ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಿನ ಮಳೆಹನಿ ಠೇವಣಿಯಾದಾಗ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಐದು ವರ್ಷಗಳ ಹಿಂದೆ ಅದು ಬರಡು ಭೂಮಿ. ಗುಡ್ಡದ ಮೇಲೆ ಕಲ್ಲು ಮುಳ್ಳುಗಳಿದ್ದ ಆ ಮಣ್ಣಿನಲ್ಲಿ ಜೀವಜಲದ ಸೆಲೆ ಕನಸಿನ ಮಾತಾಗಿತ್ತು. ಹುಲ್ಲುಕಡ್ಡಿಯೂ ಬೆಳೆಯಲು ಅಸಾಧ್ಯವಾದ ಅದೇ ನೆಲದಲ್ಲಿ ಇಂದು ಬಂಗಾರದ ಬೆಳೆ ತೆಗೆಯಲಾಗುತ್ತಿದೆ. ಇದು ಸಾಧ್ಯವಾಗಿದ್ದು ಅಲ್ಲಿ ನಡೆದ ಜಲಪವಾಡದಿಂದ!

ಹೌದು, ಈ ರೀತಿಯ ಪವಾಡ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಗ್ರಾಮದಲ್ಲಿ. ಬೆಂಗಾಡಿನಲ್ಲಿ ಹಸಿರ ಹೊದಿಕೆಯನ್ನು ಹಾಕಿದವರು ಒಬ್ಬ ಕಾಲೇಜು ಪ್ರಾಧ್ಯಾಪಕ. ಜೀವಜಲದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸಹ ಪ್ರಾಧ್ಯಾಪಕ ಎನ್‌.ಎಂ. ಜೋಸೆಫ್‌ ಅವರು ಬರಡು ಭೂಮಿಯಲ್ಲಿ ಸಮೃದ್ಧವಾಗಿ ಸೊಪ್ಪು– ತರಕಾರಿ, ಹಣ್ಣು ಮತ್ತು ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ.

2014ರಲ್ಲಿ ಜೋಸೆಫ್‌ ತಮ್ಮ ಮನೆಯಲ್ಲೇ ‘ಮಳೆ ನೀರು ಸಂಗ್ರಹ’ ವ್ಯವಸ್ಥೆಯನ್ನು ಸುಮಾರು ₹5ರಿಂದ 6 ಲಕ್ಷ ವೆಚ್ಚದಲ್ಲಿ ಅಳವಡಿಸಿಕೊಂಡ ಪರಿಣಾಮವಾಗಿ ಜಲ ಸಂಗ್ರಹದಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ.

ವರ್ಷಕ್ಕೆ ಸುಮಾರು ಏಳು ಲಕ್ಷ ಲೀಟರ್‌ ನೀರನ್ನು ಭೂಮಿತಾಯಿಯ ಮಡಿಲಿಗೆ ಧಾರೆ ಎರೆಯುವ ಮೂಲಕ ತಮ್ಮ ಮನೆಯ ಬಾವಿ ಮತ್ತು ಕೊಳವೆಬಾವಿಯ ಜಲಮೂಲವನ್ನು ಶ್ರೀಮಂತಗೊಳಿಸಿದ್ದಾರೆ. ಹೀಗಾಗಿ, ವರ್ಷವಿಡೀ ನೀರಿನ ಲಭ್ಯತೆ ಇರುವುದರಿಂದ ಬೇಸಿಗೆಯಲ್ಲೂ ಕೈತೋಟದಲ್ಲಿ ಉತ್ತಮ ಇಳುವರಿ ಸಿಗುತ್ತಿದೆ.

ಈ ನೀರಿನಿಂದಲೇ 9 ತಳಿಯ ಬಾಳೆ, 12 ತಳಿಯ ತೆಂಗು, ನಾಲ್ಕೈದು ತಳಿಯ ಮಾವು, ಅನಾನಸು, ಪಪ್ಪಾಯ, ಪೇರಳೆ, ರಂಬೂಟನ್‌, ಸಪೋಟ ಗಿಡ ಬೆಳೆಸಿದ್ದಾರೆ. ಅದರ ಜತೆಗೆ ವೆಲ್ವೆಟ್‌ ಬೀನ್ಸ್‌, ಅಲಸಂದೆ, ಬದನೆ, ತೊಂಡೆಕಾಯಿ, ಸೌತೆ, ಮುಳ್ಳುಸೌತೆ, ಗೆಣಸು, ಮರಗೆಣಸು, ಶುಂಠಿ, ಹರಿವೆ, ಕೊತ್ತಬರಿ, ಕಾಯಿಮೆಣಸು, ಕುಂಬಳಕಾಯಿ, ಬೂದುಕುಂಬಳಕಾಯಿ ಸೇರಿದಂತೆ ಇನ್ನೂ ಅನೇಕ ಸೊಪ್ಪು– ತರಕಾರಿಗಳೂ ಇವೆ. ಇವುಗಳ ಮಧ್ಯೆ ಔಷಧೀಯ ಸಸ್ಯಗಳಾದ ಕಹಿಬೇವು, ನೋನಿ, ಕೃಷ್ಣ ತುಳಸಿ, ತುಳಸಿ, ಬ್ರಾಹ್ಮಿ, ಅಮೃತಬಳ್ಳಿಗಳು ನಳನಳಿಸುತ್ತಿವೆ.

ದೂರದೃಷ್ಟಿಯ ಚಿಂತನೆ: 2011ರಲ್ಲಿ ಮನೆ ನಿರ್ಮಾಣಕ್ಕಾಗಿ 60 ಸೆಂಟ್ಸ್‌ ಜಾಗ ಖರೀದಿಸಿದ್ದಾಗ ಆ ಜಾಗದಲ್ಲಿದ್ದ 40 ಅಡಿ ಆಳದ ಬಾವಿಯಲ್ಲಿ ಗಮನಿಸಿ ಆಗಲೇ ಯೋಜನೆ ರೂಪಿಸಿದ್ದರು. ಇದರಿಂದ ಮನೆ ನಿರ್ಮಾಣದ ಒಟ್ಟು ಖರ್ಚಿನ ಶೇ 10ರಷ್ಟು ಬಂಡವಾಳವನ್ನು ಮಳೆ ನೀರು ಸಂಗ್ರಹ ವ್ಯವಸ್ಥೆಗೆ ಕಾಯ್ದಿರಿಸಿದ್ದರು.

ಅದರಂತೆ ಎರಡು ಮಹಡಿ ಕಟ್ಟಡದ ಮೇಲೆ ಮಳೆನೀರಿನ ಸಂಗ್ರಹಕ್ಕೆ 2,700 ಚದರ ಅಡಿ ವಿಸ್ತೀರ್ಣಕ್ಕೆ ತಗಡಿನ ಚಾವಣಿ ಹಾಕಿಸಿದ್ದರು. 2ನೇ ಮಹಡಿ ಮೇಲೆಯೇ 22 ಸಾವಿರ ಲೀಟರ್‌ ನೀರನ್ನು ಸಂಗ್ರಹಿಸುವ ದೂರದೃಷ್ಟಿಯಿಂದಲೇ ಜೋಸೆಫ್‌ ಮನೆಯನ್ನು 16 ಬೀಮ್‌ ಬಳಸಿ ಭದ್ರವಾಗಿ ಕಟ್ಟಿಸಿದರು.

ಅದರಿಂದಾಗಿ ಈಗ ನೀರನ್ನು ಪೈಪ್‌ಗಳ ಮೂಲಕ 500 ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗೆ ಹರಿಸಿ, ಅಲ್ಲಿ ಶುದ್ಧೀಕರಿಸಿದ ನಂತರ ಒಂದಕ್ಕೊಂದು ಜೋಡಿಸಿದ ಎರಡು ಸಾವಿರ ಲೀಟರ್ ಸಾಮರ್ಥ್ಯದ 11 ಟ್ಯಾಂಕ್‌ಗಳಲ್ಲಿ ಸಂಗ್ರಹಿಸುತ್ತಾರೆ. ಮಹಡಿ ಮೇಲಿನ ಟ್ಯಾಂಕ್‌ನಲ್ಲಿ ಹೆಚ್ಚುವರಿ ನೀರನ್ನು ಅಂಗಳದ ನೆಲದಡಿ ಟ್ಯಾಂಕ್‌ ನಿರ್ಮಿಸಿ ಅದರಲ್ಲಿ 50ಸಾವಿರ ಲೀಟರ್‌ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ.

ಅದೂ ಭರ್ತಿಯಾದ ಬಳಿಕ ಹೆಚ್ಚುವರಿ ನೀರನ್ನು ಪೈಪ್‌ನ ಮೂಲಕ 40 ಅಡಿ ಆಳದ ಬಾವಿಗೆ ಮತ್ತು 360 ಅಡಿ ಆಳದ ಕೊಳವೆಬಾವಿಗೆ ಜಲಮರುಪೂರಣ ಮಾಡುತ್ತಿದ್ದಾರೆ. ನೀರನ್ನು ಮೇಲೆತ್ತಲು ಉಪಯೋಗಿಸುವ ಪೈಪ್‌ನ ಮೂಲಕವೇ ನೀರನ್ನು ಇಳಿಸುವ ಪ್ರಯೋಗದಲ್ಲಿಯೂ ಯಶಸ್ವಿಯಾಗಿದ್ದಾರೆ. ಪ್ರತಿ ವರ್ಷ ಅಂದಾಜು ಎರಡು ಲಕ್ಷ ಲೀಟರ್‌ ನೀರನ್ನು ಬಾವಿಗೆ, 4ರಿಂದ 5 ಲಕ್ಷ ಲೀಟರ್‌ ನೀರು ಕೊಳವೆಬಾವಿಗೆ ಮರುಪೂರಣ ಮಾಡುತ್ತಿದ್ದಾರೆ.

‘ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರತಿವರ್ಷ ಸರಾಸರಿ 4,000 ಮಿಲಿ ಮೀಟರ್‌ ಮಳೆಯಾಗುತ್ತದೆ. ಹಿಂದಿನ ವರ್ಷ 10.07 ಲಕ್ಷ ಲೀಟರ್‌ ಮಳೆ ನೀರನ್ನು ಹಿಡಿದಿಟ್ಟಿದ್ದೇನೆ. ಇದರಲ್ಲಿ ಅಂದಾಜು ಮೂರು ಲಕ್ಷ ಲೀಟರ್‌ ನೀರನ್ನು ಜೂನ್‌ನಿಂದ ಜನವರಿವರೆಗೆ ಮನೆ ಮತ್ತು ಕೈತೋಟಕ್ಕೆ ಬಳಸಿದ್ದೇವೆ.

ಈ ಅವಧಿಯಲ್ಲಿ ನಮಗೆ ಜೆಟ್‌ ಪಂಪ್‌ ಬಳಸುವ ಅಗತ್ಯವಿಲ್ಲ. ಆದ್ದರಿಂದ, ಮಳೆ ನೀರು ಸಂಗ್ರಹ ವ್ಯವಸ್ಥೆಗೆ ನಾವು ಖರ್ಚು ಮಾಡಿದ ಹಣವನ್ನು ಹೀಗೆ ಗಳಿಸುತ್ತಿದ್ದೇವೆ’ ಎನ್ನುತ್ತಾರೆ.

‘ದಿನಕ್ಕೆ ಸರಾಸರಿ 1,200 ಲೀಟರ್‌ ನೀರು ನಮಗೆ ಬೇಕಾಗುತ್ತದೆ. ಈತನಕ ನೀರಿನ ಕೊರತೆ ಉಂಟಾಗಲಿಲ್ಲ. ಜೂನ್‌ನಿಂದ ನವೆಂಬರ್‌ವರೆಗೆ ಮಹಡಿ ಮೇಲಿನ ಟ್ಯಾಂಕ್‌ನಲ್ಲಿ ಸಂಗ್ರಹವಾದ ಮಳೆ ನೀರನ್ನು ಬಳಸಿದರೆ, ನಂತರದ ಒಂದೂವರೆ ತಿಂಗಳು ಅಂಗಳದಲ್ಲಿರುವ ಟ್ಯಾಂಕ್‌ನ ನೀರನ್ನು ಉಪಯೋಗಿಸುತ್ತೇವೆ. ಅದೂ ಮುಗಿದ ಬಳಿಕ ಬಾವಿಯ ಮತ್ತು ಕೊಳವೆಬಾವಿಯ ನೀರನ್ನು ಬಳಸುತ್ತೇವೆ. ಕೊಳವೆಬಾವಿಯಲ್ಲಿ ನೀರು ಸಮೃದ್ಧವಾಗಿದ್ದು, ನಾವು ಅಗತ್ಯಕ್ಕೆ ತಕ್ಕಷ್ಟೇ ಬಳಸುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಜೋಸೆಫ್‌ ಅವರು ತಮ್ಮ ಬಾವಿ ಮತ್ತು ಕೊಳವೆಬಾವಿಗೆ ಜಲ ಮರುಪೂರಣ ಮಾಡುತ್ತಿರುವುದರಿಂದ ಅವರಿಗೆ ಲಾಭವಾಗಿದ್ದು ಮಾತ್ರವಲ್ಲ, ನಾನು ಕೂಡ ಅದರ ಪರೋಕ್ಷ ಫಲಾನುಭವಿ. ಹಿಂದೆ ಫೆಬ್ರುವರಿಯಲ್ಲೇ ನಮ್ಮ ಬಾವಿ ನೀರಿಲ್ಲದೆ ಬತ್ತುತ್ತಿತ್ತು. ಈಗ ಏಪ್ರಿಲ್‌ನಲ್ಲಿಯೂ ನೀರು ಲಭ್ಯವಿದೆ’ ಎನ್ನುತ್ತಾರೆ ಪಕ್ಕದ ಮನೆಯ ಶೋಭಾ.

‘ನೀರು ಉಳಿತಾಯಕ್ಕೆ  ನಮ್ಮಿಂದ ಸಾಧ್ಯವಾದ ಸಣ್ಣ ಪ್ರಯತ್ನ ಪ್ರತಿ ಮನೆಯಲ್ಲೂ ನಡೆಯಬೇಕು. ಆಕಾಶದಿಂದ ಉದುರುವ ‘ಮುತ್ತಿನ ಹನಿ’ಗಳನ್ನು ಸಂಗ್ರಹಿಸಿ, ಭವಿಷ್ಯಕ್ಕೆ ಠೇವಣಿ ಇಟ್ಟಾಗ ಮಾತ್ರ ಜಲಕ್ಷಾಮದ ಸಮಸ್ಯೆಯಿಂದ ಮುಕ್ತಿಹೊಂದಬಹುದು’ ಎನ್ನುತ್ತಾರೆ ಜೋಸೆಫ್‌.

* ಮಳೆ ನೀರು ಸಂಗ್ರಹ ವ್ಯವಸ್ಥೆಗೆ ₹ 5ರಿಂದ 6ಲಕ್ಷ ವೆಚ್ಚ
* 2700 ಚದರ ಅಡಿಯ ಚಾವಣಿಯಲ್ಲಿ ಮಳೆ ನೀರು ಸೆರೆ
* 2016ರಲ್ಲಿ 10.07 ಲಕ್ಷ ಲೀಟರ್‌ ಮಳೆ ನೀರು ಸಂಗ್ರಹ
* 3 ಲಕ್ಷ ಲೀಟರ್‌ ಬಳಕೆ, 7 ಲಕ್ಷ ಲೀಟರ್‌ ಜಲ ಮರುಪೂರಣ

ಜೋಸೆಫ್‌ ಅವರ ಸಂಪರ್ಕಕ್ಕೆ: 94800 93347 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT