ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಕುಗ್ರಾಮ, ಈಗ ನೀರಿನ ಪಾಠ ಶಾಲೆ!

ಬರ, ಎಂದೆಂದಿಗೂ ದೂರ
Last Updated 3 ಮೇ 2017, 19:30 IST
ಅಕ್ಷರ ಗಾತ್ರ
ಶ್ರೀ ಪಡ್ರೆ
ಮಾಮೂಲಿ ಮಳೆಗಿಂತ ಕಮ್ಮಿ ಮಳೆ. ಎಷ್ಟೋ ವರ್ಷಗಳಿಂದ ಟ್ಯಾಂಕರ್ ನೀರು ನಂಬಿ ಬದುಕು. ಕೃಷಿ ನಂಬಿದ ಹಳ್ಳಿಗರ ಗುಳೆ. ಇಂಥಾ ಕುಗ್ರಾಮಗಳ ಬಗ್ಗೆ ಕಾಳಜಿ ವಹಿಸುವವರು ಯಾರು. ಮೊನ್ನೆಮೊನ್ನೆಯವರೆಗೂ ದೇಶದ ಹಲವು ನತದೃಷ್ಟ ಹಳ್ಳಿಗಳ ಹಾಗೆಯೇ ಇತ್ತು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವೇಲು.
 
ಸತಾರಾದ ದಂತವೈದ್ಯ, ಜಲತಜ್ಞ ಡಾ.ಅವಿನಾಶ್ ಪೋಲ್ ಅವರ ಮಾರ್ಗದರ್ಶನ ಈ ಗ್ರಾಮ ಕೋರಿಕೊಂಡದ್ದು ಹಿಂದಿನ ವರ್ಷ. ‘ಶ್ರಮದಾನಕ್ಕೆ ನೀವು ಸಿದ್ಧರಾದರೆ ನಾನು ಒಂದು ದಿನ ಬಂದು ಮುಂದಿನ ದಾರಿ ಹೇಳಿಕೊಡುತ್ತೇನೆ’ ಎಂದರು ಪೋಲ್. ಊರಿಡೀ ಎದ್ದು ನಿಂತಿತು. ಡಾಕ್ಟರರ ಸಲಹೆಯಂತೆ ಮಳೆ ತಡೆಯಲು ಅಲ್ಲಲ್ಲಿ ಸೂಕ್ತ ರಚನೆ ಮಾಡಿತು. ಜತೆಗೆ ಪಾನಿ ಫೌಂಡೇಶನಿನ ‘ಸತ್ಯಮೇವ ಜಯತೆ’ ವಾಟರ್ ಕಪ್ – 1 ರಲ್ಲಿ ಭಾಗವಹಿಸಿತು. ಇದು 2016ರ ಸಾಲಿನ ಬೆಳವಣಿಗೆ.
 
ಜೂನ್ ತಿಂಗಳಲ್ಲಿ ನಾವು ಭೇಟಿ ಕೊಟ್ಟಾಗ ಆಗಷ್ಟೇ ಮೊದಲ ಮೂರು ಸೆಂಟಿಮೀಟರ್ ಮಳೆ ಸುರಿದಿತ್ತು. ಗುಡ್ಡ ನೆತ್ತಿಯಿಂದ ಆರಂಭಿಸಿ ಎಲ್ಲಿ ನೋಡಿದರೂ ಸೀಸಿಟಿ (ಕಂಟಿನ್ಯುವಸ್ ಕಂಟೂರ್  ಟ್ರೆಂಚ್  - ಉದ್ದನೆಯ ಸಮತಳ ಕಣಿ), ಆಳದ ಸಮತಳ ಕಣಿ, ಕೆಳಗೆ ಬಂದಂತೆಲ್ಲಾ ಲೂಸ್ ಬೋಲ್ಡರ್ ಬಂಡ್ (ಎಲ್ ಬಿ ಎಸ್ – ಬಿಡಿ ಕಲ್ಲುಗಳ ತಡೆಗಟ್ಟ), ಮಾತಿ ಬಾಂದ್ (ಮಣ್ಣಿನ ಕಟ್ಟ) ಮೊದಲಾದ ರಚನೆಗಳು.
 
ಅಷ್ಟರಲ್ಲೇ ಬತ್ತಿದ ಬಾವಿಗಳಲ್ಲಿ ನೀರು ಕಾಣಿಸಿಕೊಂಡು ಹಳ್ಳಿ ಟ್ಯಾಂಕರುಗಳಿಗೆ ವಿದಾಯ ಹೇಳಿತ್ತು. ಕೃಷಿಕರು ಉತ್ಸಾಹದಿಂದ ಬ್ಯಾಂಕ್ ಸಾಲ ಪಡೆದು ಹನಿ ನೀರಾವರಿ ಅಳವಡಿಸಹೊರಟಿದ್ದರು. ಇಡೀ ಗ್ರಾಮಕ್ಕೊಂದು ಸುತ್ತು ಹಾಕಿ ಹಿಂತಿರುಗಿದಾಗ ಡಾಕ್ಟರ್ ಉದ್ಗರಿಸಿದ್ದೇನು ಗೊತ್ತೇ? ‘ಇನ್ನು ಎಂದೆಂದಿಗೂ ಬರ ಈ ಗ್ರಾಮವನ್ನು  ಬಾಧಿಸದು’.
 
 
ಪಾನಿ ಫೌಂಡೇಶನ್ ಸ್ಪರ್ಧೆಯಲ್ಲಿ ವೇಲು ಪ್ರಥಮ ಸ್ಥಾನ ಗೆದ್ದಿತು. ಆಗಸ್ಟ್ 15ರಂದು ನಡೆದ ಕಾರ್ಯಕ್ರಮದಲ್ಲಿ₹50 ಲಕ್ಷ ಬಹುಮಾನ. ಬಹುಮಾನ ಕೊಟ್ಟ ಮುಖ್ಯಮಂತ್ರಿ ರಾಜ್ಯ ಸರಕಾರದ ವತಿಯಿಂದ ₹25 ಲಕ್ಷ ಕೊಟ್ಟರು. ಒಂದು ಸರಕಾರೇತರ ಸಂಸ್ಥೆ ₹ ಐದು ಲಕ್ಷ ನೀಡಿತು. ಪಾನಿ ಫೌಂಡೇಶನ್ ಕೊಡಮಾಡಿದ ಮೊತ್ತವನ್ನು ಗ್ರಾಮ ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿದೆ.
 
ಆದರೆ ಇದಕ್ಕಿಂತ ದೊಡ್ಡ ಠೇವಣಿ ಊರು ಭೂಮಿಯಲ್ಲಿ ಹೂಡಿತ್ತು– ಅದುವೇ ಮಳೆನೀರು ಮತ್ತು ಮೇಲ್ಮಣ್ಣು ತಪ್ಪಿಸಿಕೊಂಡು ಹೋಗದಂತಹ ನೆಲಜಲ ಸಂರಕ್ಷಣಾ ರಚನೆಗಳ ಜಾಲ. ಎಷ್ಟೋ ವರ್ಷಗಳಿಂದ ರಾಬಿ (ಎರಡನೆಯ ಬೆಳೆ) ಫಸಲು ಕೈಗೆ ಹತ್ತದ ಊರಲ್ಲೀಗ ಮನೆಮನೆಗಳಲ್ಲಿ ಆರೆಂಟು ಕ್ವಿಂಟಲ್ ಧಾನ್ಯವಿದೆ.
 
ಕುತೂಹಲಕಾರಿ ವಾಸ್ತವ ಅಂದರೆ, ಇಲ್ಲಿ ಕಳೆದ ವರ್ಷ ಬಿದ್ದ ಮಳೆ ಕೇವಲ 275 ಮಿಲಿಮೀಟರ್. ಅಂದರೆ, ನಮ್ಮ ಕರ್ನಾಟಾಕದ ಮಲೆನಾಡುಗಳಲ್ಲಿ ಒಂದು ದಿನ ಸುರಿಯುವಷ್ಟು! ಹಿಂದಿನ ವರ್ಷವೂ ಅಷ್ಟೇ ಮಳೆ ವೇಲುವಿಗೆ ಸಿಕ್ಕಿತ್ತು. ಆದರೆ ಮಳೆನೀರು ತಡೆಯುವ ವ್ಯವಸ್ಥೆ ಇಲ್ಲದೆ ಬಿದ್ದದ್ದೆಲ್ಲವೂ ಹೊರಹರಿದು ಊರಿನ ಕೃಷ್ಯುತ್ಪಾದನೆಯ ಕನಸು ಕಮರಿ ಹೋಗಿತ್ತು.
 
63ರ ಹರೆಯದ ದುರ್ಯೋಧನ ಪಾಂಡುರಂಗ ನಾನಾವರೆ ಬೊಟ್ಟುಮಾಡುತ್ತಾರೆ, ‘ಮಳೆ ಬಂದು ಗಂಟೆಯೊಳಗೆ ನೆರೆ  ಗ್ರಾಮಕ್ಕೆ ಓಡುತ್ತಿದ್ದ ಮಳೆನೀರು ಕಳೆದ ಸಾರಿ ಆಗಸ್ಟ್ ವರೆಗೂ  ಹರಿಯಲೇ ಇಲ್ಲ. ಅದೇ ನೋಡಿ ಇಪ್ಪತ್ತು ಬಾರಿ ಜಗ್ಗಿದರಷ್ಟೇ ನೀರು ಕಕ್ಕುತ್ತಿದ್ದ ಹ್ಯಾಂಡ್ ಪಂಪಿಗೆ ಈಗ ಎರಡು ಜಗ್ಗಾಟ ಸಾಕು’.
 
ನೋಡಿ ಕಲಿಯಲು, ಕೇಳಿ ಕಲಿಯಲು ಸಾಕಷ್ಟಿರುವ ವೇಲು ಗ್ರಾಮವನ್ನು ಎರಡನೆಯ ವರ್ಷದ ಸ್ಪರ್ಧೆಯ ತಯಾರಿಗೆ ತರಬೇತಿ ಕೇಂದ್ರವಾಗಿ ಪಾನಿ ಫೌಂಡೇಶನ್ ಆಯ್ಕೆ ಮಾಡಿತು. ಸ್ಪರ್ಧೆಗೆ ಅರ್ಜಿ ಹಾಕಿದ ಗ್ರಾಮಗಳು ತಮ್ಮಲ್ಲಿಂದ ಐವರು ಪ್ರತಿನಿಧಿಗಳನ್ನು – ಇವರಲ್ಲಿ ಇಬ್ಬರು ಹೆಣ್ಮಕ್ಕಳೂ – ಕಳಿಸಿ ಜಲಾನಯನ ಅಭಿವೃದ್ಧಿಯ ತರಬೇತಿ ಕೊಡಿಸಬೇಕು. 
 
40 ದಿನಗಳ ತರಬೇತಿ ಅವಧಿಯಲ್ಲಿ ವೇಲು ಸಾವಿರ ಮಂದಿಗೆ ತರಬೇತಿ ಕೊಟ್ಟಿದೆ. ತರಬೇತಿಯ ಮುಖ್ಯ ಪಾತ್ರ ‘ ವೋಟ್ರ್’ – WOTR , Watershed Organisation Trust  ಸಂಸ್ಥೆಯದು. ಈ ಸಂಸ್ಥೆ ‘ವಾಟರ್ ಕಪ್’ ಸ್ಪರ್ಧೆಯ ಆಯೋಜನೆಯಲ್ಲಿ ಪಾನಿ ಫೌಂಡೇಶನಿನ ಜ್ಞಾನ ಪಾಲುದಾರ. 
 
ಹಸಿರುಗೊಡೆ ಸೃಷ್ಟಿಸಲು ಊರವರು ನೆಟ್ಟ ಗಿಡಗಳಿಗೆ ನೀರು ಹನಿಸಲೆಂದೇ ವೇಲು ಪ್ರಶಸ್ತಿಯ ಹಣದಲ್ಲಿ ಹತ್ತು ಲಕ್ಷ ವೆಚ್ಚ ಮಾಡಿ ಒಂದು ಟ್ಯಾಂಕರ್ ಕೊಂಡುಕೊಂಡಿದೆ. ಈ ಗ್ರಾಮದ ಕೆಲವು ಉತ್ಸಾಹಿಗಳು ಈ ವರ್ಷದ ಸ್ಪರ್ಧೆಯಲ್ಲಿ ತಾಂತ್ರಿಕ ಸಮನ್ವಯಕಾರರಾಗಿ ಕೆಲಸ ಮಾಡಲು ಮುಂದೆ ಬಂದು ತರಬೇತಿ ಪಡೆದು ಈಗ  ಬೇರೆಬೇರೆ ಹಳ್ಳಿಗಳಲ್ಲಿ ‘ದಾರಿ ತೋರುವ’ ಕೆಲಸ ಮಾಡುತ್ತಿದ್ದಾರೆ. 
 
ನೀರಿನ ಯಶೋಗಾಥೆಯ ಬಗ್ಗೆ ಉಲ್ಲೇಖಿಸುವಾಗ ರಾಳೆಗಾಂವ್ ಶಿದ್ದಿ, ಹಿವರೆ ಬಝಾರುಗಳಂಥಹ ಹೆಸರುಗಳ ಜತೆ ವೇಲುವಿನದೂ ಇನ್ಮುಂದೆ ಸೇರಿಕೊಳ್ಳಲಿದೆ. 
***
ಈಗ ಇದು ಪ್ರವಾಸಿ ತಾಣ
ಇದಲ್ಲದೆ ರಾಜ್ಯದ ವಿವಿಧೆಡೆಗಳಿಂದ ಆಸಕ್ತ ಹಳ್ಳಿಗರು ವೇಲುವಿಗೆ ತಂಡತಂಡವಾಗಿ ಬರುತ್ತಿದ್ದಾರೆ. ವಾರಕ್ಕೆರಡು ತಂಡವಾದರೂ ಭೇಟಿ ಕೊಡದೆ ಇರುವುದಿಲ್ಲ. ವಾರಾಂತ್ಯ, ರಜಾದಿನಗಳಲ್ಲಿ ಹೆಚ್ಚು. ಎರಡು ವರ್ಷ ಹಿಂದೆ ಹೆಚ್ಚಿನವರೂ ಹೆಸರೇ ಕೇಳದಿದ್ದ ವೇಲು ಈಗ ಮಾಧ್ಯಮದವರ ಅಚ್ಚುಮೆಚ್ಚಿನ ಗುರಿ. ನ್ಯಾಶನಲ್ ಜಿಯೋಗ್ರಫಿ ವಾಹಿನಿಯ ತಂಡವೂ ಬಂದು ಚಿತ್ರೀಕರಿಸಿ ಹೋಗಿದೆ.
***
ಇಪ್ಪತ್ತು ವರ್ಷದಿಂದ ಟ್ಯಾಂಕರ್ ಅವಲಂಬಿಸಿದ ನಮಗೆ ಈ ವರ್ಷ ಅದು ಈ ವರೆಗೂ ಬೇಕಾಗಿಲ್ಲ. ಅಂದರೆ ನಮ್ಮ ಗ್ರಾಮ ಟ್ಯಾಂಕರ್ ಪ್ರೂಫ್ ಆಯಿತೆಂದೇ ಲೆಕ್ಕ
ಪ್ರವೀಣ್ ಭೋಸ್ಲೆ, ಗ್ರಾಮ ಸರಪಂಚಿಣಿ ಪೂನಮ್ ಭೋಸ್ಲೆ ಅವರ ಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT