ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಕನಸು ಇಂದು ನನಸು

Last Updated 6 ಮಾರ್ಚ್ 2019, 11:40 IST
ಅಕ್ಷರ ಗಾತ್ರ

ಲೈಂಗಿಕ ಅಲ್ಪಸಂಖ್ಯಾತರಾದ ಪರಿಚಯ ಗೌಡ ಅವರಿಗೆ ಸಚಿವೆ ಜಯಮಾಲಾ ಅವರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಸಿಕ್ಕಿದೆ. ಮೈಸೂರಿನ ನಿವಾಸಿಯಾದ ಪರಿಚಯ ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಅವರು ಇಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

* ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಉದ್ಯೋಗ ಪಡೆದ ಬಗ್ಗೆ ಏನನಿಸುತ್ತಿದೆ?

ಜನಸಾಮಾನ್ಯರು ನಮ್ಮ ಪಕ್ಕದಲ್ಲಿ ನಿಂತುಕೊಳ್ಳಲು ಹಾಗೂ ಮಾತನಾಡಲು ಸಾವಿರ ಸಲ ಆಲೋಚನೆ ಮಾಡುತ್ತಾರೆ. ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಈ ಹಿಂದೆ ವಿಧಾನಸೌಧದ ಎದುರು ಹಲವಾರು ಸಲ ಛಾಯಾಚಿತ್ರ ತೆಗೆಸಿಕೊಂಡಿದ್ದೆ. ವಿಧಾನಸೌಧದೊಳಗೆ ಅವಕಾಶ ಸಿಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಅನಿರೀಕ್ಷಿತವಾಗಿ ಈಗ ಅವಕಾಶ ಸಿಕ್ಕಿದೆ. ಈ ಉದ್ಯೋಗ ಸಿಗಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ನಿರ್ದೇಶಕಿ ಡಾ. ವಸುಂಧರಾದೇವಿ ಕಾರಣ. ನನ್ನನ್ನು ಹುಡುಕಿ ಅವರು ಕೆಲಸ ಕೊಡಿಸಿದರು. ಸಚಿವೆಯ ಕಚೇರಿಯಲ್ಲಿ ಎಲ್ಲರೂ ಸಹೋದರರಂತೆ ಇದ್ದಾರೆ. ಕನ್ನಡ ಟೈಪಿಂಗ್‌ ಕಲಿಯುತ್ತಿದ್ದೇನೆ.

* ನೀವು ಸಾಗಿ ಬಂದ ಹಾದಿ?

ನನ್ನ ಊರು ಮೈಸೂರು. ಶಿಕ್ಷಣ ಪಡೆದಿದ್ದು ಅಲ್ಲೇ. 13ನೇ ವಯಸ್ಸಿನಲ್ಲಿ ನಾನು ಹೆಣ್ಣು ಎಂಬ ಭಾವನೆ ಮೂಡಲಾರಂಭಿಸಿತು. ಅದೇ ರೀತಿ ವರ್ತಿಸಲಾರಂಭಿಸಿದೆ. ಹೆತ್ತವರಿಗೆ ಅವಮಾನ ಆಗಬಾರದು ಎಂಬ ಕಾರಣಕ್ಕೆ ಬೆಂಗಳೂರಿಗೆ ಬಂದೆ. ‘ಸಮರ’ ಹಾಗೂ ‘ಪಯಣ’ ಸಂಘಟನೆಗಳಲ್ಲಿ ಕೆಲಸ ಮಾಡಿದ್ದೇನೆ. ಉದ್ಯೋಗಕ್ಕೆ ಸಾಕಷ್ಟು ಪ್ರಯತ್ನಪಟ್ಟೆ. ಯಾರೂ ಕೊಡಲಿಲ್ಲ. ಬೇರೆ ದಾರಿ ಕಾಣದೆ ಭಿಕ್ಷಾಟನೆ ಮಾಡುತ್ತಿದ್ದೆ. ಈಗ ಉದ್ಯೋಗ ಸಿಕ್ಕಿದ್ದು, ಕಾಯಂ ಆಗಲಿದೆ ಎಂಬ ವಿಶ್ವಾಸ ಇದೆ.

* ಲೈಂಗಿಕ ಅಲ್ಪಸಂಖ್ಯಾತರಿಗೆ ನಿಮ್ಮ ಕರೆ ಏನು?

ಲೈಂಗಿಕ ಅಲ್ಪಸಂಖ್ಯಾತರಾಗಿರುವುದು ನಮ್ಮ ತಪ್ಪು ಅಲ್ಲ. ಅದು ಪ್ರಕೃತಿಯ ನಿಯಮ. ಆದರೆ, ಭಿಕ್ಷಾಟನೆ ಮಾಡುವುದು ಹಾಗೂ ಲೈಂಗಿಕ ಕಾರ್ಯಕರ್ತರಾಗುವುದು ಸರಿಯಲ್ಲ. ಇದು ಹಿಂಸೆ ನೀಡುತ್ತದೆ. ನಾವು ಮುಖ್ಯವಾಹಿನಿಗೆ ಬಂದರೆ ಗೌರವ ಹೆಚ್ಚುತ್ತದೆ.

* ನೀವೂ ಮೀಸಲಾತಿ ಕೇಳುತ್ತೀರಾ?

ಲೈಂಗಿಕ ಅಲ್ಪಸಂಖ್ಯಾತರು ಎಷ್ಟು ಮಂದಿ ಇದ್ದಾರೆ ಎಂಬ ಸಮೀಕ್ಷೆ ಆಗಿಲ್ಲ. ಮೊದಲು ಸಮೀಕ್ಷೆ ಆಗಬೇಕು. ನಮಗೂ ಮೀಸಲಾತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT