ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ನಿರ್ಮಾಣ ತ್ಯಾಜ್ಯ: ವಿಲೇವಾರಿ ನಿಯಮ

Last Updated 9 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಕಾಲೇಜಿನ ಸಮಾರಂಭವೊಂದಕ್ಕೆ ಆಹ್ವಾನ ನೀಡಲು ಸಮೀಪದ ಪೊಲೀಸ್‌ ಠಾಣೆಗೆ ಹೋಗಿದ್ದೆ. ಠಾಣಾಧಿಕಾರಿಗಳ ಬಳಿ ದೂರು ನೀಡಲು ಬಂದಿದ್ದವರು ತಮ್ಮ ಖಾಲಿ ಸೈಟಿನಲ್ಲಿ ರಾತ್ರೋರಾತ್ರಿ ಯಾರೋ ಒಡೆದ ಕಟ್ಟಡದ ಕಸ ಹಾಕಿದ್ದ ಚಿತ್ರ ತೋರಿಸಿ ದೂರು
ದಾಖಲಿಸಿಕೊಳ್ಳಲು ಒತ್ತಾಯಿಸುತ್ತಿದ್ದರು. ಆಗ ನನಗೆ ಎನ್.ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ, ಬೆಂಗಳೂರಿನ ಹಲಸೂರು ಕೆರೆಗೆ ಕಸ ಹಾಕುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಾಗಿದ್ದು ನೆನಪಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಆಯುಕ್ತರು, ಕಸ ಹಾಕಿದ ಕಂಪನಿಯನ್ನು ಪತ್ತೆ ಹಚ್ಚಿ ಭಾರಿ ದಂಡ ವಿಧಿಸಿದ್ದರು. ತಮಾಷೆಯೆಂದರೆ, ಬೆಂಗಳೂರಿನ ಇನ್ನೊಂದು ಕೆರೆಗೆ ಕಸ ಹಾಕಿದ್ದಕ್ಕೆ ನಾಲ್ಕು ತಿಂಗಳ ನಂತರ ಅದೇ ಕಂಪನಿಯ ವಿರುದ್ಧ ಹೊಸ ದೂರು ಬಂದಿತ್ತು.

ಬೆಂಗಳೂರೂ ಸೇರಿದಂತೆ ಈಗ ದೇಶದ ಎಲ್ಲಾ ಕಡೆ ಕಟ್ಟಡ ಧ್ವಂಸದ ಕಸವನ್ನು ಎಲ್ಲೆಂದರಲ್ಲಿ ಸುರಿಯುವ ಪ್ರಕರಣಗಳು ಹೆಚ್ಚುತ್ತಿವೆ. ದೇಶದ ಎಲ್ಲರಿಗೂ ಸೂರು ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗಳ ಫಲವಾಗಿ ಮನೆ ನಿರ್ಮಾಣ ಮತ್ತು ಹಳೆಯ ಕಟ್ಟಡಗಳ ಧ್ವಂಸ ಎರಡೂ ಏಕಕಾಲಕ್ಕೆ ನಡೆಯುತ್ತಿವೆ. ಉತ್ಪತ್ತಿಯಾಗುತ್ತಿರುವ ಕಸ ಹಲವು ಹೊಸ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕಟ್ಟಡ ನಿರ್ಮಿಸುವಾಗ ಏಳುವ ದೂಳು ಜನರ ಸಹಜ ಉಸಿರಾಟವನ್ನು ಏರುಪೇರುಗೊಳಿಸುತ್ತಿದೆ. ನಿರ್ಮಾಣ ಮತ್ತು ಧ್ವಂಸದ ಜಾಗದಿಂದ ಹೊರಡುವ ತ್ಯಾಜ್ಯವು ನಗರದ ಇನ್ನೊಂದು ಭಾಗದ ತೆರೆದ ಗುಂಡಿ, ಆಳದ ಪ್ರದೇಶಕ್ಕೆ ಸೇರಿ, ಇದು ಅಲ್ಲಿನ ಕೆರೆ, ಹಳ್ಳ ಪ್ರದೇಶಗಳ ನೀರಿನ ಹರಿವನ್ನು ತಡೆದು ಕೊಚ್ಚೆಗುಂಡಿ ನಿರ್ಮಿಸಿ ಸೊಳ್ಳೆಗಳ ಉತ್ಪತ್ತಿಗೆ ಪ್ರಶಸ್ತ ಜಾಗ ಕಲ್ಪಿಸುತ್ತಿದೆ. ಸುತ್ತಲಿನ ಚರಂಡಿ, ಕಾಲುವೆಗಳೆಲ್ಲ ಧ್ವಂಸ ಕಸದಿಂದ ತುಂಬಿಹೋಗಿ ಅಲ್ಲಿನ ಸಹಜ ಪ್ರಾಕೃತಿಕ ಸೌಂದರ್ಯವೂ ಹಾಳಾಗುತ್ತಿದೆ. ಕಲ್ಲು ಕ್ವಾರಿ, ಗಣಿ ಗುಂಡಿಗಳು ಕಸದ ಮಡುಗಳಾಗುತ್ತಿವೆ.

ಉತ್ಪತ್ತಿಯಾಗುವ ಕಸದ ಸರಿಯಾದ ವಿಲೇವಾರಿ, ಪುನರ್‌ಸಂಸ್ಕರಣ, ಮರು ಬಳಕೆಗಾಗಿ ವಿಶೇಷ ಬೈಲಾಗಳಿವೆ. ಸಾರ್ವಜನಿಕ ಆರೋಗ್ಯ ಕೆಡಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ನಿಯಮಗಳಿವೆ. ಸರಿಯಾಗಿ ನಿರ್ಮಾಣ ಮಾಡುವ ಕಂಪನಿ ಮತ್ತು ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವ ಪ್ರಮಾಣಪತ್ರ ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುವ ಪ್ರಸ್ತಾವಗಳೂ ಇವೆ. ಎಲ್ಲವೂ ಪುಸ್ತಕದಲ್ಲಿವೆ. ಕೇಂದ್ರ ಸರ್ಕಾರದಿಂದ ಕಟ್ಟಡ ತ್ಯಾಜ್ಯ, ಘನ ತ್ಯಾಜ್ಯ ನಿರ್ವಹಣೆ ಮತ್ತು ಶುದ್ಧ ಗಾಳಿಗಾಗಿ ಸುಮಾರು ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿಡಲಾಗಿದೆ.

ವಾಸ್ತವದಲ್ಲಿ ಆಗುತ್ತಿರುವುದೇ ಬೇರೆ. ನಗರದ ಆಯಕಟ್ಟಿನ ಪ್ರದೇಶಗಳ ಖಾಲಿ ಜಾಗಗಳೇ ಭೂಭರ್ತಿ ತಾಣಗಳಾಗಿ ಮಾರ್ಪಡುತ್ತಿವೆ. ಕಟ್ಟಡ ನಿರ್ಮಾಣ ಮತ್ತು ಧ್ವಂಸದಿಂದ ಉತ್ಪತ್ತಿಯಾಗುವ ಕಾಂಕ್ರೀಟು, ಮರಳು, ಕಬ್ಬಿಣ, ಕಟ್ಟಿಗೆ, ಪ್ಲಾಸ್ಟಿಕ್, ಫೈಬರ್, ಗ್ಲಾಸ್‍ಗಳ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ನಗರಪಾಲಿಕೆಗಳು ಸಂಪೂರ್ಣವಾಗಿ ಮುಗ್ಗರಿಸಿವೆ. ಕಟ್ಟಡ ಕಸ ನಿರ್ವಹಣೆ ನಿಯಮಗಳು ಜಾರಿಗೆ ಬಂದು ಆರು ವರ್ಷಗಳಾಗಿದ್ದರೂ ನಮ್ಮ ಬಹುಪಾಲು ನಗರಗಳಲ್ಲಿ ಕಸ ಸಂಗ್ರಹಣಾ ಕೇಂದ್ರಗಳಿಲ್ಲ. ಸಂಸ್ಕರಿಸುವ ಘಟಕಗಳಿಲ್ಲ. ರಸ್ತೆ, ಚರಂಡಿ, ಸೇತುವೆಗಳಷ್ಟೇ ಇದೂ ಮುಖ್ಯ ಎಂದು ನಗರಪಾಲಿಕೆಗಳಿಗೆ ಅನಿಸಿಲ್ಲ.

ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಹದಿನೆಂಟು ತಿಂಗಳ ಅವಧಿಯಲ್ಲಿ ರೀಸೈಕಲ್ ಮಾಡಬೇಕೆಂಬ ನಿಯಮವಿದೆ. ದೆಹಲಿ, ಗುರುಗ್ರಾಮ, ಹೈದರಾಬಾದ್, ಅಹಮದಾಬಾದ್ ಮತ್ತು ಪಿಂಪ್ರಿ– ಚಿಂಚ್ವಾಡ್ ನಗರಗಳಲ್ಲಿ ರೀಸೈಕಲ್ ಘಟಕ ಸ್ಥಾಪಿಸಿ ಕೆಲಸವೂ ಶುರುವಾಗಿದೆ. ಜೈಪುರ, ಮುಂಬೈ ನಗರಗಳು 2017ರಲ್ಲೇ ರೀ ಸೈಕಲ್ ಘಟಕ ಸ್ಥಾಪಿಸುವ ಕೆಲಸ ಪ್ರಾರಂಭಿಸಿದ್ದು ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಖಾಸಗಿ ಕಂಪನಿಗಳನ್ನು ನಿಯೋಜಿಸಲು ಮಾಡಿದ ಪ್ರಯತ್ನಗಳೂ ಸಫಲವಾಗಿಲ್ಲ. ಕಟ್ಟಡ ತ್ಯಾಜ್ಯವನ್ನು ರೀಸೈಕಲ್ ಮಾಡುವ ಕಂಪನಿಗಳು ತೀರಾ ಕಡಿಮೆ ಇವೆ. ಇದಲ್ಲದೆ ಕಟ್ಟಡ ತ್ಯಾಜ್ಯ ನಿರಂತರವಾಗಿ ರೀಸೈಕಲ್ ಘಟಕಗಳಿಗೆ ಸಿಗದಿರುವುದರಿಂದ ಹೊಸ ಕಂಪನಿಗಳ್ಯಾವೂ ಈ ರಂಗಕ್ಕೆ ಇಳಿಯುತ್ತಿಲ್ಲ. ಕಸ ನಿರಂತರವಾಗಿ ಸರಬರಾಜು ಆಗದಿದ್ದರೆ ತಮ್ಮ ಘಟಕಗಳನ್ನು ಮುಚ್ಚಬೇಕಾಗುತ್ತದೆ ಮತ್ತು ಹಾಕಿದ ಬಂಡವಾಳ ಮುಳುಗಿಹೋಗುತ್ತದೆ ಎಂಬ ಆತಂಕ ಅವರದು. ಹೆಚ್ಚಿನ ತರಿ ಭೂಮಿ ಮತ್ತು ತೇವಾಂಶವಿರುವ ಕೋಲ್ಕತ್ತ ಹಾಗೂ ಭುವನೇಶ್ವರದಲ್ಲಿ ಕಟ್ಟಡ ತ್ಯಾಜ್ಯದ ಪ್ರಮಾಣ ಕಡಿಮೆ ಇದ್ದರೂ ರೀಸೈಕಲ್ ಘಟಕ ಸ್ಥಾಪಿಸುತ್ತಿರುವುದು ಇತರ ನಗರಗಳಿಗೆ ಮಾದರಿಯಾಗಿದೆ.

2009ರಲ್ಲಿ ದೆಹಲಿಯಲ್ಲಿ ಪ್ರಥಮ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದಾಗ ಸಂಸ್ಕರಣಾ ಘಟಕಕ್ಕೆ ನಿರೀಕ್ಷಿಸಿದಷ್ಟು ತ್ಯಾಜ್ಯ ಸಿಗಲಿಲ್ಲ. ರೀಸೈಕಲ್ ಮಾಡಿದ ಉತ್ಪನ್ನಗಳನ್ನು ಕೊಳ್ಳುವವರೂ ಇರಲಿಲ್ಲ. ದೆಹಲಿ ಮೆಟ್ರೊ ರೈಲು ನಿಗಮ ಮತ್ತು ಲೋಕೋಪಯೋಗಿ ಇಲಾಖೆ ಮಾತ್ರ ತಮ್ಮ ಕಸವನ್ನು ರೀಸೈಕಲ್ ಘಟಕಗಳಿಗೆ ಸರಬರಾಜು ಮಾಡತೊಡಗಿದವು. ದೆಹಲಿಯ ಮೂರು ಮಹಾನಗರಪಾಲಿಕೆಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ತೆರೆದು ಕಸ ಸಂಗ್ರಹಣೆ ಕೆಲಸ ಶುರುಮಾಡಿ, ಅಲ್ಲಿಂದ ನೇರ ರೀಸೈಕಲ್ ಘಟಕಗಳಿಗೆ ಕಳಿಸತೊಡಗಿದವು. ಜನರ ಅನುಕೂಲಕ್ಕಾಗಿ ಹೆಲ್ಪ್ ಲೈನ್ ಪ್ರಾರಂಭಿಸಿದ್ದರೂ ಬಳಕೆದಾರ ಶುಲ್ಕ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕಾಗಿ ರಾತ್ರಿಯ ವೇಳೆ ಊರ ಹೊರಗಿನ ಖಾಲಿ ಜಾಗಗಳಲ್ಲಿ ತ್ಯಾಜ್ಯ ಎಸೆದು ಹೋಗುವ ರೂಢಿ ಮಾಡಿಕೊಂಡಿದ್ದರು.

ಕಟ್ಟಡ ತ್ಯಾಜ್ಯದ ಕುರಿತಾಗಿ ರೂಪಿಸಲಾದ ಮಾನದಂಡಗಳನ್ನು ಪೂರೈಸಲು ಅನೇಕ ನಗರಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ದೆಹಲಿಯ ಸೆಂಟರ್ ಫಾರ್ ಎನ್ವಿರಾನ್‍ಮೆಂಟ್ ಸಂಸ್ಥೆ ಹೇಳಿದೆ. ದೆಹಲಿ, ಜೈಪುರ, ಕೋಲ್ಕತ್ತ ಮಾತ್ರ ತಮ್ಮ ಘನ ತ್ಯಾಜ್ಯ ಮತ್ತು ಗಾಳಿಯ ಶುದ್ಧತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದು, ಪರಿಸ್ಥಿತಿಯ ಸಮರ್ಥ ನಿರ್ವಹಣೆಗಾಗಿ ಪ್ರತ್ಯೇಕ ಕಾನೂನು- ನೀತಿ ರೂಪಿಸಿಕೊಂಡಿವೆ. ಕಠಿಣ ನಿಯಮಗಳನ್ನು ಜಾರಿಗೆ ತಂದಿರುವ ದೆಹಲಿಯು ನಿರ್ಮಾಣ ಮತ್ತು ಧ್ವಂಸದ ತ್ಯಾಜ್ಯಗಳ ಶೇಖರಣೆ ಹಾಗೂ ಸಾಗಣೆಯಲ್ಲಿ ಲೋಪವೆಸಗುವ ಸಂಸ್ಥೆ, ನಾಗರಿಕರಿಗೆ ದಂಡ ಹಾಕುತ್ತಿದೆ. ಜೈಪುರವು ಕಾನೂನು, ದಂಡದ ಜೊತೆಗೆ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ನಿಯಮ ರೂಪಿಸಿದೆ. ಪ್ರತೀ ಟನ್ ಕಸಕ್ಕೆ ₹ 360 ಮತ್ತು ಮಿಶ್ರ ಕಸಕ್ಕೆ ಪ್ರತೀ ಟನ್‍ಗೆ ₹ 720 ಶುಲ್ಕ ಕಟ್ಟಬೇಕೆಂಬ ನಿಯಮ ಗುರುಗ್ರಾಮದಲ್ಲಿದೆ. ಅನಧಿಕೃತವಾಗಿ ಕಸ ಎಸೆದವರಿಂದ ₹ 28 ಲಕ್ಷ ದಂಡ ವಸೂಲು ಮಾಡಲಾಗಿದೆ.

ಪ್ರತೀ ನಗರದಲ್ಲಿ ರೀಸೈಕಲ್ ಘಟಕ ಮತ್ತು ತ್ಯಾಜ್ಯ ಸಂಗ್ರಹಣಾ ಘಟಕಗಳು ಇರಲೇಬೇಕು. ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ನೀಡುವಾಗ ಅದು ಖಾಲಿ ನಿವೇಶನದ ಕಟ್ಟಡವೋ ಅಥವಾ ಹಳೆಯ ಕಟ್ಟಡವನ್ನು ಒಡೆದು ಹೊಸದನ್ನು ನಿರ್ಮಿಸಲಾಗುತ್ತಿದೆಯೋ ಎಂಬುದನ್ನು ಪರಿಶೀಲಿಸಿದ ನಂತರ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಕಸ ಎಸೆಯುವವರನ್ನು ಪತ್ತೆ ಹಚ್ಚಲು ಯಾವುದೇ ಕಣ್ಗಾವಾಲು ವ್ಯವಸ್ಥೆ ಇಲ್ಲದಿರುವುದು ನಿಯಮ ಪಾಲನೆಗೆ ಅಡ್ಡಿಯಾಗಿದೆ. ಕಸ ಸಾಗಿಸುವ ವಾಹನಗಳಿಗೆ ಪ್ರತ್ಯೇಕ ಬಣ್ಣ ಹೊಡೆಸಿ ಜಿಪಿಎಸ್ ಅಳವಡಿಸಬೇಕು. ನಮ್ಮ ಬಹುತೇಕ ಸಂಸ್ಕರಣಾ ಘಟಕಗಳು ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆ ಮೇಲೆ ನಡೆಯುವುದರಿಂದ ಸಂಸ್ಕರಣೆಗೆ ಖರ್ಚು ಹೆಚ್ಚು. ಕಸ ಎಸೆಯುವವರು ಮತ್ತು ವಾಹನಗಳು ಅಸಂಘಟಿತ ಕಾರ್ಮಿಕ ವಲಯಗಳಿಗೆ ಸೇರಿರುವುದರಿಂದ ತ್ಯಾಜ್ಯ ವಿಲೇವಾರಿಯ ನಿಯಮಗಳ ಬಗ್ಗೆ ಬಹುತೇಕ ಕಾರ್ಮಿಕರಿಗೆ ಅರಿವೇ ಇಲ್ಲ. ನಗರಗಳಲ್ಲಿ ಹಳೆಯ ಪಾರಂಪರಿಕ ಕಸ ಮಿತಿಮೀರಿದೆ. ಇದರ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT