ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮದ ಒಳ ಹೊರಗು

Last Updated 24 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಆ ಕಾಲವೊಂದಿತ್ತು. ತಮ್ಮಲ್ಲೊಂದು ದುಬಾರಿ ಐಷಾರಾಮದ ವಸ್ತುವಿದೆ ಅಥವಾ ಸಂಪತ್ತಿದೆ ಎಂಬುದನ್ನು ಅನ್ಯರಿಗೆ ತೋರಿಸದೆ ಬಚ್ಚಿಡುತ್ತಿದ್ದ ಕಾಲವದು. ತಮ್ಮ ಬೆಳವಣಿಗೆ ಅಥವಾ ಏಳಿಗೆಗೆ ಇತರರು ಕರುಬಬಹುದೇನೋ ಎಂಬ ಆತಂಕವಿದ್ದ ಕಾಲ. ನಮ್ಮ ಮೇಲೆ ಆಗದವರ ಕಣ್ಣು ಬೀಳಬಹುದೇನೊ ಎಂಬ ಸಂದೇಹವಿರುತ್ತಿದ್ದ ಕಾಲ.

ಆದರೆ ಈಗ ಕಾಲ ಬದಲಾಗಿದೆ. ತನ್ನ ಸಂಪತ್ತನ್ನು, ಐಷಾರಾಮದ ಬದುಕನ್ನು ಮುಚ್ಚಿಡುವವ ಈ ಹೊತ್ತು ಮೂರ್ಖ ಎನಿಸಿಕೊಳ್ಳುತ್ತಾನೆ. ಐಷಾರಾಮವನ್ನು ಪ್ರದರ್ಶಿಸುವುದು ಈಗ ಪ್ರತಿಷ್ಠೆಯ ಸಂಕೇತ. ಅದು ಮನೆ ಇರಬಹುದು, ಕಾರು ಇರಬಹುದು ಅಥವಾ ಆಭರಣಗಳಿರಬಹುದು. ಇತರರ ಕಣ್ಣು ಕೋರೈಸುವಂತೆ ಅವನ್ನು ಪ್ರದರ್ಶಿಸುವುದೇ ಇವತ್ತಿನ ಟ್ರೆಂಡ್.

ಹೀಗಾಗಿ ಇವತ್ತಿನ ಐಷಾರಾಮದ ಬದುಕಿಗೆ ಅಂಟಿಕೊಂಡ ಎಲ್ಲಕ್ಕೂ ಪ್ರಚಂಡ ಪ್ರದರ್ಶನದ ಅನಿವಾರ್ಯತೆ ಬಂದೊದಗಿದೆ.

ಸ್ಥೂಲವಾಗಿ ಹೇಳುವಂತೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಈ ಪ್ರದರ್ಶನದ ಅನಿವಾರ್ಯತೆ ಇಂದು ಇದೆ. ಅದು ಅದನ್ನು ಪಾಲಿಸುತ್ತಲೂ ಇದೆ.

ಅಪಾರ್ಟ್‌ಮೆಂಟ್‌, ವಿಲ್ಲಾಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಎದ್ದು ಕಾಣುವುದು ಅವುಗಳ ಬೆಲೆ. ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಒಂದು ಸುತ್ತು  ಹಾಕಿ ಬಂದರೆ ಇದು ಅರಿವಿಗೆ ಬರುತ್ತದೆ. ಫರ್ಲಾಂಗ್ ದೂರಕ್ಕೇ ಕಾಣುವಂತೆ ಎತ್ತರದಲ್ಲಿರಿಸಿರುವ ಹೋರ್ಡಿಂಗ್‌ಗಳಲ್ಲಿ ಬೆಲೆಯನ್ನು ಘೋಷಿಸಲಾಗಿರುತ್ತದೆ. ಅವು ಸಾಮಾನ್ಯವಾಗಿ ಹೀಗಿರುತ್ತದೆ.. ‘4 ಬಿಎಚ್‌ಕೆ ಫ್ಲ್ಯಾಟ್ 3.5 ಕರೋರ್ ಅಂಡ್ ಆನ್ವಾರ್ಡ್ಸ್’.. ‘ಲಕ್ಷುರಿ ವಿಲ್ಲಾ ಸ್ಟಾರ್ಟ್ಸ್ ಫ್ರಂ 5 ಕರೋರ್’.

ಅಂತಹ ಜಾಹೀರಾತನ್ನು ನೋಡಿದ ಸಾಮಾನ್ಯರಿಗೆ, ‘ಇವೆಲ್ಲಾ ಮಾರಾಟವಾಗುತ್ತವಾ’ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ನಗರದೊಳಗೆ ನಿರ್ಮಾಣವಾಗುವ ಲಕ್ಷುರಿ ಅಪಾರ್ಟ್‌ಮೆಂಟ್‌ಗಳು ಸಿದ್ಧವಾಗುವಷ್ಟರಲ್ಲಿ ಅವುಗಳಲ್ಲಿನ ಬಹುತೇಕ ಫ್ಲ್ಯಾಟ್‌ಗಳು ಮಾರಾಟವಾಗಿರುತ್ತವೆ. ಯಾವತ್ತೋ  ಒಂದು ದಿನ ಜನ ಅಲ್ಲಿಗೆ ಬಂದು ವಾಸಿಸತೊಡಗುತ್ತಾರೆ. ನೋಡ ನೋಡುತ್ತಿದ್ದಂತೆ ಅದರೊಳಗೊಂದು ಪ್ರತ್ಯೇಕವಾದ ಊರು ಬೆಳೆದುಬಿಟ್ಟಿರುತ್ತದೆ.

ಇಷ್ಟು ದುಬಾರಿ ಫ್ಲ್ಯಾಟ್‌ಗಳಾವುವೂ ನಗರದ ಹೊರಭಾಗದಲ್ಲಿಲ್ಲ. ಇವೆಲ್ಲವೂ ನಗರದ ಹೃದಯಭಾಗಕ್ಕೆ ಅಂಟಿಕೊಂಡಿರುವ ಬಡಾವಣೆಗಳಲ್ಲಿವೆ. ಬಹತೇಕ ಇವೆಲ್ಲಾ ಹಿಂದೊಮ್ಮೆ ಅಲ್ಲಿದ್ದ ಸರ್ಕಾರಿ ಕಾರ್ಖಾನೆ ಅಥವಾ ಸಹಕಾರ ವಲಯದ ಅಥವಾ ಖಾಸಗಿ ಕಂಪೆನಿಯೊಂದಿದ್ದ ಜಾಗದಲ್ಲಿ ತಲೆ ಎತ್ತಿರುತ್ತವೆ. ಬಿನ್ನಿ ಮಿಲ್ ಮೈದಾನದಲ್ಲಿ ತಲೆ ಎತ್ತಿರುವ ಅಪಾರ್ಟ್‌ಮೆಂಟ್‌ಗಳು, ಮಿನರ್ವ ಮಿಲ್ ಬಳಿ ತಲೆ ಎತ್ತುತ್ತಿರುವ ಶೋಭ ಇಂದ್ರಪ್ರಸ್ಥ ಇದಕ್ಕೆ ಒಂದೆರಡು ಉದಾಹರಣೆಗಳಷ್ಟೆ.

ಮೊದಲೇ ಹೇಳಿದಂತೆ ಇಂತಹ ಐಷಾರಾಮಿ ಮತ್ತು ದುಬಾರಿ ಅಪಾರ್ಟ್‌ಮೆಂಟ್‌ಗಳು ಇರುವುದು ನಗರದ ಒಳಭಾಗದಲ್ಲಿ. ರಾಜಾಜಿನಗರ, ಬಸವನಗುಡಿ, ಜಯನಗರ, ಜೆ.ಪಿ.ನಗರ, ಎಚ್‌ಎಸ್‌ಆರ್ ಬಡಾವಣೆ, ಕೋರಮಂಗಲ ಮೊದಲಾದ ಬಡಾವಣೆಗಳು ಇಂತಹ ಐಷಾರಾಮಿ ವಸತಿಗಳ ಹಾಟ್‌ಸ್ಪಾಟ್‌ಗಳು. ಇಲ್ಲಿ ಬಜೆಟ್‌ನ ಫ್ಲ್ಯಾಟ್‌ಗಳೂ ಸಿಗುತ್ತವೆ. ದುಬಾರಿ ಬೆಲೆಯ ಈ ಅಪಾರ್ಟ್‌ಮೆಂಟ್‌ಗಳು ಸೌಕರ್ಯದಲ್ಲೇನೂ ಸಾಮಾನ್ಯವಾಗಿರುವುದಿಲ್ಲ. ಸಾಮಾನ್ಯ ಅಪಾರ್ಟ್‌ಮೆಂಟ್‌ಗಳಲ್ಲಿರುವ ಸಕಲ ಸೌಕರ್ಯಗಳೇ ಇಲ್ಲಿರುತ್ತವಾದರೂ ಅವುಗಳಿಗೆ ಪ್ರೀಮಿಯಂ ಟಚ್ ಇರುತ್ತದೆ.

ಒಳಾಂಗಣದಲ್ಲಿರುವ ಈಜುಕೊಳ, ಭಿನ್ನ ಸ್ವರೂಪದ ಈಜುಕೊಳಗಳು, ಅತ್ಯಾಧುನಿಕ ಫಿಟ್‌ನೆಸ್ ಸೆಂಟರ್‌, ವಿಶಾಲವಾದ ಪಾರ್ಟಿ ಹಾಲ್, ರೆಸ್ಟೋರೆಂಟ್, ಮಿನಿ ಥಿಯೇಟರ್, ಬಯಲು ರಂಗಮಂದಿರ, ಆಟದ ಮೈದಾನ... ಹೀಗೆ ಪ್ರೀಮಿಯಂ ಸೌಕರ್ಯಗಳ ಪಟ್ಟಿ ಬೆಳೆಯುತ್ತದೆ.

ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಸ್ವರೂಪದಲ್ಲಿ ಈಚೆಗೆ ಬದಲಾವಣೆಯಾಗುತ್ತಿದೆ. ಅದರಲ್ಲಿ ಮುಖ್ಯವಾದುದು ಸೀಲಿಂಗ್. ವಿಶಿಷ್ಠವಾಗಿ ವಿನ್ಯಾಸ ಮಾಡಿದ ತರಹೇವರಿ ಫಾಲ್‌ ಸೀಲಿಂಗ್ ಅದರಲ್ಲೊಂದು. ದಶಕದ ಹಿಂದೆ ಓಪನ್ ಕಿಚನ್ ಎಂಬ ಪರಿಕಲ್ಪನೆ ಬಗ್ಗೆ ಹೆಚ್ಚು ಮಾತು ಕೇಳಿಬರುತ್ತಿತ್ತು. ಅಪಾರ್ಟ್‌ಮೆಂಟ್‌ ಸಂಸ್ಕೃತಿಯಾದ ಇದು ಕೆಲವಾರು ಸಾಮಾನ್ಯ ಮನೆಗಳಿಗೂ ಬಂದದ್ದು ಸುಳ್ಳಲ್ಲ. ಆ ಹೊತ್ತಿಗೆ ಓಪನ್ ಕಿಚನ್ ಎಂಬುದು ‘ನಾವು ಮುಂದುವರೆದವರು’ ಎಂದು ತೋರಿಸಿಕೊಳ್ಳುವುದರ ಸಂಕೇತವಾಗಿಯೇ ಬೆಳೆದಿತ್ತು. ಈಗ ಓಪನ್ ಕಿಚನ್‌ನ ಕಾಲ ಮುಗಿಯುತ್ತಿದೆ. ಈಗಿನ ಟ್ರೆಂಡ್ ಇಟಾಲಿಯನ್ ಕಿಚನ್‌ಗಳದ್ದು. ಇಟಾಲಿಯನ್ ಮಾದರಿಯಲ್ಲಿ ವಿನ್ಯಾಸ ಮಾಡಿದ, ದುಬಾರಿ ವುಡ್‌ ಫಿನಿಶಿಂಗ್ ಇರುವ ಈ ಅಡುಗೆ ಕೋಣೆಗಳು ಒಂದೇ ನೋಟಕ್ಕೆ ಮನ ಸೆಳೆಯುತ್ತವೆ.

ಇಟಾಲಿಯನ್ ಕಿಚನ್‌ಗಳಿಗೇ ಮೀಸಲಾದ ವಿಶಿಷ್ಟ ವಿನ್ಯಾಸದ ಚಿಮಣಿ, ಸ್ಟೌ, ವಾಷಿಂಗ್ ಬೇಸಿನ್‌ ಇವೆ. ಒಂದೆರಡು ವರ್ಷಗಳ ಹಿಂದೆ ಇಲ್ಲವೇ ಏನೋ ಎಂಬತ್ತಿದ್ದ ಈ ಸೌಕರ್ಯ ಈಗ ಪ್ರತಿಷ್ಠೆಯ ಸಂಕೇತ. ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತು ಹೊಡೆಯುವಾಗ ಇಟಾಲಿಯನ್ ಕಿಚನ್‌ಗಳ ಜಾಹೀರಾತುಗಳು ಕಣ್ಣಿಗೆ ರಾಚುವಷ್ಟಿವೆ.

ಮೊದಲೆಲ್ಲಾ ಇದ್ದೂ ಇಲ್ಲದಂತಿರುತ್ತಿದ್ದ ಬಾಲ್ಕನಿಗಳಿಗೆ ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳಲ್ಲಿ ಈಗ ಪ್ರಾಶಸ್ತ್ಯ ಹೆಚ್ಚು. ವಿಶಾಲವಾಗಿರುವ ಬಾಲ್ಕನಿಗಳಿದ್ದರೆ ಮಾತ್ರ ಸಾಲದು. ಅವುಗಳಿಂದ ಕಾಣುವ ನೋಟವೂ ಅಂದವಾಗಿರಬೇಕಲ್ಲವೆ? ಹೀಗಾಗಿ ಅಪಾರ್ಟ್‌ಮೆಂಟ್‌ಗಳ ಅಂಗಳದಲ್ಲಿ ಇರುತ್ತಿದ್ದ ಉದ್ಯಾನಗಳ ಜಾಗಕ್ಕೆ ಈಗ ಕೃತಕ ಕಾಡು ಬಂದಿದೆ.

ಅಪಾರ್ಟ್‌ಮೆಂಟ್‌ ನಿರ್ಮಾಣ ಕಾರ್ಯ ಆರಂಭವಾದಾಗ ನೆಟ್ಟ ಸಸಿಗಳು, ಫ್ಲ್ಯಾಟ್‌ಗಳು ಸಿದ್ಧವಾಗುವಷ್ಟರಲ್ಲಿ ದೊಡ್ಡವಾಗಿರುತ್ತವೆ. ಹತ್ತಾರು ಮರಗಳ ನಡುವಿನ ಜಾಗದಲ್ಲಿ ಒಂದು ಸಣ್ಣ ಕೊಳ, ಬಾಲ್ಕನಿಯಲ್ಲಿ ಕುಳಿತಾಗ ಮುದ ನೀಡಲಿ ಎಂದು ಈ ಹೊಸ ರೀತಿಯ ವಿನ್ಯಾಸ.

ಕೆಲವಾರು ಅಪಾರ್ಟ್‌ಮೆಂಟ್‌ಗಳ ಅಂಗಳದಲ್ಲಿ ಮಾಲ್‌ಗಳೂ ತಲೆ ಎತ್ತಿವೆ. ಅವು ಇಂದಿನ ಅಗತ್ಯವೂ ಎಂಬಂತಾಗಿದೆ.
ಓಲ್ಡ್‌ ಮೈಸೂರ್‌ ರೋಡ್‌ನಲ್ಲಿ ಮಿನರ್ವ ಮಿಲ್ ಬಳಿ ತಲೆ ಎತ್ತುತ್ತಿರುವ ಶೋಭ ಇಂದ್ರಪ್ರಸ್ಥ ಪ್ರೀಮಿಯಂ ಅಪಾರ್ಟ್‌ಮೆಂಟ್‌ನಲ್ಲಿ ಹೆಲಿಪ್ಯಾಡ್‌ ಸಹ ಇರಲಿದೆ. ಇದು ಪ್ರೀಮಿಯಂ ಅಪಾರ್ಟ್‌ಮೆಂಟ್‌ ಪರಿಕಲ್ಪನೆಯನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದೆ.

ಈ ಎಲ್ಲಾ ಪ್ರೀಮಿಯಂ ಸೌಕರ್ಯಗಳು ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಕಣ್ಣು ಕುಕ್ಕುವಂತೆ ಪ್ರದರ್ಶಿತವಾಗಿರುತ್ತವೆ.

ಐಷಾರಾಮ ಮತ್ತು ದುಬಾರಿ ಎಂಬ ಟ್ಯಾಗ್ ಕೇವಲ ಹೊಸ ಅಪಾರ್ಟ್‌ಮೆಂಟ್‌ಗಳಿಗೆ ಮೀಸಲಾಗಿಲ್ಲ. ಒಂದೆರಡು ವರ್ಷಗಳ ಹಿಂದೆ ನಿರ್ಮಾಣವಾಗಿರುವ, ಬಳಸಿದ ಫ್ಲ್ಯಾಟ್‌ಗಳಿಗೂ ಈ ಹೆಗ್ಗಳಿಕೆ ಅಂಟಿಕೊಂಡಿದೆ.

ರಾಜ್‌ಕುಮಾರ್‌ ರಸ್ತೆಯಲ್ಲಿರುವ ಬ್ರಿಗೇಡ್‌ ಸಮೂಹದ ಅಪಾರ್ಟ್‌ಮೆಂಟ್‌ನಲ್ಲಿನ ಬಳಸಿದ 4 ಬಿಎಚ್‌ಕೆ ಫ್ಲ್ಯಾಟ್‌ನ ಬೆಲೆ 4 ಕೋಟಿ ದಾಟುತ್ತದೆ.

ಇಂಥದ್ದೇ ಒಂದು ಐಷಾರಾಮಿ ಫ್ಲ್ಯಾಟ್‌ ಅನ್ನು ಬಸವನಗುಡಿ ಮತ್ತು ಸುತ್ತಮುತ್ತಲ ಬಡಾವಣೆಯಲ್ಲಿ ಖರೀದಿಸಬೇಕೆಂದರೆ ಕನಿಷ್ಠ 5 ಕೋಟಿ ಬೇಕು. ಜಯನಗರ, ಜೆ.ಪಿ. ನಗರಗಳಲ್ಲೂ ಸರಿಸುಮಾರು ಇಷ್ಟೇ ಬೆಲೆ ಇದೆ. ಒಟ್ಟಿನಲ್ಲಿ ಐಷಾರಾಮ ಎಂಬುದು ಈಗ ಮುಚ್ಚಿಡುವ ಸಂಗತಿಯಲ್ಲ. 
***
ಬದಲಾದ ಜಾಹೀರಾತು...
‘ಈ ಜಾಹೀರಾತನ್ನು ನೋಡುತ್ತಿದ್ದರೆ ತಕ್ಷಣ ವಾಹನ ಚಲಾಯಿಸುವುದನ್ನು ನಿಲ್ಲಿಸಿ’  
‘ಫ್ಲ್ಯಾಟ್‌ ಕೊಂಡರೆ ನೋಂದಣಿ ಉಚಿತ’
‘ಇದು ಕನಸಲ್ಲ ವಾಸ್ತವ’ 

ಒಂದೆರಡು ವರ್ಷಗಳ ಹಿಂದಿನವರೆಗೂ ಇಂತಹ ಒಕ್ಕಣೆ ಇರುತ್ತಿದ್ದ ಜಾಹೀರಾತು ಹೋರ್ಡಿಂಗ್‌ಗಳು ನಗರದಲ್ಲೆಲ್ಲಾ ಇದ್ದವು. ಬಹುತೇಕ ಇವೆಲ್ಲಾ ಫ್ಲ್ಯಾಟ್, ನಿವೇಶನ ಮತ್ತು ವಿಲ್ಲಾಗಳಿಗೆ ಸಂಬಂಧಿಸಿದ್ದವಾಗಿರುತ್ತಿದ್ದವು. ಅತ್ಯಂತ ಕಡಿಮೆ ಬೆಲೆ ಎಂಬುದನ್ನೋ ಅಥವಾ ಕಡಿಮೆ ಬೆಲೆಗೆ ಹೆಚ್ಚಿನ ಸೌಕರ್ಯ ಇದೆ ಎಂಬುದನ್ನೋ ವಿವರಿಸಲು ಬಳಕೆಯಾಗುತ್ತಿದ್ದ ಒಕ್ಕಣೆಗಳವು.

ಅದು ಅಂದು ಗ್ರಾಹಕರನ್ನು ಸೆಳೆಯುವ ವಿಧಾನವಾಗಿತ್ತು. ಆದರೆ ಈಗ ಕಡಿಮೆ ಬೆಲೆ ಎಂಬುದೇ ಕೆಲವು ವರ್ಗದ ಗ್ರಾಹಕರನ್ನು ದೂರ ಇಡುವ ಪ್ರಮುಖ ಅಂಶ. ಹೀಗಾಗಿ ಇಂತಹ ಒಕ್ಕಣೆಗಳು, ಜಾಹೀರಾತುಗಳು ಆದ್ಯತೆ ಕಳೆದುಕೊಂಡಿವೆ. ಇದ್ದರೂ ಅವು ಕೆಳಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡ ಜಾಹೀರಾತುಗಳಾಗಿರುತ್ತವೆ.

‘ಜಗತ್ತೇ ನಿಮ್ಮ ಸುತ್ತ’, ‘ಇದು ಐಷಾರಾಮದ ವ್ಯಾಖ್ಯಾನ’ ಎಂಬ ಒಕ್ಕಣೆಗಳು ಈ ಹೊತ್ತಿನ ಟ್ರೆಂಡ್‌. ಅಪಾರ್ಟ್‌ಮೆಂಟ್‌ನಲ್ಲಿರುವ ಸೌಕರ್ಯವೊಂದರ ಚಿತ್ರವನ್ನು ತೀರಾ ವಾರ್ಮ್ ಆದ ಬೆಳಕಿನ ವಿನ್ಯಾಸದಲ್ಲಿ ಕ್ಲಿಕ್ಕಿಸಿ ಈ ಜಾಹೀರಾತುಗಳನ್ನು ರೂಪಿಸಲಾಗಿರುತ್ತದೆ. ಅಲ್ಲಿ ಚಿತ್ರ ಮತ್ತು ಬೆಲೆ ಅಥವಾ ಪ್ರೀಮಿಯಂ ಸೌಕರ್ಯದ ವಿವರವಷ್ಟೇ ದೊಡ್ಡದಾಗಿರುತ್ತದೆ.

ಡೆವಲಪರ್ಸ್, ವಿಳಾಸ ಮೊದಲಾದ ವಿವರಗಳೆಲ್ಲಾ ಜಾಹೀರಾತಿನ ಯಾವುದೋ ಒಂದು ಮೂಲೆಯಲ್ಲಿರುತ್ತವೆ. ಚಿತ್ರ ನೋಡಿದ ಮೇಲೆ ಇದು ಎಲ್ಲಿಯದ್ದು, ಯಾವ ಗ್ರೂಪ್‌ನದ್ದು ಎಂದು ನೋಡುವ ಕುತೂಹಲವನ್ನು ಶ್ರೀಸಾಮಾನ್ಯನಲ್ಲೂ ಹುಟ್ಟಿಸುವಂತಿರುತ್ತವೆ ಈ ಜಾಹೀರಾತುಗಳು. ಐಷಾರಾಮದ ಸಂಗತಿಗಳನ್ನು ತೆರೆದಿಟ್ಟು, ಉಳಿದ ವಿವರಗಳ ಬಗ್ಗೆ ಕುತೂಹಲ ಹುಟ್ಟಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಜಾಹೀರಾತು ಪ್ರಪಂಚದ ಹೊಸ ತಂತ್ರಗಾರಿಕೆ ಇದು.
***
ಪೇಯಿಂಗ್‌ ಗೆಸ್ಟ್‌ಗಳಿಗೂ ಪ್ರೀಮಿಯಂ ಟಚ್
ಪೇಯಿಂಗ್ ಗೆಸ್ಟ್ ಎಂಬ ಪದ ಕೇಳಿದರೆ ಕಣ್ಣ ಮುಂದೆ ಬರುವುದು ಹತ್ತಾರು ಕೊಠಡಿಗಳಿರುವ, ನಾಲ್ಕಾರು ಕಾಮನ್ ಟಾಯ್ಲೆಟ್‌ಗಳಿರುವ, ಒಂದು ಟಿ.ವಿ, ಚಿಕ್ಕ ಕ್ಯಾಂಟೀನ್ ಮೊದಲಾದವುಗಳ ಚಿತ್ರ ಬರುತ್ತದೆ. ಹೆಚ್ಚೆಂದರೆ ವಿಶಾಲವಾದ ಕೊಠಡಿ, ಪ್ರತ್ಯೇಕ ಶೌಚಾಲಯ ಮತ್ತು ನಾವೇ ಅಡುಗೆ ಮಾಡಿಕೊಳ್ಳಬಹುದಾದ ಸೌಲಭ್ಯವಿರುತ್ತದೆ.

ಆದರೆ ಈಗ ಪೇಯಿಂಗ್‌ ಗೆಸ್ಟ್‌ಗಳ ಪರಿಕಲ್ಪನೆಯೂ ಬದಲಾಗುತ್ತಿದೆ.  ಮೂರ್‍ನಾಲ್ಕು ಬ್ಯಾಚುಲರ್‌ಗಳು ಸೇರಿ ಒಂದು ದೊಡ್ಡ ಮನೆಯನ್ನು ಬಾಡಿಗೆಗೆ ಹಿಡಿಯುವ ಸಂಸ್ಕೃತಿ ಹಿಂದಿನಿಂದಲೂ ನಮ್ಮಲ್ಲಿದೆ. ಇಲ್ಲಿ ನಾಲ್ವರು ಗೆಳೆಯರು ಒಟ್ಟುಗೂಡಬೇಕು. ನಂತರ ಮನೆ ಹುಡುಕಬೇಕು. ನಂತರ ತಾವು ಸಭ್ಯರು ಎಂದು ಮನೆ ಮಾಲೀಕರ ಎದುರು ತೋರಿಸಿಕೊಳ್ಳಬೇಕು. ಸಿಗರೇಟ್‌ ಸೇದುವುದಿಲ್ಲ, ಮದ್ಯಪಾನ ಮಾಡುವುದಿಲ್ಲ ಎಂದು ಭರವಸೆ ನೀಡಬೇಕು. ಆನಂತರವಷ್ಟೇ ಬ್ಯಾಚುಲರ್‌ಗಳಿಗೆ ಮನೆ ಬಾಡಿಗೆಗೆ ಸಿಗುವುದು.
ಇದೇ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ನೂತನ ಪೇಯಿಂಗ್‌ ಗೆಸ್ಟ್ ಮಾದರಿ ಬೆಂಗಳೂರಿಗೆ ಕಾಲಿಟ್ಟು ವರ್ಷ ಕಳೆದಿದೆ.

ಒಂದು ದೊಡ್ಡ ಮನೆ. ವಿಶಾಲವಾದ ಮೂರ್‍್ನಾಲ್ಕು ಕೊಠಡಿಗಳು. ಒಂದೊಂದು ಕೊಠಡಿಗೂ ಪ್ರತ್ಯೇಕ ಶೌಚಾಲಯ ಮತ್ತು ಬಚ್ಚಲುಮನೆ. ದುಬಾರಿ ಹಾಸಿಗೆ, ವಾರ್ಡ್‌ರೋಬ್ ಇವುಗಳಲ್ಲಿರುವ ಕನಿಷ್ಠ ಸೌಕರ್ಯ.

ಈ ಸಾಲಿಗೆ ನಾವೇ ಖಾದ್ಯಗಳನ್ನು ತಯಾರಿಸಬಹುದಾದ ಅಡುಗೆಮನೆಯೂ ಸೇರುತ್ತದೆ. ಇವುಗಳ ಜತೆಗೆ ಕೇಬಲ್ ಸಂಪರ್ಕವಿರುವ ಟಿ.ವಿ. ಇರುವ, ಒಂದೆರಡು ಸೋಫಾಗಳನ್ನು ಜೋಡಿಸಿದ ಲಿವಿಂಗ್‌ ರೂಂ ಸಹ ಇರುತ್ತದೆ. ಇದರ ಜತೆಗೆ ವೈಫೈ ಸೌಲಭ್ಯವೂ ಇರುತ್ತದೆ. ಸ್ಮೋಕಿಂಗ್ ಝೋನ್ ಸಹ ಇರುತ್ತದೆ.

ಜತೆಗೆ ಇಂತಹ ಮನೆ ಬಾಡಿಗೆಗೆ ಹಿಡಿಯಲು ಗೆಳೆಯರನ್ನು ಒಟ್ಟುಗೂಡಿಸಬೇಕಿಲ್ಲ. ಪೊಳ್ಳು ಭರವಸೆಗಳನ್ನು ನೀಡಬೇಕಿಲ್ಲ. ಸಾಮಾನ್ಯ ಪಿ.ಜಿ.ಗಳಿಗೆ ಸೇರಿದಂತೆ ಎರಡು ತಿಂಗಳ ಮುಂಗಡ ನೀಡಿ ಒಳಹೊಕ್ಕರೆ ಸಾಕು. ಬೇಕೆಂದಾಗ ಬಿಟ್ಟುಬರಬಹುದು.

ಇಂತಹ ತುಸು ಪ್ರೀಮಿಯಂ ಎನಿಸಬಹುದಾದ ಪೇಯಿಂಗ್‌ ಗೆಸ್ಟ್‌ಗಳು ನಗರದ ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಎಚ್‌ಆರ್‌ಬಿಆರ್‌ ಲೇಔಟ್, ರಾಮಮೂರ್ತಿನಗರಗಳಲ್ಲಿ ಮನೆ ಮಾಡಿವೆ. ಹಾಗೆಂದು ಇವುಗಳ ಬೆಲೆ ಏನೂ ಕಮ್ಮಿ ಇಲ್ಲ. ನಗರದಲ್ಲಿರುವ ಇಂತಹ ಪೇಯಿಂಗ್‌ ಗೆಸ್ಟ್‌ಗಳ ಮಾಸಿಕ ಶುಲ್ಕ ಕನಿಷ್ಠ 6 ಸಾವಿರ ಇದೆ. ಗರಿಷ್ಠ 11 ಸಾವಿರದ ಗಡಿ ದಾಟುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT