ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಎಂಬ ನಮ್ಮೊಳಗಿನ ಒಬ್ಬ ವೇಶ್ಯೆ...!

Last Updated 16 ಜೂನ್ 2018, 9:10 IST
ಅಕ್ಷರ ಗಾತ್ರ

ಅದು 1982ನೇ ಇಸವಿ ಮಾರ್ಚ್‌. ಕರ್ನಾಟಕ ಮತ್ತು ಮುಂಬೈ ನಡುವೆ ಬೆಂಗಳೂರಿನಲ್ಲಿ ರಣಜಿ ಉಪಾಂತ್ಯ ಪಂದ್ಯದ ಕೊನೆಯ ದಿನ. ಮುಂಬೈ  ತಂಡ ಸೋಲಿನ ಭೀತಿಯಲ್ಲಿ ಇತ್ತು.  ಎಡಗೈ ಸ್ಪಿನ್ನರ್‌ ರಘುರಾಂ ಭಟ್‌ ದಾಳಿಗೆ ಅದು ತತ್ತರಿಸಿ ಹೋಗಿತ್ತು. ಮೊದಲ ಇನ್ನಿಂಗ್ಸ್‌ ಮುನ್ನಡೆ ಗಳಿಸಿದ್ದ ಕರ್ನಾಟಕ ಗೆಲುವಿನ ಅಂಚಿನಲ್ಲಿ ಇತ್ತು. ಮುಂಬೈ ತಂಡದ ನಾಯಕ ಸುನೀಲ್‌ ಗಾವಸ್ಕರ್‌ ಅಂಗಳಕ್ಕೆ ಇಳಿದು ಬಂದರು.

ಎಡಗೈ ಸ್ಪಿನ್ನರ್‌ ದಾಳಿ ಮಾಡುವಾಗ ಎಡಗೈನಿಂದಲೂ ಬಲಗೈ ಬೌಲರ್‌ ದಾಳಿ ಮಾಡುವಾಗ ಬಲಗೈನಿಂದಲೂ ಗಾವಸ್ಕರ್‌ ಚೆಂಡನ್ನು ಎದುರಿಸತೊಡಗಿದರು. ಪ್ರೇಕ್ಷಕರಲ್ಲಿ ಒಂದು ಕ್ಷಣ ಸಂಚಲನ. ಗಾವಸ್ಕರ್ ಏನು ಮಾಡಲು ಹೊರಟಿದ್ದಾರೆ,  ಹೀಗೆ ಬ್ಯಾಟ್‌ ಮಾಡುವ ಮೂಲಕ ಏನು ಸಾಧಿಸಲು ಹೊರಟಿದ್ದಾರೆ ಎಂದು ಕ್ರೀಡಾಂಗಣದಲ್ಲಿ ಇದ್ದವರಿಗೆಲ್ಲ ಗಲಿಬಿಲಿ. ಹೀಗೆಯೇ ಎಷ್ಟು ಹೊತ್ತು ಆಡಿಯಾರು ಎಂದು ಶಂಕೆ. ಆದರೆ, ದಿನದ ಕೊನೆಯ ವರೆಗೂ ಅವರು ಔಟಾಗದೆ ಕ್ರೀಸ್‌ನಲ್ಲಿ ನಿಂತರು. ಮುಂಬೈ ತಂಡವನ್ನು ಪೂರ್ಣ ಸೋಲಿನ ಅಂಚಿನಿಂದ ಪಾರು ಮಾಡಿದರು. ಇದಾಗಿ 32 ವರ್ಷಗಳು ಕಳೆದು ಹೋಗಿವೆ.

ಒಂದು ತಲೆಮಾರೇ ಮುಗಿದೂ ಹೋಗಿದೆ. ಮತ್ತೆ ಯಾರೂ ಯಾರ ವಿರುದ್ಧವೂ ಇಂಥ ಸಾಹಸ ಮಾಡಲು ಹೋಗಿಲ್ಲ. ಗಾವಸ್ಕರ್‌ ಮೂಲತಃ ಬಲಗೈ ಬ್ಯಾಟ್ಸ್‌ಮನ್‌. ಎಡಗೈನಿಂದ ಬ್ಯಾಟು ಮಾಡುವುದು ಅಸಾಧ್ಯದ ಸಂಗತಿ.  ಬ್ಯಾಟಿಂಗ್‌ ಎಂದರೆ ಎತ್ತೆಂದರತ್ತ ಬ್ಯಾಟು ಬೀಸಿ ಒಂದಿಷ್ಟು ರನ್ನು ಗಳಿಸಿ ಪೆವಿಲಿಯನ್‌ಗೆ ಹೋಗುವುದು ಅಲ್ಲ,  ತನ್ನನ್ನು ಔಟ್‌ ಮಾಡಬೇಕು ಎಂದೇ ಬೀಸಿ ಬರುವ ಚೆಂಡನ್ನು ಕ್ರೀಸ್‌ನಲ್ಲಿ ನಿಂತು ಎದುರಿಸಿ ನಿಲ್ಲುವುದು. ಹಾಗೆ ನಿಲ್ಲಲು ಕೌಶಲ ಬೇಕು, ತಂತ್ರಗಾರಿಕೆ ಬೇಕು ಎಂದು ತೋರಿಸಿಕೊಟ್ಟವರು ಗಾವಸ್ಕರ್‌. ಭಾರತ ಕಂಡ ಅತ್ಯಂತ ಶ್ರೇಷ್ಠ ಕುಶಲ ದಾಂಡಿಗ ಅವರೇ ಇರಬೇಕು. ಅವರನ್ನು ಬಿಟ್ಟರೆ ನಮ್ಮವರೇ ಆದ ರಾಹುಲ್‌ ದ್ರಾವಿಡ್‌ ಅಷ್ಟೇ ಶ್ರೇಷ್ಠ ಕ್ರಿಕೆಟ್‌ ತಂತ್ರಜ್ಞ. ಅಂತಲೇ ಅವರಿಗೆ ‘ಗೋಡೆ’ ಎಂಬ ಹೆಸರೂ ಬಂತು. ದ್ರಾವಿಡ್‌ ತಮ್ಮ ವಿಕೆಟ್‌ ಅನ್ನು ಹೇಗೆ ಸಂರಕ್ಷಿಸಿಕೊಳ್ಳುತ್ತಿದ್ದರು ಎಂದರೆ ಅವರನ್ನು ಔಟ್‌ ಮಾಡುವುದು ಸಾಧ್ಯವೇ ಆಗುತ್ತಿರಲಿಲ್ಲ, ಎಂಥ ಚೆಂಡನ್ನಾದರೂ ಅವರು ಎದುರಿಸುತ್ತಿದ್ದರು.

ಮೊನ್ನೆ ಇಂಗ್ಲೆಂಡಿನಲ್ಲಿ ಭಾರತ ತಂಡದ ಅತಿರಥ ಮಹಾರಥರೆಲ್ಲ ಇಂಗ್ಲೆಂಡ್‌ನ ದಾಳಿಯ ಎದುರು ತರಗೆಲೆಗಳಂತೆ ಉದುರಿ ಬಿದ್ದಾಗ ನನಗೆ ಗಾವಸ್ಕರ್‌ ಆಟದ ನೆನಪಾಯಿತು. ಅವರ ಆಗಿನ ಆಟವನ್ನು ಕರ್ನಾಟಕದ ಕ್ರೀಡಾ ಬರಹಗಾರರು ‘ನಾಚಿಕೆಗೇಡು’ ಎಂದೆಲ್ಲ ಟೀಕಿಸಿ ಬರೆದಿದ್ದರು. ಈಗ ಅವರ ಅಭಿಪ್ರಾಯವೂ ಬದಲಾದಂತೆ ಕಾಣುತ್ತದೆ. ತನ್ನ ತಂಡದ ಮಾನ ರಕ್ಷಣೆಗಾಗಿ ಗಾವಸ್ಕರ್‌ ಏನು ಮಾಡಬೇಕಿತ್ತೋ ಅದನ್ನೇ ಮಾಡಿದರು.

ತನ್ನ ತಂಡದ ಆಟಗಾರರು ಪೆವಿಲಿಯನ್‌ಗೆ ಪೆರೇಡ್‌ ಮಾಡುತ್ತಿದ್ದಾಗ ಕರ್ನಾಟಕದ ಬೌಲಿಂಗ್‌ನಲ್ಲಿ ಹೆದರುವಂಥದು ಏನೂ ಇಲ್ಲ ಎಂದು ಗಾವಸ್ಕರ್‌ ಎರಡೂ ಕೈಗಳಿಂದ ಆಡಿ ತೋರಿಸಿಕೊಟ್ಟರು! ಗಾವಸ್ಕರ್‌ ಮತ್ತು ನಮ್ಮವರೇ ಆದ ಗುಂಡಪ್ಪ ವಿಶ್ವನಾಥ್‌ ಇಬ್ಬರೂ ವಾರಿಗೆಯವರು; ಬೀಗರು. ವಿಶ್ವನಾಥ್‌ ತಂಡಕ್ಕಾಗಿ ಆಡುತ್ತಿದ್ದರು.  ಎಲ್ಲ ಬಾಲ್‌ಗಳು ಹೊಡೆಯುವುದಕ್ಕೆ ಯೋಗ್ಯವಾದುವು ಎಂದು ಅಂದುಕೊಂಡವರು ವಿಶ್ವನಾಥ್‌. ಹೇಗೆ ಹೊಡೆಯಬೇಕು ಎಂದು ಅವರಿಗೆ ಗೊತ್ತಿತ್ತು.

ಗಾವಸ್ಕರ್‌ ತಮಗಾಗಿ ಮತ್ತು ದಾಖಲೆಗಾಗಿ ಆಡುತ್ತಿದ್ದರು. ಅವರು 60 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ನಿಂತು ಕೇವಲ 36 ರನ್‌ ಹೊಡೆದು ಔಟಾಗದೆ ಬ್ಯಾಟ್‌ ಹಿಡಿದುಕೊಂಡು ಪೆವಿಲಿಯನ್‌ಗೆ ಹೋಗಲೂ ನಾಚುತ್ತಿರಲಿಲ್ಲ. ಕ್ರಿಕೆಟ್‌ ಎಂದರೆ ಧಾರಣ ಶಕ್ತಿ. ಇಡೀ ದಿನ ನಡು ಬಾಗಿಸಿ ಬ್ಯಾಟು ಹಿಡಿದು ನಿಂತು ರನ್‌ಗಾಗಿ ಓಡಿ, ಮತ್ತೆ ಬಂದು ಬೌಲ್‌ ಮಾಡಿ, ಕ್ಷೇತ್ರ ರಕ್ಷಣೆ ಮಾಡಿ, ವಿಕೆಟ್‌ ರಕ್ಷಣೆ ಮಾಡಿ, ಹಣ ಕೊಟ್ಟು ಬಂದು ಕುಳಿತ ಪ್ರೇಕ್ಷಕರನ್ನು ರಂಜಿಸುವುದು ಎಂದರೆ ಸಣ್ಣ ಸಂಗತಿಯಲ್ಲ. ಹಣ ಕೊಟ್ಟು ಬರುವ ಪ್ರೇಕ್ಷಕ ಇಡೀದಿನ ರಂಜನೆ ಬೇಕು ಎನ್ನುವವ.

ಈಗ ಭಾರತದ ಪ್ರೇಕ್ಷಕರು ನಿರಾಶೆಯ ಮಡುವಿನಲ್ಲಿ ಮುಳುಗಿದ್ದಾರೆ. ಎಲ್ಲರೂ ಧೋನಿ ತಲೆದಂಡಕ್ಕೆ ಕಾಯುತ್ತಿದ್ದಾರೆ. ಬರೀ ಧೋನಿಯವರನ್ನು ದೂರಿದರೆ ಸಾಕೇ? ಧೋನಿ ತಲೆದಂಡ ಕೊಟ್ಟರೂ ಭಾರತದ ಕ್ರಿಕೆಟ್‌ ಬದಲಾಗುತ್ತದೆಯೇ? ಕಷ್ಟ ಎನಿಸುತ್ತದೆ.
ಕಳೆದ ಎಂಟು ಹತ್ತು ವರ್ಷಗಳಲ್ಲಿ ಒಟ್ಟು ಕ್ರಿಕೆಟ್‌ ಕ್ರೀಡೆಯೇ ಒಂದು ವ್ಯಾಪಾರ ಎನ್ನುವಂತೆ ಆಗಿದೆ. ಮೂರು ಗಂಟೆಯ ಒಂದು ಸಿನಿಮಾದಂತೆ ಮೂರು ಗಂಟೆಯಲ್ಲಿ ಕ್ರಿಕೆಟ್‌ ಆಟವೂ ಮುಗಿಯಬೇಕು ಎಂದು ಪ್ರೇಕ್ಷಕರು ಬಯಸುತ್ತಿದ್ದಾರೆ. ಅಥವಾ ಆ ಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ವ್ಯವಸ್ಥೆ ಬದಲಾಗಿ ಬಿಟ್ಟಿದೆ. ಅನೇಕ ಸಾರಿ ಎಲ್ಲವೂ ಸರಳವಾಗಿ ಇರಬೇಕು ಎಂದು ಅನಿಸುತ್ತದೆ. ಅನಂತ ಸೆಟಲ್‌ವಾಡ್‌, ಸುರೇಶ್‌ ಸರಯ್ಯ ಅವರ ಕಣ್ಣಿಗೆ ಕಟ್ಟುವಂಥ ವೀಕ್ಷಕ ವಿವರಣೆ, ವಿಜಯ್‌ ಮರ್ಚಂಟ್‌, ಎಫ್‌.ಎಸ್‌.ತಲ್ಯಾರ್‌ಖಾನ್ ಅವರ ಪರಿಣತ ವಿವರಣೆಗಳನ್ನೆಲ್ಲ ರೇಡಿಯೊಗೆ ಕಿವಿಗೊಟ್ಟು ಕೇಳುವಾಗ ಇಡೀ ಕ್ರೀಡಾಂಗಣವೇ ಕಣ್ಣ ಮುಂದೆ ಬಂದಂತೆ ಭಾಸವಾಗುತ್ತಿತ್ತು. ವಿಶ್ವನಾಥ್‌ ಅವರು 13ನೇ ರನ್‌ ಹೊಡೆದು ನಿಂತು ಬಿಟ್ಟರೆ ಅಪಶಕುನದ ಭಯದಿಂದ ಎದೆ ಹೊಡೆದುಕೊಳ್ಳುತ್ತಿತ್ತು. ಅವರು ಇನ್ನೊಂದು ರನ್‌ ಹೊಡೆದರೆ ಇನ್ನು ಸೆಂಚುರಿ ಆದಂತೆಯೇ ಎಂದು ಮನಸ್ಸು ಸಂಭ್ರಮಿಸುತ್ತಿತ್ತು.

ಕ್ರಿಕೆಟ್‌ ಎನ್ನುವುದು ಆಗ ಸಭ್ಯರ ಆಟ ಎನ್ನುವಂತೆ ಆಗಿತ್ತು. ಆಸ್ಟ್ರೇಲಿಯಾದಲ್ಲಿ ಕೆರಿ ಪ್ಯಾಕರ್‌ ಸರಣಿ ಆರಂಭ ಆಗುವ ವರೆಗೂ ಕ್ರಿಕೆಟ್‌ ಒಂದು ವ್ಯಾಪಾರ ಎಂದು ಯಾರಿಗೂ ಅನಿಸಿರಲಿಲ್ಲ. ಪ್ಯಾಕರ್‌ ಎಂಥ ದುಷ್ಟ ಎಂದರೆ, ‘ಎಲ್ಲರ ಒಳಗೂ ಒಬ್ಬ ವೇಶ್ಯೆ ಇದ್ದಾಳೆ; ನಿಮ್ಮ ಬೆಲೆ ಎಷ್ಟು ಹೇಳಿ’ ಎಂದು ಕೇಳಿದವನು ಆತ. ಪ್ಯಾಕರ್‌ ಸರಣಿಯಲ್ಲಿ ಭಾರತೀಯ ಆಟಗಾರರು ಭಾಗವಹಿಸಲಿಲ್ಲ. ಆದರೆ, ಭಾರತದಲ್ಲಿಯೂ ಒಬ್ಬ ಪ್ಯಾಕರ್‌ ಹುಟ್ಟಿಕೊಂಡ. ಅವರು ಲಲಿತ್‌ ಮೋದಿ. ಐಪಿಎಲ್‌ ಸರಣಿ ಒಂದು ಅದ್ಭುತ ಪರಿಕಲ್ಪನೆ ಎಂಬುದರಲ್ಲಿ ಅನುಮಾನ ಇಲ್ಲ. ಇದರಲ್ಲಿ ಆಟಗಾರರು ದುಡ್ಡು ಮಾಡಬಹುದು, ಆಡಳಿತ ವರ್ಗ ಹಣ ಮಾಡಬಹುದು, ಬಿಸಿಸಿಐ ಹಣ ಮಾಡಬಹುದು, ಪ್ರಾಯೋಜಕರು, ಮಾಧ್ಯಮದವರೂ ಹಣ ಮಾಡಬಹುದು. ಮತ್ತು ಗುಟ್ಟಾಗಿ ಬುಕ್ಕಿಗಳೂ ಹಣ ಮಾಡಬಹುದು! ಪ್ರೇಕ್ಷಕರು ಹುಚ್ಚೆದ್ದು ಕುಣಿಯಬಹುದು.

ಪ್ರೇಕ್ಷಕರನ್ನು ರಂಜಿಸಲು ಅಲ್ಲಿ ಏನಿರಲಿಲ್ಲ? ಅಲ್ಲಿ  ಕ್ಷಣಕ್ಕೆ ಒಮ್ಮೆ ಗಾಳಿಯಲ್ಲಿ ಮುತ್ತು ತೇಲಿ ಬಿಡುವ ನಟ ನಟಿಯರು ಇದ್ದರು. ಹೊರಗೆ ಎಲ್ಲಿಯೂ ಕಣ್ಣಿಗೆ ಬೀಳದ ಕೋಟ್ಯಧೀಶರು ಇದ್ದರು. ಕ್ರೀಡಾಂಗಣದ ಅಂಚಿನಲ್ಲಿ ತುಂಡು ಬಟ್ಟೆ ತೊಟ್ಟು ಕುಣಿಯುವ ಚೆಲುವೆಯರು ಇದ್ದರು. ಆಗೀಗ ಕೇಳಿ ಬರುವ ಸಂಗೀತ ಇತ್ತು. ವಾದ್ಯಗೋಷ್ಠಿ ಇತ್ತು. ಆಟಗಾರರಿಗೂ ಅಷ್ಟೇ. ಬರೀ ಹಣ ಮಾತ್ರ ಇತ್ತೇ? ಅದ್ಭುತವಾಗಿ ಆಡಿದರೆ ಓಡಿ ಬಂದು ತಬ್ಬಿಕೊಳ್ಳುವ ನಟಿಯರು ಇದ್ದರು, ಉದ್ಯಮಗಳ ಒಡತಿಯರು ಇದ್ದರು! ರಾತ್ರಿ ಪಾರ್ಟಿಗಳು, ರಾಸಲೀಲೆಗಳು ಇದ್ದುವು. ಕ್ರಿಸ್‌ ಗೇಲ್‌ ವೆಸ್ಟ್‌ ಇಂಡೀಸ್‌ ತಂಡಕ್ಕೆ ಆಡುವುದನ್ನು ಬಿಟ್ಟು ಐಪಿಎಲ್‌ನಲ್ಲಿ ಏಕೆ ಆಡಿದ ಎಂಬುದಕ್ಕೆ ಇನ್ನೇಷ್ಟು ಕಾರಣ ಬೇಕು?
ಇನ್ನೇನು ಬೇಕು? ಒಂದು ಟೆಸ್ಟ್‌ಗೆ ಆಡಿದರೆ ಗರಿಷ್ಠ ಒಂದು ಕೋಟಿ ರೂಪಾಯಿ ‘ವೇತನ’ ಗಳಿಸುತ್ತಿದ್ದ ಆಟಗಾರ ಹರಾಜಿಗೆ ಸಿದ್ಧನಾದ. ಕೋಟಿಗಟ್ಟಲೆ ಹಣಕ್ಕೆ ಮಾರಾಟವಾದ.  ಭಾರತಕ್ಕೆ ಆಡುವುದು ಬೇರೆ, ಸಾಹುಕಾರರಿಗೆ ಆಡುವುದು ಬೇರೆ. ಸಾಹುಕಾರ ತಾನು ಖರೀದಿ ಮಾಡಿದ ಹಣವನ್ನು ಮತ್ತೆ ಗಳಿಸಬೇಕು. ಆಟಗಾರ ಒತ್ತಡಕ್ಕೆ ಸಿಲುಕಿದ.   

ನಾನೂ ಬೆಂಗಳೂರಿನಲ್ಲಿ ಕೆಲವು ಐಪಿಎಲ್‌ ಪಂದ್ಯಗಳನ್ನು ನೋಡಲು ಹೋಗಿದ್ದೆ. ಕೈಯಲ್ಲಿ ಸಿಕ್ಸರ್‌ ಮತ್ತು ಬೌಂಡರಿ ಕಾರ್ಡ್‌ಗಳನ್ನು ಹಿಡಿದು ಅರಚುವ ಯುವಕ ಯುವತಿಯರ ಸಮ್ಮುಖದಲ್ಲಿ ನಡುಬಗ್ಗಿಸಿ ನಿಲ್ಲುವ ಆಟಗಾರ ಎದುರಿಸುವ ಒತ್ತಡ ಎಂಥದು ಎಂದು ಯೋಚಿಸಿ ದಿಗ್ಭ್ರಮೆಗೊಂಡೆ. ಐಪಿಎಲ್‌ ಯಾವತ್ತೂ ಬ್ಯಾಟು ಮತ್ತು ಚೆಂಡಿನ ಆಟ ಎಂದು ನನಗೆ ಅನಿಸಿಲ್ಲ. ಅದು ಮುಖ್ಯವಾಗಿ ಬ್ಯಾಟಿನ ಆಟ ಎಂದೇ ಅನಿಸಿದೆ.  ಬ್ಯಾಟ್ಸ್‌ಮನ್‌ಗಳು ಇಪ್ಪತ್ತು ಓವರ್‌ಗಳಲ್ಲಿ ಹೆಚ್ಚು ಹೆಚ್ಚು ರನ್‌ ಗಳಿಸಬೇಕು. ನೂರು ಇನ್ನೂರು ಗಳಿಸುವುದಕ್ಕಿಂತ ಮುನ್ನೂರು ಗಳಿಸಿಬಿಟ್ಟರೆ ಇನ್ನೂ ಒಳ್ಳೆಯದು. ಇಲ್ಲಿ ತಾಳ್ಮೆ ಇಲ್ಲ, ತಂತ್ರಗಾರಿಕೆ ಇಲ್ಲ.

ತೋಳಿನ ಶಕ್ತಿ ಮಾತ್ರ ಸಾಕು. ಸುಮ್ಮನೆ ಬ್ಯಾಟು ಬೀಸುತ್ತ ಇರುವುದು. ಅದೃಷ್ಟ ಇದ್ದರೆ ಅದು ಬೌಂಡರಿ ಗೆರೆಯನ್ನು ದಾಟುತ್ತದೆ.  ಹೀಗೆ ಚೆಂಡನ್ನು ಬೌಂಡರಿ ಗೆರೆಗೆ ಅಟ್ಟಿ ಅಟ್ಟಿ ಯುವತಿಯರ ಎದೆ ಝಲ್‌ ಎನ್ನುವಂತೆ ಮಾಡಿದ್ದ ಕ್ರಿಸ್‌ ಗೇಲ್‌ ನಾಶವಾಗಿ ಹೋದ. ಈ ಸಾರಿ 14 ಕೋಟಿಗೆ ಹರಾಜಾಗಿದ್ದ, ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಹೊಡೆದು ವಿಶ್ವ ದಾಖಲೆ ನಿರ್ಮಿಸಿದ್ದ, ಯುವರಾಜ್‌ ಈಗ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೆಣಗುತ್ತಿದ್ದಾರೆ. ಐಪಿಎಲ್‌ ಎಂಬುದು ಆಟಗಾರರನ್ನೂ ನಾಶ ಮಾಡಿತು; ಆಟವನ್ನೂ ನಾಶ ಮಾಡಿತು. ಹೊಡೆ ಅಥವಾ ಹೊರನಡೆ ಎಂಬುದು ಕ್ರಿಕೆಟ್‌ ಅಲ್ಲ. ಐದು ದಿನದ ಒಂದು ಟೆಸ್ಟಿನಲ್ಲಿ ನಿತ್ಯ ಕನಿಷ್ಠ 90 ಓವರ್‌ ಆಡಬೇಕು. ಪ್ರತಿ ತಂಡವೂ ಒಂದೂವರೆ ಎರಡು ದಿನವಾದರೂ ಆಡಬೇಕು.

ಬೋರ್ಡಿನ ಮೇಲೆ ನಾನೂರು ರನ್ನನ್ನಾದರೂ ಪೇರಿಸಬೇಕು. ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲ ಕಲ್ಪಿಸುವ ಪಿಚ್ಚು ನಂತರ ಬೌಲರ್‌ಗಳಿಗೂ ವರವಾಗಬೇಕು. ಬ್ಯಾಟು ಮತ್ತು ಚೆಂಡಿನ ನಡುವೆ ಸೆಣಸಾಟ ನಡೆಯಬೇಕು. ಈ ಕ್ರಿಕೆಟ್‌ ಜಗತ್ತು ಎಂಥೆಂಥ ಬ್ಯಾಟ್ಸ್ ಮನ್ ರನ್ನು ಕಂಡಿದೆ, ಬೌಲರ್‌ಗಳನ್ನು ಕಂಡಿದೆ. ಅವರ ಹೆಸರನ್ನೆಲ್ಲ ನೆನಪಿಸಿಕೊಂಡರೆ ಈಗಿನವರೆಲ್ಲ ಕುಳ್ಳರಂತೆ ಕಾಣುತ್ತಾರೆ. ಆಗ ಈಗಿನ ಹಾಗೆ ತಲೆಗೊಂದು ಹೆಲ್ಮೆಟ್‌ ಮತ್ತು ಸೂಕ್ಷ್ಮ ಜಾಗಗಳನ್ನು ರಕ್ಷಿಸಿಕೊಳ್ಳಲು ಪ್ಯಾಡ್‌ಗಳು ಇರಲಿಲ್ಲ! ಗಾವಸ್ಕರ್‌, ಬ್ರಿಜೇಶ್‌, ಸಿದ್ಧು ಅವರೆಲ್ಲ ಯಾವ ರಕ್ಷಕಗಳೂ ಇಲ್ಲದೇ ಆಡುತ್ತಿದ್ದರು. ಅಲ್ಲಿ ಕೌಶಲಕ್ಕೆ ಜಾಗ ಇತ್ತು. ತಲೆ ಬುರುಡೆ ಒಡೆದು ಬಿಡುವ, ಪಕ್ಕೆಲುವನ್ನು ಮುರಿದು ಬಿಡುವ ಚೆಂಡನ್ನು ಹೇಗೆ ಎದುರಿಸಬೇಕು ಎಂದು ಅವರಿಗೆ ಗೊತ್ತಿತ್ತು. ಅವರೆಲ್ಲ ದೇಶಕ್ಕಾಗಿ ಆಡುತ್ತಿದ್ದರು.

ಐಪಿಎಲ್‌ ಆ ‘ದೇಶ’ ಎಂಬುದನ್ನೇ ಕೊಂದು ಬಿಟ್ಟಿತು. ಈಗ ಒಂದು ತಂಡದಲ್ಲಿ ಎಲ್ಲ ಪ್ರದೇಶದವರೂ ಇರುತ್ತಾರೆ. ಎಲ್ಲ ದೇಶದವರೂ ಇರುತ್ತಾರೆ. ಯಾವ ತಂಡದಲ್ಲಿಯೂ ದೇಶದ ಪ್ರತಿಷ್ಠೆ ಎಂಬುದು ಇಲ್ಲ. ವಿಜಯ್‌ ಮಲ್ಯ ಅವರು ಈ ಸಾರಿ ಬೆಂಗಳೂರು ತಂಡದಲ್ಲಿ ಒಬ್ಬ ಬೆಂಗಳೂರಿಗನನ್ನೂ ತೆಗೆದುಕೊಂಡಿರಲಿಲ್ಲ. ಎಲ್ಲರೂ ಆಡುವುದು ರಂಜನೆಗಾಗಿ, ಹಣಕ್ಕಾಗಿ; ಪಣಕ್ಕಾಗಿ, ದೂರದಲ್ಲಿ ಎಲ್ಲಿಯೋ ಕುಳಿತ ಬುಕ್ಕಿ ಒಡ್ಡುವ ಪಣಕ್ಕಾಗಿ. ಅದ್ಭುತವಾಗಿ ಆಡಿ ಯಾರೋ ಕೊಡುವ ಒಂದೋ ಎರಡೋ ಲಕ್ಷ ಬಹುಮಾನದ ಬದಲಾಗಿ ಯಾರೋ ಬುಕ್ಕಿ ಕೊಡುವ 25 ಲಕ್ಷಕ್ಕಾಗಿ ಒಂದು ಆಟದಲ್ಲಿ ಸೋಲುವುದು ಲಾಭಕರ ಅಲ್ಲವೇ? ಮತ್ತೆ, ಸೊಂಟದಲ್ಲಿ ಟವೆಲ್‌ ಇಟ್ಟುಕೊಂಡು  ಶ್ರೀಶಾಂತ್‌ನಂಥ ಯುವಕರು ಯಾರಿಗೋ ಸೂಚನೆ ಕೊಡಲು ಬೌಲ್‌ ಮಾಡಿದ್ದು ಏಕೆ? ಆತನೇನೋ ಸಿಕ್ಕಿಬಿದ್ದ. ಸಿಕ್ಕಿಬೀಳದವರೇನೂ ಸಂಭಾವಿತರೇ? ಮುದ್ಗಲ್‌ ವರದಿಯಲ್ಲಿ ಐವರು ಹೆಸರಾಂತ ಆಟಗಾರರೇ ಇದ್ದಾರೆ ಎನ್ನುತ್ತಾರೆ. ಏಕೋ ಏನೋ ಅವರ ಹೆಸರು ಹೊರಗೆ ಬಂದಿಲ್ಲ.

ಎಲ್ಲದಕ್ಕೂ ಭ್ರಮ ನಿರಸನ ಎಂದು ಇರುತ್ತದೆ. ಆದರೆ, ಹಣವೊಂದಕ್ಕೆ ಅದು ಇರುವುದಿಲ್ಲ. ಅದು ಎಷ್ಟು ಸಂಗ್ರಹ ವಾದರೂ ಸಾಕು ಎನಿಸುವುದಿಲ್ಲ. ಆದರೆ, ಅದರ ಅಡ್ಡ ಪರಿಣಾಮಗಳು ಗೋಚರಿಸುತ್ತ ಇರುತ್ತವೆ. ವೇಗ ಯಾವಾಗಲೂ ನಮ್ಮನ್ನು ಕೊಲ್ಲುತ್ತದೆ. ಐದು ದಿನಗಳ ನಿಧಾನಗತಿಯ ಆಟವನ್ನು ಐಪಿಎಲ್‌ನ ಇಪ್ಪತ್ತು ಓವರ್‌ಗಳ ವೇಗ ಕೊಂದು ಹಾಕಿದೆ. ಐದು ದಿನಗಳ ಟೆಸ್ಟ್‌ ಪಂದ್ಯಗಳೇ ಅರ್ಥ ಕಳೆದುಕೊಂಡಿರುವಾಗ ರಣಜಿ, ದೇವಧರ್‌ ಟ್ರೋಫಿ ಪಂದ್ಯಗಳನ್ನು ನೋಡುವವರು ಯಾರು?

ಪ್ಯಾಕರ್‌, ‘ಪ್ರತಿಯೊಬ್ಬರಲ್ಲೂ ಒಂಚೂರು ವೇಶ್ಯೆ ಇರುತ್ತಾಳೆ ಎಂದಿದ್ದರು. ಅವಳ ಬೆಲೆ ಎಷ್ಟು’ ಎಂದೂ ಕೇಳಿದ್ದರು. ಈಗ ಐಪಿಎಲ್‌ ಇಡೀ ಆಟವನ್ನೇ ವೇಶ್ಯಾವಾಟಿಕೆ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಾಕೇ? ಇನ್ನೂ ಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT