ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಅಭಿವೃದ್ಧಿಯ ಹರಿಕಾರನಲ್ಲವೇ?

Last Updated 12 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಅಂಬಾನಿ, ಅದಾನಿಗಳು ಮಾತ್ರವೇ ಅಭಿವೃದ್ಧಿಯ ಹರಿಕಾರರೇ? ಅಥವಾ ಲಿಂಗಾಯತ ಖಾನಾವಳಿಗಳನ್ನು ಅತ್ತ ಸರಿಸಿ ಮ್ಯಾಕ್‌ಡೊನಾಲ್ಡ್‌ಗಳನ್ನು ಕರೆತಂದು ಕೂರಿಸಿದರೆ ಆಧುನಿಕತೆಯೇ? ಇತ್ತ ಪುರೋಹಿತಶಾಹಿ ಅಬ್ಬರ, ಅತ್ತ ಬಂಡವಾಳಶಾಹಿ ಅಬ್ಬರ, ಇತ್ತ ಧಾರ್ಮಿಕ ಅಸಹಿಷ್ಣುತೆ, ಅತ್ತ ಆರ್ಥಿಕ ಅಸಹಿಷ್ಣುತೆಗಳನ್ನು ತಂದು ಬಲವಂತ ಹೇರಿದರೆ ಅಭಿವೃದ್ಧಿಯೇ? ಬಸವನು ಹಳಬ; ಹಾಗಾಗಿ ಅಭಿವೃದ್ಧಿಯ ಹರಿಕಾರನಲ್ಲವೇ? ಈ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿದೆ. ಪ್ರಶ್ನೆಯನ್ನೆತ್ತಿಕೊಂಡು ನಾನು ಉತ್ತರ ಕರ್ನಾಟಕಕ್ಕೆ ಹೋದೆ.

ಬಸವನ ಮೂಲ ನೆಲೆಯದು. ಇಂದು ಆ ನೆಲೆ ಹಿಂದುಳಿದಿದೆ. ಅದರ ಅಭಿವೃದ್ಧಿ ಹೇಗಿರಬೇಕು ಎಂಬ ಚರ್ಚೆ ನಡೆದಿದೆ ಅಲ್ಲಿ. ಹಾಗೆ ಚರ್ಚಿಸುತ್ತಿರುವ ಹೆಚ್ಚಿನವರು ಬಸವನ ಅನುಯಾಯಿಗಳೇ ಹೌದು. ಆದರೆ, ಉತ್ತರ ಕರ್ನಾಟಕದ ಹಿಂದುಳಿದಿರುವಿಕೆಗೆ ಬಸವನೇ ಕಾರಣವೋ ಎಂಬಂತೆ, ಆತನ ಮಾದರಿಯನ್ನು ಹಿಂದಕ್ಕೊತ್ತಿ, ಅಂಬಾನಿ– ಅದಾನಿ ಮಾದರಿಯ ಅಭಿವೃದ್ಧಿಯನ್ನು ಮುಂದೊತ್ತುತ್ತಿದ್ದಾರೆ ಅವರು ಅಲ್ಲಿ. ಬಸವಣ್ಣನನ್ನು, ಇತರೆಲ್ಲ ದೈವಗಳಂತೆಯೇ, ವೈಭವೋಪೇತ ಗೃಹಬಂಧನದಲ್ಲಿ ಇರಿಸಿದ್ದಾರೆ.

ಬೆಂಗಳೂರು ಅಥವಾ ನ್ಯೂಯಾರ್ಕು ಅಥವಾ ಲಂಡನ್ನುಗಳನ್ನು ಅಭಿವೃದ್ಧಿಗೆ ಮಾದರಿ ಎಂದು ನಂಬುತ್ತಾರೆ ಇವರು. ಉತ್ತರ ಕರ್ನಾಟಕದ ತುಂಬ ಜಗಜಗಿಸುವ ಖಾಸಗಿ ಕಾಲೇಜುಗಳು ಬರಲಿ, ಫಳಫಳಿಸುವ ಖಾಸಗಿ ಆಸ್ಪತ್ರೆಗಳು ಬರಲಿ, ಒಂದೇ ಸಮನೆ ಹೊಗೆಯುಗುಳುವ ಕಾರ್ಖಾನೆಗಳು ಬರಲಿ, ವಿಮಾನ ನಿಲ್ದಾಣಗಳು ಹಾಗೂ ಪಂಚತಾರಾ ಹೋಟೆಲುಗಳು ಬರಲಿ. ಆಗ ಉ.ಕ. ಅಭಿವೃದ್ಧಿ ಹೊಂದುತ್ತದೆ ಎಂದವರು ನಂಬುತ್ತಾರೆ.

ಹಾಗವರು ನಂಬಲಿಕ್ಕೆ ಕಾರಣವೂ ಇದೆ. ಉ.ಕ.ದಿಂದ ಗುಳೆ ಎದ್ದಿರುವ ಜಾಣ ಮಧ್ಯಮವರ್ಗ ತಲುಪಿರುವುದು ಬೆಂಗಳೂರು ನಗರವನ್ನು. ಸರ್ಕಾರಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ದಿಮೆಪತಿಗಳು ಎಲ್ಲರೂ ಬೆಂಗಳೂರಲ್ಲಿ ಕುಳಿತು ಉ.ಕ.ದತ್ತ ನೋಡುತ್ತಾರೆ. ಬುದ್ಧಿಜೀವಿಗಳು, ಇಲ್ಲಿ ಕುಳಿತು ಅಲ್ಲಿನ ಕೃಷಿ, ಕೈಮಗ್ಗ ಹಾಗೂ ಕುಶಲಕರ್ಮಗಳ ಬಗ್ಗೆ ಚಿಂತಿಸುತ್ತಾರೆ. ಕವಿಗಳು, ಇಲ್ಲಿ ಕುಳಿತು ಅಲ್ಲಿನ ಹಳ್ಳಿಗಳ ಬಗ್ಗೆ ಪದ್ಯ ಬರೆಯುತ್ತಾರೆ... ಇತ್ಯಾದಿ. ಬೆಂಗಳೂರೆಂಬ ಹವಾನಿಯಂತ್ರಿತ ಕೊಠಡಿಯಿಂದಲೇ ಉ.ಕ., ದ.ಕ., ಮ.ಕ. ಇತ್ಯಾದಿ ಎಲ್ಲ ‘ಕ’ಗಳಿಗೂ ಹಣ ಬಿಡುಗಡೆಯಾಗುತ್ತದೆ. ಅಥವಾ ಆಗದೆ ಇರುತ್ತದೆ. ಬೆಂಗಳೂರೇ ನಿಜವಾದ ಕರ್ನಾಟಕವಾಗಿದೆ ಇಂದು. ಇತ್ತ ರೋಗಕ್ಕೆ ಪಕ್ಕಾಗಿರುವ ಕರ್ನಾಟಕದ ಹೃದಯಭಾಗವು ದಿನಗಣನೆ ಮಾಡುತ್ತ ಮಲಗಿಕೊಂಡಿದೆ.

ಬಸವನ ಮಾದರಿಯನ್ನು ಒಪ್ಪುವವರೂ ಇದ್ದಾರೆ. ಅಭಿವೃದ್ಧಿಯೆಂದರೆ, ಜನರ ಅಭಿವೃದ್ಧಿ, ಪರಿಸರ ಹಾಗೂ ಪ್ರಕೃತಿಗಳ ಅಭಿವೃದ್ಧಿ ಎಂದು ತಿಳಿಯುವ ಮಂದಿ ಇದ್ದಾರೆ. ಆದರೆ ಅಲ್ಪಸಂಖ್ಯಾತರು ಇವರು. ಬಹುಸಂಖ್ಯಾತರ ಓಲೈಕೆ ನಡೆದಿರುವ ಇಂದಿನ ಕಾಲಮಾನದಲ್ಲಿ, ಇವರು ಮೂಲೆಗುಂಪಾಗಿದ್ದಾರೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಹತ್ತಿರದಿಂದ ನೋಡಿಬಲ್ಲ ಇಂತಹ ಒಬ್ಬ ಸಾಮಾಜಿಕ ಕಾರ‍್ಯಕರ್ತರು ನನ್ನೊಟ್ಟಿಗೆ ಮಾತನಾಡುತ್ತಿದ್ದರು. ಅದು ಆರಂಭವಾದ ಮೂರು ವರ್ಷಗಳಲ್ಲಿ, ಮಂಡಳಿಯಿಂದ ಸುಮಾರು ನಾಲ್ಕು ಸಾವಿರದ ಮುನ್ನೂರು ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಹೆಚ್ಚಿನ ಹಣವು ಯಥಾಪ್ರಕಾರ, ರಸ್ತೆಗಳು ಹಾಗೂ ಕಟ್ಟಡಗಳಿಗೆ ಖರ್ಚಾಗಿದೆಯಂತೆ. ಉಳಿದ ನೂರಿನ್ನೂರು ಕೋಟಿಗಳು ಕುರ್ಚಿ, ಕಂಪ್ಯೂಟರು ಇತ್ಯಾದಿಗಳ ಖರೀದಿಗೆ ಖರ್ಚಾಗಿದೆಯಂತೆ. ಹಣ ಖರ್ಚಾಗದೆ ಉಳಿಯುವುದು, ಉಳಿದು ಬೆಂಗಳೂರಿಗೇ ಮರಳುವುದು ಸಹ ಮಾಮೂಲಿಯಂತೆ. ಏಕೆ ಎಂದು ಕೇಳಿದೆ. ಸ್ಥಾವರ ನಿರ್ಮಾಣದ ಹೊಸಹೊಸ ಉಪಾಯಗಳು ಹೊಳೆಯದೆ ಹೀಗಾಗುತ್ತದೆ ಎಂದು ತುಂಟನಗೆ ಬೀರಿದರು ಅವರು. ಭ್ರಷ್ಟಾಚಾರದ ಚರ್ಚೆ ಅನಗತ್ಯ. ಎಲ್ಲ ಕಡೆ ಇರುವಂತೆ ಇಲ್ಲಿಯೂ ಇದೆ ಅದು ಧಾರಾಳ.

ಉತ್ತರ ಕರ್ನಾಟಕದ ಅಭಿವೃದ್ಧಿ ಹೇಗಿರಬೇಕು ಎಂಬ ಒಂದೆರಡು ಚರ್ಚೆಗಳಲ್ಲಿ ನಾನೂ ಭಾಗವಹಿಸಿದ್ದೆ. ಅಂಬಾನಿ, ಅದಾನಿ ಮಾದರಿಯನ್ನು ತಲೆಕೆಳಗು ಮಾಡಬೇಕೆಂಬ ಉದ್ದೇಶದಿಂದಲೇ ಭಾಗವಹಿಸಿದ್ದೆ. ಬಸವಣ್ಣ ಅಭಿವೃದ್ಧಿಯ ಹರಿಕಾರನಾಗಲಾರನೆ ಎಂಬ ಪ್ರಶ್ನೆಯನ್ನು ಬೇಕೆಂತಲೇ ಸಭಿಕರತ್ತ ಎಸೆಯುತ್ತ ಹೋದೆ. ನನ್ನೆದುರಿಗೆ ಕುಳಿತಿರುತ್ತಿದ್ದ ಹೆಚ್ಚಿನವರು ಬಸವನ ಧಾರ್ಮಿಕ ಅನುಯಾಯಿಗಳು. ಲಿಂಗಾಯತರಲ್ಲದವರೂ ಆತನನ್ನು ಮೆಚ್ಚುವ ಮಂದಿ. ನನ್ನ ಬಾಣವು ಪ್ರತಿಬಾರಿ ತನ್ನ ಗುರಿಯನ್ನು ತಾಕುತ್ತಿತ್ತು. ಆ ಬಸವಣ್ಣ ಧರ್ಮದ ಹರಿಕಾರ ಎಂದು ನಂಬುತ್ತೀರಿ ತಾನೆ?... ಧರ್ಮವೆಂದರೆ ಏನು ಹಾಗಿದ್ದರೆ? ಕಾಯಕವಿಲ್ಲದ ಬಸವಧರ್ಮ ಇದೆಯೆ? ಕಲ್ಯಾಣದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿರದಿದ್ದರೆ ಬಸವನನ್ನು ಬಿಜ್ಜಳ ಇರಗೊಡುತ್ತಿದ್ದನೇ?

ಆ ಬಸವಣ್ಣ, ಆಧುನಿಕ ಅರ್ಥದಲ್ಲಿ, ಉತ್ಪಾದಕರನ್ನು ಸಂಘಟಿಸಿದ! ...ಶರಣರು ಶಿಸ್ತಿನಿಂದ ಉತ್ಪಾದನೆ ಮಾಡುವಂತೆ ಮಾಡಿದ! ...ತಮ್ಮ ಉತ್ಪಾದನೆಯಿಂದ ಅವರು ದಾಸೋಹ ಮಾಡುವಂತೆ ತಾಕೀತು ಮಾಡಿದ. ಬಡವರೆಲ್ಲ ಶರಣರಾಗಿ ಸಂಘಟಿತರಾದದ್ದರಿಂದಲೇ ಕಲ್ಯಾಣದಲ್ಲಿ ಶಿಸ್ತಿನ ಉತ್ಪಾದನೆ ಸಾಧ್ಯವಾಯಿತು. ಕಲ್ಯಾಣ ಸಮೃದ್ಧವಾಯಿತು. ಸಮೃದ್ಧಿಯ ಮೇಲೆ ಆಶೆಪಟ್ಟೇ ಮೇಲ್ಜಾತಿ, ಮೇಲ್ವರ್ಗಗಳು, ಬಿಜ್ಜಳನ ಮಗ ಜಗದೇವನನ್ನು ಹುಚ್ಚೆಬ್ಬಿಸಿ, ಶರಣರ ರಕ್ತ ಹರಿಸಿದವು. ಅವರಿಗೆ ಅಧಿಕಾರ ಬೇಕಿತ್ತು. ಮುಷ್ಕರವಿಲ್ಲದ ಉತ್ಪಾದನೆ, ಲಂಚ ರುಶುವತ್ತುಗಳಿಲ್ಲದ ಆಡಳಿತ, ಅವ್ಯವಹಾರಗಳಿಲ್ಲದ ವಾಣಿಜ್ಯ, ಕುಡಿತ ವ್ಯಭಿಚಾರಗಳಿಲ್ಲದ ಸಮಾಜ ವ್ಯವಸ್ಥೆ ಬೇಕಿತ್ತವರಿಗೆ. ಆದರೆ ಲಾಭದ ಹಂಚಿಕೆ ಬೇಡವಿತ್ತು. ಬಸವ ಲಾಭದ ಹಂಚಿಕೆ ಮಾಡಿದ. ಬಡವ ಬಲ್ಲಿದರ ನಡುವಣ ಅಂತರವನ್ನು ಕಡಿಮೆ ಮಾಡಿದ. ಹೀಗೇ ಹೇಳುತ್ತಹೋದೆ. ಕೆಲವು ತಲೆಗಳು ಹೌದೆಂಬಂತೆ ಹಿಂದೆ ಮುಂದೆ ಆಡಿದವು. ಮಾತು ಮುಂದುವರೆಸಿದೆ.

ಹಳೆಯ ಧರ್ಮ, ಹೊಸ ಆರ್ಥಿಕತೆ– ಇವು ಬೇರೆಬೇರೆ ಎಂದು ತಿಳಿದಿದ್ದೀರಿ ನೀವು. ದ್ವಂದ್ವಾತ್ಮಕ ನಿಲುವು ತಾಳಿದ್ದೀರಿ ಎಂಬ ಗಂಭೀರ ಆರೋಪ ಮಾಡಿದೆ. ಶ್ರಮ ಹಾಗೂ ಯಂತ್ರ ಒಂದೇ ಎಂಬ ಅಪಾಯಕಾರಿ ನಿಲುವು ತಾಳಿದ್ದೀರಿ ನೀವು ಎಂದೆ. ಬಸವಣ್ಣ ಬದುಕಿದ್ದರೆ ಆತ ಕಾರಿನಲ್ಲಿ ಕುಳಿತು ‘ಕಾಯಕ’ ಮಾಡುತ್ತಿದ್ದ ಎಂದು ನಂಬುತ್ತೀರಿ ನೀವು ಎಂದೆ. ದಾಸೋಹದ ಹೆಸರಿನಲ್ಲಿ ಆತ ಸಾಹುಕಾರರ ಮನೆಗಳಲ್ಲಿ ಭೂರಿಬೋಜನ ಮಾಡುತ್ತಿದ್ದ ಎಂದು ನಂಬುತ್ತೀರಿ ನೀವು ಎಂದೆ. ಹೊಸ ಆರ್ಥಿಕತೆಗೆ ಸಾರಥ್ಯ ನೀಡಿರುವ ಅಂಬಾನಿ, ಅದಾನಿ ಇತ್ಯಾದಿಗಳು ಅಥವಾ ಅವರ ಕನ್ನಡ ಅವತರಿಣಿಕೆಗಳು, ನಿಜಕ್ಕೂ ಸಮಾಜಕಲ್ಯಾಣ ಮಾಡಬಲ್ಲರೇ ಎಂದು ಪ್ರಶ್ನೆ ಮಾಡಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ತಮ್ಮ ಲಾಭವನ್ನು, ಉತ್ತರ ಕರ್ನಾಟಕದ ಹೊಲಗಳ ತನಕ ಅಥವಾ ಮಗ್ಗದಕುಣಿಗಳ ತನಕ ಇವರು ತಲುಪಿಸುತ್ತಾರೆಯೆ ಎಂದು ಪ್ರಶ್ನೆ ಮಾಡಿದೆ. ಹೊಸ ಅಭಿವೃದ್ಧಿ ಮಾದರಿಯಿಂದಾಗಿ ಬಡವಬಲ್ಲಿದರ ಅಂತರವು, ಬಸವನ ಕಾಲಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿದೆ ಎಂದು ತಿಳಿದಿದೆಯೆ ನಿಮಗೆ ಎಂದು ಪ್ರಶ್ನೆ ಮಾಡಿದೆ. ನಿಶ್ಶಬ್ದವಾಗಿ ಮಾತು ಕೇಳಿಸಿಕೊಂಡರು. ಮಾತಿನ ಧಾಟಿ ಬದಲಿಸಿದೆ.

ಇಂದಿನ ಬಡವರು, ನುಲಿಯಚಂದಯ್ಯನ ತರಹ, ಇತ್ತ ಶ್ರಮವನ್ನೂ ಪಡುತ್ತಿಲ್ಲ ಅತ್ತ ದಾಸೋಹವನ್ನೂ ಮಾಡುತ್ತಿಲ್ಲ ಏಕೆ ಗೊತ್ತೆ ಎಂದು ಪ್ರಶ್ನಿಸಿದೆ. ಇವರ ಸ್ಥೈರ್ಯವನ್ನು ಹರಣ ಮಾಡಿದವರು ಯಾರು, ಜಾಹೀರಾತುಗಳು, ಟೀವಿ ಹಾಗೂ ಇಂಟರ್‌ನೆಟ್ಟಿನ ಹೊಲಸು ಸೃಷ್ಟಿಸುತ್ತಿರುವವರು ಯಾರು, ಸುತ್ತ ತಾಂಡವವಾಡುತ್ತಿರುವ ಧಾರ್ಮಿಕ ಉಗ್ರವಾದವನ್ನು ಪೋಷಿಸುತ್ತಿರುವವರು ಯಾರು? ಭಕ್ತರನ್ನು ಭಕ್ತಿಯಿಂದ ದೂರ ಸರಿಸುತ್ತಿರುವವರು ಯಾರು? ನಾಟಕೀಯ ಪ್ರಶ್ನೆ ಮಾಡಿದೆ. ಹೊಸ ಆರ್ಥಿಕತೆ, ಹೊಸ ಅಭಿವೃದ್ಧಿ ಮಾದರಿ ಈ ಕೆಲಸ ಮಾಡಿದೆ ಎಂದೆ. ಬಸವನ ಮಾದರಿ ಬೆಳಕಾದರೆ, ಅಂಬಾನಿ, ಅದಾನಿಗಳ ಮಾದರಿ ಕತ್ತಲು ಎಂದು ಗಟ್ಟಿಸಿಹೇಳಿ ಮಾತು ಮುಗಿಸಿದೆ.

ಸಣ್ಣ ವಿರಾಮ ನೀಡಿ ಮಾತು ಮುಂದುವರಿಸಿದೆ. ವಿದೇಶಿ ಕಂಪನಿಗಳ ಏಜೆಂಟು ಈ ಆರ್ಥಿಕತೆ ಅಂದೆ. ತಮ್ಮೂರಿನಲ್ಲಿ ಇವರು ಏಸುಕ್ರಿಸ್ತನಿಗೆ ಏನನ್ನು ಮಾಡಿದ್ದಾರೋ ಅದನ್ನೇ ಇಲ್ಲಿ, ನಿಮ್ಮೂರಲ್ಲಿ, ನಿಮ್ಮ ಬಸವನಿಗೆ ಮಾಡುತ್ತಿದ್ದಾರೆ ಅಂದೆ. ಅಥವಾ, ಪ್ರವಾದಿ ಮಹಮ್ಮದರಿಗೆ ತಮ್ಮೂರಲ್ಲಿ ಇವರು ಮಾಡಿದ್ದನ್ನೇ ನಿಮ್ಮೂರಲ್ಲಿ, ಬಸವ– ಕನಕ– ಪುರಂದರ– ದಾದಾಪೀರ ಎಲ್ಲರಿಗೂ ಮಾಡುತ್ತಿದ್ದಾರೆ ಅಂದೆ. ಧಾರ್ಮಿಕ ಬಂಧನದಲ್ಲಿ ಇರಿಸಿದ್ದಾರೆ ಸಂತರನ್ನು ಅಂದೆ. ಸಾಮಾಜಿಕ ಕೆಲಸಕ್ಕಾಗಿ ಬಿಡುಗಡೆಗೊಳಿಸಿ ಎಂದು ಕರೆ ನೀಡಿದೆ.

‘ಬಂಡೇಳಬೇಕು!... ವಚನಕಾರರಂತೆ ಸೂಫಿಸಂತರಂತೆ ಕ್ರೈಸ್ತಸಂತರಂತೆ ಅಹಿಂಸಾತ್ಮಕವಾಗಿ ಬಂಡೇಳಬೇಕು!... ನೇಗಿಲು, ಮಗ್ಗ, ರಾಟೆ ಹಾಗೂ ವಚನಗಳನ್ನು ಆಯುಧಗಳನ್ನಾಗಿ ಬಳಸಿಕೊಂಡು ಬಂಡೇಳಬೇಕು!... ಹೊಸ ಆರ್ಥಿಕತೆಯ ವಿರುದ್ಧ ಬಂಡೇಳಬೇಕು’ ಅಂದೆ. ಮುಂದುವರೆದು, ಆ ಧರ್ಮ ಹಳೆಯದ್ದೂ ಅಲ್ಲ, ಆರ್ಥಿಕತೆ ಹೊಸತೂ ಅಲ್ಲ!... ಎರಡೂ ಸಮಕಾಲೀನವಾದದ್ದು!... ಸಮಕಾಲೀನ ಕಾಯಕವೇ ಸಮಕಾಲೀನ ಧರ್ಮ ಅಂದೆ. ಒಂದಿಬ್ಬರು ಹೌದು ಹೌದು ಅಂದರು. ಮುಂದುವರೆದೆ. ಆ ಬಸವಣ್ಣನ ಆರ್ಥಿಕತೆ ನೈತಿಕವಾದದ್ದು, ದುಡ್ಡನ್ನು ದಾಸೋಹವಾಗಿಸುತ್ತದೆ ಅದು !... ಸಂಪತ್ತನ್ನು ಸಾರ್ವಜನಿಕವಾಗಿಸುತ್ತದೆ ಅದು!... ನಾಲ್ಕು ಜನರ ಪ್ರೀತಿ ಗಳಿಸುತ್ತದೆ ಅದು! ಅಂದೆ. ಹೌದು ಹೌದು ಅಂದರು.

ಬಸವನ ಆರ್ಥಿಕತೆ ನೋಟು ದ್ವಿಗುಣಗೊಳಿಸುವುದಿಲ್ಲ!... ವಿಪರೀತ ಲಾಭ ತರುವುದಿಲ್ಲ!... ವಿಪರೀತ ಲಾಭ ಬಯಸುವವರು ಬಸವಣ್ಣನ ಬದಲಿಗೆ ಮಂಚಣಕ್ರಮಿತನನ್ನು ದೈವವಾಗಿ ಸ್ವೀಕರಿಸಿರಿ ಅಂದೆ. ಮಾತು ಚುಚ್ಚಿತು. ಮಂಚಣಕ್ರಮಿತ ಬಸವನ ಬದ್ಧವೈರಿ ಎಂಬ ಅರಿವಿತ್ತು ಸಭಿಕರಿಗೆ. ಮೈ ಕೊಡವಿಕೊಂಡು ಕುಳಿತರು ಅವರು. ಅಂಬಾನಿ, ಅದಾನಿಗಳನ್ನು ಹಾಡಿ ಹೊಗಳುವವರು ಮಂಚಣಕ್ರಮಿತನ ಆಧುನಿಕ ರೂಪವೇ ಹೌದು ಎಂಬ ಗಂಭೀರ ಆರೋಪ ಮಾಡಿದೆ. ನಿಮ್ಮ ಕುತ್ತಿಗೆಗೆ ಅವರು ಬಿಗಿದಿರುವ ಮೊಬೈಲುಗಳು ಅನಿಷ್ಟಲಿಂಗಗಳು ಅಂದೆ! ಮಾತಿನ ಭರದಲ್ಲಿ ಅನಿಷ್ಟಲಿಂಗ ಅಂದಿದ್ದೆ. ನಾಲಿಗೆ ಕಚ್ಚಿಕೊಂಡೆ. ಆದರೆ ಅವರು ತಪ್ಪು ತಿಳಿಯಲಿಲ್ಲ. ನನ್ನ ವಿಚಾರಗಳ ಒಟ್ಟಿಗೆ ನಡೆದಿದ್ದರು ಅವರು.

ಬಸವಣ್ಣನ ಆರ್ಥಿಕತೆ ಶ್ರಮದ ಆರ್ಥಿಕತೆ ಎಂದು ವಿಸ್ತರಿಸಿ ಹೇಳಿದೆ. ಶ್ರಮವನ್ನು ಸಹಿಸಬೇಕು ಅಂದೆ. ಒಮ್ಮೆಗೇ ಆಗದಿದ್ದರೆ ಕ್ರಮಕ್ರಮವಾಗಿ ಸಹಿಸಬೇಕು ಅಂದೆ. ರೂಢಿಸಿಕೊಳ್ಳಬೇಕು ಅಂದೆ. ಸಹಕರಿಸುವುದನ್ನು ಕಲಿಯ
ಬೇಕು ಅಂದೆ. ಆದರೆ! ...ಅಯ್ಯೋ ನಾವು ಮಂಚಣಕ್ರಮಿತನ ಜೊತೆಗೆ ವಿಮಾನಯಾನ ಮಾಡುತ್ತಿದ್ದೇವೆ! ಅಂದೆ. ಮಂಚಣಕ್ರಮಿತನ ಕಾವಿಬಟ್ಟೆ, ರುದ್ರಾಕ್ಷಿ, ವಿಭೂತಿ ಹಾಗೂ ಸಂಸ್ಕೃತ ಪಾಂಡಿತ್ಯಕ್ಕೆ ಮರುಳಾಗಿದ್ದೇವೆ ನಾವು, ಹಳ್ಳಿಯ ಮಂದಿ ಅಂದೆ. ಮಂಚಣಕ್ರಮಿತ ಕೊಲ್ಲುತ್ತಾನೆ, ಮರೆಯದಿರಿ ಅಂದೆ. ದೇವರ ಆಯುಧ ಬಳಸಿ ಕೊಲ್ಲುತ್ತಾನೆ ಮರೆಯದಿರಿ ಅಂದೆ. ಹೌದೆಂದು ತಲೆಯಾಡಿಸಿದರು.

ಎಲ್ಲ ನಾಟಕೀಯತೆಯನ್ನೂ ಕಳಚಿ, ತೀವ್ರ ಕಳಕಳಿಯಿಂದ ವಿನಂತಿಸಿಕೊಂಡೆ.

‘ದಯಮಾಡಿ!...ದಯಮಾಡಿ ನೀವು ಬಸವಣ್ಣನನ್ನು ಅಭಿವೃದ್ಧಿಯ ಹರಿಕಾರ ಎಂದು ಪರಿಗಣಿಸಿ ನೋಡಿ!... ನೀವು ಹಾಗೆ ಮಾಡಿದರೆ, ಉತ್ತರ ಕರ್ನಾಟಕವೇ ಏಕೆ, ಅಥವಾ ಭಾರತ ದೇಶವೇ ಏಕೆ, ಇಡೀ ವಿಶ್ವವನ್ನೇ ಅಭಿವೃದ್ಧಿಪಡಿಸಬಲ್ಲದು ಬಸವ ಮಾದರಿ’ ಅಂದೆ.

ನನ್ನ ಮಾತಿಗೆ ಸಮಕಾಲೀನ ವಿವರಣೆ ನೀಡಿದೆ. ‘1947ರ ತನಕ!... ಗಾಂಧೀಜಿ ನೇತೃತ್ವದಲ್ಲಿ ನಾವೆಲ್ಲರೂ ಬಸವ ಮಾದರಿಯನ್ನೇ ಅನುಸರಿಸಿದೆವು ತಾನೆ? ಗ್ರಾಮಸ್ವರಾಜ್ಯ ಎಂದು ಅದಕ್ಕೆ ಹೆಸರಿಟ್ಟಿದ್ದೆವು ತಾನೆ!... ಉತ್ತರ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ಭವ್ಯ ಪರಂಪರೆಯನ್ನು ನೀವು ಮರೆತಿಲ್ಲ ತಾನೇ!’ ಎಂದು ಉದಾಹರಣೆ ಸಹಿತವಾಗಿ ಅವರಿಗೆ ವಿವರಿಸಿ ಹೇಳಿದೆ. ಎಲ್ಲ ಹೇಳಿ, ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು, ‘ಈಗ!..., ನಾಚಿಕೆ ಮಾನ ಮರ್ಯಾದೆ ಮೂರೂ ಬಿಟ್ಟು ಮಂಚಣಕ್ರಮಿತನ ಹಾದಿ ಹಿಡಿದಿದ್ದೇವೆ ನಾವು! ...ಭಾರತ ದೇಶವನ್ನು ಸಿಂಗಪುರ ಮಾಡಲು ಹೊರಟಿದ್ದೇವೆ ನಾವು’ ಎಂದು ಮಾತು ಮುಗಿಸಿದೆ. ಒಟ್ಟು ಕತೆಯ ನೀತಿಯಿದು: ಕೃಷಿ ಹಾಗೂ ಕೈಮಗ್ಗ ಉತ್ತರ ಕರ್ನಾಟಕದ ಎರಡು ಕಣ್ಣುಗಳು. ಕಣ್ಣು ಕಿತ್ತು, ಅಂಬಾನಿ, ಅದಾನಿಗಳು ತಯಾರಿಸಿದ ಅತ್ಯಾಧುನಿಕ ಕಪ್ಪುಕನ್ನಡಕ ತೊಡಿಸಿ, ಕುರುಡರಕೋಲು ಕೈಯಲ್ಲಿ ಹಿಡಿಸಿ, ನಡೆ ಎನ್ನುವುದು ಅಭಿವೃದ್ಧಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT