ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯಪ್ರಜ್ಞೆಯ ಮಹತ್ವ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪೊಲೀಸರು ಸಮಾಜದ ಹಿತದೃಷ್ಟಿಯಿಂದ ಯೋಚಿಸಿದರೆ ಯಾವುದೇ ಗಲಭೆಗಳನ್ನು ಹತ್ತಿಕ್ಕಬಹುದು. ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆಯ ಸಮಯದಲ್ಲಿ ಕಾನೂನಿನ ಕುರಿತು ವ್ಯಾಪಕವಾಗಿ ಮಾತನಾಡುತ್ತಾರೆ. ಜನ ಸಾಮಾನ್ಯರಿಗೆ ಅವರಲ್ಲಿ ಅನೇಕರದ್ದು ಗೋಸುಂಬೆತನ ಎಂಬುದು ಗೊತ್ತಿರುತ್ತದೆ. ಆದರೆ, ಒಂದು ಕಡೆ ಕಾನೂನಿನ ದುರುಪಯೋಗ ಮಾಡಿಕೊಳ್ಳುವವರೇ ಏನೇನೋ ವಿಶ್ಲೇಷಣೆ ಮಾಡಲು ಪ್ರಾರಂಭಿಸುತ್ತಾರೆ. ಪ್ರತಿಭಟನೆ, ಮೆರವಣಿಗೆಗಳು ಹಠಾತ್ತನೆ ಒಡ್ಡುವ ಸಂಕಷ್ಟಗಳು ಅನುಭವಿಸುವ ಪೊಲೀಸರಿಗೇ ಗೊತ್ತು.

ಒಮ್ಮೆ ನಿರ್ದಿಷ್ಟ ಜಾತಿಯ ಸ್ವಾಮೀಜಿಯೊಬ್ಬರು ಮೆರವಣಿಗೆ ಬಂದರು. ತುಮಕೂರು ಜಿಲ್ಲೆಯಿಂದ ಪಾದಯಾತ್ರೆಯಲ್ಲೇ ಅವರು ಬೆಂಗಳೂರಿಗೆ ಬಂದಿದ್ದರು. ತುಸು ವಿರಮಿಸಿದ ನಂತರ, ರೈಲ್ವೆ ಸ್ಟೇಷನ್‌ನಿಂದ ವಿಧಾನಸೌಧದವರೆಗೆ ಮೆರವಣಿಗೆ ಮುಂದುವರಿಯಿತು. 2000 ಜನರ ಭಾರೀ ಮೆರವಣಿಗೆ ಅದು. ನಾನು ಆಗ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದೆ. ನಾವು ಅವರನ್ನು ಕೆ.ಆರ್. ಸರ್ಕಲ್ ಕಡೆಯಿಂದ ಬಿಟ್ಟಿದ್ದರೆ ಎಲ್ಲೆಡೆ ವಾಹನ ಸಂಚಾರ, ಜನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ದಿಢೀರನೆ ಅಷ್ಟೊಂದು ಜನರ ಮೆರವಣಿಗೆಯಿಂದ ಆಗಬಹುದಾದ ಅನಾಹುತಗಳ ಅರಿವು ನಮಗಿತ್ತು. ಅವರಿಗೆ ಅದನ್ನು ಬಿಡಿಸಿ ಹೇಳಿದರೂ ಕೇಳಲು ಸಿದ್ಧರಿರಲಿಲ್ಲ. ಆಗ ಗಾಂಧಿನಗರದಲ್ಲಿ ಇದ್ದ ಸೆಂಟ್ರಲ್ ಜೈಲಿನ ಆವರಣದಲ್ಲಿ (ಈಗಿನ ಫ್ರೀಡಂ ಪಾರ್ಕ್) ಕೂರಿಸಿ ಪರಿಸ್ಥಿತಿಯನ್ನು ವಿವರಿಸಿದೆವು. ಅವರು ವಿಧಾನಸೌಧದವರೆಗೆ ಹೋಗಲು ಅನುಮತಿ ನೀಡಲೇ ಬೇಕೆಂದು ಆಗ್ರಹಿಸಿ ನಿರಶನಕ್ಕೆ ನಿರ್ಧರಿಸಿದರು. ಆ ಸ್ವಾಮೀಜಿ ಹಾಗೂ ಅವರ ಅನುಯಾಯಿಗಳ ಮಾತು ಕೂಡ ಹ್ದ್ದದುಮೀರಿದ್ದಾಗಿತ್ತು.

ಎಸ್.ಎಂ.ಕೃಷ್ಣ ಆಗ ಮುಖ್ಯಮಂತ್ರಿಯಾಗಿದ್ದರು. ಧರ್ಮಸಿಂಗ್ ಹಿರಿಯ ಮಂತ್ರಿ. ಅಂದು ಭಾನುವಾರ. ರಜಾದಿನ. ಒಬ್ಬ ಸ್ವಾಮೀಜಿ ಹಾಗೆ ದೀರ್ಘಕಾಲ ನಿರಶನ ಕೂತರೆ ಅದು ರಾಜ್ಯದಾದ್ಯಂತ ಹಬ್ಬಿ ಉಳಿದೆಡೆಗಳಲ್ಲೂ ಪ್ರತಿಭಟನೆಗೆ ಕಾರಣವಾಗುತ್ತದೆ. ಹಾಗಾಗಿ ನಾವು ಸರ್ಕಾರಕ್ಕೆ ಮನವಿ ಮಾಡಿ, ಯಾರಾದರೂ ಜನಪ್ರತಿನಿಧಿ ಬಂದು ಅವರೊಡನೆ ಮಾತನಾಡಬೇಕು ಎಂದು ಕೇಳಿಕೊಂಡೆವು.

ಧರ್ಮಸಿಂಗ್ ಅಲ್ಲಿಗೆ ಬಂದು ಸ್ವಾಮೀಜಿಗೆ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ಓಲೈಸುವಲ್ಲಿ ಯಶಸ್ವಿಯಾದರು. ಸ್ವಾಮೀಜಿಗೆ ಹಣ್ಣಿನ ರಸ ನೀಡಿ ನಿರಶನ ಮುರಿಯುವಂತೆ ಕೋರಿದರು. ಆದರೆ, ಮಾಧ್ಯಮದವರು ಬರಬೇಕು. ಅವರ ಎದುರಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು ಎಂದು ಸ್ವಾಮೀಜಿ ಪಟ್ಟುಹಿಡಿದರು. ದಿಢೀರನೆ ಮಾಧ್ಯಮದವರನ್ನು ಅಲ್ಲಿಗೆ ಕರೆಸುವುದು ಆ ಕಾಲಘಟ್ಟದಲ್ಲಿ ಸುಲಭವಿರಲಿಲ್ಲ. ಅಂದು ಭಾನುವಾರವಾದ್ದರಿಂದ ಸುದ್ದಿಯ ಭರಾಟೆ ಕಡಿಮೆ. ಪತ್ರಕರ್ತರು ಕೂಡ ನಿರಾಳವಾಗಿದ್ದರು.

ನಮಗೆಲ್ಲಾ ಒಂದು ಯೋಚನೆ ಹೊಳೆಯಿತು. ಮದುವೆಮನೆಗಳಲ್ಲಿ ಫೋಟೋ ತೆಗೆಯುವ ಕೆಲವರನ್ನು ಕ್ಯಾಮೆರಾಗಳ ಸಮೇತ ಬರುವಂತೆ ಕರೆಸಿದೆವು. ಕೆಲವು ಪರಿಚಯಸ್ಥರನ್ನು ಕರೆಸಿ, ಪತ್ರಕರ್ತರಂತೆ ವರ್ತಿಸುವಂತೆ ಸೂಚನೆ ಕೊಟ್ಟೆವು. ಸ್ವಾಮೀಜಿ ಹಾಗೂ ಅವರ ಅನುಯಾಯಿಗಳು ಕ್ಯಾಮೆರಾ ಕಣ್ಣುಗಳನ್ನು ಹಾಗೂ ಅಕ್ಷರ ಬರೆದುಕೊಂಡ ಪೆನ್ನುಗಳನ್ನು ನೋಡಿ ನಿಜಕ್ಕೂ ಎದುರಿದ್ದವರೆಲ್ಲಾ ಮಾಧ್ಯಮದವರೇ ಇರಬೇಕು ಎಂದುಕೊಂಡರು. ಮುಖ್ಯಮಂತ್ರಿಯೇ ಬರಬೇಕೆಂದು ಕೂಡ ಕೆಲವರು ಪಟ್ಟು ಹಿಡಿದರು. ಇನ್ನೇನೋ ಸುಳ್ಳು ಹೇಳಿ ಅವರೆಲ್ಲರನ್ನು ಓಲೈಸಿದ್ದಾಯಿತು.

ಪತ್ರಕರ್ತರಂತೆ ನಟಿಸಿದ ಫೋಟೋಗ್ರಾಫರ್‌ಗಳಲ್ಲಿ ಕೆಲವರು ಬರೀ ಫ್ಲ್ಯಾಷ್ ಬೆಳಕು ಮಾತ್ರ ಮೂಡಿಸಿ ಹುಸಿನಗೆ ನಕ್ಕಿದ್ದರು. ಕೊನೆಗೂ ಸ್ವಾಮೀಜಿ ಸಮಾಧಾನಿತರಾಗಿ ಅಲ್ಲಿಂದ ಹೋದರು. ನಿರಶನದಿಂದ ಆಗಬಹುದಿದ್ದ ಅನಾಹುತವನ್ನು ತಪ್ಪಿಸಿದ ತೃಪ್ತಿ ನಮ್ಮೆಲ್ಲರದ್ದಾಗಿತ್ತು. 
* * *
ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ರಾಜ್‌ಕುಮಾರ್ ಹೆಸರನ್ನು ಇಟ್ಟಾಗ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದರು. ಆಗ ಅನೇಕರು ಅಘೋಷಿತ ಮೆರವಣಿಗೆ ನಡೆಸಿದರು. ರಾಜಾಜಿನಗರ, ಸುಬ್ರಹ್ಮಣ್ಯನಗರ, ಗಾಯತ್ರಿನಗರ ಹಾಗೂ ಈ ಪ್ರದೇಶಗಳಿಗೆ ಹೊಂದಿಕೊಂಡ ಸ್ಥಳಗಳಲ್ಲಿ ಆ ದಿನ ಹಬ್ಬದ ವಾತಾವರಣ. ರಾಜ್‌ಕುಮಾರ್ ಅವರನ್ನು ಒಮ್ಮೆಯಾದರೂ ಕಣ್ತುಂಬಿಕೊಳ್ಳುವ ಉದ್ದೇಶದಿಂದ ಅನೇಕರು ರಸ್ತೆಗೆ ಇಳಿದಿದ್ದರು.

ಶಿಲಾನ್ಯಾಸ ನಡೆಯಿತು. ನಂತರ ವಿಧಾನಸೌಧಕ್ಕೆ ಹೋಗಿ ರಾಜ್‌ಕುಮಾರ್ ಪ್ರಶಸ್ತಿಯೊಂದನ್ನು ಸ್ವೀಕರಿಸಿ, ಅಲ್ಲಿ ಮಾತನಾಡುವವರಿದ್ದರು. ಹಲವೆಡೆ ಅವರ ಸಣ್ಣ ಭೇಟಿಗಳು ನಿಗದಿಯಾಗಿದ್ದವು. ಎಲ್ಲೆಲ್ಲಿ ಅಂಥ ಸಮಾರಂಭಗಳಾಗುತ್ತವೋ ಅಲ್ಲಿಗೆ ಪೊಲೀಸರು ರಾಜ್‌ಕುಮಾರ್ ಅವರೊಡನೆ ಸ್ಥಳಾಂತರಗೊಳ್ಳಬೇಕೆಂದು ನಿಗದಿಯಾಗಿತ್ತು. ಭಾಷಾ ವಿಷಯದಲ್ಲಿ ಅವೆಲ್ಲವೂ ಸೂಕ್ಷ್ಮ ಪ್ರದೇಶಗಳಾದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂಬ ಸೂಚನೆ ಎಲ್ಲಾ ಪೊಲೀಸರಿಗೂ ಇತ್ತು.
ಸುಬ್ರಹ್ಮಣ್ಯನಗರದ ರಸ್ತೆಯೊಂದರಲ್ಲಿ ಪೊಲೀಸ್ ವ್ಯಾನ್ ಇದ್ದ ಸ್ಥಳದಲ್ಲೇ ಅಸಂಖ್ಯಾತ ಜನ ಸೇರಿದ್ದರು. ಅವರನ್ನು ಚದುರಿಸಿ ವ್ಯಾನ್ ಹಿಂದೆ ತೆಗೆಯಬೇಕಾಗಿತ್ತು. ಆ ವ್ಯಾನ್ ಬಳಿ ಇದ್ದ ಪೊಲೀಸರು ಯತ್ನಿಸಿದರೂ ಜನರನ್ನು ಚದುರಿಸಲು ಆಗಲಿಲ್ಲ.

ಅನಿವಾರ್ಯವಾಗಿ ವ್ಯಾನನ್ನು ಜನರಿದ್ದಾಗಲೇ ನಿಧಾನವಾಗಿ ಹಿಂದಕ್ಕೆ ತೆಗೆಯಬೇಕಾಯಿತು. ಆಗ ಜನ ತಾವಾಗಿಯೇ ಚದುರಿದರು. ಮೊಂಡು ವ್ಯಕ್ತಿಯೊಬ್ಬ ಅಲ್ಲಾಡಲೇ ಇಲ್ಲ. ಅಕಸ್ಮಾತ್ತಾಗಿ ಅವನ ಕಾಲಿನ ಮೇಲೆ ವ್ಯಾನ್ ಹರಿದು, ರಕ್ತಸೋರತೊಡಗಿತು. ಬೇಕೆಂದೇ ಪೊಲೀಸರು ವ್ಯಾನ್ ಹತ್ತಿಸಿದ್ದಾರೆಂದು ಗುಲ್ಲೆದ್ದಿತು. ನೋಡನೋಡುತ್ತಲೇ ಅದು ಗಲಭೆಯಾಗಿ ಮಾರ್ಪಟ್ಟಿತು. ಕೆಲವು ದುಷ್ಕರ್ಮಿಗಳು ಆ ವ್ಯಾನ್‌ಗೆ ಬೆಂಕಿ ಇಟ್ಟರು. ಕೆಲವು ಹಿರಿಯ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸದೆ ಸುಮ್ಮನೆ ನಿಂತುಬಿಟ್ಟರು.

ಮರಿಸ್ವಾಮಿಗೌಡ ಹಾಗೂ ಎಸ್.ಡಿ.ವೆಂಕಟಸ್ವಾಮಿ ಎಂಬ ಸಬ್ ಇನ್ಸ್‌ಪೆಕ್ಟರ್‌ಗಳೊಡನೆ ನಾನು ಇನ್ನೊಂದು ತಂಡ ಕಟ್ಟಿಕೊಂಡು ಬೇರೆ ಸ್ಥಳಕ್ಕೆ ಹೊರಡುವ ಸಿದ್ಧತೆಯಲ್ಲಿದ್ದೆ. ಅಷ್ಟರಲ್ಲಿ ಬೆಂಕಿ ಹಚ್ಚಿದ ಸುದ್ದಿ ಗೊತ್ತಾಯಿತು. ಯಾವುದೇ ಕಾರಣಕ್ಕೂ ಬೆಂಕಿ ಹೊತ್ತಿಕೊಳ್ಳಲು ಬಿಡಬೇಡಿ ಎಂದೆ. ನಮ್ಮ ಸಹೋದ್ಯೋಗಿ ಪೊಲೀಸರು ತಮ್ಮ ಕೈಗಳಿಂದಲೇ ಮಣ್ಣೆತ್ತಿಕೊಂಡು ಟೈರ್ ಮೇಲೆ ಸುರಿದು ಅದಕ್ಕೆ ಹೊತ್ತಿದ್ದ ಬೆಂಕಿಯನ್ನು ಬೇಗನೆ ಆರಿಸಿದರು. ಗಲಭೆಕೋರರಿಗೆ ತಮ್ಮ ತಂತ್ರ ಫಲ ನೀಡಲಿಲ್ಲವಲ್ಲ ಎಂಬ ಹತಾಶೆ. ಅವರು ಇನ್ನಷ್ಟು ಕೂಗಲಾರಂಭಿಸಿ, ಗಲಭೆ ವ್ಯಾಪಕವಾಯಿತು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು. ಪೊಲೀಸರಿಗೆ ಅದು ಸವಾಲೊಡ್ಡಿದ ಸಂದರ್ಭ. ಚಿಕ್ಕಪೇಟೆ ಎಸಿಪಿ ಅವರ ವೈಫಲ್ಯದಿಂದಲೇ ಹೀಗಾಯಿತು ಎಂದು ಗೂಬೆ ಕೂರಿಸಿದರು. ವಿಚಾರಣೆ ನಡೆದಾಗ, `ಅದು ಅವರ ವೈಫಲ್ಯವಲ್ಲ. ಅಲ್ಲಿದ್ದವರ ವೈಫಲ್ಯ~ ಎಂಬುದನ್ನು ನಾನು ಸ್ಪಷ್ಟಪಡಿಸಿದೆ. ಸ್ವಲ್ಪ ಜಾಗರೂಕತೆಯಿಂದ ವ್ಯಾನನ್ನು ಹಿಂದಕ್ಕೆ ತೆಗೆದಿದ್ದರೆ ಇಷ್ಟು ದೊಡ್ಡ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.

ರಾಜ್‌ಕುಮಾರ್ ಚಿತ್ರಗಳು ಬಿಡುಗಡೆಯಾದ ಮೊದಲ ಕೆಲವು ದಿನ ಪೊಲೀಸರಿಗೆ ವಿಪರೀತ ಕೆಲಸ. ಅಭಿಮಾನಿಗಳು ದಾಂಧಲೆ ಮಾಡುವ ಮಟ್ಟಕ್ಕೆ ಉನ್ಮತ್ತರಾಗಿರುತ್ತಿದ್ದರು. ಚಿತ್ರಮಂದಿರದ ಒಳಗಡೆ ಮೊದಲ ದಿನ `ಡಿಮ್ ಲೈಟ್~ ಹಾಕಿಯೇ ಸಿನಿಮಾ ಪ್ರದರ್ಶಿಸುತ್ತಿದ್ದದ್ದು. ಒಳಗೆ ಅಲ್ಲಲ್ಲಿ ಪೊಲೀಸರು ನಿಯೋಜನೆಗೊಳ್ಳುವುದು ಮಾಮೂಲಾಗಿತ್ತು. ಪರದೆಯ ಮುಂದೆ ಕರ್ಪೂರ ಹಚ್ಚುವುದು, ದೂರದಿಂದ ಚಿಲ್ಲರೆ ಕಾಸು ಎಸೆಯುವುದು, ಸೀಟಿನಿಂದ ಮೇಲೆದ್ದು ಕೂಗಿಕೊಂಡು ಓಡಾಡುವುದು, ಕುಣಿಯುವುದು ಇವೆಲ್ಲವನ್ನೂ ಪ್ರೇಕ್ಷಕರು ಮಾಡುತ್ತಿದ್ದರು. ಅಪ್ಪಿತಪ್ಪಿ ಅದರಿಂದ ಗಲಾಟೆ ಶುರುವಾದರೆ, ಅಲ್ಲಿ ಕಾಲ್ತುಳಿತ ವಾಗುವ ಅಪಾಯವಿರುತ್ತಿತ್ತು. ರಾಜ್‌ಕುಮಾರ್ ಚಿತ್ರಗಳನ್ನು ನೋಡಲು `ಗಾಂಧಿ ಕ್ಲಾಸ್~ನ ಮೊದಲ ಕೆಲವು ಸಾಲುಗಳಲ್ಲಿ ಕೂರುವವರು ಹೆಲ್ಮೆಟ್ ಹಾಕಿಕೊಂಡಿರುತ್ತಿದ್ದರು. ಹಿಂದಿನಿಂದ ಅಭಿಮಾನಿಗಳು ಎಸೆಯುವ ವಸ್ತುಗಳು ತಲೆಮೇಲೆ ಬಿದ್ದರೂ ಪೆಟ್ಟಾಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಅವರು ಹಾಗೆ ಮಾಡುತ್ತಿದ್ದರು.

`ಒಡಹುಟ್ಟಿದವರು~ ಚಿತ್ರ ಬಿಡುಗಡೆಯಾದ ಸಂದರ್ಭ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಆ ಸಿನಿಮಾ ತೆರೆಕಾಣಬೇಕಿತ್ತು. ರಾಜ್‌ಕುಮಾರ್, ಅಂಬರೀಷ್ ಇಬ್ಬರೂ ನಟಿಸಿದ್ದ ಚಿತ್ರ ಅದು. ಬಿಡುಗಡೆಯ ಹಿಂದಿನ ದಿನ ಕಟೌಟ್ ನೋಡಿ, `ಅಂಬರೀಷ್ ಅವರನ್ನು ಅಣ್ಣಾವ್ರಿಗಿಂತ ಎತ್ತರ ಮಾಡಿಬಿಟ್ಟಿದ್ದಾರೆ~ ಎಂದು ಅಭಿಮಾನಿಗಳು ಕೂಗಾಡತೊಡಗಿದರು. ತಕ್ಷಣ ಅಂಬರೀಷ್ ಕಟೌಟ್‌ನ ಕೆಳಭಾಗವನ್ನು ಒಂದಿಷ್ಟು ಕತ್ತರಿಸಿ ಅದನ್ನು ಚಿಕ್ಕದಾಗಿಸಿದ್ದಾಯಿತು. ಪಕ್ಕದಲ್ಲೇ ಇರುವ ಸಂತೋಷ್ ಚಿತ್ರಮಂದಿರದಲ್ಲಿ `ನಿಷ್ಕರ್ಷ~ ಚಿತ್ರ ತೆರೆಕಾಣಬೇಕಿತ್ತು. ವಿಷ್ಣುವರ್ಧನ್ ಕಟೌಟ್ ನೋಡಿದ ರಾಜ್‌ಕುಮಾರ್ ಅಭಿಮಾನಿಗಳು, `ವಿಷ್ಣುವರ್ಧನ್ ನೋಡಿ, ಅಣ್ಣಾವ್ರ ಕಡೆಗೆ ಬಂದೂಕು ತೋರಿಸಿದ್ದಾನೆ~ ಎಂದು ಇನ್ನೊಂದು ಕ್ಯಾತೆ ತೆಗೆದರು. ವಾಣಿಜ್ಯ ಮಂಡಳಿಯವರು ದಿಢೀರನೆ ಆ ಚಿತ್ರವನ್ನು ತ್ರಿವೇಣಿ ಚಿತ್ರಮಂದಿರಕ್ಕೆ ಸ್ಥಳಾಂತರಿಸಿದರು. ಸದ್ಯ ನಿರಾಳವಾಯಿತು ಎಂದುಕೊಂಡು ಮರುದಿನ ಬೆಳಿಗ್ಗೆ ಅಲ್ಲಿಗೆ ಹೋದೆವು.

ಅಭಿಮಾನಿಗಳು ತ್ರಿವೇಣಿ ಚಿತ್ರಮಂದಿರದ ಕಡೆಗೆ ಕೈತೋರಿಸಿ, `ಅಲ್ಲಿ ನೋಡಿ, ನಮ್ಮಣ್ಣನ ಕಡೆಗೇ ಇದೆ ಬಂದೂಕು~ ಎಂದು ಮತ್ತೆ ಆಕ್ಷೇಪ ತೆಗೆದರು. ನಮ್ಮ ಕಾನ್‌ಸ್ಟೇಬಲ್ ಒಬ್ಬರು ನನ್ನ ಕಿವಿಯಲ್ಲಿ ಒಂದು ಸಲಹೆ ಕೊಟ್ಟರು. ನನಗೂ ಅವರು ಹೇಳಿದ್ದು ಸರಿ ಎನಿಸಿತು. `ಸರಿಯಾಗಿ ನೋಡಿ, ವಿಷ್ಣುವರ್ಧನ್ ಕೈಲಿರುವ ಬಂದೂಕು ತ್ರಿಭುವನ್ ಚಿತ್ರಮಂದಿರದ ಕಡೆಗೆ ಇದೆ. ಅಲ್ಲೂ ವಿಷ್ಣುವರ್ಧನ್ ಚಿತ್ರವೇ ಇರುವುದರಿಂದ ಅವರ ಗನ್ನು ಅವರ ಕಡೆಗೇ ಇದೆ~ ಎಂದು ನಾನು ಸಮಾಧಾನಪಡಿಸಿದೆ. ಅದನ್ನು ಕೇಳಿ ಖುಷಿ ಪಟ್ಟ ಪ್ರೇಕ್ಷಕರು, `ಶಿವರಾಮಣ್ಣಂಗೆ ಜೈ~ ಎಂದು ಕೂಗುತ್ತಾ ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಿದರು.

ಸಣ್ಣದಾಗಿ ಕಾಣುವ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಈ ರೀತಿ ಸಮಯಪ್ರಜ್ಞೆ ತೋರದಿದ್ದರೆ ಪರಿಸ್ಥಿತಿ ಪ್ರಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಗೋಕಾಕ್ ಚಳವಳಿ ಸಂದರ್ಭದಲ್ಲಿ ರಾಜ್‌ಕುಮಾರ್ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹಠಾತ್ತನೆ ಅವರನ್ನು ವ್ಯಾನಿನಲ್ಲಿ ಕೂರಿಸಿದಾಗ ಜನ ರೊಚ್ಚಿಗೆದ್ದು ಇಡೀ ವ್ಯಾನನ್ನೇ ಮೇಲೆತ್ತಿದ್ದರ ಕುರಿತು ಹಿಂದೆ ನಾನು ಬರೆದಿದ್ದೆ. ಇಂಥ ಸಂದರ್ಭಗಳಲ್ಲಿ ಬೇಕಿರುವುದು ಸಮಯಪ್ರಜ್ಞೆ.

ಮುಂದಿನ ವಾರ: ಬಾಂಬ್ ಸ್ಫೋಟ: ಸಮಾಜದ ಜವಾಬ್ದಾರಿಗಳು.
ಶಿವರಾಂ ಅವರ ಮೊಬೈಲ್ ನಂಬರ್:  94483 13066 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT