ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುವ ಯೋಗಿಗೆ ಒಳ್ಳೆಯ ಕಾಲ ಬರುವುದೇ ಇಲ್ಲವೇ?

Last Updated 16 ಜೂನ್ 2018, 9:10 IST
ಅಕ್ಷರ ಗಾತ್ರ

ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಉಳುವ ಯೋಗಿ ಹಿಂದೆಂದೂ ಇಷ್ಟು ತೀವ್ರವಾಗಿ ಹತಾಶನಾದುದು ನಮಗೆ ನೆನಪು ಇಲ್ಲ. ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅಲ್ಲ. ಆದರೆ, ಅದು ಈಗಿನ ಹಾಗೆ ಸಾಮೂಹಿಕ ಸನ್ನಿ ಆಗಿರಲಿಲ್ಲ. ಮೊದಲು ದಿನಕ್ಕೆ ಒಬ್ಬರು ಇಬ್ಬರು ಆಯಿತು, ಅದು ಐದು ಆರಕ್ಕೆ ಏರಿತು, ಎಂಟು ಒಂಬತ್ತು ಆಯಿತು, ಒಂದಂಕಿಯಲ್ಲಿ ಇದ್ದುದು ಈಗ ಹದಿನೈದಕ್ಕೆ ಏರಿದೆ. ಅದು ನಿಲ್ಲುವ ಹಾಗೆ ಕಾಣುವುದಿಲ್ಲ ಎಂಬುದು ಒಳ್ಳೆಯ ಮಾತು ಅನಿಸಲಿಕ್ಕಿಲ್ಲ. ಆದರೆ, ಸತ್ಯ ಮತ್ತು ವಾಸ್ತವ ಎರಡೂ ಕಟುವಾಗಿಯೇ ಇರುತ್ತವೆ.

ಆತ ನಿಜವಾಗಿಯೂ ಕಷ್ಟದಲ್ಲಿ ಇದ್ದಿರಬಹುದು. ಮುಂದೆ ಏನು ಮಾಡಬೇಕು ಎಂದು ದಾರಿ ತೋಚದಂತೆ ಆಗಿರಬಹುದು. ನಂಬಿದ ಎಲ್ಲರನ್ನೂ ಬಿಟ್ಟು ಸಾವಿನ ಮನೆಗೆ ಹೋಗಿಬಿಡುವುದು ಒಂದೇ ಮುಕ್ತಿ ಎಂದು ಆತನಿಗೆ ಕಂಡಿರಬಹುದು.

ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಇದು ಬರೀ ಸಿದ್ದರಾಮಯ್ಯ ಸರ್ಕಾರ ಎದುರಿಸಬೇಕಾದ ಸಮಸ್ಯೆಯೂ ಅಲ್ಲ. ಕರ್ನಾಟಕದಲ್ಲಿ 1997ರಲ್ಲಿ ಬೀದರ್‌ ಜಿಲ್ಲೆಯಲ್ಲಿ ಮೊದಲ ರೈತ ಆತ್ಮಹತ್ಯೆ ಪ್ರಕರಣ ವರದಿಯಾಗಿತ್ತು. ಆತ ತೊಗರಿ ಬೆಳೆಗಾರನಾಗಿದ್ದ. ಅಲ್ಲಿಂದ ಇಲ್ಲಿಗೆ ರೈತನ ಸಾವಿನ ಮೆರವಣಿಗೆ ನಿಂತೇ ಇಲ್ಲ. ಒಂದು ವರ್ಷ ಹೆಚ್ಚು ಆಗಬಹುದು, ಇನ್ನೊಂದು ವರ್ಷ ಕಡಿಮೆ ಆಗಬಹುದು. ಆದರೆ, ಅದು ನಿಂತಿಲ್ಲ. ಏಕೆಂದರೆ ಅದಕ್ಕೆ ನಿಲುಗಡೆ ಹಾಕುವಂಥ ಒಂದು ಪರಿಹಾರವನ್ನು ಯಾವ ಸರ್ಕಾರವೂ ಕಂಡುಕೊಂಡಿಲ್ಲ. ಪರಿಹಾರ ಹುಡುಕುವ ಸಮಿತಿಗಳು ರಚನೆಯಾಗಿಲ್ಲ ಎಂದು ಅಲ್ಲ. ಆದರೆ, ಸಮಿತಿಗಳು ಸೂಚಿಸುವ ಪರಿಹಾರಗಳ ಬಗೆಗೆ ಸರ್ವ ಸಮ್ಮತಿ ವ್ಯಕ್ತವಾಗಿಲ್ಲ. ಅದಕ್ಕೆ ನೈಜ ಕಾಳಜಿ ಕಾರಣವೇ ರಾಜಕೀಯ ಕಾರಣವೇ ಎಂದು ಹೇಳುವುದು ಕಷ್ಟ.

ರಾಜಕಾರಣಿಗಳಿಗೆ ಯಾವುದಾದರೂ ಒಂದು ಸಮಸ್ಯೆಗೆ ನಿಜವಾಗಿಯೂ ಪರಿಹಾರ ಬೇಕು ಎಂದು ಅನಿಸಿರುತ್ತದೆಯೇ?  ರೈತರ ಆತ್ಮಹತ್ಯೆ ಎಂಬುದು ಬರೀ ರಾಜ್ಯಗಳ ಸಮಸ್ಯೆಯೇ ಅಥವಾ ಕೇಂದ್ರ ಸರ್ಕಾರವೂ ಎದುರಿಸಬೇಕಾದ ಸಮಸ್ಯೆಯೇ? ಸಂವಿಧಾನದ ಪ್ರಕಾರ ಕೃಷಿ ರಾಜ್ಯದ ವಿಷಯವಾಗಿರಬಹುದು. ಆದರೆ, ರೈತ ಇಡೀ ದೇಶಕ್ಕೆ ಸೇರಿದವನು ಅಲ್ಲವೇ? ಹಾಗಿದ್ದರೆ ಈಗ ನಡೆದಿರುವ ಸಂಸತ್ತಿನ ಅಧಿವೇಶನದಲ್ಲಿ ಒಬ್ಬರಾದರೂ ರೈತರ ಆತ್ಮಹತ್ಯೆ ಕುರಿತು ಏಕೆ ಚರ್ಚೆ ಮಾಡುತ್ತಿಲ್ಲ? ಕಲಾಪ ನಡೆಸಲು ಬಿಡುವುದೇ ಇಲ್ಲ ಎನ್ನುವುದಾದರೆ ಅಧಿವೇಶನ ಕರೆಯುವುದಾದರೂ ಏಕೆ? ಸಂಸತ್ತು, ಅಧಿವೇಶನ, ಯಾವ ಚರ್ಚೆಯನ್ನೂ ಮಾಡದೇ ಕಲಾಪ ಮುಂದಕ್ಕೆ ಹೋಗುವುದನ್ನು ನೋಡಿದರೆ ಎಲ್ಲವೂ ತಮಾಷೆ ಎಂದು ಅನಿಸಿಬಿಡುತ್ತದೆ. ಜನರಿಗೂ ಕಲಾಪಕ್ಕೂ ಸಂಬಂಧವೇ ಇರುವುದಿಲ್ಲವೋ ಏನೋ? ಕರ್ನಾಟಕದಲ್ಲಿಯೂ ಹಾಗೆಯೇ ಆಗದ ಹೋಗದ ಸಂಗತಿಗಳನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಗಲಾಟೆ ಮಾಡುತ್ತಿದ್ದ ಶಾಸಕರನ್ನು ಮಾಜಿ ಮುಖ್ಯಮಂತ್ರಿ ಕೃಷ್ಣ ಒಂದು ರೀತಿ ‘ಬಡಿದು’ ಎಬ್ಬಿಸಿದ್ದಾರೆ.

ಕೃಷ್ಣ ಅವರು ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗದೇ ಇದ್ದರೆ ಯಾರೂ ಆ ಕಡೆ ಮುಖವನ್ನೂ ಹಾಕುತ್ತಿರಲಿಲ್ಲವೇನೋ? ಎಲ್ಲರೂ ಮೈ ಮರೆತಿರುವಾಗ ಹೀಗೆ ಒಬ್ಬರು ಎಚ್ಚೆತ್ತುಕೊಂಡು ಹೋದ ಕೂಡಲೇ ಅವರಿಗೆ ನೈಜ ಕಾಳಜಿ ಇರಬಹುದು ಎಂದು ಅಂದುಕೊಳ್ಳುವುದಕ್ಕಿಂತ ಅದರ ಹಿಂದಿನ ರಾಜಕೀಯ ಏನು ಇರಬಹುದು ಎಂಬ ಚರ್ಚೆ ಶುರುವಾಗುತ್ತದೆ. ಕೃಷ್ಣ ಅವರ ಭೇಟಿಗೆ ಅಂಬರೀಷ್‌ ಅವರನ್ನು ಬಡಿಯುವ ಉದ್ದೇಶವಿತ್ತು ಅಥವಾ ಇನ್ನೂ ಹೆಚ್ಚಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕುವ ಉದ್ದೇಶವಿತ್ತು ಎಂಬಂಥ ವಿಶ್ಲೇಷಣೆಗಳು ಇದೇ ಕಾರಣಕ್ಕೆ ಕೇಳಿಬರುತ್ತವೆ. ಕೃಷ್ಣ ಅವರ ಭೇಟಿಯ ಮಹತ್ವವನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಹೈಕಮಾಂಡ್‌ ಸೂಚನೆ ಮೇರೆಗೆ ಅವರು ರೈತರ ಮನೆಗಳಿಗೆ ಭೇಟಿ ಕೊಟ್ಟರು ಎಂಬ ವದಂತಿ ಹುಟ್ಟಿಕೊಂಡಿರಲೂ ಸಾಧ್ಯ. ಅದನ್ನು ಕೃಷ್ಣ ಅಲ್ಲಗಳೆಯಲಾರರು ಎಂದು ವದಂತಿ ಹಬ್ಬಿಸಿದವರಿಗೆ ಚೆನ್ನಾಗಿ ಗೊತ್ತು! ಇದರಲ್ಲಿ ಯಾವುದು ನಿಜ, ಯಾವುದು ಅಲ್ಲ ಎಂದೆಲ್ಲ ಹೇಳುವುದು ಬಹಳ ಕಷ್ಟ. ರಾಜಕಾರಣವೇ ಹಾಗೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿದ್ದ ಕೃಷ್ಣ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ನೇಮಿಸಿದ್ದ ಜಿ.ಕೆ.ವೀರೇಶ್‌ ಸಮಿತಿ ವರದಿ ಬಗೆಗೆ ಪ್ರಸ್ತಾಪ ಮಾಡಿದ್ದಾರೆ. ವೀರೇಶ್‌ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು. ಕೃಷಿ ಬಗ್ಗೆ ತಿಳಿದವರು. ಅವರು 2002ನೇ ವರ್ಷದ ಆರಂಭದಲ್ಲಿ ವರದಿ ಕೊಟ್ಟಿದ್ದರು. ಅವರು ರೈತರ ಆತ್ಮಹತ್ಯೆಗೆ ಕುಡಿತ ಪ್ರಮುಖ ಕಾರಣ ಎಂದು ಗುರುತಿಸಿದ್ದರು. ಎರಡನೆಯದಾಗಿ ರೈತರ ಆತ್ಮಹತ್ಯೆಗೆ ಬೆಳೆನಷ್ಟ ಮತ್ತು ವಿಪರೀತ ಸಾಲ ಕಾರಣವಲ್ಲ ಎಂದೂ ಅವರು ಹೇಳಿದ್ದರು. ಅವರ ಸಮಿತಿ ಮುಂದೆ 135 ರೈತರ ಆತ್ಮಹತ್ಯೆ ಪ್ರಕರಣಗಳು ಇದ್ದುವು. ಇವುಗಳ ಜತೆಗೆ ಅದೇ ಪ್ರಮಾಣದ ‘ಕಂಟ್ರೋಲ್‌ ಕೇಸು’ಗಳನ್ನೂ ಸಮಿತಿ ಪರಿಗಣನೆಗೆ ತೆಗೆದುಕೊಂಡಿತ್ತು.

ಅಂದರೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಮಾನ ಸ್ಥಿತಿಯಲ್ಲಿ ಇದ್ದೂ ಆತ್ಮಹತ್ಯೆಗೆ ಎಳೆಸದ ರೈತರ ಸ್ಥಿತಿಗತಿಯನ್ನೂ ಅಧ್ಯಯನ ಮಾಡಿ ಆತ್ಮಹತ್ಯೆಗೆ ಬೆಳೆ ಹಾನಿ, ಸಾಲ ಮುಂತಾದ ಆರ್ಥಿಕ ಸಂಕಷ್ಟಗಳು ಮಾತ್ರ ಕಾರಣವಲ್ಲ ಎಂಬ ನಿರ್ಧಾರಕ್ಕೆ ಸಮಿತಿ ಬಂದಿತ್ತು. ‘ವೈಯಕ್ತಿಕ ಸಮಸ್ಯೆ, ಕಲಹ ಮುಂತಾದ ಕೌಟುಂಬಿಕ ಕಾರಣಗಳು, ಅನಾರೋಗ್ಯ, ನಡವಳಿಕೆಯ ಸಮಸ್ಯೆ’ ಹೀಗೆ ಒಟ್ಟು 21 ಅಂಶಗಳು ರೈತರ ಆತ್ಮಹತ್ಯೆಗೆ ಕಾರಣ ಎಂದು ಸಮಿತಿ ಗುರುತಿಸಿತ್ತು. ಇವೆಲ್ಲವುಗಳಲ್ಲಿ ಕುಡಿತದಿಂದಲೇ ಶೇ 13.79ರಷ್ಟು ರೈತರು ಸಾಯುತ್ತಾರೆ. ಅದೇ ದೊಡ್ಡ ಕಾರಣ ಎಂದು ಅವರು ಹೇಳಿದ್ದು ವಿರೋಧ ಪಕ್ಷಗಳನ್ನು ರೊಚ್ಚಿಗೆ ಎಬ್ಬಿಸಿತು. ಆಗಿನ ವಿರೋಧ ಪಕ್ಷವಾದ ಬಿಜೆಪಿ, ವೀರೇಶ್‌ ಸಮಿತಿ ವರದಿಯನ್ನು ತಿರಸ್ಕರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿತು.

ರಾಜಕೀಯ ಪಕ್ಷಗಳು ಜನಪ್ರಿಯ ವಿಧಾನಗಳ ಮೊರೆ ಹೋಗುತ್ತವೆ. ಆತ್ಮಹತ್ಯೆ ಮಾಡಿಕೊಂಡ  ರೈತರಿಗೆ ಪರಿಹಾರ ಕೊಡುವುದು ಅಂಥ ಒಂದು ಜನಪ್ರಿಯ ವಿಧಾನ ಎಂದು ಅವು ಭಾವಿಸುತ್ತವೆ. ಸೋಜಿಗ ಎಂದರೆ 90ರ ದಶಕದಲ್ಲಿ ಬೀದರ್‌ನಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಶಾಸಕ ಜಿ.ಬಿ.ಶಿವಕುಮಾರ್‌ ನೇತೃತ್ವದಲ್ಲಿ ರಚನೆಯಾಗಿದ್ದ ಸದನ ಸಮಿತಿ ಕೂಡ 56 ಅಂಶಗಳನ್ನು ಒಳಗೊಂಡ ವರದಿಯನ್ನು ಕೊಟ್ಟಿತ್ತು. ಅದರಲ್ಲಿಯೂ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂಬ ಸಲಹೆ ಇರಲಿಲ್ಲ. ಹಾಗೆ ನೋಡಿದರೆ ಪರಿಹಾರ ಕೊಡಬಾರದು ಎಂದೇ ಸದನ ಸಮಿತಿ ಖಡಾಖಂಡಿತವಾಗಿ ಶಿಫಾರಸು ಮಾಡಿತ್ತು.

ವೀರೇಶ್‌ ಸಮಿತಿ ವರದಿಯ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದಾಗ ಆಗಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಪರಿಹಾರ ಕೊಡಬಾರದು ಎಂಬ ನಿಲುವಿಗೇ  ಬದ್ಧರಾಗಿದ್ದರು. ‘ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ವರದಿಯಾಗುವ ಪಂಜಾಬಿನಲ್ಲಿ ಪರಿಹಾರ ಕೊಡುತ್ತಿಲ್ಲ. ಏಕೆಂದರೆ ಪರಿಹಾರ ಪ್ರಚೋದಕವಾಗಬಹುದು ಎಂಬ ಅಭಿಪ್ರಾಯಕ್ಕೆ ಅಲ್ಲಿನ ಸರ್ಕಾರ ಬಂದಿದೆ’ ಎಂದು ಕೃಷ್ಣ ಅವರು ಹೇಳುವಾಗ ನಾನು ಒಬ್ಬ ವರದಿಗಾರನಾಗಿ ಮಾಧ್ಯಮ ಗ್ಯಾಲರಿಯಲ್ಲಿ ಕುಳಿತಿದ್ದೆ. ‘ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಕೊಡುವುದಿಲ್ಲ ಮಾತ್ರವಲ್ಲ ಪ್ರತಿ ರೈತ ಆತ್ಮಹತ್ಯೆ ಪ್ರಕರಣವನ್ನೂ ಮ್ಯಾಜಿಸ್ಟೀರಿಯಲ್ ತನಿಖೆಗೆ ಒಳಪಡಿಸಲಾಗುವುದು’ ಎಂದು ಕೃಷ್ಣ ಆಗ ಪ್ರಕಟಿಸಿದ್ದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಅಷ್ಟೋ ಇಷ್ಟೋ ಪರಿಹಾರ ಕೊಡುವುದು ಕಷ್ಟದಲ್ಲಿರುವ ಒಂದು ಕುಟುಂಬಕ್ಕೆ ತುಸು ನೆಮ್ಮದಿ ತರಬಹುದು. ಆದರೆ, ಅದು ಒಟ್ಟು ರೈತ ಸಮುದಾಯ ಎದುರಿಸುವ ಆಜೀವ ಪರ್ಯಂತ ಕಷ್ಟಕ್ಕೆ ನೈಜ ಪರಿಹಾರವೇ ಎಂದರೆ ಅದಕ್ಕೆ ಉತ್ತರ ಸಿಗುವುದಿಲ್ಲ. ರಾಜಕಾರಣಿಗಳು ಸಮಸ್ಯೆಗಳಿಂದ ತಕ್ಷಣದ ಪಲಾಯನಕ್ಕೆ ಪ್ರಯತ್ನಿಸುತ್ತಾರೆ. ತಕ್ಷಣದ  ಲಾಭಗಳಿಗೂ ಯತ್ನಿಸುತ್ತಾರೆ.

ಕೃಷ್ಣ ಅವರು, ಮಂಡ್ಯದಲ್ಲಿ ‘ವೀರೇಶ್‌ ವರದಿ ಜಾರಿಗೆ ತರಲು ನನಗೆ ಅವಕಾಶ ಇರಲಿಲ್ಲ, ಆ ವೇಳೆಗೆ ಚುನಾವಣೆ ಬಂತು ಎಂದು ಹೇಳಿದ್ದು ನಿಜವಲ್ಲ. ವೀರೇಶ್‌ ಸಮಿತಿ ವರದಿ ಕೊಟ್ಟುದು 2002ರ ಏಪ್ರಿಲ್‌ ಆಸುಪಾಸು. ಆ ಸಾರಿ ವಿಧಾನಸಭೆಗೆ ಚುನಾವಣೆ ನಡೆದುದು 2004ರ ಏಪ್ರಿಲ್‌ ತಿಂಗಳಲ್ಲಿ. ಅಂದರೆ ಕೃಷ್ಣ ಅವರು ಮನಸ್ಸು ಮಾಡಿದ್ದರೆ ವೀರೇಶ್‌ ವರದಿಯನ್ನು ಜಾರಿಗೆ ತರಲು  ಪೂರಾ ಎರಡು ವರ್ಷಗಳ ಅವಕಾಶ ಇತ್ತು. ಸಿದ್ದರಾಮಯ್ಯನವರು ಹೇಳಿದ ಹಾಗೆ ವಿರೋಧ ಪಕ್ಷಗಳ ಪ್ರತಿರೋಧದಿಂದಾಗಿ ಕೃಷ್ಣ ಅವರು ಆ ವರದಿಯನ್ನು ಜಾರಿಗೆ ತರಲಿಲ್ಲವೋ ಏನೋ? ಈಗ ಅದು 13ವರ್ಷಗಳಷ್ಟು ಹಳೆಯ ಮಾಹಿತಿ.

‘ರೈತರು ಕುಡಿತದ ಚಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ’ ಎಂಬಂಥ ಕೆಲವು ಕಟ್ಟುಸತ್ಯಗಳ ಜತೆಗೆ ಅನೇಕ ಉತ್ತಮ ಸಲಹೆಗಳನ್ನೂ ವೀರೇಶ್‌ ಕೊಟ್ಟಿದ್ದರು. ಕೃಷಿಗೆ ಸಂಬಂಧಿಸಿದಂತೆ ಒಟ್ಟು 22 ಇಲಾಖೆಗಳು ದ್ವೀಪಗಳಂತೆ  ಒಂದಕ್ಕೆ ಒಂದು ಸಂಬಂಧವಿಲ್ಲದೇ ಕೆಲಸ ಮಾಡುತ್ತಿವೆ. ಅವುಗಳ ನಡುವೆ  ಸಮನ್ವಯ ತರುವಂಥ ಒಂದು ಇಲಾಖೆಯ ರಚನೆಯಾಗಬೇಕು ಎನ್ನುವಂಥ ಒಂದು ಆಸಕ್ತಿದಾಯಕ ಶಿಫಾರಸನ್ನೂ ಅವರು ಮಾಡಿದ್ದರು!

ರಚನಾತ್ಮಕವಾದುದು ಯಾರಿಗೂ ಬೇಡ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಮಿನಾಥನ್‌ ಸಮಿತಿ ನೇಮಕ ಮಾಡುವ ಮಾತು ಆಡಿದ್ದಾರೆ. ಆ ಸಮಿತಿಯ ಶಿಫಾರಸುಗಳನ್ನು ಮುಂದಿನ ಸರ್ಕಾರ ಜಾರಿಗೆ ತರುತ್ತದೆ ಎಂದು ನಾವು ಹೇಗೆ ನಂಬುವುದು? ಏಕೆಂದರೆ ಅದು ಈಗಿನ ಸರ್ಕಾರ ಇರುವಾಗಲೇ ವರದಿ ಕೊಡುತ್ತದೆಯೋ ಅಥವಾ ಕೃಷ್ಣ ಅವರು ‘ಕಾರಣ ಹುಡುಕಿದ’ ಹಾಗೆ ಚುನಾವಣೆ ಎದುರಿಸುವ ಸಂದರ್ಭದಲ್ಲಿ ವರದಿ ಕೊಡುತ್ತದೆಯೋ ಹೇಗೆ ಹೇಳುವುದು? ಶಿವಕುಮಾರ್‌ ನೇತೃತ್ವದ ಸದನ ಸಮಿತಿ ವರದಿ, ವೀರೇಶ್‌ ನೇತೃತ್ವದ ತಜ್ಞರ ಸಮಿತಿ ವರದಿ ಬೇಡವಾಗಿರುವಾಗ ಸ್ವಾಮಿನಾಥನ್‌ ವರದಿ ಹಿತಕರವಾಗಿರುತ್ತದೆ ಎಂದು ಹೇಗೆ ನಂಬುವುದು? ಅಂದರೆ ಉಳುವ ಯೋಗಿಗೆ ಒಳ್ಳೆಯ ಕಾಲ ಬರುವುದೇ ಇಲ್ಲವೇ? ಎಂಥ ದೌರ್ಭಾಗ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT