ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವದ ಭವ್ಯವು ದಿವದ ದಿವ್ಯಕ್ಕೆ ಸಮನಹುದೆ?

Last Updated 12 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

೧೯೭೧. ಯಕ್ಷಗಾನ ಕೇಂದ್ರದಲ್ಲಿ ಕಾಲು ಸೋಲುವಂತೆ ಕುಣಿದ ಬಳಿಕ ಕಾಲ್ನಡಿಗೆಯಲ್ಲಿಯೇ ದೂರದ ಕೃಷ್ಣಮಠಕ್ಕೆ ಊಟಕ್ಕೆ ತೆರಳಬೇಕಾಗಿತ್ತು. ಮಧ್ಯಾಹ್ನ ಮರಳುವಾಗಲೇ ಉಂಡದ್ದು ಕರಗಿ ಹೋಗಿ ಯಕ್ಷಗಾನ ಕೇಂದ್ರವನ್ನು ತಲುಪಿದಾಗ ಮತ್ತೆ ರಾತ್ರಿಯ ಊಟವನ್ನು ನೆನೆದು ಹೊಟ್ಟೆ ತಾಳ ಹಾಕುತ್ತಿತ್ತು. ಆ ದಿನಗಳಲ್ಲಿ ‘ಹಸಿವೆ’ ಎಂಬುದು ನನ್ನ ಬದುಕಿನ ಭಾಗವೇ ಆಗಿ, ಅದೊಂದು ಬವಣೆಯಂತೆ ಭಾಸವಾಗಲೇ ಇಲ್ಲ. ಭಾಷೆ ತಿಳಿಯದ ಊರಿನಲ್ಲಿ, ಹೆಜ್ಜೆ ಗೊತ್ತಿರದ ಬಯಲಾಟದ ಹಾದಿಯಲ್ಲಿ ನನ್ನನ್ನು ಕೈಹಿಡಿದು ನಡೆಸಿದ್ದು ‘ಹಸಿವೆ’ಯೇ ಹೊರತು ಮತ್ತೊಂದಲ್ಲ. ಹಸಿವೆ ಮರೆತು ಬದುಕಿದ ದಿನಗಳದೆಷ್ಟೊ! ಮರೆಯುವುದಕ್ಕಾದರೂ ಹಸಿವೆ ಬೇಕಲ್ಲ ! 

ಹೊಸಪ್ರಯೋಗಗಳಲ್ಲಿ ಭಾಗವಹಿಸುವ ಆದೇಶ ಬಂದಾಗ, “ಇಲ್ಲ ನಾನದರಲ್ಲಿ ಭಾಗವಹಿಸುವುದಿಲ್ಲ” ಎಂದು ಆಕ್ಷೇಪಿಸಿ ಹೊರನಡೆದ ಮಟಪಾಡಿ ವೀರಭದ್ರ ನಾಯಕರು ಒಂದೆಡೆ; ಹೊಸಪ್ರಯೋಗಗಳನ್ನೇ ನೆಚ್ಚಿಕೊಂಡು ಯಕ್ಷಗಾನ ಕಾನನದಲ್ಲಿ ತನ್ನದೇ ದಾರಿ ಮಾಡಿಕೊಂಡು ಸಲಗನಂತೆ ಸಾಗಿದ ಶಿವರಾಮ ಕಾರಂತರು ಒಂದೆಡೆ. ನಿಲುಮೆಯಲ್ಲಿ ದಕ್ಷಿಣೋತ್ತರ ಧ್ರುವಗಳಂತಿದ್ದ ಮಂದಿಗಳೊಂದಿಗೆ ಏಕಭಾವದಲ್ಲಿ ಒಡನಾಡಲು ಸಾಧ್ಯವಾಗಿದ್ದು ‘ಹಸಿವೆ’ಯ ಒಂದೇ ಕಾರಣಕ್ಕಾಗಿ. ಹೊಟ್ಟೆ ಹಸಿವೆ ಎಂದಲ್ಲ, ಅದನ್ನು ಬೇಕಾದರೆ ಅರಿವಿನ ತುಡಿತ ಎಂದು ಕರೆಯಿರಿ. ಹೆಜ್ಜೆಗಳನ್ನು ಹೇಳಿಕೊಡುತ್ತಿದ್ದ ವೀರಭದ್ರ ನಾಯಕರಿಗೂ ರಿಹರ್ಸಲ್‌ನಲ್ಲಿ ತೊಡಗಿಕೊಳ್ಳುತ್ತಿದ್ದ ಶಿವರಾಮ ಕಾರಂತರಿಗೂ ಊಟದ ಸಮಯ ಕಳೆದುಹೋಗುತ್ತಿದ್ದುದು ಗೊತ್ತೇ ಆಗುತ್ತಿರಲಿಲ್ಲ. ಕಲೆಯಲ್ಲಿ ಬದುಕನ್ನು ಅದ್ದಿಕೊಂಡವನಿಗೆ ಜಠರದ ಇರವೇ ಮರೆತುಹೋಗುವ ತನ್ಮಯತೆ ಬಂದು ಬಿಡುತ್ತದೆ, ನಾನೆಂದಲ್ಲ ಹಿಂದಿನ ತಲೆಮಾರಿನ ಎಲ್ಲ ಯಕ್ಷಗಾನ ಕಲಾವಿದರಿಗೂ ಈ ಮಾತು ಅನ್ವಯವಾಗುತ್ತದೆ. ಆಟ ಆಡಿಸುವವನ ಮನೆ ಬಾಗಿಲ ಮುಂದೆ ನಿಂತಾಗ ಆತ ಕೊಡುವ ‘ಪಡಿಯಕ್ಕಿ’ಯಲ್ಲಿ ಪರಮಾನ್ನವನ್ನು ಸವಿಯಬೇಕಾದ ಅನಿವಾರ್ಯ ದಿನಗಳವು. 

‘ಅದೇಕೆ ಗುರುಗಳೇ?’ ಎಂಬ ಪ್ರಶ್ನಿಸುವ ತವಕದ ಹಿಂದೆ ನನ್ನ ತಹತಹದ ಬದುಕಿನ ಪ್ರೇರಣೆಯೂ ಇದ್ದಿರಬಹುದು. ಯಕ್ಷಗಾನ ವೇಷಗಳ ಆವರಣವಿರುವ ವೇದಿಕೆಯಲ್ಲಿ ಹಿಂದೆ ಕುಳಿತ ಹಿಮ್ಮೇಳದವರು ಅಸಂಗತ ಲೌಕಿಕರಂತೆ ತೋರುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಪಾರ್ಶ್ವಕ್ಕೆ ಸ್ಥಳಾಂತರಿಸಿದವರು ಕಾರಂತರು. ‘ಅದೇಕೆ ಹಾಗೆ?’ ಎಂದು ಪ್ರಶ್ನಿಸಿದ್ದೇನೋ ಇಲ್ಲವೋ ನೆನಪಿಲ್ಲ. ಆದರೆ, ಹಿಮ್ಮೇಳದ ಬಗ್ಗೆ ನನ್ನಲ್ಲಿ ಜಿಜ್ಞಾಸೆ ಅಂದಿನಿಂದಲೂ ಜೀವಂತವಾಗಿ ಉಳಿದಿದೆ. ಬಡಗುತಿಟ್ಟಿನ ಹಾಡುಗಾರಿಕೆಯ ಶೈಲಿಯ ಪ್ರವರ್ತಕರಲ್ಲೊಬ್ಬರಾದ ಕುಂಜಾಲು ಶೇಷಗಿರಿ ಕಿಣಿಯವರ ಶಿಷ್ಯ ಜಾನುವಾರುಕಟ್ಟೆ ಗೋಪಾಲಕೃಷ್ಣ ಭಾಗವತರು ಉಡುಪಿಯ ಕೃಷ್ಣ ಮಠದಲ್ಲಿ ಕೀರ್ತನೆಗಳನ್ನು ಹಾಡುತ್ತಿದ್ದರೆಂದೂ, ಆ ಬಳಿಕ ಅವರು ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದರೆಂದೂ ಅವರಿವರು ಹೇಳಿದ್ದನ್ನು ಕೇಳಿದ್ದೇನೆ. ಒಟ್ಟಿನಲ್ಲಿ ಕೀರ್ತನೆಕಾರರ ಅಥವಾ ದಾಸರ ಪರಂಪರೆಯಿಂದ ಯಕ್ಷಗಾನ ಹಾಡುಗಾರಿಕೆ ವಿಕಸನಗೊಂಡಿತೆಂಬ ಊಹೆಯಲ್ಲಿ ತಥ್ಯವಿದೆ.

ಚೆಂಡೆಯೆಂಬ ವಾದ್ಯ ಹಿಮ್ಮೇಳದೊಂದಿಗೆ ಸೇರಿಕೊಂಡದ್ದು ಎಷ್ಟೋ ಸಮಯದ ಬಳಿಕ. ಇವತ್ತಿಗೂ ಭಾಗವತನೊಂದಿಗೆ ಮದ್ದಲೆಗಾರನಿಗೆ ಗೌರವ ಸ್ಥಾನಮಾನವಿರುವುದೇ ಇದಕ್ಕೆ ಸಾಕ್ಷಿ. ಭಾರತೀಯ ಸಂಪ್ರದಾಯದ ಕಲೆಗಳಲ್ಲಿ ಹಿಮ್ಮೇಳದವರು ನಿಂತುಕೊಂಡು ಹಾಡುತ್ತಿದ್ದ ರೂಢಿಯೇ ಇತ್ತು. ಭರತನಾಟ್ಯವು ‘ದೇವದಾಸಿ’ ಪರಂಪರೆಯ ಒಂದು ಭಾಗವಾಗಿದ್ದಾಗ ನಟುವಾಂಗದವರು ನರ್ತಕರ ಹಿಂದೆ ನಿಲ್ಲುತ್ತಿದ್ದರು. ಯಕ್ಷಗಾನದಲ್ಲಿ ಭಾಗವತರು ಕೂಡ ವೇಷಧಾರಿಗಳೊಂದಿಗೆ ಔಚಿತ್ಯದ ಆವರಣ ಮೀರದೆ ಕುಣಿದು ಪದ್ಯ ಹೇಳುವ, ಮದ್ದಲೆಗಾರರು ಕೂಡ ಮಿತ ಹೆಜ್ಜೆಗಳನ್ನು ಹಾಕುವ ಪದ್ಧತಿ ಇತ್ತು. ಕರಾವಳಿಯಲ್ಲಿ ನಡೆಯುವ ನಾಗಮಂಡಲದಲ್ಲಿ ನಾಗಪಾತ್ರಿಯೊಂದಿಗೆ ಕುಣಿಯುವ ಹಿಮ್ಮೇಳವೇ ಇಂದು ‘ನಾಗಿಣಿ’ಯಾಗಿದ್ದಿರಬಹುದೆಂದು ನನ್ನ ಪ್ರಮೇಯ. ಭೂತದ ಕೋಲದಲ್ಲಿ ಭೂತನರ್ತಕನಿಗೂ ಹಿಮ್ಮೇಳವಿದ್ದಿರಬೇಕು ಎಂಬುದಕ್ಕೆ ಇಂದಿಗೂ ಕೆಲವು ಸೂಚನೆಗಳನ್ನು ಕಾಣಬಹುದು. ವಾದ್ಯ ಊದುವವನು ಕುಳಿತುಕೊಂಡಲ್ಲಿಂದ ಎದ್ದು ಬಂದು ಭೂತನರ್ತಕನ ಕಿವಿಯಲ್ಲಿ ಕೆಲಕ್ಷಣ ಊದುವ ಪರಿಪಾಠ ಇಂದಿಗೂ ಇದೆ. ಯಕ್ಷಗಾನದಲ್ಲಿ ಬಣ್ಣದ ವೇಷಗಳ ತೆರೆ ಒಡ್ಡೋಲಗ ನಡೆಯುವಾಗ ಹಿಮ್ಮೇಳದವರೂ ಹದವಾಗಿ ಹೆಜ್ಜೆಗಳನ್ನು ಹಾಕುತ್ತ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಯಕ್ಷಗಾನದ ಭಾಗವತರಿಗೆ ಮತ್ತು ಮದ್ದಲೆವಾದಕರಿಗೆ ನಿರಿಗೆಗಳಿರುವ ಅಂಗಿ, ಕಚ್ಚೆ, ಗುಂಡುಮಣಿ ಸರ, ಮುಂಡಾಸು ಇರುತ್ತಿದ್ದವು. ಫಕ್ಕನೆ ನೋಡಿದಾಗ ಉತ್ತರದ ಕಡೆಯ ಜನಪದ ಕಲಾವಿದರ ಹಾಗೆ.   

ಧ್ವನಿವರ್ಧಕ ಬಂದ ಮೇಲೆ ಭಾಗವತರು ವೇಷಧಾರಿಯ ಕಿವಿಯ ಬಳಿಗೆ ಪದ್ಯ ಹೇಳುವ ಆವಶ್ಯಕತೆ ಇಲ್ಲವಾಗಿ ಹಿಮ್ಮೇಳದವರು ಮೈಕ್ ಇಟ್ಟುಕೊಂಡು  ಕುಳಿತುಕೊಂಡು ರಂಗದಲ್ಲಿ ಕಾಣಿಸತೊಡಗಿ ಎಷ್ಟೋ ವರ್ಷಗಳಾದವು. ರಾತ್ರಿಯಿಡೀ ನಿಂತು ಪದ ಹಾಡುವ, ಮದ್ದಲೆ ನುಡಿಸುವ ಚೈತನ್ಯ ಈ ತಲೆಮಾರಿನವರಿಗಿಲ್ಲ. ಅದನ್ನು ಇಂದಿಗೆ ನಿರೀಕ್ಷಿಸುವುದೂ ಅಸಂಗತ. ಆದರೆ, ವೇಷಗಳಿಗೆ ಹಿನ್ನೆಲೆಯಾಗಿ ಕಾಣಿಸುವ ಹಿಮ್ಮೇಳದವರನ್ನು ಹೇಗೆ ಇಡೀ ಆವರಣಕ್ಕೆ ಪೂರಕವಾಗಿ ಕಾಣಿಸಬಹುದು, ಹಿಮ್ಮೇಳದವರ ಅನೌಪಚಾರಿಕ ವ್ಯವಹಾರ ಪೌರಾಣಿಕ ಆವರಣಕ್ಕೆ ಭಂಗ ಉಂಟುಮಾಡದಂತೆ ಮರುರೂಪಿಸುವುದು ಹೇಗೆ... ಎಂಬ ವಿಚಾರವೊಂದು ನನ್ನ ಮನಸ್ಸಿನಲ್ಲಿ ನಿರಂತರ ತಾಳಹಾಕುತ್ತಿರುತ್ತದೆ. ನನ್ನಲ್ಲಿ ಆಗಾಗ ಮೂಡುವ ಯೋಚನೆಗಳಲ್ಲಿ ಕೆಲವು ಕಾರ್ಯಗತಗೊಳ್ಳುತ್ತವೆ, ಕೆಲವು ಹಾಗೇ ಮರೆಯಾಗುತ್ತವೆ. ಹಿಮ್ಮೇಳದ ಕುರಿತು ನನ್ನಲ್ಲಿ ಇತ್ತೀಚೆಗೆ ಮೂಡಿದ ವಿಚಾರವನ್ನು ಹಂಚಿಕೊಳ್ಳುತ್ತ ಅದಕ್ಕೆ ಹಿನ್ನೆಲೆಯಾಗಿಬಹುದಾದ ಮತ್ತೊಂದಿಷ್ಟು ಸಂಗತಿಗಳನ್ನು ಮೇಲೆ ಹೇಳಿಕೊಂಡಿದ್ದಷ್ಟೆ. ಇಂಥ ಚದುರಿದ ಯೋಚನೆಗಳದಷ್ಟೋ ಇವೆ. ಅವನ್ನೆಲ್ಲ ಶಿಸ್ತುಬದ್ಧವಾಗಿ ಪೋಣಿಸಲು ಸಾಧ್ಯವಾಗುತ್ತಿಲ್ಲ, ಅಷ್ಟೆ.

ಹಸ್ತಮುದ್ರೆ, ವೇಷಭೂಷಣಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿದೆ. ಭರತನ ನಾಟ್ಯಶಾಸ್ತ್ರವನ್ನು ಯಕ್ಷಗಾನಕ್ಕೆ ಅನ್ವಯಿಸುವ ಔಚಿತ್ಯವೇನು, ಹೀಗೆ ಹೊಂದಿಸುವುದರಿಂದ ಯಕ್ಷಗಾನದ ಅನನ್ಯತೆ ತೆಳುವಾಗುತ್ತದೆಯೆ, ಕರಾವಳಿಯ ರಾಜಪರಂಪರೆಯಲ್ಲಿಲ್ಲದ ಕಿರೀಟಗಳು ಯಕ್ಷಗಾನಕ್ಕೆ ಎಲ್ಲಿಂದ ಬಂದವು, ಅರೆತೆರೆದ ಮೈಯ ಮೇಲೆ ಶಲ್ಯವನ್ನು ಹೊದ್ದುಕೊಳ್ಳುವ ಜೀವನಶೈಲಿಯ ನಾಡಿನ ಕಲೆಯಲ್ಲಿ ದೊಗಲೆ- ಅಂಗಿಗಳನ್ನು ಹಾಕಿಕೊಳ್ಳುವ ಪರಿಪಾಠ ಎಂದಿಗೆ ಶುರುವಾಗಿದ್ದಿರಬಹುದು... ಹೀಗೆ. ಶಿವರಾಮ ಕಾರಂತರ ಪ್ರಾಯೋಗಿಕ ವೇಷಭೂಷಣಗಳು ಅವರು ಭೌತಿಕವಾಗಿ ಇರುವವರೆಗೂ ನಮ್ಮಲ್ಲಿ ಇತ್ತು. ಆದರೆ, ಈಗ ಅದನ್ನು ಬಳಸುತ್ತಿಲ್ಲ. ಯಕ್ಷಗಾನ ಪಾರಂಪರಿಕ ವೇಷಭೂಷಣಗಳಲ್ಲಿಯೇ ನನ್ನ ಪ್ರಯೋಗಗಳನ್ನು ಸಾಧ್ಯವಾಗಿಸಬೇಕೆನ್ನುವ ಸಂಕಲ್ಪದಲ್ಲಿ ಮತ್ತೆ ಸಾಂಪ್ರದಾಯಿಕ ವೇಷಭೂಷಣಗಳನ್ನು ಕೇಂದ್ರದ ತಂಡಕ್ಕೆ ರೂಪಿಸಿಕೊಂಡಿದ್ದೇನೆ. ಪಾರಂಪರಿಕ ವೇಷಭೂಷಣದಲ್ಲಿ ಅದರದ್ದೇ ಆದ ಒಂದು ಸೊಗಸಿದೆ. ಇಲ್ಲಿ ಮುಖ್ಯವಾಗಿ ಬಂಗಾರ ವರ್ಣ ಮತ್ತು ಬೆಳ್ಳಿಯ ವರ್ಣಗಳ ಆಭರಣಗಳು ಬಳಕೆಯಾಗುತ್ತವೆ. ಕಾಲಿಗೆ ಬೆಳ್ಳಿಯ ವರ್ಣದ ಕಡಗ, ಸೊಂಟದಲ್ಲಿ ಮತ್ತೆ ಬೆಳ್ಳಿಯ ವರ್ಣದ ಸೊಂಟಪಟ್ಟಿ, ಕುತ್ತಿಗೆಯಲ್ಲೊಂದು ಬಿಳಿಯ ಸರ. ಕಿರೀಟದ ಮಧ್ಯೆಯೂ ಬಿಳಿಯ ಪಟ್ಟಿಗಳು. ಹೀಗೆ ಮಧ್ಯೆ ಮಧ್ಯೆ ಕಾಣಿಸುವ ಧವಳ ವರ್ಣವು ಅರಿಶಿನ ವರ್ಣದ ಏಕತಾನತೆಯನ್ನು ಬೇಧಿಸಿ ಅದು ಹೊಳೆಯುವಂತೆ ಕಾಣಿಸುವ ಕಲಾತ್ಮಕತೆ ಪಾರಂಪರಿಕ ವೇಷಭೂಷಣದಲ್ಲಿತ್ತು. ಉಡುವ ವಸ್ತ್ರಗಳು ಕಪ್ಪು, ಹಸಿರು ಮತ್ತು ಕೆಂಪು ಬಣ್ಣದಲ್ಲಿ ಮಾತ್ರ ಇವೆ. ಹೀಗೆ, ಐದು ಬಣ್ಣಗಳು ಮಾತ್ರ ಯಕ್ಷಗಾನದ ವೇಷಭೂಷಣದಲ್ಲಿ ಬಳಕೆಯಾಗುತ್ತವೆ. ಕಚ್ಚೆಗೆ ಪಾರಂಪರಿಕವಾಗಿ ಕೈಮಗ್ಗದಲ್ಲಿ ನೇಯ್ದ ಕಸೆಸೀರೆಯನ್ನು ಮಾತ್ರ ಬಳಸುತ್ತೇವೆ.

ಒಡ್ಡೋಲಗ, ಯುದ್ಧ ನೃತ್ಯಗಳ ವೈವಿಧ್ಯಗಳನ್ನು, ಹೆಜ್ಜೆಗಾರಿಕೆ- ನಾಟ್ಯಾಭಿನಯಗಳನ್ನು ಗಂಟೆಗಟ್ಟಲೆ ಕುಣಿದು ತೋರಿಸುವಷ್ಟಿದೆಯಾದರೂ ಪರಂಪರೆಯನ್ನು ಲಂಘಿಸಿ ಹೊಸ ರಂಗರೂಪವನ್ನು ಕಾಣಿಸಲು ಸಾಧ್ಯವೇ... ಎಂಬ ವಿಚಾರವೊಂದು ನನ್ನನ್ನು ಕಾಡುತ್ತಿತ್ತು. ಹಾಗೆಂದು, ಇದನ್ನು ‘ಆದರ್ಶ’ವಾಗಿ ಪ್ರಸ್ತುತಪಡಿಸಬೇಕೆನ್ನುವ ಹಠ ನನಗಿಲ್ಲ , ‘ಹೀಗೂ ಒಂದು ಸಾಧ್ಯ’ ಎಂಬ ಪ್ರಯತ್ನ ಅಷ್ಟೆ. ವಿಶೇಷವಾಗಿ ಇಂಥ ರಂಗರೂಪವೊಂದರ ಅಗತ್ಯ ನನಗೆ ಕಾಣಿಸಿದುದು ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡುವಾಗ. ತಲೆನೋಯುವಂಥ ಕಿರೀಟಗಳನ್ನು ಧರಿಸಿ, ತಮ್ಮ ಜೀವನದಲ್ಲಿ ಅರಿವಿಲ್ಲದ ಶೃಂಗಾರ ರಸ, ಶೋಕ ರಸದ ಪಾತ್ರಗಳನ್ನು ಮಕ್ಕಳು ನಿರ್ವಹಿಸುವುದನ್ನು ನೋಡಿದಾಗ ಅದೊಂದು ರೀತಿಯ ಅಸಂಗತ ಅಭಿವ್ಯಕ್ತಿಯಂತೆ ನನಗೆ ಭಾಸವಾಗುತ್ತಿತ್ತು. ಪಾತ್ರ ಪೌರಾಣಿಕ ಲೋಕದ್ದಾದರೂ ಅದನ್ನು ಲೌಕಿಕ ಸಂದರ್ಭದಲ್ಲಿ ಪ್ರದರ್ಶಿಸುವಾಗ ಅದರ ಹೃದಯವನ್ನು ಅರಿಯದೇ ಹೋದರೆ ಚಿತ್ರಣ ಕೇವಲ ಅನುಕರಣೆಯಾಗಿ ಬಿಡುತ್ತದೆ. ಕಲೆಯನ್ನು ಬಲಗೊಳಿಸುವುದರಲ್ಲಿ ಅನುಕರಣೆಯೂ ಒಂದು ಮುಖ್ಯ ಅಂಶ. ಆದರೆ, ಅನುಕರಣೆಯೇ ಕಲೆಯಲ್ಲ, ಕಲೆಯಾಗಬಾರದು ಕೂಡ. ಹಾಗಾಗಿಯೇ ಮಕ್ಕಳ ಯಕ್ಷಗಾನ ರಂಗಭೂಮಿಯನ್ನು ಕಲ್ಪಿಸಿಕೊಂಡಾಗ ಅವರಿಗೆ ಅದನ್ನೊಂದು ಆಟವಾಗಿ ಕಲಿಯುವುದಕ್ಕೆ ಸಾಧ್ಯವಾಗುವಂತಿರಬೇಕು. ಹಾಗೆ, ‘ಏಕಲವ್ಯ’ ಪ್ರಸಂಗವನ್ನು ಯಕ್ಷಗಾನದ ವೇಷಭೂಷಣಗಳಿಲ್ಲದೆ, ಸರಳ ಉಡುಗೆಯಲ್ಲಿ ಮಕ್ಕಳಿಂದ ಪ್ರಸ್ತುತಪಡಿಸಿದ್ದಿದೆ. ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ‘ಸಮಕಾಲೀನ’ ಸಾಧ್ಯತೆಯ ಕುರಿತು ಕ್ರಿಯಾಶೀಲರಾಗಿರುವ ಹೊಸ್ತೋಟ ಮಂಜುನಾಥ ಭಾಗವತರ ‘ಗುರುದಕ್ಷಿಣೆ’ ಪಠ್ಯವೊಂದು ನನ್ನ ಮನಸ್ಸಿನಲ್ಲಿ ಯಾವಾಗಿನಿಂದ ಓಡಾಡುತ್ತಿದೆ. ಆ ಪ್ರಸಂಗದಲ್ಲಿನ ಗುರುಕುಲದ ಶಿಸ್ತು, ಕಲಿಕೆಯ ನಿಷ್ಠೆ ಇತ್ಯಾದಿಗಳನ್ನು ಸರಳ ಮಾದರಿಯಲ್ಲಿ ಕಾಣಿಸುವ ಪ್ರಯತ್ನ ಸಾಧ್ಯವೆ ಎಂದು ಯೋಚಿಸುತ್ತಿದ್ದೇನೆ. ಹಾಗೆಂದು, ಈಗಾಗಲೇ ಅನೇಕ ರೀತಿಯ ಪ್ರಯೋಗಗಳಿಗೆ ತೆರೆದುಕೊಂಡಿರುವ ಯಕ್ಷಗಾನ ಕ್ಷೇತ್ರದಲ್ಲಿ ಇಂಥ ಯೋಚನೆಗಳು ಹೊಸತೆಂದು ಹೇಳಿಕೊಳ್ಳುವ ಬಿಗುಮಾನ ನನಗಿಲ್ಲ.

೮೦ರ ದಶಕದಲ್ಲೊಮ್ಮೆ ‘ಪಂಚವಟಿ’ಯ ರಾಮನೂ ಸೀತೆಯೂ ಶೂರ್ಪನಖಿಯೂ ಎಲ್ಲ ಪಾತ್ರಗಳೂ ನಾನೇ ಆಗಿ ‘ಏಕವ್ಯಕ್ತಿ’ ಪ್ರದರ್ಶನಗಳನ್ನು ನೀಡುತ್ತಿದ್ದೆ. ಸುಮಾರು ಮೂವತ್ತು ಪ್ರಯೋಗಗಳನ್ನು ಕಂಡ ಈ ‘ಏಕವ್ಯಕ್ತಿ’ ಪ್ರದರ್ಶನದ ಬಗ್ಗೆ ಈಗ ನೆನಪಿನಲ್ಲಿ ಬದುಕಿರುವ ಕೆರೆಮನೆ ಮಹಾಬಲ ಹೆಗಡೆಯವರು ಪತ್ರಿಕೆಯಲ್ಲಿ ಲೇಖನವನ್ನೂ ಬರೆದಿದ್ದರು. ಶಿವರಾಮ ಕಾರಂತರಿಗೆ ಮಾತ್ರ ಈ ಪ್ರಯೋಗ ಇಷ್ಟವಾಗಲಿಲ್ಲ. ಮೇಳದ ಕಲೆಯನ್ನು ಏಕವ್ಯಕ್ತಿಯಾಗಿ ರೂಪಿಸುವುದು ಅವರಿಗೆ ಸಮ್ಮತವಲ್ಲದೆ ಕಂಡಿರಬೇಕು. ‘ಅದನ್ನು ನಿಲ್ಲಿಸು’ ಎಂದು ಅವರು ನನಗೆ ಪತ್ರ ಬರೆದರು.

...................................................................

 ತತ್‌ಕ್ಷಣ ‘ಏಕವ್ಯಕ್ತಿ’ ಪ್ರಯೋಗಕ್ಕೆ ವಿರಾಮ ಹೇಳಿದೆ.

ಹಾಗೆಂದು, ಯಕ್ಷಗಾನದ ಔದಾರ್ಯ ನನ್ನ ಬದುಕನ್ನು ಎಂದಿಗೂ ‘ಏಕವ್ಯಕ್ತಿ’ ಯಾಗಿಸಲಿಲ್ಲ. ಒಂಟಿಭಾವ ಮರೆತೇಹೋಗುವಂತೆ ನೂರಾರು ಸ್ನೇಹಬಂಧದಲ್ಲಿ ಹೆಜ್ಜೆಗಳನ್ನಿರಿಸಿ ಜೀವನನದಿಯನ್ನು ದಾಟುವುದಕ್ಕೆ ಇಂದು ಸಾಧ್ಯವಾಗಿರುವುದಕ್ಕೆ ನನಗೆ ಅಭಿಮಾನವಿದೆ.
ಕೈಗಾಡಿಯನ್ನು ಎಳೆಯುತ್ತ ಸಾಗುವುದು ಮೊದಮೊದಲು ಕಷ್ಟವೆನ್ನಿಸಿದರೂ ನಿಧಾನವಾಗಿ ಬಂಡಿಯೇ ಎಳೆಯುವನನ್ನು ದೂಡುತ್ತ ಸಹಕರಿಸುವಂತೆ ಬದುಕಿನ ಚಕ್ರ ಅದರಷ್ಟಕ್ಕೇ ಸುತ್ತುತ್ತಿರುತ್ತದೆ. ಆಗೆಲ್ಲ ಕೈಗಾಡಿಗೆ ದಿನವೊಂದರ ಬಾಡಿಗೆ ಒಂದಾಣೆ. ಬಾಲ್ಯದಲ್ಲಿ ನನಗೊಬ್ಬ ಗೆಳೆಯನಿದ್ದ. ನಾವಿಬ್ಬರೂ ಕೆಲ ಸಮಯ ತಳ್ಳುಬಂಡಿಯಲ್ಲಿ ಸಾಮಾನು ಹೇರಿ ಅದನ್ನು ಎಳೆಯ ಕೈಗಳಲ್ಲಿ ಎಳೆದುಕೊಂಡು ತಲುಪಬೇಕಾದ ಸ್ಥಳಕ್ಕೆ ತಲುಪಿಸಿ ಮತ್ತೆ ಬಸ್‌ಸ್ಟ್ಯಾಂಡಿನಲ್ಲಿ ನಮ್ಮ ಜಾಗದಲ್ಲಿ ಮತ್ತೊಬ್ಬ ಗಿರಾಕಿಯನ್ನು ಕಾಯುತ್ತ ಕೂರುತ್ತಿದ್ದೆವು. ಆ ಗೆಳೆಯ ಈಗ ಹೇಗಿದ್ದಾನೋ ಗೊತ್ತಿಲ್ಲ. ನೂಕುಬಂಡಿಯನ್ನು ನೋಡುತ್ತಿರುವಾಗಲೆಲ್ಲ ಬೈಸಿಕಲ್ಲನ್ನು ಏರಿ ಸಾಗುತ್ತಿದ್ದವರು ಆಕರ್ಷಕವಾಗಿ ಕಾಣುತ್ತಿದ್ದರು. ಸೈಕಲನ್ನು ಕೊಂಡು ಅದರ ಪೆಡಲನ್ನು ಮೆಟ್ಟುತ್ತ ಸಾಗುತ್ತಿರುವಾಗ ಸ್ಕೂಟರ್‌ನ ಕನಸು ಬೀಳುತ್ತಿತ್ತು.

ಈಗ ದುಬೈಯಲ್ಲಿರುವ ಖ್ಯಾತ ಉದ್ಯಮಿಯೊಬ್ಬರಲ್ಲಿ ಹಿಂಬದಿ ಚಪ್ಪಟೆಯಾಗಿದ್ದ ಹಳೆಯ ಕಾರಿತ್ತು. ಅದಕ್ಕೆ ಕೆಲವೊಮ್ಮೆ ಸ್ಟಾರ್ಟಿಂಗ್ ಟ್ರಬಲ್. ಆಗ ನಾವು ಹುಡುಗರು ಅದನ್ನು ಹಿಂದಿನಿಂದ ದೂಡಿಕೊಂಡು ಓಡುತ್ತಿದ್ದೆವು. ಅದರಲ್ಲೊಂದು ಖುಷಿಯೂ ಇರುತ್ತಿತ್ತು. ಕಾರು ಬರ್ರನೆ ಸ್ಟಾರ್ಟ್ ಆಗಿ ನಮ್ಮ ಅಂಗೈ ಮುದ್ರೆಯ ಹಂಗುತೊರೆದು ಮುಂದೋಡುತ್ತ ಕನಸಿನಂತೆ ಮನಸ್ಸಿನಿಂದ ಮರೆಯಾಗಿಬಿಡುತ್ತಿತ್ತು.
ಕಾರಿನ ಗ್ಲಾಸು ಒರೆಸುತ್ತ ಒಳಗಿನ ಮೆತ್ತನೆ ಸೀಟುಗಳ ರಮ್ಯತೆಯನ್ನು ಬೆರಗಿನಿಂದ ನೋಡುತ್ತಿದ್ದ ಬಾಲ್ಯದ ದಿನಗಳು ಮತ್ತೆ ನೆನಪಾಗುತ್ತಿವೆ. ಯಕ್ಷಗಾನದ ಲೋಕದ ಬಾಗಿಲಿನ ಬಳಿಯೂ ಅದೇ ಬೆರಗಿನಿಂದ ನಿಂತುಕೊಂಡಿದ್ದೆ.
ಕಾರಿನ ಬಾಗಿಲು ತೆರೆದುಕೊಂಡಿದೆ.

ಯಕ್ಷಗಾನವಂತೂ ನನ್ನನ್ನು ಎಂದೋ ಒಳಸೆಳೆದುಕೊಂಡಿದೆ.

ಹಾಗೆಂದು, ಕಾರಿನ ಮೆತ್ತನೆ ಸೀಟಿನ ಭವದ ಭವ್ಯ

........................................................

ಸುಖವನ್ನು ಯಕ್ಷಗಾನ ಲೋಕದ ದಿವಿಯ ದಿವ್ಯ ಆನಂದದೊಂದಿಗೆ ಸರಿಗಟ್ಟುವುದು ಸಾಧ್ಯವೆ !

‘ಸಂಜೀವನ’ದಲ್ಲಿ ನನ್ನ ಬದುಕಿನ ಸುಂದರ ಕ್ಷಣಗಳನ್ನೂ ಉದಾರ ಗಳಿಗೆಗಳನ್ನೂ ಈವರೆಗೆ ಹೇಳಿಕೊಳ್ಳುತ್ತ ಬಂದಿದ್ದೇನೆ. ನೋವಿನ ಅನುಭವಗಳು ಇಲ್ಲವೆಂದಲ್ಲ, ಯಾಕೆ ಹೇಳಿಕೊಳ್ಳಬೇಕು ಎಂದು ಅನ್ನಿಸಿದ್ದಿದೆ. ಅಲ್ಲದೆ, ಯಕ್ಷಗಾನ ರಂಗಭೂಮಿಗೆ ಸಂಬಂಧಿಸಿರದ ಅನುಭವಗಳು, ಯಾರದ್ದೂ ಆಗಿರಬಹುದಾದ ಕಾರಣ ಅವನ್ನು ವಿಶೇಷವಾಗಿ ಹೇಳಿಕೊಳ್ಳುವುದು ಅನುಚಿತವೆಂದು ನನಗೆ ತೋರಿತ್ತು. ಅಲ್ಲದೆ, ಈ ಕಥೆ ನನ್ನ ‘ಆತ್ಮ’ ಕೇಂದ್ರಿತವಾಗಿರುವುದರಿಂದ ಎಷ್ಟೋ ಕಡೆ ನನ್ನ ಸಣ್ಣತನಗಳನ್ನೂ ಮರೆಮಾಚಿಕೊಂಡಿದ್ದೇನೋ ಏನೊ. ಈ ಎಲ್ಲ ಅರ್ಥಗಳಲ್ಲಿ ಇದೊಂದು ಅರ್ಧ ಆತ್ಮಕಥನ. ನನಗಿನ್ನೂ ಆಯುಷ್ಯವಿದೆ, ಕಲಿಯುವುದಕ್ಕೆ ಬಹಳಷ್ಟಿದೆ ಎಂಬ ಭಾವದಿಂದಲೂ ಈ ಆತ್ಮಕಥನ ಅರ್ಧವೇ.

ಇಲ್ಲೊಂದು ಅವಕಾಶ ಸಿಗುತ್ತಿರಲಿಲ್ಲವಾದರೆ ಹೀಗೆ ಮೂವತ್ತು ಕಂತುಗಳಲ್ಲಿ ಜೀವನಗಾಥೆಯನ್ನು ನಿಮ್ಮ ಮುಂದೆ ಹರಡಿಕೊಳ್ಳುವುದು ಸಾಧ್ಯವಿತ್ತೆ? ‘ಪ್ರಜಾವಾಣಿ’ ಬಳಗದವರಿಗೆ ಹೇಗೆ ಕೃತಜ್ಞತೆಗಳನ್ನು ಸಲ್ಲಿಸಲಿ!

‘ಸಂಜೀವನ’ದಲ್ಲಿ ಒಳ್ಳೆಯ ವಿಚಾರಗಳೇನಾದರೂ ಇದ್ದರೆ ಅದರ ಹೆಗ್ಗಳಿಕೆ ಯಕ್ಷಗಾನದ ಗಣಪತಿಗೂ ನನ್ನನ್ನು ಎತ್ತಿ ಪೊರೆದ ದಾತಾರರಿಗೂ ಸಲ್ಲಲಿ.

(ಮಂಗಲಂ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT