ಸೋಮವಾರ, ಜುಲೈ 26, 2021
23 °C

ಈ ಸಮಯ ಆನ್‌ಲೈನ್‌ಮಯ

ರವಿಚಂದ್ರ ಎಂ. Updated:

ಅಕ್ಷರ ಗಾತ್ರ : | |

Prajavani

ಕ್ಯಾಂಡಿಕ್ರಶ್, ಮಿಲಿ-ಮಿಲಿಟಾ, ಪಬ್-ಜಿ ಇವು ಯಾವುದೋ ವಿದೇಶಿ ತಿಂಡಿ-ತಿನಿಸಿನ ಹೆಸರಲ್ಲ. ಯುವ ಜನಾಂಗದವರ ಅಚ್ಚುಮೆಚ್ಚಿನ ಮೊಬೈಲ್ ಗೇಮ್‌ಗಳ ಹೆಸರುಗಳು. ‘ಮೂಗಿಗಿಂತ ಮೂಗುತಿ ಭಾರ’ ಎಂಬ ನಾಣ್ನುಡಿಯ ಅರ್ಥ ಬಿಡಿಸಲು ಇಂದಿನ ಮಕ್ಕಳಿಗೆ ಸಾಧ್ಯವಿಲ್ಲದಿರಬಹುದು, ಆದರೆ ಮಕ್ಕಳು ಕೇಳುವ ಪ್ರಶ್ನೆಗೆ ಸಕಲವನ್ನೂ ತಿಳಿದ ಅಜ್ಜ-ಅಜ್ಜಿಯಂದಿರ ಬಳಿಯೂ ಉತ್ತರವಿಲ್ಲ!

ಉದಾಹರಣೆಗೆ, ‘ಅಜ್ಜಿ, ನನ್ನ ಪ್ರಶ್ನೆಗೆ ಉತ್ತರ ಗೊತ್ತಾ?’ ಎನ್ನುತ್ತಾ... ‘ಗಾಂಧಿ ತಾತ ನೋಡಿಲ್ಲದ ಒಂದೇ ಒಂದು ಬುಕ್ ಯಾವುದು’ ಎಂದು ಮಗು ಪ್ರಶ್ನಿಸಿದರೆ ಅಜ್ಜಿ ತಬ್ಬಿಬ್ಬಾಗುತ್ತಾರೆ ತಾನೇ? ಆದರೆ, ಆ ಮಗು ಥಟ್ಟನೆ ಕೊಡುವ ಉತ್ತರ ‘ಫೇಸ್‌ಬುಕ್’!

ಹೌದು, ಇಂದಿನ ಮಕ್ಕಳಿಗೆ ಭಾರತದ ವಿವಿಧ ರಾಜ್ಯಗಳ ರಾಜಧಾನಿಯ ಹೆಸರು ಕಂಠ ಪಾಠವಾಗಿಲ್ಲದೆ ಇದ್ದರೂ, ಪ್ರೀಮಿಯರ್ ಲೀಗ್‌ನಲ್ಲಿನ ಪುಟ್ಬಾಲ್ ತಂಡಗಳ ಹೆಸರುಗಳನ್ನು, ಐಪಿಎಲ್ ಕ್ರಿಕೆಟ್ ಲೀಗ್‌ನ ತಂಡಗಳ ಹೆಸರುಗಳನ್ನು ಪಟಪಟನೇ ಹೇಳುವ ಸಾಮರ್ಥ್ಯವಿದೆ. ಇದನ್ನು ಗುರುತಿಸುವ ಹೊಣೆ ಹಿರಿಯರಾದ ನಮ್ಮ ಮೇಲೆ ಜರೂರಾಗಿದೆ. ಎರಡರಿಂದ ಒಂಬತ್ತರವರೆಗಿನ ಮಗ್ಗಿ ಒಪ್ಪಿಸಲು ತಡಬಡಿಸುವ ಮಕ್ಕಳು ತಮ್ಮ ಮೊಬೈಲ್ನಲ್ಲಿ ಯಾವ ಅವತರಣಿಕೆಯ ಆಂಡ್ರಾಯ್ಡ್‌ ಸಾಫ್ಟ್‌ವೇರ್ ಇದೆ, ಅದರ ಮೆಮೊರಿ ಸಾಮರ್ಥ್ಯ ಎಷ್ಟು? ಕ್ಯಾಮೆರಾದ ಪಿಕ್ಸೆಲ್ ಎಷ್ಟು ಎಂಬುದನ್ನು ಕರಾರುವಾಕ್ಕಾಗಿ ಹೇಳುವುದು ಸಹ ವಿದ್ಯಾರ್ಜನೆಯೇ ಎಂಬ ಸತ್ಯವನ್ನು ಹಿರಿಯರು ಅರಿಯುವುದು ಇಂದಿನ ಅವಶ್ಯಕತೆ.

ಹಾಗಾದರೆ, ಮೊಬೈಲ್-ಇಂಟರ್‌ನೆಟ್‌ಗಳು ನಮ್ಮ ಮಕ್ಕಳ ಆರೋಗ್ಯ, ಆಟ-ಪಾಠಗಳ ಮೇಲೆ ದುಷ್ಪರಿಣಾಮ ಬೀರಿಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಖಂಡಿತ ಉದ್ಭವವಾಗುತ್ತದೆ. ಮಕ್ಕಳ ಅಭ್ಯಾಸಗಳು ಅವಶ್ಯಕತೆ ದಾಟಿ ವ್ಯಸನದ ರೂಪ ಪಡೆಯಬಾರದು ಎನ್ನುವುದು ನಿಜ. ನಮ್ಮ ಇಂದಿನ ಯುವ ಜನಾಂಗಕ್ಕೆ ಸಾಮಾಜಿಕ ಜಾಲತಾಣಗಳು, ಮೊಬೈಲ್ ಗೇಮ್‌ಗಳು ಎಷ್ಟು ಅವಶ್ಯಕ? ವ್ಯಸನ ಹಾಗೂ ಅವಶ್ಯಕತೆ ನಡುವೆ ಇರುವ ತೆಳುವಾದ ಗೆರೆ ಯಾವುದು ಎಂಬುದನ್ನು ಗುರುತಿಸಲು ಅನುವು ಮಾಡಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡೋಣ.

ಗೂಗಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂಗಳು ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿವೆ ನಿಜ. ಆದರೆ ಅವುಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಆಳುವ ಭರದಲ್ಲಿ ಮನುಷ್ಯಕುಲ ದಿನದ ಅಷ್ಟೂ ಹೊತ್ತು ಮೊಬೈಲ್ನೊಳಗೆ ಕುಳಿತು ಉಣ್ಣುವುದು, ನಿದ್ರಿಸುವುದು ಮತ್ತು ಜೀವಿಸುವಂತಾಗಿರುವುದು ಕಳವಳಕಾರಿ ವಿಚಾರವೇ ಸರಿ. ಪಬ್-ಜಿ ಆಟದಲ್ಲಿ ತಲ್ಲೀನನಾದ ಯುವಕನೊಬ್ಬ ಬಾಯಾರಿಕೆಯಾದಾಗ ನೀರು ಕುಡಿಯಲು ಹೋಗಿ ಪಕ್ಕದಲ್ಲಿ ಇದ್ದ ಆ್ಯಸಿಡ್‌ ಸೇವಿಸಿ ಜೀವಕ್ಕೆ ಅಪಾಯ ತಂದುಕೊಂಡ ಘಟನೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಮ್ಮ ದೈತ್ಯ ಆನ್‌ಲೈನ್ ಕಂಪನಿಗಳು ತಮ್ಮ ಹಂಗಿನ ಅರಮನೆಯಲ್ಲೇ (ಆ್ಯಪ್‌ನಲ್ಲೇ) ಪ್ರತಿಯೊಬ್ಬರನ್ನೂ ಹಿಡಿದು ಇಟ್ಟುಕೊಳ್ಳುವ ಅವಿಷ್ಕಾರಗಳತ್ತ ದೃಷ್ಟಿ ನೆಟ್ಟಿರುವುದರ ನೇರ ಪರಿಣಾಮ. ಕಂಪನಿಗಳ ಲಾಭಗಳಿಕೆಯ ದೃಷ್ಟಿಯಿಂದ ಇದು ಸರಿಯೆನಿಸಿದರೂ ನಮ್ಮೆಲ್ಲರ ಸಹಜ ಜೀವನ ಶೈಲಿಗೆ ಇವುಗಳಿಂದ ತೊಡಕುಂಟಾಗಿದೆ ಎನ್ನದೆ ವಿಧಿಯಿಲ್ಲ. ಅದರಲ್ಲೂ, ಸದಾ ‘ಆನ್‌ಲೈನ್’ ಆಗಿ ಇರಬೇಕೆಂಬ ಅಘೋಷಿತ ನಿಯಮ ನಮ್ಮ ಯುವ ಜನಾಂಗ ಮತ್ತು ಮಕ್ಕಳ ಮೇಲೆ ಕೆಡುಕನ್ನೇ ಉಂಟುಮಾಡುತ್ತಿದೆ.

ಪಂಚೇಂದ್ರೀಯಗಳನ್ನು ಉದ್ದೀಪನಗೊಳಿಸುವ ಮತ್ತು ಸೆಳೆಯುವ ವಸ್ತುಗಳು ನಮ್ಮ ವಾಸ್ತವ ಲೋಕದಲ್ಲಿರುವಂತೆ, ಈ ಆನ್‌ಲೈನ್ ಲೋಕದಲ್ಲೂ ದೈತ್ಯ ಕಂಪನಿಗಳು ನಮ್ಮನ್ನು ಅವುಗಳತ್ತ ಸೆಳೆಯುವ ಮತ್ತು ಅಲ್ಲೇ ಬಂಧಿಸಿಡುವ ಪ್ರಚೋದನೆಗಳನ್ನು ನೀಡುತ್ತಲೇ ಇವೆ. ಅಂತಹ ಹೊಸ ಹೊಸ ತಂತ್ರಗಳನ್ನು ಮತ್ತಷ್ಟು ಆವಿಷ್ಕರಿಸುತ್ತಲೇ ಇವೆ. ಪ್ರಮುಖವಾಗಿ ಗುರುತಿಸಬಹುದಾದ ಅಂತಹ ಕೆಲವು ಇವು:

* ಆಟೊ-ಪ್ಲೇ ಎಂಬ ತಳವೇ ಇಲ್ಲದ ಪಾತ್ರೆ: ಯೂಟ್ಯೂಬ್, ನೆಟ್‌ಫ್ಲಿಕ್ಸ್ ಮತ್ತು ಫೇಸ್ಬುಕ್‌ನಲ್ಲಿ ಒಂದು ವಿಡಿಯೊ ತುಣುಕು ಮುಗಿಯುತ್ತಿದಂತೆ ಮತ್ತೊಂದು ತುಣುಕು ಸರತಿಯಲ್ಲಿ ಕಾದುಕುಳಿತಿರುವುದು ನಮ್ಮೆಲ್ಲರ ಅನುಭವಕ್ಕೆ ಬಂದೇ ಇರುತ್ತದೆ. ತಳವೇ ಇಲ್ಲದ ಪಾತ್ರೆಗೆ ನಿರಂತರವಾಗಿ ಎಷ್ಟು ತಿಂಡಿ ಸುರಿದರೂ ಅದು ತುಂಬುವುದಿಲ್ಲ. ಅಂತಹ ಪಾತ್ರೆಯಲ್ಲಿರುವ ತಿಂಡಿ ಮುಕ್ಕುತ್ತಾ ಟಿ.ವಿ ಮುಂದೆ ಕುಳಿತ ವ್ಯಕ್ತಿ ಅಜೀರ್ಣವಾಗುವಷ್ಟು ತಿನಿಸನ್ನು ಹೊಟ್ಟೆಗೆ ಅರಿವಿಲ್ಲದೇ ಸೇರಿಸಿದಂತೆ, ಆಟೊ-ಪ್ಲೇ ಎಂಬ ತಂತ್ರ ನಮಗೆ ಅಗತ್ಯ ಇದ್ದದ್ದೂ ಇಲ್ಲದ್ದೂ ಎಲ್ಲವನ್ನೂ ತಲೆಗೆ ತುಂಬಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?

* ನೋಟಿಫಿಕೇಷನ್ ಎಂಬ ಗುಂಗು ಹಿಡಿಸುವ ಸಲಕರಣೆ: ಒಂದೆಡೆ ಕುಳಿತು ಸೃಜನಾತ್ಮಕ ಕೆಲಸದಲ್ಲಿ ತೊಡಗಲು ನಮಗೆಲ್ಲಾ ಇರುವ ಪ್ರಮುಖ ತೊಡಕೆಂದರೆ ನೋಟಿಫಿಕೇಷನ್ ಎಂಬ ಪೆಡಂಭೂತ. ಮಾಡಬೇಕಾದ ಕೆಲಸವನ್ನೆಲ್ಲಾ ಬದಿಗಿಟ್ಟು ಯಾರು ನಮ್ಮ ಪೋಸ್ಟ್‌ಗೆ ಲೈಕ್ ಕೊಟ್ಟಿದ್ದಾರೆ? ಯಾರ ಸ್ಟೇಟಸ್ ಏನಿದೆ? ಯಾವುದು ಹೊಸ ಸುದ್ಧಿ? ಹೊಸ ಸ್ನೇಹ ಕೋರಿಕೆ ಇದೆಯಾ? ಎಂದು ಸದಾ ತವಕದಿಂದ ಮತ್ತು ಉದ್ವೇಗದಿಂದ ಮೊಬೈಲ್‌ನ ಪರದೆ ಮೇಲೆ ಬೆರಳಾಡಿಸುವ ದರಿದ್ರ ಬುದ್ಧಿ ನಮ್ಮೆಲ್ಲರೊಳಗೆ ರಕ್ತ-ಮಾಂಸದಂತೆ ಅಡಕವಾಗಿ ವರ್ಷಗಳೇ ಸಂದಿವೆ. ಈ ನೋಟಿಫಿಕೇಷನ್ ಭೂತದ ಕೈಯಿಂದ ಪಾರಾಗುವ ಬಗೆ ಏನು?

* ಸ್ನ್ಯಾಪ್‌ಚಾಟ್ ಎಂಬ ಮತ್ತೊಂದು ಸಾಫ್ಟ್‌ವೇರ್ ಮಕ್ಕಳಿಬ್ಬರು ತಮ್ಮ ತಮ್ಮ ಪೋಟೊ ಹಂಚಿಕೊಂಡು ಸಂತೋಷಪಡಲು ಆವಿಷ್ಕಾರಗೊಂಡಿದೆಯಂತೆ. ಆದರೆ ಮಕ್ಕಳು ತಮ್ಮ ಸ್ನೇಹಿತರ ಲೈಕ್ ಪಡೆಯುವ ಭರದಲ್ಲಿ ಈ ಸಾಫ್ಟ್‌ವೇರ್‌ನ ದಾಸರಾಗುತ್ತಿರುವುದು ಕಳವಳಕಾರಿ. ಕೆಲವು ಮಕ್ಕಳಂತೂ ತಾವು ಆನ್‌ಲೈನ್ ಇರಲು ಸಾಧ್ಯವಿಲ್ಲದಂತಹ ಸಮಯದಲ್ಲಿ ತಮ್ಮ ಅಕೌಂಟನ್ನು ಉಪಯೋಗಿಸಲು ಇತರ ಸ್ನೇಹಿತರೊಡನೆ ಪಾಸ್‌ವರ್ಡ್ ಹಂಚಿಕೊಂಡು ಆನ್‌ಲೈನ್‌ ಸುರಕ್ಷತೆಯ ತೊಂದರೆಗೂ ಸಿಕ್ಕಿಕೊಳ್ಳುತ್ತಿದ್ದಾರೆ.

* ಇನ್‌ಸ್ಟಾಗ್ರಾಂ ಇಂದಿನ ಹೊಸ ಪೀಳಿಗೆಯ ಅಚ್ಚುಮೆಚ್ಚಿನ ಸಾಮಾಜಿಕ ಜಾಲತಾಣ. ಈ ಕಂಪನಿ ತನ್ನ ಬಳಕೆದಾರರಿಗೆ ಅನಿರ್ದಿಷ್ಟ ಉಡುಗೊರೆಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ಒಂದಲ್ಲಾ ಒಂದು ರೀತಿಯಲ್ಲಿ ನೀಡುವ ಮೂಲಕ ಬಳಕೆದಾರರು ಸದಾ ತಮ್ಮ ತಾಣಕ್ಕೆ ಅಂಟಿಕೊಂಡೇ ಇರುವಂತೆ ಪ್ರೇರೇಪಿಸುತ್ತದೆ.

ಈ ಪ್ರಲೋಭನೆಗಳಿಗೆ ಒಳಗಾಗದೆ ಅವುಗಳನ್ನು ನಮ್ಮ ಅಧೀನದಲ್ಲಿ ಇರಿಸಿಕೊಂಡು ದುಡಿಸಿಕೊಳ್ಳುವ ಬಗೆ ಕಷ್ಟವೇನಲ್ಲ. ನಾವು ಮಾಡಬೇಕಾದ ಕೆಲಸವೆಂದರೆ:

ಆಟೊ-ಪ್ಲೇ ಮತ್ತು ನೋಟಿಫಿಕೇಷನ್ ಎಂಬ ಪ್ರಲೋಭನೆಕೋರರನ್ನು ಮಟ್ಟಹಾಕಲು ಆ ಸಾಫ್ಟ್‌ವೇರ್‌ಗಳ ಜೊತೆ ಬರುವ ಸೆಟ್ಟಿಂಗ್ ಕೊಂಡಿಗೆ ಹೋಗಿ ಅವುಗಳನ್ನು ಟರ್ನ್-ಆಫ್ (ಬಂದ್) ಮಾಡುವುದು. ಇದು ನಮಗೆಲ್ಲಾ ತಿಳಿದ ವಿಚಾರವೇ, ಆದರೆ ನಮ್ಮ ಆಲಸ್ಯದಿಂದಾಗಿ ಬೇಕು-ಬೇಡದ್ದು ಎಲ್ಲಾ ನಮ್ಮ ಮೊಬೈಲ್ನಲ್ಲಿ ಆಡುತ್ತಲೇ ಇರುವಂತಾಗಿದೆ. ಅದರ ಬದಲಾಗಿ ದಿನದ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಎಲ್ಲಾ ನೋಟಿಫಿಕೇಷನ್‌ಗಳು ಬರುವಂತೆ ನಿರ್ಬಂಧಿಸುವ ವ್ಯವಸ್ಥೆ ನಮ್ಮ ಕೈಯಲ್ಲೇ ಇದೆ. ಇನ್ನು, ಸ್ನ್ಯಾಪ್‌ಚಾಟ್ ಅಂತಹ ಕಂಪನಿಗಳು ಹೇಗೆ ತಮ್ಮ ಹೊಸ ಹೊಸ ಉತ್ಪನ್ನಗಳಿಗೆ ನಮ್ಮನ್ನು ದಾಸರಾಗಿಸುತ್ತವೆ ಎಂಬ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಹಿರಿಯರಿಂದ ಆಗಬೇಕಿದೆ.

ಹಾಗಿದ್ದರೆ ಸದಾ ಆನ್‌ಲೈನ್ ಇರುವ ಮಕ್ಕಳನ್ನೆಲ್ಲಾ ಗುಮಾನಿಯಿಂದಲೇ ನೋಡಬೇಕೇ? ಅವರೆಲ್ಲಾ ಇಂಟರ್‌ನೆಟ್ ವ್ಯಸನಿಗಳೇ? ಅವರ‍್ಯಾರೂ ಉಪಯುಕ್ತ ಕೆಲಸದಲ್ಲಿ ತೊಡಗಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದಾಗ ನಾನಾ ವಿಚಾರಗಳು ತೆರೆದುಕೊಳ್ಳುತ್ತವೆ.

ನಮ್ಮ ಕಣ್ಣಮುಂದೆ ಇರುವ, ಬರುವ ಒಂದು ಉದಾಹರಣೆಯಂದರೆ ಅನ್ಶುಲ್ ಸಕ್ಸೇನಾ ಎಂಬ ಯುವ ಹ್ಯಾಕರ್‌ನದು. ಈತ ಪಾಕಿಸ್ತಾನದ ವೆಬ್‌ಸೈಟ್‌ಗಳನ್ನು ಸ್ನೇಹಿತರ ಬಳಗದ ಸಹಾಯದಿಂದ ಹ್ಯಾಕ್ ಮಾಡಿ ಭಾರತದ ತ್ರಿವರ್ಣ ಧ್ವಜವನ್ನು ಆ ವೆಬ್‌ತಾಣಗಳಲ್ಲಿ ಪ್ರತಿಷ್ಠಾಪಿಸಿದ ಕತೆ ನಮಗೆ ತಿಳಿದಿದೆ. ಹ್ಯಾಕರ್ ಎನಿಸಿಕೊಳ್ಳುವ ಯುವ ಪಡೆ ದಿನದ ಸಾಕಷ್ಟು ಸಮಯ ಕಂಪ್ಯೂಟರ್ ಮುಂದೆಯೇ ಕಳೆಯುತ್ತದೆ. ಇವರೂ ನವಯುಗದ ವಿಜ್ಞಾನಿಗಳೇ. ಇವರನ್ನು ವ್ಯಸನಿಗಳು ಎಂದು ನಾಮಕರಣ ಮಾಡಲಾಗದು.

ಅನ್ಶುಲ್ ಸಕ್ಸೇನಾ ತಾಂತ್ರಿಕ ಕ್ಷೇತ್ರದಲ್ಲಿ ತೋರಿದ ಕ್ರಿಯಾಶೀಲತೆಯನ್ನೇ ಹೋಲುವಂತಹ ಕಾಯಕವನ್ನು ಸಂಗೀತ ಕ್ಷೇತ್ರದಲ್ಲಿ ತೋರುತ್ತಿರುವ ಯುವ ಪ್ರತಿಭೆ ಮಹೇಶ್‌ ಪ್ರಸಾದ್. ಆಡು ಮುಟ್ಟದ ಸೊಪ್ಪಿಲ್ಲ ಮಹೇಶ್‌ರ ವೀಣೆ ನುಡಿಸದ ಕನ್ನಡ ಚಿತ್ರಗೀತೆ ಇಲ್ಲ ಎಂಬಂತೆ ವೀಣಾವಾದನದಲ್ಲಿ ಕನ್ನಡದ ಸುಪ್ರಸಿದ್ಧ ಗೀತೆಗಳನ್ನು ನುಡಿಸಿ ಅದನ್ನು ಯೂಟ್ಯೂಬ್‌ನಲ್ಲಿ ಬಿತ್ತರಿಸಿ ಕರ್ನಾಟಕದಾದ್ಯಂತ ಆನ್‌ಲೈನ್ ಪ್ರತಿಭೆಯಾಗಿ ಬೆಳೆಯುತ್ತಿದ್ದಾನೆ ಈ ಯುವಕ.

ಒಟ್ಟಿನಲ್ಲಿ, ನಿಮ್ಮ ಮಗು ತಾನು ಕಲಿತ ಹೊಸ ವಿಚಾರಗಳನ್ನು ತನ್ನ ಸ್ನೇಹಿತರ ಜೊತೆ ಆನ್‌ಲೈನ್ ಮೂಲಕ ಹಂಚಿಕೊಳ್ಳಬಯಸಿದರೆ, ತಾನು ಬರೆದ ಕವಿತೆ, ಕಥೆ, ಕಲಾಕೃತಿ, ಹೊಸ ಅಡುಗೆ ಮುಂತಾದವನ್ನು ಬ್ಲಾಗ್‌ನಲ್ಲೋ, ಯೂಟ್ಯೂಬ್ ಚಾನೆಲ್‌ನಲ್ಲೋ ಹಂಚಿಕೊಳ್ಳುವುದರಲ್ಲಿ ನಿರತರಾಗಿದ್ದರೆ ಅದು ಖಂಡಿತ ಸ್ವಾಗತಾರ್ಹ ಬೆಳವಣಿಗೆಯೇ.

ಇದರ ಬದಲಾಗಿ ಲೈಕ್, ಕಾಮೆಂಟ್, ಸ್ಟೇಟಸ್, ಚಾಟಿಂಗ್ ಮತ್ತು ನೇವಲ್-ಗೇಜ್ಹಿಂಗ್ ಎಂಬ ಹಗಲುಗನಸು ಕಾಣುವ ಲಕ್ಷಣಗಳು ನಮ್ಮ ಮಕ್ಕಳಲ್ಲಿ ಕಂಡುಬಂದರೆ, ಕೂಡಲೇ ಅವರನ್ನು ಮೊಬೈಲ್ ಬಳಕೆಯಿಂದ ವಿಮುಖ ಮಾಡಬೇಕು. ಜೊತೆಗೆ ಅವರಿಗೆ ಆಪ್ತ ಸಮಾಲೋಚನೆಯ ಅಗತ್ಯವಿದೆ ಎಂಬುದನ್ನು ಪಾಲಕರು ಮನಗಾಣಬೇಕು ಎಂಬುದು ಅನೇಕ ತಜ್ಞರ ಅಭಿಪ್ರಾಯ.

ಒಂದು ಎಚ್ಚರ ಬೇಕು...

ಅನೇಕ ಪಾಲಕರಿಗೆ ತಿಳಿದಿರುವ ವಿಚಾರವೆಂದರೆ, ಯೂಟ್ಯೂಬ್-ಕಿಡ್ಸ್ ಎಂಬುದು ಮಕ್ಕಳ ಕಾರ್ಯಕ್ರಮ ಬಿತ್ತರಿಸಲು ರೂಪಿಸಿದ ಒಂದು ಆ್ಯಪ್. ಆದರೆ ಕೆಲವು ಕಿರಾತಕ ಬುದ್ಧಿಯ ಮಂದಿ, ಯೂಟ್ಯೂಬ್-ಕಿಡ್ಸ್‌ನಲ್ಲಿ ಮಕ್ಕಳ ಅಚ್ಚುಮೆಚ್ಚಿನ ಪಾತ್ರಗಳಾದ ಮಿಕ್ಕಿಮೌಸ್, ಡೋರಾ, ಟಾಮ್, ಜೆರ್ರಿಗಳ ಮೂಲಕ ಕೊಲೆ-ರಕ್ತಪಾತ, ಹಿಂಸೆಯ ದೃಶ್ಯಾವಳಿಗಳ ತುಣುಕು ತಯಾರಿಸಿ ಅಂತರ್ಜಾಲಕ್ಕೆ ಸೇರಿಸುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ. ಇದರ ಕುರಿತು ಪುಟ್ಟ ಮಕ್ಕಳ ಪೋಷಕರು ಎಚ್ಚರವಹಿಸಬೇಕಾದ ಅವಶ್ಯಕತೆ ಜರೂರಾಗಿದೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು