ಬುಧವಾರ, ಮೇ 18, 2022
28 °C
ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆಯಾಗಿರುವುದು ಕಳವಳಕಾರಿ

ವಿಶ್ಲೇಷಣೆ | ಶಿಕ್ಷಣ: ಭರವಸೆ ಮರೆತ ಬಜೆಟ್‌

ನಿರಂಜನಾರಾಧ್ಯ.ವಿ.ಪಿ. Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರ ಈ ತಿಂಗಳ ಒಂದರಂದು ಮಂಡಿಸಿದ 2021- 22ನೇ ಸಾಲಿನ ಬಜೆಟ್‌ ಮುಂದೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಸವಾಲುಗಳಿದ್ದವು. ಒಂದು, ಅನಿರೀಕ್ಷಿತವಾಗಿ ಕಾಣಿಸಿಕೊಂಡ ಕೋವಿಡ್‌- 19ರ ಸಂಕಷ್ಟದ ಪರಿಣಾಮದಿಂದ ದೇಶದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ಬುಡಮೇಲಾಗಿತ್ತು. ಸಾಮಾಜೀಕರಣದ ಬುನಾದಿಯಾಗಿದ್ದ ಸಾಂಪ್ರದಾಯಿಕ ತರಗತಿಕೋಣೆಯ ಕಲಿಕಾ ಪ್ರಕ್ರಿಯೆಯು ತಂತ್ರಜ್ಞಾನ ಆಧಾರಿತ ಡಿಜಿಟಲ್‌ ವೇದಿಕೆಗೆ ವರ್ಗಾಯಿಸಲ್ಪಡುವ ಮೂಲಕ ಶಿಕ್ಷಣದ ಮೂಲ ಆಶಯವನ್ನು ತಲೆಕೆಳಗಾಗಿಸಿತ್ತು. ‌

ಪೂರ್ವಯೋಜಿತವಲ್ಲದ ಮತ್ತು ಎಲ್ಲರಿಗೂ ಲಭ್ಯವಿಲ್ಲದ ಈ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯು ಮಕ್ಕಳಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅವಕಾಶವಂಚಿತ ಹಾಗೂ ಬಡವರ್ಗದ ಮಕ್ಕಳ ಕಲಿಕೆ ಯಲ್ಲಿ ಬಹುದೊಡ್ಡ ಅಸಮಾನತೆಯನ್ನು ಸೃಷ್ಟಿಸಿ ಕಲಿಕೆಯ ಅಂತರವನ್ನು ಹೆಚ್ಚಿಸಿತು. ಜೊತೆಗೆ ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯವಾದ ಸಾಧನಗಳಿಲ್ಲದ ದುರ್ಬಲ ವರ್ಗಗಳ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಿಂದ ವ್ಯವಸ್ಥಿತವಾಗಿ ಹೊರಹಾಕಿತು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ಕೋವಿಡ್‌ ಸಾಂಕ್ರಾಮಿಕದಿಂದ ಉಂಟಾದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಶಾಲಾ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಅನುಕೂಲಕರವಾದ ಸಂಪನ್ಮೂಲಗಳನ್ನು ನಿರೀಕ್ಷಿಸಲಾಗಿತ್ತು.

ಎರಡು, ಕೇಂದ್ರ ಸಂಪುಟವು 2020ರ ಜುಲೈನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಮೋದಿಸಿದಾಗ ದೇಶದ ಶಿಕ್ಷಣ ರಂಗದಲ್ಲಿ ಅದು ಹೊಸ ಕ್ರಾಂತಿಗೆ ನಾಂದಿಯಾಗುವುದೆಂದು ಬಿಂಬಿಸಲಾಗಿತ್ತು. ಈ ನೀತಿಯನ್ನು ರೂಪಿಸಿದ ಶಿಕ್ಷಣ ತಜ್ಞರು, ಶಿಕ್ಷಣ ರಂಗದ ಎಲ್ಲಾ ಸಮಸ್ಯೆಗಳಿಗೆ ಇದು ದಿವ್ಯೌಷಧಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ನೀತಿಯ ಜಾರಿಗೆ ಬಹಳ ಮುಖ್ಯವಾಗಿ ಬೇಕಿರುವ ಹಣಕಾಸು ಸಂಪನ್ಮೂಲಗಳಿಗೆ ಸಂಬಂಧಿಸಿದ ವಿಷಯವನ್ನು ಅದು ಪ್ರಸ್ತಾಪಿಸಿತ್ತು. ಸಮಾಜದ ಭವಿಷ್ಯದ ದೃಷ್ಟಿಯಿಂದ ನಮ್ಮ ಯುವಜನರ ಗುಣಾತ್ಮಕ ಶಿಕ್ಷಣಕ್ಕೆ ಉತ್ತಮ ಹಣಕಾಸಿನ ಹೂಡಿಕೆ ಬೇಕು. ಆದರೆ, ಅದು ಇದುವರೆಗೂ ಲಭ್ಯವಾಗಿಲ್ಲ. ಆದಕಾರಣ, ಶೈಕ್ಷಣಿಕ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಬದ್ಧವಾಗಿರುವುದಾಗಿ ನೀತಿಯು ಘೋಷಿಸಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಜಿಡಿಪಿಯ ಶೇ 6ಕ್ಕೆ ತಲುಪಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂಬ ಭರವಸೆಯನ್ನು ಸಹ ನೀಡಿತ್ತು. ದೇಶದ ಭವಿಷ್ಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಬೌದ್ಧಿಕ, ತಾಂತ್ರಿಕ ಪ್ರಗತಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಿರುವ ಸಮಾನ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡಲು ಇದು ಅತ್ಯಂತ ನಿರ್ಣಾಯಕವೆಂದು ನೀತಿ ಪರಿಗಣಿಸಿತ್ತು. ಮುಂದುವರಿದು, 8 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2030ರ ವೇಳೆಗೆ ಬಾಲ್ಯಪೂರ್ವ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದಾಗಿ ತಿಳಿಸಿತ್ತು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗೆ ಸಂಪನ್ಮೂಲ ಒದಗಿಸುವ ಮೊದಲ ಬಜೆಟ್‌ ಇದಾಗಿತ್ತು. ಹಾಗಾಗಿ ನಿರೀಕ್ಷೆಗಳೂ ಹೆಚ್ಚಿಗೆ ಇದ್ದವು. ಆದರೆ ಈ ನೀತಿಗೆ ಸಂಬಂಧಿಸಿದ ಹೆಚ್ಚಿನ ಭರವಸೆಗಳನ್ನು ಬಜೆಟ್‌ ಗಾಳಿಗೆ ತೂರಿದೆ. ಈ ಕಾರಣದಿಂದ, ಈ ಬಾರಿಯ ಬಜೆಟ್‌ನಲ್ಲಿ ಶಾಲಾ ಶಿಕ್ಷಣದ ವ್ಯಾಪ್ತಿಯನ್ನು ವಸ್ತುನಿಷ್ಠವಾಗಿ ವಿಮರ್ಶಿಸಬೇಕಾಗಿದೆ.

ಕೇಂದ್ರ ಸರ್ಕಾರವು 2021-22ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು ₹ 93,224 ಕೋಟಿಯನ್ನು ಮೀಸಲಿರಿಸಿದೆ. ಇದು 2020-21ರ ಬಜೆಟ್‌ನಲ್ಲಿ  ಮೀಸಲಿಟ್ಟ (₹ 99,312 ಕೋಟಿ) ಹಣಕ್ಕಿಂತ ಶೇ 6.13ರಷ್ಟು ಕಡಿಮೆಯಾಗಿದೆ. ಇದರಲ್ಲಿ ಶಾಲಾ ಶಿಕ್ಷಣದ ಪಾಲು ₹ 54,874 ಕೋಟಿ. ಇದು ಕಳೆದ ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ಹಣಕ್ಕೆ (₹ 59,845) ಹೋಲಿಸಿದರೆ, ಶೇಕಡ 8.3ರಷ್ಟು ಇಳಿಕೆಯಾಗಿದೆ. ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ಎಲ್ಲರಿಗೂ ಶಿಕ್ಷಣ ನೀಡುವುದು ಸರ್ಕಾರದ ಅಂತಿಮ ಗುರಿ ಎಂದು ಹೇಳುತ್ತಲೇ, ಬಜೆಟ್‌ನಲ್ಲಿ ಶಿಕ್ಷಣಕ್ಕೆ ಅನುದಾನವನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಹಲವಾರು ಪ್ರಶ್ನೆಗಳು ಮೂಡುವಂತೆ ಮಾಡಿದೆ.

ವಿಶೇಷವೆಂದರೆ, ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಕೋಟ್ಯಂತರ ಮಕ್ಕಳು ಶಾಲಾ ವರ್ಷವನ್ನು ಕಳೆದುಕೊಂಡು ಶಿಕ್ಷಣದಿಂದ ವಂಚಿತರಾಗಿದ್ದರು. ಇಂತಹ ಮಕ್ಕಳು ಅಗತ್ಯ ಬೆಂಬಲ ವ್ಯವಸ್ಥೆಯೊಂದಿಗೆ ಸುರಕ್ಷಿತವಾಗಿ ಶಾಲೆಗೆ ಹಿಂದಿರುಗುವುದಕ್ಕೆ ಪೂರಕವಾದ ಸಮಗ್ರ ನೀತಿಯ ಭಾಗವಾಗಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಬಜೆಟ್‌ ಹೆಚ್ಚಿನ ಹಣಕಾಸು ಬೆಂಬಲ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ.

ಇನ್ನು, ಶಿಕ್ಷಣ ಹಕ್ಕು ಕಾಯ್ದೆಯ ಜಾರಿಗೆ ಪ್ರಮುಖ ಯೋಜನೆ ಎನಿಸಿರುವ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಮೀಸಲಿಟ್ಟಿರುವ ಹಣ ₹ 38,751 ಕೋಟಿಯಿಂದ (2020-21) ₹ 31,050 ಕೋಟಿಗೆ (2021-22)  ಇಳಿದಿದೆ. 2020-21ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಪರಿಷ್ಕೃತ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಮೊತ್ತದಲ್ಲಿ 2020ರ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಗೊಳಿಸಿರುವ ಒಟ್ಟು ಮೊತ್ತ ₹ 19,097 ಕೋಟಿ. ಕಳೆದ ವರ್ಷದ ಈ ಬೆಳವಣಿಗೆಯನ್ನು ಆಧರಿಸಿ ನೋಡುವು ದಾದರೆ, 2021- 22ರ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಎಷ್ಟರಮಟ್ಟಿಗೆ ಬಿಡುಗಡೆಯಾಗಬಹುದೆಂಬ ಆತಂಕವೂ ಇದೆ.

2021- 22ನೇ ಸಾಲಿಗೆ ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಮೀಸಲಿಟ್ಟಿರುವ ಒಟ್ಟು ₹ 54,874 ಕೋಟಿ ಮೊತ್ತದಲ್ಲಿ ₹ 44,000 ಕೋಟಿಯಷ್ಟು ಶಿಕ್ಷಣ ತೆರಿಗೆಯಿಂದಲೂ (ಸೆಸ್)‌ ಮತ್ತು ₹ 4,800 ಕೋಟಿಯಷ್ಟು ರಾಷ್ಟ್ರೀಯ ಹೂಡಿಕೆ ನಿಧಿಯಿಂದಲೂ ಬರುತ್ತದೆ. ಬೇರೆ ಮೂಲ ಗಳಿಂದ ₹ 6,074 ಕೋಟಿ ಬರುತ್ತದೆ. ಇನ್ನು ಮುಂದೆ ಶಿಕ್ಷಣ ಕ್ಷೇತ್ರದ ಹೂಡಿಕೆಯು ಸೆಸ್‌ ಸಂಗ್ರಹ ಮತ್ತು ರಾಷ್ಟ್ರೀಯ ಹೂಡಿಕೆಯ ಆದಾಯವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಒಂದೆಡೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವುದಾಗಿ ಶಿಕ್ಷಣ ನೀತಿಯಲ್ಲಿ ಹೇಳುತ್ತಲೇ ಮತ್ತೊಂದೆಡೆ, ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿನ ಅನುದಾನವನ್ನು ಗಣನೀಯವಾಗಿ ಇಳಿಸುತ್ತಿರುವುದು ಕಳವಳಕ್ಕೆ ಎಡೆ ಮಾಡುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕಾದರೆ ಶಿಕ್ಷಣ ಕ್ಷೇತ್ರದ ಮೇಲಿನ ಹೂಡಿಕೆಯು ಹಂತ ಹಂತವಾಗಿ ಹೆಚ್ಚಬೇಕಿದೆ. ಆದರೆ, ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಯಾವುದೇ ವಿಶೇಷ ಅಥವಾ ಹೆಚ್ಚುವರಿ ಅನುದಾನವನ್ನು ಒದಗಿಸಲು ಬಜೆಟ್‌ ಸಂಪೂರ್ಣವಾಗಿ ವಿಫಲವಾಗಿದೆ. ಕೇಂದ್ರದ ಬಜೆಟ್‌ನಲ್ಲಿ ಶಿಕ್ಷಣದ ಪಾಲು ಕಡಿಮೆಯಾಗುತ್ತಿದೆ. 2015-16ರಲ್ಲಿ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಶೇ 3.8ರಷ್ಟನ್ನು ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ 0.49ರಷ್ಟನ್ನು ತೆಗೆದಿರಿಸಲಾಗಿತ್ತು. ಅದು 2021- 22ರಲ್ಲಿ ಕ್ರಮವಾಗಿ ಶೇ 2.7 ಹಾಗೂ ಶೇ 0.42ಕ್ಕೆ ಇಳಿದಿದೆ.

ಒಂದೆಡೆ, ರಾಷ್ಟ್ರೀಯ ಶಿಕ್ಷಣ ನೀತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಶಿಕ್ಷಣಕ್ಕೆ ವ್ಯಯ ಮಾಡುವ ಸಾರ್ವಜನಿಕ ಹೂಡಿಕೆಯನ್ನು ಜಿಡಿಪಿಯ ಶೇಕಡ 6ಕ್ಕೆ ತ್ವರಿತವಾಗಿ ಹೆಚ್ಚಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣದ ಹೂಡಿಕೆಯನ್ನು ಗಣನೀಯವಾಗಿ ಕಡಿತಗೊಳಿಸುವ ಮೂಲಕ ಈ ಭರವಸೆಯು ದೂರದ ಕನಸಾಗಿ ಉಳಿಯುವಂತೆ ಮಾಡಿದೆ.

ಒಟ್ಟಾರೆ, ಬಹುಚರ್ಚಿತ ಹಾಗೂ ಬಹು ನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಆರಂಭಿಕ ನೂಕುಬಲ ನೀಡುವ ಅವಕಾಶವನ್ನು ಬಜೆಟ್‌ ಕಳೆದು ಕೊಂಡಿದೆ. ಈ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ ಎಂದು ಪ್ರತಿಪಾದಿಸಿದವರಿಗೆ ಭಾರಿ ನಿರಾಶೆಯನ್ನು ಉಂಟುಮಾಡಿದೆ. ಈ ಕಂದರವನ್ನು ರಾಜ್ಯ ಬಜೆಟ್‌ ಹೇಗೆ ತುಂಬಿಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ನಿರಂಜನಾರಾಧ್ಯ.ವಿ.ಪಿ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು