ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜ್ ಹುಳಿಯಾರ್ ಲೇಖನ: ವಿರೋಧ ಪಕ್ಷಗಳಿಗೆ ಚುನಾವಣಾ ಪಾಠಗಳು

ನೆಲವಾಸ್ತವ ಅರಿತು ಮುನ್ನಡೆಯಬೇಕಾದ ಬೃಹತ್ ಸವಾಲು ಸೋತ ಪಕ್ಷಗಳ ಎದುರು ಇದೆ
Last Updated 11 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಇದೇ 10ರಂದು ಹೊರಬಿದ್ದ ಐದು ರಾಜ್ಯಗಳ ಚುನಾವಣಾ ತೀರ್ಪನ್ನು ವಿರೋಧ ಪಕ್ಷಗಳ ದೃಷ್ಟಿಯಿಂದ ನೋಡಿದವರಿಗೆಲ್ಲ ಒಂದು ಅಂಶ ಸ್ಪಷ್ಟವಾಗುತ್ತದೆ: ಪಂಜಾಬ್ ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಆಯಾ ನೆಲದ ಚುನಾವಣಾ ವಾಸ್ತವವನ್ನು ಅರಿಯುವಲ್ಲಿ ಮುಗ್ಗರಿಸಿವೆ. ಕಳೆದ ಸಲ ಪಂಜಾಬಿನಲ್ಲಿ ಸೋತ ಎಎಪಿ, ನಂತರದ ಐದು ವರ್ಷಗಳಲ್ಲಿ ನೆಲ ವಾಸ್ತವವನ್ನು ಸತತವಾಗಿ ಅಧ್ಯಯನ ಮಾಡಿ ಸಿದ್ಧತೆ ನಡೆಸಿ ಅಧಿಕಾರ ಹಿಡಿದಿದೆ. ಉಳಿದ ವಿರೋಧ ಪಕ್ಷಗಳು ಅಧಿಕಾರಾರೂಢ ಬಿಜೆಪಿಯ ವ್ಯವಸ್ಥಿತ ಪ್ರಚಾರ, ಯೋಜಿತ ಸಿದ್ಧತೆ ಹಾಗೂ ಹಣಬಲವನ್ನು ಎದುರಿಸ ಲಾರದೆ ಹಿಮ್ಮೆಟ್ಟಿವೆ.

ಅಷ್ಟೇ ಮುಖ್ಯವಾಗಿ, ಅಧಿಕಾರಸ್ಥರ ಪರವಾಗಿ ರಾಷ್ಟ್ರೀಯ ಮಾಧ್ಯಮಗಳು ತಯಾರಿಸಿದ ಪ್ರಚಾರದ ಖೆಡ್ಡಾದೊಳಕ್ಕೆ ವಿರೋಧ ಪಕ್ಷಗಳು ಬಿದ್ದಿವೆ. ಉತ್ತರಪ್ರದೇಶವನ್ನೇ ನೋಡಿ: ಆರು ಮುಖ್ಯ ಪಕ್ಷಗಳು ಸ್ಪರ್ಧಿಸಿದ್ದ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಡುವೆ ಮಾತ್ರ ಹಣಾಹಣಿ ಇದೆ ಎಂಬ ಪ್ರಚಾರವೇ ಮೊದಲ ಖೆಡ್ಡಾ. ಬಿಎಸ್‌ಪಿ ಕಣದಲ್ಲೇ ಇಲ್ಲವೆಂಬಂತೆ ಪ್ರಚಾರ ನಡೆಯಿತು. ಪ್ರಿಯಾಂಕಾ ಗಾಂಧಿ ಅವರು ಮಾಯಾವತಿ ಅವರಿಗಿಂತ ಜನಪ್ರಿಯ ನಾಯಕಿ ಎಂದು ಬಿಂಬಿಸಲಾಯಿತು. ಎರಡು ವರ್ಷಗಳಿಂದ ಚಂದ್ರಶೇಖರ್ ಆಜಾದ್ ರಾವಣ್‌ಗೆ ಅತಿಯಾದ ಪ್ರಚಾರ ಕೊಟ್ಟು ದಲಿತರ ಮುಂಚೂಣಿ ನಾಯಕ ಎಂದು ಬಿಂಬಿಸಿ, ಮಾಯಾವತಿ ಅವರನ್ನು ಹಿಮ್ಮೆಟ್ಟಿಸಲಾಯಿತು. ಸ್ವತಃ ರಾವಣ್ ಅದನ್ನು ನಂಬಿಬಿಟ್ಟರು. ಮಾಯಾವತಿ- ರಾವಣ್ ನಡುವೆ ಸಂವಾದವೇ ನಡೆಯದಂಥ ಸ್ಥಿತಿ ಏರ್ಪಟ್ಟಿತು.

ಬಿಹಾರದಲ್ಲಿ ತೇಜಸ್ವಿ ಯಾದವ್ ಬಿಂಬಿತವಾದಂತೆ ಉತ್ತರಪ್ರದೇಶದಲ್ಲೂ ಅಖಿಲೇಶ್ ಮಾತ್ರ ಬಿಜೆಪಿಯ ಎದುರಾಳಿಯೆಂದು ಬಿಂಬಿಸಲಾಯಿತು. ಈ ಪ್ರಚಾರ ಅಖಿಲೇಶ್‌ ಅವರಿಗೆ ಒಂದು ಮಟ್ಟದಲ್ಲಿ ನೆರವಾಯಿತು. ಆದರೆ ಬಿಎಸ್‌ಪಿ, ಕಾಂಗ್ರೆಸ್ ಜೊತೆ ಹೊಂದಾಣಿಕೆಯ ಮಾತನ್ನೇ ಆಡದಂಥ ಅತಿ ಆತ್ಮ ವಿಶ್ವಾಸವೂ ಅವರಿಗೆ ಮುಳುವಾಯಿತು. ಜೊತೆಗೆ ತನ್ನ ಏಕಮಾತ್ರ ಎದುರಾಳಿ ಅಖಿಲೇಶ್‌ ಅವರನ್ನು ಗುರಿಯಾಗಿಸಿಕೊಳ್ಳುವುದು ಬಿಜೆಪಿಗೆ ಸುಲಭವಾಯಿತು. ಕಾಂಗ್ರೆಸ್ ಅತ್ತ ತಮಿಳುನಾಡಿನಲ್ಲಿ ಕಲಿತಿದ್ದ ಪಾಠವನ್ನು ಉತ್ತರಪ್ರದೇಶದಲ್ಲಿ ಬಳಸಲಾಗಲಿಲ್ಲ. ತಮಿಳುನಾಡಿನಲ್ಲಿ ತನ್ನ ಮಿತಿ ಹಾಗೂ ನೆಲವಾಸ್ತವವನ್ನರಿತ ಕಾಂಗ್ರೆಸ್, ಡಿಎಂಕೆ ಕೊಟ್ಟಷ್ಟು ಸೀಟುಗಳಿಗೆ ತೃಪ್ತವಾಗಿ ಅಸ್ತಿತ್ವ ಉಳಿಸಿಕೊಂಡಿತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಬಗ್ಗಲು ಸಿದ್ಧವಿದ್ದರೂ ಅಖಿಲೇಶ್ ಬಾಗಲಿಲ್ಲ.

ಆದರೂ ಏಕಾಂಗಿಯಾಗಿ ರಾಜ್ಯ ಸುತ್ತಿ ಪಕ್ಷವನ್ನು ಇಲ್ಲಿಯವರೆಗೂ ತಂದ ಅಖಿಲೇಶ್ ಪ್ರಬುದ್ಧ
ನಾಯಕರಾಗಿ ಹೊಮ್ಮಿದ್ದಾರೆ. ರೈತ ಚಳವಳಿ ಹಬ್ಬಿಸಿದ ಹೊಸ ಎಚ್ಚರ ಕೂಡ ಎಸ್‌ಪಿಗೆ ನೆರವಾಗಿದೆ. ದುರದೃಷ್ಟವೆಂದರೆ, ಎಸ್‌ಪಿ ಕಿತ್ತುಕೊಂಡಿರುವ ಮತಗಳು ಬಿಎಸ್‌ಪಿಯವು! ಇದೇ ವಿರೋಧ ಪಕ್ಷಗಳ ರಾಜಕಾರಣದ ದುರಂತಮಯ ಬಿಕ್ಕಟ್ಟು. 2017ಕ್ಕೆ ಹೋಲಿಸಿದರೆ ಎಸ್‌ಪಿಯ ಮತ ಪ್ರಮಾಣ ಶೇ 21.8ರಿಂದ ಶೇ 32.1ಕ್ಕೆ ಏರಿದೆ; ಬಿಎಸ್‌ಪಿಯ ಮತಪ್ರಮಾಣ
ಶೇ 22ರಿಂದ ಶೇ 12ಕ್ಕೆ ಇಳಿದಿದೆ.

ಆರ್‌ಎಲ್‌ಡಿಯಂಥ ಸಣ್ಣ ಪಕ್ಷಗಳ ಜೊತೆ ಹೊರಟ ಎಸ್‌ಪಿಗೆ ಲಾಭವಾಗಿದೆ. ಆದರೆ ವಿರೋಧ ಪಕ್ಷಗಳ ಮತವಿಭಜನೆಯಿಂದ ಹಲವೆಡೆ ಎಸ್‌ಪಿಗೆ ಹೊಡೆತ ಬಿದ್ದಿದೆ. ಉದಾಹರಣೆಗೆ, ನಾಕುರ್ ಕ್ಷೇತ್ರದಲ್ಲಿ ಬಿಜೆಪಿಯು 1,04,114 ಮತ ಪಡೆದು, 315 ಮತಗಳಿಂದ ಗೆದ್ದಿದೆ. ಎಸ್‌ಪಿ 1,03,799, ಬಿಎಸ್‌ಪಿ 55,112, ಒವೈಸಿ ಅವರ ಎಐಎಂಐಎಂ 3,513 ಮತಗಳನ್ನು ಪಡೆದಿವೆ. ಇದು ವಿರೋಧ ಪಕ್ಷಗಳ ಹುಂಬ ಟಕ್ಕಾಟಿಕ್ಕಿಯ ಫಲ! ಆದರೆ ಎಸ್‌ಪಿ- ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಂಡಾಗಲೂ ಒಂದು ಸಮಸ್ಯೆಯಿದೆ: ಇಂಥ ಹೊಂದಾಣಿಕೆ ಮಾಡಿ ಕೊಂಡಾಗಲೆಲ್ಲ ಬಿಎಸ್‌ಪಿ ಮತಗಳು ಎಸ್‌ಪಿಗೆ ವರ್ಗಾವಣೆಯಾಗಿವೆ; ಎಸ್‌ಪಿ ಮತಗಳು ಬಿಎಸ್‌ಪಿಗೆ ಹೋಗಿಲ್ಲ. ಅಂದರೆ ಸಮಾಜವಾದಿ ಪಕ್ಷದ ಮತದಾರರು ಬಿಎಸ್‌ಪಿ ಮತದಾರರಷ್ಟು ಚುನಾವಣಾ ರಾಜಕಾರಣದಲ್ಲಿ ಪ್ರಬುದ್ಧರಾಗಿಲ್ಲ ಅಥವಾ ಜಾತಿ ಮೀರಿ ಯೋಚಿಸಿಲ್ಲ. ಈ ಅಂಶ ಇಂದಿನ ದಲಿತ ರಾಜಕಾರಣದ ದೊಡ್ಡ ಸವಾಲಿನೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ.

ಪಂಜಾಬಿನ ಪ್ರಥಮ ದಲಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಕೊನೆಯಪಕ್ಷ ಶಾಸಕ ಸ್ಥಾನಕ್ಕೂ ಬರದಂತೆ ಎರಡೂ ಸ್ಥಾನಗಳಲ್ಲಿ ಸೋಲಿಸಿರುವ ಜಾತಿವಿಕಾರವನ್ನು ನೋಡಿದರೆ, ಭಾರತದ ಒಟ್ಟು ದಲಿತ ರಾಜಕಾರಣ ಸಂಪೂರ್ಣ ಬೇರೆ ರೀತಿಯಲ್ಲೇ ಯೋಚಿಸಬೇಕಾದ ತುರ್ತು ಎದುರಾಗಿದೆ. ದಲಿತ ಮುಖ್ಯಮಂತ್ರಿಯನ್ನು ಸಹಿಸಲಾರದ ಅಮರಿಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಥರದ ಭಸ್ಮಾಸುರರ ಬೀದಿಜಗಳವೂ ಕಾಂಗ್ರೆಸ್ಸಿಗೆ ಹೊಡೆತ ಕೊಟ್ಟಿದೆ. ಬಾಬಾ ಸಾಹೇಬರು ಕನಸಿದಂತೆ ಒಂದು ಪ್ರಬಲ ವರ್ಗವಾಗದೆ ಒಡೆದು ಹೋಗಿರುವ ದಲಿತ ಸಮುದಾಯ ದೇಶದ ರಾಜಕೀಯ ಪಕ್ಷಗಳ, ಒಟ್ಟಾರೆಯಾಗಿ ಸವರ್ಣೀಯ ಮನಸ್ಸಿನ ಈ ಜಾತಿರೋಗವನ್ನು ಗಂಭೀರವಾಗಿ ಎದುರಿಸ ದಿದ್ದರೆ ಉಳಿಗಾಲವಿಲ್ಲ.

ಅತ್ತ ಗೋವಾ ನೋಡಿ: ಪಶ್ಚಿಮ ಬಂಗಾಳದ ಭಾರಿ ಗೆಲುವಿನ ಹಮ್ಮಿನಲ್ಲಿ ಟಿಎಂಸಿ ಮೊದಲ ಚುನಾವಣೆ ಯಲ್ಲೇ ಕಾಂಗ್ರೆಸ್ ಜೊತೆ ಹಟಮಾರಿ ಚೌಕಾಶಿ ಮಾಡಿತು. ರಾಷ್ಟ್ರೀಯ ಪಕ್ಷಕ್ಕಾಗಲಿ, ಸ್ಥಳೀಯ ಪಕ್ಷಕ್ಕಾಗಲಿ ಯಾವುದೇ ರಾಜ್ಯದಲ್ಲಿ ಹೆಚ್ಚು ಬೇರುಗಳಿರುವ ಪಕ್ಷ ಯಾವುದು ಎಂಬ ಅರಿವು ಪಕ್ಷಗಳ ಹೊಂದಾಣಿಕೆಗೆ ಅತಿಮುಖ್ಯ. 2018ರಲ್ಲಿ ಕರ್ನಾಟಕದಲ್ಲಿ 37 ಶಾಸಕರಿದ್ದ ಜೆಡಿಎಸ್, 78 ಶಾಸಕರಿದ್ದ ಕಾಂಗ್ರೆಸ್ಸಿನಿಂದ ಮುಖ್ಯಮಂತ್ರಿ ಪಟ್ಟವನ್ನು ಪಟ್ಟು ಹಿಡಿದು ಪಡೆದ ರೀತಿಯೂ ಸಮ್ಮಿಶ್ರ ಸರ್ಕಾರ ಕುಸಿಯಲು ಒಂದು ಕಾರಣ; ಶಾಸಕರ ನಿರ್ಲಜ್ಜ ಪಕ್ಷಾಂತರ ಎರಡನೆಯ ಕಾರಣ. ಆದರೆ, ಮಹಾರಾಷ್ಟ್ರದಲ್ಲಿ ನೆಲ ವಾಸ್ತವದ ನಿಖರವಾದ ಪ್ರಜ್ಞೆಯಿಂದಾಗಿ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎರಡು ವರ್ಷ ಗಳಿಂದ ಸುಭದ್ರವಾಗಿಯೇ ನಡೆಯುತ್ತಿದೆ. ಮುಖ್ಯವಾಗಿ, ಶಿವಸೇನೆಯು ಕೋಮುವಾದಿ ಆಟವನ್ನು ಬಿಟ್ಟಿದೆ. ಈ ಪ್ರಯೋಗದಲ್ಲಿ ಇಡೀ ದೇಶದ ವಿರೋಧ ಪಕ್ಷಗಳಿಗೆ ಮುಖ್ಯ ಪಾಠಗಳಿವೆ. ವಿರೋಧಿ ಮತಗಳು ಹಂಚಿ ಹೋಗುವುದು ಇಂಡಿಯಾಕ್ಕೆ ಹೊಸದೇನೂ ಅಲ್ಲ. ವಿರೋಧಿ ಮತಗಳು ಹಂಚಿ ಹೋಗುತ್ತಿದ್ದರಿಂದಲೇ ಕಾಂಗ್ರೆಸ್ ದಶಕಗಟ್ಟಲೆ ದರ್ಬಾರ್ ನಡೆಸುತ್ತಿತ್ತು. ಬಿಜೆಪಿ ಆ ಸ್ಥಾನವನ್ನು ಆಕ್ರಮಿಸುತ್ತಿದೆಯಷ್ಟೆ. ವಿಚಿತ್ರವೆಂದರೆ, ಈಗ ವಿರೋಧ ಪಕ್ಷಗಳು ವಿರೋಧ ಪಕ್ಷವಾದ ಕಾಂಗ್ರೆಸ್ಸನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವ ಆತ್ಮಹತ್ಯಾತ್ಮಕ ರಾಜಕಾರಣದಲ್ಲಿ ಮುಳುಗಿವೆ!

ಈ ನಡುವೆ ಎಲ್ಲ ಪಕ್ಷಗಳಿಗೂ ಎಎಪಿ ಸವಾಲೆಸೆದಿದೆ! ಚಂಡೀಗಡ ಕಾರ್ಪೊರೇಷನ್‌ನ ಅಧಿಕಾರ ಹಿಡಿದಿರುವ ಎಎಪಿ ಹರಿಯಾಣದಲ್ಲೂ ಅಧಿಕಾರ ಹಿಡಿದರೆ ಅಚ್ಚರಿಯಲ್ಲ. ಉತ್ತಮ ಕಾರ್ಪೊರೇಷನ್ ಥರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸುವ, ಮೇಲುನೋಟಕ್ಕೆ ಮತೀಯವಾದಿಯಲ್ಲದ, ‘ಸೆಂಟ್ರಿಸ್ಟ್’ ಪಕ್ಷವಾಗಿ ಎಎಪಿ ಬೆಳೆಯುತ್ತಿದೆ. ಪಂಜಾಬಿನಲ್ಲಿ ಬನಿಯಾಗಳು, ಜಾಟ್ ಸಿಖ್ಖರು, ಹಿಂದೂ ಮಧ್ಯಮ ವರ್ಗದ ಬೆಂಬಲದಿಂದ ಅಧಿಕಾರ ಹಿಡಿದಿರುವ ಎಎಪಿ, ಹೊಸ ತಲೆಮಾರಿನ ವಿದ್ಯಾವಂತರಿಗೆ, ಖಾಸಗಿ ವಲಯಕ್ಕೆ ಬೇಕಾದ ‘ಮಧ್ಯಮ ಭಾಷೆ’ ಬಳಸುತ್ತಾ ಮತದಾರರಿಗೆ ಒಗ್ಗತೊಡಗಿದಂತಿದೆ. ಪರಿಚಿತ ಪಕ್ಷಗಳ ಕ್ಲೀಷೆಮಯ ಭಾಷೆ, ಜನರನ್ನು ಒಡೆಯುವ ಕೋಮುವಾದಿ ಆರ್ಭಟಗಳ ನಡುವೆ ಯಾವುದಕ್ಕೂ ಪ್ರತಿಕ್ರಿಯಿಸದ, ಹಾವೂ ಸಾಯದ ಕೋಲೂ ಮುರಿಯದ ಎಎಪಿಯ ‘ನಿರ್ಲಿಪ್ತ ಆಡಳಿತಾತ್ಮಕ ಭಾಷೆ’ಗೆ ಮಧ್ಯಮ ವರ್ಗ ಮುದ್ರೆಯೊತ್ತತೊಡಗಿದೆ. ಎಎಪಿ ಸದ್ಯದಲ್ಲೇ ಬೆಂಗಳೂರು ಕಾರ್ಪೊರೇಷನ್‌ನ ಅಧಿಕಾರ ಹಿಡಿದರೆ ಅಚ್ಚರಿಯಲ್ಲ. ಆದರೂ ಉತ್ತರಪ್ರದೇಶದಲ್ಲಿ ಎಎಪಿ ‘ನೋಟಾ’ದ ಮತಪ್ರಮಾಣಕ್ಕಿಂತ (0.69) ಕಡಿಮೆ (0.34) ಮತಗಳನ್ನು ಪಡೆದಿರುವುದನ್ನು ಮರೆಯಬಾರದು. ಸೋತು ಬಸವಳಿದಿರುವ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ವಿರೋಧ ಪಕ್ಷದ ಸ್ಥಾನ ದಲ್ಲಿರುವುದನ್ನೂ ಕಡೆಗಣಿಸಬಾರದು. ಅಂದರೆ, ಆಯಾ ಪ್ರದೇಶಗಳ ರಾಜಕೀಯ ವಾಸ್ತವಗಳು ಹಾಗೂ ಮತ ಪ್ರಮಾಣದ ಆಧಾರದ ಮೇಲೆ ವಿರೋಧ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯವನ್ನು ಇವೆಲ್ಲ ಸೂಚಿಸುತ್ತವೆ.

ನೆಲ ವಾಸ್ತವದ ಖಚಿತ ಅರಿವು, ಪಕ್ಷಗಳೊಳಗಿನ ಭಿನ್ನಾಭಿಪ್ರಾಯಗಳನ್ನು ಬೀದಿ ಜಗಳವಾಗಿಸದಿರುವುದು, ತನ್ನ ಮತಪ್ರಮಾಣ ಕುರಿತ ನಿಖರ ಪ್ರಜ್ಞೆಯ ಮೂಲಕ ಹೊಂದಾಣಿಕೆಯ ಮಾತುಕತೆ ನಡೆಸುವುದು... ಮುಂತಾದ ಪ್ರಾಥಮಿಕ ಪಾಠಗಳು ಕೂಡ ವಿರೋಧ ಪಕ್ಷಗಳಿಗೆ ಹೊಸ ಹಾದಿ ತೋರಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT