ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೆಲ್ಲರ ಆತ್ಮಸಖಿ ರಾಧೆ

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ರಾಧೆ ಎನ್ನುವವಳು ಏನಲ್ಲ? ಏನೆಲ್ಲಾ? ಭಾರತೀಯ ಮನಸ್ಸು ಗಂಡು ಹೆಣ್ಣೆನ್ನದೆ ಕೃಷ್ಣನಷ್ಟೇ ರಾಧೆಯನ್ನೂ ತನ್ನ ಮನೋದರ್ಪಣದಲ್ಲಿ ಸದಾ ಕಾಣುತ್ತಲೇ ಬಂದಿದೆ. ರಾಧೆ ಒಂದು ರೂಪಕವೆ? ಕನಸೆ? ಮಾದರಿಯೆ? ಪ್ರತಿನಿಧಿಯೆ? ಅಪ್ರತಿಮ ಭಕ್ತಳೆ? ಲೋಕೋತ್ತರ ಸಖಿಯೆ? ಕಾಲಾತೀತ ಪ್ರೇಮಿಕೆಯೆ?

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ಎನ್ನುವ ಎಚ್‌.ಎಸ್. ವೆಂಕಟೇಶಮೂರ್ತಿ ಅವರ ಮಾತುಗಳು ಬಲು ಪ್ರಸಿದ್ಧ. ಇದನ್ನು ಕೊಂಚ ಬದಲಿಸಿ ಹೇಳುವುದಾದರೆ, ಹೆಣ್ಣಿಗೇ ಹೆಣ್ಣನ್ನು ತೋರಿಸಿದ ಒಳಗಣ್ಣು ರಾಧೆ. ಒಳಗಣ್ಣು ಎನ್ನುವುದಕ್ಕಿರುವ ಎಲ್ಲ ಅರ್ಥಗಳಲ್ಲೂ ಇದನ್ನು ರಾಧೆಯ ಸಂದರ್ಭದಲ್ಲಿ ನಾವು ಸಾರ್ಥಕವಾಗಿ ಅರ್ಥೈಸಲು ಸಾಧ್ಯವಿದೆ.

ಭಾರತೀಯ ಮನೋಭೂಮಿಕೆಯನ್ನು ಆಳುತ್ತಿರುವ ಹಲವು ಸ್ತ್ರೀ ಪಾತ್ರಗಳಿವೆ. ಆ ಎಲ್ಲ ಪಾತ್ರಗಳಿಗೂ ನಿರ್ದಿಷ್ಟವಾದ ಪಾತ್ರವಿದೆ ಎಂದೇ ಅವುಗಳು ಜನಮಾನಸದ ಪುತ್ಥಳಿಗಳು. ಕೆಲವು ಪಾತ್ರಗಳು ಮೌಲ್ಯಗಳನ್ನು, ಮತ್ತೆ ಕೆಲವು ಪಾತ್ರಗಳು ವ್ಯಕ್ತಿತ್ವದ ಅಸಾಧಾರಣ ಸಾಧ್ಯತೆಗಳನ್ನು, ಮತ್ತೆ ಹಲವು ಬದುಕಿನ ಅಸಂಗತಗಳನ್ನು ನಿರಂತರವಾಗಿ ನಮಗೆ ತೋರಿಸುತ್ತಲೇ ಇರುತ್ತವೆ. ರಾಧೆ ಖಂಡಿತಕ್ಕೂ ಈ ಎಲ್ಲದಕ್ಕಿಂತ ಸಂಪೂರ್ಣವಾಗಿ ಭಿನ್ನ. ಅದೇನೆಂದು ಸ್ಪಷ್ಟವಾಗಿ ಹೇಳಲಾಗದ, ಆದರೆ ನಮ್ಮಲ್ಲಿ ಆಪ್ತವೂ ಮಧುರವೂ ಆದ ಭಾವವನ್ನು ಸದಾ ಉಕ್ಕಿಸುತ್ತಾ ನಮ್ಮ ಪ್ರಜ್ಞೆಯ ಒಂದು ಭಾಗವಾಗಿರುವವಳು ರಾಧೆ.

ರಾಧೆಗೆ ಅದೆಷ್ಟು ಬಣ್ಣಗಳು, ಭಾವ ಭಂಗಿಗಳು, ನಿಲುವುಗಳು, ಏರಿಳಿತಗಳು, ನೋವು ನಲಿವುಗಳು?
ಕೆ.ಎಸ್. ನರಸಿಂಹಸ್ವಾಮಿ ಅವರ– ‘ಶ್ರೀಕೃಷ್ಣನಂತೊಂದು ಮುಗಿಲು ರಾಧೆಯಂತಿನ್ನೊಂದು ಮುಗಿಲು’ ಎನ್ನುವ ಮಾತೇ ರಾಧೆಯ ವ್ಯಕ್ತಿತ್ವವನ್ನೂ ರಾಧೆ ಮತ್ತು ಕೃಷ್ಣರ ಸಂಬಂಧದ ಲೌಕಿಕ ಮತ್ತು ಅಲೌಕಿಕ ಧಾರೆಗಳನ್ನೂ ಅದರ ಅಪ್ಪಟ ಆದಿಮ ಪ್ರಾಕೃತಿಕತೆಯನ್ನೂ ಧ್ವನಿಸುತ್ತದೆಯೇನೋ. ಆದಿಮ ಪ್ರಾಕೃತಿಕ ಎಂದದ್ದು ರಾಧೆ ಮತ್ತು ಕೃಷ್ಣರ ಸಖ್ಯವನ್ನು ಯಾವುದೇ ಸಾಮಾಜಿಕ ಅಥವಾ ಸಾಂಘಿಕ ಮೌಲ್ಯ ವ್ಯವಸ್ಥೆಯ ನೆಲೆಯಿಂದಲೂ ಗುರುತಿಸಿ ಹೇಳಿ ಮುಗಿಸಿಬಿಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ.

ಈ ಅಂಕಣದಲ್ಲಿ ಮತ್ತೆ ಮತ್ತೆ ಎತ್ತಿಕೊಳ್ಳಲಾಗುತ್ತಿರುವ ಪ್ರಶ್ನೆ ಹೆಣ್ಣು, ಅವಳ ವ್ಯಕ್ತಿತ್ವ, ಅಭಿವ್ಯಕ್ತಿ ಎಲ್ಲವನ್ನೂ ಪಿತೃಸಂಸ್ಕೃತಿ ತನ್ನ ಹಿತಾಸಕ್ತಿಯ ರಕ್ಷಣೆ ಮತ್ತು ಬಲಪಡಿಸುವಿಕೆಗೆ ಅನುಗುಣವಾಗಿಯೇ ಅರ್ಥೈಸುವ ಹಾಗೂ ಬೆಲೆಗಟ್ಟುವ ಕಾರ್ಯ ಮಾದರಿಯನ್ನು ಕುರಿತಾದುದು. ಸಾಹಿತ್ಯವೂ ಸೇರಿದಂತೆ ಇತರ ಕಲಾಪ್ರಕಾರಗಳಲ್ಲಿನ ಹೆಣ್ಣಿನ ಅಭಿವ್ಯಕ್ತಿಯ ಮಟ್ಟಿಗೂ ಇದು ನಿಜವೂ ಸಾಮಾನ್ಯ ಸ್ವರೂಪದ್ದೂ ಆಗಿದೆ. ಸಂಗೀತ, ಚಿತ್ರಕಲೆಯ ಪ್ರಾತಿನಿಧಿಕ ಪಾತ್ರಗಳ ನಂತರ ಈ ಬಾರಿ ರಾಧೆಯನ್ನು ಚರ್ಚಿಸುವುದು ಕುತೂಹಲಕರ.

ಸಾಹಿತ್ಯ, ಚಿತ್ರಕಲೆ ಮತ್ತು ನೃತ್ಯ– ಈ ಎಲ್ಲ ಕ್ಷೇತ್ರಗಳಲ್ಲೂ ರಾಧೆ ಆರಾಧಿತ ನಾಯಕಿಯೇ ಆಗಿದ್ದಾಳೆ. ಅವಳ ಪ್ರೀತಿ, ಭಕ್ತಿಯನ್ನು ಎಷ್ಟು ಬಗೆಯಾಗಿ ಬಣ್ಣಿಸಿಯೂ ಚಿತ್ರಿಸಿಯೂ ನರ್ತಿಸಿಯೂ ದಣಿದವರಿಲ್ಲ. ಶೃಂಗಾರ ಮತ್ತು ವಿರಹದ ಶೃಂಗಗಳೆರಡಕ್ಕೂ ರಾಧೆಯೇ ಅಂತಿಮ ಎನ್ನುವ ಮಟ್ಟಿಗೆ ಈ ಎರಡನ್ನೂ ಅವಳಲ್ಲಿ ಕಾಣಲಾಗಿದೆ. ಅವಳು ಕೃಷ್ಣನನ್ನು ತನ್ನ ಆರಾಧಿತ ನಾಯಕನಾಗಿ, ಅಧಿದೈವವಾಗಿ ಆವಾಹಿಸಿಕೊಳ್ಳುವ, ತನ್ನ ಬದುಕಿನ ಆದಿ ಅಂತ್ಯಗಳೆರಡೂ ಅವನೇ ಎನ್ನುವ ಮಟ್ಟಿಗೆ ಅವನಲ್ಲಿ ತನ್ನನ್ನು ಲೀನವಾಗಿಸಿಕೊಳ್ಳುವುದನ್ನು ಲೋಕೋತ್ತರ ಎನ್ನುವ ಎತ್ತರದಲ್ಲಿಯೇ ಗುರುತಿಸಲಾಗಿದೆ. ಹೀಗಿದ್ದೂ ಬಹುತೇಕ ಸಂದರ್ಭಗಳಲ್ಲಿ ರಾಧೆ ಹಿಂದೆ ಸೂತ್ರವನ್ನು ಹಿಡಿದು ಆಡಿಸುತ್ತಿರುವ  ಬೊಂಬೆಯಂತೆಯೂ ಯಾಕೆ ಕಾಣಿಸುತ್ತಾಳೆ?

ನಿಜಕ್ಕೂ ರಾಧೆ ಯಾವುದನ್ನು ಸಂಕೇತಿಸುತ್ತಿದ್ದಾಳೆ ಮತ್ತು ಪ್ರತಿನಿಧಿಸುತ್ತಿದ್ದಾಳೆ? ಅವಳು ಎತ್ತುತ್ತಿರುವ ಪ್ರಶ್ನೆಗಳನ್ನು ಅವುಗಳ ನಿಜದಲ್ಲಿ ನಾವು ಚರ್ಚಿಸಿದ್ದೇವೆಯೆ? ಹಾಗೆ ನೋಡಿದರೆ ಕೃಷ್ಣನ ವ್ಯಕ್ತಿತ್ವವೇ ಪಿತೃಸಂಸ್ಕೃತಿಯು ತನಗೆ ಬೇಕಾದ ಹಾಗೆ ರಾಧೆಯ ವ್ಯಕ್ತಿತ್ವವನ್ನು ನಿರೂಪಿಸಲು ಅತ್ಯಂತ ಸಮರ್ಥವಾದ ಆವರಣವಾಗಿಬಿಟ್ಟಿದೆ. ಅವನನ್ನು ಯಾವ ರೂಪದಲ್ಲಿ ಬೇಕಾದರೂ ನಾವು ಒಪ್ಪುವುದು ಸಾಧ್ಯ ಮತ್ತು ಸಾಧು ಎನ್ನುವ ಮೂಲ ಭೂಮಿಕೆಯೊಂದು ಅಲ್ಲಾಡಿಸಲಾರದಷ್ಟು ಭದ್ರವಾಗಿ ಸ್ಥಾಪಿತವಾಗಿಬಿಟ್ಟಿದೆ.

ಈ ಕಾರಣಕ್ಕಾಗಿಯೇ ರಾಧೆಯ ವ್ಯಕ್ತಿತ್ವ ಎತ್ತುವ ಸಾಮಾಜಿಕ ಮತ್ತು ನೈತಿಕ ಪ್ರಶ್ನೆಗಳು ಅಪ್ರಸ್ತುತವಾಗಿಬಿಡುವ ಪರದೆಯೂ ಸೃಷ್ಟಿಯಾಗಿಬಿಟ್ಟಿದೆ. ರಾಧೆಯ ವ್ಯಕ್ತಿತ್ವ, ಬದುಕು ಮತ್ತು ಸಾಹಸಗಳು ಮದುವೆ ಎನ್ನುವ ಸಂಸ್ಥೆಯನ್ನು ಕುರಿತು ತೀವ್ರವಾದ ಮತ್ತು ಮುಖ್ಯವಾದ ಪ್ರಶ್ನೆಗಳನ್ನು ಎತ್ತುತ್ತವೆ. ಮದುವೆ ಮತ್ತು ದಾಂಪತ್ಯಗಳು ಹೆಣ್ಣಿನ ‘ಆಯ್ಕೆ’ಯಾಗುವ ಬದಲು ‘ವಿಧಿ’ಯಾಗುವುದರ ಹಿಂದಿನ ದೃಷ್ಟಿಕೋನದ ಅಪ್ರಾಕೃತಿಕತೆಯನ್ನು ರಾಧೆ ಪ್ರಶ್ನಿಸುತ್ತಿದ್ದಾಳೆ, ನಿರಾಕರಿಸುತ್ತಿದ್ದಾಳೆ ಮತ್ತು ಧಿಕ್ಕರಿಸುತ್ತಿದ್ದಾಳೆ.

ಮದುವೆಯಾದ ಹೆಣ್ಣು ರಾಧೆ. ಅವಳ ಗಂಡನ ಜೊತೆ ಅವಳಿಗಿದ್ದಿರಬಹುದಾದ ಸಾಂಗತ್ಯ ವಿಷಮತೆ ಎಲ್ಲೂ ಚರ್ಚೆಗೆ ಬರುವುದಿಲ್ಲ. ಅದು ಬಂದ ಕೂಡಲೇ ಬೇಕಾಗಿ ಬೇಡವಾಗಿ ಅವಳು ತನ್ನ ನಡವಳಿಕೆಯ ಮೂಲಕವೇ ಎತ್ತುವ ಪ್ರಶ್ನೆಗಳೂ ತನ್ನಿಂತಾನೇ ಮುಂದೆ ಬರುತ್ತವೆ. ಇದನ್ನು ಪ್ರಾಕೃತಿಕ ನೆಲೆಯಲ್ಲಿ ನೋಡುವುದರಿಂದ ಮಾತ್ರ ರಾಧೆಯ ಬದುಕಿಗೂ, ಅವಳು ಬದುಕಿನುದ್ದಕ್ಕೂ ಶೋಧಿಸಿದ ಸಂಬಂಧಕ್ಕೂ ಅರ್ಥ ಬರುತ್ತದೆ.

ಅವಳ ಬದುಕು ಮತ್ತು ವ್ಯಕ್ತಿತ್ವವನ್ನು ಗೌರವಿಸುವ ದಾರಿ ಎಂದರೆ ಅವಳ ದೃಷ್ಟಿಕೋನವನ್ನು ಅತಿರೇಕಗಳ ಮತ್ತು ದೈವಿ ಪ್ರಭಾವಳಿಯಿಂದ ಹೊರ ತಂದು ನೋಡುವುದು. ಸಾಮಾನ್ಯ ಎಂದು ತೋರುವ ಹೆಣ್ಣುಮಗಳೂ ತನ್ನ ಮೇಲೆ ಹೇರಲಾಗಿರುವ ಬದುಕಿನ ಹೊರೆಯನ್ನು ಕೆಳಗೆ ಹಾಕಿ, ತನ್ನ ಬದುಕನ್ನು ತನ್ನ ಮರ್ಜಿಯ ಮೇಲೆ ಬದುಕಿದರೆ ಹೇಗಿದ್ದೀತು ಎನ್ನುವುದನ್ನು ಹೆಣ್ಣಿಗೆ ಸಹಜವಾದ ಜೀವಚೈತನ್ಯದಲ್ಲೂ ಅಖಂಡ ಪ್ರೀತಿಯಲ್ಲೂ ಆವಾಹಿಸಿಕೊಳ್ಳುವವಳಂತೆ ರಾಧೆ ಇದ್ದಾಳೆ.

ಸೋತ, ಸೋತಿರಬಹುದಾದ ದಾಂಪತ್ಯದಲ್ಲಿ ಹೆಣ್ಣು ‘ಹೇಗೂ ಹೆಂಡಿರಾಗಿ ಬದುಕಬೇಕಾದ್ದು ಎಲ್ಲ ಹೆಣ್ಣಿನ ಹಣೆಯಲ್ಲಿ ಬರೆದದ್ದು’ ಎಂದು ಹೆಣ್ಣಿನ ಬಾಯಲ್ಲಿ ಹೇಳಿಸುತ್ತಲೇ  ಇರಲಾಗುತ್ತದೆಯಷ್ಟೆ. ಅಂಥ ದತ್ತ ಬದುಕನ್ನೇ ಚಿಮ್ಮುಹಲಗೆಯಾಗಿ ಮಾಡಿ ಬದುಕಿನ ಅನಂತ ವಿಸ್ತಾರದ ಕಡೆಗೆ ಮುಖ ಮಾಡುವ ಬಾನಾಡಿ ರಾಧೆ. ನೂರು ಬೇಡಗಳ, ನೂರು ಬೇಡಿಗಳ ಲಕ್ಷ್ಮಣರೇಖೆಯೊಳಗೆ ಬದುಕಬೇಕಾದ ಬದುಕನ್ನು ‘ಲಘಿಮಾ ಕೌಶಲದಲ್ಲಿ’ ಲೀಲಾಜಾಲವಾಗಿ ಮೀರುವ ರೂಪಕ ರಾಧ.

ಇಗೋ ಇದು ಹೆಣ್ಣಿನ ನಿಜವಾದ ಚೈತನ್ಯ ಎನ್ನುವುದನ್ನು ಒಪ್ಪಲೇ ಬೇಕಾದ ಅನಿವಾರ್ಯತೆಯಲ್ಲಿ, ಅದರ ಸೊಗಸು ಮತ್ತು ಸಾಂಗತ್ಯದಲ್ಲಿ, ಏಕೋನಿಷ್ಠೆಯಲ್ಲಿ ಮಾತ್ರವಲ್ಲ ಲೋಕ ಎಲ್ಲ ಕಾಲಕ್ಕೂ ಆರಾಧಿಸುವ ಅಪೂರ್ವತೆಯಲ್ಲೂ ಸಾಧಿಸುವ ರಾಧೆಯನ್ನು ತನ್ನ ಪರಿಧಿಯೊಳಗೆ ತಂದುಕೊಳ್ಳುವ ಬಗೆ ಹೇಗೆ? ಅವಳು ಎತ್ತುವ ಪ್ರಶ್ನೆಗಳನ್ನು ಅಡಗಿಸುವುದು ಹೇಗೆ? ಯಾವ ದಾಂಪತ್ಯವು ನಾಗರಿಕತೆಯ ಮೂಲ ಸಂಸ್ಥೆಯಾಗಿದೆಯೋ ಅದರ ಸ್ಥಾವರ ಧಾತುವಾಗಿ ಹೆಣ್ಣನ್ನೂ, ಜಂಗಮ ಧಾತುವಾಗಿ ಗಂಡನ್ನೂ ಮೌಲ್ಯವ್ಯವಸ್ಥೆಯಲ್ಲಿ ಅಧಿಕೃತಗೊಳಿಸಲಾಗಿದೆಯೋ ಅದನ್ನೇ ಪ್ರಶ್ನಿಸುವವರನ್ನು ಹೇಗೆ ನಿಭಾಯಿಸಬೇಕು?

ಸಾಮಾನ್ಯವಾಗಿ ವಿಷಮ ದಾಂಪತ್ಯಗಳನ್ನು ಹೆಣ್ಣಿನ ಮಟ್ಟಿಗೆ ಶಾಶ್ವತವಾಗಿಸಲು ಒಂದು ಸುಲಭದ ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ವಿಧಿಯ, ಅದೃಷ್ಟದ, ಹೊಂದಾಣಿಕೆಯ ಪರಿವೇಷದಲ್ಲಿ ಹೆಣ್ಣನ್ನು ತನ್ನ ಅಧಿಕಾರ ವಲಯಕ್ಕೆ ತಂದುಕೊಳ್ಳುವ ಯಶಸ್ವಿ ಕಾರ್ಯತಂತ್ರವನ್ನು ಯಾವಾಗಲೂ ಬಳಸಲಾಗುತ್ತದೆ.

ರಾಧೆಯ ದಾಂಪತ್ಯದ ಪ್ರಶ್ನೆಯೇ ಅಪ್ರಸ್ತುತವಾಗಿಬಿಡುವಷ್ಟು ಅವಳನ್ನು ‘ಕೃಷ್ಣ ಭಕ್ತಿ’ಯಲ್ಲಿ ಮುಳುಗಿಸಿ ಬಿಡಲಾಯಿತು, ಅವಳ ಪ್ರೀತಿಯೂ ಭಕ್ತಿಯೂ ಬೇರ್ಪಡಿಸಲಾಗದಷ್ಟು ಅಭಿನ್ನವಾಗಿವೆ ಎನ್ನುವ ಸೂತ್ರದಲ್ಲಿ ರಾಧೆಯನ್ನು ಹೆಣೆಯಲಾಯಿತು. ಕೃಷ್ಣನಂಥವನನ್ನು ಯಾವ ಹೆಣ್ಣೂ ಪ್ರೀತಿಸಬಹುದು ಮತ್ತು ಅದು ಭಕ್ತಿಯ ಇನ್ನೊಂದು ರೂಪಾಂತರವೇ ಎನ್ನುವುದನ್ನೇ ಮುನ್ನೆಲೆಗೆ ತರಲಾಯಿತು.

ಒರಿಯಾದ ಮುಖ್ಯ ಲೇಖಕರಲ್ಲೊಬ್ಬರಾದ ರಮಾಕಾಂತ ರಥ್ ಅವರ ‘ಶ್ರೀರಾಧೆ’ ರಾಧೆಯನ್ನು ಕುರಿತ ಈ ತನಕದ ಎಲ್ಲ ನಿರ್ವಚನಗಳಿಗೆ ಯಾವುದಕ್ಕೂ ಸಾಧ್ಯವಾಗದ ಮತ್ತು ದಕ್ಕದ ಸ್ತ್ರೀನೆಲೆಯಲ್ಲಿ, ರಾಧೆಯನ್ನು ಅಪ್ಪಟ ಹೆಣ್ಣಾಗಿ ನೋಡುತ್ತಲೇ ಎಲ್ಲ ಹೆಣ್ಣಿನ ಒಳಗೂ ಇರಬಹುದಾದ ರಾಧೆಯನ್ನು ಓದುಗರ ಅನುಭವಕ್ಕೆ ತಂದುಕೊಡುತ್ತದೆ.

ಭಕ್ತಿ ಮತ್ತು ಪ್ರೀತಿಯ ನೆಲೆಯೆರಡನ್ನೂ ಈ ಕೃತಿಯೂ ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಆದರೆ, ಈ ಎರಡರ ನಡುವೆ ಜೀಕುವ ಇಲ್ಲಿನ ರಾಧೆ ಕೃಷ್ಣನನ್ನು ಕಾಣುವ ಹಂಬಲದಷ್ಟೇ ಮತ್ತು ಪ್ರಯತ್ನದಷ್ಟೇ ಸ್ವತಃ ತನ್ನನ್ನು ತನಗೇ ಕಾಣಿಸಿಕೊಳ್ಳುವ ಅಭೂತಪೂರ್ವ ಪ್ರಯತ್ನದಲ್ಲೂ ತೊಡಗಿದ್ದಾಳೆ. ಇದೇ ಈ ಕೃತಿಯ ಅನನ್ಯತೆಯಾಗಿದೆ. ಸದಾ ನಿರ್ದೇಶಿತ ಬದುಕಿನಲ್ಲಿರುವ ಹೆಣ್ಣಿಗೆ ತನ್ನ ಬದುಕಿನ ಸೂತ್ರವನ್ನು ತನ್ನ ಕೈಗೇ ತೆಗೆದುಕೊಂಡರೆ ಹೇಗಿದ್ದೀತು ಎನ್ನುವ ಕುತೂಹಲ, ಆಸೆ ಅದೆಷ್ಟು ಸಹಜವಾದುದು!

ಒಂದೇ ಒಂದು ಸಲ ಕನಸಲ್ಲಿ ಕಂಡೆ ಅಷ್ಟೇ.
ಆಮೇಲೆ ಆದಿ ಇರದ ಅಂತ್ಯ ಇರದ ರಸ್ತೆಯ ಮೇಲೆ
ನಾನು ಯಾತ್ರೆ ಹೊರಟು ಬಿಟ್ಟೆ.
ಎಷ್ಟು ಮನೆ ಮಠಗಳನ್ನು
ಅದೆಷ್ಟು ಜನರನ್ನು
ಅದೆಷ್ಟು ಘಟನೆಗಳನ್ನು ದಾಟಿ ದಾಟಿಕೊಂಡು
ನನ್ನನ್ನು ನನ್ನೊಳಗೇ ಅಡಗಿಸಿಕೊಂಡು ನಾನು ಬಂದೆ!

ಈ ಸುದೀರ್ಘ ಕಾವ್ಯವನ್ನು ಓದುತ್ತಿದ್ದಾಗ ಕೃಷ್ಣನೆನ್ನುವವನು ನೆಪವಾಗಿ ಕಾಣುತ್ತಾ ಹೆಣ್ಣು ಶತಮಾನಗಳಿಂದ ತನ್ನದೇ ದಾರಿಯಲ್ಲಿ ನಡೆಯಬೇಕೆನ್ನುವ, ತನಗೆ ಬೇಕಾದಂತೆ ಕಾಡು ಮೇಡುಗಳಲ್ಲಿ, ನದಿತಟಗಳಲ್ಲಿ, ಬೆಳದಿಂಗಳಲ್ಲಿ, ಧೋ ಎಂದು ಸುರಿಯುವ ಮಳೆಯಲ್ಲಿ, ಬದುಕಿನ ಅನಿರೀಕ್ಷಿತ – ಅನಂತ ಅನುಭವಗಳಲ್ಲಿ ತನ್ನನ್ನು ತಾನು ಅದೇ ಬದುಕಿನ ಜೀವಂತ ಪಾತ್ರಧಾರಿಯಂತೆ ಅನುಭವಿಸುವ ಜೀವೋತ್ಕಟ ಹೆಣ್ಣಾಗಿ ರಾಧೆ ಕಾಣಿಸುತ್ತಾಳೆ.

ಪ್ರಕೃತಿಯ ಈ ಅತ್ಯಂತ ಮೋಹಕವಾದ, ಜೀವಂತವಾದ ಈ ಜೀವಚೈತನ್ಯವು ತನ್ನನ್ನು ತಾನು ಅನಾವರಣ ಮಾಡಿಕೊಳ್ಳುವ ಈ ಜೀವಪ್ರಕ್ರಿಯೆಯಲ್ಲಿ ಕೃಷ್ಣ ಸಾಕ್ಷಿಪ್ರಜ್ಞೆಯಂತೆ ಕಾಣಿಸುತ್ತಾನೆ. ಹೆಣ್ಣು ಇರಬೇಕಾದ್ದೇ ಹೀಗೆ ಎನ್ನುವ ಅನುಮೋದನೆಯಲ್ಲಿ ಕೃಷ್ಣ ರಾಧೆಯ ಜೀವ ಸಖನಂತೆ, ಆತ್ಮ ಸಖನಂತೆ ಉದ್ದಕ್ಕೂ ಅವಳ ಜೀವ ಸಂಭ್ರಮದ ಪಾಲುದಾರನಾಗಿ ಕಂಗೊಳಿಸುತ್ತಾನೆ.

ನನಗೆ ನೆನಪಿರುವುದು ಇಷ್ಟೇ
ಅವನು ನನ್ನನ್ನು ಕರೆದ.
ಮುಗುಳ್ನಕ್ಕ. ನಾನು ಮೆಲ್ಲಗೆ ಬಂದು
ದೋಣಿಯೊಳಗೆ ಹೆಜ್ಜೆ ಇಡುತ್ತಿದ್ದಂತೆಯೇ
ಅವನು ದೋಣಿ ನಡೆಸಿ ಬಿಟ್ಟ.
ಗೊತ್ತಿಲ್ಲ ಆ ದೋಣಿ ಎಲ್ಲಿ ತಲುಪಿದೆ ಎಂದು
ಆಕಾಶದ ಅಂಚಿನಂತೆ ಕಾಣುವ ದಿಗಂತವನ್ನೋ
ಅಥವಾ
ಸದಾ ಹೊಸರೂಪ ತಾಳುತ್ತಿರುವ ಕುತೂಹಲಗಳ
ನಡುಗಡ್ಡೆಯನ್ನೋ?
(ಸಾಲಾಲಂಕೃತಾ ಮಾಲಾ ಸಿದ್ಧವೇನೇ ಕಂಕಣಾ ಬದ್ಧವೇನೇ
ಬಂದೇನೇ ಬರುವೆಯೇನೇ ಎಂದಾ.... –ಬೇಂದ್ರೆ)

ಸಖನಾದವನು ಆತ್ಮಸಖನಾಗುತ್ತಾ ಅವಳಲ್ಲಿ ಆತ್ಮದ ಅರಿವನ್ನೂ ಕಾಂತಿಯನ್ನೂ ತುಂಬುತ್ತಾ ನಿಧ ನಿಧಾನವಾಗಿ ಅವಳನ್ನು ಲೌಕಿಕದ ಎಲ್ಲ ಮಿತಿಗಳು ಮತ್ತು ಬಂಧನಗಳಿಗೆ ಅತೀತನಾಗಿಸುತ್ತಾ ಹೋಗುತ್ತಾನೆ. ಕುಬ್ಜ, ಅಧೀನ ವ್ಯಕ್ತಿತ್ವದಿಂದ ಅವಳನ್ನು ಬಿಡುಗಡೆಗೊಳಿಸಿ ಅನಂತತೆಯಲ್ಲಿ ಲಯವಾಗಿಸುತ್ತಾನೆ.

ಓ ಶ್ಯಾಮವರ್ಣನೇ, ಓ ನನ್ನ ಪ್ರಿಯತಮ,
ನನಗೆ ಎಲ್ಲವೂ ತಿಳಿದಿದೆ.
ನೀನು ಬರಬರುತ್ತಾ ಕೃಷ್ಣವರ್ಣನಾಗಿಬಿಡುವೆ
ಅದಾದ ಮೇಲೆ ಅದೃಶ್ಯವಾಗಿ ಬಿಡುವೆ
ನಿರಾಕಾರನಾಗಿ ಬಿಡುವೆ. ಆಗ
ನಾನೆಷ್ಟು ಕಷ್ಟಪಟ್ಟು ದಿಟ್ಟಿಸಿದರೂ
ನಿನ್ನ ಕಟಾಕ್ಷವಾಗಲಿ ಮಂದಹಾಸವಾಗಲಿ ಕಾಣಿಸುವುದಿಲ್ಲ
ಕಾಲವೆಂದರೇನೆಂದು ನನಗೀಗ ಅರ್ಥವಾಗುತ್ತಿದೆ, ಪ್ರಿಯತಮ,
ಕಾಲವೆಂದರೆ ಈ ಮಧು ರಾತ್ರಿಯ ಏಕಾಂತದಲ್ಲಿ
ನನ್ನ ಅಸಹಾಯಕ ಆತ್ಮದಲ್ಲಿ ನಿನ್ನ ಗೈರುಹಾಜರಿಯ ಪ್ರತಿಬಿಂಬ

ಕಾವ್ಯದುದ್ದಕ್ಕೂ ಕಾಣಿಸುವ ಕೃಷ್ಣನು ಗಂಡು ಎನ್ನುವ, ವ್ಯಕ್ತಿ ಎನ್ನುವ, ದೈವ ಎನ್ನುವ, ಸಖ ಎನ್ನುವ ಎಲ್ಲ ಹಂಬಲಗಳನ್ನು ಆವರಣಗಳನ್ನು ಒಳಗೊಳ್ಳುತ್ತಲೇ ವಿಕಾಸವಾಗುತ್ತಾ ಕಂಬಳಿ ಹುಳು ಚಿಟ್ಟೆಯಾಗುವ ಮಾಯಕದಂತೆ ಬದುಕಿನ ಸಮಸ್ತ ಅವಕಾಶಗಳಿಗೂ ಅನುಭವಗಳಿಗೂ ತೆರೆದ ಅನಂತ ಹೆಬ್ಬಾಗಿಲಿನಂತೆ ಭಾಸವಾಗುತ್ತದೆ. ಏಕಾಕಿಯಾಗಿಯೂ ಸಖನ ಜೊತೆಯಲ್ಲಿಯೂ ಪ್ರಕೃತಿಯ ಸಾಂಗತ್ಯದಲ್ಲಿಯೂ ನೋಯುತ್ತಲೇ ನಲಿಯುತ್ತ, ಕಟ್ಟಿಕೊಳ್ಳುತ್ತಲೇ ಬಿಚ್ಚಿಕೊಳ್ಳುತ್ತಾ ಹೋಗುವ ರಾಧೆ ಹೆಣ್ಣಿನ ಮುಕ್ತತೆಯ ಕಾಲಾತೀತ ಪ್ರತಿಮೆಯಾಗುತ್ತಾಳೆ.

ರಮಾಕಾಂತ ರಥ ಅವರ ಈ ಕೃತಿ ಮುಖ್ಯವಾಗುವುದು ಎರಡು ಮಹತ್ವದ ಅಂಶಗಳಿಗಾಗಿ. ಒಂದು ರಾಧೆಯನ್ನು ಈ ತನಕ ಸುತ್ತುವರಿದಿದ್ದ ಎಲ್ಲ ಬಗೆಯ ಪ್ರಭಾವಳಿಗಳಿಂದ ಮುಕ್ತಗೊಳಿಸಿ ಈಗಷ್ಟೇ ಅರಳುತ್ತಿರುವ ಹೂವಿನ ತಾಜಾ ಸೌಂದರ್ಯ, ಪರಿಮಳಗಳ, ಎಲ್ಲಕ್ಕಿಂತ ಹೆಚ್ಚಾಗಿ ನೂರಕ್ಕೆ ನೂರು ತನ್ನದೇ ಸ್ವಂತಿಕೆಯ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯಾಗಿ ಚಿತ್ರಿಸಿರುವುದಕ್ಕೆ. ಸಂಬಂಧವೊಂದು, ಸಖ್ಯವೊಂದು ಕೊಡಬಹುದಾದ ಎಲ್ಲವನ್ನೂ ತನ್ನ ಆತ್ಮದ ವಿಕಾಸಕ್ಕಾಗಿ ಬಳಸಿಕೊಳ್ಳುತ್ತಾ ಹೋಗುವ ಈ ರಾಧೆ ತನ್ನ ಜೀವಿತಾವಧಿಯಲ್ಲೇ ಮೋಕ್ಷವನ್ನು ಪಡೆಯುವ ಸನ್ನಾಹದ ಹೆಣ್ಣಾಗಿ ಬೆಳೆಯುತ್ತಾ ಹೋಗುತ್ತಾಳೆ.

ಇಲ್ಲಿ ಮೋಕ್ಷ ಎನ್ನುವುದನ್ನು ಭವಾವಳಿಗಳಿಂದ ಪಡೆಯುವ ಮುಕ್ತಿ ಎನ್ನುವ ಸೀಮಿತ ಅಥವಾ ಅಮೂರ್ತ ಅನುಭಾವಿ ಅರ್ಥದಲ್ಲಿ ಬಳಸುತ್ತಿಲ್ಲ. ವ್ಯಕ್ತಿತ್ವವೊಂದು ಒಂದೇ ಭವದಲ್ಲಿ  ಗಾಢವಾಗಿ ಬದುಕುವ ಮೂಲಕವೇ ಅನೇಕ ಭವಗಳ ಸಾಂದ್ರ ಅನುಭವವನ್ನು ಪಡೆಯುವ, ಆ ಮೂಲಕ ಬದುಕಿಗೂ ತನ್ನ ಹುಡುಕಾಟಕ್ಕೂ ಅಪಾರ ಗೌರವವನ್ನು, ಸಾರ್ಥಕತೆಯನ್ನು ತಂದುಕೊಡುವ ಜೀವನ ವಿನ್ಯಾಸ ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ.

ಕೃಷ್ಣನೆನ್ನುವವನು ಬದುಕಿನುದ್ದಕ್ಕೂ ತನ್ನವನಾಗಿ, ಕೇವಲ ತನ್ನವನ್ನಾಗಿ ಮಾತ್ರ ಉಳಿಯುವುದು ಸಾಧ್ಯವಿಲ್ಲ ಎನ್ನುವ ಸಂಗತಿಯ ಜೊತೆಗೇ ಇಲ್ಲಿನ ರಾಧೆಗೆ, ಕೃಷ್ಣ ತನ್ನ ಸಂಪರ್ಕಕ್ಕೆ ಬರುವ ಎಲ್ಲರಿಗೂ ಅವರಿಗೆ ಬೇಕಾದ್ದನ್ನು ಕೊಡಬಲ್ಲ ಶಕ್ತ ಎನ್ನುವುದರ ಅರಿವೂ ಇದೆ. ಪು.ತಿ.ನ ಅವರ ‘ಗೋಕುಲ ನಿರ್ಗಮನ’ ನೆನಪಾಗುತ್ತಿದೆಯೆ? ಕೃಷ್ಣನ ಮೋಹಕ ಗಾನ ಮತ್ತು ನೃತ್ಯದ ಉತ್ಸವದಲ್ಲಿ ಪಾಲ್ಗೊಳ್ಳದೇ ಇರುವ ಪಾಪಿಗಳು, ಕೈಲಾಗದ ವೃದ್ಧರು ಮಾತ್ರ! ಗೋಕುಲಕ್ಕೆ ಗೋಕುಲವೇ ಗಂಡು ಹೆಣ್ಣೆನ್ನುವ ಭೇದ ಮರೆತು, ಮನೆಯ ಕೆಲಸಗಳನ್ನು ಮರೆತು, ರೋಗರುಜಿನಗಳ ಬಾಧೆಯನ್ನು ಮರೆತು ಆ ಉತ್ಸವದಲ್ಲಿ ಮೈಮರೆತು ಹಾಡುತ್ತಾರೆ, ನರ್ತಿಸುತ್ತಾರೆ.

‘ನಿಲಿಸದಿರು ವನಮಾಲಿ ಕೊಳಲ ಗಾನವ, ನಿಲಿಸೆ ನೀ ಮರೆವುದೆಂತು ಭವಭೀತಿಯ ಕ್ಲೇಶವ’ ಎನ್ನುವ ಜನರ ಒಕ್ಕೊರಲಿನ ಉದ್ಗಾರಕ್ಕೆ ಹಲವು ಅರ್ಥಛಾಯೆಗಳಿವೆ. ಭವಭೀತಿ ಎನ್ನುವುದು, ಬದುಕಿನ ಅಪರಿಹಾರ್ಯ ಕಷ್ಟಗಳು ಎಂದಲ್ಲ, ಭವವನ್ನು ಕುರಿತಂತೆ ನಾವೇ ಹಾಕಿಕೊಂಡಿರುವ ಸೀಮಿತ ಚೌಕಟ್ಟುಗಳು, ಬದುಕಿನ ಹರಹನ್ನು ಗುರುತಿಸಲಾಗದೇ ನಾವೇ ಹಾಕಿಕೊಂಡ ಎಲ್ಲೆಗಳು ಎನ್ನುವ ಅರ್ಥವು ಕೃಷ್ಣನು ಸ್ಪರ್ಶಮಣಿಯಂತೆ ತನ್ನ ಬಳಿ ಬಂದವರ ಮನೋವಿನ್ಯಾಸವನ್ನೇ ಬದುಕನ್ನು ಒಂದು ಲೀಲೆಯಾಗಿ ಸಂಭ್ರಮಿಸುವುದರ ಕಡೆಗೆ ಸೆಳೆಯುವ ಚುಂಬಕ ಶಕ್ತಿ ಎನ್ನುವುದರ ರುಜುವಾತು.

ಈ ಅಂಶವನ್ನೇ ರಮಾಕಾಂತ ರಥ್ ಕೂಡ ರಾಧೆಯ ವಿಷಯದಲ್ಲಿ ಅಪೂರ್ವವಾಗಿ ಬಳಸಿಕೊಂಡಿದ್ದಾರೆ. ಬದುಕನ್ನು ಕಿಂಡಿಯಿಂದ ನೋಡುತ್ತಿದ್ದ ರಾಧೆಗೆ ಕೋರೈಸುವ ಬೆಳಕಿನ ಕಡೆಗೆ ಚಲಿಸುವ ಶಕ್ತಿ ನಿನ್ನೊಳಗೇ ಇದೆ ಎನ್ನುವ ಸತ್ಯದ ಅನಾವರಣ ಮಾಡಿಸಿದವನು ಕೃಷ್ಣ ಎನ್ನುವ ರಮಾಕಾಂತ ರಥ್ ಅವರ ನಿಲುವನ್ನು ರಾಜಕೀಯ ನೆಲೆಯಿಂದಲೂ ನೋಡಲು ಸಾಧ್ಯವಿದೆ. ಕುಗ್ಗಿ ಹೋಗಿರುವ ದಮನಿತರನ್ನು ಕರುಣೆಯ ಭಾರವಿಲ್ಲದೆ ಅರಳಿಸುವ ಬಗೆಯನ್ನು ಕರ್ತವ್ಯಪ್ರಜ್ಞೆಯಲ್ಲೂ ಅದನ್ನೂ ಮೀರಿದ ಜೀವಪ್ರೀತಿಯಲ್ಲೂ ಕೃಷ್ಣ ಮಾಡುತ್ತಿದ್ದಾನೆ ಎನ್ನುವ ನಿರೂಪಣೆಯು ಕೃಷ್ಣನನ್ನೂ ಅವನನ್ನು ಬಂಧಿಸಿರುವ ಧಾರ್ಮಿಕ, ದೈವಿಕ ಪಾಶಗಳಿಂದ ಮುಕ್ತಗೊಳಿಸಿ ಮಾನವೀಯತೆಯ ಹೊಸ ಬೆಳಕಿನಲ್ಲಿ ನೋಡಲು ಸಹಾಯ ಮಾಡುತ್ತದೆ.

ಪುತಿನ ಅವರ ‘ಪ್ರತೀಕ್ಷೆ’ ಕವನವೂ ಸಂಕ್ಷಿಪ್ತವಾಗಿ ರಾಧೆಯನ್ನು ‘ಹದಿನಾಲ್ಕು ಲೋಕಕ್ಕು ಚಿಮ್ಮಲಿ ಸುಖ’ ಎನ್ನುವ ಸಾಹಸಕ್ಕೆ ಸಿದ್ಧವಾಗುತ್ತಿರುವ ಹೆಣ್ಣನ್ನು, ಅವಳನ್ನು ರಾಧೆಯೆಂದು, ರಾಧೆಯಲ್ಲದೆ ಇನ್ನೇನೋ ಹೆಸರಿರುವ ಲಕ್ಷಾಂತರ ಹೆಣ್ಣಿನ ಪ್ರತಿನಿಧಿಯೆಂದು ನೋಡಲು ಖಂಡಿತಾ ಸಾಧ್ಯವಿದೆ.

ಇಂದು ಏನಾಗಿಹುದೆ, ಗೆಳತಿ
ಏಕೆ ಸಡಗರಗೊಳ್ವೆನೆ?
ಕಡಲಿನಗಲದ ಕೇರಿ ಹರಹನು
ಹಾರಿ ಬರುವ ಎಲರಾರ ದೂತನೆ,
ಸುದ್ದಿ ಯಾವುದ ಪೇಳ್ವನೆ?

ರಾಧೆಗೆ ನಮ್ಮ ಹೆಸರೆ? ನಮಗೆ ರಾಧೆಯ ಹೆಸರೆ? ಎರಡೂ ಒಂದೇ. ಅದಕ್ಕೆ ರಾಧೆ ನಮ್ಮೆಲ್ಲರ ಆತ್ಮಸಖಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT