ಮಂಗಳವಾರ, ಮಾರ್ಚ್ 9, 2021
18 °C

ಸುದಾನವಿಧದ ಹಂಗಾಮ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಸುದಾನವಿಧ ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ಯಾವುದೂ ಸರಿ ಇರಲಿಲ್ಲ. ಹಳೆ ವಿದ್ಯಾರ್ಥಿ ರಾಗುವಿನ ಗಾಂಧಿನಗರದ ಹುಡುಗರು, ಮೋನನ ಕಮಲಾಪುರದ ಹುಡುಗರು ಅಂತ ಎರಡು ಗುಂಪಿದ್ದವು. ಇವರಿಬ್ಬರ ನಡುವೆ ಜನತಾ ಕಾಲೊನಿ ಹುಡುಗರದ್ದೊಂದು ಸಣ್ಣ ಗುಂಪಿತ್ತು. ಹೋದ ಬಾರಿ ಅಧ್ಯಕ್ಷನಾಗಿದ್ದ ಗಾಂಧಿನಗರದ ಸಿದ್ದಪ್ಪ ಈ ಬಾರೀನೂ ತಾನೇ ಗೆಲ್ಲೋದು ಅಂತ ಅಬ್ಬರಿಸಿದರೆ, ಭಾವಿ ಅಧ್ಯಕ್ಷ ಅಂತ ಕಮಲಾಪುರದ ಧವಳಪ್ಪ ನುಲೀತಿದ್ದ.

ಮೊನ್ನೆ 22 ಸ್ಥಾನಕ್ಕೆ ಚುನಾವಣೆ ನಡೆದು ಕಮಲಾಪುರದೋರು 10, ಗಾಂಧಿನಗರದೋರು 8, ಜನತಾನಗರದ ಗುಂಪು 4 ಸ್ಥಾನ ಗೆದ್ದಿದ್ದವು. ಮೆಜಾರಿಟಿಗೆ ಬೇಕಾದ 12 ಸ್ಥಾನ ಯಾರಿಗೂ ಇರಲಿಲ್ಲ.

ಗಾಂಧಿನಗರದೋರು ಜನತಾ ಕಾಲೊನಿ ಹುಡುಗರ ನಾಯಕ ಗೌಡಯ್ಯನ್ನ ಸಂಘದ ಅಧ್ಯಕ್ಷನನ್ನಾಗಿ ಮಾಡಿ ಕಮಲಾಪುರದೋರಿಗೆ ಮಣ್ಣು ಮುಕ್ಕಿಸಿಬಿಟ್ಟರು. ಧವಳಪ್ಪ ‘ಇದು ಅಕ್ರಮ, ಅನ್ಯಾಯ’ ಅಂತ ಕಿರುಚಾಡಿದ್ದಷ್ಟೇ ಲಾಭ. ಸಿದ್ದಪ್ಪ ನನ್ನತ್ರ ಬಂದು ‘ನೋಡಿ ಸಾ, ನನ್ನ ಭಾಗ್ಯದ ಕಥೆಯ!’ ಅಂತ ನೊಂದುಕೊಂಡ.

‘ಇನ್ನೆಷ್ಟು ದಿನ ಕಾಲೇಜಿನಲ್ಲಿ ಇರತೀನೋ ಗೊತ್ತಿಲ್ಲ’ ಅಂತ ಪಟಕ್ಕನೆ ಕಣ್ಣಿಗೆ ಕರ್ಚೀಪು ಇಟ್ಟುಕೊಳ್ಳುತ್ತಿದ್ದ ಗೌಡಯ್ಯ. ಎಲ್ಲಾ ವಿದ್ಯಾರ್ಥಿಗಳಿಗೂ ‘ನೀವೆಲ್ಲಾ ಕ್ಯಾಂಟೀನಲ್ಲಿ ಮಾಡಿರ ಸಾಲ ನಾನೇ ತೀರಿಸ್ತೀನಿ ಬ್ರದರ್’ ಅಂತ ಆಶ್ವಾಸನೆ ಕೊಡ್ತಿದ್ದ.

ಕ್ರಿಕೆಟ್, ವಾಲಿಬಾಲ್ ಕ್ಯಾಪ್ಟನ್‍ಶಿಪ್ ಬೇಕು ಅಂತ ಜಗಳ ಶುರುವಾಗಿತ್ತು. ಧವಳಪ್ಪ ಗಾಂಧಿನಗರದ ಮೆಂಬರುಗಳಿಗೆ ರೆಡ್ಡಿ ಹೋಟೆಲಲ್ಲಿ ಬಿರಿಯಾನಿ ತಿನ್ನಿಸಿ ಗೋವಾ ತೋರಿಸ್ತೀನಿ ನನ್ನ ಕಡೆಗೆ ಬನ್ನಿ ಅಂತ ಗೋಗರೆದಿದ್ದ. ನೆನ್ನೆ ಸೋಮಪ್ಪ ‘ಸಿದ್ದಪ್ಪನೇ ನಮ್ಮ ಅಧ್ಯಕ್ಷ’ ಅಂದುದ್ದಕ್ಕೆ ಗೌಡಯ್ಯ ಬೇಜಾರಿನಿಂದ ‘ನಾನು ಟೀಸಿ ತಕಂಡೋಯ್ತಿನಿ’ ಅಂತ ಬಿಕ್ಕಳಿಸತೊಡಗಿದ್ದ. ಅಪ್ಪ ವೇದೇಗೌಡರು ಬ್ಯಾರೆ ಕಾಲೇಜಲ್ಲಿ ಸೀಟು ಸಿಗಲ್ಲ ಅಂತ ಸಮಾಧಾನ ಮಾಡಿದ್ರು.

ಈ ಕಡೆ ವೇರಣ್ಣ ‘ಸೀ ಸಾರ್, ಬ್ರದರ್ ಈಸ್ ಅಧ್ಯಕ್ಷ. ಬಜೆಟ್ ಕೀಪಿಂಗ್ ಗುಡ್ ಟೈಂ ಇನ್ ಕರ್ನಾಟಕ ಅಂಡ್ ತಮಿಳುನಾಡು ಪಂಚಾಂಗಾಸ್’ ಅಂತಿದ್ದ. ಕಮಲಾಪುರದ ಒಬ್ಬ ಕೈ ಕಟ್, ಕಾಲು ಕಟ್ ಅಂತ ಶಾಂತಿ ಮಂತ್ರ ಜಪಿಸುತ್ತಿದ್ದ. ಇವೆಲ್ಲಾ ಗೋಜಲುಗಳ ನಡುವೆ ಮಾಯಕಾರ ವೇದೇಗೌಡರು ಏನು ದಾಳ ಉರುಳಿಸ್ತಾರೋ ನೋಡಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.