ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಇಸ್ಕೊಂಡೋನು ಈರಭದ್ರನೇ?

ಬ್ಯಾಂಕು– ಸಾಲಗಾರರ ನಡುವೆ ಸರ್ಕಾರ ಮತ್ತು ನ್ಯಾಯಾಂಗದ ಹಸ್ತಕ್ಷೇಪವಾದಾಗ...
Last Updated 23 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ಕಾಲದ ಆರ್ಥಿಕ ಸಂಕಷ್ಟವನ್ನು ಕಂಡು, ಸಾಲ ಮರುಪಾವತಿಯ ಕಂತುಗಳಿಗೆ ಆರು ತಿಂಗಳ ರಜಾ ಪಡೆಯಬಹುದೆಂದು ಘೋಷಿಸಿದ್ದ ಆರ್‌ಬಿಐ ನೀತಿ ಅನೇಕ ತಿರುವುಗಳನ್ನು ಪಡೆದಿದೆ. ರಜಾ ಸವಲತ್ತನ್ನು ಬಳಸಿಕೊಂಡ ಗ್ರಾಹಕರ ಶಿಲ್ಕಿನ ಮೇಲೆ ಬಡ್ಡಿ ಲೆಕ್ಕ ಹಾಕಬೇಕೇ ಅಥವಾ ತಿಂಗಳ ಕಂತಿನ ಮೇಲೆ ಮುಂದಿನ ತಿಂಗಳು ಮತ್ತೆ ಬಡ್ಡಿ ಹೇರಿ ಚಕ್ರಬಡ್ಡಿ ಗುಣಿಸಬೇಕೇ ಎನ್ನುವ ಪ್ರಶ್ನೆ ಸುಪ್ರೀಂ ಕೋರ್ಟ್ ತಲುಪಿದೆ.

ಚಕ್ರಬಡ್ಡಿಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿ ದೀಪಾವಳಿಗೆ ಶುಭ ಸುದ್ದಿಯನ್ನು ನೀಡುವುದೂ ಸರ್ಕಾರದ ಕೈಯಲ್ಲಿದೆ ಎಂದು ನ್ಯಾಯಾಲಯ ಟಿಪ್ಪಣಿ ಮಾಡಿದೆ. ನ್ಯಾಯಾಲಯದ ಈ ನಿಲುವು ಅದು ಕಾರ್ಯಾಂಗದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿರುವುದರ ಉದಾಹರಣೆಯೂ ಆಗಿದೆ.

ಸಾಲ ಎನ್ನುವುದು ನೀಡುವವರ ಮತ್ತು ಪಡೆಯುವವರ ನಡುವಿನ ಒಂದು ವ್ಯಾಪಾರಿ ಸಂಬಂಧ. ಸಾಲವನ್ನು ಕೊಡುವಾಗ, ಅದನ್ನು ಬಳಸಿಕೊಳ್ಳುವ ಉದ್ದೇಶದ ಸಾಫಲ್ಯ ಮತ್ತು ಅಡ ಇಡುವ ಆಸ್ತಿಯ ಮೌಲ್ಯವನ್ನು ಪರಿಗಣಿಸಲಾಗುತ್ತದೆ. ಪ್ರತೀ ಸಾಲವನ್ನೂ ಒಂದು ವಿಶಿಷ್ಟ ಒಪ್ಪಂದದ ಮತ್ತು ಕರಾರಿನ ಅಡಿಯಲ್ಲಿ ನೀಡಲಾಗುತ್ತದೆ. ಇದರ ಅನ್ವಯ, ಅನಪೇಕ್ಷಿತ ಘಟನೆಗಳು ಸಂಭವಿಸಿದಾಗ ಯಾರ ಜವಾಬ್ದಾರಿ ಎಷ್ಟು ಎನ್ನುವ ಕಲಮುಗಳೂ ಇರುತ್ತವೆ.

ಕೊರೊನಾರಹಿತ ಸಾಮಾನ್ಯ ಪರಿಸ್ಥಿತಿಯಲ್ಲಿಯೂ ಸಾಲ ಪಡೆದವರು ಮರುಪಾವತಿಸಲು ಸಾಧ್ಯವಾಗದ ಸ್ಥಿತಿಗೆ ತಲುಪುವ ಸಾಧ್ಯತೆಯಿದ್ದೇ ಇದೆ. ಹೀಗೆ ಸಾಲ ಸುಸ್ತಿಯಾದಾಗ ಅದು ಎರಡು ಪಥಗಳಲ್ಲಿ ತನ್ನ ಪಯಣವನ್ನು ಕೈಗೊಳ್ಳುತ್ತದೆ. ಮೊದಲನೆಯದಾಗಿ, ಬ್ಯಾಂಕು ಆ ಸಾಲದ ಮೇಲೆ ಗುರುತಿಸಲ್ಪಡುತ್ತಿರುವ ಬಡ್ಡಿಯ ಲೆಕ್ಕಕಟ್ಟುವುದನ್ನು ನಿಲ್ಲಿಸುತ್ತದೆ ಹಾಗೂ ಹಿಂದೆ ಲೆಕ್ಕಕಟ್ಟಿ ಆದಾಯದಲ್ಲಿ ಸೇರಿಸಿದ್ದ (ವಸೂಲಾಗದೇ ಉಳಿದ) ಮೊಬಲಗನ್ನು ಲೆಕ್ಕದಿಂದ ಅಳಿಸುತ್ತದೆ. ಅಸಲೂ ವಾಪಸಾಗುವುದರ ಬಗ್ಗೆ ಅನುಮಾನವಿರುವುದರಿಂದ ಆ ಮೊಬಲಗನ್ನೂ ಖರ್ಚಿಗೆ ಹಾಕಿ ಸುಸ್ತಿಯ ಸಂಭಾವ್ಯ ನಿಕ್ಷೇಪ ನಿಧಿಯಾಗಿ ಕಾಪಿಡಲಾಗುತ್ತದೆ. ಸಾಲ ವಸೂಲಾತಿ ಸಾಧ್ಯವಿಲ್ಲವೆಂದು ಖಚಿತವಾಗಿ ತಿಳಿದಾಗ ಅದನ್ನು ಈ ನಿಕ್ಷೇಪ ನಿಧಿಯಿಂದಲೂ ಆಸ್ತಿಯ ಪಟ್ಟಿಯಿಂದಲೂ ಅರ್ಥಾತ್ ಲೆಕ್ಕ ಪುಸ್ತಕಗಳಿಂದ ತೆಗೆದೊಗೆಯುವುದು ಪದ್ಧತಿ. ಪರ್ಯಾಯವಾಗಿ ಸಾಲ ವಸೂಲಾತಿಗೆ ಕಾನೂನಿನ ಕ್ರಮಗಳನ್ನೂ ಬ್ಯಾಂಕುಗಳು ಕೈಗೊಳ್ಳುತ್ತವೆ.

ಈ ಎರಡು ಪ್ರಕ್ರಿಯೆಗಳು ನಡೆಯುತ್ತಿರುವಾಗ, ಸಮಾನಾಂತರವಾಗಿ ಸಾಲ ಮಾಹಿತಿ ಸಂಸ್ಥೆಗಳಿಗೆ (ಕ್ರೆಡಿಟ್ ಬ್ಯೂರೊ) ಈ ಇಂಥ ಗ್ರಾಹಕರ ಸಾಲ ಸುಸ್ತಿಯಾಗಿರುವ ಬಗೆಗೆ ಸೂಚನೆ ನೀಡಲಾಗುತ್ತದೆ. ಆ ಸೂಚನೆಯು ಕಾಯಂ ಆಗಿ ಸಾಲ ಮಾಹಿತಿ ಸಂಸ್ಥೆಯ ಕಡತಗಳಲ್ಲಿ ಉಳಿಯುತ್ತದೆ. ಮುಂದೆ ಯಾರಾದರೂ ಸಾಲ ನೀಡುವಾಗ ಹಿಂದಿನ ಸಾಲ ಸುಸ್ತಿಯಾದ ವಿಷಯವನ್ನು ಈ ಸಂಸ್ಥೆ ಒದಗಿಸಿಕೊಡುತ್ತದೆ. ಈ ಪ್ರಕ್ರಿಯೆಯ ನಡುವೆ ಸಾಲ ಕೊಟ್ಟ ಅಥವಾ ಪಡೆದ ಇಬ್ಬರಲ್ಲೊಬ್ಬರು ತಮ್ಮ ಕರಾರಿನ ತಕರಾರನ್ನು ನ್ಯಾಯಾಲಯಕ್ಕೆ ಒಯ್ದಾಗ ಮಾತ್ರ ನ್ಯಾಯಾಲಯದ ಪಾತ್ರ ಬರುತ್ತದೆ. ಸಾಮಾನ್ಯ ಪರಿಸ್ಥಿತಿ ಯಲ್ಲಿ ಸರ್ಕಾರವಾಗಲೀ ನ್ಯಾಯಾಲಯವಾಗಲೀ ಈ ಪ್ರಕ್ರಿಯೆಯಲ್ಲಿ ತಾವಾಗಿಯೇ ಹಸ್ತಕ್ಷೇಪ ಮಾಡಬಾರದು. ಆದರೆ ಇಂದಿನ ಮಹಾಸಾಂಕ್ರಾಮಿಕದ ಪರಿಸ್ಥಿತಿ ಸಾಮಾನ್ಯದ್ದೇನೂ ಅಲ್ಲ.

ಸಾಲ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಕವಾದ ಸಂಕಷ್ಟದಲ್ಲಿ ಇರುವ ಈ ಪರಿಸ್ಥಿತಿಯಲ್ಲಿ ನೀತಿ ನಿರೂಪಣೆಯ ಭಾಗವಾಗಿ ಸರ್ಕಾರ ಏನು ಮಾಡಲು ಸಾಧ್ಯ? ಸಾರ್ವಜನಿಕ ನೀತಿಯ ದೃಷ್ಟಿಯಿಂದ ಮೂರು ಸಾಧ್ಯತೆಗಳನ್ನು ಪಟ್ಟಿ ಮಾಡಬಹುದು: ಇದು, ವಿಶೇಷ ಸಂದರ್ಭದ ಆಪತ್ತಿನ ಪರಿಸ್ಥಿತಿಯಲ್ಲಾದ ಸುಸ್ತಿಯೆಂದು ದಾಖಲಿಸಲು ಸಾಲ ಮಾಹಿತಿ ಸಂಸ್ಧೆಗಳಿಗೆ ಸರ್ಕಾರ ಸೂಚಿಸಬಹುದು. ಹೀಗಾಗಿ ಈ ಸುಸ್ತಿಯ ಮಾಹಿತಿಯನ್ನು ಮುಂದಿನ ಸಾಲ ಕೊಡುವಾಗ ಉಪೇಕ್ಷಿಸಬಹುದು. ಬ್ಯಾಂಕುಗಳು ಸಾಲ ಮರುಪಾವತಿಯ ಕರಾರುಗಳನ್ನು ಸಡಿಲಗೊಳಿಸಿ, ಆಗಬಹುದಾದ ನಷ್ಟವನ್ನು ತಕ್ಷಣ ಲೆಕ್ಕಪತ್ರದಲ್ಲಿ ಗುರುತಿಸಬೇಕೆಂಬ ನಿಯಮವನ್ನು ಸಡಿಲಿಸುವುದಲ್ಲದೇ ಮರುಪಾವತಿಯ ಕಾಲಮಾನವನ್ನು ವಿಸ್ತರಿಸಲು ಅನುವು ಮಾಡಿಕೊಡಬಹುದು (ಇದನ್ನು ಆರ್‌ಬಿಐ ಮಾಡಿದೆ). ಬ್ಯಾಂಕುಗಳು ದಿವಾಳಿಯಾಗದಂತೆ ಆರ್ಥಿಕ ಸಹಾಯವನ್ನು ಸುಲಭ ಸಾಲ ಅಥವಾ ಮೂಲಧನದ ರೂಪದಲ್ಲಿ ಸರ್ಕಾರ ಆ ಸಂಸ್ಥೆಗಳಿಗೆ ನೀಡಬಹುದು.

ಹೀಗೆ ಸಂಸ್ಥೆಗಳಿಗೆ ಪರೋಕ್ಷವಾಗಿ ಧನಸಹಾಯ ಮಾಡಿ ಗ್ರಾಹಕರೊಂದಿಗಿನ ಕರಾರುಗಳನ್ನು ಬದಲಾಯಿಸುವ ಸ್ವಾತಂತ್ರ್ಯವನ್ನು ಬ್ಯಾಂಕುಗಳಿಗೇ ಬಿಟ್ಟುಕೊಡಬಹುದು. ಈ ಮೂರೂ ಅಂಶಗಳು ಸಾಲ ಕೊಟ್ಟವರು ಮತ್ತು ಪಡೆದವರ ನಡುವಿನ ವ್ಯವಹಾರದ ಕರಾರುಗಳನ್ನು ಗೌರವಿಸುತ್ತಲೇ– ಅಸಾಮಾನ್ಯ ಪರಿಸ್ಥಿತಿಯ ನಷ್ಟ ತುಂಬುವುದಕ್ಕೆ ಒಂದು ಚೌಕಟ್ಟನ್ನು ಒದಗಿಸಿಕೊಡುತ್ತವೆ. ಆದರೆ ಸಂಸ್ಥೆ- ಗ್ರಾಹಕರ ನಡುವಿನ ಒಪ್ಪಂದವನ್ನು ಕಾನೂನು ರೀತ್ಯಾ ಎತ್ತಿಹಿಡಿಯುವುದೇ ಮೂಲ ಧರ್ಮವಾಗಿರುವ ನ್ಯಾಯಾಂಗ, ಬಡ್ಡಿಯನ್ನು ಲೆಕ್ಕಕಟ್ಟುವ ವಿಧಾನ, ಅದು ಸಾಮಾನ್ಯ ಬಡ್ಡಿಯೋ ಚಕ್ರಬಡ್ಡಿಯೋ ದೀಪಾವಳಿಗೆ ಮುನ್ನ ಸರ್ಕಾರ ತೀರ್ಮಾನ ಕೈಗೊಳ್ಳಬೇಕೋ ಎಂಬ ಪ್ರಶ್ನೆಗಳೊಂದಿಗೆ ಮಧ್ಯಪ್ರವೇಶಿಸುವುದು ವಿಲಕ್ಷಣ ಬಿಕ್ಕಟ್ಟಿಗೆ ಕಾರಣವಾಗುತ್ತದೆ.

ಇನ್ನು ಚಕ್ರಬಡ್ಡಿಯ ನೈತಿಕ ಪ್ರಶ್ನೆ. ಈ ಕಷ್ಟಕಾಲದಲ್ಲಿ ಚಕ್ರಬಡ್ಡಿ ಹೇರುವುದು ನೈತಿಕವಲ್ಲ ಎನ್ನುವುದರಲ್ಲಿ ಅನುಮಾನವಿಲ್ಲ. ಬರೀ ವ್ಯವಹಾರದ ದೃಷ್ಟಿಯಿಂದ ನೋಡಿದರೆ ಇದರಲ್ಲಿ ತಪ್ಪು ಕಾಣಿಸುವುದಿಲ್ಲ. ಬ್ಯಾಂಕುಗಳು ಠೇವಣಿಗಳಿಗೆ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಬಡ್ಡಿ ಪಾವತಿಸುವಂತೆಯೇ ಸಾಲದ ಮೇಲೆ ತಿಂಗಳಿಗೊಮ್ಮೆ ಬಡ್ಡಿ ವಸೂಲು ಮಾಡುವುದು ಸಾಮಾನ್ಯವೇ. ಆ ಹಣವನ್ನು ಇತರೆ ಸಾಲಗಳಾಗಿ ನೀಡಿ ಬಡ್ಡಿಯನ್ನು ಪಡೆಯುವ ಸಾಧ್ಯತೆ ಬ್ಯಾಂಕುಗಳಿಗಿದೆ. ಹಾಗೆ ವಸೂಲಾಗದ ಸಂದರ್ಭದಲ್ಲಿ ಅದನ್ನೂ ಸಾಲವೆಂದೇ ಪರಿಗಣಿಸಬೇಕಾದ್ದರಿಂದ ಒಟ್ಟು ಮೊಬಲಗಿನ ಮೇಲೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಹೀಗಾಗಿಯೇ ಇದು ನ್ಯಾಯಯುತವಾದ ಚಕ್ರಬಡ್ಡಿ. ಹೀಗಾಗಿ ಚಕ್ರಬಡ್ಡಿ ಎನ್ನುವುದು ಕರಾರಿನ ಭಾಗವೇ ಹೊರತು ಅನ್ಯಾಯವೂ ಅನುಚಿತವೂ ಅಲ್ಲ.

ಆದರೂ ಸರ್ಕಾರ ಅಥವಾ ಆರ್‌ಬಿಐ ಹೇರಿರುವ ಮರುಪಾವತಿಯ ರಜಾ ಕಾಲದಲ್ಲಿ ಚಕ್ರಬಡ್ಡಿ ಹೇರುವುದರ ನೈತಿಕ ಪ್ರಶ್ನೆಯಿದೆ. ಬ್ಯಾಂಕುಗಳಿಗೆ ಈ ನೀತಿಯಿಂದಾಗಿ ಉಂಟಾಗಿರುವ ನಷ್ಟವನ್ನು ತುಂಬಲು ಸರ್ಕಾರ ಕಂಕಣಬದ್ಧವಾಗಿರುವುದು ನ್ಯಾಯಬದ್ಧವೂ ಸ್ವಾಗತಾರ್ಹವೂ ಆಗಿದೆ. ಆದರೆ ದ್ವಿಪಕ್ಷೀಯ ಕರಾರಿನಲ್ಲಿ ಮೂರನೆಯವರು ಮೂಗು ತೂರಿಸುವುದರಿಂದ ಆಗುವ ಪರಿಣಾಮವನ್ನು ಪರಿಗಣಿಸದಿರುವುದೂ ಸಾಧ್ಯವಿಲ್ಲ. ಹೀಗಾದಾಗ ನಮ್ಮ ಸಾಂಸ್ಥಿಕ ಚೌಕಟ್ಟನ್ನು ಹಂತ ಹಂತವಾಗಿ ಛಿದ್ರ ಮಾಡುತ್ತೇವೆ. ಕರಾರುಗಳನ್ನು ಅಪಮೌಲ್ಯಕ್ಕೆ ಒಳಪಡಿಸುತ್ತಿದ್ದೇವೆ.

ಇಲ್ಲಿಯವರೆಗೆ ಸರ್ಕಾರವು ಸಾಲ ಮನ್ನಾ ಮತ್ತು ಸರ್ಕಾರವನ್ನು ಜೇಬಿಗಿಳಿಸಿರುವ ಪ್ರಭಾವಿ ಉದ್ಯಮಿಗಳ ಸಾಲವನ್ನು ಮಾಫಿ ಮಾಡುವ ‘ಫೋನ್ ಬ್ಯಾಂಕಿಂಗ್’ ನಿಂದಾಗಿ ಸಂಸ್ಥಾಗತ ಚೌಕಟ್ಟಿಗೆ ಧಕ್ಕೆಯುಂಟಾಗುತ್ತಿತ್ತು. ಸಾಲಮನ್ನಾ ನೈತಿಕತೆಯ ಆಧಾರದ ಮೇಲೆ ನಿಂತಿದ್ದರೆ, ಪ್ರಭಾವಿ ಉದ್ಯಮಿಗಳ ವಾದ ಅರ್ಥ
ವ್ಯವಸ್ಥೆಯ ಬೆಳವಣಿಗೆಯ ವಾದದ ಮೇಲೆ ನಿಂತಿತ್ತು. ಈಗ ಈ ಎರಡರ ನಡುವಿನ ಮಧ್ಯಮ ವರ್ಗವೂ ಬಿಕ್ಕಟ್ಟಿನ ಪರಿಸ್ಥಿತಿಯ ನೈತಿಕತೆಯನ್ನು ಉಪಯೋಗಿಸುತ್ತಿದೆ. ಇದನ್ನು ಸರ್ಕಾರ ಪರಿಗಣಿಸುವುದು ಜನತಂತ್ರದ ಸೂತ್ರಾನುಸಾರ ನೈತಿಕವಾಗಿ ಸರಿಯೇ ಆದರೂ ಸಾಂಸ್ಥಿಕ ಚೌಕಟ್ಟಿನ ಸುಸ್ಥಿರತೆಯ ದೃಷ್ಟಿಯಿಂದ ಇದನ್ನು ಹೆಚ್ಚಿನ ಖರ್ಚಿಲ್ಲದೇ ಭಿನ್ನ ರೀತಿಯಲ್ಲಿ ರೂಪಿಸಬಹುದು. ಈ ಜುಗಲ್‌ಬಂದಿಯಲ್ಲಿ ನ್ಯಾಯಾಂಗದ ಯಾವ ಪಾತ್ರವಿಲ್ಲ. ಇದರಲ್ಲಿನ ನೈತಿಕತೆಯ ವಾದವನ್ನು ಬಳಸಬೇಕಾದದ್ದು ಸರ್ಕಾರ, ನ್ಯಾಯಾಲಯವಲ್ಲ. ಆದರೆ ಸರ್ಕಾರವೂ ಪದೇಪದೇ ನೈತಿಕ ವಾದವನ್ನು ಎಳೆದುತಂದರೆ, ಅಷ್ಟೇ ವೇಗದಲ್ಲಿ ಸಾಂಸ್ಥಿಕ ಚೌಕಟ್ಟು ನಾಶವಾಗುತ್ತದೆ.

ಸರ್ಕಾರದ ಹಸ್ತಕ್ಷೇಪದಿಂದಾಗುವ ಅತಿರೇಕವನ್ನು ತಡೆಯಲು ನ್ಯಾಯಾಂಗವಿದೆ. ಆದರೆ ನ್ಯಾಯಾಂಗವೇ ದ್ವಿಪಕ್ಷೀಯ ಸಂಬಂಧದಲ್ಲಿರುವ ಕಾನೂನು, ಕರಾರುಗಳನ್ನು ಬದಿಗಿಟ್ಟು ಟಿಪ್ಪಣಿಗಳನ್ನು ಮಾಡುವುದಲ್ಲದೇ ತೀರ್ಪುಗಳನ್ನೂ ನೀಡಿದಾಗ ನಾವು ಎಚ್ಚೆತ್ತುಕೊಳ್ಳಬೇಕು. ಈ ವಿಷಯದಲ್ಲಿ ನ್ಯಾಯಾಂಗ ನಡುವೆ ಬರದಿರುವುದೇ ಸರಿಯಿತ್ತು. ಸರ್ಕಾರದ ಮತ್ತು ನ್ಯಾಯಾಂಗದ ಸದುದ್ದೇಶವೇ ಸಾಂಸ್ಥಿಕ ಚೌಕಟ್ಟೊಂದನ್ನು ದುರ್ಬಲಗೊಳಿಸುತ್ತಿರುವ ಒಂದು ಶಕ್ತ ಉದಾಹರಣೆ ಈ ಪ್ರಕರಣದಲ್ಲಿ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT