ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲುಗಳ ನಡುವೆ ಓದಿದರೆ...

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಸಾಲುಗಳ ನಡುವೆ ಓದಿದರೆ...ರುಷ ಮದದ ಬಗೆಗೆ ಹೇಳುತ್ತಿದ್ದೇನೆ. ಇಲ್ಲಿ ಇದರ ಇನ್ನೊಂದು ಮುಖವನ್ನೂ ನಾವು ಗಮನಿಸಬೇಕು. ನಾನು ‘ಸೆಕೆಂಡ್ ಸೆಕ್ಸ್’ ಬರೆಯುವುದಕ್ಕೆ ಪ್ರೇರಣೆ, ಪ್ರೋತ್ಸಾಹ ಕೊಟ್ಟವರಲ್ಲಿ ನೀನೇ ಮೊದಲಿಗ. ನಾನು ಪುಸ್ತಕವನ್ನು ಬರೆದು ಮುಗಿಸಿದಾಗ ನೀನು ಅದರಲ್ಲಿನ ಎಲ್ಲ ವಾದಗಳನ್ನು ಒಪ್ಪಿಕೊಂಡೆ. ಆದರೆ ಕಾಮುವಿನಂತವರು ಆ ಪುಸ್ತಕವನ್ನು ನನ್ನ ಮುಖದ ಮೇಲೆ ಬಿಸಾಡುವುದಷ್ಟೇ ಉಳಿದಿತ್ತು. ನಾನು ಅಲ್ಲಿಯವರೆಗೆ ಎಷ್ಟೆಲ್ಲ ಜನರನ್ನು ಇವರೆಲ್ಲ ಸಾಮಾಜಿಕ ಮತ್ತು ಲಿಂಗತಾರತಮ್ಯವನ್ನು ಮೀರಿಕೊಳ್ಳಲು ಯತ್ನಿಸುತ್ತಾ ಪ್ರಜಾತಂತ್ರವನ್ನು ಒಪ್ಪಿಕೊಳ್ಳುವ ದಾರಿಯಲ್ಲಿದ್ದವರು ಎಂದುಕೊಂಡಿದ್ದೆ. ಆದರೆ... ಪುರುಷಾಂಧಕಾರ ಎಂದರೇನೆಂದು ಆಗ ನನಗೆ ಅರಿವಾಯಿತು.
–ಸಿಮೋನ್ ದ್ ಬುವಾ

ನಿಮಗಿಷ್ಟ ಬಂದ ಕಡೆ ನನ್ನ ಗೋರಿಯ ತೋಡಿ
ಎತ್ತರದ ಪರ್ವತವೋ, ತಗ್ಗು ನೆಲವೋ
ಘೋರದಾಸ್ಯದ ನಾಡನೊಂದುಳಿದು
ಯಾವ ಮೂಲೆಯಾದರೂ ಸರಿ ಹೂಳಿಬಿಡಿ
(ಫ್ರಾನ್ಸಿಸ್ ಎಲೆನ್ ವ್ಯಾಟ್ ಕಿನ್ಸ್ ಹಾರ್ಪರ್;
ಅನು: ಎಂ.ಆರ್. ಕಮಲ)

ಚಿತ್ರ ಒಂದು
ಮಧ್ಯಮ ವರ್ಗದ ಕುಟುಂಬ. ಮನೆಗೆ ಅತಿಥಿಗಳು ಬಂದಿದ್ದಾರೆ. ಮೈತುಂಬಾ ಸೆರಗು ಹೊದ್ದ ಶ್ರೀಮತಿಯವರು ಅವರ ಬೇಕು ಬೇಡಗಳನ್ನೆಲ್ಲ ನೋಡಿಕೊಳ್ಳುತ್ತಾ, ಮೆಲುದನಿಯಲ್ಲಿ, ವಿನಯವೇ ಮೈವೆತ್ತು ಬಂದಂತೆ, ಮಾತನಾಡುತ್ತಾ, ತನ್ನ ಮೈಕೈನೋವು, ಒಳಗೇ ದಹಿಸುತ್ತಿರುವ ಯಾವುದೋ ಅಸಹನೀಯ ದುಃಖ ಯಾವುದೂ ಕಾಣಿಸಿಕೊಳ್ಳದ ಹಾಗೆ ಎಚ್ಚರ ವಹಿಸುತ್ತಾ ನಗೆಯ ಆಭರಣ ಧರಿಸಿ ಇಡೀ ದಿನ ‘ಮನೆಯನ್ನು ನಿಭಾಯಿಸುತ್ತಾರೆ’.

ರಾಯರು ಗಟ್ಟಿಯಾದ ಮುಕ್ತ ನಗೆ ನಗುತ್ತಾ ಎಲ್ಲವೂ ಸಾಂಗವಾಗಿ ಸಾಗುತ್ತಿರುವುದರ ಬಗ್ಗೆ ತೃಪ್ತರಾಗಿದ್ದಾರೆ. ರಾತ್ರಿ ಮಲಗಲು ಬಂದ ಶ್ರೀಮತಿಯವರಿಗೆ, ನಾಳಿನ ತಿಂಡಿಗೆ ಮಾಡಲಿರುವ ಇಡ್ಲಿ ಮೃದುವಾಗಿ, ವಡೆ ಗರಿಗರಿಯಾಗಿ ಬಂದರೆ ಸಾಕು, ಇಲ್ಲವಾದರೆ ಗಂಡ ಯಾವ ಮುಲಾಜಿಲ್ಲದೆ ತನ್ನನ್ನು ಬಂದವರೆದುರಿಗೆ ಹರಾಜು ಹಾಕಿ ಬಿಡುತ್ತಾನೆ ಎನ್ನುವ ಕಳವಳ. ದಿನದ ಇಪ್ಪತ್ನಾಲ್ಕು ಗಂಟೆಯೂ ಸಾಲದು ಮನೆಯ ದೇಖರೇಕಿಗೆ.

ಮುಂದಿನ ಕ್ಷಣ ಸಾವು ಎದುರಿಗಿದ್ದರೂ ನಾಳೆ ಮನೆಯವರಿಗೆ ತೊಂದರೆಯಾಗಬಾರದು ಎಂದು ಹಾಲು ಹೆಪ್ಪು ಹಾಕಿ ಬಿಡೋಣ ಅಲ್ಲವೆ ಎನ್ನುವ ಜವಾಬ್ದಾರಿಯೋ, ಕರ್ತವ್ಯಪ್ರಜ್ಞೆಯೋ, ದಾಸ್ಯವೋ, ಕಾಳಜಿಯೋ ಗೊತ್ತೇ ಆಗದ ಮನಸ್ಥಿತಿ. ಇಷ್ಟಾಗಿ, ಏನು ಮಹಾ ಮನೆ ಕೆಲಸ? ಮನೆಯೊಳಗೆ ಬಿದ್ದಿರುವವರಿಗೆ ಏನು ಗೊತ್ತು ಹೊರಗೆ ‘ದುಡಿಯುವ’ ಗಂಡಿನ ಕಷ್ಟ? ಎನ್ನುವ ಮಾತು! ಪುರುಸೊತ್ತು ಎನ್ನುವುದು ಅವಳಿಗೆ ತೀವ್ರ ಅನಾರೋಗ್ಯ ಮಾತ್ರ ಎಂದೋ ಒಮ್ಮೆ ತಂದು ಕೊಡಬಹುದಾದ ಭಾಗ್ಯ.

ಚಿತ್ರ ಎರಡು
ಅದೇ ಮಧ್ಯಮವರ್ಗದ ಎರಡು ತಲೆಮಾರಿನ ಆಚೆಗಿನ ಕುಟುಂಬ. ಮನೆಗೆ ಅತಿಥಿಗಳು ಬಂದಿದ್ದಾರೆ. ಆಕೆಯೂ ಕೆಲಸಕ್ಕೆ ಹೋಗಬೇಕು. ಚೂರುಪಾರು ಸಹಾಯ ಮಾಡುತ್ತಿದ್ದ ಗಂಡ ಅತಿಥಿಗಳ ಜೊತೆ ಪಟ್ಟಾಂಗದಲ್ಲಿ ಗರ್ಕ. ಹೋಗುವುದರೊಳಗೆ ಯಾವುದು ಮಾಡಲಿ ಯಾವುದು ಬಿಡಲಿ, ಮೈ ಪರಚಿಕೊಳ್ಳುವ ಕೋಪ, ದ್ವಂದ್ವ. ಗೊತ್ತಾದರೂ ಗಂಡನದು, ‘ಹೇಗೋ ನಿಭಾಯಿಸುತ್ತಾಳೆ, ನಿಭಾಯಿಸಲಿ’ ಎನ್ನುವ ಸ್ಪಷ್ಟತೆ. ಅವಳು ತುಸು ದನಿಯೆತ್ತರಿಸಿದರೆ, ಕೆಕ್ಕರಿಸುವ ನೋಟ.

ಒಳಗೆ ಬಂದು ಪಿಸುದನಿಯಲ್ಲಿ, ನಿರ್ದೇಶನ. ಇವು ಇನ್ನೂ ಹಲವು ಅವತಾರಗಳನ್ನು ತಾಳುವುದುಂಟು. ‘ಯಾಕೆ ನೀನು, ಹೆಣ್ಣು ಹೆಂಗಸು (ಅದು ಯಾಕೆ ಅವಳು ಹೆಣ್ಣು ಮತ್ತು ಹೆಂಗಸು? ಒಂದು ಪದ ಸಾಲದೆ? ಒಂದು ಶಬ್ದದ ಅವಶ್ಯಕತೆಯಿಲ್ಲದೆಯೂ ಹೇಳಲು ಸಾಧ್ಯವಿರುವಾಗ? ಅದು ದೇವರಿಗಲ್ಲ, ಗಂಡಸರಿಗೇ ಗೊತ್ತು!) ಅಷ್ಟು ಮಾತನಾಡಿದ್ದು ಅವರ ಜೊತೆಯಲ್ಲಿ? ಬೇರೆ ದಿನಗಳಲ್ಲಿ ಹಾಳಾಗಿ ಹೋಗಲಿ, ಯಾರಾದರೂ ಬಂದಾಗಲಾದರೂ ಲಕ್ಷಣವಾಗಿ ಸೀರೆ ಉಡಬಾರದೆ? ಇಡ್ಲಿ ಜೊತೆ ವಡೆ, ಸಾಂಬಾರ್ ಮಾಡಬಾರದಿತ್ತಾ?’...
***
ಎರಡನ್ನೂ ಕಂಡಿರುವ ನನಗೆ, ಇದನ್ನು ಬರೆಯುತ್ತಿರುವಾಗಲೂ ಈ ಎರಡೂ ಸಂದರ್ಭದ ಗಂಡು ಎದುರಿಗೆ ಬಂದರೆ, ಬೀಸಿ ಹೊಡೆಯಬೇಕೆನ್ನುವಷ್ಟು ವ್ಯಗ್ರತೆ ಬಂದದ್ದೇ ಮರು ಗಳಿಗೆಯಲ್ಲೇ ತಿರಸ್ಕಾರವಾಗಿ, ಕರುಣೆಯಾಗಿ ಪರಿವರ್ತನೆಯಾಗುತ್ತದೆ. ಅದು ಯಾಕೋ ಅಲ್ಲಮನ ‘ನಾ ದೇವನಲ್ಲದೆ ನೀ ದೇವನೆ?’ ಮಾತು ಅಕಾರಣವಾಗಿ ನೆನಪಾಗುತ್ತದೆ. ಅಲ್ಲವೆ ಮತ್ತೆ? ತೇನವಿನಾ ತೃಣಮಪಿ ನ ಚಲತಿ ಎಂದು ಕೃತಜ್ಞತೆಯಿಂದ ಹಾಡಬೇಕಾದ ಗಂಡಸು, ಅದನ್ನು ನಾವು ಹಾಡಬೇಕೆಂದು ಅಪ್ಪಣೆ ಮಾಡಿದರೆ ಕೋಪವಲ್ಲದೆ ಇನ್ನೇನು ಬರಲು ಸಾಧ್ಯ!

ಚೂರು ತಮಾಷೆಗಾಗಿ, ಲಘುವಾಗಿ ಹೇಳುತ್ತಿರುವಂತೆ ಕಾಣಿಸುತ್ತಿರುವ ಇಂಥ ನೂರು ಸನ್ನಿವೇಶಗಳನ್ನು ಬೇರೆ ಬೇರೆ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಸಾಧ್ಯ, ನಿಜ. ಇವು ಮೇಲಿನ ಸಂದರ್ಭಗಳಂತೆ ಏಕಮುಖಿಯಾಗಿ, ಸರಳವಾಗಿ ಇರುವುದಿಲ್ಲ ಎನ್ನುವುದೂ ನಿಜ. ಗಂಡು ನಿಧಾನವಾಗಿ division of labourನ ಅರಿವನ್ನು ಹೆಣ್ಣಿನ ವಿಷಯದಲ್ಲಿ ಪಡೆದುಕೊಳ್ಳುತ್ತಿರುವುದೂ ನಿಜ. ಆದರೆ ಸ್ಥೂಲವಾಗಿ ಗಂಡು ಹೆಣ್ಣಿನ ಸಂಬಂಧದ ಸ್ವೀಕರಣಗಳ ಮೂಲ ತಾತ್ವಿಕತೆ ಎಂದಿನಿಂದಲೂ ಇದೇ ಆಗಿಬಿಟ್ಟಿದೆಯೇ ಎನ್ನುವ ಪ್ರಶ್ನೆ ಹೆಣ್ಣುಮಕ್ಕಳನ್ನು ಯಾಕೆ ಕಾಡುತ್ತದೆ ಎನ್ನುವುದಕ್ಕೆ ಇವು ದಿಕ್ಸೂಚಿಗಳಾಗಬಹುದೇನೋ. ಗಂಡು ಮತ್ತು ಹೆಣ್ಣು ಇಬ್ಬರಿಗೂ ಪರಸ್ಪರರ ಬಗ್ಗೆ ಇರಬೇಕಾದ ಗೌರವ ಮತ್ತು ಕೃತಜ್ಞತೆಯ ಜಾಗದಲ್ಲಿ ಅಹಂಕಾರ ಮತ್ತು ಅಧಿಕಾರಗಳು ಬಂದು ಕೂತುಬಿಟ್ಟರೆ ಏನಾಗುತ್ತದೋ ಅದೇ ಪಿತೃಸಂಸ್ಕೃತಿ.
***
ಮಲೆಯಾಳಂನ ಸೂಕ್ಷ್ಮ ಸಂವೇದನೆಯ ಕವಿ ಗೀತಾ ಹಿರಣ್ಯನ್ ಅವರ ಎರಡು ಕವಿತೆಗಳನ್ನು ಈ ಬಾರಿ ನೋಡಬಹುದು. ಈ ಎರಡೂ ಕವಿತೆಗಳನ್ನು ಕನ್ನಡದ ಮತ್ತೊಬ್ಬ ಮುಖ್ಯ ಕವಿ ಸ. ಉಷಾ ಅನುವಾದಿಸಿದ್ದಾರೆ. ಹೀಗಾಗಿ ಈ ಎರಡೂ ಕವಿತೆಗಳು ತಮ್ಮ ಮೂಲದ ಶಾರೀರ ಮತ್ತು ಶರೀರಗಳೆರಡನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಮೊದಲನೆಯ ಕವಿತೆ ‘ಒಳಾಲಂಕರಣ’. ಬೊನ್ಸಾಯ್ ವೃಕ್ಷಗಳನ್ನು ಹೆಣ್ಣಿಗೆ ರೂಪಕವಾಗಿ ಬಳಸಿಕೊಂಡಿರುವ ಅತ್ಯುತ್ತಮ ಕವಿತೆ ಇದು. ಎಷ್ಟೋ ಎತ್ತರಕ್ಕೆ ಬೆಳೆಯಬಲ್ಲ ಎಲ್ಲ ಶಕ್ತಿಯಿದ್ದಾಗಲೂ ಉದ್ದೇಶಪೂರ್ವಕವಾಗಿ ಬೆಳವಣಿಗೆಯನ್ನು ನಿಯಂತ್ರಿಸಿರುವ ಬೊನ್ಸಾಯ್‌ಗೂ ಹೆಣ್ಣಿಗೂ ಎಂಥ ಸಾಮ್ಯತೆಯಿದೆಯಲ್ಲವೆ ಎನಿಸುತ್ತದೆ ಕವಿಗೆ. ಮತ್ತು ಯಾಕಾಗಿ ಹೀಗೆ ಮಾಡಲಾಗಿದೆ ಎನ್ನುವುದು ಇನ್ನೊಂದು ಮುಖ್ಯ ಪ್ರಶ್ನೆ.

ಹೀಗೆ ಬೆಳವಣಿಗೆಯನ್ನು ನಿಯಂತ್ರಿಸಿ ಅದನ್ನು ಬಳಸಿಕೊಳ್ಳುವುದು ಮನೆಯ ‘ಒಳಾಲಂಕರಣ’ಕ್ಕಾಗಿ. ಅದರ ವ್ಯಕ್ತಿತ್ವಕ್ಕಾಗೋ, ಅದರ ವಿಶಿಷ್ಟತೆಗಾಗೋ ಅದರ ಶಕ್ತಿಗಾಗೋ ಅಲ್ಲ. ಅದಕ್ಕೊಂದು ಅನನ್ಯತೆಯೂ ಸ್ವಾಯತ್ತತೆಯೂ ಇಲ್ಲ ಅಥವಾ ಇರಬೇಕಾಗಿಲ್ಲ. ಅದೇನಿದ್ದರೂ ಇರುವುದು ನನ್ನ, ಎಂದರೆ, ಅಧಿಕಾರ ಕೇಂದ್ರವೊಂದರ ಅವಶ್ಯಕತೆ, ಅಭಿರುಚಿಯನ್ನು ಪೋಷಿಸುವುದಕ್ಕಾಗಿ ಮಾತ್ರ. ಅದು ಎಷ್ಟು ಬೆಳೆಯಬೇಕು, ಹೇಗೆ ಬೆಳೆಯಬೇಕು, ಎಲ್ಲಿಗೆ ಅದರ ಬೆಳವಣಿಗೆ ನಿಲ್ಲಬೇಕು ಇದೆಲ್ಲವೂ ಅಧಿಕಾರ ಕೇಂದ್ರದ, ಮಾಲೀಕನ ಮರ್ಜಿ.

ನನ್ನೊಲವೇ
ಸಹಜ ಬೆಳವಣಿಗೆಯಿಲ್ಲದ
ಬಾನ್ ಸಾಯ್ ಅರಳಿ ಮರದ ಹಾಗೆ
ನನ್ನ ಬೆಳೆಯೂ ಕಳೆಯೂ ನಿಯಂತ್ರಣಗೊಂಡಿದೆ

.......
ಕೊನೆಯಿಲ್ಲದ ಕನಸುಗಳ ಪಾತಾಳಕ್ಕೆ
ಬೇರ ಬಲೆ ಹರಡುವುದಿಲ್ಲ
ನೀತಿಯ ಹರಿತ ಖಡ್ಗ
ಆಗಾಗ ತಾಯಿಬೇರನ್ನು ಒಪ್ಪಗೊಳಿಸುತ್ತದೆ


ಅದರ ಬೆಳವಣಿಗೆಯ ಸಮಸ್ತವನ್ನೂ ಅಪಾರ ಎಚ್ಚರದಲ್ಲಿ ಗಮನಿಸುತ್ತಲೇ ಇರಲಾಗುತ್ತದೆ. ಅದು ತುಸು ಹೆಚ್ಚು, ತುಸು ಆಚೀಚೆ ಆಯಿತೆಂದರೂ ಸಾಕು, ಅದನ್ನು ಕತ್ತರಿಸಿ ತಮ್ಮ ಅಳತೆ, ಅಭಿರುಚಿಗೆ ನೇರ್ಪಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗಂತ ಅದು ಬೇಡವೆ? ಅದು ಬೇಕು, ಆದರೆ ಅದು ತನ್ನದೇ ಅಸ್ತಿತ್ವದಿಂದ ಇತರರ ಗಮನ ಸೆಳೆಯಕೂಡದು. ನೋಡಿದವರು, ಆಹಾ, ಅದೆಷ್ಟು ಚೆನ್ನಾಗಿ ಗಿಡವನ್ನು ಬೆಳೆಸಿದ್ದೀರಿ, ಅದರ ರೆಂಬೆಕೊಂಬೆಗಳನ್ನೆಲ್ಲ ಸವರಿ ಟ್ರಿಮ್ ಮಾಡಿಟ್ಟಿದ್ದೀರಿ, ನಿಮ್ಮಂಥ ಮಾಲಿ (!) ಇನ್ನೊಬ್ಬನಿಲ್ಲ ಎನ್ನಬೇಕು. ಗಿಡವಾದರೂ ಅಷ್ಟೇ, ಹೆಣ್ಣಾದರೂ ಅಷ್ಟೇ, ತನ್ನ ರಾಜ್ಯದ ಪ್ರಜೆಯಾಗಿರಬೇಕು, ಎನ್ನುವ ಸ್ವಯಂದತ್ತ ಅಧಿಕಾರದ ಆಕ್ರಮಣ.

ಆದರೂ ಒಲವೇ
ನೆನಪಿಡು
ನಿನ್ನನೊಲಿದು ಕಾಯುತ್ತಿರುವ
ನಾನೊಂದು ಶುದ್ಧ ಅಪ್ಪಟ ಮರ
ಒಂದು ಒಳಾಲಂಕರಣದ ಮರ
ನೀನೊಂದು ಕ್ಷಣ
ಮನ ಬದಲಿಸಿದರೆ
ನಿನ್ನ ಹೊರೆಗಳಿಂದ ಬೇಸತ್ತು ಬಸವಳಿದಾಗ
ಈ ಕುಂಠಿತ
ಬಾನ್ ಸಾಯ್ ಅರಳಿಯನ್ನು
ನೆನೆದುಕೋ


ಪದ್ಯದ ಈ ಭಾಗ ಅಪ್ಪಟ ಮರದಂತೆ ಅಪ್ಪಟ ಕಾವ್ಯವೂ ಆಗಿದೆ, ಅಪ್ಪಟ ಹೆಣ್ಣಿನ ಸ್ವ ವ್ಯಾಖ್ಯಾನವೂ ಆಗಿದೆ. ತನ್ನ ಜೊತೆಗಾರನನ್ನೂ ಯಾವ ಹೊತ್ತಿಗೂ ದ್ವೇಷಿಸದೇ, ಅವನನ್ನು ಒಲವೇ ಎಂದು ಕವನದುದ್ದಕ್ಕೂ ಕವಿ ಸಂಬೋಧಿಸುತ್ತಾ ಹೋಗುತ್ತಾರೆ. ಮತ್ತೆ ಮತ್ತೆ ಈ ಅಂಕಣದಲ್ಲಿ ಸ್ತ್ರೀವಾದದ ಬಗೆಗೆ ಹೇಳುತ್ತಲೇ ಬಂದಿರುವ, ‘ಸ್ತ್ರೀವಾದವು ಯುದ್ಧವಲ್ಲ, ಅದು ಪರಿವರ್ತನೆಯ ಮಾಂತ್ರಿಕದಂಡದ ಸೃಷ್ಟಿಯ ಪ್ರಯತ್ನ’ ಎನ್ನುವುದನ್ನು  ಸಾವಿರದ ಒಂದನೆಯ ಬಾರಿಗೆ ಬೇಸರವಿಲ್ಲದಂತೆ ಉಚ್ಚರಿಸುತ್ತೇನೆ. ತನ್ನ ಬದುಕಿನ, ವ್ಯಕ್ತಿತ್ವದ ಬೆಳವಣಿಗೆಯನ್ನೇ ತನ್ನಿಚ್ಚೆಗೆ ನಿಯಂತ್ರಿಸಿರುವವವನನ್ನು ಅವಳು ‘ನನ್ನೊಲವೆ’ ಎಂದೇ ಕರೆಯುತ್ತಾಳೆ, ವ್ಯಂಗ್ಯದ ಛಾಯೆಯಿದ್ದರೂ ಅಲ್ಲಿ ಪ್ರೀತಿಯದೇ ಮೇಲುಗೈ.

ಅವಳಿನ್ನೂ ಕಾಯುತ್ತಲೆ ಇದ್ದಾಳೆ, ‘ಅವನು ’ ಇಂದಲ್ಲ ನಾಳೆ ಬದಲಾಗುತ್ತಾನೆಂದು. ಅವನು ಬದಲಾಗಲು ಈಗ ಅವಳು ಸರಿಯಾದ ಕಾರಣವನ್ನೇ ಮುಂದಿಡುತ್ತಿದ್ದಾಳೆ. ‘ಹೊರೆಗಳಿಂದ ಬೇಸತ್ತು’ ಎನ್ನುತ್ತಾಳೆ ಅವಳು. ಅವು ಯಾರೋ ಹೊರಿಸಿದ ಹೊರೆಗಳಲ್ಲ. ತನಗೆ ತಾನೇ, ಬೇಕಾಗಿ ಹೊತ್ತುಕೊಂಡ ಬೇಡದ ಹೊರೆಗಳು. ಗಂಡು ಹೆಣ್ಣು ಇಬ್ಬರೂ ಒಬ್ಬರನ್ನೊಬ್ಬರು ಪೊರೆಯಬಲ್ಲ ಅಪೂರ್ವ ಸಂದರ್ಭವನ್ನು ನಾಶ ಮಾಡಿ ‘ನಾನು ಮೊದಲು ನೀನು ಆಮೇಲೆ ’ಎನ್ನುವ ಅನಗತ್ಯ ಹೊರೆಯನ್ನು ಹೊತ್ತಿರುವ ಗಂಡಿನ ಬಗ್ಗೆ ಕರುಣೆಯಿಂದ, ವಿಷಾದದಿಂದ ನೋಡುತ್ತಾ, ‘ಅಯ್ಯಾ ಈಗಲಾದರೂ ಬದುಕುವ ದಾರಿ ನೋಡಿಕೊಳ್ಳಬಾರದೆ ’ಎನ್ನುವ ಧಾಟಿ ಇದೆ ಇಲ್ಲಿ.

ಯಾವ ಹೊತ್ತಿನಲ್ಲಿ, ಹೇಗೆ ಬಂದರೂ ಬಾನ್ ಸಾಯ್ ಅರಳಿ ಮರ ನಿನ್ನ ಪಾಲಿಗೆ ಇರುತ್ತದೆ ಎನ್ನುವ ಭರವಸೆಯನ್ನು ಕವಿ ಕೊಡುತ್ತಿದ್ದಾರೆ. ಇದು ಗಂಡು ಹೆಣ್ಣಿನ ನಡುವೆ ಇರುವ ಗುಣಾತ್ಮಕವಾದ ವ್ಯತ್ಯಾಸ. ಸೋತು ಬಂದವರನ್ನು ಹೆಣ್ಣು ಆತುಕೊಂಡು ಪೊರೆಯುವಂತೆ ಗಂಡು ಎಂದೂ ಪೊರೆಯಲಾರ. ತನ್ನ ಶಕ್ತಿಯ ಅರಿವೇ ಹೆಣ್ಣಿಗೆ ಶ್ರೀರಕ್ಷೆ, ತನ್ನನ್ನು ಕುಬ್ಜನಾಗಿಸಿದ ಗಂಡಿನ ಬಗ್ಗೆ ಅವಳು ದ್ವೇಷ ತಾಳುವುದಿಲ್ಲ. ಬದಲಿಗೆ ತನ್ನೊಳಗೆ ತನ್ನ ಆಳ ಮತ್ತು ಎತ್ತರವನ್ನು ಪರಿಭಾವಿಸಿಕೊಳ್ಳುತ್ತಾ, ತನ್ನ ಚೈತನ್ಯದ ಬಲದಿಂದಲೇ ಇಡೀ ಲೋಕವನ್ನು ಎದುರಿಸಲು ಸನ್ನದ್ಧಳಾಗುತ್ತಾಳೆ.

ಇನ್ನೊಂದು ಕವಿತೆ ‘ಕ್ರಾಸ್ ಸ್ಟಿಚ್’. ಇದಂತೂ ಹೆಣ್ಣು ಮಾತ್ರ ಸೃಷ್ಟಿಸಬಹುದಾದ ರೂಪಕ. ಹೆಣಿಗೆ ಮತ್ತು ಹೊಲಿಗೆಗಳು ಹೆಣ್ಣು ಬಿಡುವಿನ ಸಮಯವನ್ನು ಕಳೆಯಲೋ ತನ್ನ ಕಲಾತ್ಮಕತೆಯನ್ನು ಅಭಿವ್ಯಕ್ತಿಸಲೋ ಇರುವ ನಗಣ್ಯ ಅಸಾಮಾಜಿಕ ಕ್ರಿಯೆಗಳು ಎನ್ನುವ ಮಿಥ್ಯೆಯೊಂದಿದೆ. ಆದರೆ ನಿಜವೆಂದರೆ ಈ ಎರಡೂ ಹೆಣ್ಣು ತನ್ನ ಬದುಕು, ಸಂಸಾರ, ಸಂಸಾರ ವಿಶ್ವ ಮತ್ತು ವಿಶ್ವ ಸಂಸಾರ ಈ ಎಲ್ಲದರ ಜೊತೆ ತನ್ನನ್ನು ಹೆಣೆದುಕೊಳ್ಳುವ, ಹೊಲಿದುಕೊಳ್ಳುವ ಅಪೂರ್ವ ಸೃಜನಶೀಲ ಕ್ರಿಯೆಗಳು. ಯಾವುದರಿಂದಲೂ ಬಿಡಿಸಿಕೊಳ್ಳುವುದಲ್ಲ, ಸಾಂಗತ್ಯ ಮತ್ತು ಹೆಣಿಗೆ ಅವಳ ದೃಷ್ಟಿಕೋನ, ಬದುಕಿನ ದಾರಿ, ವ್ಯಕ್ತಿತ್ವ, ಚಹರೆ, ಏನೆಂದರೆ ಏನೆಲ್ಲವೂ ಆಗಿವೆ.

ಹೂ ಹೊಲಿಗೆಗಳ
ನಡು ಹಗಲುಗಳು
ಭೂಮಿಯನ್ನು ಮುಚ್ಚಲು
ಹೊದಿಕೆ ನೇಯುವ ಹೊತ್ತು
ಕ್ರಾಸ್ ಸ್ಟಿಚ್ ಸಾಲುಗಳ ನಡುವೆ
ಒಂದು ಅಂತರ್ವೀಕ್ಷಣೆ


ಅದೆಷ್ಟು ಸರಳವಾಗಿ ಆದರೆ ಕಾವ್ಯದ ಪರಿಭಾಷೆಯಲ್ಲಿ ಗೀತಾ ಹೆಣ್ಣು ಮತ್ತು ಪ್ರಕೃತಿಯ ನಡುವಿನ ಸಾವಯವ ಸಂಬಂಧವನ್ನು, ತನ್ನ ಆಸರೆಗಾಗಿ, ಧೈರ್ಯಕ್ಕಾಗಿ, ಮಾದರಿಗಾಗಿ ಹೆಣ್ಣು ನಿರಂತರವಾಗಿ ಪ್ರಕೃತಿಯೊಂದಿಗೆ ತನ್ನ ಸಂವಾದವನ್ನು ಜಾರಿಯಲ್ಲಿಟ್ಟಿರುತ್ತಾಳೆ ಎನ್ನುವುದನ್ನು ತಮಗೂ ಲೋಕಕ್ಕೂ ಮನದಟ್ಟು ಮಾಡಿಸುತ್ತಾರೆ. ಯಾಂತ್ರಿಕ ಹಗಲು ಹೂ ಹೊಲಿಗೆಯ ಕಲಾತ್ಮಕ ಅಭಿವ್ಯಕ್ತಿಯಾಗಿ ಕಾಣುವುದು ಹೆಣ್ಣಿಗೆ ಮಾತ್ರವೇನೋ. ಕ್ರಾಸ್ ಸ್ಟಿಚ್ ಎನ್ನುವುದೇ ಹೆಣ್ಣಿನ ಬದುಕಿನ ಉದ್ದ ಅಡ್ಡಗಳ ವಿಲಕ್ಷಣ ಸ್ವರೂಪವನ್ನು, ಅದರ ಸಂಕೀರ್ಣತೆಯನ್ನು ಧ್ವನಿಸುತ್ತದೆ.

ಈ ಕ್ರಾಸ್ ಸ್ಟಿಚ್ ಅವಳ ಬದುಕು ಗಂಡಿನಂತೆ ನೇರವಲ್ಲ, ಬಿಡುಬೀಸಲ್ಲ, ಊರ್ಧ್ವಮುಖಿಯೂ ಅಲ್ಲ, ಅದು ಏರುತ್ತಾ ಇಳಿಯುತ್ತದೆ. ಇಳಿಯುತ್ತಾ ಏರುತ್ತದೆ. ಇದು ಸಾಮಾಜಿಕ ರಾಜಕೀಯ ವಾಸ್ತವ. ಆದರೆ ಇದಕ್ಕೆ ಮನೋವಿನ್ಯಾಸದ ವ್ಯಾಖ್ಯಾನವೂ ಒಂದಿದೆ. ಅದು ಹೆಣ್ಣಿನ ಮನೋವಿನ್ಯಾಸದ ಭಿತ್ತಿಯೂ ಹೌದು. ಯಾವುದನ್ನು ಚಂಚಲತೆಯೆಂದು, ಅವಗುಣವಾಗಿ, ದೌರ್ಬಲ್ಯವಾಗಿ ಸ್ಥಾಪಿಸಲಾಗಿದೆಯೋ ಅದು ವಾಸ್ತವದಲ್ಲಿ ಹಲವನ್ನು ಏಕಕಾಲದಲ್ಲಿ ನಿಭಾಯಿಸಬಲ್ಲ ವಿಶಿಷ್ಟ ಶಕ್ತಿ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.

ಕವಿತೆಯ ಮುಂದುವರಿದ ಭಾಗದಲ್ಲಿ ಪ್ರೀತಿಯ ಹೊಳೆಯಲ್ಲಿ ನೋವುಣ್ಣುತ್ತಾ ಹರಿಹರಿದು ಬರುವ ಹುಡುಗಿ ಚಾದರ ಹೊಲಿಯುವ ವಿವರ ಬರುತ್ತದೆ, ಹರಿಹರಿದು ಎನ್ನುವುದಕ್ಕೆ ಅವಳು ಹರಿಯುತ್ತಾ ಸಾಗುವ ಮತ್ತು ಛಿದ್ರಗೊಳ್ಳುತ್ತಾ ಹೋಗುವ ಎರಡೂ ಅರ್ಥಗಳು ಹೆಣ್ಣಿನ ಗುಣ, ಸವಾಲು ಮತ್ತು ವಾಸ್ತವಗಳನ್ನು ಸೂಚಿಸುತ್ತವೆ. ಆದರೆ ಅವಳು ಈ ಯಾವ ಸಂದರ್ಭದಲ್ಲೂ ಹೂಹುಡುಗಿಯ ಮೂಲಗುಣವನ್ನು ಕಳೆದುಕೊಳ್ಳದೇ ಚಾದರಗಳನ್ನು ಹೊಲಿಯುತ್ತಾ ಹೋಗುತ್ತಾಳೆ, ಹೆಚ್ಚುತ್ತಾ ಹೋಗುವ ಹೊಲಿಗೆಯದ್ಭುತ ಚಿತ್ರಗಳು ಸುಂದರ ಹೆಣಿಗೆಯ ಮಾದರಿಗಳು ಅವು ಸಂದರ ಮಾತ್ರವೆ?

ಅವು ಕೇವಲ ಸುಂದರ ವಸ್ತುಗಳು ಮಾತ್ರವಾಗಿದ್ದರೆ ಅವುಗಳ ಉಪಯುಕ್ತತೆಯೂ ಸೀಮಿತವಾಗಿಬಿಡುತ್ತಿತ್ತು. ಇವಳು ಹೆಣೆಯುವ ಚಾದರಗಳು ಇದನ್ನೂ ಮೀರಿದ ನೆಲೆಯಲ್ಲಿ ಅವಶ್ಯಕ ವಸ್ತುವೂ ಹೌದು, ಗೃಹಿಣಿ ಹೊಲಿದ ಚಾದರ ಮನೆಯ ಗಾಯಗಳ ಮಾಯಿಸುವುದಕ್ಕೆ ಮೇಲ್ನೋಟಕ್ಕೆ ಬಿಡುವನ್ನು ಉಪಯುಕ್ತವಾಗಿ ಕಳೆಯಲು ಕಲಿತ ವಿದ್ಯೆಯಂತೆ ಕಂಡರೂ ಆ ಕ್ರಾಸ್ ಸ್ಟಿಚ್‌ಗಳು ಹೆಣ್ಣು ಆಡುತ್ತಿರುವ ಮಾತುಗಳಂತೆಯೂ ಕವಿಗೆ ಭಾಸವಾಗುತ್ತದೆ.

ಸಾಲುಗಳ ನಡುವೆ ಓದಿದರೆ
ಎಲ್ಲ ಪಾಠಗಳಲ್ಲೂ ಇದೆ
ಹೊಚ್ಚ ಹೊಸ ತಿಳಿವು
ಒಂದೊಂದು ಹೊಲಿಗೆಯೂ
ಒಂದೊಂದು ಹೊಸ ವರ್ಣ–ಚಿತ್ರ
ಹೊಚ್ಚ ಹೊಸ ನಿಗೂಢ ವರ್ಣಮಾಲೆ
ಹೊಚ್ಚ ಹೊಸ ತಿಳಿವು ಹೆಣ್ಣಿಗೆ ತನ್ನ ಬಗ್ಗೆ, ಗಂಡಿಗೆ ಹೆಣ್ಣಿನ ಬಗ್ಗೆ. ಆದರೆ, ಸಾಮಾನ್ಯವಾಗಿ ಹೀಗೆ ಓದುವುದಿಲ್ಲ ಹೆಣ್ಣನ್ನು.
ಒಂದು ಮೂಕ ಸಂಜ್ಞೆ
ಯಾವ ಕಡೆಯಿಂದ ನೋಡಿದರೂ
ಒಂದು ನಿಷೇಧ ಚಿನ್ಹೆ

.......
ಎರಡು ಗೆರೆ ಸೇರಿ
ಹುಟ್ಟಿದ ನಿಷೇಧ ಚಿನ್ಹೆ
ಹೆಂಗಸು!


ಆದರೆ ನಿಷೇಧದ ತನ್ನ ನೋಟವನ್ನೇ ಹೆಣ್ಣು ಪಲ್ಲಟಗೊಳಿಸಬಹುದು. ಅವಳು ತನ್ನ ಕೈಯಲ್ಲಿರುವ ಸೂಜಿ ಮತ್ತು ದಾರದಿಂದ ಮಾತ್ರವಲ್ಲ ತನ್ನ ಮನಸ್ಸಿನ ಸೂಜಿ ಮತ್ತು ದಾರದಿಂದಲೂ ಕವಿತೆ, ಕತೆ, ಅಡುಗೆ ಮನೆ, ಆಫೀಸು ಎಲ್ಲವನ್ನೂ ನೇಯುತ್ತಾ ಹೋಗುತ್ತಾಳೆ. ಹೀಗೆ ನೇಯುತ್ತಾ ಹೋಗುವ ಅವಳನ್ನು–ತನ್ನ ಕೊಕ್ಕಿನಲ್ಲಿ ಪ್ರೀತಿಯನ್ನು ಕಚ್ಚಿಕೊಂಡು ಇತಿಹಾಸದಿಂದ ಭವಿಷ್ಯಕ್ಕೆ ಹಾರುವ ಹಕ್ಕಿಯಲ್ಲ ಅವಳನ್ನು ಎಚ್ಚರಿಸುತ್ತದೆ ಕವಿತೆಯ ಸ್ಫೋಟಕ ಭಾಗವಿರುವುದು ಅದರ ಕೊನೆಯಲ್ಲಿ.

ಈ ತನಕ ತನ್ನನ್ನು ತಾನು ಅರಿಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಕವಿಗೆ, ತನ್ನ ಅರಿವಿನಷ್ಟೇ ಅವನ ಅರಿವೂ ಮುಖ್ಯ ಎಂದು ಅರಿವಾದದ್ದೇ– ನಿನಗೆ ತಿಳಿದದ್ದು ತಿಳಿಯದ್ದು ಕಂಡದ್ದು ಕಾಣದ್ದು ಎಲ್ಲವೂ ಹೆಣ್ಣಿನ ಸಂಕೇತಗಳೆನಬೇಡ ಈ ಸಂಕೇತಗಳ ತಪ್ಪು ಓದು ನಿನ್ನನ್ನು ಅಗ್ನಿದಿವ್ಯಕ್ಕೊಡುತ್ತದೆ ಎಂದು ಗಂಡಿಗೆ ಸೂಚನೆಯನ್ನೂ ಮಾರ್ಗದರ್ಶನವನ್ನೂ ಅರಿವನ್ನೂ ಕೊಡುವ ಪ್ರಯತ್ನ ಮಾಡುತ್ತಾರೆ. ಈ ಕವಿತೆಗಳನ್ನು ಶಕ್ತವಾಗಿ ಅನುವಾದ ಮಾಡಿದ ಸ. ಉಷಾ ಅವರ ಕವಿತೆಯ ಕೆಲವು ಸಾಲುಗಳಿಂದ ಮುಗಿಸುವುದಾದರೆ, ಗಾಳಿ ಬೆಳಕಿಲ್ಲದ ಹೆಣವಾಗಲು ನಿನ್ನ ದಮ್ಮಯ್ಯಾ ನನ್ನ ಕೈಲಾಗೋದಿಲ್ಲ ನೀ ಹಾಕು ಇರುವ ಆಣೆಕಟ್ಟೆ ಒಡೆದು ಬಿರುಮಳೆಗೆ ಸೊಕ್ಕಿ ಭೋರ್ಗರೆದು ನುಗ್ಗಿ ನಿನ್ನಂತಾಗದೆ ಬದುಕುತ್ತೇನೆ ನನಗೆ ದಾರಿ ಬಿಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT