ಸೋಮವಾರ, ಏಪ್ರಿಲ್ 19, 2021
32 °C

ಭಾನುವಾರ, 10–7–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿಷ ವರ್ತುಲದಿಂದ ಹೊರಬಂದೆ’– ದಳಕ್ಕೆ ಜೀವರಾಜ ಆಳ್ವ ರಾಜೀನಾಮೆ
ಬೆಂಗಳೂರು, ಜುಲೈ 9– ‘ಕೆಲವರ ಅಧಿಕಾರ ಲಾಲಸೆ ಮತ್ತು ಕ್ಷುಲ್ಲಕ ರಾಜಕಾರಣದಿಂದ ಪಕ್ಷದಲ್ಲಿ ಸೃಷ್ಟಿಯಾಗಿರುವ ವಿಷ ವರ್ತುಲದಲ್ಲಿ ಇರಲಾರದೆ ಜನತಾದಳ ತೊರೆಯುತ್ತಿರುವೆ’ ಎಂದು ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಡಾ. ಜೀವರಾಜ ಆಳ್ವ ಇಂದು ಅಧಿಕೃತವಾಗಿ ಘೋಷಿಸಿದರು.

ನಗರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ, ಸಂಘಟನೆಗೆ ಹೆಸರಾದ ಡಾ. ಆಳ್ವ ಕೊನೆಗೂ ಮೌನ ಮುರಿದು ದಳದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದ ಹೊರ ನಡೆಯುತ್ತಿರುವುದಾಗಿ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ‍ಪ್ರಕಟಿಸಿದರು.

‘ಪಕ್ಷದಲ್ಲಿ ನಾನು ಸಲ್ಲಿಸಿದ ಕಿಂಚಿತ್ ಸೇವೆಗೆ ಪ್ರತಿಯಾಗಿ ಅಪಾರ ಮನ್ನಣೆ, ಆದರಗಳನ್ನು ಪಡೆದ ಭಾಗ್ಯ ನನ್ನದು. ಇಷ್ಟೊಂದು ವಿಶ್ವಾಸ ತೋರಿದ ಪಕ್ಷವನ್ನು ಒಡೆಯುವ ಕ್ರೂರಿ ನಾನಲ್ಲ. ಆದ್ದರಿಂದ ಏಕಾಂಗಿಯಾಗಿ ನಿರ್ಗಮಿಸುತ್ತಿದ್ದೇನೆ’ ಎಂದು ಹೇಳುತ್ತಲೇ ‘ಈ ಪಕ್ಷ ಅಧಿಕಾರಕ್ಕೆ ಬರಲು ಮತ್ತು ವಿರೋಧ ಪಕ್ಷವಾಗಲೂ ಅರ್ಹವಲ್ಲ’ ಎಂದು ‘ಸರ್ಟಿಫಿಕೇಟ್’ ನೀಡಿ ಸಂಬಂಧ ಕಡಿದುಕೊಂಡರು.

ವಿಮಾನ ಅಪಘಾತ: ಪಂಜಾಬ್ ರಾಜ್ಯಪಾಲ, ಕುಟುಂಬದವರ ಸಾವು
ಚಂಡೀಗಡ, ಜುಲೈ 9 (ಪಿಟಿಐ, ಯುಎನ್‌ಐ)– ಹಿಮಾಚಲ ಪ್ರದೇಶದ ಕುಲು ಕಣಿವೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಪಾಲ ಸುರೇಂದ್ರ ನಾಥ್, ಅವರ ಪತ್ನಿ ಮತ್ತು ಕುಟುಂಬದ 10 ಮಂದಿ ಮೃತಪಟ್ಟರು. ಇಬ್ಬರು ಚಾಲಕ ಸಿಬ್ಬಂದಿ ಮತ್ತು ಸುರೇಂದ್ರನಾಥ್ ಅವರ ಸೇವಕನೊಬ್ಬ ಸಹ ಈ ದುರ್ಘಟನೆಯಲ್ಲಿ ಸತ್ತಿದ್ದಾರೆ.

ಮಂಡಿ ಜಿಲ್ಲೆಯ ಕುಲು ಕಣಿವೆಯಲ್ಲಿ ರೌಂಡಾ ಮತ್ತು ಚೌಕಿ ಗ್ರಾಮಗಳ ನಡುವೆ ವಿಮಾನ ಧರೆಗುರುಳಿತು. ವಿಮಾನದಲ್ಲಿದ್ದ ಸುರೇಂದ್ರ ನಾಥ್, ಅವರ ಪತ್ನಿ ಗಾರ್ಗಿ ದೇವಿ, ಮಗ ವಿಕ್ರಮ್ ಮಲ್ಹೋತ್ರ, ಸೊಸೆ ರೇಖಾ ಮಲ್ಹೋತ್ರಾ, ಮಗಳು ಜ್ಯೋತ್ಸ್ನಾ ಜುನೇಜಾ, ಅಳಿಯ ವಿಪ್ಲವ್ ಜುನೇಜಾ, ಮೊಮ್ಮಕ್ಕಳಾದ ಚಾಹರ್ (7), ನೇಹಾ (3), ಪ್ರಶಾಂತ್ (12), ಅಕ್ಷಯ್ (8) ಹಾಗೂ ಮೂವರು ಸಿಬ್ಬಂದಿ ಬಲಿಯಾದರು.

ಕಿಮ್ ನಿಧನ: ಉ. ಕೊರಿಯ ಸಮಸ್ಯೆ ಜಟಿಲ
ಸಿಯೋಲ್, ಜುಲೈ 9 (ಎಪಿ)–
ಉತ್ತರ ಕೊರಿಯದ ‘ಮಹಾನಾಯಕ’ ಎಂದು ಜನಮನ್ನಣೆ ಗಳಿಸಿದ್ದ 82ರ ಹರೆಯದ ಕಿಮ್ ಇಲ್ ಸುಂಗ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಿಮ್ ಅವರು ನಿನ್ನೆ ನಿಧನರಾಗಿರುವುದಾಗಿ ಉತ್ತರ ಕೊರಿಯ ಟೆಲಿವಿಷನ್ ಇಂದು ಪ್ರಕಟಿಸಿದೆ.

ಇದರಿಂದಾಗಿ ಉತ್ತರ ಕೊರಿಯ ತನ್ನ  ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಮಾತುಕತೆ ಸಂದಿಗ್ಧತೆಗೆ ಸಿಲುಕಿದಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು