ಭಾನುವಾರ, ಸೆಪ್ಟೆಂಬರ್ 26, 2021
24 °C
ಈ ಹಕ್ಕು ಪಡೆಯಲು ದೇಶದಲ್ಲಿ ನಡೆಯಲಿ ಸಂಘಟಿತ ಪ್ರಯತ್ನ

ವಿಶ್ಲೇಷಣೆ: ಗ್ರಾಹಕರಿಗೆ ಬೇಕಿದೆ ದುರಸ್ತಿ ಹಕ್ಕು

ವೈ.ಜಿ.ಮುರಳೀಧರನ್ Updated:

ಅಕ್ಷರ ಗಾತ್ರ : | |

ದಿನನಿತ್ಯ ಬಳಸುವ ಗೃಹೋಪಯೋಗಿ ಉಪಕರಣಗಳು ಕೆಟ್ಟರೆ ಅವನ್ನು ಬಳಕೆದಾರರೇ ರಿಪೇರಿ ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಬೆಂಗಳೂರಿನ ಚಿಕ್ಕಪೇಟೆ ಮತ್ತು ಬಳೆಪೇಟೆಯ ಭಾನುವಾರದ ಗುಜರಿ ಮಾರುಕಟ್ಟೆಯಲ್ಲಿ ಉಪಕರಣಗಳ ದುರಸ್ತಿಗೆ ಬೇಕಾಗುವ ಬಿಡಿಭಾಗಗಳು ಸುಲಭ ಬೆಲೆಗೆ ದೊರೆಯುತ್ತಿದ್ದವು.

ಇಸ್ತ್ರಿಪೆಟ್ಟಿಗೆ, ಕುಕ್ಕರ್, ರೇಡಿಯೊ, ಬೈಸಿಕಲ್, ಟೇಬಲ್ ಲ್ಯಾಂಪ್ ಮುಂತಾದ ವಸ್ತುಗಳನ್ನು ಸರಿಪ ಡಿಸಿ ಮತ್ತಷ್ಟು ವರ್ಷ ಉಪಯೋಗಿಸುತ್ತಿದ್ದ ಕಾಲ ಈಗಿಲ್ಲ. ಇದಕ್ಕೆ ಕಾರಣ, ಉಪಕರಣಗಳಿಗೆ ಬೇಕಾದ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಹಾಗೊಮ್ಮೆ ದೊರೆತರೂ ಬಳಕೆದಾರರು ದುರಸ್ತಿ ಮಾಡಿಕೊಳ್ಳುವುದಕ್ಕೆ ಉತ್ಪಾದಕರು ನಿರ್ಬಂಧ ವಿಧಿಸಿರುತ್ತಾರೆ. ಅವರು ಸೂಚಿಸುವವರಿಂದಲೇ ದುರಸ್ತಿ ಮಾಡಿಸಿಕೊಳ್ಳಬೇಕು. ಹಾಗೊಮ್ಮೆ ಬಳಕೆದಾರರೇ ರಿಪೇರಿ ಮಾಡಿದರೆ ಅಥವಾ ಬೇರೆಲ್ಲೋ ಮಾಡಿಸಿದರೆ ಉಪಕರಣಕ್ಕೆ ಕೊಟ್ಟಿ ರುವ ಖಾತರಿ (ಗ್ಯಾರಂಟಿ) ಕಳೆದುಕೊಳ್ಳಬೇಕಾಗುತ್ತದೆ.


ವೈ.ಜಿ.ಮುರಳೀಧರನ್

ಬಳಕೆದಾರರೇ ಉಪಕರಣವನ್ನು ದುರಸ್ತಿ ಮಾಡುವುದನ್ನು ತಡೆಗಟ್ಟಲು ಉಪಕರಣದ ಜೊತೆ ನೀಡುವ ಯೂಸರ್ ಮ್ಯಾನ್ಯುಯಲ್‍ನಲ್ಲಿರುವ ಮಾಹಿತಿ ಯನ್ನು ಕೃತಿಸ್ವಾಮ್ಯ ಅಧಿನಿಯಮಕ್ಕೆ ಒಳಪಡಿಸುತ್ತಾರೆ. ಉತ್ಪಾದಕರು ಅಥವಾ ಅವರು ನೇಮಕ ಮಾಡುವವರು ಮಾತ್ರ ಅದನ್ನು ಉಪಯೋಗಿಸಲು ಸಾಧ್ಯ.

ಈ ದುರಸ್ತಿ ಸಮಸ್ಯೆ ಈಗ ಮತ್ತಷ್ಟು ಗಂಭೀರವಾಗ ತೊಡಗಿದೆ. ಪ್ರತಿದಿನ ಲೆಕ್ಕವಿಲ್ಲದಷ್ಟು ವಿದ್ಯುತ್ ಉಪ ಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅತ್ಯಂತ ಹೊಸ ಮಾದರಿ ಉಪಕರಣ ಖರೀದಿಸಿದ ಕೆಲವೇ ದಿನ ಗಳಲ್ಲಿ ಮತ್ತೇನೋ ಹೊಸ ಅಂಶದ ಪ್ರಚಾರದೊಂದಿಗೆ ಮತ್ತೊಂದು ಉಪಕರಣ ಮಾರುಕಟ್ಟೆ ಪ್ರವೇಶಿಸುತ್ತದೆ. ತಂತ್ರಜ್ಞಾನದ ಬೆಳವಣಿಗೆ ಕಾರಣವಿದ್ದರೂ ಹಳೆ ಉಪಕರಣವನ್ನು ನಿಷ್ಪ್ರಯೋಜಕ ಮಾಡುವ ಉತ್ಪಾದಕರ ಹುನ್ನಾರ ಇದರ ಹಿಂದೆ ಕೆಲಸ ಮಾಡುತ್ತಿದೆ. ಉದಾಹರಣೆಗೆ, ಪ್ರತಿಷ್ಠಿತ ಕಂಪನಿಯ ಲ್ಯಾಪ್‍ಟಾಪ್‍ನಲ್ಲಿ ಬ್ಯಾಟರಿ ಚಾರ್ಜರ್ ಕೆಟ್ಟರೂ ಅದನ್ನು ಮಾತ್ರ ಬದಲಿಸಲು ಅವಕಾಶ
ವಿಲ್ಲದೆ ಹೊಸ ಲ್ಯಾಪ್‍ಟಾಪ್ ಖರೀದಿಸಬೇಕಾಗಿದೆ. ಹಳೆ ಉಪಕರಣಗಳ ಬಿಡಿಭಾಗಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವುದಲ್ಲದೆ ಅದರ ತಯಾರಿಕೆಯನ್ನು
ಸ್ಥಗಿತಗೊಳಿಸುವುದೂ ಇದೆ. ಬಳಕೆದಾರರು ಹೆಚ್ಚು ಉಪಕರಣಗಳನ್ನು ಖರೀದಿಸಲು ಹೆಚ್ಚು
ಹಣ ಖರ್ಚು ಮಾಡುವುದಲ್ಲದೆ ಹೆಚ್ಚು ತ್ಯಾಜ್ಯಕ್ಕೂ ಕಾರಣವಾಗುತ್ತದೆ. ಅಮೆರಿಕದ ಬಳಕೆದಾರರು ಪ್ರತಿದಿನ ಸುಮಾರು 4 ಲಕ್ಷ ಸೆಲ್‍ಫೋನ್‌ಗಳನ್ನು ಕಸಕ್ಕೆ ಎಸೆಯುತ್ತಾರೆ. ಅದರಲ್ಲಿ ಶೇ 15ರಷ್ಟು ಮಾತ್ರ ಮರು
ಬಳಕೆಯಾಗುತ್ತಿದೆ.

ದುರಸ್ತಿ ಸಮಸ್ಯೆಯು ಕೋವಿಡ್ ಸಂದರ್ಭದಲ್ಲಿ ಮತ್ತಷ್ಟು ಉಲ್ಬಣಗೊಂಡಿರುವುದು ಕಂಡುಬಂದಿದೆ. ಕೆಲವು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿರುವ ಲ್ಯಾಪ್‍ಟಾಪ್‍ಗಳು ಕೆಟ್ಟು ಅವನ್ನು ರಿಪೇರಿ ಮಾಡಲಾಗದೆ ಉಪಕರಣಗಳು ಮೂಲೆ ಸೇರಿವೆ. ಇತ್ತ ಹೊಸ ಲ್ಯಾಪ್‍ಟಾಪ್ ಸರಬರಾಜು ಆಗಿಲ್ಲ. ಒಂದು ವೇಳೆ ತಯಾರಕರು ಲ್ಯಾಪ್‍ಟಾಪ್ ದುರಸ್ತಿ ಮಾಡಲು ಅವಕಾಶ ಕೊಟ್ಟಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು. ಜೊತೆಗೆ ಸ್ಥಳೀಯ ಕೌಶಲಕ್ಕೆ ಉತ್ತೇಜನವೂ ದೊರೆಯುತ್ತಿತ್ತು.

ರೈತರು ಕೃಷಿ ಬಳಕೆಯ ಉಪಕರಣಗಳು ಕೆಟ್ಟರೆ ಸ್ಥಳೀಯರಲ್ಲಿ ದುರಸ್ತಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಉಪಕರಣ ಖರೀದಿಸಿದವರಿಂದಲೇ ದುರಸ್ತಿ ಮಾಡಿಸಬೇಕಿದೆ. ಇದರಿಂದ ಹಣ, ಸಮಯ ಮತ್ತು ಶ್ರಮ ಎಲ್ಲವೂ ವ್ಯರ್ಥ. ಆದರೆ ಲಾಭ ಉತ್ಪಾದಕರಿಗೆ.

ಐವತ್ತರ ದಶಕದಲ್ಲಿ ಬ್ರೂಕ್ ಸ್ಟೀವನ್ಸ್ ಎಂಬ ಅಮೆರಿಕದ ಎಂಜಿನಿಯರ್ Planned Obsolescence ಎಂಬ ಪದವನ್ನು ಮೊದಲ ಬಾರಿ ಬಳಸಿದ್ದರು. ನಂತರ ಅರವತ್ತರ ದಶಕದಲ್ಲಿ ಪತ್ರಿಕೋದ್ಯಮಿ ಮತ್ತು ಗ್ರಾಹಕ ಹಕ್ಕುಗಳ ಹೋರಾಟಗಾರ ವ್ಯಾನ್‍ಪ್ಯಾಕಾರ್ಡ್ ತಮ್ಮ
‘ದ ಹಿಡನ್ ಪರ್ಸುಯೇಡರ್ಸ್’ ಪುಸ್ತಕದಲ್ಲಿ ಉತ್ಪಾದಕರ ಕುತಂತ್ರವನ್ನು ಬಯಲಿಗೆಳೆದಿದ್ದರು. ಎಪ್ಪತ್ತರ ದಶಕದಲ್ಲಿ, ಒಮ್ಮೆ ಉಪಯೋಗಿಸಿ ಎಸೆಯುವ (Throwaway culture) ಉಪಕರಣಗಳು ಕಾಣಿಸಿಕೊಂಡವು. ಇವುಗಳನ್ನು ದುರಸ್ತಿ ಮಾಡುವ ಮಾತು ಹಾಗಿರಲಿ, ಅದರ ಬಿಡಿ ಭಾಗವನ್ನು ತೆಗೆಯಬೇಕಾದರೆ ಉಪಕರಣ ವನ್ನೇ ಒಡೆಯಬೇಕಾಗುತ್ತದೆ. ದುಬಾರಿ ಬೆಲೆ ಕೊಟ್ಟು ಖರೀದಿಸುವ ಹಿಯರಿಂಗ್ ಏಡ್ಸ್‌ ಕೆಟ್ಟರೆ ರಿಪೇರಿ ಮಾಡುವವರು ದೊರಕುತ್ತಾರಾ ಪರೀಕ್ಷಿಸಿ ನೋಡಿ.

ಈ ಹಿನ್ನೆಲೆಯಲ್ಲಿ ಬಳಕೆದಾರರ ಹಿತದೃಷ್ಟಿ ಹಾಗೂ ಪರಿಸರ ಸಂರಕ್ಷಣೆಗಾಗಿ ಬಳಕೆದಾರರಿಗೆ ರಿಪೇರಿ ಮಾಡುವ ಹಕ್ಕನ್ನು (ರೈಟ್ ಟು ರಿಪೇರ್) ನೀಡಬೇಕೆಂಬ ಚಳವಳಿ ಆರಂಭವಾಯಿತು. ಈ ಚಳವಳಿ ಮುಖ್ಯವಾಗಿ ನಾಲ್ಕು ಉದ್ದೇಶಗಳನ್ನು ಹೊಂದಿದೆ. ರಿಪೇರಿ ಮಾಡುವ ವಿಧಾನದ ಬಗ್ಗೆ ಮಾಹಿತಿ, ಬಿಡಿಭಾಗಗಳ ಲಭ್ಯತೆ ಹಾಗೂ ರಿಪೇರಿ ಮಾಡುವ ಸಾಧ್ಯತೆ ಇರುವಂತೆ ಉಪಕರಣದ ವಿನ್ಯಾಸ. ಕೆಟ್ಟಿರುವ ಉಪಕರಣವನ್ನು ಸ್ವತಂತ್ರವಾಗಿ ದುರಸ್ತಿ ಮಾಡಿಕೊಳ್ಳುವ ಹಕ್ಕನ್ನು ಬಳಕೆದಾರರಿಗೆ ನೀಡುವುದೇ ಈ ಚಳವಳಿಯ ಮುಖ್ಯ ಉದ್ದೇಶ. ಇದರ ಜೊತೆಗೆ ಉಪಕರಣಕ್ಕೆ ಬೇಕಾದ ಬಿಡಿಭಾಗಗಳು ಹಾಗೂ ಸಲಕರಣೆಗಳನ್ನು ತಯಾರಿಸುವುದು, ದುರಸ್ತಿ ಮಾಡುವ ವಿಧಾನದ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವುದು, ಒಂದು ನಮೂನೆಯ ಉಪಕರಣವನ್ನು ಮಾರುಕಟ್ಟೆಯಿಂದ ಹಿಂಪಡೆದರೂ ಕೆಲವು ವರ್ಷ ಅದರ ಬಿಡಿಭಾಗಗಳನ್ನು ಸರಬರಾಜು ಮಾಡುವಂತೆ ಉತ್ಪಾದ ಕರ ಮೇಲೆ ಒತ್ತಾಯ ತರುವುದು ಇತರ ಉದ್ದೇಶಗಳು.

ದುರಸ್ತಿ ಹಕ್ಕು ಸ್ಥೂಲವಾಗಿ ಹೇಳುವುದಾದರೆ, ಬಳಕೆದಾರರು ಖರೀದಿಸಿರುವ ಉಪಕರಣವನ್ನು ಬಿಚ್ಚಿ ನೋಡುವ, ಅದನ್ನು ಮಾರ್ಪಡಿಸುವ, ದುರಸ್ತಿ ಮಾಡುವ ಮತ್ತು ಉಪಕರಣದ ಸಾಫ್ಟ್‌ವೇರ್ ಅನ್‍ಲಾಕ್ ಮಾಡುವ ಹಕ್ಕುಗಳನ್ನು ಒಳಗೊಂಡಿದೆ. ಜೊತೆಗೆ, ಬಳಕೆದಾರರಿಗೆ ದುರಸ್ತಿ ಮಾಡುವ ವಿಧಾನದ ಬಗ್ಗೆ ಮಾಹಿತಿ ಹೊಂದುವ ಹಕ್ಕನ್ನು ಹೊಂದಿದೆ. ದುರಸ್ತಿ ಮಾಡಬಹುದಾದ ಉಪಕರಣಗಳ ಹಕ್ಕು, ಬೇಕಾದ ಅಂಗಡಿಯಲ್ಲಿ ದುರಸ್ತಿ ಮಾಡಿಸಿಕೊಳ್ಳುವ ಹಕ್ಕು ಸಹ ಸೇರಿವೆ. ಚಳವಳಿಯು ಈಗ ಅನೇಕ ರಾಷ್ಟ್ರಗಳಲ್ಲಿ ಹರಡಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್‍ನಲ್ಲಿ ಚಳವಳಿ ಫಲ ನೀಡಿದೆ. ಅಮೆರಿಕದ 32 ರಾಜ್ಯಗಳು ದುರಸ್ತಿ ಹಕ್ಕು ನೀಡುವ ಕಾನೂನನ್ನು ಈಗಾಗಲೆ ಸಿದ್ಧಪಡಿಸಿವೆ. ಬ್ರಿಟನ್‌ನಲ್ಲಿ ಇದಕ್ಕೆ ಸಂಬಂಧಿಸಿದ ನಿಯಮ ಈ ವರ್ಷದ ಜುಲೈನಿಂದ ಜಾರಿಗೆ ಬಂದಿದೆ. ಉಪಕರಣಗಳು ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವಂತೆ ಕಾನೂನು ಮಾಡಿದೆ. ಇದರ ಪ್ರಕಾರ, ಟಿ.ವಿ, ಫ್ರಿಜ್, ವಾಷಿಂಗ್ ಮಶೀನ್ ಇತ್ಯಾದಿ ಉಪಕರಣಗಳ ಬಿಡಿಭಾಗಗಳು ದೊರೆಯುವಂತೆ ಕ್ರಮ ಕೈಗೊಳ್ಳುವುದು ಉತ್ಪಾದಕರ ಜವಾಬ್ದಾರಿ.

ಬಳಕೆದಾರರಿಗೆ ದುರಸ್ತಿ ಹಕ್ಕು ನೀಡುವುದಕ್ಕೆ ಕೆಲವು ಪ್ರಮುಖ ಉತ್ಪಾದಕರು ಸಿದ್ಧರಿಲ್ಲ. ದೈತ್ಯ ಕಂಪನಿಗಳಾದ ಅಮೆಜಾನ್, ಆ್ಯಪಲ್, ಮೈಕ್ರೊಸಾಫ್ಟ್, ಗೂಗಲ್ ಮತ್ತು ಟೆಸ್ಲಾ ಕಂಪನಿಗಳು ದುರಸ್ತಿ ಹಕ್ಕನ್ನು ವಿರೋಧಿಸುತ್ತಿವೆ. ತಮ್ಮ ವಹಿವಾಟು ಮತ್ತು ಲಾಭಕ್ಕೆ ಇದು ಮಾರಕ ಎಂಬುದು ನಿಜವಾದ ಕಾರಣವಾದರೂ ಬಳಕೆದಾರರಿಗೆ ದುರಸ್ತಿ ಹಕ್ಕು ನೀಡುವುದು ಬೌದ್ಧಿಕ ಆಸ್ತಿ ಹಕ್ಕಿನ ಉಲ್ಲಂಘನೆ ಹಾಗೂ ದತ್ತಾಂಶ ಮತ್ತು ಸೈಬರ್ ಸುರಕ್ಷತೆಗಾಗಿ ರಿಪೇರಿ ಹಕ್ಕನ್ನು ಬಳಕೆದಾರರಿಗೆ ನೀಡಬಾರದೆಂದು ಹೇಳುತ್ತಿವೆ.

ಆ್ಯಪಲ್ ಕಂಪನಿಯು ಹಳೆಯ ಮಾದರಿ ಐಫೋನ್ ಕಾರ್ಯಾಚರಣೆಯ ವೇಗವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದೆ ಎಂಬ ಆರೋಪ ನಾಲ್ಕು ವರ್ಷಗಳ ಹಿಂದೆ ಕೇಳಿಬಂದಿತ್ತು. ಬಳಕೆದಾರರು ಅಪ್‍ಗ್ರೇಡ್ ಆಗಿರುವ ಹೊಸ ಫೋನ್ ಖರೀದಿಸಲು ಮಾಡಿದ ಉಪಾಯ ಇದು ಎಂದು ಕೆಲವು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ತಾಂತ್ರಿಕ ಕಾರಣ ಹೇಳಿ ಆ್ಯಪಲ್ ಸಂಸ್ಥೆ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು
ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಇದಕ್ಕಾಗಿ ಕಂಪನಿಯ ವಿರುದ್ಧ 11.3 ಕೋಟಿ  ಡಾಲರ್ ದಂಡ ವಿಧಿಸಲಾಗಿತ್ತು. ಇದಾದ ನಂತರ ಆ್ಯಪಲ್ 2019ರಲ್ಲಿ ಹೊಸ ನಿಯಮ ಜಾರಿಗೊಳಿಸಿ, ಬಳಕೆದಾರರು ಸ್ವತಂತ್ರವಾಗಿ ರಿಪೇರಿ ಮಾಡಿಸಿಕೊಳ್ಳಲು ಅನುಮತಿ ನೀಡಿದ್ದಲ್ಲದೆ, ಬಿಡಿ ಭಾಗಗಳ ಮಾರಾಟ ಆರಂಭಿಸಿತು.

ಭಾರತದಲ್ಲೂ ದುರಸ್ತಿ ಹಕ್ಕಿನ ಬಗ್ಗೆ ಚರ್ಚೆ ಆರಂಭ ವಾಗಿದ್ದರೂ ಅದೇಕೋ ಗ್ರಾಹಕ ವ್ಯವಹಾರ ಇಲಾಖೆ ಇದರತ್ತ ಗಮನಹರಿಸಿಲ್ಲ. ಕಳೆದ ವರ್ಷ ಜಾರಿಗೆ ಬಂದ ಹೊಸ ಗ್ರಾಹಕ ಸಂರಕ್ಷಣಾ ಅಧಿನಿಯಮದಲ್ಲಿ ದುರಸ್ತಿ ಹಕ್ಕನ್ನು ಸೇರಿಸುವ ಅವಕಾಶವಿತ್ತು. ಗ್ರಾಹಕ ಸಂಘಟನೆಗಳು ಈ ಹಕ್ಕಿಗಾಗಿ ಪ್ರಯತ್ನಿಸಬೇಕಿದೆ.

ಲೇಖಕ: ಗ್ರಾಹಕರ ಹಕ್ಕುಗಳ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು