ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪಪ್ರಜ್ಞೆಯೇ ಇಲ್ಲದ ಬೆಂಗಳೂರು ಎಂಬ ನಗರ...

Last Updated 16 ಜೂನ್ 2018, 9:10 IST
ಅಕ್ಷರ ಗಾತ್ರ

ಅದಾಗಿ ಬಹಳ ದಿನಗಳೇನೂ ಆಗಿಲ್ಲ. ಒಂದೂವರೆ ವರ್ಷ ಆಗಿರಬಹುದು ಅಷ್ಟೇ. ಅಮೆರಿಕೆಯ ‘ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ’ಯಲ್ಲಿ ಬೆಂಗಳೂರು  ಸುದ್ದಿ ಆಗಿತ್ತು. ಅದೇನು ದೊಡ್ಡ ಘನಂದಾರಿ ಸಾಧನೆಗೆ ಅಲ್ಲ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸದ ಗುಡ್ಡೆಗಳು ಬಿದ್ದಿದ್ದುವು. ಊರ ತುಂಬೆಲ್ಲ ದುರ್ನಾತ ಹಬ್ಬಿತ್ತು. ಆಗಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು, ‘ಬೆಂಗಳೂರು ದೊಡ್ಡ ನಗರ, ಸುದ್ದಿ ಆಗುವುದು ಸಹಜ’ ಎಂದಿದ್ದರು. ಈಗ ಮತ್ತೆ ಬೆಂಗಳೂರು ಅದೇ ಕಾರಣಕ್ಕೆ ಸುದ್ದಿಯಲ್ಲಿ ಇದೆ. ಮಂಡೂರು ಜನರು ಬಂಡು ಎದ್ದಿದ್ದಾರೆ. ‘ನಿಮ್ಮ ಊರಿನ ಕಸವನ್ನು ನಮ್ಮ ಊರಿನಲ್ಲಿ ತಂದು ಏಕೆ ಹಾಕುತ್ತಿದ್ದೀರಿ’ ಎಂದು ಕೇಳುತ್ತಿದ್ದಾರೆ. ಸರ್ಕಾರಕ್ಕೆ ಅವರನ್ನು ನ್ಯಾಯವಾಗಿ ಎದುರಿಸಲು ಧೈರ್ಯವಿಲ್ಲ. ಪ್ರತಿಭಟಿಸುವ ಅವರ ಹಕ್ಕನ್ನು ಹತ್ತಿಕ್ಕಲು ನಿಷೇಧಾಜ್ಞೆ ವಿಧಿಸಿದೆ. ಇದು ಅನ್ಯಾಯ. ಅನೈತಿಕ.

ಬೆಂಗಳೂರು ಪಾಪಪ್ರಜ್ಞೆ ಇಲ್ಲದ ಊರು. ನಾಚಿಕೆ ಇಲ್ಲದೆ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಒಂದು ವಿಧಾನ, ಒಂದು ಯೋಜನೆ ಇತ್ಯಾದಿ ಏನೂ ಇರುವಂತೆ ಕಾಣುವುದಿಲ್ಲ. ಬೆಳೆದರೆ ಬೆಳೆಯಲಿ. ತನಗೆ ಬೇಕಾದ ಕುಡಿಯುವ ನೀರನ್ನು ಎಲ್ಲಿಂದ ತರಬೇಕು ಎಂದು ಅದಕ್ಕೆ ಗೊತ್ತಿಲ್ಲ. ಕೊಳವೆ ಬಾವಿ ಕೊರೆದರೆ ಆಯಿತು ಎಂದು ಅಂದುಕೊಂಡಿದೆ. ತಾನು ಹುಟ್ಟಿ ಹಾಕುವ ಕಸವನ್ನು ಎಲ್ಲಿ ಹಾಕಬೇಕು ಎಂದೂ ಅದಕ್ಕೆ ಗೊತ್ತಿದ್ದಂತೆ ಇಲ್ಲ. ಮನೆಯ ಮುಂದೆ ಚೆಲ್ಲಿದರಾಯಿತು ಎಂದು ಅಂದುಕೊಂಡಿದೆ. ಮನೆಯ ಮುಂದೆ ಬಿದ್ದ ಕಸವನ್ನು ಒಟ್ಟುಗೂಡಿಸಿ ಪಾಲಿಕೆಯ ಸಿಬ್ಬಂದಿ ಮಂಡೂರು ಬಳಿ ಹೋಗಿ ಸುರಿಯುತ್ತಿದ್ದಾರೆ. ನಮ್ಮ ಮನೆಯ ಕಸವನ್ನು ರಸ್ತೆಗೆ ತಳ್ಳುವುದು ಎಷ್ಟು ನಾಚಿಕೆಗೇಡಿನ ಕೆಲಸವೋ, ಅದನ್ನು ತೆಗೆದುಕೊಂಡು ಇನ್ನೊಂದು ಊರಿನ ಹೊಸ್ತಿಲ ಬಳಿ ಹಾಕಿ ಬರುವುದು ಅಷ್ಟೇ ಪಾಪಿಷ್ಟ ಕೆಲಸ. ಯಾರಾದರೂ ಹೀಗೆ ಮಾಡುತ್ತಾರೆಯೇ? ನಾವು ಮಂಡೂರಿನ ಜನರನ್ನು ಏನೆಂದು ತಿಳಿದುಕೊಂಡಿದ್ದೇವೆ? ಅವರೂ ಮನುಷ್ಯರು ಎಂಬ ಖಬರು ನಮಗೆ ಇದೆಯೇ?

ಒಂದೂವರೆ ವರ್ಷದ ಹಿಂದೆ ಮಂಡೂರಿನ ಜನರು ಹೀಗೆಯೇ ಬಂಡು ಎದ್ದಿದ್ದರು. ಅವರಿಗೆ ಈ ವರ್ಷದ ಫೆಬ್ರುವರಿ ನಂತರ ಮಂಡೂರಿನ ಬಳಿ ಕಸ ಹಾಕುವುದಿಲ್ಲ ಎಂದು ಸರ್ಕಾರ ಮುಚ್ಚಳಿಕೆ ಬರೆದು ಕೊಟ್ಟಿತ್ತು. ಗಡುವು ಮುಗಿದು ಮೂರು ತಿಂಗಳು ಕಳೆದು ಹೋಗಿವೆ. ಈಗ ಸರ್ಕಾರ ಮತ್ತೆ ಎಂಟು ತಿಂಗಳ ಸಮಯಾವಕಾಶ ಕೇಳುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಮಾಡದ ಕೆಲಸವನ್ನು ಇನ್ನು ಎಂಟು ತಿಂಗಳಲ್ಲಿ ಸರ್ಕಾರ ಮಾಡುತ್ತದೆ ಎಂಬುದಕ್ಕೆ ಏನು ಖಾತ್ರಿ? ಸರ್ಕಾರ ಅದು ಬಿಜೆಪಿಯದೇ ಇರಲಿ, ಕಾಂಗ್ರೆಸ್ಸಿನದೇ ಇರಲಿ, ಜನರ ನಂಬಿಕೆ ಕಳೆದುಕೊಂಡಿದೆ. ಏಕೆಂದರೆ ಇಲ್ಲಿ ಸರ್ಕಾರದ ಮಾತು ನಡೆಯುತ್ತಿದೆ ಎಂದು ಯಾರಿಗೂ ಅನಿಸುತ್ತಿಲ್ಲ.

ಬೆಂಗಳೂರಿನ ಕಸ ವಿಲೇವಾರಿ ಹಿಂದೆ ಬೇರೆ ಮಸಲತ್ತೇ ಇರುವಂತೆ ಕಾಣುತ್ತದೆ. ಪಾಲಿಕೆ ಹೇಳುವಂತೆ ಇಲ್ಲಿ ನಿತ್ಯ ನಾಲ್ಕು ಸಾವಿರ ಟನ್‌ ಕಸ ಉತ್ಪಾದನೆ ಆಗುತ್ತಿದೆಯೇ ಎಂಬುದರ ಬಗೆಗೇ ಅನುಮಾನ ಇದೆ. ಹಾಗೆಂದು ಹೇಳುವ ಗುತ್ತಿಗೆದಾರರಿಗೆ ಪಾಲಿಕೆ ಬಿಲ್‌ ಪಾವತಿ ಮಾಡುತ್ತಿದೆ. ಅದು ಕೋಟಿಗಟ್ಟಲೆ ಹಣ! ಕಸ ಸಾಗಿಸುವ ಯಾವ ಲಾರಿಯ ಭಾರವನ್ನೂ ತೂಗಿ ನೋಡುವ ವ್ಯವಸ್ಥೆ ಇಲ್ಲ. ಅದು ಯಾರಿಗೂ ಬೇಡವೂ ಆಗಿರಬಹುದು. ಕಸವನ್ನು ಸಂಸ್ಕರಿಸುವುದಕ್ಕಿಂತ ಮಂಡೂರಿನಲ್ಲಿ ಹಾಕಿ ಬರುವುದು ಹೆಚ್ಚು ಲಾಭಕರವಾಗಿರಬಹುದು. ಇಲ್ಲವಾದರೆ ಇಷ್ಟು ವರ್ಷಗಳು ಕಳೆದರೂ ಬೆಂಗಳೂರಿನಂಥ ಒಂದು ಅಂತರರಾಷ್ಟ್ರೀಯ ಊರಿನ ಕಸವನ್ನು ಸಂಸ್ಕರಿಸಲು ವ್ಯವಸ್ಥೆಯನ್ನೇ ಮಾಡುವುದಿಲ್ಲ ಎಂದರೆ ಏನು ಅರ್ಥ? ಇಸ್ರೇಲ್‌ ಸೇರಿದಂತೆ ಅನೇಕ ದೇಶಗಳ ತಜ್ಞರು ಬೆಂಗಳೂರಿನ ಕಸವನ್ನು ಸಂಸ್ಕರಿಸಲು ಮುಂದೆ ಬಂದಿದ್ದರು. ಬಂಡವಾಳ ಹಾಕಲು ಸಿದ್ಧರಿದ್ದರು. ಆದರೆ, ಬೆಂಗಳೂರನ್ನು ಸಚಿವರ ರೂಪದಲ್ಲಿ, ಪುರಪಿತೃಗಳ ರೂಪದಲ್ಲಿ, ಗುತ್ತಿಗೆದಾರರ ರೂಪದಲ್ಲಿ, ಅಧಿಕಾರಿಗಳ ರೂಪದಲ್ಲಿ ಹಿಂಡಿ ಹಿಪ್ಪೆ ಮಾಡುತ್ತಿರುವ ಹಿತಾಸಕ್ತಿಗಳು ಅದಕ್ಕೆ ಅಡ್ಡಗಾಲು ಹಾಕಿದುವು.

ಕಳೆದ ಐದಾರು ವರ್ಷಗಳಿಂದ ನೋಡುತ್ತಿದ್ದೇನೆ. ಬೆಂಗಳೂರಿನ ವಿಚಾರದಲ್ಲಿ ಇಲ್ಲಿ ಒಂದು ಸರ್ಕಾರ ಇದೆ ಎಂದು ನನಗೆ ಅನಿಸಿಲ್ಲ. ಪಾಲಿಕೆಯಲ್ಲಿ ಆಡಳಿತ ಇದೆ ಎಂದೂ ಅನಿಸಿಲ್ಲ. ಒಂದೂವರೆ ವರ್ಷದ ಹಿಂದೆ ಇದೇ ರೀತಿ ಕಸ ಸುದ್ದಿ ಮಾಡಿದಾಗ ಹೈಕೋರ್ಟ್‌ ಮಧ್ಯ ಪ್ರವೇಶಿಸಿದ ನಂತರ ಸಮಸ್ಯೆ ಬಗೆಹರಿದಿತ್ತೇ ಹೊರತು ಸರ್ಕಾರದ ಮಧ್ಯಸ್ಥಿಕೆಯಿಂದ ಅಲ್ಲ. ಹಳೆಯ ಗುತ್ತಿಗೆದಾರರನ್ನು ಬದಲಿಸಬೇಕು ಎಂದು ಹೈಕೋರ್ಟ್‌ ತಾಕೀತು ಮಾಡಿತ್ತು. ಈಗಲೂ ಅದೇ ಗುತ್ತಿಗೆದಾರರು ಬೇರೆಯವರ ಹೆಸರಿನಲ್ಲಿ ಅದೇ ‘ದಂಧೆ’ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರೇ ಆರೋಪಿಸುತ್ತಿದ್ದಾರೆ.

ಎಲ್ಲದಕ್ಕೂ ಒಂದು ದೂರದೃಷ್ಟಿ ಎಂದು ಇರಬೇಕು. ಒಂದು ಯೋಜನೆ ಎಂಬುದು ಇರಬೇಕು. ನಾಲ್ಕೂವರೆ ವರ್ಷಗಳ ಹಿಂದೆ ಬೆಂಗಳೂರು ನಗರದ ವಾರ್ಡ್‌ಗಳ ಸಂಖ್ಯೆಯನ್ನು 100ರಿಂದ 198ಕ್ಕೆ ಏರಿಸುವಾಗ ಇಂಥ ಯಾವ ದೂರದೃಷ್ಟಿಯಾಗಲಿ, ಯೋಜನೆಯಾಗಲಿ ಇದ್ದಂತೆ ಕಾಣಲಿಲ್ಲ. ಇದ್ದಿದ್ದರೆ ಈಗ ಅದು ತಪ್ಪು ಎಂದು ತೋರುತ್ತಿರಲಿಲ್ಲ. ಬೆಂಗಳೂರು ಈಗ ಬೆಳೆಯುತ್ತಿರುವ ರೀತಿಯನ್ನು ನಿಯಂತ್ರಿಸದೇ ಇದ್ದರೆ ಮುಂದೆ ಒಂದು ದಿನ ಅದನ್ನು ಹೀಗೆ ಬೆಳೆಯಲು ಬಿಡಬಾರದಿತ್ತು ಎಂದು ಅನಿಸಬಹುದು. ಆಗ ಏನೂ ಮಾಡಲು ಬರುವುದಿಲ್ಲ.

   ರಾಜಕಾರಣಿಗಳು ಹಿಂದಿನ ಸರ್ಕಾರದ ಮೇಲೆ ದೂರು ಹೊರೆಸಿ ಹೋಗಿ ಬಿಡುತ್ತಾರೆ. ಇಲ್ಲಿ ವಾಸಿಸುವ ಜನರು ಯಾರನ್ನು ಹಿಡಿದುಕೊಳ್ಳಬೇಕು? ಈಗಲೂ ಬೆಂಗಳೂರಿನ ಕಸದ ಸಮಸ್ಯೆಗೆ ಹಿಂದಿನ ಸರ್ಕಾರವೇ ಹೊಣೆ ಎಂದು ಈಗಿನ ಸರ್ಕಾರ ಹೇಳಿಬಿಡಬಹುದು. ತನ್ನ ವೈಫಲ್ಯಗಳಿಂದಾಗಿಯೇ ಹಿಂದಿನ ಸರ್ಕಾರ ಕಸದ ಬುಟ್ಟಿಗೆ ಹೋಯಿತು. ಜನರು ಬದಲಾವಣೆ ಬಯಸಿಯೇ ಈಗಿನ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಈಗಿನ ಸರ್ಕಾರ ಏನು ಮಾಡಿದೆ? ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿ ಹೋಯಿತಲ್ಲ? ಒಂದೂವರೆ ವರ್ಷದ ಹಿಂದೆ ಇದೇ ಕಸ ಸುದ್ದಿ ಮಾಡಿದಾಗ, ಆಗಲೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್‌, ‘ಉದ್ಯಾನನಗರಿಯನ್ನು ಬಿಜೆಪಿ ಸರ್ಕಾರ ಕಸದ ನಗರಿ ಮಾಡಿದೆ’ ಎಂದು ಮಿನರ್ವ ವೃತ್ತದಲ್ಲಿ ಪ್ರತಿಭಟನೆ ಮಾಡಿ ದೂರಿದ್ದರು.

ಬೆಂಗಳೂರಿಗೆ ಈಗಲೂ ಉದ್ಯಾನ ನಗರಿ ಎಂದು ಹೆಸರು ಇದೆ. ಪರಮೇಶ್ವರ್‌ ಅವರ ಪಕ್ಷದ ಸರ್ಕಾರ ಈಗೇನು ಮಾಡಿದೆ? ಈಗಲೂ ಬೆಂಗಳೂರು ಕಸದ ನಗರವೇ ಆಗಿದೆಯಲ್ಲ? ಸರ್ಕಾರಕ್ಕೂ ನೆನಪುಗಳು ಇರುವುದಿಲ್ಲ. ಸಾರ್ವಜನಿಕರಿಗೆ ಮೊದಲೇ ಇರುವುದಿಲ್ಲ. ಈಗ ಬಿಜೆಪಿಯವರು ಆಗ ಪರಮೇಶ್ವರ್‌ ಹೇಳಿದ ಮಾತುಗಳನ್ನೇ ಹೇಳಬಹುದು. ಬದಲಾವಣೆ ಎಂದರೆ ಅಷ್ಟೇ ತಾನೇ? ದಿನ ಕಳೆದಂತೆ ಸರ್ಕಾರಗಳು ಬದಲಾಗುತ್ತವೆ. ಆದರೆ, ಅವುಗಳನ್ನು ನಿಯಂತ್ರಿಸುವ ಹಿತಾಸಕ್ತಿಗಳು ಬದಲಾಗುವುದಿಲ್ಲ. ಇಡೀ ಬೆಂಗಳೂರು ನಗರ ಭೂ ಮತ್ತು ಗುತ್ತಿಗೆದಾರರ ಮಾಫಿಯಾ ಕೈಯಲ್ಲಿ ಸಿಲುಕಿ ನರಳುತ್ತಿದೆ. ಆ ಮಾಫಿಯಾ ಹಿಡಿತದಿಂದ ಬಿಡಿಸಿಕೊಂಡು ಇವತ್ತೇ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕಸ ಸಂಸ್ಕರಣ ಘಟಕ ಹಾಕಿದರೂ ಅವು ಪೂರ್ಣಗೊಂಡು ಕೆಲಸ ಆರಂಭಿಸಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ಸರ್ಕಾರ ಕೇವಲ ಎಂಟು ತಿಂಗಳ ಕಾಲಾವಕಾಶ ಕೇಳುತ್ತಿದೆ. ಎಂಟು ತಿಂಗಳಲ್ಲಿ ಏನು ಜಾದು ಮಾಡಲು ಸಾಧ್ಯ? ಇಷ್ಟು ವರ್ಷ ರಾಜ್ಯದಲ್ಲಿ ಅಧಿಕಾರ ಮಾಡಿದ ಸರ್ಕಾರಗಳಿಗೆ ಮತ್ತು ಪಾಲಿಕೆಯನ್ನು ಆಳಿದ ಪಕ್ಷಗಳಿಗೆ ಇಂಥ ಘಟಕಗಳ ಅಗತ್ಯ ಕಾಣಲೇ ಇಲ್ಲ ಎಂಬುದು ವಿಸ್ಮಯವೇ? ದುರಂತವೇ? ತಂತ್ರಜ್ಞಾನದ ಬಳಕೆಯಲ್ಲಿ ಜಗತ್ತಿನ ಮುಂಚೂಣಿ ನಗರವಾಗಿರುವ ಬೆಂಗಳೂರಿನ ವಿಪರ್ಯಾಸವೇ ಇದು?

ಮಂಡೂರಿನ ಜನರ ಪ್ರತಿರೋಧಕ್ಕೆ ಸರ್ಕಾರ ತಾತ್ಕಾಲಿಕ ಕಡಿವಾಣ ಹಾಕಿದೆ. ಆದರೆ, ಹೀಗೆ ನಿಷೇಧಾಜ್ಞೆ ವಿಧಿಸಿ ಎಷ್ಟು ದಿನ ಎಂದು ಕಸ ಚೆಲ್ಲುವುದು ಸಾಧ್ಯ? ಆ ಊರಿನ ಜನರು ನ್ಯಾಯ ಕೇಳಿ ನ್ಯಾಯಾಲಯದ ಮೊರೆ ಹೊಕ್ಕರೆ ಏನು ಮಾಡುವುದು? ಅವರ ಪ್ರತಿರೋಧದ ಹಿಂದೆ ಭೂ ಮಾಫಿಯಾ ಇದೆ ಎಂದು ಆರೋಪಿಸುವುದು ಪಲಾಯನದ ದಾರಿ ಇದ್ದರೂ ಇರಬಹುದು. ಆದರೆ, ನಮ್ಮ ಊರಿನ ಕಸವನ್ನು ಜನವಸತಿ ಇರುವ ಇನ್ನೊಂದು ಊರಿನ ಬಳಿ ಹೋಗಿ ಹಾಕುವುದು ಹೇಗೆ ಸಮರ್ಥನೀಯ ಎಂದೇ ಅರ್ಥವಾಗುವುದಿಲ್ಲ. ಸಮರ್ಥನೀಯ ಎನ್ನುವುದಾದರೆ ಬೆಂಗಳೂರಿನಲ್ಲಿಯೇ ಅದನ್ನು ಎಲ್ಲೆಂದರಲ್ಲಿ ಹಾಕಬಹುದಲ್ಲ. ಇಲ್ಲಿ ಇರುವವರು ‘ನಾಗರಿಕ’ರು, ಅಲ್ಲಿ ಇರುವವರು ಅಲ್ಲವೇ?

ನಮ್ಮ ಶಾಸಕರು ಅಧ್ಯಯನಕ್ಕೆ ಎಂದು ವರ್ಷಕ್ಕೊಮ್ಮೆ ವಿದೇಶಗಳಿಗೆ ಸುತ್ತುತ್ತಾರೆ. ಅಲ್ಲಿ ಕಸ ಹೇಗೆ ನಿರ್ವಹಣೆ ಮಾಡುತ್ತಾರೆ ಎಂದು ತಿಳಿಯಲು ಯಾರೂ ಪ್ರವಾಸ ಹೋದಂತೆ ಕಾಣಲಿಲ್ಲ. ಅವರು ವಿದೇಶಕ್ಕೆ ಹೋಗುವುದು ಬೇಡ ಪಕ್ಕದ ಚೆನ್ನೈ, ಮುಂಬೈ, ಹೈದರಾಬಾದ್‌ ನಗರಗಳಿಗೆ ಹೋಗಿ ನೋಡಿದರೂ ಸಾಕು ಅಲ್ಲಿ ಹೇಗೆ ಕಸ ವಿಲೇವಾರಿ ಮಾಡುತ್ತಾರೆ ಎಂದು ತಿಳಿದುಕೊಂಡು ಬರಬಹುದು. ಸೇಲಂ, ಕೊಯಮತ್ತೂರು ನಗರಗಳಿಗೆ ಪಾಲಿಕೆಯ ಒಂದು ತಂಡ ಹೋಗಿ ಬಂತು. ಅಲ್ಲಿ ಹೋಗಿ ಏನು ನೋಡಿಕೊಂಡು ಬಂದರೋ ಏನು ಕಥೆಯೋ ಪರಿಸ್ಥಿತಿ ಮಾತ್ರ ಹಾಗೆಯೇ ಇದೆ. ಹಾಗಾದರೆ ರಾಜಕಾರಣಿಗಳು ಬೆಂಗಳೂರು ನಗರವನ್ನು ರಕ್ಷಿಸಲಾರರೇ? ಇದು ಗೊತ್ತಾದ ನಂತರವೂ ಈ ನಗರದ ರಕ್ಷಣೆಯ ಹೊಣೆಯನ್ನು ಅವರ ಕೈಗೇ ಕೊಟ್ಟು ನಾವು ಸುಮ್ಮನಿರಬೇಕೇ? ಬೆಂಗಳೂರಿನ ಸಾಂಸ್ಕೃತಿಕ ಲೋಕದ ಜನರು ಏಕೆ ಸುಮ್ಮನಿದ್ದಾರೆ? ಗಾಂಧಿ ಪ್ರತಿಮೆಯ ಮುಂದೆ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕುಳಿತುಕೊಳ್ಳಲು ಜಾಗ ಇಲ್ಲವೇ? ಸರ್ಕಾರಕ್ಕೆ, ಪಾಲಿಕೆಗೆ ನಾಚಿಕೆ ಬರುವಂತೆ ಮಾಡಲು ನಮಗೆ ಬೇರೆ ದಾರಿಯೇ ಇದ್ದಂತೆ ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT