ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅಮೃತ ಮಹೋತ್ಸವ; ತಲುಪಬೇಕಾದ್ದೇನು?

ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯು ನಮ್ಮ ವರ್ತನೆಯಲ್ಲಿ ಸಕಾರಾತ್ಮಕ ಪರಿವರ್ತನೆ ತರಬೇಕು
Last Updated 29 ಜುಲೈ 2022, 19:30 IST
ಅಕ್ಷರ ಗಾತ್ರ

ಇದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ಸದ್ಯಕ್ಕೆ ಇದು ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ಹೊಗಳುವ ಕಾರ್ಯಕ್ರಮದಂತೆ ಬಹುಮಟ್ಟಿಗೆ ಭಾಸವಾಗುತ್ತಿದೆ. ಅವರು ಹೊಗಳಿಕೆಗೆ ಅರ್ಹರೆಂಬುದು ನಿಜ. ಹೊಗಳಿಕೆಗೂ ಮೀರಿದ್ದಕ್ಕೆ ಅರ್ಹರು. ದೇಶದ ಸ್ವಾತಂತ್ರ್ಯ ಹೋರಾಟವು ಖಂಡಿತವಾಗಿಯೂ ಸ್ಫೂರ್ತಿಯ ಪ್ರಮುಖ ಸೆಲೆಗಳಲ್ಲೊಂದು. ಆದರೆ ಇದನ್ನು ಸಮಾಜಕ್ಕೆ ಹೇಗೆ ತಲುಪಿಸಬೇಕು ಎನ್ನುವುದಕ್ಕೆ ಸ್ಪಷ್ಟ ಚಿಂತನಾ ಕ್ರಮ ಬೇಕು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂದರೆ ‘ದಾಸ್ಯಕ್ಕೆ ಒಳಗಾದವರು’ ಸಾಮ್ರಾಜ್ಯಶಾಹಿ ಪ್ರಭುತ್ವದ ವಿರುದ್ಧ ಮಾಡಿದ ಹೋರಾಟ. ದಾಸ್ಯಕ್ಕೆ ಒಳಗಾದವರಿಗೆ ಯಜ ಮಾನನ ವಿರುದ್ಧ ಹೋರಾಡಲು ಕಾನೂನಿನ ಶಕ್ತಿ ಇರು ವುದಿಲ್ಲ. ಆದರೆ ಸ್ವತಂತ್ರ ರಾಜರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಾಗ ಅವರ ಸೈನಿಕರಿಗೆ ರಾಜನ ಕಾನೂನಿನ ಶಕ್ತಿ ಇರುತ್ತದೆ. ಒಬ್ಬ ರಾಜ ಇನ್ನೊಬ್ಬ ರಾಜನ ವಿರುದ್ಧ ಯುದ್ಧ ಮಾಡುವುದು ಅಪರಾಧ ಅಲ್ಲ. ಆದರೆ ದಾಸ್ಯಕ್ಕೆ ಒಳಗಾದವನು ಯಜಮಾನನ ವಿರುದ್ಧ ಹೋರಾಡುವುದು ಅಪರಾಧ. ಆದ್ದರಿಂದ ರಾಜರು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕುವ ಮೊದಲು ಬ್ರಿಟಿಷರೊಂದಿಗೆ ನಡೆಸಿದ ಹೋರಾಟವು ಯುದ್ಧವೇ ವಿನಾ ಸ್ವಾತಂತ್ರ್ಯ ಹೋರಾಟ ಅಲ್ಲ.‌ ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷ್ ಪರಮಾಧಿಕಾರವನ್ನು ಸ್ವೀಕರಿಸುವ ನಿಬಂಧನೆಯನ್ನು ಹೊಂದಿದ್ದುದರಿಂದ ದಾಸ್ಯಕ್ಕೆ ಸಂಬಂಧಿಸಿದ ಒಡಂಬಡಿಕೆಯನ್ನು ಸ್ವೀಕರಿಸಿದ ರಾಜರು ನಂತರ ನಡೆಸಿದ್ದು ಸ್ವಾತಂತ್ರ್ಯ ಹೋರಾಟ. ಇದು ರಾಜಕೇಂದ್ರಿತ, ಸೈನಿಕ ಕೇಂದ್ರಿತ, ಜನಕೇಂದ್ರಿತವಾದ ಮೂರು ಹಂತಗಳಲ್ಲಿ ನಡೆಯಿತು. ಮೊದಲ ಹಂತದಲ್ಲಿ ರಾಜಕೇಂದ್ರಿತ, ಎರಡನೆಯ ಹಂತದಲ್ಲಿ 1857ರ ಸೈನಿಕ ಕ್ರಾಂತಿಯಂತಹ ಹೋರಾಟಗಳು ಸೈನಿಕ ಕೇಂದ್ರಿತ, ಮೂರನೇ ಹಂತದಲ್ಲಿ ಬಾಲಗಂಗಾಧರ ತಿಲಕರು ಬೀರಿದ ಪ್ರಭಾವದ ಪರಿಣಾಮವಾಗಿ ಜನಕೇಂದ್ರಿತ ಹೋರಾಟ ವಾಯಿತು.

ಜನಕೇಂದ್ರಿತ ಹೋರಾಟದ ಪ್ರಾರಂಭದ ಹಂತ ‘ಸ್ವಯಮಾಡಳಿತ’ ಅಥವಾ ‘ಹೋಂ ರೂಲ್’ಗಾಗಿನ ಬೇಡಿಕೆಯಾಗಿತ್ತು. ಬ್ರಿಟಿಷರು ‘ಡೊಮಿನಿಯನ್ ಸ್ಥಾನ ಮಾನ’ ಕೊಟ್ಟರೆ ಸಾಕಿತ್ತು. ಅಂದರೆ ಸಾಂಕೇತಿಕವಾಗಿ ಭಾರತವು ಬ್ರಿಟಿಷ್ ಚಕ್ರಾಧಿಪತ್ಯದ ಒಳಗೆಯೇ ಇದ್ದು ಆಡಳಿತಾಧಿಕಾರವು ಭಾರತೀಯರಿಗೆ ಸಿಕ್ಕರೆ ಅದು ಭಾರತೀಯರ ದೃಷ್ಟಿಯಲ್ಲಿ ‘ಸ್ವಯಮಾಡಳಿತ’. ಆಗ ಭಾರತವು ಬ್ರಿಟಿಷರಿಗೆ ‘ಡೊಮಿನಿಯನ್’. ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ, ‘ಪೂರ್ಣ ಸ್ವರಾಜ್ಯ’ದ ಘೋಷಣೆ ಮಾಡಿದ ನಂತರದ ಹೋರಾಟಗಳು ಬ್ರಿಟಿಷ್ ಪರಮಾಧಿಕಾರದ ಅಸ್ತಿತ್ವವನ್ನೆ ತಿರಸ್ಕರಿಸಿದ ಪೂರ್ಣ ಸ್ವಾತಂತ್ರ್ಯಕ್ಕಾಗಿನ ಹೋರಾಟ. ತಾತ್ವಿಕವಾಗಿ ಅದು ಉಪ್ಪಿನ ಸತ್ಯಾಗ್ರಹದಲ್ಲೇ ಈಡೇರಿದೆ. ಯಜಮಾನನ ಆದೇಶವನ್ನು ಉಲ್ಲಂಘಿಸಿ ಉಪ್ಪು ತಯಾರಿಸಲು ತಾನು ಸಮರ್ಥನಿದ್ದೇನೆ ಎಂದು ಇಡೀ ವಿಶ್ವಕ್ಕೆ ಗಾಂಧೀಜಿ ತೋರಿಸಿದಾಗಲೂ ಬ್ರಿಟಿಷರಿಗೆ ಅವರನ್ನು ಅಪರಾಧಿಯಾಗಿ ಮಾಡಲು ಆಗದೆ ಇರ್ವಿನ್‌ರೊಂದಿಗೆ ಒಪ್ಪಂದಕ್ಕೆ ಕರೆದ ಮೇಲೆ ತಾತ್ವಿಕವಾಗಿ ದಾಸ್ಯ ಉಳಿಯದು.‌

ಸ್ವಾತಂತ್ರ್ಯ ಹೋರಾಟವು ಜನಕೇಂದ್ರಿತವಾದಾಗ ಹೋರಾಟಕ್ಕಾಗಿ ರೂಪುಗೊಂಡ ‘ನಾವೆಲ್ಲರೂ ಒಂದೇ’ ಎಂಬ ಭಾವದಿಂದ ಹುಟ್ಟಿದ ರಾಷ್ಟ್ರೀಯತೆ ಇಂದಿಗೂ ಪ್ರಸ್ತುತ. ಭಾರತದಂತಹ ಬಹುರೂಪದ ಭೂಭಾಗದಲ್ಲಿ ಅಂತಿಮ ಹಂತದಲ್ಲಿ ನಡೆದ ದೇಶೀಯ ಸಂಸ್ಥಾನಗಳ ವಿಲೀನವು ಮಹಾನ್ ಸಾಧನೆ. ಭಾರತದ ಸಂವಿಧಾನ ಸಭೆಯನ್ನು ರೂಪಿಸಿದ ಎ.ವಿ. ಅಲೆಕ್ಸಾಂಡರ್, ಪೆಥಿಕ್ ಲಾರೆನ್ಸ್, ಕ್ರಿಪ್ಸ್‌ರನ್ನೊಳಗೊಂಡ ಕ್ಯಾಬಿನೆಟ್ ನಿಯೋಗದ ಯೋಜನೆಯ ಮೇರೆಗೆ ವಿಲೀನಗೊಂಡ ರಾಜರು, ಒಳಾಡ ಳಿತಕ್ಕಾಗಿ ಕಾಶ್ಮೀರದ ಮಾದರಿಯಲ್ಲಿ ತಮ್ಮದೇ ಪ್ರತ್ಯೇಕ ಸಂವಿಧಾನ ಸಭೆಯನ್ನು ರೂಪಿಸಲು ಅವಕಾಶವಿತ್ತು. ಆದರೆ ಮೈಸೂರು, ತಿರುವಾಂಕೂರು, ಸೌರಾಷ್ಟ್ರವನ್ನು ಹೊರತುಪಡಿಸಿ ಯಾವ ರಾಜರೂ ತಮ್ಮದೇ ಸಂವಿಧಾನ ಸಭೆಯನ್ನು ರಚಿಸಲಿಲ್ಲ.‌ ನಂತರ ಇವರ ಮನವೊಲಿಸಿ ಒಂದೇ ಸಂವಿಧಾನದ ಅಡಿ ಎಲ್ಲ ಸಂಸ್ಥಾನಗಳನ್ನೂ (ಕಾಶ್ಮೀರದ ಹೊರತಾಗಿ) ಒಳಗೊಳಿಸಲಾಯಿತು.‌ ಬಹುಶಃ 1798ರಲ್ಲಿ ಸಹಾಯಕ ಸೈನ್ಯ ಪದ್ಧತಿಯು ಜಾರಿಗೆ ಬಂದು ದೇಶೀಯ ರಾಜರ ಸೈನಿಕ ಶಕ್ತಿ ದುರ್ಬಲವಾಗದೆ ಇದ್ದರೆ ಈ ವಿಲೀನ ಕೂಡ ಸಾಧ್ಯವಿರಲಿಲ್ಲ.‌

ಹೀಗೆ ವಿಲೀನಗೊಂಡು, ಎಲ್ಲ ಬಹುತ್ವಗಳನ್ನೂ ಉಳಿಸಿಕೊಂಡು, ಒಂದು ರಾಷ್ಟ್ರೀಯತೆಯ ಆಶ್ರಯದಲ್ಲಿ ಭಾರತೀಯ ಒಕ್ಕೂಟ ರಚನೆಯಾದದ್ದು ಸ್ವಾತಂತ್ರ್ಯ ಹೋರಾಟದ ಮಹತ್ತರ ಸಾಧನೆ.‌ ಇದರ ಅರಿವನ್ನು ಇಂದಿನ ತಲೆಮಾರಿನಲ್ಲಿ ಬೆಳೆಸಲು ಅಮೃತ ಮಹೋತ್ಸವ ಕಾರಣವಾಗಬೇಕು.

ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ನೋವುಂಟು ಮಾಡಬಹುದಾದ ಕಾರ್ಯವಿಧಾನವು ಅಮೃತ ಮಹೋ ತ್ಸವದ ಸಂದರ್ಭದಲ್ಲಿ‌ ನಡೆಯುತ್ತಿದೆ. ಅದೇನೆಂದರೆ ಸ್ವಾತಂತ್ರ್ಯ ಹೋರಾಟಗಾರರನ್ನು ವಿಭಿನ್ನ ಆಲೋಚನಾ ಕ್ರಮದ ತಂಡಗಳು ಹಂಚಿಕೆ ಮಾಡಿಕೊಂಡು ತಮ್ಮ ಸ್ವಾತಂತ್ರ್ಯ ಹೋರಾಟಗಾರರು, ಎದುರಾಳಿ ಕಡೆಯ ಸ್ವಾತಂತ್ರ್ಯ ಹೋರಾಟಗಾರರು ಎಂದು ಕೆಸರೆರಚುವುದು ನಡೆದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ವಿಭಿನ್ನ ಆಲೋಚನಾ ಕ್ರಮದವರು ಇದ್ದರು. ಚಂದ್ರಶೇಖರ ಆಜಾದ್‌ರಂತಹ ಕ್ರಾಂತಿಕಾರಿಗಳು, ಬೋಸ್‌ರಂಥ ಸೈನಿಕ ಸಾಹಸಿಗಳು, ಗೋಖಲೆಯವರಂಥ ಸೌಮ್ಯವಾದಿಗಳು, ಗಾಂಧಿಯಂಥ ಅಹಿಂಸಾತ್ಮಕ ಬಂಡಾಯಗಾರರೆಲ್ಲ ಇದ್ದರು. ಆದರೆ ತಮ್ಮ ಭಿನ್ನತೆಗಳೊಂದಿಗೇ ಅವರೆಲ್ಲ ಪರಸ್ಪರ ಪೂರಕವಾಗಿ ಭಾರತೀಯ ಸಮಗ್ರತೆಯನ್ನು ರೂಪಿಸಲು ಕೆಲಸ ಮಾಡಿದ್ದರು. ಉದಾಹರಣೆಗೆ, ಕಾಂಗ್ರೆಸ್, ಮುಸ್ಲಿಂ ಲೀಗ್, ಹಿಂದೂ ಮಹಾಸಭಾದ ಆಲೋಚನಾ ಕ್ರಮಗಳು ಭಿನ್ನವೇ ಇದ್ದರೂ ಅವರ ಅಧಿವೇಶನಕ್ಕೆ ಇವರು, ಇವರ ಅಧಿವೇಶನಕ್ಕೆ ಅವರು ಹಾಜರಾಗಿ ಚರ್ಚಿಸುತ್ತಿದ್ದರು. ಏಕೆಂದರೆ, ಅಂತಿಮವಾಗಿ ಎಲ್ಲರ ಉದ್ದೇಶವೂ ಭಾರತೀಯ ಸಮಗ್ರತೆಯನ್ನು ರೂಪಿಸುವುದೇ ಆಗಿತ್ತು. ನಮ್ಮ ಎಲ್ಲ ಭಿನ್ನತೆಗಳನ್ನೂ ಉಳಿಸಿಕೊಂಡು ಪರಸ್ಪರ ಸದ್ಭಾವನೆಯಿಂದ ಸಮಗ್ರ ವಾಗಿಯೇ ಇರುವುದು ಹೇಗೆ ಎಂಬ ಸಂದೇಶವನ್ನು ತಲುಪಿಸಲು ಅಮೃತ ಮಹೋತ್ಸವವು ಒಂದು ಸಂಕೇತ ವಾಗಿ ಬಳಕೆಯಾಗಬೇಕಿದೆ.

ಬಹು ಮುಖ್ಯವಾಗಿ ಅಂಬೇಡ್ಕರ್ ಅವರು ಪ್ರಸ್ತಾಪಿಸಿದ್ದ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ವಿಚಾರಗಳ ಅಳವಡಿಸುವಿಕೆ ನಡೆಯಬೇಕು.‌ ರಾಜಕೀಯ ಸ್ವಾತಂತ್ರ್ಯದ ಹೋರಾಟದಲ್ಲೇ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಸಸಿಯನ್ನು ಕಾಣಬಹುದು.‌ ಸ್ತ್ರೀವಿಮೋಚನೆ, ಹಿಂದುಳಿದ ವರ್ಗಗಳ ಕಲ್ಯಾಣಗಳೆಲ್ಲ ಸ್ವಾತಂತ್ರ್ಯ ಹೋರಾಟದ ಸಾಮಾಜಿಕ ಸ್ವರೂಪಗಳೇ ಆಗಿದ್ದವು. ಇವೆಲ್ಲವುಗಳಿಗೂ ಆಧಾರ ಆರ್ಥಿಕ ಸ್ವಾತಂತ್ರ್ಯ.

ಇಂದಿನ ಜಾಗತಿಕ ಸನ್ನಿವೇಶ ಹೇಗಿದೆ ಎಂದರೆ ಕಂಪನಿಗಳು ಯಾವ ರಾಷ್ಟ್ರವನ್ನಾದರೂ ತಮ್ಮ ಹಿಡಿತದಲ್ಲಿರಿಸಿಕೊಳ್ಳಬಲ್ಲವು.‌ ಖಾಸಗೀಕರಣ ಮತ್ತು ಕಂಪನೀ ಕರಣಗಳೆರಡೂ ಒಂದೇ ಅಲ್ಲ. ಖಾಸಗೀಕರಣ ಆಗಬೇಕು. ಜನರು ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸುವಂತಾಗ ಬಾರದು. ತಮ್ಮನ್ನು ತಾವೇ ನಿಭಾಯಿಸಿಕೊಳ್ಳುವಷ್ಟು ಚೈತನ್ಯಶೀಲರಾಗಬೇಕು.‌ ಆದರೆ ಖಾಸಗೀಕರಣವನ್ನು ಕೆಲವೇ ಕಂಪನಿಗಳ ಕೈಗೆ ಒಪ್ಪಿಸಿದರೆ ಜನ ಪರಾವಲಂಬಿ ಗಳಾಗುತ್ತಾ ಹೋಗುತ್ತಾರೆ. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಹಣಕಾಸು ದಾಂದಲೆ ಹೇಗಿತ್ತೆಂದರೆ ಅದರ ನೌಕರರು ನಿವೃತ್ತರಾಗಿ ಬ್ರಿಟನ್ನಿಗೆ ಹಿಂದಿರುಗಿದಾಗ, ಅವರು ತಮ್ಮಲ್ಲಿನ ಹಣದಿಂದ ಎಲ್ಲಿ ಬ್ರಿಟಿಷ್ ಸರ್ಕಾರ ವನ್ನೇ ಬುಡಮೇಲು ಮಾಡುವರೋ ಎಂದು ಬ್ರಿಟನ್ನಿನ ಜನ ಭಯಪಡುತ್ತಿದ್ದರು! ಆ್ಯಡಂ ಸ್ಮಿತ್ ಎಂಬ ಸ್ಕಾಟಿಶ್ ಅರ್ಥಶಾಸ್ತ್ರಜ್ಞ ಈಸ್ಟ್ ಇಂಡಿಯಾ ಕಂಪನಿಯನ್ನು ‘ಭಾರತದ ವಿಧ್ವಂಸಕರು’ ಎಂದು ಕರೆದರು.

ಅರವಿಂದ ಚೊಕ್ಕಾಡಿ
ಅರವಿಂದ ಚೊಕ್ಕಾಡಿ

ಇಂದು ಭಾರತವನ್ನು ಆವರಿಸಿಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ನಿಯಂತ್ರಣದಲ್ಲಿಡುವ ಕೆಲವು ಕಾಯ್ದೆಗಳಾದರೂ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅವಶ್ಯಕವಿದೆ.‌ ಅದೇ ಸಮಯಕ್ಕೆ ಜನರು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಸಾಧಿಸುವ ಹೊಸ ಯೋಜನೆಗಳೂ ಬೇಕು.‌ ಉತ್ಪಾದನಾ ವಲಯದಲ್ಲಿ, ಮಾರುಕಟ್ಟೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳು ಬೇಕು.

ಸ್ವಾತಂತ್ರ್ಯ ಹೋರಾಟದಲ್ಲಿದ್ದ ನೈತಿಕತೆಯನ್ನು ಬೆಳೆಸಿಕೊಳ್ಳುವುದು ಅಮೃತ ಮಹೋತ್ಸವದ ನಿಜವಾದ ಆಚರಣೆ. ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯು ನಮ್ಮ ವರ್ತನೆಯನ್ನು ಸಕಾರಾತ್ಮಕವಾಗಿ ಪರಿವರ್ತಿಸಿದಾಗ ಸ್ವಾತಂತ್ರ್ಯ ಹೋರಾಟಗಾರರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT