ಮಂಗಳವಾರ, ಮೇ 24, 2022
26 °C
ಇಂದಿನ ಜಗತ್ತಿನ ಹಲವು ಸಂಗತಿಗಳ ಬಗ್ಗೆ ಪುಸ್ತಕವೊಂದು 25 ವರ್ಷಗಳ ಹಿಂದೆಯೇ ಮಾತನಾಡಿತ್ತು

ವಸಂತ ಶೆಟ್ಟಿ ಬರಹ: ಪುಸ್ತಕದ ಭವಿಷ್ಯವಾಣಿಯ ಸುತ್ತ

ವಸಂತ ಶೆಟ್ಟಿ Updated:

ಅಕ್ಷರ ಗಾತ್ರ : | |

ಕೋವಿಡ್ ಈಗ ಓಮೈಕ್ರಾನ್ ಹೆಸರಿನಲ್ಲಿ ಮತ್ತೊಮ್ಮೆ ದಾಂಗುಡಿಯಿಟ್ಟಿದೆ. ಕಳೆದ ಏಪ್ರಿಲ್- ಮೇ ತಿಂಗಳುಗಳಲ್ಲಿ ಆದಂತೆ ವಿಪರೀತದ ಸೋಂಕು, ಸಾವು-ನೋವು ಇಷ್ಟರವರೆಗೆ ಕಾಣಿಸಿಲ್ಲ ಅನ್ನುವುದು ಸದ್ಯದ ನೆಮ್ಮದಿ. ಇದನ್ನು ಕೊನೆಗಾಣಿಸಲು ದೇಶ ದೇಶಗಳ ನಡುವೆ ಜಾಗತಿಕವಾದ ಸಹಕಾರವೊಂದೇ ದಾರಿ. ಅದಿಲ್ಲದೇ ಹೋದರೆ ಪ್ರತೀ ಆರು ತಿಂಗಳಿಗೊಮ್ಮೆ ವೈರಸ್ಸಿನ ಹೊಸ ತಳಿಯ ಜೊತೆ ಜನಜೀವನ ಹೀಗೆ ಒದ್ದಾಡುವುದು ತಪ್ಪಲಿಕ್ಕಿಲ್ಲ.

ದೇಶ ದೇಶಗಳಲ್ಲಿ ‘ನಮ್ಮ ದೇಶವೇ ಮೊದಲು’ ಅನ್ನುವ ರಾಷ್ಟ್ರವಾದ ಹೆಚ್ಚುತ್ತಿರುವ ಹಾಗೂ ಜಾಗತಿಕ ಸಹಕಾರವನ್ನು ರೂಪಿಸುವ ಹೊಣೆ ಹೊತ್ತ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಮುಂತಾದವು ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಜಾಗತಿಕ ಸಹಕಾರವನ್ನು ಸಾಧ್ಯವಾಗಿಸುವುದು ಸುಲಭದ ಮಾತೂ ಅಲ್ಲ. ಇನ್ನೊಂದೆಡೆ, ತಂತ್ರಜ್ಞಾನದ ದಾಪುಗಾಲು ವ್ಯಾಪಾರ, ವಲಸೆ, ಉದ್ಯೋಗ, ಪೌರತ್ವಗಳ ಕುರಿತ ನಮ್ಮ ಈಗಿನ ನಂಬಿಕೆಗಳೆಲ್ಲವನ್ನೂ ಮರುರೂಪಿಸುತ್ತಿದೆ. ಕೋವಿಡ್ ಈ ಪ್ರಕ್ರಿಯೆಗೆ ಇನ್ನಷ್ಟು ವೇಗವನ್ನು ತುಂಬಿದೆ. 

ಇದೆಲ್ಲ ಮನುಕುಲದ ನಾಳೆಯನ್ನು ಹೇಗೆ ರೂಪಿಸಬಹುದು ಅನ್ನುವ ಭವಿಷ್ಯ ನುಡಿಯುವುದು ಯಾರಿಗೂ ಸಾಧ್ಯವಾಗಲಿಕ್ಕಿಲ್ಲ. ಆದರೆ ಹಿಂದಿನ ಇತಿಹಾಸ, ಇಂದಿನ ಸಮಾಜ, ಅಲ್ಲಿ ತಂತ್ರಜ್ಞಾನ, ಜಾಗತೀಕರಣ, ಪರಿಸರ ನಾಶ ಮುಂತಾದವು ತರುತ್ತಿರುವ ಬದಲಾವಣೆಗಳನ್ನು ಅರಿತು ನಾಳೆ ಏನಾಗಬಹುದು ಅನ್ನುವ ಮುನ್ನುಡಿಯನ್ನು ಕೆಲವರು ಆಡುತ್ತಾರೆ. ಅಂತಹುದೇ ಒಂದು ಪುಸ್ತಕ ಅಮೆರಿಕದ ಜೇಮ್ಸ್ ಡೇವಿಡ್‍ಸನ್ ಹಾಗೂ ವಿಲಿಯಂ ರೀಸ್‍ಮೊಗ್ 1997ರಲ್ಲಿ ಬರೆದ ‘ದಿ ಸಾವರಿನ್ ಇಂಡಿವಿಜುಯಲ್: ಮಾಸ್ಟರಿಂಗ್ ದಿ ಟ್ರಾನ್ಸಿಶನ್ ಟು ದಿ ಇನ್‍ಫರ್ಮೇಶನ್ ಏಜ್’. ಇಂದು ನಾವು ಜಗತ್ತಿನಲ್ಲಿ ಕಾಣುತ್ತಿರುವ ಆರ್ಥಿಕ ತಾರತಮ್ಯ, ಸಾಂಕ್ರಾಮಿಕ ಕಾಯಿಲೆ, ದೇಶಗಳ ಗಡಿ ಇಲ್ಲದ ಕ್ರಿಪ್ಟೊ ಕರೆನ್ಸಿ, ಅತಿರೇಕದ ರಾಷ್ಟ್ರವಾದ, ಎಲ್ಲೆಲ್ಲೂ ಇರುವ ತಂತ್ರಜ್ಞಾನ ಇವೆಲ್ಲವುಗಳ ಬಗ್ಗೆ ಈ ಪುಸ್ತಕ 1997ರಲ್ಲೇ ಮಾತನಾಡಿತ್ತು. ಬಿಡುಗಡೆಯಾದ ಹೊತ್ತಿನಲ್ಲಿ ಇದೊಂದು ಕಾಲಜ್ಞಾನದ ಊಹೆಗಳ ಪುಸ್ತಕ ಎಂದು ಲೇವಡಿ ಮಾಡಲಾಗಿತ್ತಾದರೂ 25 ವರ್ಷಗಳಲ್ಲಿ ಇಲ್ಲಿನ ಹಲವು ವಿಚಾರಗಳು ನಿಜವಾಗುತ್ತ ಹೋದಂತೆ ಈ ಪುಸ್ತಕ ಈಗ ಮತ್ತೆ ಹೊಸ ಓದಿಗೆ ಕಾರಣವಾಗಿದೆ. ಏನಿದೆ ಇದರಲ್ಲಿ?

ಮನುಷ್ಯ ಬೇಟೆಯಾಡಿ ಬದುಕುತ್ತಿದ್ದ ದಿನಗಳಲ್ಲಿ ಆ ಹೊತ್ತಿಗೆ ಎಷ್ಟು ಬೇಕೋ ಅಷ್ಟೇ ಬೇಟೆಯಾಡುತ್ತಿದ್ದ ಕಾರಣಕ್ಕೆ  ಭೂಮಿಯ ಒಡೆತನಕ್ಕಾಗಿ ಬಡಿದಾಡುವ ಸ್ಥಿತಿ ಇರಲಿಲ್ಲ. ಮುಂದೆ ನದಿಯಂಚಿನಲ್ಲಿ ಸಾಗುವಳಿ ಮಾಡಲು ಕಲಿತಾಗ ಫಲವತ್ತಾದ ಭೂಮಿಗಾಗಿಯೂ, ಅಲ್ಲಿ ಬೆಳೆದ ಬೆಳೆಯನ್ನು ಇನ್ನಾರೋ ಕದಿಯದಂತೆ ಕಾಯಲು ಭೂಮಿಯ ಒಡೆತನ ಮುಖ್ಯವಾಗತೊಡಗಿತು. ಈ ಕಾರಣದಿಂದ ರಾಜಪ್ರಭುತ್ವ, ಪಾಳೆಗಾರರ ಪರಿಕಲ್ಪನೆ ಒಡಮೂಡಿತು. ಬಲವಾದ ಸೈನ್ಯ ಮತ್ತು ಹಿಂಸೆಯನ್ನು ಬಳಸಿ ರಕ್ಷಣೆ ನೀಡಬಲ್ಲ ಇವರು 15ನೇ ಶತಮಾನದವರೆಗೆ ಹೆಚ್ಚು ಮುಖ್ಯವಾಗಿದ್ದರು. 15ನೇ ಶತಮಾನದ ಹೊತ್ತಿಗೆ ಮಿಲಿಟರಿ ತಂತ್ರಜ್ಞಾನ ಸುಧಾರಿಸಿದಂತೆ, ಅದರಲ್ಲೂ ಗನ್ ಪೌಡರ್ ಕಂಡುಹಿಡಿದ ಕಾರಣ ಹೆಚ್ಚು ತರಬೇತಿ ಇಲ್ಲದ, ಬಲವಾದ ಮೈಕಟ್ಟು ಇಲ್ಲದವರು ಸೈನ್ಯದಲ್ಲಿ ಇದನ್ನು ಬಳಸಿ ಯುದ್ಧ ಗೆಲ್ಲುವ ಸ್ಥಿತಿ ತಲುಪಿದಾಗ ಪಾಳೆಗಾರರು, ರಾಜಪ್ರಭುತ್ವಗಳಿಗಿದ್ದ ಹಿಡಿತ ಸಡಿಲವಾಗಿ ಆಧುನಿಕ ಪರಿಕಲ್ಪನೆಯ ದೇಶ-ರಾಷ್ಟ್ರಗಳು ಉದಯಿಸಲು ಶುರುವಾದವು.

ತಂತ್ರಜ್ಞಾನವನ್ನು ಬಳಸಿ ಬಲ ಮತ್ತು ಹಿಂಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಆಳ್ವಿಕೆಯ ಪ್ರದೇಶದ ಮೇಲೆ ಚಲಾಯಿಸುವುದರ ಮೇಲೆ ಸಿಕ್ಕ ಏಕಸ್ವಾಮ್ಯದಿಂದಾಗಿ ಇವು ಹೆಚ್ಚು ಆಳವಾಗಿ ಬೇರೂರ ತೊಡಗಿದವು. ಮಿಲಿಟರಿ ತಂತ್ರಜ್ಞಾನದಲ್ಲಿ ಸಾಧಿಸಿದ್ದ ಮುನ್ನಡೆಯೇ ಬ್ರಿಟಿಷರಿಗೆ ಭಾರತವನ್ನು ತನ್ನ ವಸಾಹತು ಮಾಡಿಕೊಳ್ಳಲು ನೆರವಾಯಿತು ಅನ್ನುವುದನ್ನು ಇಲ್ಲಿ ನೆನೆಯಬಹುದು. ಮುಂದೆ ಔದ್ಯೋಗಿಕ ಕ್ರಾಂತಿಯಿಂದಾಗಿ ಬರೀ ಮಿಲಿಟರಿ ತಂತ್ರಜ್ಞಾನದಲ್ಲಷ್ಟೇ ಅಲ್ಲದೆ ಬದುಕಿನ ಎಲ್ಲ ಮಜಲುಗಳನ್ನು ತಟ್ಟುವ ವಿಷಯಗಳಲ್ಲೂ ದೊಡ್ಡ ಗಾತ್ರದಲ್ಲಿ ಉತ್ಪಾದನೆ, ಹಂಚಿಕೆ ಮಾಡುವ ಅನುಕೂಲ ಬಂದಿತು. ಸಹಜವಾಗಿಯೇ ಇಂತಹ ದೈತ್ಯ, ದಕ್ಷವಾದ ಉತ್ಪಾದನೆಯ ವ್ಯವಸ್ಥೆಗೆ ಬೇಕಾದ ಬಂಡವಾಳ, ರಕ್ಷಣೆ ಒದಗಿಸುವುದು ದೇಶ-ರಾಷ್ಟ್ರದ ಪರಿಕಲ್ಪನೆಗೆ ಮಾತ್ರ ಸಾಧ್ಯವಿದ್ದ ಕಾರಣದಿಂದಾಗಿ 20ನೇ ಶತಮಾನ ದೇಶ-ರಾಷ್ಟ್ರದ ಶತಮಾನವಾಗಿತ್ತು. ಆದರೆ ಮಾಹಿತಿ ತಂತ್ರಜ್ಞಾನದ 21ನೇ ಶತಮಾನ 500 ವರ್ಷದ ಹಿಂದೆ ಗನ್ ಪೌಡರ್ ಬಂದಾಗ ಹೇಗೆ ಇತಿಹಾಸದ ದಿಕ್ಕನ್ನು ಬದಲಾಯಿಸಿತೋ ಅಂತಹುದೇ ಬದಲಾವಣೆಯನ್ನು ತಂದು, ದೇಶ-ರಾಷ್ಟ್ರಗಳ ಜಾಗದಲ್ಲಿ ‘ಸ್ವಾಯತ್ತ ವ್ಯಕ್ತಿ’ಕೇಂದ್ರಿತ ಸಮಾಜವನ್ನು ರೂಪಿಸಲಿದೆ ಅನ್ನುವುದು ಲೇಖಕರ ವಾದ.

ಮಾಹಿತಿ ತಂತ್ರಜ್ಞಾನ ಆಧಾರಿತ ಜಗತ್ತು ದೊಡ್ಡ ಪ್ರಮಾಣದಲ್ಲಿ ಅರ್ಥವ್ಯವಸ್ಥೆಯನ್ನು ಸೈಬರ್ ಕಾಮರ್ಸ್ ಜಗತ್ತಿಗೆ ಒಯ್ಯಲಿದೆ. ಅಲ್ಲಿಗೆ ಹೆಚ್ಚೆಚ್ಚು ಆರ್ಥಿಕ ಚಟುವಟಿಕೆ ಚಲಿಸಿದಂತೆ ಸರ್ಕಾರದ ಹಿಡಿತ ಅಲ್ಲಿ ಕಡಿಮೆಯಾಗಲಿದೆ. ಅದು ಸೈಬರ್ ಹಣದ (ಕ್ರಿಪ್ಟೊ ಕರೆನ್ಸಿಯಂಥದ್ದು) ಹುಟ್ಟಿಗೆ ಕಾರಣವಾಗಲಿದೆ. ಸರ್ಕಾರದ ನಿಯಂತ್ರಣಗಳನ್ನು ಮೀರಿದ ಇಂತಹ ವ್ಯವಸ್ಥೆ ಒಂದು ಮಟ್ಟಿಗಿನ ವ್ಯಕ್ತಿ ಸ್ವಾತಂತ್ರ್ಯ ನೀಡಲಿದೆ. ತಂತ್ರಜ್ಞಾನ ಸುಧಾರಿಸಿದಂತೆ ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಸಾಮರ್ಥ್ಯವನ್ನು ಈ ಕ್ಷೇತ್ರ ಒದಗಿಸುವುದರಿಂದ ಯಾವ ನಾಡಿನಲ್ಲಿ ಸರ್ಕಾರಗಳು ತೆರಿಗೆ ಹೆಸರಿನಲ್ಲಿ ಹಗಲು ದರೋಡೆ ಮಾಡುವುದಿಲ್ಲವೋ ಅಲ್ಲಿಗೆ ವಲಸೆ ಹೋಗಿ ನೆಲೆಸುವ ಆಯ್ಕೆ ಒದಗಲಿದೆ. ಸುದ್ದಿ ಮಾಧ್ಯಮಗಳು ವ್ಯಕ್ತಿಕೇಂದ್ರಿತವಾಗಿ ಆಕೆಗೆ ಏನು ಬೇಕೋ ಅದನ್ನೇ ಸುದ್ದಿಯಾಗಿ ಕೊಡುವ ಮಟ್ಟಕ್ಕೆ ಮಾರ್ಪಡಲಿವೆ. ಈ ಬದಲಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುವ ಕೆಲವರು ಊಹಿಸಲಾರದಷ್ಟು ಸಿರಿವಂತಿಕೆ ಪಡೆದರೆ, ಇದಕ್ಕೆ ಬೇಕಾದ ಸ್ಕಿಲ್ಸ್ ಪಡೆಯದ ಜನರು ಹೊರಗುಳಿದು ಆರ್ಥಿಕ ತಾರತಮ್ಯ ಹೆಚ್ಚಲಿದೆ. ಹೀಗೆ ಹೊರಗುಳಿಯುವ ಜನರ ಸಿಟ್ಟು ಹಲವಾರು ದೇಶಗಳಲ್ಲಿ ಅತಿರೇಕದ ರಾಷ್ಟ್ರವಾದಕ್ಕೆ ಕಾರಣವಾಗಲಿದೆ. ಅಂತಹ ದೇಶಗಳು ಇಂತಹ ಸ್ವಾಯತ್ತ ವ್ಯಕ್ತಿಗಳನ್ನು ಶತ್ರುಗಳೆಂದು ಬಗೆದು ಅವರನ್ನು ಹತ್ತಿಕ್ಕಲು ಪ್ರಯತ್ನಿಸಲಿವೆ. ಇದೇ ಹೊತ್ತಿನಲ್ಲಿ ಅಂಕೆಯಿಲ್ಲದೆ ಬೆಳೆಯುತ್ತಿರುವ ಜಗತ್ತಿನ ಜನಸಂಖ್ಯೆಯಿಂದಾಗಿ ಸಾಂಕ್ರಾಮಿಕ ಕಾಯಿಲೆಗಳನ್ನು ಹರಡಬಲ್ಲ ಸೂಕ್ಷ್ಮಾಣುಜೀವಿಗಳು ಹೆಚ್ಚಿ ಕಾಯಿಲೆಗಳು ಪಿಡುಗಿನಂತೆ ಅಪ್ಪಳಿಸಬಹುದು. ಮಾರುಕಟ್ಟೆಯ ಸಾಟಿಯಿಲ್ಲದ ಸಾಧ್ಯತೆಗಳ ಮುಂದೆ ರಾಜಕಾರಣ ತನ್ನ ನೆಲೆ ಕಳೆದುಕೊಳ್ಳಲಿದೆ. ಪಾಳೆಗಾರಿಕೆಯ ಜಾಗದಲ್ಲಿ ದೇಶ-ರಾಷ್ಟ್ರಗಳ ಪರಿಕಲ್ಪನೆ ಬಂದಂತೆ ಅದರ ಜಾಗದಲ್ಲಿ ಸ್ವಾಯತ್ತ ವ್ಯಕ್ತಿ ನಿಲ್ಲುವ ಬದಲಾವಣೆ 21ನೇ ಶತಮಾನದಲ್ಲಿ ಆಗಲಿದೆ.

ಇಂತಹ ಹಲವು ಮುನ್ನುಡಿಗಳನ್ನು ಈ ಪುಸ್ತಕದಲ್ಲಿ ಹೇಳಲಾಗಿತ್ತು. ಕ್ರಿಪ್ಟೊ ಕರೆನ್ಸಿಯ ಜನಪ್ರಿಯತೆ, ಸೈಬರ್ ಕಾಮರ್ಸ್‌ನ ‍ಅಗಾಧ ಬೆಳವಣಿಗೆ, ಆರ್ಥಿಕ ಅಸಮಾನತೆ, ಸಮೂಹ ಮಾಧ್ಯಮಗಳ ಕುಸಿತ, ಕೋವಿಡ್, ಅತಿರೇಕದ ರಾಷ್ಟ್ರವಾದದ ಹುಟ್ಟು ಹೀಗೆ ಹಲವು ವಿಚಾರಗಳಲ್ಲಿ ಪುಸ್ತಕದ ಮಾತುಗಳು ಈಗ ದಿಟವೆಂದು ಸಾಬೀತಾಗುತ್ತಿವೆ. ಹಾಗೆಂದ ಮಾತ್ರಕ್ಕೆ ಇಲ್ಲಿನ ಎಲ್ಲ ಮಾತುಗಳು ನಿಜವಾಗಿವೆ ಅಂತೇನೂ ಇಲ್ಲ. ಹಾಂಕ್‍ಕಾಂಗ್‍ನಂತಹ ನಗರಗಳು ಸ್ವಾಯತ್ತ ವ್ಯಕ್ತಿಕೇಂದ್ರಿತ
ಸಮಾಜ ಕಟ್ಟುವ ನಗರಕ್ಕೆ ಉದಾಹರಣೆಯಾಗಬಲ್ಲವು ಅನ್ನುವ ಅವರ ವಾದ ತಲೆಕೆಳಗಾಗುವಂತೆ ಚೀನಾ ತನ್ನ ಬಿಗಿಪಟ್ಟಿನ ಮೂಲಕ ಆ ನಗರವನ್ನು ಹಿಡಿತದಲ್ಲಿ ಇರಿಸಿಕೊಂಡಿದೆ.

ಇನ್ನೊಂದೆಡೆ, ಬಲ ಮತ್ತು ಹಿಂಸೆಯ ಜೊತೆ ಮಾಹಿತಿ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿ ಒಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಚೀನಾ ಉದಯಿಸಬಹುದು ಅನ್ನುವುದನ್ನು ಊಹಿಸಲು ಲೇಖಕರಿಗೆ ಸಾಧ್ಯವಾಗಿರಲಿಲ್ಲ. ಜೊತೆಗೆ ಪ್ರತಿಭೆ ಇದ್ದವರಿಗೆ ಎಲ್ಲವೂ ಸಿಗುತ್ತವೆ, ಉಳಿದವರದ್ದು ಅವರ ಹಣೆಬರಹ ಅನ್ನುವಂತೆ ಇಲ್ಲಿನ ವಾದಗಳಿರುವುದರಿಂದ ಆರ್ಥಿಕ ತಾರತಮ್ಯ ತರುವ ಸಾಮಾಜಿಕ ಬಿಕ್ಕಟ್ಟುಗಳ ಬಗ್ಗೆ ಲೇಖಕರು ಅಷ್ಟು ಆಳವಾಗಿ ಚಿಂತಿಸಿಲ್ಲ ಅನ್ನುವುದು ಪುಸ್ತಕದ ಮೇಲಿರುವ ದೊಡ್ಡ ಟೀಕೆಗಳಲ್ಲಿ ಒಂದು. 

ಒಟ್ಟಾರೆಯಾಗಿ 21ನೇ ಶತಮಾನದ ಮನುಕುಲದ ಭವಿಷ್ಯದ ಬಗ್ಗೆ ಯೋಚಿಸುವವರಿಗೆ ತನ್ನ ಹಲವು ಮಿತಿಗಳ ನಡುವೆಯೂ ಇದೊಂದು ಒಳ್ಳೆಯ ಪುಸ್ತಕ. ಇಂತಹದ್ದೆಲ್ಲ ಕನ್ನಡಕ್ಕೆ ಅನುವಾದವಾಗುವುದು ಯಾವಾಗ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು