ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತೆಯ ಭ್ರಾಂತಿಗೆ ಸಿಕ್ಕ ಬಲಿ

Last Updated 16 ಜೂನ್ 2018, 9:04 IST
ಅಕ್ಷರ ಗಾತ್ರ

ಒಂದು ಮಧ್ಯಾಹ್ನ ಕ್ಲಾಸ್ ಮುಗಿಸಿ ಹಾಸ್ಟೆಲ್ ರೂಮಿಗೆ ಬಂದ ತಕ್ಷಣ ಅಟೆಂಡರ್ ಮೋನ ವಿಜಿಯನ್ನು ಹುಡುಕಿಕೊಂಡು ಬಂದ. ರೂಮಿನ ಹೊರಗೇ ನಿಂತು ಉಸಿರು ತಿರುಗುವುದರೊಳಗೆ ಹತ್ತು ಸಾರಿ ಕರೆದ. ಮುಖ ತೊಳೆದುಕೊಳ್ಳುತ್ತಿದ್ದವಳಿಗೆ ರೇಗಿ ಹೋಯಿತು. ಮುಖದ ತುಂಬೆಲ್ಲ ಸೋಪು ಮೆತ್ತಿದೆ, ಓ ಎನ್ನಲೂ ಕಷ್ಟ. ಉತ್ತರಿಸದಿದ್ದರೆ ಈ ಕಿರಾತಕ ಕೂಗುವುದನ್ನು ನಿಲ್ಲಿಸುವುದಿಲ್ಲ. ಕಡೆಗೂ ಮುಖಕ್ಕೆ ನೀರು ಹಾಕಿಕೊಳ್ಳುತ್ತಾ ಓ ಎಂದಳು. ಮೂಗಿನ ಒಳಗೆಲ್ಲ ಸೋಪು ಹೋಗಿ ಕಣ್ಣು ಮೇಲಕ್ಕೆ ಬಂದಂತಾಯಿತು. ಕೆಮ್ಮಿ ಕ್ಯಾಕರಿಸಿ, ಮೂಗು ಕ್ಲೀನ್ ಮಾಡಿಕೊಂಡು ಬಂದಳು.

ಬಯ್ಯೋಣ ಅಂತ ಧಡಾರ್ ಎಂದು ಬಾಗಿಲು ತೆರೆದರೆ ಅವನೇ ಇವಳ ಉಸಿರು ಏರುಪೇರಾಗುವಂಥ ಸಂದೇಶ ಕೊಟ್ಟ. ‘ನೀವು ವಾರ್ಡನಮ್ಮ ಅವ್ರನ್ನ ನೋಡ್ಬೇಕಂತೆ. ಸಾಯಂಕಾಲ ಬತ್ತೀನಿ. ಇಜಿಯಮ್ಮನ್ನ ಇರಾಕ್ ಯೋಳು ಅಂತ ಯೋಳವ್ರ. ನಾ ಅದ್ಕ ಏಳನಾ ಅಂತ ಬಂದಿ. ಸಂದೇಕ್ (ಸಂಜೆಗೆ) ಬಂದು ಅವ್ರ ಆಪೀಸಲ್ಲಿ ಕಾಣಿ’ ಅಂದ.

‘ಯಾಕಂತೆ ಮೋನ?’
‘ಏನೋಪ್ಪ. ಬ್ಯಳಿಗ್ಗೆ ಯಾರೋ ಬಂದಿದ್ರು. ಮಾತಾಡಿದ್ರು. ನಾನೆಲ್ಲ ಇಚಾರುಸ್ತೀನಿ. ನೀವ್ ಆಮ್ಯಾಕ್ ಬನ್ನಿ ಅಂದ್ರು ವಾರ್ಡನಮ್ಮ. ಅವ್ರ್ ವೋದ್ ಚಣದಲೇ ನಿಮ್ಮ ಕ್ಯೋಳುದ್ರು. ನಾ ನಿಮ್ಮ ಕೂಗ್ದಿ. ನೀವ್ ಇರ್ನಿಲ್ಲ. ಮತ್ತ ಸಂದೀಕ್ ಬತ್ತೀನಿ. ಇರಾಕ್ ಯೋಳು ಅಂತ ಯೋಳಿ ಧಡ ಭಡ ವೋದ್ರು’ ಎಂದ. ವಿಜಿಗೆ ಚಿಂತೆಗಿಟ್ಟುಕೊಂಡಿತು.

ಅವಳ ಸ್ಮರಣೆಯಲ್ಲಿ ವಾರ್ಡನ್ ಕೈಲಿ ಹೊಗಳಿಸಿಕೊಳ್ಳುವಂಥ ಘನಂದಾರಿ ಕೆಲಸಗಳನ್ನೇನೂ ಮಾಡಿರಲಿಲ್ಲ. ಉಗಿತಕ್ಕೆ ಅರ್ಹವಾಗುವ ಕೆಲಸಗಳನ್ನೂ ಮಾಡಿಲ್ಲವೆನ್ನಿಸಿತು. ಮತ್ಯಾಕೆ ಭೇಟಿ ಮಾಡಕ್ಕೆ ಹೇಳಿದ್ರು?

ಅಲ್ಲದೆ ಯಾರೋ ಬಂದು ಮಾತಾಡಿದ ಮೇಲೆಯೇ ನನ್ನ ಹುಡುಕಿದರಂತೆ. ಯಾರಾದರೂ ನಮ್ಮ ಮೇಲೆ ದೂರು ಕೊಟ್ಟಿರಬಹುದಾ? ಅಥವಾ ಮೊನ್ನೆ ರಾತ್ರಿ ರೂಮಿನಲ್ಲಿ ಕೊಡವರ ಹುಡುಗೀರು ಕೊಟ್ಟ ವೀಳ್ಯೆದೆಲೆ ವೈನ್ ಕುಡಿದದ್ದು ಗೊತ್ತಾಯಿತಾ? ರೂಮ್ ಖಾಲಿ ಮಾಡಿ ಅಂತಾರಾ ಹೇಗೆ? ಅಯ್ಯೋ!

ಹಂಗೇನಾದ್ರೂ ಆದ್ರೆ ಏನಪ್ಪಾ ಮಾಡೋದು? ಊರಿಗೆ ವಾಪಾಸ್ ಹೋದ್ರೆ ಮಂಗಳಾರತಿ ಆಗುತ್ತೆ.
‘ಸರಿ, ನಾನು ಬರ್ತೀನಿ ಹೋಗು’ ಎಂದಳು. ‘ಅಕ್ಕಾ, ಮರ್ತುಬುಟ್ಟೀರ. ವಾರ್ಡನಮ್ಮ ಬಾಳಾ ಶ್ಟ್ರಿಕ್ಕು. ಮತ್ತ ಸುಮ್ಕ ಪ್ಲಾಬ್ಲ್ಂ ಆಗ್ತದ’ ಎಂದು ಕಣ್ಣಲ್ಲೇ ವಿಶ್ವರೂಪ ದರ್ಶನ ಮಾಡಿಸಿದ.

‘ಇಲ್ಲ ಕಣೋ. ಬರ್ತೀನಿ’ ಎಂದು ಅಸಹನೆಯಿಂದ ಹೇಳಿದಳು. ಹವಾಯಿ ಚಪ್ಪಲಿಯನ್ನು ಚಪ ಚಪ ಬಡಿಯುತ್ತಾ ಸೋಮಾರಿ ಕಾಲುಗಳನ್ನು ಕಷ್ಟ ಪಟ್ಟು ಎತ್ತಿಡುತ್ತಾ ನಾಲ್ಕು ಹೆಜ್ಜೆ ಹೋದ ಮೋನ ತಿರುಗಿ ನೋಡಿದ. ಅವನು ಹೋದ ದಾರಿಯನ್ನು ಗಮನಿಸುತ್ತಾ ಇವಳಿನ್ನೂ ರೂಮಿನ ಬಾಗಿಲಲ್ಲೇ ನಿಂತಿದ್ದಳು. ‘ಅಕ್ಕಾ’
‘ಏನಪ್ಪಾ?’

‘ನಾನ್ ಆವತ್ತೇ ಯೋಳ್ದಿ. ಈ ರಣದ್ ರೂಮು ಬ್ಯಾಡ ಕನ ಅಂತವ. ದೆವ್ವ ಪವ್ವ ಏನಿದ್ರೂ ಪರ್ವಾಗಿಲ್ಲ. ಇಲ್ಲೇ ಇರ್ತೀನಿ ಅಂದ್ರಿ. ಈಗ್ ನೋಡಿ ಬಂದಿ ತಿಂಗಳಾಗ್ನಿಲ್ಲ ಆಗ್ಲೇ ವಾರ್ಡನಮ್ಮ ಯೋಳ್ ಕಳ್ಸರ’ ಎಂದು ಕವಡೆ ಹಾಕಿದ.

‘ಯಾಕಿರಬಹುದು ಮೋನ?’
‘ಯಾರ್ ಕಂಡವರಕ್ಕ? ಯಾರೋ ಬಂದು ಕಂಪ್ಲೇಂಟ್ ಯೋಳ್ದಂಗಿತ್ತು. ದಾವಣಗೆರೆಯವ್ರು ಅವ್ರಲ್ಲ, ಅವ್ರನ್ನೇ ಕ್ಯೋಳ್ಕಳಿ ಅಂತವ ಜೋರ್ ಮಾಡ್ತಿದ್ರು’ ಎಂದು ಮೋನ ಚಿಂತೆಯಲ್ಲಿ ಅದ್ದಿದ ದನಿಯಲ್ಲಿ ಸೂಕ್ತವಾದ ಏರಿಳಿತಗಳೊಂದಿಗೆ ಮಾತನಾಡಿದ.

ವಿಜಿಗೆ ಇನ್ನೇನೂ ಹೇಳಲು ತೋಚಲಿಲ್ಲ. ಮೋನನ ಚಪ-ಚಪ ಮತ್ತು ಅವನ ಬಿಳಿ ಶರಟು ಕಾರಿಡಾರಿನ ಕತ್ತಲಲ್ಲಿ ಮರೆಯಾಗುವ ತನಕವೂ ಸುಮ್ಮನೆ ನಿಂತೇ ಇದ್ದಳು.

ಎಂಥಾ ತರ್ಕಶಕ್ತಿಯುಳ್ಳ ಮನಸ್ಸೂ ಶಿಥಿಲಗೊಂಡು ದೇವರು-ದೆವ್ವಗಳ ಒಡನಾಟಕ್ಕೆ ಬಂದುಬಿಡಬಲ್ಲ ಕ್ಷಣಗಳು ಜೀವನದಲ್ಲಿ ಬಹಳ ಬರಬಹುದು. ಹಾಗಂತ ತರ್ಕಶಕ್ತಿಯೇ ದುರ್ಬಲವೇ? ಸಾರಾಸಗಟಾಗಿ ಹಾಗೆ ಹೇಳಲಾಗುವುದಿಲ್ಲ. ಉಳಿದೆಲ್ಲ ಸಮಯದಲ್ಲಿ ಬೆಂಬಲವಾಗಿದ್ದ ನಂಬಿಕೆಗಳು ಕೆಲವು ಬಾರಿ ಕೈಕೊಡುವುದು ಸಹಜವೇ.

ಮೋನ ನಿರ್ಗಮಿಸಿದ ನಂತರ ರಶ್ಮಿ ಬಂದಳು. ಚಿಂತೆಯಲ್ಲಿ ಕೂತ ವಿಜಿಯನ್ನು ನೋಡಿ ಏನಾಯ್ತು ಎಂದು ಕೇಳಿದಳು. ಮೋನನ ಸಂದೇಶವನ್ನೂ, ನಂತರದ ಮಾತುಗಳನ್ನೂ ವಿಜಿ ಸಾದ್ಯಂತವಾಗಿ ಅರುಹಿದಳು.

ರಶ್ಮಿಗೆ ಮೊದಮೊದಲಿಗೆ ಏನೂ ಅನ್ನಿಸಲಿಲ್ಲ. ಮಧ್ಯಾಹ್ನವಾದ್ದರಿಂದ ಇಬ್ಬರೂ ಊಟ ಮಾಡಿ ಮಲಗುವ ವಿಚಾರದಲ್ಲಿದ್ದರು. ಇನ್ನೇನು ನಿದ್ದೆ ಹತ್ತಬೇಕು ಎನ್ನುವಷ್ಟರಲ್ಲಿ ರಶ್ಮಿ ಧಿಗ್ಗನೆದ್ದು ಹೇಳಿದಳು. ‘ಲೈ... ಮೊನ್ನೆ ಆ ಹುಡ್ಗೀರನ್ನಾ ರೂಮಿಗ್ ಕರ್ದಿದ್ವಲ್ಲ?’

‘ಯಾವ್ ಹುಡ್ಗೀರನ್ನ?’
‘ಅಯ್ಯೋ ಇಬ್ರು ಜೂನಿಯರ್ಸ್ ಕಾರಿಡಾರಲ್ಲಿ ಹೋಗ್ತಿದ್ದವ್ರನ್ನ ಕರದು ತಮಾಷೆಗೆ ಅವ್ರ್ ಕೈಲಿ ಡ್ಯಾನ್ಸ್ ಮಾಡಿಸ್ಲಿಲ್ವಾ?’

‘ಅದೇ ಅದೇನೋ ಹೆಸ್ರು ಹೇಳಿದ್ರಲ್ಲ? ರೂಪಶ್ರೀ, ನಂದಿನಿ ಅಂತೇನೋ?’
‘ಥೂ ನಿನ್ನ. ನಂದಶ್ರೀ, ರೂಪಿಣಿ ಅಂತ ಹೇಳಿದ್ರು’

‘ಹೂಂ, ಅವ್ರಿಗೂ ವಾರ್ಡನ್ ನನ್ನ ಕರ್ದಿರೋದಕ್ಕೂ ಏನ್ ಸಂಬಂಧ?’
‘ಹೆಹೆಹೆಹೆ...ಮತ್ತೇ...’

‘ಮುಚ್ಕೊಂಡು ಹೇಳ್ತೀಯಾ ಇಲ್ವಾ? ಟೆನ್ಶನ್ ಆಗಿ ಸಾಯ್ತಾ ಇದ್ರೆ, ಇವ್ಳಿಗೆ ಜೋಕು’
‘ಜೋಕಲ್ಲ ಕಣೇ! ಬಯ್ಯಲ್ಲ ಅಂತ ಪ್ರಾಮಿಸ್ ಮಾಡು. ಹೇಳ್ತೀನಿ’

‘ಅದೆಲ್ಲ ಮಾಡಕ್ಕಾಗಲ್ಲ. ಬಯ್ಯಲ್ಲ, ಒದಿಯಲ್ಲ ಅಂತೆಲ್ಲ ಪ್ರಾಮಿಸ್ ಮಾಡಿ ನಾನ್ ಒಬ್ಳೇ ಹಲ್ಲ್ ಕಚ್ಕೊಂಡು ವಾರ್ಡನ್ ಹತ್ರ ಹೋಗ್ಲಾ? ಒಂದ್ ನೆನಪಿಟ್ಕೋ. ನಾನ್ ಬಿದ್ರೆ ನಿನ್ನೂ ಬೀಳುಸ್ತೀನಿ’
‘ಸರಿ ಹೋಗು. ನೀನ್ ಹಿಂಗೆಲ್ಲ ಮಾತಾಡಿದ್ರೆ ಹೇಳಲ್ಲ’

‘ಹೇಳೇ ಬಿತ್ತರಿ. ಸಾಯಂಕಾಲ ಎಷ್ಟು ದೊಡ್ಡ ಆರತಿ ಎತ್ತುತ್ತಾರೆ ಅಂತಲಾದ್ರೂ ಗೊತ್ತಾಗುತ್ತೆ’
‘ಅದೇ ಆ ನಂದಶ್ರೀ ಮತ್ತೆ ರೂಪಿಣಿ... ಅವ್ರು ಜೂನಿಯರ್ಸ್ ಅಂತಾ ಕರದ್ವಲ್ಲ? ಅವ್ರೂ ಜೂನಿಯರ್ಸ್ ಅಲ್ವಂತೆ...’
‘ಮತ್ತೆ?’, ‘ನಮಗೆ ಸೀನಿಯರ್ಸ್ ಅಂತೆ!’

ಹಣೆಬರಹ ಕೈ ಕೊಟ್ಟಾಗ ಮಾತ್ರ ಈ ರೀತಿಯ ಘೋರವಾದ ಮತ್ತು ಎಲ್ಲ ರೀತಿಯಿಂದಲೂ ಶಿಕ್ಷಾರ್ಹ ಎನಿಸುವಂಥ ಅಪರಾಧ ಮಾಡಲು ಸಾಧ್ಯ. ವಿಜಿಯ ಪಾಲಿಗೆ ಬರೀ ಹಣೆಬರಹ ಕೈ ಕೊಟ್ಟಿರಲಿಲ್ಲ. ಅಲ್ಲಿ ಬರೀ ಕತ್ತಲು ತುಂಬಿತ್ತು. ರಶ್ಮಿ ವಿಜಿಯನ್ನು ಸಮಾಧಾನಪಡಿಸಲು ನೋಡಿದಳಾದರೂ ವಿಜಿಯ ಮನಸ್ಸು ಪ್ರಕ್ಷುಬ್ಧಗೊಂಡಿತ್ತು.

ಮೊದಲೇ ರಶ್ಮಿ ಆ ಹುಡುಗೀರನ್ನಾ ರೂಮಿಗೆ ಕರೆದು ಡ್ಯಾನ್ಸ್ ಮಾಡ್ಸೋಣಾ ಅನ್ನುವಾಗ ಇಂಥವೆಲ್ಲ ಮಾಡೋದು ಬೇಡ ಅಂದಿದ್ದಳು ವಿಜಿ.
ಆದರೆ ರಶ್ಮಿ ಇದ್ಯಾವುದಕ್ಕೂ ಕೇರ್ ಮಾಡೋ ಹಾಗಿರಲಿಲ್ಲ. ಆರಾಮಾಗಿ ನಡೆದು ಹೋಗುತ್ತಿದ್ದ ರೂಪಿಣಿ, ನಂದಶ್ರೀಯರನ್ನು ಕರೆದು ನಾವು ಸೀನಿಯರ್ಸು, ನಮಗೋಸ್ಕರ ಒಂದು ಡ್ಯಾನ್ಸ್ ಮಾಡಿ. ತಮಾಷೆಗೆ ಮಾತ್ರ. ತಪ್ಪು ತಿಳೀಬೇಡಿ’ ಅಂತೆಲ್ಲ ತಾಕೀತು ಮಾಡಿ ಇಬ್ಬರು ಹುಡುಗಿಯರ ಹತ್ರ ಹಿಂದಿ ‘ಬೇಟಾ’ ಚಿತ್ರದ ‘ಧಕ್ ಧಕ್ ಕರನೆ ಲಗಾ...’ ಹಾಡಿಗೆ ಡ್ಯಾನ್ಸು ಮಾಡಿಸಿದ್ದರು.

ಆ ಹುಡುಗಿಯರೂ ಸಖತ್ತಾಗಿ ಡ್ಯಾನ್ಸು ಮಾಡಿ ತಮ್ಮ ರೂಮ್ ನಂಬರು ಕೊಟ್ಟು ಹೋಗಿದ್ದರು. ಅವರು ಹೋಗುವಾಗ ರಶ್ಮಿ ಹೇಳಿದಳು.
‘ಬೇಕಾದ್ರೆ ನಿಮ್ ರೂಮಿಗೆ ಬಂದು ನಾವೂ ಯಾವ್ದಾದ್ರೂ ಹಾಡಿಗೆ ಡ್ಯಾನ್ಸ್ ಮಾಡ್ತೀವಿ. ಹಾಸ್ಟೆಲ್ ಟೀವಿ ಸರಿ ಆಗೋವರ್ಗೂ ಬೇಕಾದ್ರೆ ಎಂಟರ್ಟೈನ್ಮೆಂಟ್ ಹಿಂಗೇ ಇರ್ಲಿ’ ಎಂದಳು.

ವಿಜಿ, ರಶ್ಮಿ ಇಬ್ಬರನ್ನೂ ಮೇಲಿಂದ ಕೆಳಗೆ ನೋಡಿದ ಇಬ್ಬರೂ ಮಾನಸಗಂಗೋತ್ರಿಯ ಮಾಧುರಿ ದೀಕ್ಷಿತರು ‘ಅಯ್ಯೋ ಬೇಡಪ್ಪ. ಬೇಜಾರಾದಾಗ ನಾವೇ ಬಂದು ಕೇಳ್ತೀವಿ. ಅಲ್ದೆ ನಮ್ ರೂಮು ಇಷ್ಟು ದೊಡ್ಡದಿಲ್ಲ. ಡ್ಯಾನ್ಸು ಗೀನ್ಸು ಮಾಡಕ್ಕೆ ಜಾಗ ಇಲ್ಲ’ ಎಂದರು.

ಹೋಗುವಾಗ ಇವರು ತಮ್ಮ ಮೇಲೆ ಕಂಪ್ಲೇಂಟ್ ಹೇಳಬಹುದು ಅಂತ ಊಹಿಸುವುದು ಕೂಡ ಸಾಧ್ಯವಿರಲಿಲ್ಲ. ಆದರೆ, ಈಗ ನೋಡಿದರೆ ಹೋಗಿ ವಾರ್ಡನ್ ಹತ್ತಿರ ಹೇಳಿಬಿಟ್ಟಿದ್ದಾರೆ. ಇಬ್ಬರಲ್ಲಿ ಒಬ್ಬಳು ಯಾವಳೋ ತಮ್ಮನನ್ನೋ ಅಣ್ಣನನ್ನೋ, ಅಪ್ಪನನ್ನೋ ಕರೆಸಿ ವಿಷಯವನ್ನು ದೊಡ್ಡದು ಮಾಡಿದ್ದಾಳೆ.
ಯೋಚಿಸುತ್ತಾ, ಒಬ್ಬರ ಮೇಲೊಬ್ಬರು ಆಪಾದನೆ ಮಾಡುತ್ತಾ ಜಗಳ ಒಂದು ಹಂತಕ್ಕೆ ಬಂದು ನಿಂತಿತು. ಅದೇನೆಂದರೆ, ಆಗಿರುವ ಕೆಲಸ ತಪ್ಪು ಎನ್ನುವುದಾದರೆ ಅದು ಆಗಲೇ ಮುಗಿದುಹೋಗಿರುವ ಘಟನೆ. ಈಗ ಹೊಸದಾಗಿ ಜಗಳವಾಡಿ ಏನೂ ಪ್ರಯೋಜನವಿಲ್ಲ. ಏನಿದ್ದರೂ ಇದರಿಂದ ಹೊರಬರುವ ದಾರಿ ನೋಡಬೇಕಷ್ಟೇ.

ಥೂ! ಇದ್ಯಾವ್ ಘನಂದಾರಿ ತಪ್ಪು ಅಂತ ತಲೆ ಹೋಗೋ ಹಾಗೆ ಆಡಬೇಕು? ಸಮಸ್ಯೆ ವಾರ್ಡನ್ ಬರುವ ತನಕ ಬಗೆಹರಿಯುವಂಥದ್ದಲ್ಲ ಎಂದು ಗಮ್ಯವಾಗುತ್ತಿದ್ದಂತೆ ವಿಜಿ ರಶ್ಮಿಗೆ ಹೇಳಿದಳು.

‘ಲೈ ಇದ್ರಲ್ಯಾವ ದೊಡ್ ಕ್ರೈಂ ಮಾಡಿದೀವಿ ಅನ್ನೋ ಥರಾ ಸಾಯ್ತಿದೀವಿ? ಹೋಗಿ ಮೀಟ್ ಮಾಡ್ತೀನಿ. ತಪ್ ಮಾಡಿದೀಯ ಅಂದ್ರೆ ಹೌದು ಮೇಡಮ್ ಅಂದು ಕಾಲಿಗ್ ಬಿದ್ದು ಸಾರಿ ಕೇಳ್ತೀನಿ. ಆ ಹುಡ್ಗೀರ್ಗೂ ಬೇಕಾದ್ರೆ ಕಾಲಿಗೆ ಬೀಳ್ತೀನಿ ಅಂತ ಹೇಳ್ತೀನಿ. ಊರಿಗ್ ಮಾತ್ರ ವಾಪಾಸ್ ಹೋಗಲ್ಲ. ಅದೇನಾಗುತ್ತೋ ಆಗೇ ಬಿಡ್ಲಿ...’ ಎಂದಳು ವಿಜಿ.

ಅಷ್ಟು ಹೊತ್ತಿಗೆ ಚಹಾದ ಸಮಯ. ಉಂಡಿದ್ದ ಊಟವೆಲ್ಲ ಕುತ್ತಿಗೆಗೆ ಬಂದಂತಿತ್ತು. ವಾರ್ಡನ್ ಸುದ್ದಿಯೇ ಇಲ್ಲ. ಮೋನನ ಗಡಿಯಾರದಲ್ಲಿ ಸಂಜೆಗೆ ಇಂತಿಷ್ಟು ಅಂತ ಟೈಮ್ ಇರಲಿಲ್ಲ. ‘ವಾರ್ಡನಮ್ಮ’ ಸಂಜೆಗೆ ಬರ್ತಾರೆ ಅಂದರೆ ಒಂದು ಕಾಲಸೂಚಿ ಅಷ್ಟೇ, ಅದಕ್ಕೆ ನಿರ್ದಿಷ್ಟ ಗಂಟೆ ಅಂತ ಇಲ್ಲ. ಅಲ್ಲೀತನಕ ಮನಸ್ಸಿನ ನರಕ ಅನುಭವಿಸಬೇಕು. ಸೂರ್ಯ ಮುಳುಗಿದರೂ ವಾರ್ಡನ್ ಪತ್ತೆ ಇಲ್ಲ. ಮೋನನನ್ನು ಕೇಳಲೋ ಬೇಡವೋ ಎಂದುಕೊಂಡು ಮತ್ತೆ ಸುಮ್ಮನಾದಳು ವಿಜಿ. ಅವನು ತಿರುಗಿ ದೆವ್ವ-ಪವ್ವ ಅಂತೆಲ್ಲ ಕಂತೆ ಪುರಾಣ ಶುರು ಮಾಡಿದರೆ ಸಹಿಸಿಕೊಳ್ಳುವಷ್ಟು ಮನುಷ್ಯತ್ವ ಅವಳಲ್ಲಿ ಉಳಿದಿರಲಿಲ್ಲ.

ರಾತ್ರಿಯ ಹೊತ್ತಿಗೆ ಆತಂಕ ಜಾಸ್ತಿಯಾಯಿತು. ಹಾಸ್ಟೆಲಿನಿಂದ ಹೊರಗೆ ಹಾಕುವ ಬಗ್ಗೆ ಯೋಚಿಸಿದಾಗಲೆಲ್ಲ ಮೈ ಝುಂ ಎನ್ನುತ್ತಿತ್ತು. ಊರಿಗೆ ವಾಪಾಸು ಹೋದರೆ ಮತ್ತೆ ಲಿಂಗಾಯತ ಧರ್ಮವೇ ಗತಿಯಾಗುತ್ತದಲ್ಲಾ ಎನ್ನಿಸಿ ವಾರಾಂತ್ಯದ ಉಪ್ಪಿಟ್ಟು ಕಾರ್ಯಕ್ರಮ ಬೇಡವೆಂದರೂ ತಲೆತುಂಬಾ ವ್ಯಾಪಿಸಿಕೊಂಡು ಮನಸ್ಸು ವ್ಯಾಕುಲಗೊಳ್ಳುತ್ತಿತ್ತು.

ರಾತ್ರಿ ಊಟವಾಗಿ ಎಲ್ಲ ರೂಮುಗಳ ಲೈಟ್ ಆಫ್ ಆದ ಮೇಲೆ ಮೋನನಿಗೆ ಬೇರೆ ಏನಾದರೂ ಮಾಹಿತಿ ಗೊತ್ತೇನೋ ಎಂದು ಪತ್ತೆ ಹಚ್ಚಲು ಅವನು ಮಲಗುತ್ತಿದ್ದ ಜಾಗಕ್ಕೆ ಹೋದಳು.

ಮೋನ ಹಾಸ್ಟೆಲಿನ ದೊಡ್ಡ ವರಾಂಡದಲ್ಲಿ ಮಲಗುತ್ತಿದ್ದ. ಅಲ್ಲೇ ಕಾಯಿನ್ ಬೂತ್ ಥರದ ಫೋನ್ ಇತ್ತು. ಅದು ಬರೀ ಕರೆಗಳನ್ನು ರಿಸೀವ್ ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿತ್ತು. ರಾತ್ರಿ ಹತ್ತು ಗಂಟೆಯ ನಂತರ ಫೋನನ್ನು ಹುಕ್ ನಿಂದ ತೆಗೆದು ಮೋನ ಮಲಗಿಕೊಳ್ಳುತ್ತಿದ್ದ. ರಾತ್ರಿಯೆಲ್ಲ ಫೋನ್ ರಿಂಗ್ ಆಗಿ ಅವನ ನಿದ್ರಾ ಭಂಗವಾಗುವುದನ್ನು ತಡೆಯಲು ಅವನು ಕಂಡುಕೊಂಡಿದ್ದ ಉಪಾಯ ಇದು.

ಇವಳು ಹೋದಾಗ ಮೋನ ಆಗಲೇ ಮಲಗಿ ಘೋರವಾಗಿ ಗೊರಕೆ ಹೊಡೆಯುತ್ತಿದ್ದ. ತಲೆ ದೆಸೆಗೆ ಚಪ್ಪಲಿ ಇದ್ದವು. ವಿಜಿ ಮೋನನನ್ನು ಎಬ್ಬಿಸಿದ ತಕ್ಷಣ ಹಾ, ಹೂ ಎಂದು ಕಿರುಚಾಡುತ್ತಾ ಎದ್ದ. ಅವನು ದೊಡ್ಡಾಟ, ಯಕ್ಷಗಾನ ಮಾಡಿದರೂ ಯಾವ ಹುಡುಗಿಗೂ ಎಚ್ಚರವಾಗಲಿಲ್ಲ. ಕನಿಷ್ಠ ಏನಾಯಿತು ಎಂದು ಕೇಳಲೂ ಯಾರೂ ಬರಲಿಲ್ಲ.

ವಿಜಿಯನ್ನು ನೋಡಿ ಮೋನ ಭ್ರಮನಿರಸನಗೊಂಡಂತಿದ್ದ. ‘ಥೂ. ನೀನೇನಕ್ಕಾ ಇಷ್ಟೊತ್ತಲ್ಲಿ? ನಾನು ಮೋಯಿನಿ ದೆವ್ವ ಅಂತ ಎದ್ರಿಕಬುಟ್ಟೆ!’ ಎಂದ.
‘ಮೋನಾ, ಮೋಯಿನಿ ದೆವ್ವ ನಿನ್ಯಾಕೋ ಹುಡುಕ್ಕೊಂಬರುತ್ತೆ? ಬೇರೆ ಯಾರೂ ಸಿಗಲ್ವಾ ಅದಕ್ಕೆ?’ ಎಂದು ಮಾತನ್ನು ಲಘುವಾಗೇ ಶುರು ಮಾಡಿದಳು ವಿಜಿ.
‘ಅಯ್ಯೋ. ನಿಂಗೇನ್ ಗೊತ್ತಕ್ಕಾ ಈ ಹಾಸ್ಟೆಲ್ ಇಸ್ಯ? ಎಷ್ಟ್ ಜನಾ ನೇಣಾಕ್ಕ ಸತ್ತವ್ರೆ ಗೊತ್ತಾ? ಅದ್ಕೇ ನಾನು ತಲೆ ದೆಸೆಗೆ ಚಪ್ಲಿ ಬಿಟ್ಕ ಮನಿಕ್ಕ
ಳಾದು’ ಎಂದು ದೆವ್ವ ದೂರವಿಡುವ ತನ್ನ ಸೀಕ್ರೆಟ್ ಫಾರ್ಮುಲಾ ಬಿಚ್ಚಿಟ್ಟ.

‘ನೀವೂ ಆ ರೂಮ್ ಬುಡಿ ಅಂದ್ರೆ ಬುಡಿಕಿಲ್ಲ. ಆ ರೂಮಲ್ಲಿ ಪರ್ಕೆ (ಪೊರಕೆ) ಸುಟ್ಟು ಕಟ್ಟಾಕ್ಸಿ. ಯಾವ್ ದೆವ್ವನೂ ಬರಿಕಿಲ್ಲ. ಈಗ್ ವೋಗಿ ಮನಿಕ್ಕಳಿ’ ಎನ್ನುತ್ತಾ ಮಗ್ಗುಲು ಬದಲಾಯಿಸಿದ.

‘ಅಲ್ಲೋ ಮೋನಾ. ಬೆಳಿಗ್ಗೆ ಅದ್ಯಾರೋ ಬಂದಿದ್ರು ಅಂದ್ಯಲ್ಲ? ಅದೂ...’
‘ಅಯ್ಯೋ ವೋಗಿ ಸುಮ್ ಮನಿಕ್ಕಳಿ. ನಾಳೆ ವಾರ್ಡನ್ ಬತ್ತರೆ. ಕ್ಯೋಳೀವ್ರಂತೆ’ ಎಂದು ಅವಳ ಗಂಭೀರ ಆತಂಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮಲಗಿದ. ಬೆಳಿಗ್ಗೆ ಕ್ಲಾಸಿಗೆ ಹೋಗದೆ ವಾರ್ಡನ್ ದಾರಿ ಕಾದಳು.

ವಾರ್ಡನ್ ಬಂದರು, ಜೊತೆಗೆ ಇನ್ಯಾರೋ ಇದ್ದರು. ಅವರ ಆಫೀಸಿನಲ್ಲಿ ಇಣುಕಿ ನೋಡಿದಳು
‘ಓ ವಿಜಿ, ಬನ್ನಿ, ಬನ್ನಿ. ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕಿತ್ತು’
‘ಹೇಳಿ ಮೇಡಂ’

‘ನಾನು ಒಂದು ಪ್ರಶ್ನೆ ಕೇಳ್ತೀನಿ. ಸತ್ಯ ಹೇಳಬೇಕು’
ಒಳಗೆ ಭೂತ ಹುಚ್ಚೆದ್ದು ಕುಣಿಯಲಾರಂಭಿಸಿತು.
‘ಕೇಳಿ ಮೇಡಂ’

‘ಇವರು ಮನೋಹರ್ ಅಂತ. ದಾವಣಗೆರೆಯವರು. ಇವರ ಬಗ್ಗೆ ನಿಮಗೆ ಗೊತ್ತಾ ಅಂತ ಕೇಳಕ್ಕೆ ಹೇಳಿಕಳಿಸಿದೆ’. ಭೂತ ವೇಷ ಕಳಚಿತು.
‘ಇಲ್ಲ ಮೇಡಂ’

ಮನೋಹರ ಹೇಳಿದ. ‘ಮೇಡಂ ಇವರಿಗೆ ನಮ್ಮ ಪರಿಚಯ ಇರಲ್ಲ. ನಮ್ಮ ಚಿಕ್ಕಪ್ಪ ಪದ್ದು ಭಟ್ರು ಅಲ್ಲಿ ಹಾಸ್ಟೆಲ್ ನೋಡ್ಕೋತಾರೆ. ಅವ್ರು ಗೊತ್ತಿರಬಹುದು’

‘ಓಹ್ ಅವ್ರಾ? ಚೆನ್ನಾಗಿ ಗೊತ್ತು. ಬಹುತೇಕ ಹಾಸ್ಟೆಲುಗಳಲ್ಲಿ ಅಡುಗೆ ಮಾಡೋರು ಅವರ ಸಂಬಂಧಿಕರೇ’ ಎಂದಳು ವಿಜಿ.
‘ಇವ್ರಿಗೆ ನಮ್ ಹಾಸ್ಟೆಲ್ ಕಿಚನ್ ಟೆಂಡರ್ ಆಗೋ ಹಾಗಿದೆ. ಅದಕ್ಕೆ ನಿಮ್ಮನ್ನ ವಿಚಾರಿಸಿದೆ. ಪರವಾಗಿಲ್ವಾ?’
‘ಖಂಡಿತಾ ಆಗಬಹುದು ಮೇಡಂ’

ಮನೋಹರ ವಿಜಿಯನ್ನು ನೋಡಿ ಕೃತಜ್ಞತಾಪೂರ್ವಕ ನಗೆ ನಕ್ಕ. ಅವನನ್ನು ನೋಡಿದ ವಿಜಿಗೆ ‘ಮಾರಿ ಕಣ್ಣು ಹೋರಿ ಮ್ಯಾಗೆ’ ಹಾಡು ಜ್ಞಾಪಕಕ್ಕೆ ಬಂತು. ಹಬ್ಬದ ಬಲಿ ಸಿಕ್ಕಿತ್ತು! ಸೀನ್ ಎಷ್ಟು ದೊಡ್ಡದಾಗಬಹುದು ಎಂದು ಕುತೂಹಲದಿಂದ ಹೊರಗಿನಿಂದಲೇ ಇದನ್ನೆಲ್ಲ ನೋಡುತ್ತಿದ್ದ ಮೋನನ ಬಿಟ್ಟ ಕಣ್ಣು ಬಿಟ್ಟ ಬಾಯಿ ಹಾಗೇ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT