ಸೋಮವಾರ, ಅಕ್ಟೋಬರ್ 26, 2020
26 °C
ಸಮಾಜವು ಮಾದಕ ವ್ಯಸನಿಗಳನ್ನು ದ್ವೇಷಿಸುವುದಕ್ಕಿಂತ ವ್ಯಸನಮುಕ್ತಗೊಳಿಸಲು ಗಮನಹರಿಸಬೇಕು

ಶಿವಮೂರ್ತಿ ಮುರುಘಾ ಶರಣರ ವಿಶ್ಲೇಷಣೆ: ಸ್ವಸ್ಥ ಚಿತ್ತಕ್ಕೆ ನೂರೆಂಟು ದಾರಿ

ಡಾ. ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

ಮಾನವ ಪ್ರಪಂಚದಲ್ಲಿ ತುಂಬ ಪ್ರಯಾಸಪಟ್ಟು ಸದ್ಗುಣಗಳನ್ನು ರೂಢಿಸಿಕೊಳ್ಳುತ್ತಾ ಬರಲಾಗಿದೆ. ಸದ್ಗುಣಗಳು ಒಬ್ಬ ವ್ಯಕ್ತಿಯನ್ನು ಸಂಪನ್ನ ಅಥವಾ ಸಂಭಾವಿತನನ್ನಾಗಿ ರೂಪಿಸುತ್ತವೆ. ಜನರು ಸಾಧನೆ ಮಾಡಲು ಇಚ್ಛಿಸುತ್ತಾರೆ. ತಾನೊಬ್ಬ ಸಂಪನ್ನ ಅನ್ನಿಸಿಕೊಳ್ಳಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಸಂಪನ್ನ ಎಂದರೆ ಸಾತ್ವಿಕ. ಸಂಪನ್ನರು ಯಾವಾಗಲೂ ನಿರುಪದ್ರವಿಗಳು, ಅಷ್ಟೇ ನಿರ್ಲಿಪ್ತರು.

ಸಂಪನ್ನರಾಗಿಯೂ ಸಾಧನೆ ಮಾಡಿದವರ ಉದಾಹರಣೆಗಳು ಬಹಳಷ್ಟು. ಸಾಧನೆ ಮಾಡಿದವರೆಲ್ಲ ಸಂಪನ್ನರಾಗದೇ ಇರಬಹುದು. ಸಂಪನ್ನತೆ ಇಲ್ಲವೇ ಸಂಭಾವಿತ ಗುಣವು ವ್ಯಕ್ತಿತ್ವದಲ್ಲಿ ಸೇರಿದಾಗ, ಆ ವ್ಯಕ್ತಿತ್ವಕ್ಕೆ ಇನ್ನಿಲ್ಲದ ಹೊಳಪು. ಸಂಪನ್ನರಾಗಲು ಸಾಧನೆ ಬೇಕು. ಹಲವಾರು ಸಂದರ್ಭಗಳಲ್ಲಿ ಸಹವಾಸ ದೋಷವು ಒಳ್ಳೆಯತನವನ್ನು ಹಾಳು ಮಾಡಿಬಿಡುತ್ತದೆ.

ಮೂಲತಃ ಯಾರೂ ದುಷ್ಟರಲ್ಲ. ಪರಿಸರದ ಪ್ರಭಾವದಿಂದಾಗಿ ಮಾನವನೊಳಗೆ ದುರ್ಗುಣಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಮಗು ಮುಗ್ಧತೆಯಿಂದ ಕೂಡಿರುತ್ತದೆ. ಮುಗ್ಧತೆಯು ಕರಗುತ್ತಾ ಹೋದಂತೆ ಚಂಚಲ– ಚಪಲ ಸ್ವಭಾವ, ವಿಕೃತಿ, ಕ್ರೌರ್ಯ, ದಾರ್ಷ್ಟ್ಯದಂತಹ ದುರ್ಗುಣಗಳು. ಇವುಗಳಿಗೆ ಒಳಗಾದಾಗ ಸೌಜನ್ಯ, ಒಳ್ಳೆಯತನದಂತಹ ಗುಣಗಳು ಮಾಯವಾಗಿ ದುಷ್ಟ ಗುಣ ರಣಕೇಕೆ ಹಾಕುತ್ತದೆ.

ದುರ್ಗುಣಗಳು ತತ್ಕಾಲದಲ್ಲಿ ಸುಖ, ಸಂತೋಷ ನೀಡಬಹುದು. ಕ್ರಮೇಣ ಅವುಗಳಿಂದ ದುಃಖ ಅನುಭವಿಸಬೇಕಾಗುವುದು. ದುರ್ಗುಣಗಳು ವ್ಯಕ್ತಿಯನ್ನು ವ್ಯಸನಾಧೀನನ್ನಾಗಿಸುವ ಅಪಾಯವಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಭೋಗಲಾಲಸೆ. ಸುಖದ ಆಸ್ವಾದನೆಯು ವ್ಯಕ್ತಿಯನ್ನು ಸುಮ್ಮನೆ ಕೂಡಲು ಬಿಡುವುದಿಲ್ಲ. ತನಗೆ ಬೇಕಾದುದನ್ನು ಹುಡುಕಲು ಹಚ್ಚುತ್ತದೆ. ಸುಖದ ಹಾದಿಯು ತಿಳಿದುಕೊಂಡಷ್ಟು ಸುಗಮವೇನಲ್ಲ. ಸಮಸ್ಯೆ-ಸವಾಲು ಇಲ್ಲದೆಯೇ ಸುಖ ದೊರಕುವುದಿಲ್ಲ. ಆ ದಿಸೆಯಲ್ಲಿ ಸುಖವು ಬಿಂದುವಾಗಿದೆ, ದುಃಖವು ಸಿಂಧುವಾಗಿದೆ. ಬಿಂದು ಮಾತ್ರದ ಸುಖಕ್ಕೆ ಸಿಂಧು ಗಾತ್ರದ ದುಃಖ ಅನುಭವಿಸಬೇಕಾಗುತ್ತದೆ.

ಕೆಲವೊಮ್ಮೆ ಸುಖದ ಪಿತ್ತ ನೆತ್ತಿಗೇರಿ ಮಾನವ ವ್ಯಸನಾಧೀನ ಆಗುತ್ತಾನೆ. ಮಾದಕ ವಸ್ತುವಿನಂತಹ ವ್ಯಸನಕ್ಕೆ ಒಳಗಾಗಲು ಕಾರಣವಾದರೂ ಏನು? ಅಹಿತಕರ ಘಟನೆಗಳನ್ನು ಮರೆಯಲು, ಪ್ರೀತಿಸಿ ಕೈಕೊಟ್ಟು ಹೋದವರನ್ನು ಮರೆಯಲು, ಯಾರೋ ನುಡಿದ ಕಟು ನುಡಿಯನ್ನು ಮರೆಯಲು, ಅನ್ಯರು ಮಾಡಿದ ಅವಮಾನವನ್ನು ಮರೆಯಲು, ತನ್ನಿಂದ ನಡೆದಿರಬಹುದಾದ ಹೀನ ವರ್ತನೆಯನ್ನು ಮರೆಯಲು, ಕೆಲವರು ನಡೆಸುವ ಬ್ಲ್ಯಾಕ್‍ಮೇಲ್ ತಂತ್ರವನ್ನು ಮರೆಯಲು, ಬೆದರಿಕೆಯನ್ನು ಮರೆಯಲು, ಕಿರುಕುಳವನ್ನು ಮರೆಯಲು... ಇಂತಹ ಕಾರಣಗಳಿರಬಹುದು.

ಮಾನವನಲ್ಲಿ ಇಂಥ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಷ್ಟು ಬುದ್ಧಿಮತ್ತೆ ಇದೆ. ತನಗಾಗುತ್ತಿರುವ ಯಾತನೆ, ವೇದನೆ ಅಥವಾ ನೋವನ್ನು ತನ್ನ ಆಪ್ತರೊಂದಿಗೆ ಹೇಳಿಕೊಂಡರೆ ಸೂಕ್ತ ಪರಿಹಾರ ದೊರಕಬಹುದು. ತನ್ನನ್ನು ಅವರು ಎಲ್ಲಿ ಅಪಾರ್ಥ ಮಾಡಿಕೊಳ್ಳುವರೋ ಎಂಬ ಕಾರಣಕ್ಕೆ ಅಂತರಂಗದ ವೇದನೆಯನ್ನು ಒಳಗೆ ಅದುಮಿಟ್ಟುಕೊಳ್ಳುತ್ತಾ ಹೋಗುತ್ತಾರೆ. ಸಹನೆಯ ಕಟ್ಟೆ ಒಡೆಯುವ ಸಂದರ್ಭದಲ್ಲಿ ಕೆಲವರು ಮದ್ಯಪಾನ, ಇನ್ನು ಕೆಲವರು ಮಾದಕ ವಸ್ತುಗಳನ್ನು ಸೇವಿಸಲು ಮುಂದಾಗುತ್ತಾರೆ. ಮದ್ಯವ್ಯಸನವಾಗಲೀ ಮಾದಕ ವ್ಯಸನವಾಗಲೀ ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲ. ಬದಲಾಗಿ, ಒಂದನ್ನು ಮರೆಯಲು ಹೋಗಿ ಮತ್ತೊಂದು ವ್ಯಾಧಿಗೆ ಒಳಗಾದಂತೆ. ಮದ್ಯಪಾನ ಮತ್ತು ಮಾದಕವ್ಯಸನ ಎರಡರಿಂದಲೂ ದುಷ್ಪರಿಣಾಮ. ಇದರಿಂದ
ತಪ್ಪಿಸಿಕೊಳ್ಳಲು ಅನ್ಯಮಾರ್ಗ ಇಲ್ಲವೇ?

ಸಮಸ್ಯೆಗಳಿಗೆ ಪರಿಹಾರವೆಂದರೆ, ಮಾನವನೊಳಗೆ ಇರಬಹುದಾದ ಅಖಂಡ ಸಹನೆ. ಸಹನೆ ಸಾಧ್ಯವಿಲ್ಲವೆಂದೇ ಅನೇಕರು ದುರ್ಮಾರ್ಗ ಹಿಡಿಯುತ್ತಾರೆ. ಅಪ್ರತಿಮವಾದ ಸಹನೆಯಿಂದ ಸರ್ವವನ್ನೂ ಸಾಧಿಸಬಹುದು ಮತ್ತು ಗೆಲ್ಲಬಹುದು. ಸಹನೆ ಇಲ್ಲದವರು ಅನಾರೋಗ್ಯಕರವಾದ ಹಾದಿಯನ್ನು ತುಳಿಯುತ್ತಾರೆ.

ಅರಿಯುವುದು ಮಾನವ ಬದುಕಿನ ದೊಡ್ಡ ಸಾಧನೆ. ಮರೆಯುವುದು ಕೂಡ ಅಪೂರ್ವ ಸಾಧನೆ. ಹೇಗೆಂದರೆ, ಜೀವನದಲ್ಲಿ ನಡೆದಿರಬಹುದಾದ ಅಹಿತಕರ ಘಟನೆಗಳು ಸ್ಮೃತಿಪಟಲದಲ್ಲಿ ಮತ್ತೆಮತ್ತೆ ಬಂದು ಇಣುಕಿ ಹಾಕುತ್ತವೆ. ಅವು ನೆನಪಾದಾಗಲೆಲ್ಲ ವ್ಯಕ್ತಿಯಲ್ಲಿ ಖಿನ್ನತೆಯು ಬಾಗಿಲು ತಟ್ಟುತ್ತದೆ. ಖಿನ್ನತೆಯು ಮಾನವಲೋಕದ ಜ್ವಲಂತ ಸಮಸ್ಯೆ. ಅದು ಬದುಕನ್ನು ಸಾವಿನ ದವಡೆಗೆ ತಳ್ಳುತ್ತದೆ. ಖಿನ್ನತೆಗೆ ಒಳಗಾಗಬಾರದೆಂಬ ಉದ್ದೇಶದಿಂದ ಕೆಲವರು ಡ್ರಗ್ಸ್ ಮೊರೆ ಹೋಗುತ್ತಾರೆ. ಹೀಗಾಗಿ ಮಾದಕ ವ್ಯಸನಿಗಳ ಸಂಖ್ಯೆಯು ಹೆಚ್ಚುತ್ತಾ ಹೋಗುತ್ತಿದೆ.


ಡಾ. ಶಿವಮೂರ್ತಿ ಮುರುಘಾ ಶರಣರು

ಕಾನೂನುಬಾಹಿರ ಕೃತ್ಯಗಳು ನಡೆಯುವ ಹಲವೆಡೆ ಮಾದಕವ್ಯಸನದ ಪಾತ್ರ ಇರುವ ಸಾಧ್ಯತೆಗಳು ಗೋಚರಿಸಿವೆ. ಯಾವ ದುರಭ್ಯಾಸಕ್ಕೆ ವ್ಯಕ್ತಿಯು ದಿನಂಪ್ರತಿ ಒಳಗಾಗುತ್ತಾನೋ ಅವನು ವ್ಯಸನಿ ಆಗುತ್ತಾನೆ. ಮದ್ಯವ್ಯಸನ ಮತ್ತು ಮಾದಕವ್ಯಸನ ಎರಡೂ ಅನಾರೋಗ್ಯಕರ. ಒಂದು ಅಮಲನ್ನು ಏರಿಸುತ್ತದೆ, ಮತ್ತೊಂದು ಮತ್ತೇರಿಸುತ್ತದೆ. ಇಂಗ್ಲಿಷ್‌ ಭಾಷೆಯಲ್ಲಿ ಎರಡು ಶಬ್ದಕ್ಕೂ ಒಂದೇ ಅರ್ಥ. ಮದ್ಯಪಾನದಿಂದ ಕರುಳು, ಹೃದಯ ಮತ್ತು ಮೂತ್ರಕೋಶದಂತಹ ಅಂಗಾಂಗಗಳು ದುರ್ಬಲವಾಗುತ್ತಾ ಹೋಗುತ್ತವೆ. ಕ್ಯಾನ್ಸರ್ ಕಾಯಿಲೆಯು ಕಾಯವನ್ನು ಬಾಧಿಸುತ್ತದೆ. ಮಾದಕವ್ಯಸನವು ಈ ಅಂಗಾಂಗಗಳನ್ನಲ್ಲದೆ ಮೆದುಳನ್ನೂ ದುರ್ಬಲಗೊಳಿಸುತ್ತ, ಸಂಪೂರ್ಣ ತಟಸ್ಥ ಸ್ಥಿತಿಯತ್ತ ಕೊಂಡೊಯ್ಯುತ್ತದೆ. ಸಮಾಜದಲ್ಲಿ ಮಾದಕ ವ್ಯಸನಿಗಳೆಂಬ ಹಣೆಪಟ್ಟಿ. ಈ ವ್ಯಸನಿಗಳು ಶರೀರ ಇಂದ್ರಿಯ ಮತ್ತು ಬುದ್ಧಿಯ ಮೇಲಿನ ಹತೋಟಿಯನ್ನು ಕಳೆದುಕೊಂಡು, ವಿಲಕ್ಷಣ ಹಾಗೂ ವಿಚಿತ್ರ ನಡವಳಿಕೆಗೆ ಈಡಾಗುತ್ತಾರೆ. ವ್ಯಕ್ತಿಯಲ್ಲಿರುವ ಪ್ರತಿಭೆಯು ಕಮರುವುದು. ಕೆಲಸದಲ್ಲಿ ನಿರಾಸಕ್ತಿ. ಆತನನ್ನು ಆಶ್ರಯಿಸಿದ ಕುಟುಂಬ ಮತ್ತು ಸಂಸ್ಥೆಯಲ್ಲಿ ಏನೆಲ್ಲ ತಲ್ಲಣ ಉಂಟಾಗುತ್ತದೆ. ಮಾದಕವ್ಯಸನಿಗಳನ್ನು ಸಮಾಜವು ತೀರಾ ಕೆಟ್ಟದಾಗಿ ಕಾಣುತ್ತದೆ. ಸಮಾಜವು ಮಾದಕವ್ಯಸನಿಗಳನ್ನು ದ್ವೇಷಿಸುವುದಕ್ಕಿಂತ ಅವರ ಉನ್ಮತ್ತ ಸ್ಥಿತಿಯನ್ನಷ್ಟೇ ದ್ವೇಷಿಸಬೇಕು. ಮಾದಕವ್ಯಸನವು ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲ ಸಮಾಜದ ಆರೋಗ್ಯವನ್ನೂ ಕೆಡಿಸುತ್ತದೆ.

ಮಾದಕವ್ಯಸನಿಗಳನ್ನು ಅದರಿಂದ ಬಿಡುಗಡೆಗೊಳಿಸುವ ಯತ್ನಗಳು ನಡೆಯಬೇಕು. ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ, ವ್ಯಸನದ ಮೂಲವನ್ನು ಅರಿಯಲು ಯತ್ನಿಸಬೇಕು. ಇಲ್ಲವಾದಲ್ಲಿ ಅವರು ಬುದ್ಧಿವಿಕಲ್ಪಕ್ಕೆ ಒಳಗಾಗುತ್ತಾರೆ. ಅಂತಹವರು ಸಮಾಜಕ್ಕೆ ಹೊರೆ ಆಗಬಹುದು. ಅವರಿಂದ ಜೊತೆಯಲ್ಲಿರುವ ವ್ಯಕ್ತಿಗಳ ಸ್ವಾಸ್ಥ್ಯ ಮತ್ತು ಸಮಾಜದ ಸ್ವಾಸ್ಥ್ಯವು ಕೆಡುವುದು. ಅವರನ್ನು ಇದರಿಂದ ಹೊರತರಲು ಸೂಕ್ತ ಚಿಕಿತ್ಸೆ ಬೇಕಾಗುತ್ತದೆ. ಅವರ ಆ ಚಟವನ್ನು ಮರೆಸಲು ಸಾಂಸ್ಕೃತಿಕವಾದ ಹವ್ಯಾಸಗಳನ್ನು ಪರಿಚಯಿಸುವುದು, ಸತ್ಪುರುಷರ ಸಂಗದಲ್ಲಿ ಇರಿಸುವುದು, ವಾತಾವರಣವನ್ನು ಬದಲಿಸುವುದು, ವಿಧಾಯಕ ಕಾರ್ಯಗಳತ್ತ ಪ್ರೇರೇಪಿಸುವುದು, ಅಂಥವರಿಗಾಗಿ ಕಾರ್ಯಾಗಾರಗಳನ್ನು ನಡೆಸುವುದು, ಸೂಕ್ತವಾದ ಚಿಕಿತ್ಸೆಯನ್ನು ಕೊಡಿಸುವುದು, ಇತರ ಮಾದಕವ್ಯಸನಿಗಳ ಸಂಪರ್ಕದಿಂದ ದೂರ ಇರಿಸುವುದು... ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತ ಅವರ ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳಬೇಕು.

ಮಾದಕವಸ್ತುಗಳ ಮಾಫಿಯಾವು ಜಗತ್ತು ಮತ್ತು ಜೀವನವನ್ನು ಆವರಿಸಿಕೊಳ್ಳುತ್ತಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭೂಗತ ಲೋಕ ತೆರೆದುಕೊಂಡು ಅನಾಹುತವನ್ನು ಸೃಷ್ಟಿಸುತ್ತಿದೆ. ಒಂದಂತೂ ನಿಶ್ಚಿತ- ಈ ದಂಧೆಯಿಂದ ಕೆಲವರಿಗೆ ಆದಾಯ, ಹಲವರ ಬದುಕಿಗೆ ಅಪಾಯ. ಮಾದಕವ್ಯಸನಿಗಳು ಇರುವವರೆಗೂ ಮಾದಕ ದ್ರವ್ಯಗಳ ಮಾರಾಟ ಇದ್ದೇ ಇರುತ್ತದೆ. ಅದರಂತೆ ಮಾದಕ ದ್ರವ್ಯಗಳು ಇರುವವರೆಗೆ ಮಾದಕವ್ಯಸನಿಗಳು ಇರುತ್ತಾರೆ. ಇದರ ಅಂತ್ಯಕ್ಕೆ ಬೇಕು ಗಟ್ಟಿ ನಿರ್ಧಾರ. ವ್ಯಸನಮುಕ್ತ ಸಮಾಜ ನಿರ್ಮಾಣವು ಇಂದಿನ ಅಗತ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು