ಮನೆ ಅನ್ನೋದು ಕುಟುಂಬದೊಟ್ಟಿಗೆ ವಾಸವಾಗಿ ಇರಲು ಒಂದು ನೆಲೆ ... ಅಷ್ಟೇನಾ? ಅಂದರೆ ದುಡಿಮೆ ಮಾಡೋದು ಮಾತ್ರ ಬೇರೆಲ್ಲೋ ದೂರದಲ್ಲಾ? ಇಂತಹದ್ದೊಂದು ಪ್ರಶ್ನೆ ಮುಂದಿಟ್ಟುಕೊಂಡು ಹುಡುಕೋಕೆ ಹೊರಟರೆ, ಎಷ್ಟೋ ಮನೆಗಳು ಈಗ ವಾಸಕ್ಕೆ ಅವಕಾಶ ಮಾಡಿಕೊಡುವುದರ ಜತೆಗೇ ದುಡಿಮೆ ತಾಣಗಳೂ ಆಗಿವೆ.
ಜನ ಹೆಚ್ಚಾಗಿ ಓಡಾಡುವ ರಸ್ತೆಗಳ(ಮುಖ್ಯರಸ್ತೆಗಳ) ಬದಿಯಲ್ಲಿರುವ ಮನೆಗಳನ್ನೊಮ್ಮೆ ಗಮನವಿಟ್ಟು ನೋಡಿದರೆ ಅಲ್ಲಿ ಮನೆ ಜತೆಗೇ ಒಂದೆರಡು ಅಂಗಡಿ ಮಳಿಗೆಗಳೂ ಸೇರಿಕೊಂಡಿರುವುದು ಕಣ್ಣಿಗೆ ಬೀಳುತ್ತದೆ. ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಂತೂ ಅಂಗಡಿ ಮಳಿಗೆ ಇಲ್ಲದೆ ರಸ್ತೆ ಬದಿಯ ನಿವೇಶನಗಳಲ್ಲಿ ಜನ ಮನೆಯನ್ನೇ ಕಟ್ಟೋದಿಲ್ಲ. ಯಾಕೆಂದರೆ ಸಣ್ಣ ಪ್ರಮಾಣದಲ್ಲಿ ಬಂಡವಾಳ ಹಾಕಿ ಒಂದು ಕಿರಾಣಿ ಅಂಗಡಿ ಹಾಕಿಕೊಂಡು ಬಿಟ್ಟರೆ, ಆ ಕುಂಟುಂಬದ ಜೀವನ ಹೇಗೋ ನಡೆದುಹೋಗುತ್ತೆ ಅನ್ನೋ ಲೆಕ್ಕಾಚಾರ.
ಕೃಷಿ ಕೆಲಸದ ಜತೆಗೆ ಮನೆಯಲ್ಲಿ ಉಳಿದವರಲ್ಲಿ ಯಾರಾದರೂ ಒಬ್ಬರು ಅಂಗಡಿಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಹಾಗಾಗಿಯೇ ಮನೆ ಕಟ್ಟಿಸುವಾಗ ಸ್ವಲ್ಪ ಬುದ್ಧಿಗೆ ಕೆಲಸ ಕೊಟ್ಟರೆ ವಾಸವಿರೋಕೆ ಮನೆಯೂ ಆಗುತ್ತೆ, ಬದುಕಿಗಾಗಿ ದುಡಿಯೋಕೆ ಒಂದು ದಾರಿಯೂ ಆಗುತ್ತೆ. ಗ್ರಾಮೀಣ, ಪಟ್ಟಣ ಪ್ರದೇಶದ ಮುಖ್ಯರಸ್ತೆಗಳಲ್ಲಿನ ನಿವೇಶನ ಹೊಂದಿದವರು ಕಿರಾಣಿ ಅಂಗಡಿಯೋ, ಟೈಲರ್ ಅಂಗಡಿಯೋ, ಪಂಚರ್ ಅಂಗಡಿಯೋ ಇಟ್ಟುಕೊಂಡು ಮನೆಯೊಟ್ಟಿಗೇ ಬದುಕನ್ನೂ ರೂಪಿಸಿಕೊಂಡು ಬಿಡುತ್ತಾರೆ. ಮನೆಯನ್ನೇ ಆದಾಯದ ಮೂಲವನ್ನಾಗಿಸಿಕೊಳ್ಳುತ್ತಾರೆ. ಎರಡು ಮೂರು ಅಂಗಡಿ ಮಳಿಗೆಗಳನ್ನು ಕಟ್ಟುವ ಕೆಲವರು ಒಂದು ಮಳಿಗೆಯಲ್ಲಿ ತಾವೇ ವ್ಯಾಪಾರ ಶುರುವಿಟ್ಟುಕೊಂಡರೆ ಉಳಿದ-ವನ್ನು ಬಾಡಿಗೆಗೆ ನೀಡಿ ಹೆಚ್ಚುವರಿ ಆದಾಯ ಗಳಿಸುತ್ತಾರೆ.
ನಗರ ಪ್ರದೇಶದಲ್ಲಿ ಕೂಡಾ ಇದೇ ರೀತಿ ಅಂಗಡಿ ಮಳಿಗೆಗಳನ್ನು ಕಟ್ಟಿರುವ ಅದೆಷ್ಟೋ ಮನೆಗಳನ್ನು ನೋಡಬಹುದು. ನಗರಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ರೋಲಿಂಗ್ ಷಟರ್ ಇರುವ ಮಳಿಗೆಗಳನ್ನು ನಿರ್ಮಿಸುತ್ತಾರೆ. ಕಾರು ಇದ್ದರೆ ನಿಲ್ಲಿಸೋಕೆ ಸುರಕ್ಷಿತ ಜಾಗ ಇರಲಿ ಎಂದೋ, ವೃತ್ತಿ ಕ್ಷೇತ್ರದಲ್ಲಿದ್ದವರಾದರೆ ತಮ್ಮದೇ ಕಚೇರಿ ತೆರೆಯಬಹುದು ಎಂದೋ ಲೆಕ್ಕಾಚಾರ ಹಾಕಿರುತ್ತಾರೆ. ಇನ್ನು ಮನೆಯಲ್ಲೇ ಇರುವ ಹಿರಿಯರು, ನಿವೃತ್ತ ನೌಕರರಿಗೆ ಸಮಯ ಕಳೆಯೋದಿಕ್ಕೆ ಆಗೋದಿಲ್ಲ. ಹೀಗಾಗಿಯೇ ಮನೆಗೇ ತಾಗಿಕೊಂಡಂತಿರುವ ಮಳಿಗೆಯಲ್ಲಿ ಪುಟ್ಟ ಅಂಗಡಿ ಇಟ್ಟರೆ ಬೇಜಾರು ಕಳೆಯೋದಲ್ಲದೆ, ಲಾಭವೂ ಆಗುತ್ತೆ ಅನ್ನೋ ಲೆಕ್ಕಾಚಾರ. ಮನೆಗೆ ಕಟ್ಟಲು ವೆಚ್ಚವಾಗುವ ದುಡ್ಡು ಈ ಅಂಗಡಿ ಮಳಿಗೆ ನಿರ್ಮಿಸಿದಾಗ ಬೇಗನೇ ವಾಪಸ್ ಬರುತ್ತದೆ.
ರಸ್ತೆ ಬದಿ ನಿವೇಶನವಿದ್ದಲ್ಲಿ ಮನೆ ಕಟ್ಟುವಾಗ ಸ್ವಲ್ಪ ಯೋಚಿಸಿ, ಯೋಜಿಸಿ ಕಟ್ಟಿದರೆ ಮನೆಯಲ್ಲಿರುವ ಒಬ್ಬರಿಗೆ ಅದು ಉದ್ಯೋಗಾವಕಾಶ ಕಲ್ಪಿಸಿಕೊಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.