್ಟಳು. ಕಾವೇರಿಗೆ ಇವಳ ಪ್ರತಿಕ್ರಿಯೆ ಕಂಡು ಸೋಜಿಗವಾಯಿತು, ಏಕೆಂದರೆ ಈ ಪ್ರಶ್ನೆಯ ಉದ್ದೇಶವೇ ಇಂದುವನ್ನು ಸಿಟ್ಟಿಗೇಳಿಸುವುದಾಗಿತ್ತು. ಆದರೆ ಇಂದೂ ಹುಣ್ಣಿಮೆಯ ಚಂದಿರನನ್ನು ಕಂಡ ಸಾಗರದ ಹಾಗೆ ಉನ್ಮಾದಕ್ಕೆ ಒಳಗಾದಂತೆ ವರ್ತಿಸಿದ್ದಳು.

‘ಇಂದೂಗೆ ಲೂಸಾಗಿದೆಯಾ?’ ಇದು ಆವತ್ತಿನ ‘ಥಟ್ ಅಂತ ಹೇಳಿ’ ವಿಭಾಗದ ಪ್ರಶ್ನೆ. ಯಾಕೆ ಹಾಗೆ ನಕ್ಕಳು ಈ ಗೌಡರ ಹುಡುಗಿ? ಇಂದುವಿಗೆ ನಗು ಬರಲು ಕಾರಣ ಬಾಯ್ ಫ್ರೆಂಡಲ್ಲ. ಕೈ ಫ್ರೆಂಡು. ಕೈ ತಗುಲಿಸಿ ಸುಖಿಸುತ್ತಿದ್ದ ಹುಡುಗರ ಬಗ್ಗೆ ಆಲೋಚಿಸಿದಾಗಲೆಲ್ಲ ಅವಳಿಗೆ ಗಾಢವಾಗಿ ಬರುತ್ತಿದ್ದ ಒಂದು ಯೋಚನೆ: ಬಸ್ಸಿನಲ್ಲಿ ಪಕ್ಕ ಕೂತವಳಿಗೆ ಕೈ ತಗುಲಿಸುವುದರಿಂದ ಸುಖ ಸಿಗುವುದಾದರೆ ಜನ ಮದ್ವೆ ಯಾಕಾಗ್ತಾರೆ? ಸುಮ್ನೆ ಹೆಂಡ್ತಿ ಮಕ್ಳು, ಸಂಬಂಧಗಳು. ಇವೆಲ್ಲ ತಲೆ ನೋವಲ್ವಾ?. ಆವತ್ತಿನ ಸಂಜೆಯ ‘ಚಾಯ್ ಪೆ ಚರ್ಚಾ’ ಆಗಿದ್ದು ಹೀಗೆ.  ಮದ್ವೆ ಆಗದಿದ್ರೆ ಮತ್ತೇನ್ ಮಾಡ್ಬೇಕು? ಹುಡುಗಿಯರ ಪ್ರಶ್ನೆ.

‘ಅವಶ್ಯಕತೆ ಬಿದ್ದಾಗ ಬಸ್ ಹತ್ಕೊಂಡು ಹೆಂಗಸ್ರ ಪಕ್ಕ ಸೀಟ್ ದಕ್ಕಿಸಿಕೊಂಡು ಒಂದೂರಿಂದ ಇನ್ನೊಂದೂರಿಗೆ ಹೋಗೋದಪ್ಪ! ಎಷ್ಟು ಖರ್ಚು ಉಳಿಯುತ್ತೆ ನೋಡು! ಅಲ್ದೆ ಹೆಣ್ಣ್ ಮಕ್ಳಿಗೂ ಕೆಲಸ ಕಡಿಮೆ! ಮಕ್ಳು ಹೆರೋದು, ಬಾಣಂತನ... ಸ್ಕೂಲ್ ಅಡ್ಮಿಶನ್ನು... ಅವರ ಜೀವನ...’ ಹೀಗೆ ಮಾತು ಮುಂದುವರೆಯುತ್ತಿದ್ದಾಗ ರಶ್ಮಿಗೆ ಖಾತ್ರಿಯಾದದ್ದು ಒಂದೇ ವಿಷಯ. ಗೋವಾದಲ್ಲಿ ಕುಡಿದದ್ದು ಇವಳಿಗೆ ಹೊಟ್ಟೆಗೆ ಹೋಗಲಿಲ್ಲ. ತಲೆಗೆ ಏರಿ ನರ ಮಂಡಲದ ವ್ಯವಸ್ಥೆಯನ್ನೇ ಏರುಪೇರು ಮಾಡಿದೆ. ಇಲ್ಲಾಂದ್ರೆ ಯಾವಳಾದರೂ ಮದುವೆಗೆ ಪರ್ಯಾಯವಾಗಿ ಬಸ್ ಪ್ರಯಾಣವನ್ನು ಸೂಚಿಸಲು ಸಾಧ್ಯವೇ?

ಇದು ಯಾಕೋ ಅತಿಯಾಗುತ್ತಿದೆ ಅನ್ನಿಸಿ ವಿಜಿ ಸುಮ್ಮನೆ ಕೂತಳು. ‘ಮುಚ್ಚೆಲೆ! ಎಲ್ರೂ ಹಂಗೇ ಇರಲ್ಲ. ಎಲ್ಲೋ ಕೆಲವರಿಗೆ ಆ ಥರದ ಚಟ ಇರುತ್ತೆ. ಸುಮ್ನೆ ಎಲ್ಲಾ ಗಂಡಸರೂ ಕೈ ಮೈ ತಗುಲಿಸಿಕೊಂಡು ಓಡಾಡ್ತಾರೆ ಅನ್ಕೋಬೇಡ’ ಎಂದು ರಶ್ಮಿ ಗದರಿದಳು. ಇಂದೂ ಯಾವ ಮಾತನ್ನೂ ಬಡಪೆಟ್ಟಿಗೆ ಒಪ್ಪುವ ಆಸಾಮಿಯೇ ಅಲ್ಲ. ‘ಅಲ್ಲ ಕಣೆ. ಆ ಅಂಕಲ್ಲು ನೋಡೋಕೆ ಸಂಭಾವಿತನ ಥರಾನೇ ಇದ್ದನಪ್ಪ. ಈಶ್ವರಿಗೆ ಲಗೇಜು ಇಡಕ್ಕೂ ಹೆಲ್ಪ್ ಮಾಡಿದ. ಅದಾದ ಮೇಲೆ ಹೀಗೆ ನಡ್ಕೋತಾನೆ ಅಂದ್ರೆ?’

‘ಅಲ್ಲಾ ಕಣೆ, ಈ ಥರ ಕೈಚಳಕ ತೋರಿಸುವವರು ನಾನ್ ಕೈ ಬಿಡ್ತೀನಿ, ನಾನ್ ಕೈ ಬಿಡ್ತೀನಿ ಅಂತ ಹೇಳಿಕೊಂಡು ತಿರುಗ್ತಾರಾ? ಇಲ್ಲಾ ನಾನ್ ‘ಕೈ ಪಾರ್ಟಿ’ ಅಂತ ಬೋರ್ಡ್ ಹಾಕ್ಕೊಂಡು ತಿರುಗಾಡ್ತಾನಾ?’ ವಿಜಿ ಕೇಳಿದಳು. ‘ಅಮ್ಮಣ್ಣಿ. ಸುಮ್ನೆ ಮಾತಾಡ್ಬೇಡ. ಒಬ್ಬ ಮನುಷ್ಯ ಹೀಗೆ ಚೀಪ್ ಟ್ರಿಕ್ಸ್ ಉಪಯೋಗಿಸ್ತಾನೆ ಅಂದ್ರೆ ಅದನ್ನ ಹೇಗೆ ಅವಾಯ್ಡ್ ಮಾಡಬೇಕು ಅಥವಾ ಅಂಥವರನ್ನ ಹೇಗೆ ಕಂಡು ಹಿಡೀಬೇಕು ಅನ್ನೋ ವಿಧಾನ ಇರಬೇಕು ತಾನೆ?’ ಇಂದೂ ಮರು ಸವಾಲು ಹಾಕಿದಳು. ವಿಜಿ ಮತ್ತು ರಶ್ಮಿ ಇಬ್ಬರೂ ಬಹಳ ದಿನದಿಂದ ನಡೆಯುತ್ತಿದ್ದ ವಿದ್ಯಮಾನವನ್ನು ಬಯಲಿಗೆಳೆಯಲು ಇದು ಸೂಕ್ತ ಕಾಲ ಎಂದು ನಿರ್ಧರಿಸಿದರು.

‘ಒಂದು ವಿಷ್ಯ ಇದೆ ಕೇಳು’ ಎಂದಳು ವಿಜಿ.
ಮಾನಸಗಂಗೋತ್ರಿಗೆ ಹೊಂದಿಕೊಂಡಂತೇ ‘ಮುಕ್ತ ಗಂಗೋತ್ರಿ’ ಅಂದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇದೆಯಷ್ಟೇ. ಅದು ‘ಓಪನ್ ಯೂನಿವರ್ಸಿಟಿ’ಯೂ ಹೌದು. ಆ ‘ಓಪನ್’ ಪದಕ್ಕೆ ಹಲವಾರು ಆಯಾಮಗಳೂ, ಅರ್ಥಗಳೂ ಇದ್ದವು.

‘ನಮ್ದು ಓಪ್ಪನ್ ಯೂನಿವರ್ಸಿಟಿ. ಅದಕ್ಕೆ ಎಲ್ಲವೂ ಇಲ್ಲಿ ಓಪ್ಪನ್!’ ಎಂದು ಹಲವಾರು ಗಂಡು ವಿದ್ಯಾರ್ಥಿಗಳು ಹೇಳುತ್ತಿದ್ದರು. ಈಗ ಭದ್ರಕೋಟೆಯಂತಿರುವ ವಿಶ್ವವಿದ್ಯಾಲಯ ಆಗ ಕಾಡಿನಂತಿತ್ತು. ಈಗ ಕಾಂಪೌಂಡಿನ ಮರೆಯಲ್ಲಿ ನಡೆಯುವ ಚಟುವಟಿಕೆಗಳು ಆಗೆಲ್ಲ ಹಸಿರು ಮುಕ್ಕಳಿಸುವ ನಿಸರ್ಗದ ಮಡಿಲಲ್ಲಿ ನಡೆಯುತ್ತಿದ್ದವು. ಯಾರ ಕಣ್ಣಿಗೂ ಕಾಣುತ್ತಿರಲಿಲ್ಲವೆನ್ನಿ. ಮರಗಳನ್ನೆಲ್ಲ ಕಡಿದು ಹಾಕಿ ಕಟ್ಟಡ ಕಟ್ಟಿರುವುದರಿಂದ ಆ ‘ಪ್ರೈವಸಿ’ ಹೊರಟುಹೋಗಿದೆ ಎಂದು ಮರುಗುವ ಜನಗಳೂ ಇದ್ದಾರೆ. ಆದರೆ, ಕಟ್ಟಡವನ್ನೇ ಕಟ್ಟಿಸಿಕೊಟ್ಟಿದ್ದಾರಲ್ಲ, ಈಗ ಫುಲ್‌ ಪ್ರೈವೇಟು -ಈಗೇನು ಬಯಲಲ್ಲಿ ಯಾವ ಕೆಲಸವನ್ನೂ ಮಾಡಬೇಕಿಲ್ಲ ಎನ್ನುವ ಒಂದು ವಾದವೂ ಇದೆ.

ಅದೆಲ್ಲ ಒತ್ತಟ್ಟಿಗಿರಲಿ. ಈಗ ಬಹಳ ದಿನಗಳಿಂದ ನಡೆದಿದ್ದ ವಿಷಯವೊಂದು ರಶ್ಮಿ ಮತ್ತು ವಿಜಿ ಬಿಟ್ಟರೆ  ಬರೀ ಬೆರಳೆಣಿಕೆಯಷ್ಟು ಹುಡುಗಿಯರಿಗೆ ಗೊತ್ತಿದ್ದ ವಿದ್ಯಮಾನ ಒಂಥರಾ ವಿಶ್ವಾಸಘಾತದಂತಿತ್ತು. ಅದೇನೆಂದು ಅರ್ಥವಾಗುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಹುಡುಗಿಯರಿಗೆ ಕಂಡದ್ದು ಎದೆ ಒಡೆಯುವಂಥ ಸಂಗತಿ. ಹಾಸ್ಟೆಲಿಗೆ ನಿತ್ಯ ಬರುತ್ತಿದ್ದ ಅಂಚೆಯಣ್ಣನ ಇನ್ನೊಂದು ಮುಖ. ಮಾತಿಗೆ ನಿಲುಕದಂಥದ್ದು.

ಹಾಸ್ಟೆಲಿಗೆ ಹೊರಗಿನಿಂದ ಬರುತ್ತಿದ್ದ ಜನ ಕಡಿಮೆ. ಅಟೆಂಡರುಗಳು ಬಹುತೇಕ ಹಾಸ್ಟೆಲಿನವರೇ ಆಗಿ ಹೋಗಿದ್ದರು. ಅಲ್ಲದೆ ದೊಡ್ಡ ಹುಡುಗಿಯರ ಹಾಸ್ಟೆಲ್ ಆದ್ದರಿಂದ ಯಾರೂ ಹೆಚ್ಚು ಕರಾಮತ್ತು ತೋರಿಸುವ ಹಾಗೆ ಇರಲಿಲ್ಲ. ಹೊರಗಿನಿಂದ ಬರುತ್ತಿದ್ದವರಲ್ಲಿ ಇದ್ದದ್ದು ಇಸ್ತ್ರಿ ಮಾಡಬೇಕಾದ ಬಟ್ಟೆಗಳನ್ನು ಪ್ರತೀ ಸೋಮವಾರ, ಗುರುವಾರ ಹೀಗೆ ವಾರಕ್ಕೆರಡು ದಿನ ಬಂದು ಒಯ್ಯುವುದು, ವಾಪಸು ತರುವುದು ಮಾಡುತ್ತಿದ್ದ ಗೂಳಿಪುರ ರುದ್ರಸ್ವಾಮಿ. ಅವನನ್ನು ಬಿಟ್ಟರೆ, ನಾನಾ ವಿಧದ ಓಲೆಗಳನ್ನು ಹೊತ್ತ ಪೋಸ್ಟ್ ಮ್ಯಾನ್ ಮಹೇಶ ಮೂರ್ತಿ ಬರುತ್ತಿದ್ದ.

ತಲತಲಾಂತರದಿಂದ ನಡೆದಿರುವಂತೆ ಹುಡುಗಿಯರಿಗೆ ಸಹಜವಾಗಿಯೇ ಅಂಚೆಯಣ್ಣನನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ, ಅನುಭೂತಿ, ಅವನನ್ನು ಕಂಡರೆ ತಮ್ಮ ಪ್ರೇಮಿಯನ್ನೇ ಕಂಡಷ್ಟು ಆನಂದ, ರೋಮಾಂಚನ ಏಕಕಾಲಕ್ಕೆ ಆಗುತ್ತಿತ್ತು. ಅವನು ದಿನಾ ಪತ್ರದ ಚೀಲ ಹೊತ್ತು ಬಂದರೆ ನೈಟಿಮಣಿಗಳು ಮದುವೆ ಮನೆಯಲ್ಲಿ ಸಡಗರದಿಂದ ಓಡಾಡುವ ಕಳಸಗಿತ್ತಿಯರ ಹಾಗೆ ವಿನಾಕಾರಣ ಉದ್ವೇಗಕ್ಕೆ ಒಳಗಾಗುತ್ತಿದ್ದರು. ಕೊಡಗಿನ ಚಂದನೆ ಹುಡುಗಿಯರು, ಬೇರೆ ಊರಿಂದ ಬಂದು ಡಿಗ್ರಿ ಓದುತ್ತಿರುವ ಹಸಿ-ಬಿಸಿ ರಕ್ತದ ಸೌಂದರ್ಯವತಿ ಕನ್ಯೆಯರು ಪತ್ರಗಳ ದಾರಿ ಎದುರು ನೋಡುತ್ತಾ ಸದಾ ಕಣ್ಣಿನ ಸುತ್ತಾ ಕಪ್ಪು ಉಂಗುರಗಳನ್ನು ಹೆಚ್ಚಿಸಿಕೊಳ್ಳುತ್ತಾ, ಕೆನ್ನೆ ಕೆಂಪಗೆ ಮಾಡಿಕೊಳ್ಳುತ್ತಿದ್ದರೆ;

ಎಂ ಫಿಲ್ ಅನ್ನೋ, ಪಿಎಚ್‌ಡಿಯನ್ನೋ ಮಾಡುತ್ತಿದ್ದವರು ನೂರಾರು ಊರುಗಳಿಂದ ಬರುತ್ತಿದ್ದ ಜರ್ನಲ್ಲುಗಳನ್ನು, ಪತ್ರಿಕೆಗಳನ್ನು, ಮನೆಯಿಂದ ಬರುತ್ತಿದ್ದ ಪತ್ರಗಳನ್ನು ರದ್ದಿ ಪೇಪರಿನ ಸಮಕ್ಕೆ ನೋಡುತ್ತಿದ್ದರು. ವಯಸ್ಸು-ವಯಸ್ಸಿನ ಕಾಳಗವಲ್ಲವೇ ಅದು! ಒಮ್ಮೊಮ್ಮೆ ಯಾವಳೋ ನನ್ ಜರ್ನಲ್ ಕದ್ ಬಿಟ್ಟಿದಾಳೆ ಅಂತ ಸ್ಕಾಲರ್ರುಗಳು ಗಲಾಟೆ ಮಾಡುವುದೂ, ಆ ಜರ್ನಲ್ಲೇನು ಲವ್ ಲೆಟರ್ರಾ ಕದ್ದೋಳಿಗೆ ಮಜಾ ಕೊಡಕ್ಕೇ? ಎನ್ನುವ ಕುಹಕಗಳೂ ಬೇಕಾಬಿಟ್ಟಿಯಾಗಿ ವಿನಿಮಯವಾಗುತ್ತಿದ್ದವು.

ಇ-ಮೈಲ್, ಮೊಬೈಲ್ ಇಲ್ಲದ ಕಾಲಕ್ಕೆ ಊರಿಂದ ಊರಿಗೆ ಅಂಟಿಸಿಕೊಂಡ ಸ್ಟಾಂಪಿಗೂ ಮೀರಿ ಸಾವಿರ ಪಟ್ಟು ಭಾವನೆಗಳನ್ನು ಹೊತ್ತ ಪತ್ರಗಳು ರವಾನೆಯಾಗುತ್ತಿದ್ದವು. ಪತ್ರ ಹುಟ್ಟಿಸುವ ಪುಳಕದ ಒಂದು ಪರ್ಸೆಂಟಿನಷ್ಟು ಅಂಶವನ್ನು ಇಮೈಲ್ ಆಗಲೀ, ಎಸ್ಸೆಮ್ಮೆಸ್ಸುಗಳಾಗಲೀ ಹುಟ್ಟಿಸಲು ಸಾಧ್ಯವೇ ಇಲ್ಲವೆಂದರೆ ಯುವ ಜನಾಂಗ ಕೇಕೆ ಹಾಕಿ ನಗಬಹುದೇನೋ. ಹಾಗಿದ್ದಾಗೂ ಈ ಮಾತನ್ನು ಹೇಳಲೇಬೇಕಿದೆ!

ಪತ್ರ ನೋಡಿದ ತಕ್ಷಣ ಮೊದಲಾಗುವ ಅನುಭವ ಮೈ ಝುಂ ಎನ್ನುವುದು. ನಂತರ ನಿಧನಿಧಾನವಾಗಿ ಆವರಿಸುವ ಉತ್ಸಾಹ, ಒಂದು ಬಗೆಯ ಆತಂಕ ತುಂಬಿದ ಸಂತೋಷ, ಮನೆಯಿಂದ ಲೆಟರ್ ಬಂದರೂ, ಪರಿಚಿತರಿಂದ ಬಂದರೂ ನಿಂತ ಕಾಲಲ್ಲಿ ಪತ್ರ ಓದಿದ ಉದಾಹರಣೆಗಳೇ ಕಡಿಮೆ.

ಪತ್ರ ಒಡೆದು ಓದುವ ಮುನ್ನ ಬಹಳ ಸಂಪ್ರದಾಯ ಪಾಲನೆಯಾಗಬೇಕು. ಮೊದಲಿಗೆ ಹಸ್ತಾಕ್ಷರ ಪರಿಶೀಲನೆಯಾಗಬೇಕು. ‘ಯಾರದ್ದಿರಬಹುದು? ಅವನ/ಅವಳ ಹ್ಯಾಂಡ್ ರೈಟಿಂಗ್ ಹಿಂಗಿಲ್ವಲ್ಲ?’ ಅಂತೆಲ್ಲ ವಿಶ್ಲೇಷಣೆಯಾಗಬೇಕು. ಕಲರ್ ಕಲರ್ ಇಂಕಿನಲ್ಲಿ ವಿಳಾಸ ಬರೆದಿದ್ದರೆ, ಮೇಲೆ ಡಿಸೈನುಗಳಿದ್ದರೆ ಸ್ನೇಹಿತ/ತೆಯರ ಗುಡ್ ನ್ಯೂಸೆಂದೂ, ಕರೀ ಇಂಕಿನಲ್ಲಿ ಇದ್ದರೆ ಮನೆಯಿಂದ ಬಂದ ಕಾಗದವೆಂದೂ ವಿಂಗಡಣೆಯಾಗಬೇಕು. ನಂತರ ಪತ್ರ ತೆಗೆದುಕೊಂಡು ರೂಮಿಗೆ ಹೋಗಿ, ಮುಖ ತೊಳೆದುಕೊಂಡು ಹಾಸಿಗೆಯ ಮೇಲೆ ಕಾಲು ಚಾಚಿ ಕೂರಬೇಕು. ಹಾಸಿಗೆ ಕಿಟಕಿ ಪಕ್ಕ ಇದ್ದರಂತೂ ಇನ್ನೂ ಒಳ್ಳೆಯದು. ಪತ್ರ ಓದಿ ಮುಗಿಸಿದ ಮೇಲೆ ಓದಿದ್ದನ್ನು ಮೆಲುಕು ಹಾಕಲು, ಒಂಥರಾ ಟೈಂ ಟ್ರಾವೆಲ್ ಥರ ಮಾಡಲು ಸಿನಿಮೀಯವಾಗಿ ಚೆನ್ನಾಗಿರುತ್ತದೆ.

ಒಂದೆರಡು ದಿನ ಪತ್ರದ ಗುಂಗಿನಲ್ಲೇ ಇರಬೇಕು. ಕೂತರೂ ನಿಂತರೂ ಅಕ್ಷರಗಳೇ ಕಣ್ಣ ಮುಂದೆ ಕುಣಿಯುತ್ತಿರಬೇಕು. ಮತ್ತೆ ಮತ್ತೆ ಪತ್ರ ಓದಿ ಧೇನಿಸಬೇಕು. ಇಷ್ಟೆಲ್ಲಾ ಆದ ಮೇಲೆ ಪತ್ರಕ್ಕೆ ಉತ್ತರ ಬರೆಯಲು ತಯಾರಿ ಮಾಡಿಕೊಳ್ಳಬೇಕು. ಅಕಸ್ಮಾತ್ ಅಂಚೆಯಣ್ಣನೇನಾದರೂ ಹಳೇ ಪ್ರೇಮಿಯ ಮದುವೆ ಇನ್ವಿಟೇಷನ್ ಏನಾದರೂ ತಂದು ಕೊಟ್ಟನೋ, ಅಂಥವರ ಜೊತೆಗೆ ಇರುವವರ ಗತಿ ನಾಯಿಗೂ ಬ್ಯಾಡ. ಅಂಥವರನ್ನು ಸಂಭಾಳಿಸುವುದರಲ್ಲೇ ಜೀವನ ಸಾಕುಬೇಕಾಗುತ್ತಿತ್ತು. ಇಂಥಾ ಹುಡುಗಿಯರನ್ನು ಗುರುತು ಹಿಡಿಯುವುದು ಸುಲಭವೂ ಇರುತ್ತಿತ್ತು. ಅವರನ್ನು ಗುರುತಿಸಿ ಅವರ ಬಗ್ಗೆ ಬೇರೆಯವರಿಗೆ ಎಚ್ಚರಿಕೆ ನೀಡಲು ಒಂದು ಕೋಡ್ ವರ್ಡ್ ಇತ್ತು - ‘ರೇಬಿಸ್’.

ಆ ಕೇಸುಗಳ ತಂಟೆಗೆ ರೂಮ್ ಮೇಟುಗಳನ್ನು ಬಿಟ್ಟರೆ ಇನ್ಯಾರೂ ಹೋಗುತ್ತಿರಲಿಲ್ಲ. ‘ಅವ್ಳಾ? ಪಾಪ ಕಣೇ. ರೇಬಿಸ್ ಅಂತೆ’ ಎನ್ನುವ ಮಾತು ಸರ್ವೇ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಅಂಚೆಯಣ್ಣ ಮಹೇಶ ಯಾರನ್ನೂ ಮಾತಾಡಿಸುತ್ತಿರಲಿಲ್ಲ. ತಲೆ ತಗ್ಗಿಸಿ ಬಂದು, ಲೆಟರುಗಳನ್ನು ಟೇಬಲ್ಲಿನ ಮೇಲೆ ಹಾಕಿ ವಾಪಸು ಹೋಗಿಬಿಡುತ್ತಿದ್ದ. ಯಾರಿಗಾದರೂ ಮನಿಯಾರ್ಡರ್ ಇದ್ದರೆ ಮಾತ್ರ ಅವರ ಹತ್ತಿರ ಮಾತು ನಡೆಯುತ್ತಿತ್ತು. ತಾನಾಯಿತು, ತನ್ನ ಕೆಲಸವಾಯಿತು ಎನ್ನುವ ಆಸಾಮಿ. ಹೀಗಿದ್ದ ಮನುಷ್ಯ ಇದ್ದಕ್ಕಿದ್ದಂತೆ ಹಾಸ್ಟೆಲಿನಲ್ಲಿ ಸಂಚಲನ ಮೂಡಿಸಿಬಿಟ್ಟ, ಹಾಸ್ಟೆಲಿನ ಕೆಲ ರೂಮುಗಳು ‘ಓಪ್ಪನ್’ ಯೂನಿವರ್ಸಿಟಿಯ ವಿಹಂಗಮ ನೋಟವನ್ನು ತೋರಿಸುತ್ತಿದ್ದವು. ಮೊದಲ ಮಹಡಿಯಲ್ಲಿದ್ದ ರೂಮುಗಳಿಗೆ ಹಸಿರು ಆಚ್ಛಾದಿತ ಕ್ಯಾಂಪಸ್ಸು ಕಾಣುತ್ತಿತ್ತು.

ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಹಾಸ್ಟೆಲ್ ಹುಡುಗಿಯರು ಕ್ಲಾಸಿನಲ್ಲಿದ್ದರು. ವಿಜಿ ಹುಷಾರಿಲ್ಲವೆಂದು ಬಂದು ರೂಮಿನಲ್ಲಿ ಮಲಗಿದ್ದಳು. ಆ ಹೊತ್ತಿನಲ್ಲಿ, ಬೀನಾ ಎನ್ನುವ ಕೊಡವರ ಹುಡುಗಿ ಮೊದಲನೆ ಮಹಡಿಯ ರೂಮಿನಿಂದ ಕಿಟಾರೆಂದು ಕಿರುಚಿಕೊಂಡು ಹೊರಗೆ ಬಂದಳು. ಅವಳ ಕಿರುಚಾಟ ಕೇಳಿದರೆ, ಯಾರದೋ ಕೊಲೆ ಆಯಿತೇನೋ ಎನ್ನುವಷ್ಟು ಉದ್ವೇಗ ಹೊತ್ತಿತ್ತು. ವಿಜಿ ಮೇಲಕ್ಕೆ ಓಡಿದಳು. ಬೀನಾ ರೂಮಿನ ಕಡೆ ಬೆರಳು ತೋರಿಸುತ್ತಾ ಏದುಸಿರು ಬಿಡುತ್ತಿದ್ದಳು. ವಿಜಿ ಬೀನಾಳ ಭುಜ ಹಿಡಿದು ಸಮಾಧಾನ ಮಾಡಿ ಏನು ಅಂತ ಕೇಳಿದಳು. ಏನು ಎಂದರೂ ಇಲ್ಲ, ಎಂತು ಎಂದರೂ ಇಲ್ಲ. ಬರೀ ಬೆರಳಿನ ವಿಶ್ವಕೋಶ. ನೋಡಿ ನೋಡಿ ವಿಜಿಗೆ ಬೇಜಾರಾಯಿತು.

‘ಲೈ. ಏನು ಅಂತ ಹೇಳ್ತೀಯೋ ಇಲ್ವೋ? ನಿನ್ ಸೈನ್ ಲಾಂಗ್ವೇಜ್ ನನಗೆ ಅರ್ಥ ಆಗಲ್ಲ’
ಸ್ವಲ್ಪ ಸುಧಾರಿಸಿಕೊಂಡು ಬೀನಾ ವಿಜಿಯನ್ನು ರೂಮಿನೊಳಕ್ಕೆ ಕರೆದೊಯ್ದಳು. ಕಿಟಕಿಯಿಂದ ಹೊರಗೆ ನೋಡು ಎಂದು ತಾಕೀತು ಮಾಡಿದಳು. ವಿಜಿ ಹೊರಗೆ ನೋಡಿದರೆ ಮರಗಳೆಲ್ಲ ಹಸಿರಿನ ಟೋಪಿ ಹೊತ್ತು ಸಂತೋಷವಾಗಿ ಓಲಾಡುತ್ತಿವೆ. ಹೆದರುವಂಥದ್ದು ಅಲ್ಲೇನೂ ಇರಲಿಲ್ಲ.
‘ಏನೂ ಇಲ್ವಲ್ಲೇ?’
‘ಇಲ್ವಾ?’
‘ಇಲ್ಲ. ಯಾಕೆ ಏನಾಯ್ತು?’
‘ದಿನಾ ಬಂದು ನಿಲ್ತಾನೆ. ನನಗೆ ಯಾಕೆ ಅಂತ ಗೊತ್ತಾಗಿರಲಿಲ್ಲ. ಈಗ ಅರ್ಥ ಆಗ್ತಿದೆ ಇವ್ನ್ ಕೆಲಸ’ ಎಂದಳು. ವಿಜಿಗೆ ತಲೆಬುಡ ಅರ್ಥವಾಗಲಿಲ್ಲ. ಬೀನಾ ವಿಜಿಗೆ ನಾಳೆ ಇದೇ ಟೈಮಿಗೆ ನನ್ ರೂಮಿಗೆ ಬಾ ಎಂದು ಹೇಳಿದಳು. ಯಾವುದೋ ಪತ್ತೇದಾರಿ ಕೆಲಸವೆಂಬಂತೆ ವಿಜಿ ರಶ್ಮಿಯನ್ನು ಸೇರಿಸಿಕೊಂಡಳು.

ಇಬ್ಬರೂ ಸೇರಿ ಬೀನಾ ರೂಮಿಗೆ ಹೋದರು. ಮಟಮಟ ಮಧ್ಯಾಹ್ನ ಮೂರು ಗಂಟೆ. ಆಕಾಶವಾಣಿಯಲ್ಲಿ ಹಿಂದಿ ಚಿತ್ರಗೀತೆಗಳ ಸಮಯ. ಕಿಟಕಿಯಿಂದ ಹೊರಗೆ ನೋಡಿದರೆ ಅಂಚೆಯಣ್ಣ ಮಹೇಶ ನಿಂತಿದ್ದಾನೆ. ಹುಡುಗಿಯರ ಹಾಸ್ಟೆಲಿನ ಕಡೆ ಮುಖ ಮಾಡಿದ್ದಾನೆ. ಪ್ಯಾಂಟು ಕೆಳಗೆ ಇಳಿದಿದೆ.

‘ದಿನಾ ಇದೇ ಕೆಲಸ ಮಾಡ್ತಾನೆ ಕಣೆ. ಬೇರೆ ಹುಡುಗೀರೂ ನೋಡಿದಾರೆ. ಅವನ ಬಗ್ಗೆ ಯಾರಿಗಾದ್ರೂ ಹೇಳಕ್ಕೆ ಹೆದರಿಕೆ. ಏನ್ ಮಾಡ್ತಾನೆ ಅಂತ ಕೇಳಿದ್ರೆ ಹೆಂಗೆ ಹೇಳೋದು?’ ಅಂತ ಬೀನಾ ಹೇಳಿದಳು. ಹೆದರ್ಕೋಬೇಡ, ನೋಡೋಣ ಇರು ಎಂದು ರಶ್ಮಿ ಧೈರ್ಯ ಕೊಟ್ಟಳು. ಆಮೇಲೆ ಗೋವಾ ಟ್ರಿಪ್ ಮುಗಿಸಿಕೊಂಡು ಬಂದಾಗ ಕಾಕತಾಳೀಯವಾಗಿ ವಿಷಯ ಚರ್ಚೆಗೆ ಬಂತು. ಚಹಾ ಕುಡಿಯುತ್ತಾ ಇದಿಷ್ಟನ್ನೂ ಇಂದುಮತಿಯ ಮುಂದೆ ಹೇಳಿದಾಗ ಮೊದಲಿಗೆ ಕಂಪ್ಲೇನ್ ಮಾಡೋದಾ ಅಂತ ವಿಚಾರ ಮಾಡಿದರು.

‘ಅದೊಂಥರಾ ಮಾನಸಿಕ ರೋಗ ಕಣೆ. ಎಕ್ಸಿಬಿಷನಿಸಂ ಅಂತಾರೆ’ ರಿಂಕಿ ಹೇಳಿದಾಗ ಎಲ್ಲರಿಗೂ ಆಶ್ಚರ್ಯ. ಇಂದುಮತಿ ಕೇಳಿದಳು ‘ನಿಂಗೆ ಹೆಂಗೇ ಗೊತ್ತು?’
‘ನನ್ನ ಮಾಮ ಒಬ್ಬರಿಗೆ ಈ ಕಾಯಿಲೆ ಇತ್ತು’
‘ಆಮೇಲೆ?’
‘ಏನಿಲ್ಲ. ಕೌನ್ಸೆಲಿಂಗ್‌ನಲ್ಲಿ ಸರಿ ಹೋಯಿತು’
‘ಮತ್ತೆ ಬಸ್ಸಿನಲ್ಲಿದ್ದ ಅಂಕಲ್ಲಿಗೂ ಹಂಗೇ ಇರ್ಬೋದು. ಹಂಗಂತ ಸುಮ್ಮನೆ ಇರೋಕಾಗತ್ತಾ?’
‘ಅಂಕಲ್ಲಿಗೂ ಸಮಸ್ಯೆ ಇರಬೋದು. ಅಂಕಲ್ ತನ್ನ್ ಪಾಡಿಗೆ ತಾನ್ ಇದ್ದಿದ್ದ್ರೆ ಏನೂ ಸಮಸ್ಯೆ ಇರಲಿಲ್ಲ. ಮಹೇಶ ತನ್ನ ಪ್ರದರ್ಶನ ತಾನೇ ಮಾಡಿಕೊಳ್ತಾ ಇದಾನೆ. ಅದಕ್ಕೂ ಇದಕ್ಕೂ ವ್ಯತ್ಯಾಸ ಇದೆ’

‘ಇದನ್ನೆಲ್ಲಾ ಒಪ್ಪೋಕಾಗುತ್ತಾ ರಿಂಕಿ? ಪರ್ವರ್ಷನ್ ಅಂದರೆ ಪರ್ವರ್ಷನ್. ಅದರಲ್ಲಿ ಕಡಿಮೆ ತಪ್ಪು, ಹೆಚ್ಚು ತಪ್ಪು ಅಂತ ಇರಲ್ಲ’. ‘ಇದು ತಪ್ಪು ಅಲ್ಲ ಅಂತ ನಾನೆಲ್ಲಿ ಹೇಳಿದೆ? ನನಗೆ ಈ ವಿಷಯ ಗೊತ್ತು ಅಂತ ಮಾತ್ರ ಅಂದೆ’
‘ಆದ್ರೆ ಒಂದೇ ಚಿಂತೆ ಕಣೆ’
‘ಏನು? ಅವ್ನು ಏನ್‍ ಬೇಕಾದ್ರೂ ಮಾಡ್ಕೊಳ್ಲಿ, ಅವ್ನ್ ಹತ್ರ ಇನ್ನ್ ಮೇಲೆ ಲೆಟರ್ ಹೆಂಗೇ ಇಸ್ಕೊಳೋದೂ?’
‘ಅಂದ್ರೆ?
‘ಥೂ! ಆ ನನ್ಮಗ ಕೈತೊಳ್ಕೊಂಡಾದ್ರೂ ಬರ್ತಾನ ಅಂತ ಗೊತ್ತಾಗಿದ್ದಿದ್ರೆ, ಒಳ್ಳೇದಿತ್ತು’. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT