ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಗೆ ಕಾಂಕ್ರೀಟ್‌ ಒಡ್ಡು: ಬರಕ್ಕೆ ಗುದ್ದು!

Last Updated 19 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕುಮಟಾ: ಇದು ಕುಮಟಾ–ಹೊನ್ನಾವರ ಪಟ್ಟಣದಲ್ಲಿ ಕಂಡುಕೊಂಡ ನೀರ ನೆಮ್ಮದಿಯ ಕತೆ.

ಪಕ್ಕದಲ್ಲಿಯೇ ಸಮುದ್ರ ಇದೆ. ಆದರೆ ಕಳೆದ ವರ್ಷ ಈ ಪಟ್ಟಣದಲ್ಲಿ ಕುಡಿಯಲು ನೀರು ಇರಲಿಲ್ಲ. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಎರಡು ದಿನಕ್ಕೊಮ್ಮೆ,  ಮೂರು ದಿನಕ್ಕೊಮ್ಮೆ, ವಾರಕ್ಕೊಮ್ಮೆ  ಆಗಿ ಕೊನೆಗೆ  ಸತತ ಹದಿನೈದು ನೀರಿಲ್ಲದೆ ಪಟ್ಟಣದ ಜನರು ಪರಿತಪಿಸುವಂತಾಗಿತ್ತು.

ಹೀಗೆ ನೀರಿಗೆ ಹಾಹಾಕಾರ ಎದ್ದಾಗಲೇ ಎಚ್ಚೆತ್ತುಕೊಂಡ  ಸ್ಥಳೀಯ ಪುರಸಭೆ  ಪಟ್ಟಣದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಮುಚ್ಚಿ ಹೋಗಿದ್ದ ತೆರೆದ ಬಾವಿಗಳನ್ನು ದುರಸ್ತಿಗೊಳಿಸಿತು. ಅವಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಮರಾಕಲ್ ಯೋಜನೆಯ  ಪ್ರದೇಶದ ಅಘನಾಶಿನಿ ನದಿಯೊಳಗಿನ ಉಸುಕಿನ ದಿಬ್ಬಗಳನ್ನು ಜೇಸಿಬಿ ಯಂತ್ರಗಳಿಂದ ಸೀಳಿ ಹಾಕಿ ಅಳಿದುಳಿದ ನೀರು ಹರಿದು ಬಂದು ಒಂದು ಕಡೆ ನಿಲ್ಲುವಂತೆ ಮಾಡಿತು. ಅದನ್ನು ವಾರಕ್ಕೊಮ್ಮೆ ಜನರಿಗೆ ಪೂರೈಸುತ್ತಾ ಬೇಸಿಗೆ ದಿನಗಳನ್ನು ಹಾಗೂ ಹೀಗೂ  ನೂಕಲಾಯಿತು.

ಇಷ್ಟಾಗುವಾಗ ನದಿ ಸಂಪೂರ್ಣ ಬತ್ತಿ ಹೋಯಿತು. ಇದನ್ನೇ ಬಳಸಿಕೊಂಡ ಪುರಸಬೆಯ ಅಧಿಕಾರಿಗಳು ಕೊನೆಯ ಪ್ರಯತ್ನ ಎನ್ನುವಂತೆ ಮರಾಕಲ್  ಯೋಜನೆಯ ಜಾಕ್‌ವೆಲ್ ಪ್ರದೇಶದ 500 ಮೀಟರ್ ಕೆಳ ಭಾಗದಲ್ಲಿ ನದಿಯ ಮಧ್ಯೆ ಸುಮಾರು 70 ಮೀಟರ್ ಉದ್ದ, ಐದು ಅಡಿ ಆಳ ಹಾಗೂ ಐದು  ಅಡಿ ಅಗಲದ ಸಿಮೆಂಟ್ ಕಾಂಕ್ರೀಟ್‌ನ ಶಾಶ್ವತ ಒಡ್ಡು ನಿರ್ಮಿಸಿತು.  ಜೆಸಿಬಿ ಯಂತ್ರ, ಲಾರಿಗಳೆಲ್ಲ ಕಲ್ಲು, ಉಸುಕು, ಸಿಮೆಂಟ್ ಹೊತ್ತು
ಒಣಗಿದ ನದಿಯಂಗಳದೊಳಗೇ ಓಡಾಡಿದ್ದವು.

ಅನಧಿಕೃತ ಕೃಷಿ ಪಂಪ್ ಗಳು: ಕಳೆದ ವರ್ಷದ ಬಿರು ಬಿಸಿಲಿಗೆ ನದಿಯಲ್ಲಿ ನೀರು ಸಂಪೂರ್ಣ ಒಣಗಿ ಹೋಗಲು ಇನ್ನೂ ಒಂದು ಕಾರಣವಿತ್ತು. ನದಿಯಂಚಿನ ಹತ್ತಾರು ಗ್ರಾಮಗಳ  ನೂರಾರು ಕೃಷಿಕರು ಅನಧಿಕೃತವಾಗಿ ನದಿಗೆ ಪಂಪ್ ಸೆಟ್ ಅಳವಡಿಸಿ ಹಗಲು–ರಾತ್ರಿ ನೀರೆತ್ತಿ ಬಳಕೆ ಮಾಡಿಕೊಳ್ಳುತ್ತಿದ್ದರು. ಇದನ್ನು ಅರಿತ ಪುರಸಭೆ ಮುಖ್ಯಾಧಿಕಾರಿಗಳು, ಜಿಲ್ಲಾಧಿಕಾರಿಗೆ ಪತ್ರ ಬರೆದು ಇದನ್ನು ತೆರವುಗೊಳಿಸಲು ಕೋರಿಕೊಂಡರು.  ಅದರಂತೆ ಎಲ್ಲ ಅನಧಿಕೃತ ಪಂಪ್ ಸೆಟ್ ಗಳನ್ನು ಕಿತ್ತು ಹಾಕಲಾಯಿತು.

ಕಳೆದ ವರ್ಷ ಮರಾಕಲ್ ಬಳಿ ಅಘನಾಶಿನಿ ನದಿಗೆ ಕಟ್ಟಿದ್ದ ಐದು ಅಡಿ ಎತ್ತರದ ಒಡ್ಡಿನ ಮೇಲೆ ಈಗ  ನೀರು ಧುಮುಕಿ ಕೆಳಭಾಗದಲ್ಲಿ ಹರಿಯುತ್ತಿದೆ.
ನದಿಯಲ್ಲಿ ಆದಷ್ಟು ಹೆಚ್ಚಿನ ಪ್ರಮಾಣದ ನೀರು ಉಳಿಸಿಕೊಳ್ಳಲು ಪುರಸಭೆ ಅಧಿಕಾರಿಗಳು ಒಡ್ಡಿನ ಮೇಲೆ ಮತ್ತೆ ಮೂರು  ಹಂತದಲ್ಲಿ ಉಸುಕಿನ ಚೀಲ ಪೇರಿಸಿದ್ದಾರೆ. ಕಳೆದ ವರ್ಷ ಒಡ್ಡು ಕಟ್ಟಲು ಜೇಸಿಬಿ ಯಂತ್ರ, ಲಾರಿಗಳು ಓಡಾಡಿದ ಜಾಗದಲ್ಲಿ ಸುಮಾರು 5ರಿಂದ ಎಂಟು ಅಡಿಗಳಷ್ಟು ನಿರು ಸಂಗ್ರಹವಾಗಿದೆ.

‘ಮರಾಕಲ್ ಕುಡಿಯುವ ನೀರಿನ ಯೋಜನೆ ಆರಂಭವಾಗಿ ಸುಮಾರು 20 ವರ್ಷಗಳಾಗಿವೆ. ಆದರೆ ಒಮ್ಮೆಯೂ  ನದಿಯಲ್ಲಿ ನೀರು ಕಡಿಮೆಯಾಗಿ ಸಮಸ್ಯೆ ಉಂಟಾಗಿರಲಿಲ್ಲ. ಕಳೆದ ವರ್ಷದ ಸಮಸ್ಯೆ ನಮಗೆಲ್ಲ ಅನಿರೀಕ್ಷಿತವಾಗಿತ್ತು.  ನೀರಿನ ಕೊರತೆಯಿಂದ ಉಂಟಾದ ಸಮಸ್ಯೆ ನಿವಾರಿಸಲು ಕಳೆದ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ನಾವ್ಯಾರು ಸರಿಯಾಗಿ ನಿದ್ದೆ ಮಾಡಿಲ್ಲ.  ನದಿಗೆ ಒಡ್ಡು ನಿರ್ಮಾಣ ಸೇರಿದಂತೆ ಕೆಲ ನಿಷ್ಠುರ ಕ್ರಮ ಕೈಕೊಳ್ಳದಿದ್ದರೆ ಈ ವರ್ಷ ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾಗುತ್ತಿತ್ತು’ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಸಂತೋಷ ನಾಯ್ಕ ಹಾಗೂ ಮುಖ್ಯಾಧಿಕಾರಿ ಎಂ.ಕೆ. ಸುರೇಶ್. ನದಿಗೆ ಒಡ್ಡು ಕಟ್ಟಿದ್ದ ಪ್ರದೇಶದಿಂದ ಸುಮಾರು 500 ಮೀಟರ್ ಮೇಲ್ಭಾಗದಲ್ಲಿ ನೀರೆತ್ತುವ ಜಾಕ್ ವೆಲ್‌ ಅಳವಡಿಸಿದ್ದಲ್ಲಿ  ಈಗ ಸಮೃದ್ಧ ನೀರು ಸಂಗ್ರಹವಾಗಿದೆ. ಯಾವುದೇ ಕಾರಣಕ್ಕೂ ಇನ್ನು ಒಂದೂವರೆ ತಿಂಗಳು ಕುಮಟಾ–ಹೊನ್ನಾವರ ಪಟ್ಟಣಕ್ಕೆ ಅನಾಯಾಸವಾಗಿ ನೀರು ಪೂರೈಕೆ ಮಾಡಬಹುದಾಷ್ಟು ನೀರಿನ ಸಂಗ್ರಹವನ್ನು ಒಡ್ಡು ಕಟ್ಟಿದ ಪ್ರದೇಶದಲ್ಲಿ ಅಘನಾಶಿನಿ ನದಿ ಹಿಡಿದಿಟ್ಟುಕೊಂಡಿದೆ.
–ಎಂ.ಜಿ. ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT