ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸರಿನಿಂದ ಮೆಹಂದಿ ಖರ್ಚಿನವರೆಗೆ...

Last Updated 16 ಜೂನ್ 2018, 9:04 IST
ಅಕ್ಷರ ಗಾತ್ರ

ಯರ್ಲಗಡ್ಡ ಈಶ್ವರಿ ಯಾಕೋ ಬಹಳ ಸುಸ್ತಾದಂತಿದ್ದಳು. ಒಂಥರಾ ಆಲಸ್ಯ. ಯಾರ ಹತ್ತಿರವೂ ಮಾತಿಲ್ಲ. ನಿಜವಾದ ಹಿಂಸೆ ನೋಡಬೇಕು ಅಂದ್ರೆ ಭರ್ಜರಿ ದಾಂದಲೆ ಹಾಕುವವರ ಜೊತೆ ಒಂದು ಸೈಲೆಂಟ್ ಪಾರ್ಟಿ ಸೇರಿಸಿಬಿಡಬೇಕು. ಆ ಪಾರ್ಟಿ ಮಾತಾಡಲ್ಲ, ಉಳಿದವರು ಅದನ್ನು ಅಲಕ್ಷ್ಯ ಮಾಡಿ ಮಜಾ ಮಾಡೋ ಹಂಗೂ ಇಲ್ಲ.

ಈಶ್ವರಿ ಮಾತಾಡುತ್ತಿಲ್ಲ ಅಂತ ಮೊದಲು ಗಮನಿಸಿದ್ದು ಇಂದುಮತಿ. ಹುಷಾರಿಲ್ವಾ ಅಂತ ಕೇಳಿದ್ದಕ್ಕೆ ‘ನಂಗೇನಾಗಿದೆ ಧಾಡಿ? ಆರಾಮಾಗೇ ಇದ್ದೀನಿ’ ಅಂದಳಂತೆ. ಇಂದುಮತಿ ಈ ವಿಷಯವನ್ನು ಹುಡುಗಿಯರ ಹತ್ತಿರ ಮಂಡಿಸಿದಳು. ‘ಈಶ್ವರಿ ಯಾಕೋ ಮೆಂಟಲ್ ಆಗಿರೋ ಹಂಗಿದೆ ಕಣೆ. ಲವ್ ಅಫೇರಾ ಅಥ್ವಾ ಲವ್ ಡಿಸಪಾಯಿಂಟ್ಮೆಂಟಾ ಅರ್ಥ ಆಗ್ತಿಲ್ಲ’ ಎನ್ನುವಾಗ ಯಾವ ಕುಹಕವೂ ಇರಲಿಲ್ಲ; ಬದಲಾಗಿ ಬಹಳ ನೈಜ ಕಳಕಳಿ ಇತ್ತು.

ಇಂದೂ ಹೇಳಿದ್ದರಲ್ಲಿ ತಪ್ಪೇನಿದೆ? ಈ ‘ಲವ್ವು’ (ಅಫೇರ್) ಶುರುವಾಗುವ ಹೊತ್ತಿನಲ್ಲಿ ಮತ್ತು ಲವ್ವು ಕೊನೆಯಾಗುವ ಹೊತ್ತಿನಲ್ಲಿ ವ್ಯಕ್ತಿಯ ನಡವಳಿಕೆಗಳು ಬಹಳ ವಿಚಿತ್ರವಾಗಿರುತ್ತವೆ. ಲವ್ ಶುರುವಾಗುವಾಗ ವ್ಯಕ್ತಿ ಕಿವಿಯಲ್ಲಿ ಗಾಳಿ ಹೊಕ್ಕ ಕರುವಿನಂತೆ ಹುಚ್ಚಾಪಟ್ಟೆ ಕುಣಿದಾಡುತ್ತಿರುತ್ತಾರೆ. ಅದೇ ಲವ್ ಕೊನೆಯಾಗುವಾಗ ಗಾಳಿ ದೇಹದ ಬೇರೊಂದು ರಂಧ್ರ ಹೊಕ್ಕ ಹಾಗಿರುತ್ತದೆ.

ಬಹಳ ಹತ್ತಿರದ ಸ್ನೇಹಿತರಿಗೆ ಲವ್ವು ಶುರುವಾಯ್ತೋ ಅಥವಾ ಎಂಡಾಯ್ತೋ ಅಂತ ವ್ಯತ್ಯಾಸ ಗೊತ್ತಾಗಬಹುದೇನೋಪ್ಪ. ದೂರ ಇರೋವರಿಗೆ, ಮನೆಗೆ ಹಾಲು, ಅಕ್ಕಿ-ಬೇಳೆ, ಚೀಟಿ ದುಡ್ಡು, ಎಲ್ ಐಸಿ ಪಾಲಿಸಿ ಇತ್ಯಾದಿಗಳನ್ನು ನಿಭಾಯಿಸಲು ಒದ್ದಾಡುವ ತಂದೆ-ತಾಯಿಯರಿಗೆ ಈ ವ್ಯತ್ಯಾಸ ಗೊತ್ತಾಗೋದು ಕಷ್ಟ.

ತಂದೆ-ತಾಯಿಗಳಿಗೆ ತಮ್ಮದೇ ಆದ ವ್ಯಕ್ತಿತ್ವದ ಕೊರತೆ-ವೈರುಧ್ಯಗಳಿರುತ್ತವೆ ಎನ್ನುವುದನ್ನು ಯುವ ಜನತೆ ಮರೆತು ಬಿಟ್ಟು ತಮ್ಮೆಲ್ಲಾ ಸೌಖ್ಯ-ಅಸೌಖ್ಯಕ್ಕೂ ಒದಗಿಸುವುದು ತಂದೆ-ತಾಯಿಗಳೇ ಏಕೈಕ ಕಾರ್ಯಕಾರಣ ಮತ್ತು ತಮ್ಮನ್ನು ನೋಡಿಕೊಳ್ಳುವುದು ತಾಯ್ತಂದೆಯರ ಜೀವನದ ಆದ್ಯ ಕರ್ತವ್ಯ ಮತ್ತು ಏಕೈಕ ಗುರಿಯಾಗಿರಬೇಕು ಎಂದು ಭಾವಿಸುತ್ತಾರೆ. ಎಲ್ಲಾರೂ ಹೀಗೇ ಅಂತ ಅಲ್ಲ. ಈ ಮಾತುಗಳಿಗೆ ಅಪವಾದವಾಗಿ ಬದುಕುವ ಮಕ್ಕಳೂ ಇದ್ದಾರೆ. ತಮ್ಮ ಜೀವನದ ಜವಾಬ್ದಾರಿಯನ್ನು ತಾವೇ ಹೊತ್ತು, ಕಷ್ಟಪಟ್ಟು ಬದುಕಿ ಬಹಳ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುವವರೂ ಇದ್ದಾರೆ.

ಈಶ್ವರಿಯನ್ನು ನೋಡಿದರೆ ಪಾಪ ಏಕಾಂಗಿಯಂತಿರುತ್ತಿದ್ದಳು. ಮಾತೂ ಕಡಿಮೆ. ತಾಯಿ ಎರಡು ವರ್ಷದ ಹಿಂದೆ ತೀರಿಹೋದರಂತೆ. ತಂದೆ ಮತ್ತು ಅಕ್ಕಂದಿರು ಇವಳ ಬೆಂಬಲಕ್ಕೆ ಇದ್ದಾರೆ ಎಂದು ಆಗಾಗ ಹೇಳುತ್ತಿದ್ದಳು.

ಊಟ, ತಿಂಡಿ ಚಂದದ ಬಟ್ಟೆಗಳು- ಯಾವುದರಲ್ಲಿಯೂ ಅವಳಿಗೆ ಆಸ್ಥೆ ಇರಲಿಲ್ಲ, ಕಂಪ್ಲೇಂಟೂ ಇರಲಿಲ್ಲ. ಹುಚ್ಚು ಹಿಡಿದವಳ ಹಾಗೆ ಓದುತ್ತಿದ್ದಳು. ನೋಟ್ಸ್ ಮಾಡಿಕೊಳ್ಳುತ್ತಿದ್ದಳು. ಒಬ್ಬಳೇ ಕೂತು ಆಕಾಶದ ಕಡೆ ಮುಖ ಮಾಡಿ ಕಣ್ಣೆಲ್ಲ ಕೊಳ ಮಾಡಿಕೊಂಡು ಆಗಾಗ ಅನ್ಯಮನಸ್ಕಳಾಗುತ್ತಿದ್ದಳು. ಇದನ್ನೆಲ್ಲಾ ಇಂದೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಆದರೆ ಈಶ್ವರಿಯೇ ಮಾತನಾಡಲು ತಯಾರಾಗದ ಹೊರತು ಸುಮ್ಮನೆ ಗಾಯ ಕೆರೆದು ಹುಣ್ಣು ಮಾಡುವುದು ಬೇಡ ಅಂತ ಮೌನ ವಹಿಸಿದ್ದಳು. ಆದರೆ ಇತ್ತೀಚಿಗೆ ಈ ನಡವಳಿಕೆ ಸ್ವಲ್ಪ ಜಾಸ್ತಿ ಯಾಗುತ್ತಲೇ ಬಂತು. ಉಳಿದವರೂ ಅದನ್ನು ಗಮನಿಸತೊಡಗಿದರು.

ಒಂದು ಮಧ್ಯಾಹ್ನ ಈಶ್ವರಿ ಕಾಲು ಲೀಟರ್ ಮೊಸರಿನ ಪ್ಯಾಕೆಟ್ ತಂದಿಟ್ಟುಕೊಂಡಿದ್ದಳು. ಅದನ್ನು ರಿಂಕಿ ತಂದಿಟ್ಟಿರಬೇಕು ಅಂತ ರಶ್ಮಿ -ವಿಜಿ ಖಾಲಿ ಮಾಡಿ ಪ್ಯಾಕೆಟ್ಟಿನೊಳಗೆ ಸ್ವಲ್ಪ ನೀರು ತುಂಬಿಸಿ ಸೀಲ್ ಮಾಡಿಟ್ಟಿದ್ದರು. ರಾತ್ರಿ ಊಟ ಮುಗಿಸಿ ಬಂದು ಎಲ್ಲರೂ ಬಿದ್ದುಕೊಂಡರು. ಬಹಳ ದಿನಗಳಿಂದ ಶುರುವಾಗಿದ್ದ ಅಭ್ಯಾಸದಂತೆ ರಿಂಕಿ ಆವತ್ತು ಹಾಸ್ಟೆಲಿಗೆ ಬರಲೇ ಇಲ್ಲ.

ಇಂತಿಪ್ಪ ಸಂದರ್ಭದಲ್ಲಿ ಈಶ್ವರಿ ಮೊಸರು ಕುಡಿಯಲು ಪ್ಯಾಕೆಟ್ಟಿನ ತುದಿಯನ್ನು ಕತ್ತರಿಸಿ ಎಮ್ಮೆಗೆ ಗೊಟ್ಟ ಎತ್ತಿಸುವಂತೆ ತನ್ನ ಬಾಯೊಳಗೆ ಪ್ಯಾಕೆಟ್ಟಿನ ತುದಿ ಇಟ್ಟುಕೊಂಡು ಆ ಗೋ ದಧಿ ಎಂಬ ಅಮೃತ ಮೆತ್ತನೆ ಉರುಟುಗಳಾಗಿ ಬಾಯಿಯ ಮೂಲಕ ದೇಹ ಪ್ರವೇಶ ಮಾಡಿ ಗಂಟಲ ಮಾರ್ಗವಾಗಿ ತಂಪಾಗಿ ಪಯಣಿಸಿ ಹೊಟ್ಟೆಯಲ್ಲಿ ಕೆಲಹೊತ್ತು ವಿಶ್ರಮಿಸಲು ಹೊರಡುತ್ತದೆ ಎಂದು ಕಾದಳು.

ಗಂಟಲಲ್ಲಿ ಬರೀ ನೀರು ಇಳಿಯಿತೇ ವಿನಃ ಮೊಸರಿನ ಸ್ನಿಗ್ಧ ಸ್ವಾದ, ಸ್ವಲ್ಪವೇ ಹುಳಿಯ ಲೇಪನವುಳ್ಳ ಸಪ್ಪೆ-ಸಿಹಿಗಳ ನಡುವೆ ತನ್ನ ರುಚಿಯನ್ನು ಅಡಗಿಸಿರುವ ಮೊಸರೆಂಬ ಹೆಸರುಳ್ಳ ಪಾಪ ತೊಳೆಯುವ ಸಾಮರ್ಥ್ಯವುಳ್ಳ ‘ದಧಿ’ ಹೊರಗೆ ಬರಲೇ ಇಲ್ಲ. ಈಶ್ವರಿ ಪ್ಯಾಕೆಟ್ಟನ್ನು ಕೈಗೆತ್ತಿಕೊಂಡು ಕತ್ತರಿಸುತ್ತಿರುವಾಗ ರಶ್ಮಿ ಮತ್ತು ವಿಜಿಯರಿಗೆ ರಿಂಕಿಗೆ ಮೋಸ ಮಾಡಲು ಹೋಗಿ ತಾವೇ ಮೋಸ ಹೋಗಿದ್ದರ ಅರಿವಾಯಿತು. ಇಂದುಮತಿ ಆಗ ತಾನೇ ರೂಮಿನೊಳಕ್ಕೆ ಬಂದಿದ್ದಳು. ಅವಳಿಗೆ ತಕ್ಷಣಕ್ಕೆ ಏನೂ ಅರ್ಥವಾಗಲಿಲ್ಲವಾದರೂ, ಯಾವುದೋ ವಿಚಾರವಾಗಿ ಒಂದು ಯುದ್ಧ ನಡೆಯುವುದಂತೂ ನಿಶ್ಚಿತ ಎನ್ನಿಸಿ ತನ್ನ ರೂಮಿಗೆ ವಾಪಸ್ ಹೋಗುವ ಕಾರ್ಯಕ್ರಮವನ್ನು ಸದ್ಯಕ್ಕೆ ಬರಖಾಸ್ತ್ ಮಾಡಿ ಮುಂದಿನ ಎಪಿಸೋಡಿಗಾಗಿ ಕಾದು ಕುಳಿತಳು.

ಮೊಸರನ್ನು ಕುಡಿದಿದ್ದಕ್ಕೆ ಈಶ್ವರಿ ಕೂಗಾಡಿದರೆ ಮನೋಹರನ ಹತ್ತಿರ ಕಾಡಿ ಬೇಡಿ ಮೊಸರು ತಂದು ಅವಳಿಗೆ ಕೊಟ್ಟು ಕಾಂಪನ್ಸೇಟ್ ಮಾಡಬೇಕು ಅಂತ ಕಾದಳು ವಿಜಿ. ಹೇಗೂ ಈಗ ಜಗಳ ಶುರುವಾಗುತ್ತೆ, ಏನು ಪರಿಹಾರ ಹೊರಡುತ್ತೆ ನೋಡೋಣ ಅಂತ ರಶ್ಮಿ ಸುಮ್ಮನೆ ಕೂತಳು. ಆದರೆ ಈಶ್ವರಿ ತಾನು ಮೋಸ ಹೋಗಿರುವುದು ಅರಿವಾದ ತಕ್ಷಣ, ಖಾಲೀ ಪ್ಯಾಕೆಟ್ಟನ್ನು ಕಸದ ಬುಟ್ಟಿಗೆ ಚೆಲ್ಲಿ ಮೌನವಾಗಿ ರೂಮಿನಿಂದ ಹೊರಗೆ ಹೋದಳು. 

ಅವಳು ಹೊರಗೆ ನಡೆದು ಹೋಗುವಾಗ ಮೂವರೂ ಮಕ್-ಮಕ ನೋಡಿಕೊಂಡರು. ಇದು ನಿರೀಕ್ಷಿತ ಪ್ರತಿಕ್ರಿಯೆಯೇ ಅಲ್ಲ. ಕೂಗಾಟ ಕಿರುಚಾಟಕ್ಕೆ ತಯಾರಾದಾಗ ಎದುರಾಳಿ ಕತ್ತಿ ಬಿಸಾಕಿ ಸುಮ್ಮನೆ ಹೊರ ನಡೆದುಬಿಟ್ಟರೆ ಮೈ ಕೈ ಪರಚಿಕೊಳ್ಳುವಂತಾಗುತ್ತದೆ.

ಮುಂದೇನು ಮಾಡಬೇಕೆಂಬ ದಾರಿಯೇ ಕಾಣುವುದಿಲ್ಲ. ಮೂವರಿಗೂ ಈಶ್ವರಿಯ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಭರ್ತಿ ಹತ್ತು ನಿಮಿಷ ಹಿಡಿಯಿತು. ತಕ್ಷಣ ಮೂವರೂ ಹೊರಗೆ ಓಡಿದರು. ಅಕಸ್ಮಾತ್ ಅವಳೇನಾದರೂ ಹೆಚ್ಚು ಕಡಿಮೆ ಮಾಡಿಕೊಂಡುಬಿಟ್ಟು ತಮ್ಮನ್ನು ಪೋಲಿಸರು ಜೈಲಿಗೆ ಅಟ್ಟಿದರೆ? ‘ಮೊಸರಿಗೆ ಕಚ್ಚಾಟ; ವಿದ್ಯಾರ್ಥಿನಿಯರಿಗೆ ಜೈಲು!’ ಅಂತೆಲ್ಲ ಹೆಡ್ ಲೈನು ಕಣ್ಣ ಮುಂದೆಯೇ ಕಂಡು, ಈಶ್ವರಿ ಏನೂ ಮಾಡಿಕೊಳ್ಳದೇ ಇರಲಪ್ಪಾ ಎಂದು ಕೋಟಿ ಕೋಟಿ ದೇವತೆಗಳನ್ನು ಬೇಡಿಕೊಂಡರು.

ಈಶ್ವರಿ ಹೊರಗೆ ಬೃಹದಾಕಾರವಾಗಿ ಹರಡಿದ್ದ ಹೊಂಗೆ ಮರದ ಕೆಳಗೆ ಕೂತಿದ್ದಳು. ರಶ್ಮಿ ಮೆಲ್ಲಗೆ ಅವಳ ಹತ್ತಿರ ಹೋದಳು. ಸಾವಧಾನವಾಗಿ ಮಾತನಾಡಿಸಲು ಪ್ರಯತ್ನ ಪಟ್ಟರೆ ಈಶ್ವರಿ ಮಾತಾಡಲಿಲ್ಲ. ಬಿಕ್ಕಳಿಸುತ್ತಿರುವುದು ಕೇಳಿಸಿತು. ರಶ್ಮಿಗೆ ಗಾಬರಿಯಾಯಿತು. ತಾನು ತಂದಿಟ್ಟ ಮೊಸರನ್ನು ಯಾರೋ ಕುಡಿದಿದ್ದಕ್ಕೆ ಅಳುತ್ತಾಳೆಂದರೆ ಏನು? ಅಯ್ಯೋ ದೇವ್ರೇ! ಕಣ್ಣೀರಿನ ಶಕ್ತಿಯನ್ನು ಹೀಗೆ ಸುಖಾ ಸುಮ್ಮನೆ ಪೋಲು ಮಾಡುತ್ತಿದ್ದಾಳಲ್ಲಾ ಎನ್ನಿಸಿತು. ಸ್ನೇಹಿತೆಯರನ್ನು ಹತ್ತಿರ ಕರೆದು ಈಶ್ವರಿ ಅಳುತ್ತಿರುವ ವಿಷಯವನ್ನು ಸಂಜ್ಞೆಯ ಮೂಲಕ ದಾಟಿಸಿದಳು. ಇಂದುಮತಿ ವಿಜಿಗೆ ನೀನೇ ಹೋಗಿ ಮಾತಾಡ್ಸು ಎಂದು ಹೇಳಿದಳು.

ವಿಜಿ ಈಶ್ವರಿಯ ಹತ್ತಿರ ಹೋಗಿ ಮೆಲ್ಲಗೆ ‘ಸಾರಿ ಕಣೇ’ ಎಂದಳು. ಮಾತಿಲ್ಲ, ಕತೆಯಿಲ್ಲ. ‘ಅಯ್ಯೋ ಬರೀ ಮೊಸರು ತಾನೇ? ಬೆಳಿಗ್ಗೆ ತಂದ್ಕೊಡ್ತೀನೇ. ಪ್ಲೀಸ್ ಅಳೋದು ನಿಲ್ಸೇ...’ ಉಹೂಂ. ಮತ್ತೂ ಮಾತಿಲ್ಲ. ಇಂದುಮತಿ ಮತ್ತು ರಶ್ಮಿಯೂ ಈಗ ಬಂದು ಸೇರಿಕೊಂಡರು.

‘ಬಿಡೇ ಈಶ್ವರಿ... ಬೆಳಿಗ್ಗೆ ತಂದುಕೊಡ್ತೀನೀಂತ ಹೇಳಿದಳಲ್ಲ? ತಮಾಷೆಗೆ ಮಾಡಿದ್ದು ಕಣೇ. ಅದು ನೀನ್ ತಂದಿಟ್ಟಿರೋದು ಅಂತ ಗೊತ್ತಿರಲಿಲ್ಲ. ಇಲ್ಲಾಂದ್ರೆ ದೇವ್ರಾಣೆ ಮುಟ್ತಿರಲಿಲ್ಲ ಕಣೆ’.

ಕಣ್ಣು, ಮೂಗು ಎಲ್ಲ ಒರೆಸಿಕೊಂಡು ಈಶ್ವರಿ ಬಾಯಿ ಬಿಟ್ಟಳು. ‘ಅಯ್ಯೋ ನನ್ ಹಣೆ ಬರಹಾನೇ ಕೆಟ್ಟದಿರುವಾಗ ಬರೀ ಮೊಸರಿನ್ ಪ್ಯಾಕೆಟ್ಟಿನಿಂದ ಏನಾಗುತ್ತೆ ಬಿಡು. ಪರವಾಗಿಲ್ಲ ಹೋಗಿ. ನಾನು ಆಮೇಲೆ ಬರ್ತೀನಿ’. ಅಬ್ಬ! ಮೊಸರಿಗೆ ಬಂದ ಕಣ್ಣೀರಲ್ಲ ಇದು ಎಂದು ಖಾತ್ರಿಯಾಗಿ ಎದೆ ಮೇಲಿನ ಭಾರ ಇಳೀತು.

‘ಮತ್ಯಾಕೆ ಅಳ್ತಿದೀಯಾ?’
‘ಬೇಜಾರಾಗಿದೆ’
‘ಯಾಕೆ?’
‘ಮನಸ್ಸು ಸರಿಯಿಲ್ಲ’

‘ಥೋ! ಈಶ್ವರೀ, ಇಲ್ಲ್ ಕೇಳುಸ್ಕೋ. ಬೇಜಾರು ಮನಸ್ಸಿಗೇ ಆಗೋದು. ಮೈಗಲ್ಲ. ಈಗ ವಿಷಯ ಏನು ಅಂತ ಹೇಳಿದ್ರೆ ಎಲ್ರೂ ಸೇರಿ ಅದಕ್ಕೊಂದು ಪರಿಹಾರ ಯೋಚಿಸಬಹುದು. ನೀನು ಹಿಂಗೆ ಅಳ್ತಾ ಕೂರೋದು; ನಾವು ಇವ್ಳು ಮೊಸರಿಗೋ ಮಜ್ಗೆಗೋ ಅಳ್ತಿದಾಳೆ ಅನ್ಕೊಂಡು ಆರಾಮಾಗಿರೋದು; ಹಿಂಗೆಲ್ಲ ಆದ್ರೆ ಸಮಸ್ಯೆಗೆ ಪರಿಹಾರ ಸಿಗೋದು ಹೆಂಗೇ?’ ಇಂದುಮತಿ ಪಕ್ಕೆ ತಿವಿದಳು.

‘ಈ ಸಮಸ್ಯೆಗೆ ನಿಮ್ ಹತ್ರ ಪರಿಹಾರ ಸಿಗಲ್ಲ ಕಣೇ. ನನ್ನ ಸುಮ್ನೆ ಬಿಟ್ಬಿಡಿ’ ಈಶ್ವರಿ ಪಕ್ಕಾ ಸಿನಿಮಾ ಹೀರೋಯಿನ್ನು. ಏನಾಯ್ತು ಅಂತ ಕೇಳೋಕೆ ಬಂದಾಗಲೆಲ್ಲ ‘ನನ್ ಬಿಟ್ಬಿಡು! ನನ್ ಬಿಟ್ಬಿಡು’ ಲೈನ್ ಆಗಾಗ ಉದುರಿಸುತ್ತಾ ಇದ್ದಳು.

‘ನೋಡಮ್ಮ ಸ್ವಲ್ಪ ನ್ಯಾಯವಾಗಿ ಮಾತಾಡು. ಹಾಸ್ಟೆಲಲ್ಲಿ ಯಾರೂ ಯಾರ ಜೀವನಕ್ಕೂ ಆಗಲ್ಲ. ನಿನ್ ಪುಣ್ಯ ಇದ್ರೆ ಸ್ನೇಹಿತರು ಸಿಗ್ತಾರೆ. ಇಲ್ಲಾಂದ್ರೆ ಬರೀ ರೂಮ್ ಮೇಟ್ಸು. ಅರ್ಥ ಮಾಡ್ಕೋ’ ರಶ್ಮಿ ಒತ್ತಿ ಹೇಳಿದಳು. ಮಾತಿನ ಮಂಟಪ ಕಟ್ಟಿ ಈ ಹರೆಯದ ತೆಲುಗು ನಾಡಿನ ಹುಡುಗಿಯ ಎದೆಯೊಳಗಿನ ದುಃಖದ ಕಾರಣ ಕೇಳುವಾಗ ಸಾಕುಬೇಕಾಯಿತು. ವಿಷಯಾಂತರ ಮಾಡದೆ ಈಶ್ವರಿ ಹೇಳಿದಳು.

‘ನನ್ ಕ್ಲಾಸಲ್ಲಿ ಒಬ್ಬ್ ಹುಡ್ಗಾ...’
‘ವಾಆಆಆಆಆಆಅ! ನಾನ್ ಹೇಳಲಿಲ್ವಾ? ಇವಳಿಗೆ ಲವ್ವೇ ಕಣೇ!’ ಇಂದುಮತಿ ಬಹಳ ಅವಸರದಲ್ಲಿ ನಿರ್ಧರಿಸಿಬಿಟ್ಟಳು.
‘ಅಯ್ಯಾ! ಸ್ವಲ್ಪ ಮುಚ್ಕೊಂಡು ಸುಮ್ನೆ ಕೇಳಿಸ್ಕೋ. ಇನ್ನೂ ಮಾತೇ ಮುಗ್ದಿಲ್ಲ’ ವಿಜಿ ರೇಗಿದಳು.

‘ನೋಡಮ್ಮ ಕುರ್ಚಿ ಬಂಗಾರದ್ ಮಾಡ್ಸಿದ್ರೂ ಅದ್ರ ಮೇಲೆ ಕೂರೋದು ಅಂಡೇ ತಾನೇ! ಹಂಗೇ ಇವ್ಳ್ ಕತೆನೂ. ವಯಸ್ಸಲ್ಲಿ ಲವ್ ಅಗ್ದೇ ಇದ್ರೆ ಆಶ್ಚರ್ಯ ಆಗ್ಬೇಕಪ್ಪ! ಹುಡ್ಗ ಅಂದಾಗ್ಲೇ ಗೊತ್ತಾಗಲಿಲ್ವಾ?’

‘ಅದೇನ್ ವಿಷ್ಯ ಕೇಳನ ಇರೇ ಇಂದೂ!’ ರಶ್ಮಿಯೂ ರೇಗಿದ ಮೇಲೆ ಇಂದು ಸುಮ್ಮನಾದಳು. ಎಲ್ಲರೂ ಪಕ್ಕ ವಾದ್ಯಗಳನ್ನು ನಿಲ್ಲಿಸಿದ್ದು ನೋಡಿ ಈಶ್ವರಿ ಗಂಟಲು ಸರಿ ಮಾಡಿಕೊಂಡು ನಾದಸ್ವರದ ಪೀಪಿ ಬಾಯಿಗೆ ಹಚ್ಚಿಕೊಂಡಳು. ‘ನಮ್ಮ್ ಕ್ಲಾಸಲ್ಲಿ ಒಬ್ಬ ಒರಿಸ್ಸಾದ ಹುಡ್ಗ ಇದಾನೆ. ದೇಬಬ್ರತ ಪಾತ್ರ ಅಂತ. ಬಹಳ ಇಷ್ಟ ಆಗ್ತಾನೆ. ಅದನ್ನು ಅವ್ನಿಗೆ ಹೆಂಗ್ ಹೇಳದು ಅಂತ ಯೋಚಿಸ್ತಿದ್ದೆ’ ಈಶ್ವರಿ ಹೇಳಿದಳು.

‘ಹೆಂಗ್ ಹೇಳದು ಅಂದ್ರೆ ಏನು? ಕ್ಲಾಸ್ ಮುಗುಸ್ಕೊಂಡ್ ಹೋಗೋವಾಗ ನಿಲ್ಸಿ ಮಾತಾಡು. ‘ಗುರೂ, ನಂಗೆ ನೀನು ಇಷ್ಟ ಕಣೋ’ ಅಂತ ಹೇಳಕ್ಕೆ ಕಷ್ಟಾನಾ?’ ಇಂದುಮತಿ ಕೇಳಿದಳು. ಒಂದು ರೊಮ್ಯಾಂಟಿಕ್ ಸಂಬಂಧದ ರೆಕ್ಕೆ ಪುಕ್ಕ ಕಿತ್ತು ಜೀವ ತೆಗೆದು ಬೆತ್ತಲೆ ಮಾಡಿ ಹೈವೇ ಮೇಲೆ ಹೇಗೆ ಬಿಸಾಕಬಹುದು ಎಂದು ಪಾಠ ಹೇಳಿದ ಹಾಗಿತ್ತು. ಈಶ್ವರಿ ಮಾತಾಡಲಿಲ್ಲ. ಅಸಹಾಯಕಳಾಗಿ ರಶ್ಮಿ– ವಿಜಿಯರತ್ತ ನೋಡಿದಳು.

‘ಇಂದೂ, ಇದು ನಿನ್ ಕೈಲಿ ಆಗೋ ಮಾತಲ್ಲ. ಸುಮ್ನಿರು’ ಎಂದು ವಿಜಿ ಇಂದುಮತಿಗೆ ತಾಕೀತು ಮಾಡಿದಳು. ರಶ್ಮಿ ಈಶ್ವರಿಯನ್ನ ಮತ್ತೆ ಪುಸಲಾಯಿಸಿ ಕೇಳಿದಳು. ‘ಅವನಿಗೂ ನಿನ್ ಕಂಡ್ರೆ ಇಷ್ಟಾನೇನೆ?’

‘ಗೊತ್ತಿಲ್ಲ ಕಣೆ. ನನ್ ಕಂಡ್ರೆ ನಾಚ್ಕೋತಾನೆ. ಕ್ಲಾಸಲ್ಲಿ ಕಣ್ ಕಣ್ ಕೂಡಿದ್ರೆ ಆದ್ರೆ ಸಾಕು ಕಸಿವಿಸಿ ಆಗುತ್ತೆ ಅವನಿಗೆ’
‘ಏನಂದೆ, ಏನಂದೆ? ನಿನ್ ನೋಡಿ ಅಆಆವ್ನ್ ನಾಚ್ಕೋತಾನಾ? ಲೈ ನೀನು ಅವ್ನ್ ಜೊತೆ ಓಡಾಡಿದ್ರೆ ನಿಮಗೆ ಮದ್ವೆ ಆಗಿ ಮಕ್ಕಳಾಗೋ ಹೊತ್ತಿಗೆ ಐವತ್ತ್ ವರ್ಷ ಕಳ್ದೋಗಿರುತ್ತೆ. ಅವ್ನ್ ನಾಚ್ಕೋತಾನೆ ಅಂತ ನೀನು, ನೀನ್ ನಾಚ್ಕೋತೀಯಾ ಅಂತ ಅವ್ನು...

ಹಿಂಗೇ ಟೈಮ್ ಪಾಸ್ ಮಾಡ್ಕೊಂಡಿರ್ತೀರಾ’. ಇಂದುಮತಿಯ ನಾಲಿಗೆ ಹದ್ದುಬಸ್ತಿನಲ್ಲಿರಲು ಸಾಧ್ಯವೇ ಇರಲಿಲ್ಲ.
ಕಿರಿಕಿರಿಯಾಗಿ ‘ಇವಳಿಗೆ ಸುಮ್ನಿರು ಅನ್ನೇ. ಇಲ್ಲಾಂದ್ರೆ ವಿಷ್ಯ ಈವತ್ತ್ ರಾತ್ರಿ ಮುಗಿಯಲ್ಲ’ ಎಂದಳು ರಶ್ಮಿ. ವಿಜಿ ಇಂದೂಗೆ ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿದಳು.

‘ಸರಿ ಈಗ ಮುಂದೆ ಏನ್ ಮಾಡಬೇಕೂಂತ ಇದ್ದೀಯ ನೀನು?’
‘ಗೊತ್ತಿಲ್ಲ’
‘ಹಂಗಂದ್ರೆ?’
‘ನನ್ ಜೀವನ ಅಷ್ಟು ಈಸಿ ಇಲ್ಲ ಕಣೇ’

‘ಅಯ್ಯಾ! ಯಾರ್ ಜೀವನಾನೂ ಈಸಿ ಇಲ್ಲ ಈಸ್ವರಕ್ಕಾ! ನಾನೂ ಗಂಡ್ ನೋಡಿ ನೋಡಿ ಸುಸ್ತಾದೆ. ಹಂಗೆಲ್ಲ ಆಗಲ್ಲ ಜೀವನ’ ಕಟ್ಟಿ ಹಾಕಿದ ನಾಯಿ ಜಗ್ಗಿ ಜಗ್ಗಿ ಬೊಗಳುವಂತೆ ಇಂದುಮತಿ ಈವತ್ತಿನ ಮಾತುಕತೆ ಮುಂದುವರೆಯಲು ತನ್ನ ಪಾತ್ರ ಅಗತ್ಯ ಎನ್ನುವುದನ್ನು ಆಗಾಗ ಸಾಬೀತುಪಡಿಸುತ್ತಿದ್ದಳು.

‘ಅಲ್ಲ, ಅವನ ಬಗ್ಗೆ ನಿನಗೆ ಗೊತ್ತಿದೆಯಾ?’ ರಶ್ಮಿ ಈಶ್ವರಿಯನ್ನು ಕೇಳಿದಳು. ‘ಗೊತ್ತು. ಅವನು ಬಹಳ ಬುದ್ಧಿವಂತ ಕೂಡ. ಟಾಪರ್ರು. ನಾನು ಟೈಮ್ ಪಾಸ್ ಅಂತ ಈ ಸಂಬಂಧ ಹುಡುಕ್ತಾ ಇಲ್ಲ ಕಣೆ. ಅವನಿಗೆ ರೀಸರ್ಚ್ ಆಸಕ್ತಿ ಇರೋ ಹಾಗಿದೆ. ಅವನ ಜೊತೆ ಇದ್ದರೆ ಇಬ್ಬರೂ ಒಳ್ಳೆಯ ಕೆಲಸಗಳನ್ನು ಮಾಡಬಹುದು ಅಂತ. ಅವರ ಚಿಕ್ಕಪ್ಪ ಒಬ್ಬರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಸೈನ್ಸ್‌ನಲ್ಲಿ ಇದ್ದಾರೆ ಅಂತ ಹೇಳ್ತಿದ್ದ. ಅವ್ರೇ ಅವನಿಗೆ ಗೈಡ್ ಮಾಡೋದಂತೆ’

‘ಅಲ್ಲಾ, ನೀವು ಅವ್ರ್ ಚಿಕ್ಕಪ್ಪನ್ನೇ ಬುಟ್ಟಿಗೆ ಹಾಕೊಂಡ್ರೆ ಹೆಂಗೆ? ಸುಮ್ನೆ ಮದ್ವೆ ಮಕ್ಳು ಎಲ್ಲಾ ತಲ್ನೋವು ಕಣೇ ಈಶ್ವರೀ’ ಎಂದಳು ಇಂದೂ. ಮದುವೆಗೆ ಪರ್ಯಾಯವಾಗಿ ಬಸ್ ಪ್ರಯಾಣ ಸೂಚಿಸಿದ್ದ ಹೆಣ್ಣಲ್ಲವೇ ಇದು?

‘ಥೂ! ಮುಚ್ಚೆ! ಅಲ್ಲಾ ಈಶ್ವರೀ. ಮ್ಯಾಟ್ರು
ಸೀರಿಯಸ್ಸು. ಇಷ್ಟೆಲ್ಲ ಇರುವಾಗ ಮತ್ತೆ ನೀನು ಅವನಿಗೆ ನಿನ್ನ ಭಾವನೆಗಳನ್ನು ಹೇಳೋಕೆ ಯಾವ ಅಡ್ಡಿಯೂ ನನಗೆ ಕಾಣ್ತಿಲ್ಲಪ್ಪ. ಯಾಕ್ ಹೇಳಿಲ್ಲ ಇನ್ನೂ?’
‘ಯಾಕೆ ಅಂದ್ರೆ...’

‘ನಂಗಾಗ್ಲೇ ಮೊದಲು ಮದ್ವೆ ಆಗಿತ್ತು. ಡೈವೋರ್ಸಾಗಿ ಒಂದು ವರ್ಷ ಆಯ್ತಷ್ಟೇ’
ನಿರ್ಭಾವುಕವಾಗಿ ಈಶ್ವರಿ ತನ್ನ ಡೈವೋರ್ಸಿನ ವಿಷಯ ಹೇಳುತ್ತಿದ್ದರೆ ಹುಡುಗಿಯರಿಗೆ ಕೂತ ಭೂಮಿ ಜರಿದ ಅನುಭವವಾಯಿತು. ಇವಳು ಡೈವೋರ್ಸಿ ಅಂತ ಅಲ್ಲ. ಅವಳ ಒಳಗುದಿ ಗೊತ್ತಾಗದಿರುವ ಹಾಗೆ ಇಷ್ಟು ದಿವಸ ಮುಚ್ಚಿಟ್ಟಕೊಂಡಿದ್ದಾಳಲ್ಲಾ? ಎಂಥಾ ನೋವನ್ನು ಈ ವಯಸ್ಸಿಗೇ ಕಂಡಿದ್ದಾಳಲ್ಲಾ ಅಂತ ಎಲ್ಲರಿಗೂ ಬಹಳ ಸಂಕಟವಾಯಿತು. ಇಂದುಮತಿ ಮೆಲ್ಲಗೆ ಕೇಳಿದಳು. ‘ಈಶ್ವರಿ...ಬಿಟ್ ಹಾಕೇ. ಈ ನಿನ್ನ ಪಾತ್ರ ಫ್ರೆಂಡು ನಿನ್ ಜೀವನದಲ್ಲಿ ಹೊಸ ಸ್ಟೆಪ್ ಅಂದ್ಕೋ. ನಾವ್ ಸಹಾಯ ಮಾಡ್ತೀವಿ. ನಿನ್ ಮದ್ವೇಲಿ ನಾನೇ ಮೆಹಂದಿ ಖರ್ಚು ಸ್ಪಾನ್ಸರ್ ಮಾಡೋದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT