ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ವಿನ್ಯಾಸಗಳ ವಾಸ್ತುಶಿಲ್ಪ ಪಂಡಿತ

Last Updated 11 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಲೆಬನಾನ್‌ನ ಎ.ಆರ್‌.ಬರ್ನಾರ್ಡ್‌ ಖೌರಿ ಅವರಲ್ಲಿ ಕಣ್ಣಿಗೆ ಹಬ್ಬವೆನಿಸುವ ವಿನ್ಯಾಸಗಳು ಸಿಗುವುದಿಲ್ಲ.  ಯಥೇಚ್ಛ ಗಾಳಿ, ಬೆಳಕನ್ನು ಮೊಗೆದುಕೊಡುವ ಈ ಪರಿಸರ ಪ್ರೇಮಿ ವಿನ್ಯಾಸದ ಮಾತೆತ್ತಿದರೆ ಚಿಂತನೆಗಳ ಮಳೆ ಸುರಿಸುತ್ತಾರೆ.

ವಾಸ್ತುಶಾಸ್ತ್ರದ ಬಗ್ಗೆ ಲೆಬನಾನ್‌ನ ರೋಡ್‌ ಐಲ್ಯಾಂಡ್‌ ಡಿಸೈನ್‌ ಸ್ಕೂಲ್‌ನಲ್ಲಿ ಪದವಿ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಬರ್ನಾರ್ಡ್‌ ಅವರ ವಿಶಿಷ್ಟ ವಿನ್ಯಾಸ ಹಾಗೂ ವಿಭಿನ್ನ ಚಿಂತನೆಗಳಿಗಾಗಿ ರೋಮ್‌ ಮುನ್ಸಿಪಾಲಿಟಿ 2001ರಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿತ್ತು.

ಯುರೋಪ್‌ ಮತ್ತು ಅಮೆರಿಕದ ಹಲವು ಪ್ರತಿಷ್ಠಿತ ಕಾಲೇಜು/ ವಿಶ್ವವಿದ್ಯಾಲಯಗಳಲ್ಲಿ ಬರ್ನಾರ್ಡ್‌ ವಾಸ್ತುಶಾಸ್ತ್ರ ಬೋಧಿಸುತ್ತಾರೆ. ಬರ್ನಾರ್ಡ್‌ ಅವರ ಸಮಕಾಲೀನ, ಪರಿಸರಸ್ನೇಹಿ ವಿನ್ಯಾಸಗಳ ಏಕವ್ಯಕ್ತಿ ಪ್ರದರ್ಶನಗಳು ಜನಾಕರ್ಷಣೆಯ ಕೇಂದ್ರಬಿಂದುಗಳಾಗಿವೆ.

ವಾಸ್ತುಶಾಸ್ತ್ರ ಸಂಬಂಧಿ ನಿಯತಕಾಲಿಕೆಗಳಲ್ಲಿ ಬರ್ನಾರ್ಡ್‌ ವಿನ್ಯಾಸ ಕುರಿತು ಹಲವು ಲೇಖನಗಳು ಪ್ರಕಟವಾಗಿವೆ. ಬರ್ನಾರ್ಡ್‌ ಅವರು ಸ್ವತಂತ್ರವಾಗಿ ಪೂರ್ಣಪ್ರಮಾಣದ ವಿನ್ಯಾಸಗಳನ್ನು ಮಾಡಲಾರಂಭಿಸಿದ್ದು 1993ರಲ್ಲಿ. ಅಲ್ಲಿಂದೀಚೆ ಅವರು ಸಿದ್ಧಪಡಿಸಿದ ವಿನ್ಯಾಸಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಛಾಪು ಮೂಡಿಸಿವೆ. ತಮ್ಮ ವಿನ್ಯಾಸ ತಂತ್ರಗಳು ಮತ್ತು ಅದರೆಡೆಗಿನ ಶ್ರದ್ಧೆಯ ಬಗ್ಗೆ ಸ್ವತಃ ಬರ್ನಾರ್ಡ್‌ ಅವರೇ ಮಾತನಾಡಿದ್ದಾರೆ.

*ನಿಮ್ಮ ಕುಟುಂಬದ ಕಸುಬು ಪೀಠೋಪಕರಣ ತಯಾರಿಕೆ. ನೀವು ಓರ್ವ ವಾಸ್ತುಶಿಲ್ಪಿಯಾಗಿ ರೂಪುಗೊಳ್ಳಲು ಇದು ನೆರವಾಯಿತೆ?
ವಾರಾಂತ್ಯಗಳನ್ನು ನಾನು ನಮ್ಮ ಕಾರ್ಖಾನೆಯಲ್ಲಿಯೇ ಕಳೆಯುತ್ತಿದ್ದೆ. ಕ್ರಮೇಣ ನಾನೇ ಸ್ವತಃ ಕಲಿಯಲಾರಂಭಿಸಿದೆ. ಕಂಪೆನಿಯ ಡಿಸೈನ್‌ ಸ್ಟುಡಿಯೊದಲ್ಲಿ ನನಗೆ ಪ್ರತ್ಯೇಕ ಜಾಗವಿತ್ತು. ಅಲ್ಲಿ ಒಂಬತ್ತು ವರ್ಷ ಕಳೆದ ನಾನು ಫ್ಯಾಕ್ಟರಿಯ ಸಂಪನ್ಮೂಲಗಳನ್ನು ಬಳಸಿಕೊಂಡು ನನ್ನ ಚಿಂತನೆಯ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿದೆ.

*ನಿಮ್ಮ ಕೃತಿ ‘ಲೋಕಲ್‌ ಹೀರೋಸ್‌’  ಕುರಿತು ಹೇಳಿ?
‘ಲೋಕಲ್‌ ಹೀರೋಸ್‌’ ಒಬ್ಬ ವಾಸ್ತುಶಿಲ್ಪಿ ಬರೆದ ಪ್ರಬಂಧವಲ್ಲ ಅಥವಾ ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಪ್ರಣಾಳಿಕೆಯೂ ಅಲ್ಲ. ಅದು ಅಸಂಖ್ಯಾತ ಅನುಭವಗಳ ಕಥನವೆಂದು ಹೇಳಬಲ್ಲೆ. ನನಗೆದುರಾದ ವ್ಯಕ್ತಿತ್ವಗಳು, ಸನ್ನಿವೇಶಗಳ ಸುತ್ತ ಅದರ ಕತೆ ಸುತ್ತುತ್ತದೆ. ಅಂತಹ ವ್ಯಕ್ತಿತ್ವ ಮತ್ತು ಸನ್ನಿವೇಶಗಳ ಹಿನ್ನೆಲೆಯನ್ನು ನನ್ನ ಕೃತಿ ಒಳಗೊಂಡಿದೆ. ಹಾಗೆ ನೋಡಿದರೆ ಕತೆ ಮತ್ತು ಅದರಲ್ಲಿನ ಪಾತ್ರ/ಸನ್ನಿವೇಶಗಳು ವಿರೋಧಾಭಾಸ ಮೂಡಿಸುವುದೂ ಉಂಟು.

*ವೈವಿಧ್ಯಮಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದವರು ನೀವು.  ವಿಭಿನ್ನ ಪ್ರಸ್ತುತಿ ಹೇಗೆ ಸಾಧ್ಯವಾಯಿತು?
ಮನರಂಜನೆ ಪ್ರಾಜೆಕ್ಟ್‌ಗಳು ಹಾಗೂ ಈ ಹಿಂದೆ ನಾವು ಮಾಡಿದ್ದ ಬ್ಯಾಂಕಿಂಗ್‌ ಕ್ಷೇತ್ರದ ಯೋಜನೆಗಳು ಬಹುತೇಕ ತಾತ್ಕಾಲಿಕ ಕಟ್ಟಡಗಳಾಗಿದ್ದವು. ಕಟ್ಟಡ ರಚನೆಯಂತೆಯೇ ಇನ್‌ಸ್ಟಲೇಷನ್‌ಗಳೂ ತಾತ್ಕಾಲಿಕ ನೆಲೆಯಲ್ಲಿಯೇ ಇರುತ್ತಿದ್ದವು. ಆಗ ನನಗೊಂದು ಯೋಚನೆ ಬಂತು. ಸಾಂಪ್ರದಾಯಿಕ ಶೈಲಿಗಳನ್ನು, ತಂತ್ರಗಾರಿಕೆಗಳನ್ನು ಬಳಸಿ ಕಟ್ಟಡಗಳನ್ನು ಶಾಶ್ವತವಾಗಿ ಮಾಡಬಾರದೇಕೆ ಎಂಬ ಕಲ್ಪನೆ ಮೂಡಿತು.

*ನಿಮ್ಮದೇ ಆದ ಶೈಲಿ ಎಂಬುದು ಇದೆಯೇ?
ನನಗೆ ನನ್ನದೇ ಆದ ಶೈಲಿ ಅಥವಾ ಗುರುತು (ಸಿಗ್ನೇಚರ್‌) ಅನ್ನೋದು ಇಲ್ಲ.  ನನ್ನ ವಿನ್ಯಾಸಗಳನ್ನು ನೋಡುವಾಗ ವಿಶಿಷ್ಟ ಗುರುತು ಅಥವಾ ಶೈಲಿ ಗೋಚರಿಸಬಹುದು. ಆದರೆ ಅದನ್ನು ನಿವಾರಿಸಲು  ನಾನು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತೇನೆ.

*ಪರಿಸರಸ್ನೇಹಿ ವಿನ್ಯಾಸಗಳ ಮಾತು ಬಂದಾಗ ಯಾವ ಅಂಶ ನಿಮಗೆ ಹೆಚ್ಚು ಸವಾಲು ಅಂತ ಅನಿಸುತ್ತದೆ?
ಪರಿಸರಸ್ನೇಹಿ ಅನ್ನೋದು ಇತ್ತೀಚಿನ ದಿನಗಳಲ್ಲಿ ದುರುಪಯೋಗವಾಗುತ್ತಿರುವ ಪದ. ನಮ್ಮ ತಂದೆ, ಅಜ್ಜಂದಿರು ಮತ್ತು ಪೂರ್ವಜರು ಈಗ ಕಾಣುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿನ ಪರಿಸರಸ್ನೇಹಿ ಕಟ್ಟಡಗಳನ್ನು ನಿರ್ಮಿಸಿದ್ದರು. ಆದರೆ ಅವರೆಂದೂ ಅದರ ಬಗ್ಗೆ ಜಂಬದಿಂದ ಹೇಳಿಕೊಳ್ಳುತ್ತಿರಲಿಲ್ಲ.

*ನಿಮಗೆ ಸ್ಫೂರ್ತಿ ಯಾವುದು?
ನನ್ನ ಜಗತ್ತಿನ ವಾಸ್ತವದ ಒಳಗಿನಿಂದಲೇ ಸ್ಫೂರ್ತಿ ಪಡೆದುಕೊಳ್ಳುತ್ತೇನೆ.

*ನಿಮ್ಮನ್ನು ಜಗತ್ತು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ಬಯಸುತ್ತೀರಿ?
ನನ್ನ ಪ್ರತಿ ಪ್ರಾಜೆಕ್ಟ್ ಕೂಡಾ ವಿಭಿನ್ನ ಮತ್ತು  ಅಸಂಗತವಾಗಿರಬಹುದು. ನನಗೆ ನಿಖರವಾದ ಗುರಿ ಇಲ್ಲ. ನನ್ನನ್ನು ಒಬ್ಬ ಸಿನಿಕತನದ ವಾಸ್ತುಶಿಲ್ಪಿ ಎಂದೋ ಬುದ್ಧಿವಂತ ವಾಸ್ತುಶಿಲ್ಪಿ ಎಂದೋ ಸ್ಮರಿಸಲಾರರು. ಆದರೆ ಅದನ್ನೆಲ್ಲ ನಾನು ಅರಗಿಸಿಕೊಳ್ಳಬಲ್ಲೆ.

*ವಾಸ್ತುಶಿಲ್ಪಕ್ಕೆ ‘ಜಾಗತಿಕ ಸ್ಪರ್ಶ’ ಬೇಕು ಎಂದು ನೀವು ಭಾವಿಸುತ್ತೀರಾ?
ವಾಸ್ತುಶಿಲ್ಪವನ್ನು ‘ಜಾಗತಿಕ ಸ್ಪರ್ಶ’ ಎಂಬ ನೆಲೆಯಲ್ಲಿ ಬಂದಿಯನ್ನಾಗಿ ಮಾಡಲಾಗಿದೆ. ಆದರೆ ಜಗತ್ತಿನಲ್ಲಿ ಯಾವುದನ್ನೂ ‘ಜಾಗತಿಕ ಸ್ಪರ್ಶ’ ಎಂಬ ಮಿತಿಯಲ್ಲಿ ಕಟ್ಟಿಡಲು ಸಾಧ್ಯವಿಲ್ಲ.

*ನಿಮಗೆ ಅತ್ಯಂತ ತೃಪ್ತಿ ನೀಡಿದ ಪ್ರಾಜೆಕ್ಟ್‌ ಯಾವುದು?
ನಾನು ನಿರ್ವಹಿಸುವ ಎಲ್ಲ ಪ್ರಾಜೆಕ್ಟ್‌ಗಳೂ ನನಗೆ ಪರಮಾನಂದ ನೀಡಬೇಕು ಎಂದೇ ನಾನು ಬಯಸುತ್ತೇನೆ.

*ಯುವ ವಾಸ್ತುಶಿಲ್ಪಿಗಳಿಗೆ ನಿಮ್ಮ ಸಲಹೆ?
ಯುವ ವಾಸ್ತುಶಿಲ್ಪಿಗಳು ನನಗೇ ಸಲಹೆ ನೀಡಬೇಕು. ಬೇರೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT