ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ,ಜಿ ಮುರಳಿಧರನ್ ಅವರ ವಿಶ್ಲೇಷಣೆ: ಜಿನೀವಾದಲ್ಲಿ ಭಾರತಕ್ಕೆ ದಕ್ಕಿದ್ದೇನು?

ಮತ್ತೆ ಚುರುಕಾದಂತಿರುವ ಡಬ್ಲ್ಯುಟಿಒ l ಪ್ರಸ್ತಾವ ಮತ್ತು ಫಲಶ್ರುತಿ
Last Updated 28 ಜೂನ್ 2022, 19:35 IST
ಅಕ್ಷರ ಗಾತ್ರ

ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) 12ನೇ ‘ಸಚಿವರ ಸಮಾವೇಶ’ ಜಿನೀವಾದಲ್ಲಿ ಈ ತಿಂಗಳ 12ರಿಂದ 15ರವರೆಗೆ ನಡೆಯಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಸಮಾವೇಶ ಮಹತ್ವದ್ದಾಗಿದೆ. ಕಾರಣ, ನಿರ್ಧಾರ ಕೈಗೊಳ್ಳುವ ಅಧಿಕಾರ ಇದಕ್ಕೆ ಇದೆ.

ವಿಶ್ವದ 164 ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವ ವ್ಯಾಪಾರ ಸಂಘಟನೆಯ ಸಮಾವೇಶದಲ್ಲಿ ವಿವಿಧ ರಾಷ್ಟ್ರಗಳ ಸಂಬಂಧಿಸಿದ ಖಾತೆಯ ಸಚಿವರು ಭಾಗವಹಿಸುತ್ತಾರೆ. ಇತರ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾ ಸಂಸ್ಥೆಯ ಮುಖ್ಯಸ್ಥರಿಗೆ ನೀಡಲಾಗಿರುತ್ತದೆ. ಆದರೆ ಡಬ್ಲ್ಯುಟಿಒದಲ್ಲಿ ರಾಷ್ಟ್ರಗಳ ಸಚಿವರೇ ಭಾಗವಹಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಆದಕಾರಣ ಡಬ್ಲ್ಯುಟಿಒ ಸಭೆಗಳು ಹೆಚ್ಚು ಮಹತ್ವದ್ದಾಗಿವೆ.

ವಿಶ್ವ ವ್ಯಾಪಾರ ಸಂಘಟನೆಯು ಹೆಸರೇ ಹೇಳುವಂತೆ ವ್ಯಾಪಾರವನ್ನು ಆಧರಿಸಿದ್ದು. ಅಂದಮೇಲೆ ಗಳಿಸುವುದು, ಕಳೆದುಕೊಳ್ಳುವುದು ಇರುತ್ತದೆ. ಭಾರತ ಗಳಿಸಿದ್ದೇನು ಎಂಬುದನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.
ಜಿನೀವಾದಲ್ಲಿ ನಡೆದ ಸಮಾವೇಶದಿಂದ ಭಾರತಕ್ಕೆ ಆಗಬಹುದಾದ ಪ್ರಯೋಜನ ಮತ್ತು ನಷ್ಟದ ಬಗ್ಗೆ ಗಮನಹರಿಸಬೇಕಿದೆ. ಕಳೆದ ಏಳು ವರ್ಷಗಳಲ್ಲಿ, ಮುಖ್ಯವಾಗಿ ಕೋವಿಡ್ ಹಿನ್ನೆಲೆಯಲ್ಲಿ ಡಬ್ಲ್ಯುಟಿಒ ಔಚಿತ್ಯದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಸಂಘಟನೆಯಿಂದ ಯಾವುದೇ ಪ್ರಯೋಜನ ಅಥವಾ ಸಹಾಯ ಆಗುತ್ತಿಲ್ಲ ಎಂಬ ಕೂಗು ಕೇಳಿಬಂದಿತ್ತು. ಆದರೆ ಇತ್ತೀಚಿನ ಸಭೆಯ ನಂತರ ಡಬ್ಲ್ಯುಟಿಒ ಮತ್ತೆ ಚುರುಕಾಗಿ ಕೆಲಸ ಮಾಡುವ ಸೂಚನೆಗಳು ಕಂಡುಬರುತ್ತಿವೆ.

ಡಬ್ಲ್ಯುಟಿಒ ಮುಂದೆ ಭಾರತ ಮೂರು ಪ್ರಸ್ತಾವಗಳನ್ನು ಇರಿಸಿತ್ತು. ಮೊದಲನೆಯದು, ಕೋವಿಡ್ ಚಿಕಿತ್ಸೆ ಮತ್ತು ಆ ರೀತಿಯ ಸೋಂಕನ್ನು ತಡೆಗಟ್ಟಲು ಅಗತ್ಯವಾದ ಲಸಿಕೆ, ಔಷಧಗಳ ತಯಾರಿಕೆ ಮತ್ತು ವಿತರಣೆ ಕುರಿತಾದುದು. ಎರಡನೆಯದು, ಆಹಾರ ಸುಭದ್ರತೆ ವಿಷಯಕ್ಕೆ ಸಂಬಂಧಿಸಿದ್ದು. ಮೂರನೆಯದು, ಮತ್ಸ್ಯೋದ್ಯಮಕ್ಕೆ ಪೂರಕವಾದ ಕ್ರಮಗಳು. ಈ ಮೂರೂ ವಿಷಯಗಳಲ್ಲಿ ಭಾರತವು ಸಂಪೂರ್ಣ ಪ್ರಯೋಜನ ಪಡೆದಿದೆ ಎಂದು ಹೇಳಲಾಗದಿದ್ದರೂ ಒಂದಿಷ್ಟು ದಕ್ಕಿಸಿಕೊಂಡಿರುವುದನ್ನು ಅಲಕ್ಷಿಸುವಂತಿಲ್ಲ.

ಭಾರತ ಮತ್ತು ದಕ್ಷಿಣ ಆಫ್ರಿಕಾ 2020ರ ಅಕ್ಟೋಬರ್‌ನಲ್ಲಿ ಒಂದು ಪ್ರಸ್ತಾವವನ್ನು ಸಲ್ಲಿಸಿದ್ದವು. ಕೋವಿಡ್ ಲಸಿಕೆಯ ಉತ್ಪಾದನೆ ಮತ್ತು ಹಂಚುವಿಕೆಯಲ್ಲಿ ಆಗಿರುವ ಅಸಮತೋಲನವನ್ನು ಸರಿಪಡಿಸುವ ಅಗತ್ಯದ ಬಗ್ಗೆ ಸೂಚಿಸಿದ್ದವು. ಬೌದ್ಧಿಕ ಆಸ್ತಿ ಹಕ್ಕು ನಿಯಮವನ್ನು ಸಡಿಲ ಗೊಳಿಸಿದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸುಲಭ ಬೆಲೆಯಲ್ಲಿ ಲಸಿಕೆ ಮತ್ತು ಇತರ ಔಷಧಗಳನ್ನು ಬಡಜನರಿಗೆ ಹಂಚಲು ಅನುಕೂಲವಾಗುತ್ತದೆ ಎಂದು ಭಾರತ ಹೇಳಿತ್ತು. ಲಸಿಕೆಯ ಉತ್ಪಾದನೆಗೆ ಉತ್ತೇಜನ, ಔಷಧ ಆಮದು ಮತ್ತು ಸರಬರಾಜು ಮಾಡಲು ಈಗಿರುವ ತೊಡಕುಗಳ ನಿವಾರಣೆ, ಪೇಟೆಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕಿನ ನಿಯಮ ಸಡಿಲಿಕೆಯು ಪ್ರಸ್ತಾವದಲ್ಲಿ ಸೇರಿದ್ದವು. ಇದಕ್ಕೆ 63 ರಾಷ್ಟ್ರಗಳು ಸಮ್ಮತಿ ಸೂಚಿಸಿದ್ದವು ಹಾಗೂ ಮೂರನೇ ಎರಡರಷ್ಟು ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿದ್ದವು. ಆದರೆ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರವು ಭಾರತದ ಪ್ರಸ್ತಾವಕ್ಕೆ ಪೂರಕವಾಗಿಲ್ಲ.

ಬೌದ್ಧಿಕ ಆಸ್ತಿ ಹಕ್ಕು ನಿಯಮ ಸಡಿಲಿಕೆಗೆ ಬದಲಾಗಿ ರಾಷ್ಟ್ರಗಳು ತುರ್ತು ಸಂದರ್ಭಗಳಲ್ಲಿ ಇತರ ಕಂಪನಿಗಳಿಗೆ ಕಡ್ಡಾಯ ಪರವಾನಗಿ ನೀಡಬಹುದೆಂಬ ನಿರ್ಧಾರಕ್ಕೆ ಸಭೆ ಬಂದಿದೆ. ಇದರ ಫಲವಾಗಿ, ಲಸಿಕೆ ಉತ್ಪಾದನೆಗೆ ಪೇಟೆಂಟ್ ಹೊಂದಿರುವವರ ಅಪ್ಪಣೆ ಇಲ್ಲದೆ ಇತರ ಕಂಪನಿಗಳು ಲಸಿಕೆ ಉತ್ಪಾದನೆ ಮಾಡಬಹುದು. ಆದರೆ ಈ ನಿಯಮ ಕೋವಿಡ್ ಶುಶ್ರೂಷೆಗೆ ಇರುವ ಔಷಧಗಳಿಗೆ ಅನ್ವಯಿಸುವುದಿಲ್ಲ. ಭಾರತ ಈ ನಿರ್ಧಾರವನ್ನು ಒಪ್ಪಿಕೊಂಡಿರುವುದು ಆಶ್ಚರ್ಯದ ಸಂಗತಿ. ಏಕೆಂದರೆ, 2001ರಲ್ಲಿ ದೋಹಾದಲ್ಲಿ ನಡೆದ ಸಭೆಯಲ್ಲಿ ಕಡ್ಡಾಯ ಪರವಾನಗಿ ನೀಡಬಹುದೆಂದು ಸದಸ್ಯ ರಾಷ್ಟ್ರಗಳು ಅದಾಗಲೇ ಒಪ್ಪಿಗೆ ಸೂಚಿಸಿದ್ದವು. ಅಲ್ಲದೆ ಭಾರತದ ಪೇಟೆಂಟ್‌ ಅಧಿನಿಯಮದಲ್ಲಿ ಕಡ್ಡಾಯ ಪರವಾನಗಿ ನೀಡುವುದಕ್ಕೆ ಸಂಬಂಧಿಸಿದ ಅಂಶ ಈಗಾಗಲೇ ಸೇರಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ ವಿಷಯದಲ್ಲಿ ಭಾರತ ಬಹಳಷ್ಟು ನಿರೀಕ್ಷೆಯನ್ನು ಹೊಂದಿತ್ತು. ಡಬ್ಲ್ಯುಟಿಒ
ದಲ್ಲಿ ಕೃಷಿಗೆ ಪ್ರತ್ಯೇಕ ಒಡಂಬಡಿಕೆ ಇದೆ. ಅದರ ಪ್ರಕಾರ, ರಾಷ್ಟ್ರಗಳು ಆಹಾರಧಾನ್ಯಗಳಿಗೆ ನೀಡುವ ಸಬ್ಸಿಡಿಗೆ ಮಿತಿ ನಿಗದಿಪಡಿಸಲಾಗಿದೆ. ಭಾರತದ ಆಹಾರ ಸಬ್ಸಿಡಿ ಈ ಮಿತಿಯನ್ನು ಮೀರಿದೆ ಎಂಬುದು ಕೆಲವು ಸದಸ್ಯ ರಾಷ್ಟ್ರಗಳ ಅಭಿಪ್ರಾಯ. ಭಾರತ ಈಗಾಗಲೇ ಡಬ್ಲ್ಯುಟಿಒದಲ್ಲಿರುವ ‘ಶಾಂತಿ ನಿಯಮ’ದ ಅಡಿಯಲ್ಲಿ ರಕ್ಷಣೆ ಪಡೆದಿದೆ. ಭಾರತವು ವಿಶ್ವ ಆಹಾರ ಯೋಜನೆಗೆ ಕೊಡುಗೆ ನೀಡುವ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಆಹಾರಧಾನ್ಯಗಳ ರಫ್ತಿಗೆ ಭಾರತ ಯಾವುದೇ ತಡೆ ಒಡ್ಡಿಲ್ಲ. ಒಂದು ವೇಳೆ ಷರತ್ತುಗಳನ್ನು ವಿಧಿಸಿದಲ್ಲಿ ಆಹಾರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತದೆ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಸದಸ್ಯ ರಾಷ್ಟ್ರಗಳು ಕೆಲವು ಷರತ್ತುಗಳಿಗೆ ಒಳಪಟ್ಟು ಭಾರತದ ನಿಲುವಿಗೆ ಒಪ್ಪಿಗೆ ಸೂಚಿಸಿವೆ.

ಮತ್ಸ್ಯೋದ್ಯಮಕ್ಕೆ ನೀಡುವ ಸಬ್ಸಿಡಿ ವಿಚಾರದಲ್ಲಿ ಮೂರು ಅಂಶಗಳು ಚರ್ಚೆಗೆ ಒಳಪಟ್ಟವು. ಕಾನೂನುಬಾಹಿರ– ನಿಯಂತ್ರಣವಿಲ್ಲದ ಮೀನುಗಾರಿಕೆ, ಅಧಿಕ ಮೀನುಗಾರಿಕೆ ಹಾಗೂ ಮತ್ಸ್ಯೋದ್ಯಮದ ಮೂಲಸೌಕರ್ಯ ಅಭಿವೃದ್ಧಿಯಿಂದ ಉಂಟಾಗುವ ದುಷ್ಪರಿಣಾಮಗಳ ಬಗೆಗೆ ಚರ್ಚಿಸಲಾಯಿತು. ಚೀನಾ, ಐರೋಪ್ಯ ಒಕ್ಕೂಟ, ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ರಾಷ್ಟ್ರಗಳು ವಿಶ್ವ ಮತ್ಸ್ಯೋದ್ಯಮದ ಒಟ್ಟು ಸಬ್ಸಿಡಿಯಲ್ಲಿ ಶೇಕಡ 60ರಷ್ಟು ಪಾಲು ಹೊಂದಿವೆ. ಈ ದೇಶಗಳು ತಮ್ಮ ಗಡಿ ಭಾಗದಿಂದ ಸಾವಿರಾರು ಮೈಲಿ ದೂರದವರೆಗೆ ಮೀನುಗಾರಿಕೆ ಮಾಡುತ್ತವೆ. ಅದಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸಿಕೊಂಡಿವೆ.

ಅಭಿವೃದ್ಧಿ ಹೊಂದಿರುವ ದೇಶಗಳು ಅಧಿಕ ಮೀನುಗಾರಿಕೆ ಮಾಡುತ್ತಿರುವುದನ್ನು ಕೆಲವು ರಾಷ್ಟ್ರಗಳು ಪ್ರಶ್ನಿಸುತ್ತಿವೆ. ಅಧಿಕ ಮೀನುಗಾರಿಕೆ ಅಂದರೆ, ಹೊಸ ಮೀನುಗಳು ಹುಟ್ಟುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆ ಮಾಡುವುದು. ಇದರಿಂದ ಮೀನುಗಳ ಸಂಖ್ಯೆ ಕಡಿಮೆಯಾಗಿ ಬಡವರು ಹಾಗೂ ಮೀನನ್ನೇ ಆಹಾರವಾಗಿಸಿಕೊಂಡಿರುವ ಸಮುದಾಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮೀನುಗಾರಿಕೆ ಒಂದು ಜೀವನೋಪಾಯವಾಗಿದೆ.ಮೀನುಗಾರಿಕೆಗೆ ಮೂಲಸೌಕರ್ಯ ಒದಗಿಸುವ ವಿಷಯದಲ್ಲಿ ಭಾರತವು ಕನಿಷ್ಠ 25 ವರ್ಷ ಕಾಲಾವಕಾಶ ಬೇಕೆಂದು, ಅದುವರೆಗೆ ತನ್ನ ನಿಲುವನ್ನು ಬದಲಿಸುವುದಿಲ್ಲವೆಂದು ಹೇಳಿದೆ. ಮತ್ಸ್ಯೋದ್ಯಮದ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ಮುಂದಿನ ನಾಲ್ಕು ವರ್ಷಗಳಲ್ಲಿ ಅಂತಿಮ ಹಂತ ತಲುಪುವ ಸಾಧ್ಯತೆ ಇದೆ. ಸದ್ಯಕ್ಕೆ ಭಾರತ ಪ್ರತ್ಯೇಕ ಆರ್ಥಿಕ ವಲಯದಲ್ಲಿ ಮೀನುಗಾರಿಕೆಗೆ ಎರಡು ವರ್ಷಗಳ ಕಾಲ ಸಬ್ಸಿಡಿ ನೀಡಬಹುದಾಗಿದೆ. ಆದರೆ ಇದರಲ್ಲಿ ಯಾವ ವಿಶೇಷವೂ ಇಲ್ಲ. ಕಾರಣ, ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಅಡಿಯಲ್ಲಿ ಭಾರತಕ್ಕೆ ಈ ಅಧಿಕಾರ ಇದ್ದೇ ಇದೆ.

ಮೇಲಿನ ಮೂರು ವಿಷಯಗಳಲ್ಲದೆ ಇತರ ಮೂರು ವಿಷಯಗಳು ಸಮಾವೇಶದಲ್ಲಿ ಚರ್ಚೆಗೆ ಒಳಪಟ್ಟಿದ್ದರೂ
ಇತ್ಯರ್ಥವಾಗಿಲ್ಲ. ಡಬ್ಲ್ಯುಟಿಒದಲ್ಲಿ ವ್ಯಾಜ್ಯ ಇತ್ಯರ್ಥಕ್ಕೆ ಪ್ರತ್ಯೇಕ ವ್ಯವಸ್ಥೆ ಹಾಗೂ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ವಿಷಯಗಳು ಚರ್ಚೆಗೆ ಒಳಪಟ್ಟರೂ ಈ ಎರಡೂ ವಿಷಯಗಳನ್ನು ಮುಂದೂಡಲಾಗಿದೆ. ಇ– ವಾಣಿಜ್ಯ ವಹಿವಾಟಿನ ಮೇಲೆ ಸುಂಕ ವಿಧಿಸಬೇಕೆಂಬ ವಾದ ಕೇಳಿಬಂದಿತ್ತು. ಆದರೆ ಈ ವಿಷಯವನ್ನು ಎರಡು ವರ್ಷಗಳ ಕಾಲ ಮುಂದೂಡಲಾಗಿದ್ದು, ಸದ್ಯಕ್ಕೆ ಯಾವುದೇ ಸುಂಕ ವಿಧಿಸುವುದಕ್ಕೆ ಅವಕಾಶವಿಲ್ಲ.

ಡಬ್ಲ್ಯುಟಿಒ ವ್ಯಾಪ್ತಿ ವ್ಯಾಪಾರಕ್ಕೆ ಸೀಮಿತವಾಗಿರಬೇಕು, ಇತರ ವಿಷಯಗಳಿಗೆ ಅವಕಾಶ ಇರಬಾರದೆಂಬ ವಾದ ಮೊದಲಿನಿಂದಲೂ ಕೇಳಿಬರುತ್ತಿದೆ. ಆದರೆ ಕ್ರಮೇಣ ಇದರ ವ್ಯಾಪ್ತಿಗೆ ಕೃಷಿ, ಮೀನುಗಾರಿಕೆಯಂತಹ ವಿಷಯಗಳು ಸೇರಿಕೊಂಡಿವೆ. ಸಂಘಟನೆಯುಈಗ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳತ್ತ ವಾಲುತ್ತಿದೆ, ವ್ಯಾಪಾರೇತರ ವಿಷಯಗಳನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಳ್ಳುತ್ತಿದೆ. ಇದರ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT