ಭಾನುವಾರ, ಡಿಸೆಂಬರ್ 8, 2019
21 °C

ಒಂದು ರೂಪಾಯಿಗೆ ಒಪ್ಪತ್ತಿನ ಊಟ !

Published:
Updated:
Deccan Herald

‘ಮಾರ್ಕೆಟ್‌ನಲ್ಲಿ ಅಂದು ಕೆಲಸ ಸಿಗಲಿಲ್ಲ. ಮಧ್ಯಾಹ್ನ 12 ಆಗಿತ್ತು. ಹೊಟ್ಟೆ ಹಸಿಯುತ್ತಿತ್ತು. ಊಟಕ್ಕೆ ಹೋಗೋದಕ್ಕೆ ದುಡ್ಡು ಇರಲಿಲ್ಲ. ಏನ್ ಮಾಡೋದು ಅಂತ ಚಿಂತೆ ಮಾಡ್ತಿದ್ದೆ. ಆಗ ಅಲ್ಲಿಗೆ ಬಂದ ಹನುಮಂತಪ್ಪ, ‘ಕೆಲಸ ಸಿಗದಿದ್ದರೆ ಏನಂತೆ, ಊಟವಾದರೂ ಮಾಡಿ ಬಾ‘ ಎಂದ. ನನ್ನ ಬಳಿ ಹಣವಿಲ್ಲ ಎಂದೆ. ಆತ ಒಂದು ರೂಪಾಯಿ ಕೊಟ್ಟು ‘ಹೋಗಿ ಊಟ ಮಾಡ್ಕೊಂಡು ಬಾ’ ಎಂದ. ಅರೆ, ‘ಒಂದು ರೂಪಾಯಿಗೆ ಯಾರು ಊಟ ಕೊಡುತ್ತಾರೆ’ ಎಂದೆ. ಅದಕ್ಕೆ ಆತ ‘ರೋಟಿ ಘರ್‌’ನತ್ತ ಕೈ ತೋರಿಸಿದ.

ರೋಟಿಘರ್‌ಗೆ ಹೋದರೆ, ಆಗಲೇ ಹತ್ತಾರು ಕೂಲಿ ಕಾರ್ಮಿಕರು ಸರತಿಯಲ್ಲಿ ನಿಂತಿದ್ದರು. ನಾನೂ ನಿಂತೆ. ಒಂದು ರೂಪಾಯಿ ಕೊಟ್ಟೆ. ಪ್ಲೇಟ್‌ ತುಂಬಾ ಚಿತ್ರಾನ್ನ ಕೊಟ್ಟರು. ಅದನ್ನು ಉಂಡು ಮೇಲೆ ಸಮಾಧಾನವಾಯ್ತು. ಮನಸ್ಸು ನಿರಾಳವಾಯಿತು. ಕೆಲಸ ಸಿಗದಿದ್ದರೂ ಹಣವಿಲ್ಲದ, ಹಸಿದ ಬಡ ಕಾರ್ಮಿಕರಿಗೆ ಹುಬ್ಬಳ್ಳಿಯಂತಹ ಶಹರದಲ್ಲಿ ಒಂದೊತ್ತು ಊಟ ಸಿಗುತ್ತದೆಯಲ್ಲ ಎಂದು ಖುಷಿಯಾಯಿತು. ಅಂದಿನಿಂದ ಸಂಕಷ್ಟ ಬಂದಾಗಲೆಲ್ಲ ಇದೇ ನನ್ನ ಅನ್ನದ ಬಟ್ಟಲಾಗಿದೆ

ಕಾರ್ಮಿಕ ಶಿವಕುಮಾರ ಕಾಡನವರ, ಒಂದು ರೂಪಾಯಿನಲ್ಲಿ ಹಸಿವು ತಣಿಸಿಕೊಂಡ ಘಟನೆಯನ್ನು ಒಂದೇ ಉಸಿರಿಗೆ ಹೇಳಿ ಮುಗಿಸಿದರು. ಇವರಷ್ಟೇ ಅಲ್ಲ, ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಯಿಂದ ಮಾರುಕಟ್ಟೆಗೆ ಬರುವ ನೂರಾರು ಕೂಲಿ ಕಾರ್ಮಿಕರಿಗೆ ಬಿಡಿಗಾಸಿನಲ್ಲಿ ಈ ರೋಟಿಘರ್ ಹಸಿವು ನೀಗಿಸುತ್ತದೆ.

ಹುಬ್ಬಳ್ಳಿಯ ಕಂಚಗಾರಗಲ್ಲಿಯ ಮಾರ್ಕೆಟ್ ಪ್ರದೇಶದಲ್ಲಿರುವ ಈ ರೋಟಿಘರ್‌ನಲ್ಲಿ ಎಂಟು ವರ್ಷಗಳಿಂದ ನಿತ್ಯ ಮಧ್ಯಾಹ್ನ ಊಟ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ತಮಿಳುನಾಡಿನಲ್ಲಿ ‘ಅಮ್ಮ ಕ್ಯಾಂಟಿನ್‌’, ಕರ್ನಾಟಕದಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗುವ ಮುನ್ನವೇ ಈ ‘ಘರ್’ ಆರಂಭವಾಗಿದೆ ಎನ್ನುವುದು ವಿಶೇಷ.

‘ರೋಟಿಘರ್‌’ನಲ್ಲಿ ಮಧ್ಯಾಹ್ನ 12.15 ರಿಂದ 2.15ರವರೆಗೆ ಊಟ ಪೂರೈಸುತ್ತಾರೆ. ದಿನವೊಂದಕ್ಕೆ 160 ರಿಂದ 190 ಮಂದಿ ಊಟ ಮಾಡುತ್ತಾರೆ. ವಾರದಲ್ಲಿ ಎರಡು ದಿನ ಚಪಾತಿ, ಉಳಿದ ದಿನಗಳಲ್ಲಿ ಚಿತ್ರಾನ್ನ, ಅನ್ನ ಮತ್ತು ಸಾರು, ಪಲಾವ್‌ ಇರುತ್ತದೆ. ಭಾನುವಾರ ಊಟದ ಜತೆಗೆ ಸಿಹಿ ತಿಂಡಿಯೂ ಇರುತ್ತದೆ. ಬುಧವಾರ ವಾರದ ರಜೆ. ಹೋಟೆಲ್‌ನಲ್ಲಿ ಮೂವರು ಸಿಬ್ಬಂದಿ ನೇಮಿಸಲಾಗಿದೆ. ಅಡುಗೆ ಮಾಡುವವರು ಹಾಗೂ ಬಂದವರಿಗೆ ಬಡಿಸುವ ಹೊಣೆಯನ್ನು ಅವರೇ ನಿರ್ವಹಿಸುತ್ತಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ.

ಹುಬ್ಬಳ್ಳಿಯ ಮಹಾವೀರ ಯೂತ್‌ ಫೆಡರೇಷನ್‌ ಈ ಕಾರ್ಯದ ಹಿಂದಿನ ರೂವಾರಿ. ಇದರಲ್ಲಿ 29 ಮಂದಿ ಸದಸ್ಯರಿದ್ದಾರೆ. ಜೈನ್ ಸಮುದಾಯದ ಹಿರಿಯ ಮುಖಂಡರ ಮಾರ್ಗದರ್ಶನವಿದೆ. ಲೋಕೂರ ಕುಟುಂಬದವರು ನೀಡಿದ ಜಾಗದಲ್ಲಿ ಅಡುಗೆ ಮಾಡಲು ಸಣ್ಣದೊಂದು ಕೋಣೆ ಇದೆ. ಊಟಕ್ಕೆ ಸಣ್ಣದಾದ ಶೆಡ್

‘ನಿತ್ಯ ಕೋಟ್ಯಂತರ ಜನ ಒಂದೊತ್ತು ಊಟ ಇಲ್ಲದೇ ಮಲಗುತ್ತಾರೆ’ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಹಾಗೂ ಹುಬ್ಬಳ್ಳಿಗೆ ಬಂದಿದ್ದ ಆಚಾರ್ಯ ರವಿಶೇಖರ ಸೂರೀಶ್ವರ ಮಹಾರಾಜ ಅವರ, ‘ಅನ್ನದಾನ ಶ್ರೇಷ್ಠದಾನ' ಎಂಬ ಮಾತು ‘ರೋಟಿ ಘರ್‌' ಆರಂಭಕ್ಕೆ ಪ್ರೇರಣೆಯಾಯಿತು’ ಎನ್ನುತ್ತಾರೆ  ಫೆಡರೇಷನ್‌ ಅಧ್ಯಕ್ಷ ಸುರೇಶ ಚಾಜೆಡ್‌.

ರೋಟಿಘರ್ ನಡೆಸಲು ಪ್ರತಿ ತಿಂಗಳು ₹40ಸಾವಿರ ಖರ್ಚು ಬರುತ್ತದಂತೆ. ದಾನಿಗಳ ನೆರವಿನಿಂದಲೇ ಎಲ್ಲವನ್ನೂ ನಡೆಸುತ್ತಿದ್ದಾರೆ. ಒಂದು ದಿನದಿಂದ ಹಿಡಿದು ತಿಂಗಳವರೆಗಿನ ಖರ್ಚನ್ನುವಹಿಸಿಕೊಳ್ಳುವ ದಾನಿಗಳಿದ್ದಾರೆ. ಜನ್ಮದಿನದ ಅಂಗವಾಗಿಯೂ ಕೆಲವರು ದೇಣಿಗೆ ನೀಡುತ್ತಾರೆ. ಅವರ ಜನ್ಮದಿನ ಅಂಗವಾಗಿ ಊಟಕ್ಕೆ ಬಂದವರಿಗೆ ಅಂದು ಸಿಹಿ ಮಾಡಿ ಬಡಿಸಲಾಗುತ್ತದೆ.

‘ನಮ್ಮ ಸಮಾಜದವರು ಮಾತ್ರವಲ್ಲ, ಅನೇಕ ಸಮುದಾಯದವರು ರೋಟಿಘರ್‌ಗೆ ನೆರವು ನೀಡುತ್ತಿದ್ದಾರೆ. ಹಾಗೆಯೇ ಜಾತ್ಯತೀತ, ಧರ್ಮಾತೀತವಾಗಿ ಇಲ್ಲಿ ಬಂದು ಊಟ ಮಾಡುತ್ತಾರೆ. ₹1 ಪಡೆಯುವುದು ಕೂಡ, ಊಟ ಮಾಡುವವರಿಗೆ ಉಚಿತವಾಗಿ ಮಾಡುತ್ತಿದ್ದೇನೆ ಎಂಬ ಭಾವನೆ ಬರಬಾರದು ಎಂಬ ಕಾರಣಕ್ಕೆ’ ಎನ್ನುತ್ತಾ ಘರ್ ನಡೆಸುವ ಪ್ರಕ್ರಿಯೆಯನ್ನು ರೋಟಿಘರ್ ಸಮಿತಿ ಅಧ್ಯಕ್ಷ ಆನಂದಕುಮಾರ್ ಪಟ್ಟಾ ವಿವರಿಸುತ್ತಾರೆ.

ಈ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗೌತಮ ಬಾಫ್ನಾ. ಇವರೊಂದಿಗೆ ವಿಮಲ್‌ ಪೋರವಾಲ, ತೇಜರಾಜ ವಿನಾಯಕಿಯಾ ಮುಂತಾದವರು ಕೈ ಜೋಡಿಸಿದ್ದಾರೆ. ‘ಈ ಸೇವೆಗೆ ಬೇಡಿಕೆ ಹೆಚ್ಚಿದ್ದು, ಹುಬ್ಬಳ್ಳಿ ಶಹರದಲ್ಲೇ ಮತ್ತೊಂದು ಶಾಖೆ ಆರಂಭಿಸುವ ಯೋಜನೆ ಇದೆ. ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆದಿದೆ’ ಎನ್ನುತ್ತಾರೆ ಸುರೇಶ ಚಾಜೆಡ್‌.

ಚಿತ್ರಗಳು: ಈರಪ್ಪ ನಾಯ್ಕರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು