ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಪಾಕ್‌ ನಡುವಿನ ಆ ಕಥನ

Last Updated 18 ಆಗಸ್ಟ್ 2018, 21:05 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನದ ಚುನಾಯಿತ ನಾಯಕರಿಂದ ಶಾಂತಿ ಸಂಧಾನಕ್ಕಾಗಿ ಅತ್ಯಂತ ದಿಟ್ಟತನದಿಂದ ಮತ್ತು ನಾಟಕೀಯವಾಗಿ ನಡೆದ ಪ್ರಯತ್ನದ (ಸಿಮ್ಲಾ ಒಪ್ಪಂದದ ಚೌಕಟ್ಟಿನಾಚೆಗೆ) ಅಜ್ಞಾತ ಕಥನವೊಂದನ್ನು ಹೇಳಲು, ಪಾಕಿಸ್ತಾನದ ಪ್ರಧಾನಮಂತ್ರಿಯಾಗಿಇಮ್ರಾನ್ ಖಾನ್ ಅವರು ಪ್ರಮಾಣವಚನ ಸ್ವೀಕರಿಸಿರುವ ಈ ಸಂದರ್ಭ ಅತ್ಯಂತ ಪ್ರಶಸ್ತವಾಗಿದೆ. ಆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ನಾಯಕರಲ್ಲಿ ಒಬ್ಬರು ಗುರುವಾರ ಅಸ್ತಂಗತರಾಗಿದ್ದಾರೆ. ಮತ್ತೊಬ್ಬರು, ಕ್ರೂರ ರಾವಲ್ಪಿಂಡಿ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ.

ಆ ಸಾಹಸ ಕಥನದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿಯೆಂದರೆ, ಇದೇ ಲೇಖಕನಾದ ನಾನು. ಇವೆಲ್ಲವುಗಳನ್ನೂ ಒಳಗೊಂಡ ಈ ವಾರದ ‘ರಾಷ್ಟ್ರಕಾರಣ’ ಅಂಕಣವು ಒಂದು ಬಗೆಯಲ್ಲಿ ಪ್ರಾಯಶ್ಚಿತ್ತದ ಸ್ವರೂಪದಿಂದಲೂ ಕೂಡಿದೆ.

1997ರಲ್ಲಿ ನವಾಜ್ ಷರೀಫ್ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಏರುವಲ್ಲಿ ಸಫಲರಾಗಿದ್ದರು. ಇದಾದ ಕೆಲವೇ ಸಮಯದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‍ಡಿಎ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆ ಅವಧಿಯಲ್ಲಿ ಒಂದಷ್ಟು ಸಮಯದಿಂದ ಭಾರತ– ಪಾಕಿಸ್ತಾನದ ನಡುವಿನ ಸಂಬಂಧ ತಟಸ್ಥವಾಗಿತ್ತು.

ವಾಜಪೇಯಿ ನೇತೃತ್ವದ ಸರ್ಕಾರ ಜಗತ್ತೇ ನಿಬ್ಬೆರಗಾಗುವಂತೆ ಪೊಖ್ರಾನ್– 2 ಅಣು ಪರೀಕ್ಷೆ ನಡೆಸಿದ್ದರಿಂದ ಹಾಗೂ ಅದಕ್ಕೆ ಪ್ರತಿಯಾಗಿ ಏಟಿಗೆ ಎದಿರೇಟು ಎನ್ನುವಂತೆ ಪಾಕಿಸ್ತಾನವೂ ಚಗೈನಲ್ಲಿ ಪರಮಾಣು ಪರೀಕ್ಷೆ ನಡೆಸಿದ್ದರಿಂದ, ಉಭಯ ರಾಷ್ಟ್ರಗಳ ನಡುವೆ ಪರಮಾಣು ದ್ವಂದ್ವ ಯುದ್ಧವೇ ಏರ್ಪಟ್ಟು ದ್ವಿಪಕ್ಷೀಯ ಸಂಬಂಧ ತೀರಾ ಹದಗೆಟ್ಟಿತು.

ತರುವಾಯ, 1998ರ ಅಂತಿಮ ತ್ರೈಮಾಸಿಕದ ವೇಳೆಗೆ ಎರಡೂ ಕಡೆ ಅಸಹನೆ ಎದ್ದು ಕಾಣುತ್ತಿತ್ತು. ಇಬ್ಬರೂ ಹೊಸ ನಾಯಕರಿಗೆ ಶಾಂತಿ ಸಂಧಾನದ ವೇದಿಕೆ ಅಗತ್ಯವಿತ್ತು. ಆದರೆ, ಇದನ್ನು ಸಾಧಿಸಲು ಎರಡೂ ಕಡೆಯ ವ್ಯವಸ್ಥೆಗಳು ಪರಸ್ಪರ ಅವಿಶ್ವಾಸದಿಂದ ತುಂಬಿಹೋಗಿದ್ದವು. ದೆಹಲಿ– ಲಾಹೋರ್ ನಡುವೆ ಬಸ್ ಸಂಚಾರ ಸೇವೆ ಆರಂಭಿಸುವ ಸಲಹೆ ಕೂಡ ಅಧಿಕಾರಶಾಹಿಯ ಕುತರ್ಕದಂತೆಯೇ ಭಾಸವಾಗುತ್ತಿತ್ತು. ಚಳಿಗಾಲ ಆರಂಭದ ಈ ಸಂದರ್ಭದಲ್ಲಿ, ಪಾಕಿಸ್ತಾನದಿಂದ ನನ್ನ ಅಂಚೆ ಪೆಟ್ಟಿಗೆಗೆ ಒಂದು ಪತ್ರ ಬಂದು ತಲುಪಿತ್ತು.

‘ಪಾಕಿಸ್ತಾನದ ಪ್ರಧಾನ ಮಂತ್ರಿಯವರಿಂದ’ ಎಂಬ ಅಚ್ಚು ಹೊತ್ತಿದ್ದ ಆ ಲಕೋಟೆಯು ಹಲವು ವಾರಗಳ ಕಾಲದ ಪಯಣದ ನಂತರ ನನ್ನನ್ನು ತಲುಪಿದೆ ಎಂಬುದು ಅದನ್ನು ಗಮನಿಸಿದಾಗಲೇ ನನ್ನ ಅರಿವಿಗೆ ಬಂದಿತು. ಆ ಲಕೋಟೆಯ ಪ್ರಯಾಣವೇನೂ ಸುಗಮವಾಗಿರಲಿಕ್ಕಿಲ್ಲ ಎಂಬುದೂ ಅದನ್ನು ನೋಡಿದರೇ ತಿಳಿಯುತ್ತಿತ್ತು.

ಪಾಕಿಸ್ತಾನದ ಪ್ರಧಾನಿಯಿಂದ ಅಂತಹದ್ದೊಂದು ಪತ್ರ ಸಾಮಾನ್ಯ ಅಂಚೆಯಲ್ಲಿ ಹೀಗೆ ಬಂದಿದ್ದುದನ್ನು ಈ ಹಿಂದೆಂದೂ ನೋಡಿರದ ಹಲವಾರು ಸಂಸ್ಥೆಗಳು, ಬಹುಶಃ ಆ ಲಕೋಟೆಯನ್ನು ತೆರೆದು ನೋಡಿ ಮತ್ತೆ ಮುಚ್ಚಿರುವ ಸಾಧ್ಯತೆ ಇತ್ತು. ಆ ಪತ್ರದಲ್ಲಿ ಕೆಡುಕಿನ ಯಾವ ಉದ್ದೇಶವೂ ಇರಲಿಲ್ಲ. ಸಂದರ್ಶನಕ್ಕಾಗಿ ಅವಕಾಶ ನೀಡಬೇಕೆಂಬ ಕೆಲವು ತಿಂಗಳುಗಳ ಮುಂಚಿನ ನನ್ನ ಕೋರಿಕೆಗೆ ತಡವಾಗಿ ಬಂದ ಆರ್ದ್ರವಾದ ಪ್ರತಿಕ್ರಿಯೆ ಅದಾಗಿತ್ತು.

ಇದಾದ ಮೇಲೆ ನಾನು ಇಸ್ಲಾಮಾಬಾದ್‍ನ ಅವರ ಕಚೇರಿಗೆ ಕರೆ ಮಾಡಿ ಸಂದೇಶವನ್ನು ತಲುಪಿಸಿದೆ. ನವಾಜ್‌ ಷರೀಫ್ ಅವರು ಮತ್ತೆ ಕರೆ ಮಾಡಿ, ಸಂದರ್ಶನಕ್ಕಾಗಿ ಯಾಕೆ ಪಾಕಿಸ್ತಾನಕ್ಕೆ ಬರಬಾರದು ಎಂದು ನನ್ನನ್ನು ಕೇಳಿದರು. ನಮ್ಮ ಪ್ರಧಾನಮಂತ್ರಿಗಳು ಯಾವುದಕ್ಕೂ ಚಾಲನೆ ನೀಡಲು ಸಾಧ್ಯವಿಲ್ಲವೆಂದಾದರೆ, ಸಂದರ್ಶನಗಳನ್ನು ನಡೆಸಿ ಪ್ರಯೋಜನವೇನು ಎಂದು ನಾನು ಕೇಳಿದೆ.

ದೊಡ್ಡ ಒಪ್ಪಂದಗಳನ್ನು ಬಿಡಿ, ನಿಮಗೆ ಕೇವಲ ಬಸ್ ಓಡಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಷರೀಫ್ ಅವರು ಅದೇ ತೆರೆಮರೆಯ ರಾಜತಾಂತ್ರಿಕ ಸಮಸ್ಯೆಗಳ ಬಗ್ಗೆ ಗೊಣಗುಟ್ಟಿದರು. ಪಂಜಾಬಿ ಭಾಷೆಯಲ್ಲಿ ತುಂಬಾ ಲಘು ಧಾಟಿಯಲ್ಲಿ ನಡೆದ ಆ ಮಾತುಕತೆಯ ಸಂದರ್ಭದಲ್ಲಿ, ನೀವು ಬಸ್ ಸಂಚಾರದ ಬಗ್ಗೆ ಸಂದರ್ಶನದಲ್ಲಿ ಪ್ರಕಟಣೆ ಹೊರಡಿಸಿ, ಅದರ ಮೊದಲ ಸಂಚಾರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಪ್ರಧಾನಿಯವರನ್ನು ಆಹ್ವಾನಿಸಬಾರದೇಕೆ ಎಂದು ಹೇಳಿದೆ.

ಷರೀಫ್ ಅವರಿಗೆ ಈ ಸಲಹೆ ತುಂಬಾ ಇಷ್ಟವಾಯಿತಲ್ಲದೆ, ಈ ಚಿಂತನೆಯನ್ನು ಅವರು ಬಲು ಗಂಭೀರವಾಗಿಯೂ ಪರಿಗಣಿಸಿದರು. ಆದರೆ ಅವರಿಗೊಂದು ಚಿಂತೆಯೂ ಇತ್ತು. ಒಂದೊಮ್ಮೆ ತಾವು ಅವರನ್ನು ಆಹ್ವಾನಿಸಿ, ಅದನ್ನು ಅವರು ತಿರಸ್ಕರಿಸಿಬಿಟ್ಟರೆ ನಿಜವಾಗಿಯೂ ಅದು ಬಹಳ ಕೆಟ್ಟದಾಗಿ ತೋರುತ್ತದೆ ಎಂಬುದು ಅವರ ಅನಿಸಿಕೆಯಾಗಿತ್ತು. ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಿದೆ.

ಅದಾದ ನಂತರ ಈ ಬಗ್ಗೆ ನಾನು ಖಚಿತಪಡಿಸಿಕೊಂಡೆ. ವಾಜಪೇಯಿ ಅವರಿಗೂ ಈ ಚಿಂತನೆ ಇಷ್ಟವಾಯಿತು. ಆದರೆ, ಪಾಕಿಸ್ತಾನದಿಂದ ವಾಪಸು ಬಂದು ತಮ್ಮನ್ನು ನೋಡದ ಹೊರತು ಸಂದರ್ಶನವನ್ನು ಪ್ರಕಟಿಸಬಾರದು ಎಂದಷ್ಟೇ ಅವರು ಹೇಳಿದರು. ಷರೀಫ್ ಅವರ ಲಾಹೋರ್‍ನ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಪಾಕಿಸ್ತಾನದ ಕ್ರಿಕೆಟ್ ತಂಡದ ವಿರುದ್ಧ ಭಾರತದ ಸಚಿನ್ ತೆಂಡೂಲ್ಕರ್ ಅವರ ಅಮೋಘ ಆಟವನ್ನು ನೋಡನೋಡುತ್ತಲೇ ನಡೆದ ಆ ಸಂದರ್ಶನದಲ್ಲಿ, ಷರೀಫ್ ಅವರು ತಾವು ಆಡಿದ ಮಾತನ್ನು ಉಳಿಸಿಕೊಂಡರು.

ಅದರಂತೆ ಬಸ್ ಸಂಚಾರ ಸೇವೆಯನ್ನು ಪ್ರಕಟಿಸಿ, ಮೊದಲ ಬಸ್‍ನಲ್ಲಿ ತಮ್ಮ ದೇಶಕ್ಕೆ ಆಗಮಿಸುವಂತೆ ವಾಜಪೇಯಿ ಅವರನ್ನು ಆಹ್ವಾನಿಸಿದರು. ಚರಿತ್ರೆಯು ನೆನಪಿಟ್ಟುಕೊಳ್ಳುವಂತಹ ರೀತಿಯಲ್ಲಿ ಭಾರತದ ಪ್ರಧಾನಿಯನ್ನು ಸ್ವಾಗತಿಸುವ ಖಾತರಿಯನ್ನು ಅವರು ನೀಡಿದರು. ಈ ಸಂದರ್ಶನವನ್ನು ಒಂದು ದಿನದ ಮಟ್ಟಿಗೆ ತಡೆದು ಪ್ರಕಟಿಸುವಂತೆ ವಾಜಪೇಯಿ ಅವರು ನನ್ನಲ್ಲಿ ಕೇಳಿಕೊಂಡರು. ಮರುದಿನ ಬೆಳಿಗ್ಗೆ ತಾವು ಲಖನೌಗೆ ಭೇಟಿ ನೀಡುವ ದಿನದಂದು ಸಂದರ್ಶನ ಪ್ರಕಟವಾಗಬೇಕು ಎಂಬುದು ವಾಜಪೇಯಿ ಅವರ ಇಚ್ಛೆಯಾಗಿತ್ತು. ಷರೀಫ್ ಅವರ ಆಹ್ವಾನದ ಬಗ್ಗೆ ವರದಿಗಾರರೊಬ್ಬರು ಪ್ರಶ್ನೆ ಕೇಳಬೇಕು ಎಂಬುದನ್ನೂ ವಾಜಪೇಯಿ ಖಚಿತಪಡಿಸಿಕೊಂಡರು. ವಿದೇಶಾಂಗ ವ್ಯವಹಾರ ಸಚಿವಾಲಯವು ತನ್ನ ಎಂದಿನ ಸಂದೇಹಗಳನ್ನು ಮುಂದಿಡುವ ಮುನ್ನವೇ ತಾವು ಈ ಆಹ್ವಾನವನ್ನು ಒಪ್ಪಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು.

ಅದಾದ ನಂತರ ಏನಾಯಿತೆಂಬುದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿರುವ ಸಂಗತಿಯೇ ಆಗಿದೆ. ವಾಜಪೇಯಿ ಅವರ ಪಾಕಿಸ್ತಾನ ಭೇಟಿಯು ನಡೆದು ಹಲವಾರು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಈ ಭೇಟಿಯ ವಿರುದ್ಧ ಪಾಕಿಸ್ತಾನದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ವಿಶೇಷವಾಗಿ, ವಾಜಪೇಯಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರಫ್ ಅವರು ವಂದನೆ ಸಲ್ಲಿಸಲು ನಿರಾಕರಿಸಿದರು.

ವಾಜಪೇಯಿ ಅವರು ಮಿನಾರ್–ಎ– ಪಾಕಿಸ್ತಾನ್‍ನ ಮೆಟ್ಟಿಲುಗಳನ್ನು ಏರಿ, ಸ್ಥಿರ ಮತ್ತು ಪ್ರಗತಿಪರ ಪಾಕಿಸ್ತಾನವು ಭಾರತದ ಹಿತಾಸಕ್ತಿಗೆ ಪೂರಕ ಎಂಬ ಮಾತುಗಳನ್ನಾಡಿದರು. ಎರಡೂ ರಾಷ್ಟ್ರಗಳ ನಡುವೆ ಹೊಸ ಇತಿಹಾಸವೇ ಸೃಷ್ಟಿಯಾದಂತೆ ಗೋಚರಿಸಿತು. ಆದರೆ, ನಾನು ಅಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದು ಅದೇ ಮೊದಲು ಹಾಗೂ ಕಡೆಯ ಬಾರಿ ಕೂಡ.

ಇಂದು ಕೆಲವರು ಈ ಸಂದರ್ಶನವನ್ನು ‘ಒಳ ಒಪ್ಪಂದ’ ಎಂದು ವ್ಯಾಖ್ಯಾನಿಸಬಹುದು. ಅದಾಗಿದ್ದೇ ಆದರೆ, ಅದೊಂದು ಉತ್ತಮ ಉದ್ದೇಶಕ್ಕಾಗಿ ಏರ್ಪಟ್ಟ ಒಳ ಒಪ್ಪಂದ ಅಷ್ಟೆ. ಅದೊಂದು ಸ್ಫೋಟಕ ಸುದ್ದಿ ಸಹ ಹೌದು. ಆದರೆ ಅದು ನನಗೆ ಒಂದು ರೀತಿ ಯಾತನಾದಾಯಕವೂ ಆಗಿತ್ತು. ಹೀಗಾಗಿ, ಇನ್ನೊಮ್ಮೆ ಇಂತಹ ಸಾಹಸ ಬೇಡ ಎಂದು ನನ್ನಲ್ಲಿ ನಾನೇ ಸಂಕಲ್ಪ ಮಾಡಿಕೊಂಡೆ.

ಈ ಕಥನ ಅಲ್ಲಿಗೇ ಮುಗಿಯಲಿಲ್ಲ. ಎರಡೂ ರಾಷ್ಟ್ರಗಳ ಪ್ರಧಾನಿಗಳು ಶಾಂತಿ ಸಂಧಾನದ ವೇದಿಕೆ ಸಿದ್ಧಪಡಿಸಿದ ಗುಂಗಿನಲ್ಲಿ ಇದ್ದಾಗಲೇ, ಅವರಿಗೇ ಗೊತ್ತಿಲ್ಲದಂತೆ ಪಾಕಿಸ್ತಾನಿ ಸೇನೆಯು ಕಾರ್ಗಿಲ್‍ನಲ್ಲಿ ಹಲವಾರು ಮೈಲುಗಳವರೆಗೆ ನುಸುಳಿ ಸುರಂಗವನ್ನು ಕೊರೆದಿತ್ತು. ಮೇ ತಿಂಗಳ ಮಧ್ಯದ ಅವಧಿಯಲ್ಲಿ ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಚಕಮಕಿ ನಡೆಯಿತು. ಈ ನಾಟಕೀಯ ತಿರುವುಗಳನ್ನು ಯಾರೂ ಎಣಿಸಿರಲೇ ಇಲ್ಲ.

ನಾನು ಉಳಿದುಕೊಂಡಿದ್ದ ಮುಂಬೈ ಹೋಟೆಲಿನ ಕೊಠಡಿಯ ಫೋನ್ ಬೆಳ್ಳಂಬೆಳಿಗ್ಗೆ 6.30ಕ್ಕೇ ಸದ್ದು ಮಾಡಿತು. ‘ಪ್ರಧಾನಮಂತ್ರಿಯವರು ತಮ್ಮೊಂದಿಗೆ ಮಾತನಾಡಬೇಕಂತೆ’ ಎಂದು ಅತ್ತಲಿನ ಧ್ವನಿ ಹೇಳಿತು. ಫೋನ್ ಕರೆಗೆ ಬಂದ ಅವರು ‘ಯೇ ಕ್ಯಾ ಕರ್‌ ರಹಾ ಹೈ ಮಿತ್ರ್‌ ಆಪ್‌ಕಾ’ (ನಿಮ್ಮ ಗೆಳೆಯರು ಇದೇನು ಮಾಡುತ್ತಿದ್ದಾರೆ) ಎಂದು ಕೇಳಿದರು.

ಪಾಕಿಸ್ತಾನದ ಸೇನಾ ಮುಖ್ಯಸ್ಥರು ಚೀನಾಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ, ಪರಿತ್ಯಕ್ತ ಮುಜಾಹಿದ್ದೀನ್‍ಗಳು ಹೇಗಾದರೂ ಕ್ಷಿಪಣಿಗಳನ್ನು ಹೊಂದಲು ಸಾಧ್ಯ ಎಂದು ಪ್ರತಿಯೊಬ್ಬರೂ ಅಚ್ಚರಿಗೊಂಡಿದ್ದಾರೆ ಎಂದು ಅವರು ಹೇಳಿದರು. ಇದೆಂತಹ ಅನಿಷ್ಟವಾದದ್ದು ನಡೆಯುತ್ತಿದೆ ಎಂದು ನಿಮ್ಮ ಸ್ನೇಹಿತರನ್ನು ಕೇಳುವಿರಾ ಎಂದೂ ಕೇಳಿದರು. ನಂತರ ನಾನು ಇಸ್ಲಾಮಾಬಾದ್‍ಗೆ ಕರೆ ಮಾಡಿ ಎಂದಿನಂತೆ ಸಂದೇಶವನ್ನು ಬಿಟ್ಟೆ.

ಅದೇ ರಾತ್ರಿ ಅಲ್ಲಿಂದ ಕರೆ ಬಂತು. ನವಾಜ್ ಷರೀಫ್ ಅವರೂ ವಾಜಪೇಯಿ ಅವರಂತೆಯೇ ವಿಚಲಿತರಾಗಿದ್ದುದು ಅವರ ಧ್ವನಿಯಿಂದ ಸ್ಪಷ್ಟವಾಯಿತು. ‘ನಾನು ಯವುದೇ ಒಳಸಂಚು ಮಾಡಿಲ್ಲ ಎಂದು ನೀವು ಅವರಿಗೆ ಹೇಳಬಹುದು. ಗಡಿ ನಿಯಂತ್ರಣ ರೇಖೆಯಲ್ಲಿ ಎಂದಿನಂತೆ ಕೆಲವು ಚಕಮಕಿಗಳು ನಡೆದವು ಎಂದು ನಿನ್ನೆ ನನಗೆ ಹೇಳಿದ್ದರು ಮತ್ತು ಇಂದು ವಾಯುಗಡಿ ಉಲ್ಲಂಘನೆ ಪ್ರಕರಣಗಳನ್ನೂ ವರದಿ ಮಾಡಿದ್ದಾರೆ. ಇವೆಲ್ಲವುಗಳಿಂದ ನನಗೂ ಅಚ್ಚರಿಯಾಗಿದೆ’ ಎಂದರಲ್ಲದೆ, ವಾಜಪೇಯಿ ಅವರೊಂದಿಗೆ ಮಾತುಕತೆ ನಡೆಸುವ ಇಂಗಿತವನ್ನೂ ವ್ಯಕ್ತಪಡಿಸಿದರು.

ಇದಾದ ಮೇಲೆ ವಾಜಪೇಯಿ ಮತ್ತು ಬ್ರಜೇಶ್ ಮಿಶ್ರಾ ಅವರು ನನಗೆ ಕರೆ ಮಾಡಿದರು. ‘ಜನರಲ್ ಮುಷರಫ್ ಮತ್ತು ಅವರ ಅಧೀನ ಸಹೋದ್ಯೋಗಿಯ ನಡುವಿನ ಫೋನ್ ಸಂಭಾಷಣೆಗಳನ್ನು ‘ನಮ್ಮವರು’ ಭೇದಿಸಿದ್ದು, ಆ ಪ್ರಕಾರ ಕಾರ್ಗಿಲ್‍ನಲ್ಲಿ ನಡೆದಿರುವುದು ಅಪ್ಪಟ ಸೇನಾ ಕಾರ್ಯಾಚರಣೆಯೆಂದು ದೃಢಪಟ್ಟಿದೆ. ಹೀಗಾಗಿ, ನೀವು ಮತ್ತೊಂದು ಸಂದರ್ಶನದ ನೆಪದಲ್ಲಿ ಇಸ್ಲಾಮಾಬಾದ್‍ಗೆ ಹೋಗಿ, ನವಾಜ್ ಷರೀಫ್ ಅವರಿಗೆ ಈ ಧ್ವನಿಸುರುಳಿಗಳ ಬಗ್ಗೆ ಹೇಳುವಿರಾ’ ಎಂದು ಕೇಳಿದರು.

ಆದರೆ ಈ ಬಾರಿ ನಾನು ಎಚ್ಚರಿಕೆ ವಹಿಸಿದೆ. ನಾನು ಮಾಡಲಾರೆ ಹಾಗೂ ನಾನು ಇದನ್ನು ಮಾಡಬಾರದು ಎಂದು ವಿನಯದಿಂದಲೇ ಅವರಿಗೆ ಹೇಳಿದೆ. ಈ ಮುಂಚೆ ನಾನು ನಡೆಸಿದ್ದ ಸಂದರ್ಶನ ಒಂದು ಅಪ್ಪಟ ಸ್ಕೂಪ್ ಆಗಿದ್ದು, ಬಸ್ ಸಂಚಾರ ಸೇವೆಯು ಇಬ್ಬರಿಗೂ ದ್ವಿಪಕ್ಷೀಯ ಲಾಭ ತರುವಂತಹದ್ದಾಗಿತ್ತು. ಆದರೆ ಈಗಿನ ಕೋರಿಕೆಯು ಪತ್ರಿಕೋದ್ಯಮವನ್ನು ಮೀರಿದ ಸಂಗತಿಯಾಗಿತ್ತು. ಇದನ್ನು ಅವರಿಬ್ಬರೂ ಅರ್ಥ ಮಾಡಿಕೊಂಡರು. ನಂತರ, ಮತ್ತೊಬ್ಬ ಮಾಜಿ ಸಂಪಾದಕರನ್ನು ಈ ಕೆಲಸ ಮಾಡಲು ಕೋರಿದರು.

ಆಗ ಅಬ್ಸರ್ವರ್ ರಿಸರ್ಚ್ ಫೌಂಡೇಷನ್‍ನಲ್ಲಿದ್ದ ಆರ್‍.ಕೆ.ಮಿಶ್ರಾ ಅವರು ಇಸ್ಲಾಮಾಬಾದ್‍ಗೆ ಹಲವಾರು ಸಲ ತೆರಳಿದರು. ಅವರು ಷರೀಫ್ ಅವರಿಗೆ ಆ ಭೇದಿತ ಧ್ವನಿಸುರುಳಿಗಳನ್ನೂ ತಲುಪಿಸಿದರು. ಪತ್ರಿಕೋದ್ಯಮಕ್ಕೆ ಹೊರತಾದ ನನ್ನ ಸಾಹಸ ಅಲ್ಲಿಗೆ ಕೊನೆಗೊಂಡಿತು.

ಪಾಕಿಸ್ತಾನದ ಹೊಸ ಪ್ರಧಾನ ಮಂತ್ರಿಗೆ ಇದರಲ್ಲಿ ಹಲವಾರು ಪಾಠಗಳು ಅಡಗಿವೆ. ಮೊದಲನೆಯದಾಗಿ, ಭಾರತದೊಂದಿಗೆ ಶಾಂತಿ ಸಂಧಾನದ ಪ್ರಯತ್ನವೇ ಗಂಡಾಂತರಕಾರಿ ಯೋಚನೆ ಹಾಗೂ ಜನರಲ್ ಆಣತಿಯ ಮೇರೆಗೆ ಇದನ್ನು ಮಾಡಲು ಹೋಗುವುದು ನಿಶ್ಚಿತವಾಗಿಯೂ ಆತ್ಮಹತ್ಯಾತ್ಮಕವಾದುದು.

ಎರಡನೆಯದಾಗಿ, ಪಾಕಿಸ್ತಾನದ ಸೇನೆಯು ಇದುವರೆಗೆ ಯಾವುದೇ ಚುನಾಯಿತ ಪ್ರಧಾನಿಗೆ ತನ್ನ ರಾಷ್ಟ್ರದಲ್ಲಿ ಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ. ಮೂರನೆಯದು, ಪಾಕಿಸ್ತಾನದ ಪ್ರತಿಯೊಬ್ಬ ಚುನಾಯಿತ ಪ್ರಧಾನಿಯೂ ಕೊನೆಗೆ ಗಡಿಪಾರಿನಲ್ಲೋ ಜೈಲಿನಲ್ಲೋ ಹತ್ಯೆಗೀಡಾಗಿಯೋ ಅಥವಾ ಬೆನಜೀರ್ ಭುಟ್ಟೊ ಅವರ ಪ್ರಕರಣದಲ್ಲಾದಂತೆ ಈ ಮೂರನ್ನೂ ಅನುಭವಿಸಿಯೋ ಅಂತ್ಯಗೊಂಡಿದ್ದಾರೆ.

ಇಮ್ರಾನ್ ಖಾನ್‍ ಅವರು ಬದುಕಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ: ಕ್ರಿಕೆಟ್‍, ಸಂಬಂಧ, ವಿವಾಹ ಮತ್ತು ರಾಜಕೀಯ ಈ ಎಲ್ಲದರಲ್ಲೂ. ಆದರೆ ಅವರ ರಾಷ್ಟ್ರದಲ್ಲಿ ಮೂಲಭೂತ ಅಧಿಕಾರ ಸಮೀಕರಣ ಮಾತ್ರ ಎಂದಿನಂತೆಯೆ ಬದಲಾಗದೇ ಉಳಿದಿದೆ.

ಅದು ಏನನ್ನಾದರೂ ಮಾಡಿದ್ದರೆ, ಕಳೆದ ದಶಕಗಳಲ್ಲಿ ಸಾಧ್ಯವಾಗಬಹುದಾಗಿದ್ದ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಭಗ್ನಗೊಳಿಸಿರುವುದೇ ಅದರ ದೊಡ್ಡ ಸಾಧನೆಯಾಗಿದೆ. ಒಂದೊಮ್ಮೆ ಅವರು ಶಾಂತಿ ಸ್ಥಾಪನೆಯ ಪ್ರಯತ್ನಗಳನ್ನು ಮಾಡಿದರೂ, ಸೇನೆಯ ಆಣತಿಯ ಮೇರೆಗೆ ಅದನ್ನು ಮಾಡುತ್ತಾರೆಯೇ ವಿನಾ ಅದನ್ನು ಎದುರು ಹಾಕಿಕೊಂಡು ಮಾಡಲಿಕ್ಕಿಲ್ಲ.

ಒಂದೊಮ್ಮೆ ಹೊಸದಾಗಿ ಶಾಂತಿ ಸ್ಥಾಪನೆ ಪ್ರಯತ್ನಗಳು ಆರಂಭವಾದರೂ ನಾನಂತೂ ಮತ್ತೊಮ್ಮೆ ಅದರಲ್ಲಿ ಭಾಗಿಯಾಗಲು ಎಂದೆಂದಿಗೂ ಬಯಸಲಾರೆ. ಅಂತಹ ಯೋಚನೆ ನಮ್ಮನ್ನು ಚುಂಬಕದಂತೆ ಸೆಳೆಯುತ್ತದೇನೋ ಹೌದು. ಆದರೆ, ಅದು ಅಂತಿಮವಾಗಿ ನಮ್ಮನ್ನು ಮೋಸದ ಬಲೆಗೆ ಬೀಳಿಸುವಂತಹದ್ದು. ಕಾಲಾನಂತರದಲ್ಲಿ ಕೇಳಲು ಸೊಗಸಾದ ಕಥೆ ಆಗಬಹುದಾದರೂ ಅದನ್ನು ನಾನು ಒಪ್ಪಿಕೊಳ್ಳಲಾರೆ.

ಇದಿಷ್ಟನ್ನು ಪ್ರಸ್ತಾಪಿಸಲು ನನ್ನ ಮುಂದೆ ನಾಲ್ಕು ಕಾರಣಗಳಿವೆ: ಒಂದು, ವಾಜಪೇಯಿ ಅವರ ನಿರ್ಗಮನ, ನವಾಜ್‌ ಷರೀಫ್ ಅವರ ಸೆರೆವಾಸ, ಇಮ್ರಾನ್ ಅವರ ಪ್ರಮಾಣವಚನ ಹಾಗೂ ಅತ್ಯಂತ ಮುಖ್ಯವಾಗಿ ಈ ಕಥನ ನಡೆದು 20 ವರ್ಷಗಳು ಸಂದುಹೋಗಿರುವುದು.

(ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT