ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸುಮ–ಕಠೋರ ‘ಶಕುಂತಲೆ’

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಶಕುಂತಲೆ ಎನ್ನುವ ಹೆಸರೇ ನಮ್ಮಲ್ಲಿ ರಮ್ಯವಾದ ಚಿತ್ರವೊಂದನ್ನು ಕಟ್ಟುತ್ತದೆ. ಇನ್ನಿವಳಿಗಿಂತ ಸುಂದರಿ, ಸುಕೋಮಲೆ ಇರುವುದು ಸಾಧ್ಯವೇ ಇಲ್ಲವೇನೋ ಎನಿಸುವಂಥ ಬೆರಗಿನ ಪ್ರತಿಮೆಯೊಂದು ನಮ್ಮಲ್ಲಿ ಮೂಡುತ್ತದೆ.

(ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ನೀ ಒಬ್ಬಳೇ
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ
ಸುಟ್ಟಾವು ಬೆಳ್ಳಿ ಕಿರಣ )

ಇದಕ್ಕೆ ರವಿವರ್ಮ ಕಾರಣನೋ ‘ಕವಿರತ್ನ ಕಾಳಿದಾಸ’ ಸಿನೆಮಾಗಳಲ್ಲಿ ಶಕುಂತಲೆಯ ಪಾತ್ರ ಮಾಡಿದ ಅಪ್ರತಿಮ ಸುಂದರಿಯರಾದ ನಟಿಯರು ಕಾರಣವೋ ಎಲ್ಲ ಮುಖ್ಯ ಸ್ತ್ರೀಯರೂ ಸುಂದರಿಯರೇ ಆಗಿರಬೇಕು ಎನ್ನುವ ಕವಿಕೃಪೆ ಕಾರಣವೋ ಯಾರು ಬಲ್ಲರು?
ಹೆಣ್ಣಿನ ಸೌಂದರ್ಯ ಮೀಮಾಂಸೆಯನ್ನು ಕಟ್ಟುವಲ್ಲಿ ನಮ್ಮ ಕವಿಗಳು ಮತ್ತು ಚಿತ್ರ ಕಲಾವಿದರ ಪಾತ್ರ ಎಷ್ಟು ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ.

ಹೆಸರು ನೆನಪಾಗುತ್ತಿಲ್ಲ, ಯಾರೋ ಒಬ್ಬರು ನಮ್ಮ ಕಾವ್ಯಗಳಲ್ಲಿ ವರ್ಣಿಸಿರುವ ಹೆಣ್ಣಿನ ಹಾಗೇ ಇರುವ ಹೆಣ್ಣೊಬ್ಬಳು ನಿಜಕ್ಕೂ ಇದ್ದರೆ ಅದೆಷ್ಟು ವಿಕಾರವಾಗಿರಬಲ್ಲದು ಆನ್ನುವ ಅರ್ಥದ ಕಥೆಯೊಂದನ್ನು ಬರೆದಿದ್ದಾರೆ. ಸಂಪಿಗೆಯ ಮೂಗು, ಪಾದಕಮಲ, ನಯನ ಕಮಲ, ಮುಖ ಕಮಲಗಳು ನಿಜಕ್ಕೂ ಅದೆಷ್ಟು ಹಾಸ್ಯಾಸ್ಪದ.

ಅದರ ಉಪಮೆ, ರೂಪಕಗಳ ಅರಿವಿಲ್ಲದ ಅರಿವುಗೇಡಿಗಳು ಎಂದು ಕರೆಯಬಹುದು. ಆದರೆ ನಿಜಕ್ಕೂ ಹೆಣ್ಣನ್ನು ‘ಪದಾರ್ಥ ಚಿಂತಾಮಣಿ’ಯಾಗಿಯೇ ನೋಡುವ, ಅದೇ ಅವಳ ವ್ಯಕ್ತಿತ್ವ ಎಂದು ನಂಬಿ, ನಂಬಿಸುವ ಪರಿಗೆ ಕಾವ್ಯದಲ್ಲಿನ ಹೆಣ್ಣಿನ ವರ್ಣನೆ ಬಣ್ಣನೆಗಳು ಸಾಕ್ಷ್ಯ ನುಡಿಯುತ್ತವೆ. ಹೆಣ್ಣಿನ ತ್ರಿಭಂಗಿಯ ಲಾಸ್ಯವನ್ನು ಕಟ್ಟಿಕೊಡುವುದರಲ್ಲಿ ನಮ್ಮ ಕವಿಗಳನ್ನು ಮೀರಿಸಿದವರಿಲ್ಲ. ‘ತಿಣುಕಿದನ ಫಣಿರಾಯ ರಾಮಾಯಣಗಳ ಭಾರದಲಿ’ ಎನ್ನುವುದು ತಪ್ಪು, ಅದನ್ನೂ ಮೀರಿದ್ದು ಹೆಣ್ಣಿನ ವರ್ಣನೆ.

ಇಷ್ಟೆಲ್ಲ ಹೇಳುತ್ತಿರುವಾಗಲೂ ಕಾವ್ಯವು ಹೆಣ್ಣನ್ನು ಅವಳ ಅಂತರಂಗದ ಸೊಗಸನ್ನೂ ಹಿಡಿಯುವಂತೆ ಮಾಡುವ ವರ್ಣನೆಗಳ ಸೊಗಸನ್ನು ನಾವು ಅಲ್ಲಗಳೆಯಬೇಕಿಲ್ಲ. ಆದರೆ, ಹೆಣ್ಣನ್ನು ಕಾವ್ಯದ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ವೇಗವರ್ಧಕವಾಗಿ ಬಳಸುವ, ಹೆಣ್ಣನ್ನು ಉಪಭೋಗ ಸಾಮಗ್ರಿಯಾಗಿ ಮಂಡಿಸುವ ದೃಷ್ಟಿಕೋನವನ್ನು ವಿರೋಧಿಸದೇ ಬೇರೆ ದಾರಿಯಿಲ್ಲವಷ್ಟೆ.

ಶಕುಂತಲೆಯನ್ನು ಹೆಣ್ಣಿನ ಸೌಂದರ್ಯದ ಆತ್ಯಂತಿಕ ಮಾದರಿ ಎನ್ನುವಂತೆ ನಿರಂತರವಾಗಿ ತೋರಿಸುತ್ತಲೇ ಬಂದಿರುವುದರಿಂದ ಈ ಎಲ್ಲ ಮಾತುಗಳನ್ನು ಪ್ರಸ್ತಾಪಿಸಬೇಕಾಯಿತು. ಹಾಗೆ ನೋಡಿದರೆ, ಈ ಸ್ತ್ರೀಸೌಂದರ್ಯ ಮೀಮಾಂಸೆಯನ್ನು ಒಡೆಯುವ ಬಹಳ ದೊಡ್ಡ ಪ್ರಯತ್ನ ಮಾಡಿದವರು ಲೋಹಿಯಾ. ಸೌಂದರ್ಯ ಮತ್ತು ಮೈಬಣ್ಣ ಈ ದೃಷ್ಟಿಯಿಂದ ಮಾತ್ರವಲ್ಲ, ಒಟ್ಟೂ ಹೆಣ್ಣನ್ನು ಗ್ರಹಿಸುವ ಮತ್ತು ಅವಳ ವ್ಯಕ್ತಿತ್ವದ ಮೂಲಧಾತುಗಳನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿಯೂ ಮುಖ್ಯ.

ಹೆಣ್ಣು ಮಾತ್ರವಲ್ಲ ಗಂಡೂ ಸೇರಿದಂತೆ ಹೊಸ ವ್ಯಕ್ತಿತ್ವ ಸೌಂದರ್ಯ ಮೀಮಾಂಸೆಯೊಂದನ್ನು ಲೋಹಿಯಾ ಇಲ್ಲಿ ಮಂಡಿಸುತ್ತಾರೆ. ಬಿಳುಪು ಗೌರವ ವರ್ಣವಾಗಿ ಗೌರವ ಪಡೆಯುವುದರ ಅಸಂಬದ್ಧತೆ, ಅತಾರ್ಕಿಕತೆ ಮತ್ತು ಅನೈತಿಕತೆಯನ್ನು ಸಕಾರಣವಾಗಿ ಪ್ರಶ್ನಿಸಿ ಲೋಹಿಯಾ ಕಪ್ಪನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಾರೆ.

ಮುಂದುವರೆದು, ಕಪ್ಪು ಬಿಳುಪನ್ನು ಮೀರಿದ ಅಂತರಂಗದ ಸೌಂದರ್ಯವೇ ಅಂತಿಮ ಎಂದು ಹೇಳುವ ಮೂಲಕ ಹೊಸ ವ್ಯಕ್ತಿತ್ವ ಸೌಂದರ್ಯ ಮೀಮಾಂಸೆಯನ್ನು ಕಟ್ಟುತ್ತಾರೆ. ಇದೊಂದು ಅಭೂತಪೂರ್ವ ಎನ್ನುವ ಸಂಗತಿಯಲ್ಲ ಎನ್ನುವುದಿರಬಹುದು. ಆದರೆ, ಭಾರತದ ಮಹಿಳೆಯರೂ ಸೇರಿದಂತೆ ಜಗತ್ತಿನಾದ್ಯಂತ ಇರುವ ಕಪ್ಪು ವರ್ಣೀಯರಿಗೆ ಬೇಕಾದ ನೈತಿಕ ಮತ್ತು ತಾತ್ವಿಕ ಸಮರ್ಥನೆಯನ್ನು ಅಧಿಕೃತವಾಗಿ ಕಟ್ಟಿಕೊಟ್ಟ ಕಾರಣಕ್ಕಾಗಿ ಇದಕ್ಕೆ ನಿರ್ಣಾಯಕವಾದ ಸ್ಥಾನವಿದೆ.

ಏಳು ಮಲ್ಲಿಗೆ ತೂಕದ, ಅದೇ ಮಲ್ಲಿಗೆಯ ಬಿಳುಪಿನ, ಮುಟ್ಟಿದರೆ ಬಾಡುವ, ನೋಡಿದರೆ ನಲುಗುವ, ನಿದ್ದೆ ಎಚ್ಚರಗಳಲ್ಲೂ ಪರಾವಲಂಬಿಗಳಾದ ‘ಲತಾ ಮಣಿ’ಯರ ಜಾಗದಲ್ಲಿ ಲೋಹಿಯಾ (ಇ.ಎಮ್. ಫಾಸ್ಟರ್‌ನ ಭಾಷೆಯಲ್ಲಿ ಹೇಳುವುದಾದರೆ, Rich Indian Brown), ತನ್ನ ವ್ಯಕ್ತಿತ್ವದ ಗಾಂಭೀರ್ಯ ಮತ್ತು ಘನತೆಯನ್ನು ಗಾಢ ಕಪ್ಪು ಬಣ್ಣದಲ್ಲೇ ಧ್ವನಿಸುವ ದ್ರೌಪದಿ ಅಪ್ರತಿಮ ಸುಂದರಿಯೂ ಆಗುತ್ತಾಳೆ, ಇದರ ಮೂಲ ಅಂತರಂಗದಲ್ಲಿ ಅವಳಿಗೆ ತನ್ನ ಬಗೆಗೆ ಇರುವ ಗೌರವ ಮಾತ್ರವಲ್ಲ, ಇತರರನ್ನು ಒಪ್ಪಿ ಗೌರವಿಸುವ ಅವಳ ಗುಣದಲ್ಲಿ.

ಹೀಗೆ ಹೇಳುವ ಮೂಲಕ ಲೋಹಿಯಾ ಹೆಣ್ಣನ್ನು ದೇಹ ಮಾತ್ರ ಗ್ರಹಿಕೆಯಿಂದಲೂ, ಸೌಂದರ್ಯದ ಸ್ಥಾಪಿತ ಬಂಧನದಿಂದಲೂ ಏಕಕಾಲಕ್ಕೆ ಬಿಡುಗಡೆಗೊಳಿಸುತ್ತಾರೆ. ಅವಳನ್ನು ಅವಳ ವ್ಯಕ್ತಿತ್ವದ ನೆಲೆಯಲ್ಲಿಯೇ ಗಮನಿಸಬೇಕಾದ್ದರ ಬಗ್ಗೆ ಹಕ್ಕೊತ್ತಾಯವನ್ನೂ ಮಂಡಿಸುತ್ತಾರೆ.

ಹದಿಹರೆಯದ ಹುಡುಗಿಯರು ಮತ್ತು ಹುಡುಗರು ಅಗತ್ಯವಾಗಿ ಓದಬೇಕಾದ ಲೇಖನಗಳಲ್ಲಿ ಇದೊಂದು. ಸೌಂದರ್ಯವನ್ನು ಕುರಿತಂತೆ ಮಾತ್ರವಲ್ಲ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿಯೇ ಇದು ಮಹತ್ವದ ಪಾತ್ರ ವಹಿಸಬಲ್ಲದು ಎನಿಸುತ್ತದೆ. ಅನಗತ್ಯವಾದ ಮೇಲರಿಮೆ ಮತ್ತು ಕೀಳರಿಮೆಗಳಲ್ಲಿ ನಲುಗುವ ಯುವಕ ಯುವತಿಯರಿಗೆ ಅಗತ್ಯವಾಗಿ ಬೇಕಾದ ಸ್ಪಷ್ಟತೆಯನ್ನು ಇದು ಕೊಡುತ್ತದೆ. ಈ ದಿಕ್ಕಿನಲ್ಲಿ ‘ಸುಖೋ ರಾಣಿ ಮತ್ತು ಗ್ವಾಲಿಯರ್ ಮಹಾರಾಣಿ’, ‘ಕಣ್ಣೆದುರಿಗಿನ ಪ್ರಶ್ನೆಗಳು’, ಹಾಗೂ ‘ವಸಿಷ್ಠರು ಮತ್ತು ವಾಲ್ಮೀಕಿಯರು’ ಲೇಖನಗಳೂ ಕೂಡ ಅಷ್ಟೇ ಮುಖ್ಯ.
***
ಶಕುಂತಲೋಪಖ್ಯಾನಕ್ಕೆ ಹೊರಟು ಮೇಲಿನ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿದ್ದು. ‘ಕುಸುಮ ಕೋಮಲೆ’ಯಾಗಿ ಕಾಣುತ್ತಿರುವ ಶಕುಂತಲೆಯೊಳಗೂ ಇಂಥ ಅಂತರಂಗದ ಚೆಲುವಿನ ಮಹಿಳೆಯಿದ್ದಾಳೆ ಎನ್ನುವ ಕಾರಣಕ್ಕಾಗಿ. ಹೆಣ್ಣು ಒಳಗೂ ಹೊರಗೂ ಎದುರಿಸುವ ನೂರು ದ್ವಂದ್ವಗಳನ್ನು, ಸವಾಲುಗಳನ್ನು, ತಲ್ಲಣ ಸಂಭ್ರಮಗಳನ್ನು ಶಕುಂತಲೆ ತನ್ನದೇ ಜವಾಬ್ದಾರಿ ಎನ್ನುವ ನೆಲೆಯಲ್ಲಿಯೇ ನಿಭಾಯಿಸುತ್ತಾಳೆ.

ಜಗತ್ತಿನ ಕಾವ್ಯಗಳಲ್ಲೇ ‘ಅಭಿಜ್ಞಾನ ಶಾಕುಂತಲ’ ಅತ್ಯಂತ ರಮ್ಯವಾದುದು ಎನ್ನುವ ಹೆಗ್ಗಳಿಕೆಯೂ ಇದೆ. ಗಯಟೆ, ಶಾಕುಂತಲದ ಸಮಕ್ಕಿರಲಿ ಅದರ ಹತ್ತಿರಕ್ಕೂ ಬರುವ ಕೃತಿಯೇ ಇಲ್ಲವೆಂದು ತಲೆಯ ಮೇಲೆ ಅದನ್ನಿಟ್ಟುಕೊಂಡು ಅವನು ತನ್ನ ಮನೆಯ ಸುತ್ತ ಓಡಿದ್ದನ್ನು ನಾವೆಲ್ಲ ಬಲು ಹೆಮ್ಮೆಯಿಂದ ಆರಿಸುವ ಪತಾಕೆ.

(ಕುತೂಹಲಕ್ಕೆಂದು ಈ ಉಪಕಥೆಯನ್ನೂ ಹೇಳಿಬಿಡಬೇಕು ಎನ್ನುವ ಚಪಲವನ್ನು ಹತ್ತಿಕ್ಕಿಕೊಳ್ಳಲಾರೆ. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಆರಿಸಲೆಂದು ಪಠ್ಯಪುಸ್ತಕ ಮಂಡಲಿಯ ಸಭೆ ಸೇರಿತ್ತು. ಇಬ್ಬರು ಭಾರತೀಯ ಪ್ರಾಧ್ಯಾಪಕರ, ಮೂವರು ಬ್ರಿಟೀಷ್ ಪ್ರಾಧ್ಯಾಪಕರ ಆ ಸಭೆಯಲ್ಲಿ ಯಾವ ನಾಟಕವನ್ನು ಆರಿಸುವುದು ಎನ್ನುವ ವಿಷಯ ಚರ್ಚೆಗೆ ಬರುತ್ತದೆ.

ಭಾರತೀಯ ಪ್ರಾಧ್ಯಾಪಕರು ಕಾಳಿದಾಸನ ಶಾಕುಂತಲವನ್ನು ಇಡಬಹುದು ಎಂದರೆ, ಆ ಮಂಡಲಿಯ ಅಧ್ಯಕ್ಷನೂ ಆಗಿದ್ದ ಬ್ರಿಟಿಷ್ ಪ್ರಾಧ್ಯಾಪಕ ಬೇಡ ಎನ್ನುತ್ತಾನೆ. ಅದಕ್ಕೆ ಅವನು ಎರಡು ಕಾರಣಗಳನ್ನು ಕೊಡುತ್ತಾನೆ. ಭಾರತೀಯ ವಿದ್ಯಾರ್ಥಿಗಳಿಗೆ ಅದು ಅರ್ಥವಾಗದೇ ಹೋಗಬಹುದು ಎನ್ನುವುದು ಒಂದಾದರೆ ಅದು ಅಶ್ಲೀಲ ಎನ್ನುವುದು ಮತ್ತೊಂದು ಕಾರಣ! ಕೊನೆಗೆ ಷೇಕ್ಸ್‌ಪಿಯರನ ನಾಟಕ ಆ ವರ್ಷ ಪಠ್ಯವಾಗಿ ಆಯ್ಕೆಯಾಗುತ್ತದೆ).

ಶಕುಂತಲೆಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವ ಎರಡು ದಾರಿಗಳಿವೆ. ಸ್ವಯಂಭುವಿನ ಹಾಗೆ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವ, ಅದಕ್ಕೆ ಕೊನೆಯವರೆಗೂ ಆತುಕೊಳ್ಳುವ ರೀತಿಯಲ್ಲಿ ನೋಡುವುದು ಒಂದಾದರೆ, ಅನಿರೀಕ್ಷಿತವಾಗಿ ಬದುಕು ತೆರೆಯುವ ದಾರಿಗಳಲ್ಲಿ ದಿಟ್ಟವಾಗಿ ನಡೆಯುವ ಹೆಣ್ಣಿನ ದಾರಿಯಾಗಿಯೂ ನೋಡಬಹುದು ಎನ್ನುವುದು ಇನ್ನೊಂದು.

ಮೇಲ್ನೋಟಕ್ಕೆ ಇವು ಪರಸ್ಪರ ವಿರುದ್ಧ ಎನ್ನುವಂತೆ ಕಾಣಿಸುತ್ತವೆ. ಆದರೆ ಈ ಎರಡರ ನಡುವೆ ಸೂತ್ರವೂ ಒಂದಿದೆ. ದುಷ್ಯಂತನ ಆಗಮನ, ಭೇಟಿ, ಸಮಾಗಮಗಳು ಅನಿರೀಕ್ಷಿತವೆಷ್ಟೋ ಅಷ್ಟೇ ಆಯ್ಕೆಯವೂ ಹೌದು. ದುಷ್ಯಂತ ಅವಳಿಗೆ ಮೋಸ ಮಾಡಿದ, ಎಲ್ಲ ಗಂಡಸರಂತೆ ಅವನೂ ಇವಳನ್ನು ಬಳಸಿಕೊಂಡ ಎಂದೆಲ್ಲ ಹೇಳಬಹುದು.

ಆದರೆ ಉದ್ದಕ್ಕೂ ಶಕುಂತಲೆ ನಡೆದುಕೊಳ್ಳುವ ರೀತಿಯಲ್ಲಿ ಇಂಥ ಏಕಪಕ್ಷೀಯವಾದ ತೀರ್ಮಾನಕ್ಕೆ ಬರುವುದು ಕಷ್ಟವಾಗುತ್ತದೆ. ಮುಗ್ಧ ಹೆಣ್ಣನ್ನು ಗಂಡು ದುರುಪಯೋಗ ಮಾಡಿಕೊಳ್ಳುವ ಕೋಟಿ ಉದಾಹರಣೆಗಳನ್ನು ನಾವು ಕೊಡಬಹುದು ಎನ್ನುವುದರ ಜೊತೆಗೆ ಶಕುಂತಲೆಯನ್ನು ಸೇರಿಸಬರುವುದಿಲ್ಲ.

ದುಷ್ಯಂತ ತನ್ನ ಆಯ್ಕೆಯೂ ಪ್ರೀತಿಯೂ ಆಗಿದ್ದಾನೆ ಎನ್ನುವ ಅರಿವನ್ನು ಶಕುಂತಲೆ ಒಂದು ಕ್ಷಣಕ್ಕೂ ಮರೆಯುವುದಿಲ್ಲ. ‘ಪ್ರಿಯ ವ್ಯಕ್ತಿಯನ್ನು ದೋಷಗಳ ಸಹಿತವಾಗಿಯೇ ಸ್ವೀಕರಿಸುವ ಶಕ್ತಿ ನಿಜವಾದ ಪ್ರೀತಿಗಿರುತ್ತದೆ, ಇರಬೇಕು’ ಎನ್ನುತ್ತಾನಲ್ಲ ಕಚ, ಆ ಮಾತಿನ ಉದಾಹರಣೆಯಂತೆ ಶಕುಂತಲೆ ಕಾಣಿಸುತ್ತಾಳೆ.

ಶಕುಂತಲೆಯ ಬಗೆಗೆ ಕುತೂಹಲಕರವಾದ ಸಂಗತಿಯೊಂದಿದೆ. ಅವಳನ್ನು ಕುರಿತ ಬಹುಪಾಲು ಕಾವ್ಯ, ಕಥೆ ಮತ್ತು ನಿರೂಪಣೆಗಳು ಸ್ವಗತದಲ್ಲಿಯೇ ಶಕುಂತಲೆಯನ್ನು ಚಿತ್ರಿಸುತ್ತವೆ. ಗಟ್ಟಿಯಾಗಿ ಮಾತನಾಡಿದ, ವಾದ ಹೂಡಿದ ಶಕುಂತಲೆ ನಮಗೆ ಕಾಣಿಸುವುದಿಲ್ಲ. ಈ ದೃಷ್ಟಿಯಿಂದ ಇವಳು ಸೀತೆಗೆ ಅಕ್ಕನೋ ತಂಗಿಯೋ ಆಗುತ್ತಾಳೆ.

ಸುಮ್ಮನೆ ಕುತೂಹಲಕ್ಕೆಂದು ಮಾಸ್ತಿಯವರ ‘ಹೇಮಕೂಟದಿಂದ ಬಂದ ಮೇಲೆ’, ಕೆ.ವಿ.ಸುಬ್ಬಣ್ಣನವರ ‘ಲೋಕ ಶಾಕುಂತ’, ವೈದೇಹಿಯವರ ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ಗಳನ್ನು ಒಟ್ಟಿಗೇ ಇಟ್ಟು ನೋಡಿದರೆ, ಎಲ್ಲೂ ಶಕುಂತಲೆ ದನಿಯೆತ್ತಿ ಮಾತನಾಡಿದ ಸಂದರ್ಭಗಳಿಲ್ಲ. ಮೌನವೂ ಹೆಣ್ಣಿನ ಶಕ್ತ ಅಭಿವ್ಯಕ್ತಿಗಳಲ್ಲಿ, ಭಾಷೆಗಳಲ್ಲಿ ಒಂದು ಎನ್ನುವುದಕ್ಕೆ ಶಕುಂತಲೆ ಒಂದು ಮಾದರಿ.

ಇದಿಷ್ಟೇ ಅಲ್ಲ, ಇವಳ ಬಗ್ಗೆ ನಾವು ಗಮನಿಸಬೇಕಾದ ಇನ್ನೂ ಎರಡು ಮುಖ್ಯ ಸಂಗತಿಗಳಿವೆ. ಶಕುಂತಲೆಯಲ್ಲಿ ‘ಸ್ವಮರುಕ’ ಇಲ್ಲವೇ ಇಲ್ಲ. ‘ಏನಾತು ನನ್ನ ಜನ್ಮ, ಏನೇನಾತು ನನ್ನ ಜನ್ಮ’ , ಎನ್ನುವ ನಿಡುಸುಯ್ಲು ಇವಳಲ್ಲಿ ಎಂದೂ ಬರುವುದಿಲ್ಲ. ನಾನು ಮಾಡಿದ್ದು ತಪ್ಪು ಎನ್ನುವ ಪಾಪಪ್ರಜ್ಞೆಯಂತೂ ಇಲ್ಲವೇ ಇಲ್ಲ.

ತಾನು ಬಯಸಿದವನೊಂದಿಗೆ ಕಳೆದ ಕೆಲವು ಕಾಲದಲ್ಲೇ ತನ್ನ ಬದುಕಿನ ಅಮೃತ ಗಳಿಗೆಗಳನ್ನು ಕಂಡಿದ್ದೇನೆ ಎನ್ನುವ ಭಾವ, ಇಷ್ಟಕ್ಕೂ ಇದು ತನ್ನ ಬದುಕು, ತನ್ನ ದಾರಿ ತನ್ನ ಆಯ್ಕೆ (My Choice ನೆನಪಾಗುತ್ತಿದೆಯೆ? ಅದರ ಬಗ್ಗೆ ಆಕ್ಷೇಪ ಎತ್ತುವ ಮೊದಲು, ಹೆಣ್ಣು ನೋಡಲು ಬಂದಾಗ, ಅವಳ ಕೈ, ಕಾಲು , ಕಣ್ಣಿನ ದೃಷ್ಟಿ, ನಡಿಗೆ, ಧ್ವನಿ, ತಲೆಯ ಸುಳಿ, ಎಲ್ಲವನ್ನೂ ಸಂತೆಯಲ್ಲಿ ಕೊಂಡುಕೊಳ್ಳುವ ಪದಾರ್ಥದ ಹಾಗೆ ನೋಡುವುದನ್ನೋ, ಅದಕ್ಕೆ ಅವಳು ತನ್ನೆಲ್ಲಾ ಚಾಯ್ಸ್‌ಗಳನ್ನೂ ಬಿಟ್ಟುಕೊಡಬೇಕಾದ್ದನ್ನೋ, ಅಪ್ಪ ಅಮ್ಮ ಅಣ್ಣಂದಿರು ಈಗಲೂ ಡ್ರೆಸ್ ಕೋಡ್‌ಗಳಲ್ಲಿ ಅವಳ ಚಾಯ್ಸ್‌ಗಳನ್ನು ಕೊಂದುಹಾಕುವುದನ್ನೋ ನೆನಪಿಸಿಕೊಳ್ಳಿ) ಎನ್ನುವುದರ ಬಗ್ಗೆ ಅವಳಿಗೆ ದ್ವಂದ್ವಗಳಿಲ್ಲ.

ದುಷ್ಯಂತನನ್ನು ಅವನಿರುವ ಹಾಗೆ ಒಪ್ಪಿಕೊಳ್ಳಬೆಕಾದ್ದು ತನ್ನ ಹಣೆಬರೆಹ ಎನ್ನುವ ವಿಷಾದವಿಲ್ಲ ಅವಳಲ್ಲಿ. ತಾನು ಬಯಸಿದವನು ಹೀಗಿದ್ದಾನೆ ಎನ್ನುವ ವಾಸ್ತವ ಪ್ರಜ್ಞೆಯಲ್ಲಿ ತನ್ನ ಮುಂದಿನ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಮೂಗಬಸವನ ಹಾಗೆ ಅವಳು ಬದುಕನ್ನು ನೂಕಿದ್ದಲ್ಲ.

ತಾನು ಆರಿಸಿಕೊಂಡ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಧೀರತೆಯಿಂದ ಎದುರಿಸುವ ಸನ್ನಾಹದ ಹಾಗೆ ಶಕುಂತಲೆಯ ಬದುಕು ಕಾಣಿಸುತ್ತದೆ. ಲೋಕ ಅಧಿಕೃತವೆಂದು ಗಣಿಸದ ತಾಯ್ತನವನ್ನೂ ಅವಳು ಸಂಭ್ರಮಿಸುವುದೇ ಇದಕ್ಕೆ ಸಾಕ್ಷಿ. ಬದುಕಿನಲ್ಲಿ ಮತ್ತೇನು ಸಿಗಲಿ, ಸಿಗದಿರಲಿ ಸಿಕ್ಕ ತಾಯ್ತನವೊಂದು ಸಾಕು ಮಿಕ್ಕ ಬದುಕಿಗೆ ಎನ್ನುವ ದೃಷ್ಟಿಕೋನದ ಸ್ಪಷ್ಟತೆಯಲ್ಲಿ ಅವಳಿದ್ದಾಳೆ.

ಈ ಸ್ಪಷ್ಟತೆಯಿಂದಲೇ ಅವಳ ವ್ಯಕ್ತಿತ್ವವನ್ನು ಕುರಿತ ಎರಡನೆಯ ಸಂಗತಿಯನ್ನು ನೋಡಬಹುದು. ದುಷ್ಯಂತನೂ ಸೇರಿದಂತೆ ಯಾರ ಬಗೆಗೂ ಅವಳು ಆರೋಪ ಪಟ್ಟಿ ಸಲ್ಲಿಸುವುದಿಲ್ಲ. ಅವಳಿದ್ದ ಪರಿಸ್ಥಿತಿಯಲ್ಲಿ ಅದು ಸಹಜವಾದ, ಸುಲಭವಾದ, ಸುರಕ್ಷಿತವಾದ ಮಾರ್ಗವಾಗಿತ್ತು. ದುಷ್ಯಂತನನ್ನು ಬೈಯುತ್ತಲೇ ಅವಳು ಬದುಕು ಕಳೆದಿದ್ದರೆ ಬಹುಶಃ ಸಮಾಜಕ್ಕೂ ನೆಮ್ಮದಿಯಾಗುತ್ತಿತ್ತು. ಅವಳು ಅದರ ವಿರುದ್ಧ ದಾರಿಯನ್ನು ಆರಿಸಿಕೊಳ್ಳುತ್ತಾಳೆ.

ತನ್ನ ಮೌನದಿಂದಲೇ ಸಹನೆಯಿಂದಲೇ ಅವಳು ದುಷ್ಯಂತನನ್ನೂ ಇಡೀ ವ್ಯವಸ್ಥೆಯನ್ನು ಎದುರಾಗುತ್ತಾಳೆ. ಸಭೆಯಲ್ಲಿ ದುಷ್ಯಂತ ಇವಳು ತನಗೆ ಗೊತ್ತಿಲ್ಲ ಎನ್ನುವ ವಿಸ್ಮೃತಿಯನ್ನು ಪ್ರಕಟಿಸಿದರೆ ಇವಳ ಬಾಯಿಂದ ಬರುವುದು ಒಂದೇ ಒಂದು ಪದ, ‘ಅನಾರ್ಯ’. ಹೆಣ್ಣಿನ ಸಿಟ್ಟು, ವ್ಯಂಗ್ಯ, ದಿಟ್ಟತೆ ಎಲ್ಲವೂ ಈ ಒಂದು ಪದದಲ್ಲೇ ವ್ಯಕ್ತವಾಗುತ್ತವೆ. ಅನಾಗರಿಕ ಎನ್ನುವುದಕ್ಕಿಂತ ದೊಡ್ಡ ಬೈಗುಳ, ಸಾರ್ವಜನಿಕ ಅವಮಾನ ಇನ್ನಾವುದಿದ್ದೀತು?

ಈ ಸ್ಮೃತಿ ವಿಸ್ಮೃತಿಯದೊಂದು ದೊಡ್ಡ ಅಧ್ಯಾಯ ಗಂಡು ಹೆಣ್ಣಿನ ಸಂಬಂಧದಲ್ಲಿ. ವಿಸ್ಮೃತಿ ಗಂಡಿನ ಕೈಯಲ್ಲಿರುವ ಆಯುಧದ ಹಾಗೆ ಕಾಣಿಸುತ್ತದೆ. ಇದನ್ನು ಬಳಸಿ ಅವನು ತನ್ನ ಸವಲತ್ತುಗಳನ್ನು ನಿರ್ಮಿಸಿಕೊಳ್ಳುತ್ತಾನೆ ನಿಜ. ಆದರೆ ಹೆಣ್ಣು ಸ್ಮೃತಿಯ ಮೂಲಕವೇ ಈ ಯುದ್ಧದಲ್ಲಿ ಅವನನ್ನು ಸೋಲಿಸುತ್ತಾಳೆ ಎನ್ನುವುದೂ ಅಷ್ಟೇ ನಿಜ. ಇಲ್ಲಿ ಸ್ಮೃತಿ ಮತ್ತು ವಿಸ್ಮೃತಿಗಳು ಕೇವಲ ನೆನಪಿಗೆ ಸೀಮಿತವಾದವಲ್ಲ ಎನ್ನುವುದನ್ನು ವಿವರಿಸಬೇಕಿಲ್ಲ.

ಈ ಅನಾರ್ಯನನ್ನು ನಾಗರಿಕ ದಾರಿಯಲ್ಲೇ ಮುಖಾಮುಖಿಯಾಗುವ ಶಕುಂತಲೆ ಕೊನೆಗೆ ತೆಗೆದುಕೊಳ್ಳುವ ತೀರ್ಮಾನ ಸಂಕೀರ್ಣವಾಗಿದೆ. ದುಷ್ಯಂತನ ಜೊತೆ ಹೋಗಲು ಶಕುಂತಲೆ ಯಾಕೆ ಒಪ್ಪಿಕೊಂಡಳು? ಮಗನ ಅಭ್ಯುದಯಕ್ಕಾಗಿ ಎನ್ನುವುದು ಅರ್ಧ ಸತ್ಯದ ಮಾತಾಗುತ್ತದೆ. ನಿಜವೆಂದರೆ, ಒಲಿದವನನ್ನು ಕ್ಷಮಿಸಿ ಅವನೊಂದಿಗಿನ ಹೊಸ ಬದುಕಿನ ಆಸೆಯೂ ಇಲ್ಲಿದೆ. ಇದನ್ನು ಸಾಧಾರಣವಾಗಿ ನಾವು ಕರೆಯುವಂತೆ ರಾಜಿ ಎಂದು ಕರೆಯಬಹುದೆ?

ಅಲ್ಲವೆಂದೇ ತೋರುತ್ತದೆ. ದುಷ್ಯಂತನಲ್ಲೂ ಆದ ಪರಿವರ್ತನೆ ಇದರ ಹಿಂದಿರುವ ಒತ್ತಾಯವೂ ಆಗಿರಬಹುದು. ಅಪ್ಪಟ ಸಖ್ಯವೊಂದು ತನ್ನ ಪರೀಕ್ಷೆಗಳನ್ನು ದಾಟಿಕೊಂಡು ದಡ ತಲುಪಿದ್ದೂ ಆಗಿರಬಹುದು. ಶಕುಂತಲೆ ಉದ್ದಕ್ಕೂ ನಡೆದುಕೊಂಡದ್ದನ್ನು ಗಮನಿಸಿದರೆ ಇದೇ ಹೆಚ್ಚು ಸತ್ಯಕ್ಕೆ ಹತ್ತಿರದ್ದು ಎನಿಸುತ್ತದೆ.

ಈ ಎಲ್ಲದರ ಜೊತೆಗೆ, ಪರೀಕ್ಷೆಗಳು ಎಂದಾಗ ಲೋಕದ, ಸಾಮಾಜಿಕತೆಯ ಪರೀಕ್ಷೆಯೂ ಇಲ್ಲಿದೆ ಎನ್ನುವುದನ್ನು ಮರೆಯಬಾರದು. ಲೋಕದ ಗೊಡವೆ ಶಕುಂತಲೆಗೆ ಇದೆ ಮತ್ತು ಇಲ್ಲ. ಆದರೆ ಆದ್ಯತೆಯಲ್ಲಿ ತಾನು, ತನ್ನ ಆಯ್ಕೆ ಮೊದಲು ಆಮೇಲೆ ಲೋಕ ಎನ್ನುವ ಸ್ಪಷ್ಟತೆಯೇ ಶಕುಂತಲೆಯ ವಿಶೇಷ ಮತ್ತು ಶಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT