ಶನಿವಾರ, ನವೆಂಬರ್ 23, 2019
18 °C

ಭಾನುವಾರ, 11–9–1994

Published:
Updated:

ಮೀಸಲು ಪ್ರಮಾಣ: ಶೇ 50 ಮೀರದಿರಲು ರಾಜ್ಯಕ್ಕೆ ಆದೇಶ

ನವದೆಹಲಿ, ಸೆ. 10 (ಯುಎನ್‌ಐ, ಪಿಟಿಐ)– ವೈದ್ಯಕೀಯ ಮತ್ತು ಎಂಜಿನಿಯರಿಂಗ್ ತರಗತಿಗಳಿಗೆ ಪ್ರವೇಶ ನೀಡುವಾಗ ಹಾಗೂ ರಾಜ್ಯ ಸರ್ಕಾರಿ ಸೇವೆಗೆ ನೇಮಕ ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳು ಮತ್ತಿತರ ಹಿಂದುಳಿದ ವರ್ಗಗಳ ಮೀಸಲು ಪ್ರಮಾಣವನ್ನು ಗರಿಷ್ಠ ಶೇಕಡ 50ಕ್ಕೆ ಸೀಮಿತಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.

ಶೇಕಡ 68 ಮೀಸಲಾತಿ ನೀಡುವ 1986ರ ಆದೇಶದ ಮೇರೆಗೆ ಮೀಸಲಾತಿ ನೀಡಲು ಅವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಅದು ಶುಕ್ರವಾರ ತಳ್ಳಿಹಾಕಿತು. ನ್ಯಾಯಮೂರ್ತಿ ಕುಲದೀಪ್‌ ಸಿಂಗ್ ಮತ್ತು ನ್ಯಾಯಮೂರ್ತಿ ಡಿ.ಎಲ್. ಅನ್ಸಾರಿಯಾ ಅವರಿದ್ದ ವಿಭಾಗಪೀಠ ಈ ತೀರ್ಪು ನೀಡಿತು.

ಮೀಸಲಾತಿ ಪ್ರಮಾಣ ಶೇಕಡ 50ನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು 1986ರ ಮೀಸಲಾತಿ ಆದೇಶ ಉಲ್ಲಂಘಿಸಿದೆ ಎಂದು ಸಲ್ಲಿಸಲಾದ ರಿಟ್ ಅರ್ಜಿಯ ಮೇಲಿನ ವಿಚಾರಣೆಯನ್ನು ನವೆಂಬರ್ ತಿಂಗಳ ಮೊದಲ ವಾರಕ್ಕೆ ಮುಂದೂಡಿತು.

ಹಿಂದುಳಿದವರ ಹಿತಕ್ಕೆ ಧಕ್ಕೆ– ಬಂಗಾರಪ್ಪ

ಬೆಂಗಳೂರು, ಸೆ. 10– ಹಿಂದುಳಿದ ವರ್ಗಗಳ ಹಿತ ಕಾಯುವ ಪ್ರಾಮಾಣಿಕ ಕಳಕಳಿ ಸರ್ಕಾರಕ್ಕೆ ಇರಲಿಲ್ಲ. ಮೀಸಲಾತಿಯನ್ನು ರಾಜಕೀಯ ಅಸ್ತ್ರವಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹವಣಿಸಿತ್ತು. ಆದರೆ ಅದರಲ್ಲೂ ವಿಫಲವಾದ ಪರಿಣಾಮವಾಗಿ ಹಿಂದುಳಿದವರಿಗೆ ಈಗ ಭಾರಿ ಅನ್ಯಾಯವಾಗಿದೆ ಎಂದು ಮೀಸಲಾತಿ ಪ್ರಮಾಣ ಶೇಕಡ 50 ಮೀರಬಾರದೆಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನ ಕುರಿತು ವಿರೋಧ ಪಕ್ಷಗಳ ಧುರೀಣರು ಕಳವಳ ವ್ಯಕ್ತಪಡಿಸಿದ್ದಾರೆ.

 ‘ತಮಿಳುನಾಡಿಗೆ ಶೇಕಡ 69ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ನೀಡಿ, ಬೇರೆ ರಾಜ್ಯಗಳಿಗೆ ನೀಡದಿದ್ದರೆ ಅನ್ಯಾಯವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವೇ ಈ ವಿಷಯ ಸಂಬಂಧ ಸುಪ್ರೀಂ ಕೋರ್ಟಿನ ಪೂರ್ಣಪೀಠದ ಮೊರೆ ಹೋಗಬೇಕು’ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಆಗ್ರಹಪಡಿಸಿದರು.

ನಿರಪರಾಧ ಸಾಬೀತುಪಡಿಸಲು ದತ್‌ಗೆ ಕೋರ್ಟ್ ಆದೇಶ

ನವದೆಹಲಿ, ಸೆ. 10 (ಯುಎನ್‌ಐ)– ಟಾಡಾ ಕಾಯ್ದೆಯಡಿ ಬಂಧಿತನಾದ ವ್ಯಕ್ತಿ ಅನಧಿಕೃತವಾಗಿ ಹೊಂದಿದ ಶಸ್ತ್ರಾಸ್ತ್ರಗಳು ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳಿಗೆ ಸಂಬಂಧಿಸಿದ್ದಲ್ಲ ಎಂಬುದು ಸಾಬೀತಾದಲ್ಲಿ ಆರೋಪಿಗೆ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸಂಜಯ್ ದತ್‌ ತನಗೆ ಜಾಮೀನು ನಿರಾಕರಿಸಿದ ಟಾಡಾ ಕೋರ್ಟ್‌ನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣಾವಧಿಯಲ್ಲಿ ನ್ಯಾಯಮೂರ್ತಿ ಎ.ಎಂ. ಅಹ್ಮದಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಶುಕ್ರವಾರ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.

ಜೈಲಿನಿಂದ ಬಿಡುಗಡೆ ಆಗಲು ತಾನು ನಿರಪರಾಧಿ ಎಂಬುದನ್ನು ಸಾಬೀತು ಮಾಡಬೇಕು ಎಂದು ದತ್‌ಗೆ ಕೋರ್ಟ್ ಆದೇಶಿಸಿ, ಬಿಡುಗಡೆಗೆ ಅವರು ಮಾಡಿದ ಮನವಿಯನ್ನು ತಳ್ಳಿಹಾಕಿತು.

ಪ್ರತಿಕ್ರಿಯಿಸಿ (+)