ಮಂಗಳವಾರ, ನವೆಂಬರ್ 12, 2019
20 °C

ಬುಧವಾರ, 10–9–1969

Published:
Updated:

ಉದ್ರಿಕ್ತ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು, ಲಾಠಿಪ್ರಹಾರ

ಬೆಂಗಳೂರು, ಸೆ. 9– ವಿದ್ಯಾರ್ಥಿಗಳು ಇಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕಚೇರಿಗೆ ನುಗ್ಗಿ ಅಗ್ನಿಸ್ಪರ್ಶ ಹಾಗೂ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಲು ಆರಂಭಿಸಿದಾಗ ಪೊಲೀಸರು ವಿಶ್ವವಿದ್ಯಾನಿಲಯದ ಆವರಣಕ್ಕೆ ಮಧ್ಯಾಹ್ನ ಪ್ರವೇಶಿಸಿ ಅಶ್ರುವಾಯು ಷೆಲ್ ಹಾರಿಸಿದರಲ್ಲದೆ ಲಾಠಿಪ್ರಹಾರ ಮಾಡಿದರು.

ಕಳೆದ 9 ದಿನಗಳಿಂದ ಶಾಂತ ರೀತಿಯಲ್ಲಿ ಕೂಡಿದ್ದ ವಾರ್ಸಿಟಿ ಆವರಣ ಇಂದು ಹಿಂಸಾಕೃತ್ಯಗಳ ಕೇಂದ್ರವಾಗಿತ್ತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲು ಬಂದ ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರ ಕಾರಿನ ಕಿಟಕಿಗಳ ಪುಡಿಪುಡಿ ಮಾಡಿ, ಚಕ್ರದ ಟೈರುಗಳನ್ನು ಕತ್ತರಿಸಿ ಕಾರಿಗೆ ವಿಪರೀತ ಜಖಂ ಮಾಡಿದ್ದಾರೆ. ದೈವವಶಾತ್ ಸಚಿವ ಶ್ರೀ ಶಂಕರಗೌಡ ಅವರಿಗೆ ಏನೂ ಪೆಟ್ಟು ತಗಲಲಿಲ್ಲ. ಅನ್ನಸತ್ಯಾಗ್ರಹ ಹೂಡಿದ್ದ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಎಚ್‌.ಡಿ.ಗಂಗರಾಜ್‌ ಅವರನ್ನು ವೈದ್ಯರ ಸಲಹೆ ಮೇರೆಗೆ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು.

ಬೇಡಿಕೆ ಒಪ್ಪುವಂತಿಲ್ಲ: ಸರ್ಕಾರದ ನಿಲುವು

ಬೆಂಗಳೂರು, ಸೆ. 9– ತಮಗೆ ಸಂಬಂಧವಿಲ್ಲದ, ವಿಶ್ವವಿದ್ಯಾಲಯದ ಆಡಳಿತ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಯಸುವ ವಿದ್ಯಾರ್ಥಿಗಳ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶಿಕ್ಷಣಮಂತ್ರಿಗಳು ಇಂದು ಸ್ಪಷ್ಟ
ಪಡಿಸಿದರು.

‘ವಿದ್ಯಾರ್ಥಿಗಳು ಬೆದರಿಕೆ ಹಾಕುವುದರಿಂದ ನಾವು ಜಗ್ಗುವುದಾದರೆ ಸರ್ಕಾರವನ್ನು ನಡೆಸಲಿಕ್ಕಾಗುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯಾಂಗಬದ್ಧವಾದ ಏನು ಕ್ರಮಗಳಿವೆಯೋ ಅವುಗಳನ್ನು ಕೈಗೊಳ್ಳುತ್ತೇವೆ’ ಎಂದು ಶ್ರೀ ಶಂಕರಗೌಡರು ವಿಧಾನ ಸಭೆಯಲ್ಲಿ ತಿಳಿಸಿದರು.

1974ರ ವೇಳೆಗೆ ಕಾವೇರಿ ನೀರಿನ ಪೂರ್ಣ ಬಳಕೆ: ಮುಖ್ಯಮಂತ್ರಿ ಭರವಸೆ

ಬೆಂಗಳೂರು, ಸೆ. 9– 1974ರಲ್ಲಿ ಕಾವೇರಿ ಒಪ್ಪಂದದ ಅವಧಿ ಮುಗಿಯುವ ಮುನ್ನ ಕಬಿನಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ನೀರು ನಿಲ್ಲುವಂತಾಗಿ, ಮೈಸೂರಿನ ಹಕ್ಕಿನಲ್ಲಿರುವ 4,500 ಕೋಟಿ ಘನ ಅಡಿಗಳಷ್ಟು ನೀರು ನಮ್ಮದಾಗುತ್ತದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ವಿಧಾನ ಸಭೆಯಲ್ಲಿ ಸ್ಪಷ್ಟ ಭರವಸೆ ನೀಡಿದರು.

ವಿರೋಧ ಪಕ್ಷದ ನಾಯಕರು ಮಂಡಿಸಿದ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಸಭೆಯು ಹರ್ಷದಿಂದ ಮೇಜು ಕುಟ್ಟಿ ಸ್ವಾಗತಿಸಿತು.

ಪ್ರತಿಕ್ರಿಯಿಸಿ (+)